New Testament in a Year
ದೇವರು ತನ್ನ ಜನರನ್ನು ಮರೆತಿಲ್ಲ
11 ಹಾಗಾದರೆ, “ದೇವರು ತನ್ನ ಜನರನ್ನು ತಿರಸ್ಕರಿಸಿದನೇ?” ಎಂದು ನಾನು ಕೇಳುತ್ತೇನೆ. ಇಲ್ಲ! ನಾನೂ ಒಬ್ಬ ಇಸ್ರೇಲನಾಗಿದ್ದೇನೆ. ನಾನು ಅಬ್ರಹಾಮನ ಕುಟುಂಬಕ್ಕೆ ಸೇರಿದವನಾಗಿದ್ದೇನೆ: ಬೆನ್ಯಾಮೀನನ ಕುಲದವನಾಗಿದ್ದೇನೆ. 2 ಇಸ್ರೇಲರು ಹುಟ್ಟುವುದಕ್ಕಿಂತ ಮೊದಲೇ ದೇವರು ಅವರನ್ನು ತನ್ನ ಜನರನ್ನಾಗಿ ಆರಿಸಿಕೊಂಡನು. ಆತನು ಅವರನ್ನು ಹೊರಕ್ಕೆ ತಳ್ಳಿಬಿಡಲಿಲ್ಲ. ಎಲೀಯನ ಬಗ್ಗೆ ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ಇಸ್ರೇಲಿನ ಜನರ ವಿರೋಧವಾಗಿ ಎಲೀಯನು ದೇವರಿಗೆ ಮಾಡಿದ ಪ್ರಾರ್ಥನೆಯ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆದಿದೆ. 3 ಎಲೀಯನು, “ಪ್ರಭುವೇ, ಜನರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು; ನಿನ್ನ ಯಜ್ಞವೇದಿಕೆಗಳನ್ನು ನಾಶಮಾಡಿದರು. ಪ್ರವಾದಿಗಳಲ್ಲಿ ನಾನೊಬ್ಬನು ಮಾತ್ರ ಇನ್ನೂ ಬದುಕಿದ್ದೇನೆ. ಈಗ ಜನರು ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ”(A) ಎಂದು ಪ್ರಾರ್ಥಿಸಿದನು. 4 ಆದರೆ ದೇವರು ಎಲೀಯನಿಗೆ ಕೊಟ್ಟ ಉತ್ತರವೇನು? ದೇವರು ಎಲೀಯನಿಗೆ, “ಇನ್ನೂ ನನ್ನನ್ನು ಆರಾಧಿಸುತ್ತಿರುವ ಏಳು ಸಾವಿರ ಮಂದಿಯನ್ನು ನನಗಾಗಿ ಉಳಿಸಿಕೊಂಡಿದ್ದೇನೆ. ಅವರನ್ನು ಬಾಳನ ಪೂಜೆಗೆ ಕೊಟ್ಟಿಲ್ಲ”(B) ಎಂದು ಉತ್ತರಕೊಟ್ಟನು.
5 ಈಗಲೂ ಅದರಂತೆಯೇ ಆಗಿದೆ. ದೇವರು ತನ್ನ ಕೃಪೆಯ ಮೂಲಕ ಆರಿಸಿಕೊಂಡಿರುವ ಕೆಲವು ಜನರು ಇದ್ದಾರೆ. 6 ದೇವರ ಕೃಪೆಯ ಮೂಲಕ ಆರಿಸಲ್ಪಟ್ಟಿರುವ ಅವರು ದೇವರ ಮಕ್ಕಳಾದದ್ದು ತಮ್ಮ ಕ್ರಿಯೆಗಳಿಂದಲ್ಲ. ಇಲ್ಲದಿದ್ದರೆ, ದೇವರ ಕೃಪಾವರವು ಕೃಪಾವರವೆನಿಸಿಕೊಳ್ಳುತ್ತಿರಲಿಲ್ಲ.
7 ಆದ್ದರಿಂದ ನಡೆದ ಸಂಗತಿಯಿಷ್ಟೆ: ಇಸ್ರೇಲಿನ ಜನರು ನೀತಿವಂತರಾಗಲು ಪ್ರಯತ್ನಿಸಿದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ. ಹೀಗಿರಲು, ದೇವರಿಂದ ಆರಿಸಲ್ಪಟ್ಟಿದ್ದ ಜನರು ನೀತಿವಂತರಾದರು. ಆದರೆ ಉಳಿದ ಜನರು ಕಠಿಣರಾಗಿ ದೇವರಿಗೆ ಕಿವಿಗೊಡಲಿಲ್ಲ. 8 ಪವಿತ್ರ ಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು:
“ಜನರಿಗೆ ಅರ್ಥವಾಗದಂತೆ ದೇವರು ಅವರನ್ನು ಮಂಕುಗೊಳಿಸಿದನು.”(C)
“ಅವರು ಇಂದಿನವರೆಗೂ ಕಣ್ಣಿದ್ದರೂ ಕಾಣದಂತೆ
ಕಿವಿಯಿದ್ದರೂ ಕೇಳದಂತೆ ದೇವರು ಅವುಗಳನ್ನು ಮುಚ್ಚಿಬಿಟ್ಟನು.”(D)
9 ದಾವೀದನು ಹೀಗೆನ್ನುತ್ತಾನೆ:
“ಅವರು ತಮ್ಮ ಔತಣಗಳಲ್ಲಿ ಸಿಕ್ಕಿಕೊಂಡು ಬಂಧಿತರಾಗಲಿ;
ಎಡವಿಬಿದ್ದು ದಂಡನೆ ಹೊಂದಲಿ.
10 ಅವರ ಕಣ್ಣು ಕುರುಡಾಗಲಿ;
ನಿರಂತರ ಭಾರದಿಂದ ಬೆನ್ನು ಗೂನಾಗಲಿ.”(E)
11 ಹಾಗಾದರೆ, ಯೆಹೂದ್ಯರು ಮೇಲೇಳದಂತೆ ಮುಗ್ಗರಿಸಿ ಬಿದ್ದರೇ? ಎಂದಿಗೂ ಇಲ್ಲ. ಆದರೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆ ಲಭಿಸುವಂತಾಯಿತು. ಹೀಗೆ ಇತರರನ್ನು ನೋಡಿ ಅವರೇ ಅಸೂಯೆಪಡುವಂತಾಯಿತು. 12 ಯೆಹೂದ್ಯರ ಅಪರಾಧವು ಜಗತ್ತಿಗೆ ಅಧಿಕವಾದ ಆಶೀರ್ವಾದಗಳನ್ನೂ ಅವರ ಅಪಜಯವು ಯೆಹೂದ್ಯರಲ್ಲದ ಜನರಿಗೆ ಅಧಿಕವಾದ ಆಶೀರ್ವಾದಗಳನ್ನೂ ತರಲು ಕಾರಣವಾದರೆ, ದೇವರ ಇಚ್ಛೆಗನುಸಾರವಾಗಿ ಯೆಹೂದ್ಯರೆಲ್ಲರು ಪರಿವರ್ತನೆ ಹೊಂದಿದಾಗ ಜಗತ್ತು ಮತ್ತಷ್ಟು ಅಗಾಧವಾದ ಆಶೀರ್ವಾದಗಳನ್ನು ಹೊಂದುವುದು ನಿಶ್ಚಯವಲ್ಲವೇ?
13 ಈಗ ನಾನು ಯೆಹೂದ್ಯರಲ್ಲದ ಜನರೊಂದಿಗೆ ಮಾತಾಡುತ್ತಿದ್ದೇನೆ. ನಾನು ಅವರಿಗೆ ಅಪೊಸ್ತಲನಾಗಿದ್ದೇನೆ. ಆದ್ದರಿಂದ ನಾನು ಈ ಕೆಲಸವನ್ನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿಯೇ ಮಾಡುತ್ತೇನೆ. 14 ನಾನು ನನ್ನ ಸ್ವಂತ ಜನರಲ್ಲಿ (ಯೆಹೂದ್ಯರಲ್ಲಿ) ಅಸೂಯೆಯನ್ನು ಉಂಟುಮಾಡಿ ಅವರಲ್ಲಿ ಕೆಲವರಾದರೂ ರಕ್ಷಣೆ ಹೊಂದುವಂತೆ ಮಾಡಬಲ್ಲೆನೆಂಬ ನಿರೀಕ್ಷೆ ನನಗಿದೆ. 15 ಇಸ್ರೇಲರು ತಿರಸ್ಕೃತರಾದ್ದರಿಂದ ಜಗತ್ತು ದೇವರೊಡನೆ ಸಂಧಾನವಾಗಲು ಸಾಧ್ಯವಾಯಿತಾದರೆ ಅವರು ಸ್ವೀಕೃತರಾದಾಗ ಇನ್ನೇನು ತಾನೆ ಸಂಭವಿಸದು! ಸತ್ತವರು ಜೀವ ಪಡೆದುಕೊಂಡಂತಾಗುವುದಿಲ್ಲವೇ? 16 ರೊಟ್ಟಿಯ ಮೊದಲನೇ ತುಂಡನ್ನು ದೇವರಿಗೆ ಅರ್ಪಿಸಿದಾಗ, ಇಡೀ ರೊಟ್ಟಿಯೇ ಪವಿತ್ರವಾಯಿತು. ಮರದ ಬೇರುಗಳು ಪವಿತ್ರವಾಗಿದ್ದರೆ, ಆ ಮರದ ಕೊಂಬೆಗಳು ಸಹ ಪವಿತ್ರವಾಗಿವೆ.
17 ಇದು, ಆಲಿವ್ ಮರದ ಕೆಲವು ಕೊಂಬೆಗಳು ಮುರಿಯಲ್ಪಟ್ಟಾಗ, ಕಾಡುಆಲಿವ್ ಮರದ ಕೊಂಬೆಯೊಂದು ಮೊದಲಿನ ಆಲಿವ್ ಮರಕ್ಕೆ ಸೇರಿಕೊಂಡಂತಿದೆ. ಯೆಹೂದ್ಯರಲ್ಲದ ನೀವು ಕಾಡುಕೊಂಬೆಗೆ ಸಮಾನವಾಗಿದ್ದೀರಿ. ಆದರೆ ಈಗ ನೀವು ಮೊದಲನೆ ಮರದ (ಯೆಹೂದ್ಯರ) ಶಕ್ತಿಯಲ್ಲಿಯೂ ಜೀವದಲ್ಲಿಯೂ ಪಾಲುಗಾರರಾಗಿದ್ದೀರಿ. 18 ಆದ್ದರಿಂದ ಮುರಿಯಲ್ಪಟ್ಟ ಆ ಕೊಂಬೆಗಳನ್ನು ಕಡೆಗಣಿಸಬೇಡಿ. ಅವುಗಳನ್ನು ಕಡೆಗಣಿಸಲು ನಿಮಗೆ ಯಾವ ಕಾರಣವೂ ಇಲ್ಲ. ಏಕೆಂದರೆ, ನೀವು ಬೇರಿಗೆ ಜೀವವನ್ನು ಕೊಡುವುದಿಲ್ಲ. ಬೇರು ನಿಮಗೆ ಜೀವವನ್ನು ಕೊಡುತ್ತದೆ.
Kannada Holy Bible: Easy-to-Read Version. All rights reserved. © 1997 Bible League International