New Testament in a Year
27 ಹದಿನಾಲ್ಕನೆಯ ರಾತ್ರಿ ನಾವು ಆದ್ರಿಯ ಸಮುದ್ರದಲ್ಲಿ ಅತ್ತಿತ್ತ ಹೊಯ್ದಾಡುತ್ತಾ ಪ್ರಯಾಣವನ್ನು ಮುಂದುವರಿಸಿದೆವು. ನಾವು ಭೂಮಿಗೆ ಸಮೀಪವಾಗಿದ್ದೇವೆಂದು ನಾವಿಕರು ಆಲೋಚಿಸಿಕೊಂಡರು. 28 ಅವರು ಅಳತೆ ಗುಂಡನ್ನು ಹಗ್ಗದ ತುದಿಗೆ ಕಟ್ಟಿ ಹಗ್ಗವನ್ನು ನೀರಿನಲ್ಲಿ ಇಳಿಯಬಿಟ್ಟರು. ನೀರು ನೂರಿಪ್ಪತ್ತು ಅಡಿ ಆಳವಾಗಿತ್ತು. ಅವರು ಇನ್ನೂ ಸ್ವಲ್ಪದೂರ ಹೋಗಿ ಹಗ್ಗವನ್ನು ನೀರಿನಲ್ಲಿ ಇಳಿಯಬಿಟ್ಟರು. ಅಲ್ಲಿ ನೀರಿನ ಆಳ ತೊಂಭತ್ತು ಅಡಿಯಿತ್ತು. 29 ಹಡಗು ಬಂಡೆಗೆ ಅಪ್ಪಳಿಸಬಹುದೆಂದು ನಾವಿಕರು ಭಯಪಟ್ಟರು. ಆದ್ದರಿಂದ ಅವರು ನಾಲ್ಕು ಲಂಗರುಗಳನ್ನು ನೀರಿನೊಳಗೆ ಇಳಿಯಬಿಟ್ಟರು. ಬಳಿಕ ಅವರು ಬೆಳಗಾಗಲೆಂದು ಪ್ರಾರ್ಥಿಸಿದರು. 30 ನಾವಿಕರಲ್ಲಿ ಕೆಲವರು ಹಡಗನ್ನು ಬಿಟ್ಟುಹೋಗಬೇಕೆಂದಿದ್ದರು. ಅವರು ದೋಣಿಯನ್ನು ನೀರಿಗೆ ಇಳಿಸಿ, ಹಡಗಿನ ಮುಂಭಾಗದಲ್ಲಿ ಇನ್ನೂ ಕೆಲವು ಲಂಗರುಗಳನ್ನು ಇಳಿಸುವವರಂತೆ ನಟಿಸಿದರು. 31 ಆದರೆ ಪೌಲನು ಸೇನಾಧಿಕಾರಿಗೆ ಮತ್ತು ಇತರ ಸೈನಿಕರಿಗೆ, “ಈ ನಾವಿಕರು ಹಡಗಿನಲ್ಲಿ ಇರದಿದ್ದರೆ ನಿಮ್ಮ ಪ್ರಾಣಗಳು ಉಳಿಯಲು ಸಾಧ್ಯವಿಲ್ಲ” ಎಂದು ಹೇಳಿದನು. 32 ಆದ್ದರಿಂದ ಸೈನಿಕರು ಹಗ್ಗಗಳನ್ನು ಕತ್ತರಿಸಿ ದೋಣಿಯನ್ನು ನೀರುಪಾಲು ಮಾಡಿದರು.
33 ಇನ್ನೂ ಬೆಳಕಾಗುತ್ತಿರುವಾಗಲೇ ಏನಾದರೂ ತಿನ್ನುವಂತೆ ಪೌಲನು ಅವರನ್ನು ಒತ್ತಾಯಿಸುತ್ತಾ, “ಕಳೆದ ಹದಿನಾಲ್ಕು ದಿನಗಳಿಂದ ನೀವು ಊಟವನ್ನೇ ಮಾಡಿಲ್ಲ. 34 ಈಗ ನೀವು ಸ್ವಲ್ಪವಾದರೂ ತಿನ್ನುವಂತೆ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ಜೀವಂತವಾಗಿ ಉಳಿಯಬೇಕಾದರೆ ನಿಮಗೆ ಊಟ ಅವಶ್ಯಕವಾಗಿದೆ. ನಿಮ್ಮಲ್ಲಿರುವ ಯಾರೂ ನಿಮ್ಮ ತಲೆಕೂದಲುಗಳಲ್ಲಿ ಒಂದನ್ನಾದರೂ ಕಳೆದುಕೊಳ್ಳುವುದಿಲ್ಲ” ಎಂದು ಹೇಳಿದನು. 35 ಹೀಗೆ ಹೇಳಿದ ಬಳಿಕ, ಪೌಲನು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡು ಅದಕ್ಕಾಗಿ ಅವರೆಲ್ಲರ ಮುಂದೆ ದೇವರಿಗೆ ಸ್ತೋತ್ರ ಮಾಡಿದನು. ಬಳಿಕ ಅವನು ಒಂದು ತುಂಡನ್ನು ಮುರಿದು ತಿನ್ನತೊಡಗಿದನು. 36-37 ಆಗ ಜನರೆಲ್ಲರೂ ಪ್ರೋತ್ಸಾಹಗೊಂಡು ತಿನ್ನತೊಡಗಿದರು. ಆ ಹಡಗಿನಲ್ಲಿ ಇನ್ನೂರ ಎಪ್ಪತ್ತಾರು ಮಂದಿ ಇದ್ದರು. 38 ನಾವು ತೃಪ್ತಿಯಾಗುವಷ್ಟು ತಿಂದೆವು. ಬಳಿಕ ದವಸವನ್ನು ಸಮುದ್ರಕ್ಕೆ ಎಸೆದು ಹಡಗನ್ನು ಹಗುರಗೊಳಿಸಿದೆವು.
ನೌಕೆಯ ನಾಶ
39 ಬೆಳಗಾದಾಗ ನಾವಿಕರು ಭೂಮಿಯನ್ನು ಕಂಡರು. ಆದರೆ ಅದು ಯಾವ ಭೂಮಿಯೆಂದು ಗೊತ್ತಿರಲಿಲ್ಲ. ಅವರು ಕಂಡದ್ದು ಉಸುಬಿನ ದಡವುಳ್ಳ ಒಂದು ಕೊಲ್ಲಿ. ಸಾಧ್ಯವಾದರೆ ಹಡಗನ್ನು ಆ ಕೊಲ್ಲಿಗೆ ನಡೆಸಬೇಕೆಂದು ನಾವಿಕರು ಬಯಸಿದರು. 40 ಆದ್ದರಿಂದ ಅವರು ಚುಕ್ಕಾಣಿಗಳನ್ನು[a] ಬಿಗಿಯಾಗಿ ಹಿಡಿದುಕೊಂಡಿದ್ದ ಹಗ್ಗಗಳನ್ನು ಕತ್ತರಿಸಿಹಾಕಿದರು. ಬಳಿಕ ಮುಂಭಾಗದ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ದಡದತ್ತ ನಡೆಸತೊಡಗಿದರು. 41 ಆದರೆ ಹಡಗು ಉಸುಬಿನ ದಿಬ್ಬಕ್ಕೆ ಅಪ್ಪಳಿಸಿತು. ಹಡಗಿನ ಮುಂಭಾಗವು ಅದರಲ್ಲಿ ಸಿಕ್ಕಿಕೊಂಡಿತು. ಹಡಗು ಚಲಿಸಲಾಗಲಿಲ್ಲ. ಬಳಿಕ ದೊಡ್ಡ ಅಲೆಗಳು ಹಡಗಿನ ಹಿಂಭಾಗಕ್ಕೆ ಬಡಿದು ಚೂರುಚೂರು ಮಾಡಲಾರಂಭಿಸಿದವು.
42 ಕೈದಿಗಳಲ್ಲಿ ಯಾರೂ ಈಜಿಕೊಂಡು ಹೋಗಿ ತಪ್ಪಿಸಿಕೊಳ್ಳಬಾರದೆಂದು ಸೈನಿಕರು ಕೈದಿಗಳನ್ನು ಕೊಲ್ಲಲು ನಿರ್ಧರಿಸಿದರು. 43 ಆದರೆ ಸೇನಾಧಿಕಾರಿಯಾದ ಜೂಲಿಯಸನು ಪೌಲನನ್ನು ಉಳಿಸಲಪೇಕ್ಷಿಸಿ ಕೈದಿಗಳನ್ನು ಕೊಲ್ಲಲು ಸೈನಿಕರಿಗೆ ಅಪ್ಪಣೆ ಕೊಡಲಿಲ್ಲ. ಈಜು ಬಲ್ಲವರೆಲ್ಲರು ನೀರಿಗೆ ಧುಮುಕಿ ಈಜಿಕೊಂಡು ದಡಕ್ಕೆ ಹೋಗಬೇಕೆಂದು ಜೂಲಿಯಸನು ಹೇಳಿದನು. 44 ಉಳಿದ ಜನರು ಹಲಗೆಗಳ ಅಥವಾ ಹಡಗಿನ ತುಂಡುಗಳ ಸಹಾಯದಿಂದ ಹೋಗಬೇಕೆಂದು ತಿಳಿಸಿದನು. ಹೀಗೆ ಜನರೆಲ್ಲರೂ ದಡವನ್ನು ಸೇರಿದರು. ಅವರಲ್ಲಿ ಒಬ್ಬರೂ ಸಾಯಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International