Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 16:1-21

ತಿಮೊಥೆಯನು ಪೌಲ ಸೀಲರೊಂದಿಗೆ ಹೋಗುವನು

16 ಪೌಲನು ದರ್ಬೆ ಮತ್ತು ಲುಸ್ತ್ರ ಪಟ್ಟಣಗಳಿಗೆ ಹೋದನು. ತಿಮೊಥೆ ಎಂಬ ಕ್ರಿಸ್ತನ ಶಿಷ್ಯನೊಬ್ಬನು ಅಲ್ಲಿದ್ದನು. ತಿಮೊಥೆಯನ ತಾಯಿ ಯೆಹೂದ್ಯ ವಿಶ್ವಾಸಿಯಾಗಿದ್ದಳು. ಅವನ ತಂದೆಯು ಗ್ರೀಕನಾಗಿದ್ದನು. ಲುಸ್ತ್ರ ಮತ್ತು ಇಕೋನಿಯಾ ಪಟ್ಟಣಗಳ ವಿಶ್ವಾಸಿಗಳು ತಿಮೊಥೆಯನನ್ನು ಗೌರವಿಸುತ್ತಿದ್ದರು; ಮತ್ತು ಅವನ ಬಗ್ಗೆ ಒಳ್ಳೆಯದನ್ನೇ ಹೇಳುತ್ತಿದ್ದರು. ಪೌಲನು ತಿಮೊಥೆಯನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಅಪೇಕ್ಷಿಸಿದನು. ಆದರೆ ಆ ಪ್ರದೇಶದಲ್ಲಿ ವಾಸವಾಗಿದ್ದ ಎಲ್ಲಾ ಜನರಿಗೂ ತಿಮೊಥೆಯನ ತಂದೆ ಗ್ರೀಕನೆಂಬುದು ಗೊತ್ತಿತ್ತು. ಆದ್ದರಿಂದ ಪೌಲನು ಯೆಹೂದ್ಯರನ್ನು ಮೆಚ್ಚಿಸುವುದಕ್ಕಾಗಿ ತಿಮೊಥೆಯನಿಗೆ ಸುನ್ನತಿ ಮಾಡಿಸಿದನು.

ಬಳಿಕ ಪೌಲನು ಮತ್ತು ಅವನ ಸಂಗಡಿಗರು ಬೇರೆ ಪಟ್ಟಣಗಳ ಮೂಲಕ ಪ್ರಯಾಣ ಮಾಡಿದರು. ಜೆರುಸಲೇಮಿನಲ್ಲಿರುವ ಅಪೊಸ್ತಲರ ಮತ್ತು ಹಿರಿಯರ ನಿಯಮಗಳನ್ನೂ ತೀಮಾರ್ನಗಳನ್ನೂ ಅವರು ವಿಶ್ವಾಸಿಗಳಿಗೆ ಕೊಟ್ಟು ಅವುಗಳಿಗೆ ವಿಧೇಯರಾಗಬೇಕೆಂದು ತಿಳಿಸಿದರು. ಇದರಿಂದಾಗಿ ಸಭೆಗಳು ನಂಬಿಕೆಯಲ್ಲಿ ಬಲವಾಗತೊಡಗಿದವು ಮತ್ತು ಸಂಖ್ಯೆಯಲ್ಲಿ ದಿನದಿನಕ್ಕೂ ಹೆಚ್ಚಾಗತೊಡಗಿದವು.

ಏಷ್ಯಾದಿಂದಾಚೆಗೆ ಬರಲು ಪೌಲನಿಗೆ ಕರೆ

ಪೌಲನು ಮತ್ತು ಅವನ ಸಂಗಡಿಗರು ಫ್ರಿಜಿಯ ಮತ್ತು ಗಲಾತ್ಯ ಪ್ರಾಂತ್ಯಗಳ ಮೂಲಕ ಹಾದುಹೋದರು. ಏಷ್ಯಾ[a] ಸೀಮೆಯಲ್ಲಿ ಸುವಾರ್ತೆಯನ್ನು ತಿಳಿಸದಂತೆ ಪವಿತ್ರಾತ್ಮನು ಅವರನ್ನು ತಡೆದನು. ಪೌಲ ತಿಮೊಥೆಯರು ಮುಸಿಯ ನಾಡಿನ ಸಮೀಪಕ್ಕೆ ಹೋದರು. ಅವರು ಬಿಥೂನಿಯ ನಾಡಿನೊಳಗೆ ಹೋಗಬೇಕೆಂದಿದ್ದರು. ಆದರೆ ಯೇಸುವಿನ ಆತ್ಮನು ಅಲ್ಲಿಗೆ ಹೋಗದಂತೆ ಅವರನ್ನು ತಡೆದನು. ಆದ್ದರಿಂದ ಅವರು ಮುಸಿಯ ನಾಡನ್ನು ಹಾದು ನೇರವಾಗಿ ತ್ರೋವ ಪಟ್ಟಣಕ್ಕೆ ಬಂದರು.

ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು. ಈ ದರ್ಶನದಲ್ಲಿ ಮಕೆದೋನಿಯದ ನಾಡಿನಿಂದ ಬಂದ ಒಬ್ಬ ಮನುಷ್ಯನು ಅಲ್ಲಿ ನಿಂತುಕೊಂಡು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡು” ಎಂದು ಬೇಡಿಕೊಂಡನು. 10 ಪೌಲನು ಆ ದರ್ಶನವನ್ನು ಕಂಡಕೂಡಲೇ, ಅಲ್ಲಿಯ ಜನರಿಗೆ ಸುವಾರ್ತೆಯನ್ನು ತಿಳಿಸುವುದಕ್ಕಾಗಿ ದೇವರು ನಮ್ಮನ್ನು ಕರೆದಿದ್ದಾನೆಂದು ಅರ್ಥಮಾಡಿಕೊಂಡು ಮಕೆದೋನಿಯಕ್ಕೆ ಹೋಗಲು ನಾವು ಸಿದ್ಧರಾದೆವು.

ಲಿಡಿಯಳ ಪರಿವರ್ತನೆ

11 ನಾವು ತ್ರೋವದಿಂದ ಹಡಗಿನಲ್ಲಿ ಹೊರಟು ಸಮೊಥ್ರ ದ್ವೀಪಕ್ಕೆ ಬಂದು ಮರುದಿನ ನೆಯಪೊಲಿಸ್ ಪಟ್ಟಣವನ್ನು ತಲುಪಿ, 12 ಅಲ್ಲಿಂದ ಫಿಲಿಪ್ಪಿಗೆ ಹೋದೆವು. ಅದು ಮಕೆದೋನಿಯದ ಜಿಲ್ಲೆಯಲ್ಲಿ ಮತ್ತು ರೋಮನ್ನರ ವಸಾಹತುವಿನಲ್ಲಿ[b] ಮುಖ್ಯವಾದ ಪಟ್ಟಣವಾಗಿತ್ತು. ನಾವು ಅಲ್ಲಿ ಕೆಲವು ದಿನಗಳವರೆಗೆ ಇಳಿದುಕೊಂಡೆವು.

13 ನದಿಯ ಸಮೀಪದಲ್ಲಿ ವಿಶೇಷವಾದ ಪ್ರಾರ್ಥನಾ ಸ್ಥಳವನ್ನು ನಾವು ಕಾಣಬಹುದೆಂದು ಆಲೋಚಿಸಿಕೊಂಡು ಸಬ್ಬತ್ ದಿನದಂದು ನದಿಯ ಬಳಿಗೆ ಹೋಗಲು ನಗರದ್ವಾರದಿಂದ ಹೊರಗೆ ಹೋದೆವು. ಕೆಲವು ಸ್ತ್ರೀಯರು ಅಲ್ಲಿ ಸೇರಿ ಬಂದಿದ್ದರು. ಆದ್ದರಿಂದ ನಾವು ಕುಳಿತುಕೊಂಡು ಅವರೊಂದಿಗೆ ಮಾತಾಡಿದೆವು. 14 ಅಲ್ಲಿ ಲಿಡಿಯಾ ಎಂಬ ಒಬ್ಬ ಹೆಂಗಸಿದ್ದಳು. ಆಕೆಯು ಥುವತೈರ ಪಟ್ಟಣದವಳು. ಕೆನ್ನೇರಳೆ ಬಣ್ಣದ ಬಟ್ಟೆಗಳನ್ನು ಮಾರುವುದು ಆಕೆಯ ಕಸುಬಾಗಿತ್ತು. ಆಕೆಯು ನಿಜ ದೇವರನ್ನು ಆರಾಧಿಸುತ್ತಿದ್ದಳು. ಪೌಲನ ಮಾತನ್ನು ಲಿಡಿಯಾ ಆಲಿಸುತ್ತಿದ್ದಳು. ಪ್ರಭುವು ಆಕೆಯ ಹೃದಯವನ್ನು ತೆರೆದನು. ಪೌಲನು ಹೇಳಿದ ಸಂಗತಿಗಳನ್ನು ಆಕೆ ನಂಬಿಕೊಂಡಳು. 15 ಆಕೆ ಮತ್ತು ಆಕೆಯ ಮನೆಯಲ್ಲಿ ವಾಸವಾಗಿದ್ದ ಎಲ್ಲಾ ಜನರು ದೀಕ್ಷಾಸ್ನಾನ ಮಾಡಿಸಿಕೊಂಡರು. ಆಕೆಯು, “ನಾನು ಪ್ರಭು ಯೇಸುವಿನಲ್ಲಿ ನಿಜವಾದ ವಿಶ್ವಾಸಿಯೆಂದು ನೀವು ಯೋಚಿಸುವುದಾಗಿದ್ದರೆ, ನನ್ನ ಮನೆಗೆ ಬಂದು ತಂಗಿರಿ” ಎಂದು ಕೇಳಿಕೊಂಡು ನಮ್ಮನ್ನು ಒತ್ತಾಯ ಮಾಡಿದಳು.

ಸೆರೆಮನೆಯಲ್ಲಿ ಪೌಲ ಸೀಲರು

16 ಒಂದು ಸಲ, ನಾವು ಪ್ರಾರ್ಥನಾಸ್ಥಳಕ್ಕೆ ಹೋಗುತ್ತಿದ್ದಾಗ ಒಂದು ಸಂಗತಿ ಸಂಭವಿಸಿತು. ದಾಸಿಯೊಬ್ಬಳು ನಮ್ಮನ್ನು ಎದುರುಗೊಂಡಳು. ಆಕೆಯಲ್ಲಿ ವಿಶೇಷವಾದ ಆತ್ಮವಿತ್ತು. ಆ ಆತ್ಮದ ಶಕ್ತಿಯಿಂದ ಅವಳು ಮುಂದೆ ಸಂಭವಿಸುವ ಸಂಗತಿಗಳ ಬಗ್ಗೆ ಹೇಳುತ್ತಿದ್ದಳು. ಇದರ ಮೂಲಕವಾಗಿ ಆಕೆ ತನ್ನ ಯಜಮಾನರಿಗೆ ಬಹಳ ಹಣವನ್ನು ಗಳಿಸಿ ಕೊಡುತ್ತಿದ್ದಳು. 17 ಅವಳು ಪೌಲನನ್ನು ಮತ್ತು ನಮ್ಮನ್ನು ಹಿಂಬಾಲಿಸುತ್ತಾ, “ಈ ಜನರು ಮಹೋನ್ನತನಾದ ದೇವರ ಸೇವಕರು! ನೀವು ಹೇಗೆ ರಕ್ಷಣೆ ಹೊಂದಬಹುದೆಂಬುದನ್ನು ಅವರು ಹೇಳುತ್ತಿದ್ದಾರೆ!” ಎಂದು ಕೂಗುತ್ತಿದ್ದಳು. 18 ಹೀಗೆ ಆಕೆ ಅನೇಕ ದಿನಗಳವರೆಗೆ ಮಾಡಿದಳು. ಇದರಿಂದ ಬೇಸರಗೊಂಡ ಪೌಲನು ಹಿಂತಿರುಗಿ, ಆ ಆತ್ಮಕ್ಕೆ, “ಅವಳನ್ನು ಬಿಟ್ಟು ಹೋಗಬೇಕೆಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಆಜ್ಞಾಪಿಸುತ್ತೇನೆ!” ಎಂದು ಹೇಳಿದನು. ಆ ಕೂಡಲೇ ಆ ಆತ್ಮವು ಹೊರಬಂದಿತು.

19 ಇದನ್ನು ಕಂಡ ಅವಳ ಯಜಮಾನರು ಈಗ ಆಕೆಯಿಂದ ಹಣಗಳಿಸಲು ಸಾಧ್ಯವಿಲ್ಲವೆಂದು ಅರಿತುಕೊಂಡರು. ಆದ್ದರಿಂದ ಅವರು ಪೌಲ ಸೀಲರನ್ನು ಹಿಡಿದು ಪಟ್ಟಣದ ನ್ಯಾಯಸ್ಥಾನಕ್ಕೆ ಎಳೆದುಕೊಂಡು ಹೋದರು. ನಗರಾಧಿಕಾರಿಗಳು ಅಲ್ಲಿದ್ದರು. 20 ಆ ಜನರು ಪೌಲ ಸೀಲರನ್ನು ನ್ಯಾಯಾಧೀಶರ ಬಳಿಗೆ ತಂದು, “ಈ ಜನರು ಯೆಹೂದ್ಯರು. ಇವರು ನಮ್ಮ ಪಟ್ಟಣದಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ. 21 ನಿಷಿದ್ಧ ಕಾರ್ಯಗಳನ್ನು ಮಾಡುವಂತೆ ಇವರು ಜನರಿಗೆ ಹೇಳುತ್ತಿದ್ದಾರೆ. ರೋಮ್ ಪ್ರಜೆಗಳಾಗಿರುವ ನಾವು ಅಂಥ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International