New Testament in a Year
ಪೇತ್ರ ಮತ್ತು ಕೊರ್ನೇಲಿಯ
10 ಸೆಜರೇಯ ಪಟ್ಟಣದಲ್ಲಿ ಕೊರ್ನೇಲಿಯ ಎಂಬವನಿದ್ದನು. ರೋಮಿನ ಸೈನ್ಯಕ್ಕೆ ಸೇರಿದ “ಇಟಲಿಯ ದಳ”ದಲ್ಲಿ ಅವನು ಅಧಿಕಾರಿಯಾಗಿದ್ದನು. 2 ಕೊರ್ನೇಲಿಯನು ದೈವಭಕ್ತನಾಗಿದ್ದನು. ಅವನು ಮತ್ತು ಅವನ ಕುಟುಂಬದಲ್ಲಿ ವಾಸವಾಗಿದ್ದ ಇತರ ಎಲ್ಲಾ ಜನರು ನಿಜದೇವರನ್ನು ಆರಾಧಿಸುತ್ತಿದ್ದರು. ಅವನು ಬಡವರಿಗೆ ಧಾರಾಳವಾಗಿ ಹಣವನ್ನು ಕೊಡುತ್ತಿದ್ದನು. ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಿದ್ದನು. 3 ಒಂದು ಮಧ್ಯಾಹ್ನ ಸುಮಾರು ಮೂರು ಗಂಟೆಯಲ್ಲಿ ಕೊರ್ನೇಲಿಯನಿಗೆ ಒಂದು ದರ್ಶನವಾಯಿತು. ಅವನು ಅದನ್ನು ಸ್ಪಷ್ಟವಾಗಿ ಕಂಡನು. ಆ ದರ್ಶನದಲ್ಲಿ ದೇವದೂತನೊಬ್ಬನು ಅವನ ಬಳಿಗೆ ಬಂದು, “ಕೊರ್ನೇಲಿಯನೇ” ಎಂದು ಕರೆದನು.
4 ಕೊರ್ನೇಲಿಯನು ದೇವದೂತನನ್ನು ಕಂಡು ಭಯದಿಂದ “ಸ್ವಾಮೀ, ನಿಮಗೇನು ಬೇಕು?” ಎಂದು ಕೇಳಿದನು.
ಆ ದೇವದೂತನು ಅವನಿಗೆ, “ದೇವರು ನಿನ್ನ ಪ್ರಾರ್ಥನೆಗಳನ್ನು ಕೇಳಿದ್ದಾನೆ. ನೀನು ಬಡವರಿಗೆ ಕೊಟ್ಟವುಗಳನ್ನು ಆತನು ನೋಡಿದ್ದಾನೆ. ದೇವರು ನಿನ್ನನ್ನು ಮೆಚ್ಚಿಕೊಂಡಿದ್ದಾನೆ. 5 ಈಗ ಸೀಮೋನ ಎಂಬ ವ್ಯಕ್ತಿಯನ್ನು ಕರೆದುಕೊಂಡು ಬರುವುದಕ್ಕಾಗಿ ನೀನು ಜನರನ್ನು ಜೊಪ್ಪ ಪಟ್ಟಣಕ್ಕೆ ಕಳುಹಿಸು. ಸೀಮೋನನನ್ನು ‘ಪೇತ್ರ’ ಎಂತಲೂ ಕರೆಯುತ್ತಾರೆ. 6 ಸೀಮೋನನು ಚರ್ಮಕಾರನ ಮನೆಯಲ್ಲಿ ಇಳಿದುಕೊಂಡಿದ್ದಾನೆ. ಅವನ ಮನೆಯು ಸಮುದ್ರ ತೀರದಲ್ಲಿದೆ” ಎಂದು ಹೇಳಿದನು. 7 ಕೊರ್ನೇಲಿಯನೊಂದಿಗೆ ಮಾತಾಡಿದ ದೇವದೂತನು ಹೊರಟುಹೋದನು. ಬಳಿಕ ಕೊರ್ನೇಲಿಯನು ತನ್ನ ಸೇವಕರಲ್ಲಿ ಇಬ್ಬರನ್ನೂ ಒಬ್ಬ ಸೈನಿಕನನ್ನೂ ಕರೆದನು. ಈ ಸೈನಿಕನು ದೈವಭಕ್ತನಾಗಿದ್ದನು. ಕೊರ್ನೇಲಿಯನ ಆಪ್ತಸಹಾಯಕರಲ್ಲಿ ಇವನೂ ಒಬ್ಬನಾಗಿದ್ದನು. 8 ಕೊರ್ನೇಲಿಯನು ಈ ಮೂವರಿಗೆ ಪ್ರತಿಯೊಂದನ್ನೂ ವಿವರಿಸಿದನು. ಬಳಿಕ ಅವರನ್ನು ಜೊಪ್ಪಕ್ಕೆ ಕಳುಹಿಸಿದನು.
9 ಮರುದಿನ ಈ ಜನರು ಜೊಪ್ಪಕ್ಕೆ ಸಮೀಪಿಸಿದಾಗ ಮಧ್ಯಾಹ್ನದ ಸಮಯವಾಗಿತ್ತು. ಆ ಸಮಯದಲ್ಲಿ ಪೇತ್ರನು ಪ್ರಾರ್ಥಿಸುವುದಕ್ಕಾಗಿ ಮಾಳಿಗೆಯ ಮೇಲೆ ಹೋದನು. 10 ಪೇತ್ರನಿಗೆ ಹಸಿವೆಯಾಗಿ ಊಟಮಾಡಬೇಕೆನಿಸಿತು. ಅಲ್ಲಿ ಅವನಿಗಾಗಿ ಅಡಿಗೆ ಮಾಡುತ್ತಿದ್ದರು. ಇತ್ತ, ಪೇತ್ರನಿಗೊಂದು ದರ್ಶನವಾಯಿತು. 11 ತೆರೆದ ಆಕಾಶದಿಂದ ಯಾವುದೋ ಒಂದು ವಸ್ತು ಇಳಿದು ಬರುತ್ತಿರುವುದನ್ನು ಅವನು ಕಂಡನು. ಅದು ದೊಡ್ಡ ತಟ್ಟೆಯಂತಿತ್ತು. ಅದರ ನಾಲ್ಕು ಮೂಲೆಗಳಲ್ಲಿ ಹಗ್ಗಗಳನ್ನು ಕಟ್ಟಿ ಭೂಮಿಯ ಮೇಲೆ ಇಳಿಯಬಿಡಲಾಗಿತ್ತು. 12 ಅದರಲ್ಲಿ ಎಲ್ಲಾ ಬಗೆಯ ಪ್ರಾಣಿಗಳಿದ್ದವು. ಅಂದರೆ ನಡೆದಾಡುವ ಪ್ರಾಣಿಗಳು, ಹರಿದಾಡುವ ಕ್ರಿಮಿಕೀಟಗಳು ಮತ್ತು ಹಾರಾಡುವ ಪಕ್ಷಿಗಳು ಇದ್ದವು. 13 ಆಗ ವಾಣಿಯೊಂದು, “ಪೇತ್ರನೇ, ಎದ್ದೇಳು! ಕೊಯ್ದು ತಿನ್ನು” ಎಂದು ಹೇಳಿತು.
14 ಆದರೆ ಪೇತ್ರನು, “ಪ್ರಭುವೇ, ನಾನು ಹಾಗೆ ಮಾಡಲಾರೆ! ಅಪವಿತ್ರವಾದದ್ದನ್ನು ಮತ್ತು ಅಶುದ್ಧವಾದದ್ದನ್ನು ನಾನೆಂದೂ ತಿಂದವನಲ್ಲ” ಎಂದು ಹೇಳಿದನು.
15 ಆದರೆ ಆ ವಾಣಿಯು ಅವನಿಗೆ, “ದೇವರು ಇವುಗಳನ್ನು ಶುದ್ಧೀಕರಿಸಿದ್ದಾನೆ. ಇವುಗಳನ್ನು ‘ಅಪವಿತ್ರ’ವೆಂದು ಹೇಳಬೇಡ” ಎಂದು ಮತ್ತೆ ಹೇಳಿತು. 16 ಹೀಗೆ ಮೂರು ಸಾರಿ ಆಯಿತು. ಬಳಿಕ ಅವುಗಳನ್ನೆಲ್ಲ ಆಕಾಶಕ್ಕೆ ಹಿಂತೆಗೆದುಕೊಳ್ಳಲಾಯಿತು. 17 ಪೇತ್ರನು ತಾನು ಕಂಡ ಈ ದರ್ಶನದ ಅರ್ಥವೇನಿರಬಹುದೆಂದು ಆಶ್ಚರ್ಯಗೊಂಡನು.
ಅಷ್ಟರಲ್ಲಿಯೇ, ಕೊರ್ನೇಲಿಯನು ಕಳುಹಿಸಿದ್ದ ಜನರು ಸೀಮೋನನ ಮನೆಯನ್ನು ಕಂಡುಕೊಂಡಿದ್ದರು. ಅವರು ಬಾಗಿಲ ಬಳಿಯಲ್ಲಿ ನಿಂತುಕೊಂಡು, 18 “ಸೀಮೋನ್ ಪೇತ್ರನು ಇಲ್ಲಿ ವಾಸವಾಗಿರುವನೇ?” ಎಂದು ಕೇಳಿದರು.
19 ಈ ದರ್ಶನದ ಬಗ್ಗೆ ಪೇತ್ರನು ಇನ್ನೂ ಆಲೋಚಿಸುತ್ತಿದ್ದನು. ಆದರೆ ಪವಿತ್ರಾತ್ಮನು ಅವನಿಗೆ, “ಇಗೋ, ನಿನ್ನನ್ನು ಮೂರು ಜನರು ಹುಡುಕುತ್ತಾ ಬಂದಿದ್ದಾರೆ. 20 ನೀನೆದ್ದು ಕೆಳಗಿಳಿದು ಅವರೊಂದಿಗೆ ಹೋಗು. ಯಾವ ಪ್ರಶ್ನೆಗಳನ್ನೂ ಕೇಳಬೇಡ. ನಾನೇ ಅವರನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ” ಎಂದು ಹೇಳಿದನು. 21 ಆದ್ದರಿಂದ ಪೇತ್ರನು ಕೆಳಗಿಳಿದು ಆ ಜನರ ಬಳಿಗೆ ಹೋಗಿ, “ನೀವು ಹುಡುಕುತ್ತಿರುವ ವ್ಯಕ್ತಿ ನಾನೇ, ನೀವು ಇಲ್ಲಿಗೇಕೆ ಬಂದಿರಿ?” ಎಂದು ಕೇಳಿದನು.
22 ಆ ಜನರು, “ಕೊರ್ನೇಲಿಯ ಎಂಬ ಒಬ್ಬ ಸೇನಾಧಿಕಾರಿ ಇದ್ದಾನೆ. ಅವನು ಧಾರ್ಮಿಕ ವ್ಯಕ್ತಿ. ಅವನು ದೇವರನ್ನು ಆರಾಧಿಸುತ್ತಾನೆ. ಯೆಹೂದ್ಯ ಜನರೆಲ್ಲರೂ ಅವನನ್ನು ಗೌರವಿಸುತ್ತಾರೆ. ನಿನ್ನನ್ನು ತನ್ನ ಮನೆಗೆ ಆಹ್ವಾನಿಸಿ ನೀನು ಹೇಳುವ ಸಂಗತಿಗಳನ್ನು ಕೇಳಬೇಕೆಂದು ದೇವದೂತನೊಬ್ಬನು ಕೊರ್ನೇಲಿಯನಿಗೆ ತಿಳಿಸಿದ್ದಾನೆ” ಎಂದು ಹೇಳಿದರು. 23 ಪೇತ್ರನು ಅವರನ್ನು ಒಳಗೆ ಕರೆದು, ಆ ರಾತ್ರಿ ಅಲ್ಲೇ ಇರಬೇಕೆಂದು ಕೇಳಿಕೊಂಡನು.
ಮರುದಿನ ಪೇತ್ರನು ಸಿದ್ಧನಾಗಿ, ಆ ಮೂವರೊಂದಿಗೆ ಹೊರಟನು. ಜೊಪ್ಪದ ವಿಶ್ವಾಸಿಗಳಲ್ಲಿ ಕೆಲವರು ಅವನೊಂದಿಗೆ ಹೋದರು.
Kannada Holy Bible: Easy-to-Read Version. All rights reserved. © 1997 Bible League International