Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ರೋಮ್ನಗರದವರಿಗೆ 15:14-33

ತನ್ನ ಸೇವೆಯ ಬಗ್ಗೆ ಪೌಲನ ವಿವರಣೆ

14 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಳ್ಳೆಯತನವು ತುಂಬಿದೆಯೆಂದು ನನಗೆ ನಿಶ್ಚಯವಾಗಿ ಗೊತ್ತಿದೆ. ಅಗತ್ಯವಾದ ಸಕಲ ಜ್ಞಾನವು ನಿಮಗಿದೆಯೆಂದು ಮತ್ತು ಒಬ್ಬರಿಗೊಬ್ಬರು ಸಲಹೆ ನೀಡಬಲ್ಲಿರೆಂದು ನನಗೆ ಗೊತ್ತಿದೆ. 15 ನೀವು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕೆಂದು ನಾನು ಅಪೇಕ್ಷಿಸಿದ ಕೆಲವು ಸಂಗತಿಗಳನ್ನು ನಾನು ನಿಮಗೆ ಧೈರ್ಯವಾಗಿ ಬರೆದಿರುವೆ. ಕ್ರಿಸ್ತ ಯೇಸುವಿನ ಸೇವಕ ಎಂಬ ವಿಶೇಷವಾದ ವರವನ್ನು ದೇವರು ನನಗೆ ಕೊಟ್ಟಿರುವುದರಿಂದ ನಾನು ಹೀಗೆ ಬರೆದಿದ್ದೇನೆ. 16 ಯೆಹೂದ್ಯರಲ್ಲದ ಜನರಿಗೆ ಸಹಾಯ ಮಾಡುವುದಕ್ಕಾಗಿ ದೇವರು ನನ್ನನ್ನು ತನ್ನ ಸೇವಕನನ್ನಾಗಿ ಮಾಡಿಕೊಂಡನು. ದೇವರ ಸುವಾರ್ತೆಯನ್ನು ಉಪದೇಶಿಸುವುದರ ಮೂಲಕ ನಾನು ಆತನ ಸೇವೆ ಮಾಡುವವನಾಗಿದ್ದೇನೆ. ಯೆಹೂದ್ಯರಲ್ಲದ ಜನರು ಸಹ ದೇವರು ಸ್ವೀಕರಿಸಿಕೊಳ್ಳುವ ಕಾಣಿಕೆಯಂತಾಗಬೇಕೆಂದು ನಾನು ಈ ಸೇವೆ ಮಾಡುವವನಾಗಿದ್ದೇನೆ. ಆ ಜನರು ದೇವರಿಗೋಸ್ಕರವಾಗಿ ಪವಿತ್ರಾತ್ಮನ ಮೂಲಕ ಪವಿತ್ರರಾಗಿದ್ದಾರೆ.

17 ಆದ್ದರಿಂದ ಕ್ರಿಸ್ತ ಯೇಸುವಿನಲ್ಲಿ ನಾನು ದೇವರಿಗೋಸ್ಕರ ಮಾಡುವ ಕಾರ್ಯಗಳ ಬಗ್ಗೆ ಹೆಮ್ಮೆಪಡುತ್ತೇನೆ. 18 ನಾನು ನನ್ನ ಸ್ವಕಾರ್ಯಗಳ ಬಗ್ಗೆಯೂ ಮಾತಾಡುವುದಿಲ್ಲ. ಯೆಹೂದ್ಯರಲ್ಲದ ಜನರನ್ನು ತನಗೆ ವಿಧೇಯರನ್ನಾಗಿ ಮಾಡಿಕೊಳ್ಳಲು ಕ್ರಿಸ್ತನು ನನ್ನ ಮೂಲಕ ಮಾತಿನಲ್ಲಿಯೂ ಕ್ರಿಯೆಯಲ್ಲಿಯೂ ಮಾಡಿದ ಕಾರ್ಯಗಳನ್ನು ಹೇಳಿಕೊಳ್ಳುತ್ತೇನೆ. 19 ಅದ್ಭುತಕಾರ್ಯಗಳ ಶಕ್ತಿಯನ್ನು ಮತ್ತು ಮಹಾಕಾರ್ಯಗಳನ್ನು ನೋಡಿದ್ದರಿಂದಲೂ ಪವಿತ್ರಾತ್ಮನ ಶಕ್ತಿಯ ನಿಮಿತ್ತದಿಂದಲೂ ಅವರು ದೇವರಿಗೆ ವಿಧೇಯರಾದರು. ನಾನು ಜೆರುಸಲೇಮಿನಿಂದ ಇಲ್ಲುರಿಕ ಪ್ರಾಂತ್ಯದವರೆಗೂ ಸುವಾರ್ತೆಯನ್ನು ಬೋಧಿಸಿ, ನನ್ನ ಆ ಕರ್ತವ್ಯವನ್ನು ಪೂರೈಸಿದ್ದೇನೆ. 20 ಕ್ರಿಸ್ತನ ಬಗ್ಗೆ ಜನರು ಎಂದೂ ಕೇಳಿಲ್ಲದ ಸ್ಥಳಗಳಲ್ಲಿ ಸುವಾರ್ತೆಯನ್ನು ಬೋಧಿಸಲು ನಾನು ಯಾವಾಗಲೂ ಅಪೇಕ್ಷಿಸುತ್ತೇನೆ; ಏಕೆಂದರೆ ಮತ್ತೊಬ್ಬನು ಆಗಲೇ ಆರಂಭಿಸಿರುವ ಕೆಲಸದ ಮೇಲೆ ಕಟ್ಟಲು ನನಗೆ ಇಷ್ಟವಿಲ್ಲ. 21 ಆದರೆ ಇದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ:

“ಆತನ ಬಗ್ಗೆ ತಿಳಿಯದ ಜನರು ಆತನನ್ನು (ಕ್ರಿಸ್ತನನ್ನು) ನೋಡುವರು.
    ಆತನ ಬಗ್ಗೆ ಕೇಳಿಲ್ಲದ ಜನರು ಆತನನ್ನು ಅರ್ಥಮಾಡಿಕೊಳ್ಳುವರು.”(A)

ರೋಮಿಗೆ ಹೋಗಲು ಪೌಲನ ಯೋಜನೆ

22 ಈ ಕಾರಣದಿಂದಲೇ, ನಿಮ್ಮ ಬಳಿಗೆ ಬಾರದಂತೆ ನನಗೆ ಅನೇಕ ಸಲ ಅಡಚಣೆ ಆಯಿತು.

23 ಆದರೆ ಈಗ ಈ ಪ್ರಾಂತ್ಯಗಳಲ್ಲಿ ನಾನು ಮಾಡಬೇಕಾಗಿದ್ದ ಸೇವೆಯನ್ನು ಮಾಡಿ ಮುಗಿಸಿದ್ದೇನೆ. ಅನೇಕ ವರ್ಷಗಳಿಂದ ನಾನು ನಿಮ್ಮ ಬಳಿಗೆ ಬರಬೇಕೆಂದಿದ್ದೆ. 24 ಆದ್ದರಿಂದ ನಾನು ಸ್ಪೇನಿಗೆ ಹೋಗುವಾಗ ನಿಮ್ಮನ್ನು ಸಂದರ್ಶಿಸುತ್ತೇನೆ. ಹೌದು, ನಾನು ಸ್ಪೇನಿಗೆ ಪ್ರಯಾಣ ಮಾಡುವಾಗ ನಿಮ್ಮನ್ನು ಸಂದರ್ಶಿಸಿ, ಸ್ವಲ್ಪಕಾಲ ನಿಮ್ಮೊಂದಿಗೆ ಸಂತೋಷವಾಗಿ ತಂಗಿರುತ್ತೇನೆಂಬ ನಿರೀಕ್ಷೆ ನನಗಿದೆ. ಬಳಿಕ ನೀವು ನನ್ನ ಪ್ರಯಾಣಕ್ಕೆ ಸಹಾಯ ಮಾಡಬಹದು.

25 ಈಗ ನಾನು ದೇವಜನರಿಗೆ ಸಹಾಯ ಮಾಡುವುಕ್ಕಾಗಿ ಜೆರುಸಲೇಮಿಗೆ ಹೋಗುತ್ತಿದ್ದೇನೆ. 26 ಅಲ್ಲಿನ ದೇವಜನರಲ್ಲಿ ಕೆಲವರು ಬಡವರಾಗಿದ್ದಾರೆ. ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಅಲ್ಲಿನ ಬಡಜನರಿಗಾಗಿ ಸಂತೋಷದಿಂದ ಧನಸಹಾಯ ಮಾಡಿದ್ದಾರೆ. 27 ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಸ್ವಂತ ಇಷ್ಟದಿಂದಲೇ ಈ ಕಾರ್ಯವನ್ನು ಮಾಡಿದ್ದಾರೆ. ಅದು ಅವರ ಕರ್ತವ್ಯವೂ ಹೌದು. ಯೆಹೂದ್ಯರಲ್ಲದ ಅವರು ಯೆಹೂದ್ಯರ ಆತ್ಮಿಕ ಅಶೀರ್ವಾದಗಳಲ್ಲಿ ಪಾಲು ಹೊಂದಿರುವುದರಿಂದ ಅವರು ತಮ್ಮಲ್ಲಿರುವಂಥವುಗಳ ಮೂಲಕ ಅವರಿಗೆ ನೆರವು ನೀಡುವುದು ಅವರ ಹೊಣೆಯಾಗಿದೆ. 28 ಜೆರುಸಲೇಮಿನ ಬಡಜನರಿಗೋಸ್ಕರ ಕೊಟ್ಟಿರುವ ಈ ಹಣವನ್ನೆಲ್ಲಾ ಸುರಕ್ಷಿತವಾಗಿ ಅವರಿಗೆ ತಲುಪಿಸಿದ ಮೇಲೆ ನಾನು ಸ್ಪೇನಿಗೆ ಹೊರಡುವೆನು.

ನಾನು ಸ್ಪೇನಿಗೆ ಪ್ರಯಾಣ ಮಾಡುವಾಗ (ರೋಮಿನಲ್ಲಿ) ಇಳಿದು ನಿಮ್ಮನ್ನು ಸಂದರ್ಶಿಸುವೆನು. 29 ನಾನು ನಿಮ್ಮ ಬಳಿಗೆ ಬರುವಾಗ ಕ್ರಿಸ್ತನ ಆಶೀರ್ವಾದವನ್ನು ಹೇರಳವಾಗಿ ತರುತ್ತೇನೆಂದು ಬಲ್ಲೆನು.

30 ಸಹೋದರ ಸಹೋದರಿಯರೇ, ನೀವು ನನಗೋಸ್ಕರ ದೇವರಲ್ಲಿ ಪ್ರಾರ್ಥಿಸುವುದರ ಮೂಲಕ ನನ್ನ ಸೇವೆಗೆ ಸಹಾಯ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನಮ್ಮ ಪ್ರಭುವಾದ ಯೇಸುವಿನ ನಿಮಿತ್ತವಾಗಿಯೂ ಪವಿತ್ರಾತ್ಮನು ನಮಗೆ ಕೊಡುವ ಪ್ರೀತಿಯ ನಿಮಿತ್ತವಾಗಿಯೂ ನೀವು ಪ್ರಾರ್ಥಿಸಿರಿ. 31 ಜುದೇಯದಲ್ಲಿರುವ ಅವಿಶ್ವಾಸಿಗಳ ಕೈಯಿಂದ ನಾನು ಪಾರಾಗುವಂತೆ ಪ್ರಾರ್ಥಿಸಿರಿ. ನಾನು ಜೆರುಸಲೇಮಿಗೆ ತೆಗೆದುಕೊಂಡು ಹೋಗುತ್ತಿರುವ ಈ ಸಹಾಯಧನವು ಅಲ್ಲಿರುವ ದೇವಮಕ್ಕಳಿಗೆ ಮೆಚ್ಚಿಕೆಯಾಗುವಂತೆ ಪ್ರಾರ್ಥಿಸಿರಿ. 32 ಅನಂತರ, ದೇವರು ಬಯಸುವುದಾದರೆ ನಾನು ನಿಮ್ಮ ಬಳಿಗೆ ಬರುತ್ತೇನೆ. ನಾನು ಸಂತೋಷದಿಂದ ಬಂದು ನಿಮ್ಮ ಸಂಗಡವಿದ್ದು ವಿಶ್ರಾಂತಿಯನ್ನು ಪಡೆಯುತ್ತೇನೆ. 33 ಶಾಂತಿಯನ್ನು ಕೊಡುವ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International