Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
2 ಕೊರಿಂಥದವರಿಗೆ 11:1-15

ಪೌಲನು ಮತ್ತು ಸುಳ್ಳು ಅಪೊಸ್ತಲರು

11 ನಾನು ಸ್ವಲ್ಪ ಬುದ್ಧಿಹೀನನಾಗಿರುವಾಗಲೂ ನೀವು ನನ್ನ ವಿಷಯದಲ್ಲಿ ತಾಳ್ಮೆಯಿಂದಿರಬೇಕೆಂದು ಅಪೇಕ್ಷಿಸುತ್ತೇನೆ. ಆದರೆ ನೀವು ಈಗಾಗಲೇ ನನ್ನ ವಿಷಯದಲ್ಲಿ ತಾಳ್ಮೆಯಿಂದಿದ್ದೀರಿ. ನಿಮ್ಮ ವಿಷಯದಲ್ಲಿ ನಾನು ಚಿಂತಿಸುತ್ತೇನೆ. ಈ ಚಿಂತೆಯು ದೇವರಿಂದ ಬಂದದ್ದು. ನಿಮ್ಮನ್ನು ಕ್ರಿಸ್ತನಿಗೆ ಕೊಡುವುದಾಗಿ ನಾನು ವಾಗ್ದಾನ ಮಾಡಿದೆನು. ಕ್ರಿಸ್ತನೊಬ್ಬನೇ ನಿಮ್ಮ ಪತಿಯಾಗಿರಬೇಕು. ನಾನು ನಿಮ್ಮನ್ನು ಕ್ರಿಸ್ತನಿಗೆ ಆತನ ಶುದ್ಧ ವಧುವನ್ನಾಗಿ ಕೊಡಲು ಅಪೇಕ್ಷಿಸುತ್ತೇನೆ. ಹವ್ವಳು ಸರ್ಪದ ಕುಯುಕ್ತಿಯಿಂದ ಮೋಸಗೊಂಡಂತೆ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿ ಇರಬೇಕಾದ ಯಥಾರ್ಥತೆಯನ್ನೂ ಪರಿಶುದ್ಧತೆಯನ್ನೂ ಬಿಟ್ಟು ಕೆಟ್ಟುಹೋದೀತೆಂಬ ಭಯ ನನಗಿದೆ. ಯೇಸುವಿನ ಬಗ್ಗೆ ನಾವು ಬೋಧಿಸಿದ ಸಂಗತಿಗಳಿಗೆ ಭಿನ್ನವಾದಂಥ ಸಂಗತಿಗಳನ್ನು ಬೋಧಿಸುವ ಬೋಧಕರು ನಿಮ್ಮ ಬಳಿಗೆ ಬಂದು ಬೋಧಿಸಿದರೂ ನೀವು ತಾಳ್ಮೆಯಿಂದಿರುತ್ತೀರಿ. ನೀವು ನಮ್ಮಿಂದ ಸ್ವೀಕರಿಸಿಕೊಂಡ ಪವಿತ್ರಾತ್ಮನಿಗೂ ಸುವಾರ್ತೆಗೂ ಭಿನ್ನವಾದ ಆತ್ಮವನ್ನೂ ಸುವಾರ್ತೆಯನ್ನೂ ಸ್ವೀಕರಿಸಿಕೊಳ್ಳಲು ಬಹು ಇಷ್ಟವುಳ್ಳವರಾಗಿದ್ದೀರಿ. ಆದ್ದರಿಂದ ನೀವು ನಮ್ಮ ವಿಷಯದಲ್ಲಿ ತಾಳ್ಮೆಯಿಂದಿರಬೇಕು.

ಆ “ಮಹಾ ಅಪೊಸ್ತಲರು” ನನಗಿಂತ ಮಿಗಿಲಾದವರೆಂದು ನಾನು ಭಾವಿಸುವುದಿಲ್ಲ. ನಾನು ತರಬೇತಿ ಹೊಂದಿದ ಭಾಷಣಗಾರನಲ್ಲ ಎಂಬುದೇನೊ ನಿಜ, ಆದರೆ ನನಗೂ ಜ್ಞಾನವಿದೆ. ಇದನ್ನು ನಿಮಗೆ ಪ್ರತಿಯೊಂದು ವಿಧದಲ್ಲಿಯೂ ಸ್ಪಷ್ಟವಾಗಿ ತೋರಿಸಿದೆವು.

ನಾನು ನಿಮಗೆ ದೇವರ ಸುವಾರ್ತೆಯನ್ನು ಉಚಿತವಾಗಿ ಬೋಧಿಸಿದೆನು. ನಿಮ್ಮನ್ನು ಪ್ರಮುಖರನ್ನಾಗಿ ಮಾಡಲು ನನ್ನನ್ನು ತಗ್ಗಿಸಿಕೊಂಡೆನು. ಅದು ತಪ್ಪೆಂದು ಭಾವಿಸುತ್ತೀರೋ? ನಾನು ಇತರ ಸಭೆಗಳಿಂದ ನಿಮ್ಮ ಮಧ್ಯದಲ್ಲಿ ಸೇವೆ ಮಾಡುವುದಕ್ಕಾಗಿ ಹಣವನ್ನು ತೆಗೆದುಕೊಂಡೆನು. ನಾನು ನಿಮ್ಮಲ್ಲಿದ್ದಾಗ ನನ್ನ ಯಾವ ಕೊರತೆಯಲ್ಲಿಯೂ ನಿಮಗೆ ತೊಂದರೆ ಕೊಡಲಿಲ್ಲ. ಮಕೆದೋನಿಯದಿಂದ ಬಂದಿದ್ದ ಸಹೋದರರು ನನಗೆ ಬೇಕಾಗಿದ್ದದ್ದನ್ನೆಲ್ಲ ಕೊಟ್ಟರು. ನಾನು ನಿಮಗೆ ಯಾವ ರೀತಿಯಲ್ಲಿಯೂ ಭಾರವಾಗದಂತೆ ನೋಡಿಕೊಂಡೆನು. ಇನ್ನು ಮುಂದೆಯೂ ನಾನು ನಿಮಗೆ ಭಾರವಾಗಿರುವುದಿಲ್ಲ. 10 ಈ ವಿಷಯದಲ್ಲಿ ನಾನು ಹೆಮ್ಮೆಪಡುವುದನ್ನು ಅಖಾಯದಲ್ಲಿರುವ ಯಾರೂ ನಿಲ್ಲಿಸಲಾರರು. ಕ್ರಿಸ್ತನ ಸತ್ಯವು ನನ್ನೊಳಗಿರುವುದರಿಂದ ಇದನ್ನು ಹೇಳುತ್ತಿದ್ದೇನೆ. 11 ನಾನು ನಿಮಗೆ ಭಾರವಾಗದಿರುವುದು ನಿಮ್ಮ ಮೇಲೆ ನನಗೆ ಪ್ರೀತಿಯಿಲ್ಲದಿರುವ ಕಾರಣದಿಂದಲೋ? ಇಲ್ಲ! ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ದೇವರಿಗೆ ಗೊತ್ತಿದೆ.

12 ಈಗ ನಾನು ಮಾಡುತ್ತಿರುವುದನ್ನು ಮುಂದುವರೆಸುತ್ತೇನೆ. ಆ ಜನರಿಗೆ ಹೊಗಳಿಕೊಳ್ಳಲು ಯಾವ ಕಾರಣವೂ ಸಿಕ್ಕಬಾರದೆಂದು ಇದನ್ನು ಮುಂದುವರಿಸುತ್ತೇನೆ. ಅವರು ತಮ್ಮ ಕೆಲಸದ ಬಗ್ಗೆ ಜಂಬಪಡುತ್ತಾರೆ. ತಾವು ಮಾಡುವ ಆ ಕೆಲಸವು ನಮ್ಮ ಕೆಲಸದಂತೆಯೇ ಇದೆಯೆಂದು ಹೇಳಿಕೊಳ್ಳಲು ಬಯಸುತ್ತಾರೆ. 13 ಅವರು ನಿಜ ಅಪೊಸ್ತಲರಲ್ಲ. ಅವರು ಮೋಸಗಾರರಾದ ಕೆಲಸಗಾರರು. ತಾವು ಕ್ರಿಸ್ತನ ಅಪೊಸ್ತಲರಲ್ಲದಿದ್ದರೂ ಜನರು ತಮ್ಮನ್ನು ಕ್ರಿಸ್ತನ ಅಪೊಸ್ತಲರೆಂದು ತಿಳಿದುಕೊಳ್ಳುವಂತೆ ನಟಿಸುತ್ತಾರೆ. 14 ಇದು ನಮಗೆ ಆಶ್ಚರ್ಯವಾದದ್ದೇನೂ ಅಲ್ಲ. ಏಕೆಂದರೆ ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುತ್ತಾನೆ. 15 ಹೀಗಿರಲು ಸೈತಾನನ ಸೇವಕರು ತಾವು ಸರಿಯಾದ ಕೆಲಸವನ್ನು ಮಾಡುತ್ತಿರುವವರಂತೆ ನಟಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಅವರು ಮಾಡುತ್ತಿರುವ ಕೆಲಸಗಳ ಪ್ರತಿಫಲವಾಗಿ ಅವರಿಗೆ ಕೊನೆಯಲ್ಲಿ ದಂಡನೆಯಾಗುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International