New Testament in a Year
ಥೆಸಲೋನಿಕದಲ್ಲಿ ಪೌಲ ಸೀಲರು
17 ಪೌಲ ಸೀಲರು ಆಂಫಿಪೊಲಿ ಮತ್ತು ಅಪೊಲೋನಿಯ ಮಾರ್ಗವಾಗಿ ಪ್ರಯಾಣ ಮಾಡಿ ಥೆಸಲೋನಿಕ ಪಟ್ಟಣಕ್ಕೆ ಬಂದರು. ಆ ಪಟ್ಟಣದಲ್ಲಿ ಯೆಹೂದ್ಯರ ಒಂದು ಸಭಾಮಂದಿರವಿತ್ತು. 2 ಪೌಲನು ಎಂದಿನಂತೆ ಯೆಹೂದ್ಯರನ್ನು ಭೇಟಿಯಾಗಲು ಈ ಸಭಾಮಂದಿರದೊಳಗೆ ಹೋದನು. ಅವನು ಮೂರು ವಾರಗಳವರೆಗೆ ಪ್ರತಿ ಸಬ್ಬತ್‌ದಿನದಂದು ಯೆಹೂದ್ಯರೊಂದಿಗೆ ಪವಿತ್ರ ಗ್ರಂಥದ ಆಧಾರದೊಡನೆ ಚರ್ಚಿಸಿ ವಿವರಿಸಿದನು. 3 ಕ್ರಿಸ್ತನು ಸತ್ತು ಸಮಾಧಿಯೊಳಗಿಂದ ಎದ್ದು ಬರಲೇಬೇಕಿತ್ತು ಎಂಬುದನ್ನು ತೋರಿಸಿಕೊಟ್ಟನು. “ನಾನು ನಿಮಗೆ ತಿಳಿಸುತ್ತಿರುವ ಈ ಯೇಸುವೇ ಕ್ರಿಸ್ತನು” ಎಂದು ಪೌಲನು ಸ್ಪಷ್ಟಪಡಿಸಿದನು. 4 ನಿಜದೇವರನ್ನು ಪ್ರೀತಿಸುತ್ತಿದ್ದ ಕೆಲವು ಮಂದಿ ಗ್ರೀಕರು ಮತ್ತು ಕೆಲವು ಮಂದಿ ಪ್ರಮುಖ ಸ್ತ್ರೀಯರು ಅಲ್ಲಿದ್ದರು. ಅವರಲ್ಲಿ ಅನೇಕರಿಗೆ ಮನವರಿಕೆಯಾಗಿ ಪೌಲ ಸೀಲರನ್ನು ಸೇರಿಕೊಂಡರು.
5 ಆದರೆ ನಂಬದೆಹೋದ ಯೆಹೂದ್ಯರು ಅಸೂಯೆಗೊಂಡರು. ಅವರು ಪಟ್ಟಣದಲ್ಲಿದ್ದ ಕೆಲವು ಕೆಡುಕರಿಗೆ ಹಣಕೊಟ್ಟು ಕರೆದುಕೊಂಡು ಬಂದರು. ಈ ಕೆಡುಕರು ಅನೇಕ ಜನರನ್ನು ಒಟ್ಟುಗೂಡಿಸಿ, ಪಟ್ಟಣದಲ್ಲಿ ಗಲಭೆ ಮಾಡಿದರು. ಜನರು ಪೌಲ ಸೀಲರನ್ನು ಹುಡುಕುತ್ತಾ ಯಾಸೋನನ ಮನೆಗೆ ಹೋದರು. ಅವರು ಪೌಲ ಸೀಲರನ್ನು ಜನರ ಮುಂದೆ ಹೊರಗೆ ಎಳೆದುಕೊಂಡು ಬರಬೇಕೆಂದಿದ್ದರು. 6 ಆದರೆ ಅವರು ಪೌಲ ಸೀಲರನ್ನು ಅಲ್ಲಿ ಕಾಣಲಿಲ್ಲ. ಆದ್ದರಿಂದ ಅವರು ಯಾಸೋನನನ್ನೂ ಕೆಲವು ವಿಶ್ವಾಸಿಗಳನ್ನೂ ನಗರಾಧಿಕಾರಿಗಳ ಮುಂದೆ ಎಳೆದುಕೊಂಡು ಬಂದು, “ಈ ಜನರು (ಪೌಲ ಸೀಲರು) ಪ್ರಪಂಚದ ಎಲ್ಲಾ ಕಡೆಗಳಲ್ಲೂ ಗಲಭೆಯನ್ನು ಉಂಟುಮಾಡಿ ಈಗ ಇಲ್ಲಿಗೂ ಬಂದಿದ್ದಾರೆ! 7 ಯಾಸೋನನು ಇವರನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಾನೆ. ಇವರೆಲ್ಲರೂ ಸೀಸರನ ಕಾನೂನುಗಳನ್ನು ಉಲ್ಲಂಘಿಸುತ್ತಾರೆ ಮತ್ತು ‘ಯೇಸು’ ಎಂಬ ಮತ್ತೊಬ್ಬ ರಾಜನಿರುವನೆಂದು ಹೇಳುತ್ತಾರೆ” ಎಂದು ಕೂಗಿ ಹೇಳಿದರು.
8 ಈ ಸಂಗತಿಗಳನ್ನು ಕೇಳಿದ ನಗರಾಧಿಕಾರಿಗಳು ಮತ್ತು ಇತರರು ಬಹು ಗಲಿಬಿಲಿಗೊಂಡರು. 9 ಅವರು ಯಾಸೋನನಿಂದಲೂ ಇತರ ವಿಶ್ವಾಸಿಗಳಿಂದಲೂ ಜಾಮೀನು ತೆಗೆದುಕೊಂಡು ಅವರನ್ನು ಬಿಡುಗಡೆ ಮಾಡಿದರು.
ಪೌಲ ಸೀಲರ ಪ್ರಯಾಣ
10 ಅದೇ ರಾತ್ರಿಯಲ್ಲಿ ವಿಶ್ವಾಸಿಗಳು ಪೌಲ ಸೀಲರನ್ನು ಬೆರೋಯ ಎಂಬ ಮತ್ತೊಂದು ಪಟ್ಟಣಕ್ಕೆ ಕಳುಹಿಸಿದರು. ಬೆರೋಯದಲ್ಲಿ ಪೌಲ ಸೀಲರು ಯೆಹೂದ್ಯರ ಸಭಾಮಂದಿರಕ್ಕೆ ಹೋದರು. 11 ಈ ಯೆಹೂದ್ಯರು ಥೆಸಲೋನಿಕದ ಯೆಹೂದ್ಯರಿಗಿಂತಲೂ ಉತ್ತಮರಾಗಿದ್ದರು. ಪೌಲ ಸೀಲರು ಹೇಳಿದ ಸಂಗತಿಗಳನ್ನು ಇವರು ಬಹಳ ಸಂತೋಷದಿಂದ ಕೇಳಿದರು. ಮತ್ತು ಈ ಸಂಗತಿಗಳು ನಿಜವೇ ಎಂಬುದನ್ನು ತಿಳಿದುಕೊಳ್ಳಲು ಪವಿತ್ರ ಗ್ರಂಥವನ್ನು ಪ್ರತಿದಿನವೂ ಅಧ್ಯಯನ ಮಾಡಿದರು. 12 ಈ ಯೆಹೂದ್ಯರಲ್ಲಿ ಅನೇಕರು ನಂಬಿದರು. ಅತಿ ಪ್ರಮುಖರಾದ ಗ್ರೀಕ್ ಸ್ತ್ರೀಯರು ಮತ್ತು ಪುರುಷರು ನಂಬಿಕೊಂಡರು.
13 ಆದರೆ ಪೌಲನು ಬೆರೋಯದಲ್ಲಿ ದೇವರ ವಾಕ್ಯವನ್ನು ಹೇಳುತ್ತಿದ್ದಾನೆ ಎಂಬ ವಾರ್ತೆಯನ್ನು ಕೇಳಿದ ಥೆಸಲೋನಿಕದ ಯೆಹೂದ್ಯರು ಬೆರೋಯಕ್ಕೂ ಬಂದು ಅಲ್ಲಿಯ ಜನರನ್ನು ಗಲಿಬಿಲಿಗೊಳಿಸಿ ಗಲಭೆ ಮಾಡಿದರು. 14 ಆದ್ದರಿಂದ ವಿಶ್ವಾಸಿಗಳು ಪೌಲನನ್ನು ಸಮುದ್ರತೀರಕ್ಕೆ ಆ ಕೂಡಲೇ ಕಳುಹಿಸಿದರು. ಆದರೆ ಸೀಲ ತಿಮೊಥೆಯರು ಬೆರೋಯದಲ್ಲಿ ಉಳಿದುಕೊಂಡರು. 15 ಪೌಲನೊಂದಿಗೆ ಹೋದ ವಿಶ್ವಾಸಿಗಳು ಅವನನ್ನು ಅಥೆನ್ಸ್ ಪಟ್ಟಣಕ್ಕೆ ಕರೆದುಕೊಂಡು ಹೋದರು. ಈ ಸಹೋದರರು ಪೌಲನಿಂದ ಸೀಲ ತಿಮೊಥೆಯರಿಗೆ ಒಂದು ಸಂದೇಶವನ್ನು ತೆಗೆದುಕೊಂಡು ಹಿಂತಿರುಗಿ ಬಂದರು. “ಸಾಧ್ಯವಾದಷ್ಟು ಬೇಗನೆ ನನ್ನ ಬಳಿಗೆ ಬನ್ನಿರಿ” ಎಂಬುದೇ ಆ ಸಂದೇಶ.
Kannada Holy Bible: Easy-to-Read Version. All rights reserved. © 1997 Bible League International