New Testament in a Year
15 ಆದ್ದರಿಂದ ನಂಬಿಕೆಯಲ್ಲಿ ಬಲಹೀನವಾಗಿರುವವರ ಬಲಹೀನತೆಗಳನ್ನು ನಾವು ಸಹಿಸಿಕೊಳ್ಳಬೇಕು. ನಾವು ಕೇವಲ ನಮ್ಮ ಹಿತವನ್ನು ಮಾತ್ರ ನೋಡಿಕೊಳ್ಳಬಾರದು. 2 ನಮ್ಮಲ್ಲಿ ಪ್ರತಿಯೊಬ್ಬರು ತಮ್ಮ ನೆರೆಯವರ ಹಿತವನ್ನು ನೋಡಿಕೊಳ್ಳಬೇಕು. ನಂಬಿಕೆಯಲ್ಲಿ ಬಲಹೀನರಾಗಿರುವವರನ್ನು ಬಲಗೊಳಿಸಲು ನೆರವಾಗಿರಬೇಕು. 3 ಕ್ರಿಸ್ತನು ಸಹ ತನ್ನ ಜೀವಮಾನದಲ್ಲಿ ತನ್ನ ಹಿತಕ್ಕಾಗಿ ಪ್ರಯತ್ನಿಸಲಿಲ್ಲ. “ನಿನಗೆ ಅವಮಾನ ಮಾಡಿದ ಜನರು ನನಗೂ ಅವಮಾನ ಮಾಡಿದರು”(A) ಎಂಬುದಾಗಿ ಆತನ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. 4 ಹಿಂದಿನ ಕಾಲದಲ್ಲಿ ಬರೆಯಲ್ಪಟ್ಟಿರುವ ಪ್ರತಿಯೊಂದೂ ನಮ್ಮ ಉಪದೇಶಕ್ಕಾಗಿಯೇ ಬರೆಯಲ್ಪಟ್ಟಿದೆ. ನಾವು ನಿರೀಕ್ಷೆ ಉಳ್ಳವರಾಗಿರಬೇಕೆಂದು ಆ ಸಂಗತಿಗಳು ಬರೆಯಲ್ಪಟ್ಟಿವೆ. ಪವಿತ್ರ ಗ್ರಂಥವು ನಮಗೆ ಕೊಡುವ ತಾಳ್ಮೆಯಿಂದಲೂ ಶಕ್ತಿಯಿಂದಲೂ ಈ ನಿರೀಕ್ಷೆ ಬರುತ್ತದೆ. 5 ತಾಳ್ಮೆ ಮತ್ತು ಶಕ್ತಿ ದೇವರಿಂದ ಬರುತ್ತವೆ. ಕ್ರಿಸ್ತ ಯೇಸು ಬಯಸುವ ಮಾರ್ಗವನ್ನು ನೀವೆಲ್ಲರೂ ಒಟ್ಟಾಗಿ ಒಪ್ಪಿಕೊಳ್ಳಲು ದೇವರು ನಿಮಗೆ ಸಹಾಯ ಮಾಡಲೆಂದು ನಾನು ಪ್ರಾರ್ಥಿಸುತ್ತೇನೆ. 6 ಹೀಗೆ ನೀವೆಲ್ಲರೂ ಒಂದೇ ಹೃದಯದಿಂದಲೂ ಒಂದೇ ಮನಸ್ಸಿನಿಂದಲೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಮಹಿಮೆಪಡಿಸುವಿರಿ. 7 ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿಕೊಂಡನು. ಆದ್ದರಿಂದ ನೀವು ಒಬ್ಬರನ್ನೊಬ್ಬರು ಸ್ವೀಕರಿಸಿಕೊಳ್ಳಬೇಕು. ಇದು ದೇವರಿಗೆ ಮಹಿಮೆಯನ್ನು ಉಂಟು ಮಾಡುತ್ತದೆ. 8 ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನಗಳು ಸತ್ಯವಾದುವುಗಳೆಂದು ತೋರಿಸುವುದಕ್ಕಾಗಿಯೂ ದೇವರು ಆ ವಾಗ್ದಾನಗಳನ್ನು ನೆರವೇರಿಸುತ್ತಾನೆ ಎಂಬುದನ್ನು ನಿರೂಪಿಸುವುದಕ್ಕಾಗಿಯೂ 9 ದೇವರು ತಮಗೆ ತೋರುವ ಕರುಣೆಗಾಗಿ ಯೆಹೂದ್ಯರಲ್ಲದವರು ಆತನನ್ನು ಮಹಿಮೆಪಡಿಸಲೆಂದು ಕ್ರಿಸ್ತನು ಯೆಹೂದ್ಯರ ಸೇವಕನಾದನು. ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:
“ಆದ್ದರಿಂದ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ನಾನು ನಿನ್ನನ್ನು ಸ್ತುತಿಸುವೆನು:
ನಾನು ನಿನ್ನ ಹೆಸರನ್ನು ಸಂಕೀರ್ತಿಸುವೆನು.”(B)
10 ಇದಲ್ಲದೆ ಪವಿತ್ರ ಗ್ರಂಥವು ಹೀಗೆನ್ನುತ್ತದೆ:
“ಯೆಹೂದ್ಯರಲ್ಲದ ನೀವು ದೇವರ ಸ್ವಂತ ಜನರೊಂದಿಗೆ ಸೇರಿ ಸಂತೋಷದಿಂದಿರಬೇಕು.”(C)
11 ಮತ್ತೊಂದು ಕಡೆ ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ:
“ಯೆಹೂದ್ಯರಲ್ಲದ ನೀವೆಲ್ಲರೂ ಪ್ರಭುವನ್ನು ಸ್ತುತಿಸಿರಿ.
ಎಲ್ಲಾ ಜನರು ಪ್ರಭುವಿಗೆ ಸ್ತೋತ್ರ ಮಾಡಲಿ.”(D)
12 ಯೆಶಾಯನು ಹೀಗೆ ಹೇಳಿದ್ದಾನೆ:
“ಇಷಯನ ಕುಟುಂಬದಿಂದ ಒಬ್ಬ ವ್ಯಕ್ತಿಯು ಬರುವನು.
ಆತನು ಯೆಹೂದ್ಯರಲ್ಲದವರನ್ನು ಆಳುವುದಕ್ಕಾಗಿ ಬರುವನು.
ಯೆಹೂದ್ಯರಲ್ಲದ ಜನರು ಆತನಲ್ಲಿ ನಿರೀಕ್ಷೆಯನ್ನು ಹೊಂದಿಕೊಳ್ಳುವರು.”(E)
13 ನಿರೀಕ್ಷೆಯನ್ನು ಕೊಡುವ ದೇವರು ನಂಬಿಕೆಯಿಂದ ಉಂಟಾಗುವ ಆನಂದವನ್ನೂ ಸಮಾಧಾನವನ್ನೂ ನಿಮಗೆ ಸಂಪೂರ್ಣವಾಗಿ ದಯಪಾಲಿಸಲೆಂದು ನಾನು ಪ್ರಾರ್ಥಿಸುತ್ತೇನೆ. ಆಗ ಪವಿತ್ರಾತ್ಮನ ಶಕ್ತಿಯ ಮೂಲಕ ನಿರೀಕ್ಷೆಯು ನಿಮ್ಮಲ್ಲಿ ತುಂಬಿ ಹೊರಸೂಸುವುದು.
Kannada Holy Bible: Easy-to-Read Version. All rights reserved. © 1997 Bible League International