Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
2 ಕೊರಿಂಥದವರಿಗೆ 10

ತನ್ನ ಸೇವೆಯ ಕುರಿತು ಪೌಲನ ಪ್ರತಿವಾದ

10 ಪೌಲನಾದ ನಾನು ಕ್ರಿಸ್ತನ ಮೃದುಸ್ವಭಾವದಿಂದಲೂ ಕನಿಕರದಿಂದಲೂ ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ನಾನು ನಿಮ್ಮೊಂದಿಗಿರುವಾಗ ದೀನನಾಗಿರುತ್ತೇನೆಂದೂ, ನಿಮ್ಮಿಂದ ದೂರದಲ್ಲಿರುವಾಗ ಧೀರನಾಗಿರುತ್ತೇನೆಂದೂ ಕೆಲವರು ಹೇಳುತ್ತಾರೆ. ನಾವು ಲೌಕಿಕರಂತೆ ಜೀವಿಸುತ್ತೇವೆಂದು ಕೆಲವರು ಯೋಚಿಸುತ್ತಾರೆ. ನಾನು ಬಂದಾಗ ಅವರ ವಿರೋಧವಾಗಿ ಬಹು ದಿಟ್ಟತನದಿಂದಿರಬೇಕೆಂದು ಯೋಚಿಸಿಕೊಂಡಿದ್ದೇನೆ. ಆದರೆ ನಿಮಗೂ ಅದೇ ದಿಟ್ಟತನವನ್ನು ಉಪಯೋಗಿಸುವ ಅಗತ್ಯತೆ ಇಲ್ಲದಿರಲಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ನಾವು ಪ್ರಪಂಚದಲ್ಲಿ ಜೀವಿಸುತ್ತಿದ್ದೇವೆ. ಆದರೆ ಪ್ರಪಂಚದವರು ಹೊಡೆದಾಡುವ ರೀತಿಯಲ್ಲಿ ನಾವು ಹೊಡೆದಾಡುವುದಿಲ್ಲ. ಪ್ರಪಂಚದವರು ಉಪಯೋಗಿಸುವ ಆಯುಧಗಳಿಗೆ ತದ್ವಿರುದ್ಧವಾದ ಆಯುಧಗಳೊಂದಿಗೆ ನಾವು ಹೋರಾಡುತ್ತೇವೆ. ನಮ್ಮ ಆಯುಧಗಳು ದೇವರ ಶಕ್ತಿಯನ್ನು ಹೊಂದಿವೆ. ಅವು ಶತ್ರುವಿನ ಬಲವಾದ ಕೋಟೆಗಳನ್ನು ನಾಶ ಮಾಡಬಲ್ಲವು. ನಾವು ಜನರ ವಾದಗಳನ್ನು ನಾಶಮಾಡುತ್ತೇವೆ. ದೇವರ ಜ್ಞಾನಕ್ಕೆ ವಿರೋಧವಾಗಿ ಎದ್ದೇಳುವ ಪ್ರತಿಯೊಂದು ಗರ್ವದ ಸಂಗತಿಯನ್ನು ನಾಶಮಾಡುತ್ತೇವೆ; ಪ್ರತಿಯೊಂದು ಯೋಚನೆಯನ್ನು ಸ್ವಾಧೀನಪಡಿಸಿಕೊಂಡು ಅವುಗಳನ್ನು ಪರಿವರ್ತಿಸಿ ಕ್ರಿಸ್ತನಿಗೆ ವಿಧೇಯರಾಗುವಂತೆ ಮಾಡುತ್ತೇವೆ. ನಿಮ್ಮಲ್ಲಿ ಕ್ರಿಸ್ತನಿಗೆ ವಿಧೇಯರಾಗದಿರುವ ಯಾರನ್ನೇ ಆಗಲಿ ಶಿಕ್ಷಿಸಲು ಸಿದ್ಧರಾಗಿದ್ದೇವೆ. ಆದರೆ ಮೊಟ್ಟಮೊದಲನೆಯದಾಗಿ, ನೀವು ಪೂರ್ಣ ವಿಧೇಯರಾಗಬೇಕೆಂದು ಅಪೇಕ್ಷಿಸುತ್ತೇವೆ.

ನಿಮ್ಮ ಮುಂದಿರುವ ನಿಜಾಂಶಗಳನ್ನು ನೀವು ಗಮನಿಸಬೇಕು. ಒಬ್ಬ ವ್ಯಕ್ತಿಯು ತಾನು ನಿಜವಾಗಿಯೂ ಕ್ರಿಸ್ತನವನೆಂದು ತಿಳಿದುಕೊಂಡಿದ್ದರೆ ಅವನಂತೆಯೇ ನಾವೂ ಕ್ರಿಸ್ತನವರೆಂಬುದನ್ನು ಅವನು ತಿಳಿದುಕೊಳ್ಳಬೇಕು. ಪ್ರಭುವು ನಮಗೆ ಕೊಟ್ಟಿರುವ ಅಧಿಕಾರದ ಬಗ್ಗೆ ನಾವು ಹೆಚ್ಚು ಹೆಮ್ಮೆಪಡುತ್ತೇವೆ ಎಂಬುದೇನೋ ಸತ್ಯ. ಆದರೆ ಆತನು ನಮಗೆ ಈ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಪಡಿಸುವುದಕ್ಕಾಗಿಯೇ ಹೊರತು ನಿಮಗೆ ನೋವನ್ನು ಉಂಟುಮಾಡುವುದಕ್ಕಾಗಿಯಲ್ಲ. ಆದ್ದರಿಂದ ಅದರ ಬಗ್ಗೆ ಹೆಮ್ಮೆಪಡುವುದರಲ್ಲಿ ನಾನು ನಾಚಿಕೊಳ್ಳುವುದಿಲ್ಲ. ನನ್ನ ಪತ್ರಗಳ ಮೂಲಕ ನಿಮ್ಮನ್ನು ಭಯಪಡಿಸಲು ಪ್ರಯತ್ನಿಸುತ್ತಿದ್ದೇನೆಂದು ನೀವು ಯೋಚಿಸಬೇಕೆಂಬುದು ನನ್ನ ಅಪೇಕ್ಷೆಯಲ್ಲ. 10 “ಪೌಲನ ಪತ್ರಗಳು ಬಲಯುತವಾಗಿವೆ ಮತ್ತು ಪ್ರಾಮುಖ್ಯವಾಗಿವೆ, ಆದರೆ ಅವನು ನಮ್ಮೊಂದಿಗಿರುವಾಗ ಬಲಹೀನನಾಗಿರುತ್ತಾನೆ, ಅವನ ಮಾತುಗಳು ನಿಸ್ಸಾರವಾಗಿರುತ್ತವೆ” ಎಂದು ಕೆಲವರು ಹೇಳುತ್ತಾರೆ. 11 ಆ ಜನರಿಗೆ ಈ ವಿಷಯ ತಿಳಿದಿರಬೇಕು. ಅದೇನೆಂದರೆ, ಈಗ ನಾವು ನಿಮ್ಮೊಂದಿಗಿಲ್ಲ. ಆದ್ದರಿಂದ ಈ ಸಂಗತಿಗಳನ್ನು ಪತ್ರಗಳ ಮೂಲಕ ಹೇಳುತ್ತಿದ್ದೇವೆ. ಆದರೆ ನಾವು ನಿಮ್ಮೊಂದಿಗಿರುವಾಗ ನಮ್ಮ ಪತ್ರಗಳಲ್ಲಿ ತೋರಿದ ಅಧಿಕಾರವನ್ನೇ ತೋರಿಸುತ್ತೇವೆ.

12 ತಾವು ಬಹಳ ಪ್ರಾಮುಖ್ಯವಾದವರೆಂದು ಯೋಚಿಸುವ ಆ ಜನರ ಗುಂಪಿನೊಡನೆ ಸೇರಿಕೊಳ್ಳಲು ನಮಗೆ ಧೈರ್ಯಸಾಲದು. ನಾವು ನಮ್ಮನ್ನು ಅವರೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ಅವರು ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುತ್ತಾರೆ; ತಮ್ಮನ್ನು ತಾವೇ ಮೌಲ್ಯಮಾಪನ ಮಾಡಿಕೊಳ್ಳುತ್ತಾರೆ. ಅವರಿಗೆ ಏನೂ ಗೊತ್ತಿಲ್ಲವೆಂದು ಇದೇ ತೋರಿಸುತ್ತದೆ.

13 ಆದರೆ ನಾವು ನಮಗೆ ಕೊಡಲ್ಪಟ್ಟಿರುವ ಕೆಲಸದ ಮೇರೆಯನ್ನು ಮೀರಿ ನಮ್ಮನ್ನು ಹೊಗಳಿಕೊಳ್ಳದೆ ದೇವರು ನಮಗೆ ಕೊಟ್ಟಿರುವ ಕೆಲಸದ ಮೇರೆಯೊಳಗೆ ಹೆಮ್ಮೆಪಡುತ್ತೇವೆ. ಆದರೆ ನಮ್ಮ ಈ ಕೆಲಸವು ನಿಮ್ಮ ಮಧ್ಯ ನಾವು ಮಾಡುವ ಈ ಸೇವೆಯನ್ನು ಒಳಗೊಂಡಿದೆ. 14 ನಾವು ಬಹಳವಾಗಿ ಹೊಗಳಿಕೊಳ್ಳುವುದಿಲ್ಲ. ನಾವು ನಿಮ್ಮಲ್ಲಿಗೆ ಈಗಾಗಲೇ ಬಂದಿಲ್ಲದಿದ್ದರೆ ಬಹಳವಾಗಿ ಹೊಗಳಿಕೊಳ್ಳುತ್ತಿದ್ದೆವು. ಆದರೆ ನಾವು ನಿಮ್ಮಲ್ಲಿಗೆ ಬಂದಿದ್ದೇವೆ. ಕ್ರಿಸ್ತನ ಸುವಾರ್ತೆಯೊಂದಿಗೆ ನಾವು ಬಂದೆವು. 15 ನಾವು ಹೊಗಳಿಕೊಳ್ಳುವುದನ್ನು ನಮ್ಮ ಕೆಲಸದ ಮೇರೆಗೆ ಸೀಮಿತಗೊಳಿಸುತ್ತೇವೆ. ಇತರರು ಮಾಡಿದ ಕೆಲಸದ ಬಗ್ಗೆ ನಾವು ನಮ್ಮನ್ನು ಹೊಗಳಿಕೊಳ್ಳುವುದಿಲ್ಲ. ನಿಮ್ಮ ನಂಬಿಕೆಯು ವೃದ್ಧಿಯಾಗುತ್ತಾ ಬಂದಂತೆ ನಮ್ಮ ಕೆಲಸವು ಮತ್ತಷ್ಟು ವಿಶಾಲವಾಗಿ ಬೆಳೆಯಲು ನೀವು ಸಹಾಯ ಮಾಡುತ್ತೀರೆಂಬ ನಿರೀಕ್ಷೆ ನಮಗಿದೆ. 16 ನಿಮ್ಮ ಪಟ್ಟಣಕ್ಕೆ ದೂರವಾಗಿರುವ ಸ್ಥಳಗಳಲ್ಲಿಯೂ ಸುವಾರ್ತೆಯನ್ನು ತಿಳಿಸಬೇಕೆಂಬ ಅಪೇಕ್ಷೆ ನಮಗುಂಟು. ಮತ್ತೊಬ್ಬ ವ್ಯಕ್ತಿಯ ಪ್ರದೇಶದಲ್ಲಿ ಈಗಾಗಲೇ ಮಾಡಲ್ಪಟ್ಟಿರುವ ಕೆಲಸದ ಬಗ್ಗೆ ಹೊಗಳಿಕೊಳ್ಳಬೇಕೆಂಬ ಅಪೇಕ್ಷೆ ನಮಗಿಲ್ಲ. 17 ಆದರೆ “ಹೊಗಳಿಕೊಳ್ಳುವವನು ಪ್ರಭುವಿನಲ್ಲಿಯೇ ಹೊಗಳಿಕೊಳ್ಳಬೇಕು”(A) 18 ಒಬ್ಬನು ತನ್ನನ್ನು ಒಳ್ಳೆಯವನೆಂದು ಹೇಳಿಕೊಂಡ ಮಾತ್ರಕ್ಕೆ ಅವನು ಸ್ವೀಕೃತನೆಂದಲ್ಲ. ಪ್ರಭುವು ಯಾರನ್ನು ಒಳ್ಳೆಯವನೆಂದು ಯೋಚಿಸುತ್ತಾನೊ ಅವನೇ ಸ್ವೀಕೃತನಾಗಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International