New Testament in a Year
ದೇವರು ಮತ್ತು ಯೆಹೂದ್ಯರು
9 ನಾನು ಕ್ರಿಸ್ತನಲ್ಲಿದ್ದೇನೆ ಮತ್ತು ನಿಮಗೆ ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಸುಳ್ಳಾಡುವುದಿಲ್ಲ. ನನ್ನ ಆಲೋಚನೆಗಳು ಪವಿತ್ರಾತ್ಮನ ಆಳ್ವಿಕೆಗೆ ಒಳಪಟ್ಟಿವೆ. ನನ್ನ ಮನಸ್ಸೇ ಇದಕ್ಕೆ ಸಾಕ್ಷಿ. 2 ಯೆಹೂದ್ಯರ ವಿಷಯದಲ್ಲಿ ನನಗೆ ಅತೀವ ದುಃಖವಿದೆ; ನಿರಂತರ ಮನೋವೇದನೆಯಿದೆ. 3 ಅವರು ನನ್ನ ಸಹೋದರ ಸಹೋದರಿಯರಾಗಿದ್ದಾರೆ; ಇಹಲೋಕದ ಕುಟುಂಬದವರಾಗಿದ್ದಾರೆ. ಅವರಿಗೆ ಸಹಾಯ ಮಾಡಲು ಕ್ರಿಸ್ತನನ್ನು ಅಗಲಿ ಶಾಪಗ್ರಸ್ತನಾಗುವುದಕ್ಕೂ ಸಿದ್ಧನಾಗಿದ್ದೇನೆ. 4 ಅವರು ಇಸ್ರೇಲಿನ ಜನರು. ಅವರು ದೇವರಿಂದ ಆರಿಸಲ್ಪಟ್ಟ ಮಕ್ಕಳು. ಅವರು ದೇವರ ಮಹಿಮೆಯನ್ನು ಮತ್ತು ದೇವರು ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಗಳನ್ನು ಹೊಂದಿದ್ದಾರೆ. ದೇವರು ಅವರಿಗೆ ಮೋಶೆಯ ಧರ್ಮಶಾಸ್ತ್ರವನ್ನೂ ಸರಿಯಾದ ಆರಾಧನೆಯ ಕ್ರಮವನ್ನೂ ತನ್ನ ವಾಗ್ದಾನಗಳನ್ನೂ ಕೊಟ್ಟನು. 5 ಅವರು ನಮ್ಮ ಪಿತೃಗಳ ಸಂತಾನಗಳಿಗೆ ಸೇರಿದವರಾಗಿದ್ದಾರೆ; ಕ್ರಿಸ್ತನು ಶಾರೀರಿಕವಾಗಿ ಇವರ ವಂಶದಲ್ಲಿಯೇ ಹುಟ್ಟಿದನು. ಕ್ರಿಸ್ತನು ಸಕಲಕ್ಕೂ ಒಡೆಯನಾಗಿದ್ದಾನೆ. ಆತನಿಗೆ ಎಂದೆಂದಿಗೂ ಸ್ತೋತ್ರವಾಗಲಿ! ಆಮೆನ್.
6 ಹೌದು, ನಾನು ಯೆಹೂದ್ಯರ ವಿಷಯದಲ್ಲಿ ದುಃಖಿಸುತ್ತೇನೆ. ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದರಲ್ಲಿ ವಿಫಲನಾದನೆಂದು ನಾನು ಹೇಳುತ್ತಿಲ್ಲ. ಏಕೆಂದರೆ ಇಸ್ರೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. 7 ಅಬ್ರಹಾಮನ ಸಂತತಿಗಳವರಲ್ಲಿ ಕೆಲವರು ಮಾತ್ರ ಅಬ್ರಹಾಮನ ನಿಜವಾದ ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ಇಸಾಕನು ಮಾತ್ರ ನಿಮಗೆ ನ್ಯಾಯಬದ್ಧವಾದ ಮಗನು”(A) ಎಂದು ಹೇಳಿದನು. 8 ಇದರರ್ಥವೇನೆಂದರೆ, ಶರೀರ ಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ದೇವರ (ನಿಜ) ಮಕ್ಕಳಾಗಿದ್ದಾರೆ. 9 ದೇವರು ಅವನಿಗೆ, “ನೇಮಿತ ಕಾಲದಲ್ಲಿ ನಾನು ಹಿಂತಿರುಗಿಬರುವೆನು, ಆಗ ಸಾರಳಿಗೆ ಒಬ್ಬ ಮಗನಿರುವನು”(B) ಎಂಬ ವಾಗ್ದಾನ ಮಾಡಿದ್ದನು.
10 ಅದಷ್ಟೇ ಅಲ್ಲ, ರೆಬೆಕ್ಕಳಿಗೂ ಇಬ್ಬರು ಗಂಡುಮಕ್ಕಳಿದ್ದರು. ಅವರಿಬ್ಬರಿಗೂ ಒಬ್ಬನೇ ತಂದೆ. ಅವನೇ ನಮ್ಮ ಪಿತೃವಾದ ಇಸಾಕನು. 11-12 ಆದರೆ ಆ ಇಬ್ಬರು ಗಂಡುಮಕ್ಕಳು ಹುಟ್ಟುವ ಮೊದಲೇ, ದೇವರು ರೆಬೆಕ್ಕಳಿಗೆ, “ಹಿರಿಯವನು ಕಿರಿಯವನ ಸೇವೆ ಮಾಡುವನು”(C) ಎಂದು ಹೇಳಿದನು. ಆ ಬಾಲಕರು ಯಾವ ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಮಾಡುವ ಮೊದಲೇ ಇದಾಯಿತು. ದೇವರು ಆ ಬಾಲಕನನ್ನು ತನ್ನ ಸ್ವಂತ ಯೋಜನೆಗನುಸಾರವಾಗಿ ಆರಿಸಿಕೊಂಡಿದ್ದರಿಂದ ಆ ಬಾಲಕರು ಹುಟ್ಟುವದಕ್ಕಿಂತ ಮೊದಲೇ ಹೀಗೆ ಹೇಳಿದನು. ದೇವರು ಅವನನ್ನು ಆರಿಸಿಕೊಂಡಿದ್ದರಿಂದ ಅವನನ್ನೇ ಕರೆಯಬೇಕೆಂದಿದ್ದನು. ಆದರೆ ಅದು ಆ ಬಾಲಕರ ಯಾವುದೇ ಕಾರ್ಯಗಳ ಮೇಲೆ ಆಧಾರಗೊಂಡಿರಲಿಲ್ಲ. 13 ಅಂತೆಯೇ, “ನಾನು ಯಾಕೋಬನನ್ನು ಪ್ರೀತಿಸಿದೆನು, ಆದರೆ ಏಸಾವನನ್ನು ದ್ವೇಷಿಸಿದೆನು”(D) ಎಂದು ಪವಿತ್ರ ಗ್ರಂಥವು ಹೇಳುತ್ತದೆ.
14 ಹಾಗಾದರೆ, ಇದರ ಬಗ್ಗೆ ಏನು ಹೇಳೋಣ? ದೇವರು ಅನ್ಯಾಯಗಾರನೇ? ಎಂದಿಗೂ, ಇಲ್ಲ. 15 ದೇವರು ಮೋಶೆಗೆ, “ನಾನು ಯಾರಿಗೆ ಕರುಣೆ ತೋರಬಯಸುತ್ತೇನೋ ಅವನಿಗೆ ಕರುಣೆ ತೋರುವೆನು. ನಾನು ಯಾರಿಗೆ ಕನಿಕರ ತೋರಬಯಸುತ್ತೇನೋ ಅವರಿಗೆ ಕನಿಕರ ತೋರುವೆನು”(E) ಎಂದು ಹೇಳಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International