New Testament in a Year
ಮಕೆದೋನಿಯಕ್ಕೆ ಮತ್ತು ಗ್ರೀಸಿಗೆ ಪೌಲನ ಪ್ರಯಾಣ
20 ಗಲಭೆಯು ನಿಂತುಹೋದ ಮೇಲೆ, ಪೌಲನು ಯೇಸುವಿನ ಶಿಷ್ಯರನ್ನು ಕರೆಯಿಸಿ ಅವರನ್ನು ಧೈರ್ಯಪಡಿಸಿದನು. ಬಳಿಕ ಪೌಲನು ಅಲ್ಲಿಂದ ಹೊರಟು ಮಕೆದೋನಿಯಾಕ್ಕೆ ಹೋದನು. 2 ಅವನು ಆ ಪ್ರದೇಶದಲ್ಲಿ ಪ್ರಯಾಣ ಮಾಡುತ್ತಾ ಅನೇಕ ಊರುಗಳಿಗೆ ಭೇಟಿನೀಡಿ, ಯೇಸುವಿನ ಶಿಷ್ಯರಿಗೆ ಅನೇಕ ಸಂಗತಿಗಳನ್ನು ತಿಳಿಸಿ ಬಲಪಡಿಸಿದನು. ಬಳಿಕ ಪೌಲನು ಗ್ರೀಸಿಗೆ (ಅಖಾಯ) ಹೋದನು. 3 ಅಲ್ಲಿ ಅವನು ಮೂರು ತಿಂಗಳವರೆಗೆ ಇದ್ದನು. ಅವನು ಸಿರಿಯಕ್ಕೆ ನೌಕಾಯಾನ ಮಾಡಲು ಸಿದ್ಧನಾಗಿದ್ದನು.
ಆದರೆ ಕೆಲವು ಯೆಹೂದ್ಯರು ಅವನಿಗೆ ವಿರೋಧವಾಗಿ ಯೋಜನೆ ಮಾಡಿದರು. ಆದ್ದರಿಂದ ಪೌಲನು ಸಿರಿಯಕ್ಕೆ ಮಕೆದೋನಿಯದ ಮೂಲಕ ಹಿಂತಿರುಗಿ ಹೋಗಲು ನಿರ್ಧರಿಸಿದನು. 4 ಕೆಲವು ಜನರು ಅವನೊಂದಿಗಿದ್ದರು. ಅವರು ಯಾರೆಂದರೆ: ಬೆರೋಯ ಪಟ್ಟಣದ ಪುರ್ರನ ಮಗನಾದ ಸೋಪತ್ರನು, ಥೆಸಲೋನಿಕ ಪಟ್ಟಣದ ಆರಿಸ್ತಾರ್ಕ ಮತ್ತು ಸೆಕುಂದ, ದರ್ಬೆ ಪಟ್ಟಣದ ಗಾಯ ಮತ್ತು ತಿಮೊಥೆಯ, ಅಲ್ಲದೆ ಏಷ್ಯಾದ ತುಖಿಕ ಹಾಗು ತ್ರೊಫಿಮ. 5 ಇವರು ಪೌಲನಿಗಿಂತ ಮುಂಚಿತವಾಗಿಯೇ ಹೋದರು. ಅವರು ನಮಗಾಗಿ ತ್ರೋವ ಪಟ್ಟಣದಲ್ಲಿ ಕಾಯುತ್ತಿದ್ದರು. 6 ಯೆಹೂದ್ಯರ ಹುಳಿ ರಹಿತ ರೊಟ್ಟಿ ಹಬ್ಬದ ನಂತರ ನಾವು ಫಿಲಿಪ್ಪಿ ಪಟ್ಟಣದ ಹಡಗಿನಲ್ಲಿ ಹೋದೆವು. ಐದು ದಿನಗಳಾದ ನಂತರ ನಾವು ಇವರನ್ನು ತ್ರೋವದಲ್ಲಿ ಸಂಧಿಸಿದೆವು. ಅಲ್ಲಿ ನಾವು ಏಳು ದಿನ ತಂಗಿದೆವು.
ತ್ರೋವಕ್ಕೆ ಪೌಲನ ಕೊನೆಯ ಭೇಟಿ
7 ಭಾನುವಾರದಂದು, ನಾವೆಲ್ಲರು ಪ್ರಭುವಿನ ರಾತ್ರಿ ಭೋಜನಕ್ಕೆ ಒಟ್ಟಾಗಿ ಸೇರಿದೆವು. ಸಭೆ ಸೇರಿಬಂದಿದ್ದ ಜನರೊಂದಿಗೆ ಪೌಲನು ಮಾತಾಡಿದನು. ಅವನು ಮರುದಿನ ಅಲ್ಲಿಂದ ಹೊರಡಬೇಕೆಂದು ಅಲೋಚಿಸಿಕೊಂಡಿದ್ದನು. ಪೌಲನು ಮಧ್ಯರಾತ್ರಿಯವರೆಗೂ ಮಾತಾಡುತ್ತಲೇ ಇದ್ದನು. 8 ನಾವೆಲ್ಲರೂ ಮೇಲಂತಸ್ತಿನ ಕೊಠಡಿಯೊಂದರಲ್ಲಿ ಸೇರಿ ಬಂದಿದ್ದೆವು. ಆ ಕೊಠಡಿಯಲ್ಲಿ ಅನೇಕ ದೀಪಗಳಿದ್ದವು. 9 ಯುತಿಕ ಎಂಬ ಯುವಕನು ಕಿಟಕಿಯಲ್ಲಿ ಕುಳಿತುಕೊಂಡಿದ್ದನು. ಪೌಲನು ಮಾತಾಡುತ್ತಲೇ ಇದ್ದನು. ಇತ್ತ ಯುವಕನು ಗಾಢವಾಗಿ ನಿದ್ರಿಸುತ್ತಾ ಮೂರನೆ ಅಂತಸ್ತಿನಿಂದ ಕೆಳಗಡೆ ಬಿದ್ದುಬಿಟ್ಟನು. ಜನರು ಕೆಳಗಿಳಿದು ಹೋಗಿ ಅವನನ್ನು ಎತ್ತಿ ನೋಡಿದಾಗ ಅವನು ಸತ್ತಿದ್ದನು.
10 ಪೌಲನು ಕೆಳಗಿಳಿದು ಅವನ ಬಳಿಗೆ ಹೋಗಿ, ಮೊಣಕಾಲೂರಿ ಅವನನ್ನು ಅಪ್ಪಿಕೊಂಡು, ಅಲ್ಲಿದ್ದ ವಿಶ್ವಾಸಿಗಳಿಗೆ, “ಚಿಂತಿಸಬೇಡಿ. ಇವನು ಮತ್ತೆ ಜೀವಂತನಾದನು” ಎಂದು ಹೇಳಿದನು. 11 ಪೌಲನು ಮತ್ತೆ ಮೇಲಂತಸ್ತಿಗೆ ಹೋಗಿ ರೊಟ್ಟಿಯನ್ನು ಮುರಿದು ಊಟಮಾಡಿದನು. ಪೌಲನು ಅವರೊಂದಿಗೆ ದೀರ್ಘಕಾಲ ಮಾತಾಡಿದನು. ಅಷ್ಟರಲ್ಲಿಯೇ ಮುಂಜಾನೆಯಾಗಿತ್ತು. ಬಳಿಕ ಪೌಲನು ಹೊರಟುಹೋದನು. 12 ಜನರು ಜೀವಂತನಾಗಿದ್ದ ಆ ಯುವಕನನ್ನು ಮನೆಗೆ ಕರೆದುಕೊಂಡು ಹೋದರು. ಇದರಿಂದ ಜನರಿಗೆ ಬಹಳ ಆದರಣೆಯಾಯಿತು.
ತ್ರೋವದಿಂದ ಮಿಲೇತಕ್ಕೆ ಪ್ರಯಾಣ
13 ನಾವು ಪೌಲನಿಗಿಂತ ಮುಂಚಿತವಾಗಿಯೇ ಅಸ್ಸೊಸಿ ಎಂಬ ಪಟ್ಟಣಕ್ಕೆ ನೌಕಾಯಾನ ಮಾಡಿದೆವು. ತಾನು ಭೂಮಾರ್ಗವಾಗಿ ಬರುವುದಾಗಿಯೂ ಅಸ್ಸೊಸಿನಲ್ಲಿ ನಮ್ಮನ್ನು ಸಂಧಿಸಿ ಅಲ್ಲಿಂದ ನಮ್ಮೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡುವುದಾಗಿಯೂ ಪೌಲನು ನಮಗೆ ತಿಳಿಸಿದ್ದನು. 14 ಅಂತೆಯೇ ನಾವು ಪೌಲನನ್ನು ಅಸ್ಸೊಸಿನಲ್ಲಿ ಸಂಧಿಸಿದೆವು. ಅಲ್ಲಿಂದ ಅವನು ನಮ್ಮೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡಿದನು. ನಾವೆಲ್ಲರೂ ಮಿತಿಲೇನಿ ಪಟ್ಟಣಕ್ಕೆ ಹೋದೆವು. 15 ಮರುದಿನ ನಾವು ಅಲ್ಲಿಂದ ನೌಕಾಯಾನ ಮಾಡಿ ಖಿಯೋಸ್ ದ್ವೀಪದ ಸಮೀಪದಲ್ಲಿದ್ದ ಸ್ಥಳವೊಂದಕ್ಕೆ ಬಂದೆವು. ಮರುದಿನ ಸಾಮೋಸ್ ದ್ವೀಪಕ್ಕೆ ನೌಕಾಯಾನ ಮಾಡಿದೆವು. ಅದರ ಮೂರನೆಯ ದಿನ ನಾವು ಮಿಲೇತ ಪಟ್ಟಣಕ್ಕೆ ಬಂದೆವು. 16 ಎಫೆಸದಲ್ಲಿ ತಂಗಬಾರದೆಂದು ಪೌಲನು ಆಗಲೇ ನಿರ್ಧಾರ ಮಾಡಿದ್ದನು. ಏಷ್ಯಾದಲ್ಲಿ ದೀರ್ಘಕಾಲ ತಂಗಲು ಅವನಿಗೆ ಇಷ್ಟವಿರಲಿಲ್ಲ. ಸಾಧ್ಯವಾದರೆ ಪಂಚಾಶತ್ತಮ ಹಬ್ಬಕ್ಕೆ ಜೆರುಸಲೇಮಿನಲ್ಲಿರಬೇಕೆಂದು ಅವನು ತನ್ನ ಪ್ರಯಾಣವನ್ನು ತ್ವರಿತಗೊಳಿಸಿದನು.
Kannada Holy Bible: Easy-to-Read Version. All rights reserved. © 1997 Bible League International