New Testament in a Year
ಯೇಸುವನ್ನು ಹಿಂಬಾಲಿಸಿ
(ಲೂಕ 9:57-62)
18 ಯೇಸು ತನ್ನ ಸುತ್ತಲೂ ಇದ್ದ ಜನರೆಲ್ಲರನ್ನು ನೋಡಿ ತನ್ನ ಶಿಷ್ಯರಿಗೆ ಸರೋವರದ ಆಚೆಯ ತೀರಕ್ಕೆ ಹೋಗುವಂತೆ ಹೇಳಿದನು. 19 ಆಗ ಧರ್ಮೋಪದೇಶಕನು ಯೇಸುವಿನ ಬಳಿಗೆ ಬಂದು, “ಬೋಧಕನೇ, ನೀನು ಯಾವ ಸ್ಥಳಕ್ಕೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದನು.
20 ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಅಂದನು.
21 ಶಿಷ್ಯರಲ್ಲಿ ಒಬ್ಬನು ಯೇಸುವಿಗೆ, “ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿಬರಲು ನನಗೆ ಅಪ್ಪಣೆಯಾಗಲಿ. ಆಮೇಲೆ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಿದನು.
22 ಆದರೆ ಯೇಸು ಅವನಿಗೆ, “ಸತ್ತವರೇ ತಮ್ಮಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಿಕೊಳ್ಳಲಿ. ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
ಯೇಸುವಿನ ಆಜ್ಞೆಗೆ ಬಿರುಗಾಳಿಯ ವಿಧೇಯತೆ
(ಮಾರ್ಕ 4:35-41; ಲೂಕ 8:22-25)
23 ಯೇಸು ದೋಣಿಯೊಳಗೆ ಹೋದನು. ಆತನ ಶಿಷ್ಯರೂ ಆತನೊಂದಿಗೆ ಹೋದರು. 24 ದೋಣಿಯು ದಡವನ್ನು ಬಿಟ್ಟಮೇಲೆ ದೊಡ್ಡ ಬಿರುಗಾಳಿಯು ಸರೋವರದ ಮೇಲೆ ಪ್ರಾರಂಭವಾಯಿತು. ಅಲೆಗಳು ದೋಣಿಯನ್ನು ಮುಚ್ಚಿಕೊಂಡವು. ಆದರೆ ಯೇಸು ನಿದ್ರಿಸುತ್ತಿದ್ದನು. 25 ಯೇಸುವಿನ ಶಿಷ್ಯರು ಆತನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಪ್ರಭುವೇ, ನಮ್ಮನ್ನು ರಕ್ಷಿಸು! ನಾವು ಮುಳುಗುತ್ತಿದ್ದೇವೆ!” ಎಂದು ಹೇಳಿದರು.
26 ಯೇಸು, “ನೀವು ಭಯಪಡುವುದೇಕೆ? ನಿಮ್ಮಲ್ಲಿ ಸಾಕಷ್ಟು ನಂಬಿಕೆಯಿಲ್ಲ” ಎಂದು ಉತ್ತರಿಸಿ ಎದ್ದುನಿಂತುಕೊಂಡು ಆ ದೊಡ್ಡ ಬಿರುಗಾಳಿಗೂ ಅಲೆಗಳಿಗೂ ಆಜ್ಞಾಪಿಸಿದನು. ಆ ಕೂಡಲೇ ಬಿರುಗಾಳಿ ನಿಂತುಹೋಯಿತು. ಸರೋವರ ಪ್ರಶಾಂತವಾಯಿತು.
27 ಜನರೆಲ್ಲರೂ ಆಶ್ಚರ್ಯಪಟ್ಟರು. “ಈತನು ಎಂತಹ ಮನುಷ್ಯ? ಬಿರುಗಾಳಿ ಮತ್ತು ನೀರು ಈತನಿಗೆ ವಿಧೇಯವಾಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು.
ದೆವ್ವದಿಂದ ಪೀಡಿತರಾಗಿದ್ದ ಇಬ್ಬರಿಗೆ ಬಿಡುಗಡೆ
(ಮಾರ್ಕ 5:1-20; ಲೂಕ 8:26-39)
28 ಯೇಸು ಸರೋವರದ ಮತ್ತೊಂದು ತೀರದಲ್ಲಿದ್ದ ಗದರೇನ ಪ್ರಾಂತ್ಯಕ್ಕೆ ಬಂದನು. ಅಲ್ಲಿ ದೆವ್ವಗಳಿಂದ ಪೀಡಿತರಾಗಿದ್ದ ಇಬ್ಬರು ಯೇಸುವಿನ ಬಳಿಗೆ ಬಂದರು. ಅವರು ಸಮಾಧಿಯ ಗವಿಗಳಲ್ಲಿ ವಾಸವಾಗಿದ್ದರು ಮತ್ತು ಬಹಳ ಅಪಾಯಕಾರಿಗಳಾಗಿದ್ದರು. ಆದ್ದರಿಂದ ಜನರು ಆ ಮಾರ್ಗದಲ್ಲಿ ಹೋಗುತ್ತಿರಲಿಲ್ಲ. 29 ಅವರಿಬ್ಬರು ಯೇಸುವಿನ ಬಳಿಗೆ ಬಂದು. “ನೀನು ನಮಗೆ ಏನು ಮಾಡಬೇಕೆಂದಿರುವೆ? ದೇವಕುಮಾರನೇ, ನೇಮಿತ ಕಾಲಕ್ಕಿಂತ ಮುಂಚೆಯೇ ನಮ್ಮನ್ನು ಶಿಕ್ಷಿಸಲು ಇಲ್ಲಿಗೆ ಬಂದೆಯಾ?” ಎಂದು ಗಟ್ಟಿಯಾಗಿ ಕೂಗಿಕೊಂಡರು.
30 ಆ ಸ್ಥಳದ ಹತ್ತಿರ ಹಂದಿಗಳ ದೊಡ್ಡ ಗುಂಪು ಮೇಯುತ್ತಿತ್ತು. 31 ಆ ದೆವ್ವಗಳು, “ನಾವು ಇವರಿಬ್ಬರನ್ನು ಬಿಟ್ಟುಹೋಗುವಂತೆ ನೀನು ಮಾಡಬೇಕೆಂದಿದ್ದರೆ, ದಯವಿಟ್ಟು ನಮ್ಮನ್ನು ಆ ಹಂದಿಗಳೊಳಗೆ ಕಳುಹಿಸು” ಎಂದು ಬೇಡಿಕೊಂಡವು.
32 ಯೇಸು ಅವುಗಳಿಗೆ, “ಹೋಗಿ” ಅಂದನು. ಆಗ ಆ ದೆವ್ವಗಳು ಅವರಿಬ್ಬರನ್ನು ಬಿಟ್ಟು ಹಂದಿಗಳೊಳಗೆ ಹೋದವು. ಕೂಡಲೇ ಹಂದಿಗಳೆಲ್ಲಾ ಗುಡ್ಡದ ಕೆಳಗೆ ಓಡಿ ಸರೋವರದಲ್ಲಿ ಬಿದ್ದು ನೀರಿನಲ್ಲಿ ಮುಳುಗಿಹೋದವು. 33 ಹಂದಿಗಳನ್ನು ಮೇಯಿಸುತ್ತಿದ್ದವರು ಪಟ್ಟಣದೊಳಕ್ಕೆ ಓಡಿಹೋಗಿ ಹಂದಿಗಳಿಗೂ ದೆವ್ವಗಳಿಂದ ಪೀಡಿತರಾಗಿದ್ದವರಿಗೂ ಸಂಭವಿಸಿದ್ದನ್ನು ಜನರಿಗೆ ತಿಳಿಸಿದರು. 34 ಆಗ ಪಟ್ಟಣದ ಜನರೆಲ್ಲರೂ ಯೇಸುವನ್ನು ನೋಡಲು ಹೋಗಿ, ತಮ್ಮ ಸ್ಥಳವನ್ನು ಬಿಟ್ಟುಹೋಗಬೇಕೆಂದು ಆತನನ್ನು ಬೇಡಿಕೊಂಡರು.
Kannada Holy Bible: Easy-to-Read Version. All rights reserved. © 1997 Bible League International