Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 18:1-20

ಅತ್ಯುತ್ತಮ ಸ್ಥಾನ ಯಾರಿಗೆ?

(ಮಾರ್ಕ 9:33-37; ಲೂಕ 9:46-48)

18 ಆ ಸಮಯದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪರಲೋಕರಾಜ್ಯದಲ್ಲಿ ಯಾರಿಗೆ ಅತ್ಯುತ್ತಮ ಸ್ಥಾನ ದೊರೆಯುತ್ತದೆ” ಎಂದು ಕೇಳಿದರು.

ಯೇಸು ಚಿಕ್ಕ ಮಗುವನ್ನು ತನ್ನ ಹತ್ತಿರಕ್ಕೆ ಕರೆದು ತನ್ನ ಶಿಷ್ಯರ ಮುಂದೆ ಆ ಮಗುವನ್ನು ನಿಲ್ಲಿಸಿ ಹೀಗೆಂದನು: “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಬದಲಾವಣೆ ಹೊಂದಿಕೊಂಡು ನಿಮ್ಮ ಹೃದಯದಲ್ಲಿ ಚಿಕ್ಕ ಮಕ್ಕಳಂತೆ ಆಗಬೇಕು. ಇಲ್ಲವಾದರೆ, ನೀವು ಪರಲೋಕರಾಜ್ಯಕ್ಕೆ ಸೇರುವುದೇ ಇಲ್ಲ. ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುವವನೇ ಪರಲೋಕರಾಜ್ಯದಲ್ಲಿ ಅತ್ಯುತ್ತಮ ಸ್ಥಾನ ಪಡೆಯುತ್ತಾನೆ.

“ಯಾವನಾದರೂ ನನ್ನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು.

ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ

(ಮಾರ್ಕ 9:42-48; ಲೂಕ 17:1-2)

“ದೀನತೆಯಿಂದ ನನ್ನನ್ನು ಹಿಂಬಾಲಿಸುವವರಲ್ಲಿ ಯಾರನ್ನಾದರೂ ಪಾಪಕ್ಕೆ ನಡೆಸುವವನಿಗೆ ಬಹಳ ಕೇಡಾಗುವುದು. ಅವನು ತನ್ನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಆಳವಾದ ಸಮುದ್ರದಲ್ಲಿ ಮುಳುಗುವುದೇ ಉತ್ತಮ. ಜನರನ್ನು ಪಾಪಕ್ಕೆ ನಡೆಸುವ ಸಂಗತಿಗಳ ನಿಮಿತ್ತ ನಾನು ಈ ಲೋಕದ ವಿಷಯದಲ್ಲಿ ದುಃಖಪಡುತ್ತೇನೆ. ಅವು ಯಾವಾಗಲೂ ಇರುತ್ತವೆ. ಆದರೆ ಅವುಗಳಿಗೆ ಕಾರಣವಾಗುವ ವ್ಯಕ್ತಿಗೆ ಬಹಳ ಕೇಡಾಗುವುದು.

“ನಿನ್ನ ಕೈಯಾಗಲಿ, ನಿನ್ನ ಕಾಲಾಗಲಿ ನಿನ್ನ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಎಸೆದುಬಿಡು. ಕೈಯನ್ನಾಗಲಿ ಕಾಲನ್ನಾಗಲಿ ಕಳೆದುಕೊಂಡು ನಿತ್ಯಜೀವ ಹೊಂದುವುದೇ ನಿನಗೆ ಉತ್ತಮ. ಎರಡು ಕೈ ಮತ್ತು ಎರಡು ಕಾಲುಳ್ಳವನಾಗಿದ್ದು ಶಾಶ್ವತವಾದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಅದು ಎಷ್ಟೋ ಉತ್ತಮ. ನಿನ್ನ ಕಣ್ಣು ನಿನ್ನನ್ನು ಪಾಪಕ್ಕೆ ನಡೆಸಿದರೆ, ಅದನ್ನು ಕಿತ್ತು ಎಸೆದುಬಿಡು. ಎರಡು ಕಣ್ಣುಳ್ಳವನಾಗಿದ್ದು ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವ ಹೊಂದುವುದೇ ನಿನಗೆ ಉತ್ತಮ.

ತಪ್ಪಿಸಿಕೊಂಡ ಕುರಿಯ ಸಾಮ್ಯ

(ಲೂಕ 15:3-7)

10 “ಎಚ್ಚರವಾಗಿರಿ! ಈ ಚಿಕ್ಕ ಮಕ್ಕಳಿಗೆ ಬೆಲೆಯೇ ಇಲ್ಲವೆಂದು ನೆನೆಸಬೇಡಿ. ಇವರಿಗಾಗಿ ಪರಲೋಕದಲ್ಲಿ ದೂತರನ್ನು ನೇಮಿಸಲಾಗಿದೆ. ಆ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಸಮ್ಮುಖದಲ್ಲಿ ಇರುತ್ತಾರೆ. 11 [a]

12 “ಒಬ್ಬ ಮನುಷ್ಯನಿಗೆ ನೂರು ಕುರಿಗಳಿದ್ದು ಅದರಲ್ಲಿ ಒಂದು ಕುರಿಯು ತಪ್ಪಿಸಿಕೊಂಡರೆ, ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಬೆಟ್ಟದ ಮೇಲೆಯೇ ಬಿಟ್ಟು ತಪ್ಪಿಸಿಕೊಂಡ ಕುರಿಯನ್ನು ಹುಡುಕಲು ಹೋಗುತ್ತಾನಲ್ಲವೇ? 13 ತಪ್ಪಿಸಿಕೊಂಡ ಕುರಿಯು ಸಿಕ್ಕಿದರೆ, ತಪ್ಪಿಸಕೊಳ್ಳದಿದ್ದ ತೊಂಭತ್ತೊಂಭತ್ತು ಕುರಿಗಳಿಗಿಂತ ಆ ಒಂದು ಕುರಿಯ ವಿಷಯದಲ್ಲಿ ಅವನು ಬಹಳ ಸಂತೋಷಪಡುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 14 ಅದೇ ರೀತಿ ಈ ಚಿಕ್ಕ ಮಕ್ಕಳಲ್ಲಿ ಒಬ್ಬರಾದರೂ ತಪ್ಪಿಸಿಕೊಳ್ಳಬಾರದೆಂಬುದೇ ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಾಗಿದೆ.

ನಿಮಗೆ ತಪ್ಪುಮಾಡಿದಾಗ ಮಾಡತಕ್ಕದ್ದೇನು?

(ಲೂಕ 17:3)

15 “ನಿನ್ನ ಸಹೋದರನಾಗಲಿ ಸಹೋದರಿಯಾಗಲಿ ನಿನಗೆ ಯಾವುದಾದರೂ ತಪ್ಪು ಮಾಡಿದರೆ, ನೀನು ಹೋಗಿ ಅವನೊಬ್ಬನೇ ಇರುವಾಗ ಅವನ ತಪ್ಪನ್ನು ತಿಳಿಸು. ಅವನು ನಿನ್ನ ಮಾತಿಗೆ ಕಿವಿಗೊಟ್ಟರೆ, ಮತ್ತೆ ನಿನ್ನ ಸಹೋದರನಾಗಿರಲು ನೀನೇ ಅವನಿಗೆ ಸಹಾಯ ಮಾಡಿದಂತಾಗುವುದು. 16 ಆದರೆ ಅವನು ನಿನ್ನ ಮಾತನ್ನು ಕೇಳದಿದ್ದರೆ, ನಿನ್ನೊಂದಿಗೆ ಒಬ್ಬಿಬ್ಬರನ್ನು ಕರೆದುಕೊಂಡು ಮತ್ತೆ ಅವನ ಬಳಿಗೆ ಹೋಗು. ಆಗ ಪ್ರತಿಯೊಂದು ದೂರಿನ ವಿಷಯದಲ್ಲೂ ಇಬ್ಬರು ಅಥವಾ ಮೂವರು ಸಾಕ್ಷಿಗಳಿರುವರು.[b] 17 ಅವನು ಅವರ ಮಾತನ್ನೂ ಕೇಳದಿದ್ದರೆ, ಸಭೆಗೆ ತಿಳಿಸು. ಅವನು ಸಭೆಯ ಮಾತನ್ನೂ ಕೇಳದಿದ್ದರೆ ಅವನನ್ನು ದೇವರಲ್ಲಿ ನಂಬಿಕೆ ಇಡದ ಮನುಷ್ಯನಂತಾಗಲಿ ಸುಂಕವಸೂಲಿಗಾರನಂತಾಗಲಿ ಪರಿಗಣಿಸಿರಿ.

18 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಲೋಕದಲ್ಲಿ ನೀಡುವ ನಿಷಿದ್ಧಾಜ್ಞೆಯು ದೇವರೇ ನೀಡಿದ ನಿಷಿದ್ಧಾಜ್ಞೆಯಾಗಿರುತ್ತದೆ. ನೀವು ಭೂಲೋಕದಲ್ಲಿ ನೀಡುವ ಅನುಮತಿಯು ದೇವರೇ ನೀಡಿದ ಅನುಮತಿಯಾಗಿರುತ್ತದೆ. 19 ಇದಲ್ಲದೆ ನಿಮ್ಮಲ್ಲಿ ಇಬ್ಬರು ಈ ಲೋಕದಲ್ಲಿ ಒಮ್ಮನಸ್ಸಿನಿಂದ ಏನನ್ನೇ ಬೇಡಿಕೊಂಡರೂ ಪರಲೋಕದಲ್ಲಿರುವ ನನ್ನ ತಂದೆ ಅದನ್ನು ನೆರವೇರಿಸುತ್ತಾನೆ. 20 ಇದು ಸತ್ಯ. ಏಕೆಂದರೆ ಎಲ್ಲಿ ಇಬ್ಬರಾಗಲಿ ಮೂವರಾಗಲಿ ನನ್ನಲ್ಲಿ ನಂಬಿಕೆಯನ್ನಿಟ್ಟು ಒಟ್ಟಾಗಿ ಸೇರಿಬಂದಿರುತ್ತಾರೋ ಅವರ ಮಧ್ಯದಲ್ಲಿ ನಾನಿರುತ್ತೇನೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International