New Testament in a Year
11 ನಾನು ಕ್ರಿಸ್ತನ ಮಾದರಿಯನ್ನು ಅನುಸರಿಸುವಂತೆ ನೀವೂ ನನ್ನ ಮಾದರಿಯನ್ನು ಅನುಸರಿಸಿರಿ.
ಅಧಿಕಾರಕ್ಕೆ ಅಧೀನರಾಗಿರಿ
2 ನೀವು ಎಲ್ಲಾ ವಿಷಯಗಳಲ್ಲಿ ನನ್ನನ್ನು ಜ್ಞಾಪಿಸಿಕೊಳುವುದರಿಂದ ನಿಮ್ಮನ್ನು ಹೊಗಳುತ್ತೇನೆ. ನಾನು ನಿಮಗೆ ಕೊಟ್ಟ ಉಪದೇಶಗಳನ್ನು ನೀವು ಸೂಕ್ಷ್ಮವಾಗಿ ಅನುಸರಿಸುತ್ತಿದ್ದೀರಿ. 3 ಆದರೆ ನೀವು ಈ ವಿಷಯವನ್ನೂ ಅರ್ಥಮಾಡಿಕೊಳ್ಳಬೇಕೆಂಬುದು ನನ್ನ ಆಸೆ. ಪ್ರತಿಯೊಬ್ಬ ಪುರುಷನಿಗೂ ಕ್ರಿಸ್ತನು ಶಿರಸ್ಸಾಗಿದ್ದಾನೆ; ಸ್ತ್ರೀಗೆ ಪುರುಷನು ಶಿರಸ್ಸಾಗಿದ್ದಾನೆ; ಕ್ರಿಸ್ತನಿಗೆ ದೇವರು ಶಿರಸ್ಸಾಗಿದ್ದಾನೆ.
4 ಪುರುಷನು ಪ್ರವಾದಿಸುವಾಗ ಅಥವಾ ಪ್ರಾರ್ಥಿಸುವಾಗ ತನ್ನ ತಲೆಯ ಮೇಲೆ ಮುಸುಕು ಹಾಕಿಕೊಂಡರೆ ಅದು ಅವನ ಶಿರಸ್ಸಾದ ಕ್ರಿಸ್ತನಿಗೆ ಅಪಮಾನಕರವಾಗಿದೆ. 5 ಆದರೆ ಸ್ತ್ರೀಯು ಪ್ರಾರ್ಥಿಸುವಾಗ ಅಥವಾ ಪ್ರವಾದಿಸುವಾಗ ತನ್ನ ತಲೆಗೆ ಮುಸುಕನ್ನು ಹಾಕಿಕೊಂಡಿರಬೇಕು. ಆಕೆಯು ತನ್ನ ತಲೆಗೆ ಮುಸುಕು ಹಾಕಿಲ್ಲದಿದ್ದರೆ, ಅದು ಆಕೆಯ ಶಿರಸ್ಸಾದ ಪುರುಷನಿಗೆ ಅಪಮಾನಕರವಾಗಿದೆ. ಅವಳಿಗೂ ತಲೆಯನ್ನು ಬೋಳಿಸಿಕೊಂಡಿರುವ ಸ್ತ್ರೀಗೂ ಯಾವ ವ್ಯತ್ಯಾಸವಿಲ್ಲ. 6 ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದಿದ್ದರೆ, ಆಕೆಯು ತನ್ನ ತಲೆಯನ್ನು ಬೋಳಿಸಿಕೊಳ್ಳಲಿ. ತಲೆಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಯನ್ನು ಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅಪಮಾನಕರವಾಗಿದೆ. ಆದ್ದರಿಂದ ಆಕೆ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು.
7 ಆದರೆ ಪುರುಷನು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬಾರದು. ಏಕೆಂದರೆ, ಪುರುಷನು ದೇವರ ಸ್ವರೂಪವಾಗಿದ್ದಾನೆ ಮತ್ತು ದೇವರ ಪ್ರಭಾವವಾಗಿದ್ದಾನೆ. ಆದರೆ ಸ್ತ್ರೀಯು ಪುರುಷನ ಪ್ರಭಾವವಾಗಿದ್ದಾಳೆ. 8 ಪುರುಷನು ಸ್ತ್ರೀಯಿಂದ ಬಂದಿಲ್ಲ: ಸ್ತ್ರೀಯು ಪುರುಷನಿಂದ ಬಂದಳು. 9 ಪುರುಷನು ಸೃಷ್ಟಿಸಲ್ಪಟ್ಟದ್ದು ಸ್ತ್ರೀಗೋಸ್ಕರವಲ್ಲ. ಆದರೆ ಸ್ತ್ರೀಯು ಪುರುಷನಿಗೋಸ್ಕರ ಸೃಷ್ಟಿಸಲ್ಪಟ್ಟಳು. 10 ಆದಕಾರಣವೇ, ಸ್ತ್ರೀಯು ತಾನು ಅಧಿಕಾರದ ಅಧೀನದಲ್ಲಿರುವುದನ್ನು ಸೂಚಿಸಲು ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು. ದೇವದೂತರ ನಿಮಿತ್ತವಾಗಿಯೂ ಸ್ತ್ರೀ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು.
11 ಆದರೆ ಪ್ರಭುವಿನ ದೃಷ್ಟಿಯಲ್ಲಿ ಸ್ತ್ರೀಯು ಪುರುಷನಿಗೆ ಎಷ್ಟು ಮುಖ್ಯವೋ ಪುರುಷನೂ ಸ್ತ್ರೀಗೆ ಅಷ್ಟೇ ಮುಖ್ಯ. 12 ಏಕೆಂದರೆ ಸ್ತ್ರೀಯು ಪುರುಷನಿಂದ ಬಂದದ್ದು ಸತ್ಯ. ಆದರೆ ಪುರುಷನು ಸಹ ಸ್ತ್ರೀಯ ಮೂಲಕವಾಗಿ ಹುಟ್ಟುತ್ತಾನೆ. ನಿಜವಾಗಿ ಸಮಸ್ತವೂ ದೇವರಿಂದಲೇ ಬರುತ್ತದೆ.
13 ಹೀಗಿರಲಾಗಿ, ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥಿಸುವುದು ಸರಿಯೋ? ನೀವೇ ತೀರ್ಮಾನಿಸಿರಿ. 14 ಮನುಷ್ಯನ ಸ್ವಭಾವವೇ ತಿಳಿಸುವಂತೆ ಉದ್ದನೆಯ ಕೂದಲನ್ನು ಹೊಂದಿರುವುದು ಪುರುಷನಿಗೆ ಅವಮಾನಕರವಾಗಿದೆ. 15 ಆದರೆ ಉದ್ದನೆಯ ಕೂದಲನ್ನು ಹೊಂದಿರುವುದು ಸ್ತ್ರೀಗೆ ಗೌರವಯುತವಾಗಿದೆ. ಉದ್ದನೆಯ ಕೂದಲನ್ನು ಸ್ತ್ರೀಯ ತಲೆಗೆ ಮುಸುಕನ್ನಾಗಿ ಕೊಡಲಾಗಿದೆ. 16 ಕೆಲವು ಜನರು ಇದರ ಬಗ್ಗೆ ಇನ್ನೂ ವಾದಮಾಡಬಯಸಬಹುದು. ಆದರೆ ಈ ಸಂಪ್ರದಾಯವು ನಮ್ಮಲ್ಲಾಗಲಿ ದೇವರ ಸಭೆಗಳಲ್ಲಾಗಲಿ ಇಲ್ಲ.
Kannada Holy Bible: Easy-to-Read Version. All rights reserved. © 1997 Bible League International