New Testament in a Year
ಮದುವೆ ಕುರಿತು ಬೋಧನೆ
7 ನೀವು ಬರೆದು ಕೇಳಿರುವ ಸಂಗತಿಗಳ ಬಗ್ಗೆ ಈಗ ನಾನು ಚರ್ಚಿಸುತ್ತೇನೆ. ಪುರುಷನು ಮದುವೆ ಮಾಡಿಕೊಳ್ಳದಿರುವುದು ಒಳ್ಳೆಯದೇ ಸರಿ. 2 ಆದರೆ ಲೈಂಗಿಕ ಪಾಪ ಅಪಾಯಕರವಾದದ್ದು. ಆದ್ದರಿಂದ ಪ್ರತಿಯೊಬ್ಬ ಪುರುಷನಿಗೂ ಸ್ವಂತ ಹೆಂಡತಿ ಇದ್ದರೆ ಮತ್ತು ಪ್ರತಿಯೊಬ್ಬ ಸ್ತ್ರೀಗೂ ಸ್ವಂತ ಗಂಡನು ಇದ್ದರೆ ಒಳ್ಳೆಯದು. 3 ಗಂಡನು ತನ್ನ ಹೆಂಡತಿಗೆ ದಾಂಪತ್ಯ ಜೀವನದಲ್ಲಿ ಸಲ್ಲತಕ್ಕದ್ದನ್ನೆಲ್ಲ ಸಲ್ಲಿಸಲಿ. ಮತ್ತು ಹೆಂಡತಿಯು ತನ್ನ ಗಂಡನಿಗೆ ದಾಂಪತ್ಯ ಜೀವನದಲ್ಲಿ ಸಲ್ಲತಕ್ಕದ್ದನ್ನೆಲ್ಲ ಸಲ್ಲಿಸಲಿ. 4 ಹೆಂಡತಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ. ಆಕೆಯ ಗಂಡನಿಗೆ ಆಕೆಯ ದೇಹದ ಮೇಲೆ ಅಧಿಕಾರವಿದೆ. ಅದೇರೀತಿ, ಗಂಡನಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ. ಅವನ ಹೆಂಡತಿಗೆ ಅವನ ದೇಹದ ಮೇಲೆ ಅಧಿಕಾರವಿದೆ. 5 ಆದ್ದರಿಂದ ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲು ನಿರಾಕರಿಸಬಾರದು. ಅವರು ತಮ್ಮ ಸಮಯವನ್ನು ಪ್ರಾರ್ಥನೆಯಲ್ಲಿ ವಿನಿಯೋಗಿಸುವುದಕ್ಕಾಗಿ ಸ್ವಲ್ಪಕಾಲ ಲೈಂಗಿಕ ಸಂಬಂಧದಿಂದ ದೂರವಿರಬಹುದು. ಆದರೆ ಅದಕ್ಕೆ ಪರಸ್ಪರ ಸಮ್ಮತಿಯಿರಬೇಕು. ಬಳಿಕ ಮತ್ತೆ ಒಂದಾಗಬೇಕು, ಇಲ್ಲವಾದರೆ ನಿಮ್ಮ ಬಲಹೀನತೆಯನ್ನು ಕಂಡು ಸೈತಾನನು ಪಾಪಕ್ಕೆ ಪ್ರಚೋಧಿಸಬಹುದು. 6 ಸ್ವಲ್ಪಕಾಲ ಅಗಲಿ ದೂರವಿರುವುದಕ್ಕೆ ಅನುಮತಿ ಕೊಡಲು ನಾನು ಇದನ್ನು ಹೇಳುತ್ತಿದ್ದೇನೆ. ಇದು ಆಜ್ಞೆಯಲ್ಲ. 7 ಎಲ್ಲಾ ಜನರು ನಮ್ಮಂತೆ ಇರಬೇಕೆಂದು ನಮ್ಮ ಅಭಿಲಾಷೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ದೇವರಿಂದ ತನ್ನದೇ ಆದ ವರವನ್ನು ಹೊಂದಿದ್ದಾನೆ. ಒಬ್ಬ ವ್ಯಕ್ತಿಗೆ ಒಂದು ವರವಿದ್ದರೆ ಮತ್ತೊಬ್ಬನಿಗೆ ಇನ್ನೊಂದು ವರವಿದೆ.
8 ವಿವಾಹವಾಗಿಲ್ಲದ ಜನರಿಗೆ ಮತ್ತು ವಿಧವೆಯರಿಗೆ ನಾನು ಹೇಳುವುದೇನೆಂದರೆ: ಅವರು ನನ್ನಂತೆ ಒಬ್ಬಂಟಿಗರಾಗಿ ಇರುವುದೇ ಅವರಿಗೆ ಒಳ್ಳೆಯದು. 9 ಆದರೆ ಅವರು ತಮ್ಮ ದೇಹಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದಿದ್ದರೆ, ಅವರು ಮದುವೆಯಾಗಬೇಕು. ಲೈಂಗಿಕ ಆಸೆಯಿಂದ ಬೆಂದು ಹೋಗುವುದಕ್ಕಿಂತಲೂ ಮದುವೆ ಮಾಡಿಕೊಳ್ಳುವುದೇ ಉತ್ತಮವಾಗಿದೆ.
10 ಮದುವೆಯಾಗಿರುವವರಿಗೆ ನಾನು ಈ ಆಜ್ಞೆಯನ್ನು ಕೊಡುತ್ತೇನೆ. (ಈ ಆಜ್ಞೆಯು ನನ್ನದಲ್ಲ. ಪ್ರಭುವಿನದು.) ಹೆಂಡತಿಯು ತನ್ನ ಗಂಡನನ್ನು ಬಿಟ್ಟುಬಿಡಬಾರದು. 11 ಹೆಂಡತಿಯು ತನ್ನ ಗಂಡನನ್ನು ಬಿಟ್ಟುಬಿಟ್ಟರೆ ಆಕೆಯು ಮತ್ತೆ ಮದುವೆ ಮಾಡಿಕೊಳ್ಳಕೂಡದು, ಇಲ್ಲವಾದರೆ ಆಕೆ ತನ್ನ ಗಂಡನ ಸಂಗಡ ಮತ್ತೆ ಒಂದಾಗಬೇಕು. ಇದೇ ರೀತಿ, ಗಂಡನು, ತನ್ನ ಹೆಂಡತಿಯನ್ನು ಬಿಟ್ಟುಬಿಡಬಾರದು.
12 ಉಳಿದೆಲ್ಲ ಜನರ ವಿಷಯದಲ್ಲಿ ನಾನು ಹೇಳುವುದೇನೆಂದರೆ (ಈ ಸಂಗತಿಗಳನ್ನು ಹೇಳುತ್ತಿರುವವನು ನಾನೇ ಹೊರತು ಪ್ರಭುವಲ್ಲ.) ಕ್ರಿಸ್ತನಲ್ಲಿ ಸಹೋದರನಾದ ಒಬ್ಬನಿಗೆ ಕ್ರಿಸ್ತ ವಿಶ್ವಾಸಿಯಲ್ಲದ ಹೆಂಡತಿಯಿದ್ದರೆ ಮತ್ತು ಆಕೆ ಅವನೊಂದಿಗೆ ಬಾಳ್ವೆಮಾಡಲು ಇಚ್ಛಿಸಿದರೆ ಅವನು ಆಕೆಗೆ ವಿವಾಹವಿಚ್ಛೇದನ ಕೊಡಕೂಡದು. 13 ಅದೇರೀತಿ, ಸ್ತ್ರೀಯೊಬ್ಬಳಿಗೆ ಕ್ರಿಸ್ತ ವಿಶ್ವಾಸಿಯಲ್ಲದ ಗಂಡನು ಇದ್ದರೆ ಮತ್ತು ಅವನು ಆಕೆಯೊಂದಿಗೆ ಬಾಳ್ವೆಮಾಡಲು ಇಚ್ಛಿಸಿದರೆ ಆಕೆ ಅವನಿಗೆ ವಿವಾಹವಿಚ್ಛೇದನ ಕೊಡಕೂಡದು. 14 ಕ್ರಿಸ್ತ ವಿಶ್ವಾಸಿಯಲ್ಲದ ಗಂಡನು ತನ್ನ ಕ್ರೈಸ್ತ ಹೆಂಡತಿಯ ಮೂಲಕ ಪವಿತ್ರನಾಗುತ್ತಾನೆ. ಅದೇರೀತಿ, ಕ್ರಿಸ್ತ ವಿಶ್ವಾಸಿಯಲ್ಲದ ಹೆಂಡತಿಯು ತನ್ನ ಕ್ರೈಸ್ತ ಗಂಡನ ಮೂಲಕ ಪವಿತ್ರಳಾಗುತ್ತಾಳೆ. ಇದು ಸತ್ಯವಾಗಿಲ್ಲದಿದ್ದರೆ, ನಿಮ್ಮ ಮಕ್ಕಳು ಪವಿತ್ರರಾಗುತ್ತಿರಲಿಲ್ಲ. ಆದರೆ ಈಗ ನಿಮ್ಮ ಮಕ್ಕಳು ಪವಿತ್ರರಾಗಿದ್ದಾರೆ.
15 ಆದರೆ ಕ್ರಿಸ್ತ ವಿಶ್ವಾಸಿಯಲ್ಲದ ವ್ಯಕ್ತಿಯು ಬಿಟ್ಟು ಹೋಗಲು ನಿರ್ಧರಿಸಿದರೆ, ಆ ವ್ಯಕ್ತಿಯು ಬಿಟ್ಟು ಹೋಗಲಿ. ಈ ರೀತಿ ಸಂಭವಿಸಿದರೆ, ಕ್ರೈಸ್ತ ಸಹೋದರನಾಗಲಿ ಕ್ರೈಸ್ತ ಸಹೋದರಿಯಾಗಲಿ ವಿವಾಹ ಬಂಧನದಿಂದ ಬಿಡುಗಡೆಯಾಗಿದ್ದಾರೆ. ದೇವರು ನಮ್ಮನ್ನು ಸಮಾಧಾನದ ಜೀವಿತಕ್ಕೆ ಕರೆದನು. 16 ಹೆಂಡತಿಯರೇ, ನೀವು ನಿಮ್ಮ ಗಂಡಂದಿರನ್ನು ರಕ್ಷಿಸಬಹುದು. ಗಂಡಂದಿರೇ, ನೀವು ನಿಮ್ಮ ಹೆಂಡತಿಯರನ್ನು ರಕ್ಷಿಸಬಹುದು. ಆದರೆ ಮುಂದೆ ಏನಾಗುವುದೋ ನಮಗೆ ಗೊತ್ತಿಲ್ಲ.
ದೇವರ ಕರೆಗೆ ತಕ್ಕಂತೆ ಜೀವಿಸಿರಿ
17 ಆದರೂ ದೇವರು ಪ್ರತಿಯೊಬ್ಬನಿಗೆ ಜೀವನದಲ್ಲಿ ಯಾವ ಸ್ಥಿತಿಯನ್ನು ನೇಮಿಸಿದ್ದಾನೋ ಅಂದರೆ ದೇವರು ನಿಮ್ಮನ್ನು ಕರೆದಾಗ ನೀವು ಯಾವ ಸ್ಥಿತಿಯಲ್ಲಿದ್ದಿರೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು. ನಾನು ಎಲ್ಲಾ ಸಭೆಗಳಿಗೂ ಇದನ್ನೇ ಆಜ್ಞಾಪಿಸುತ್ತೇನೆ. 18 ದೇವರಿಂದ ಕರೆಯಲ್ಪಟ್ಟ ವ್ಯಕ್ತಿಯು ಮೊದಲೇ ಸುನ್ನತಿ ಮಾಡಿಸಿಕೊಂಡವನಾಗಿದ್ದರೆ, ಅವನು ಸುನ್ನತಿಯಿಲ್ಲದಂಥವನಾಗಬಾರದು. ದೇವರಿಂದ ಕರೆಯಲ್ಪಟ್ಟ ವ್ಯಕ್ತಿಯು ಸುನ್ನತಿಯನ್ನು ಹೊಂದಿಲ್ಲದವನಾಗಿದ್ದರೆ, ಅವನು ಸುನ್ನತಿಯನ್ನು ಮಾಡಿಸಿಕೊಳ್ಳಬಾರದು. 19 ಸುನ್ನತಿಯನ್ನು ಮಾಡಿಸಿಕೊಳ್ಳುವುದಾಗಲಿ ಮಾಡಿಸಿಕೊಳ್ಳದಿರುವುದಾಗಲಿ ಮುಖ್ಯವಲ್ಲ. ದೇವರ ಆಜ್ಞೆಗಳಿಗೆ ವಿಧೇಯರಾಗುವುದೇ ಮುಖ್ಯವಾದದ್ದು.
Kannada Holy Bible: Easy-to-Read Version. All rights reserved. © 1997 Bible League International