Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 9:22-43

22 ಆದರೆ ಸೌಲನು ಹೆಚ್ಚುಹೆಚ್ಚು ಪ್ರಬಲವಾಗಿ ಯೇಸುವೇ ಕ್ರಿಸ್ತನೆಂದು ನಿರೂಪಿಸಿದನು. ಅವನ ಆಧಾರಗಳು ಬಹು ಬಲವಾಗಿದ್ದ ಕಾರಣ ದಮಸ್ಕದ ಯೆಹೂದ್ಯರು ಅವನೊಂದಿಗೆ ವಾದ ಮಾಡಲಿಲ್ಲ.

ಸೌಲನು ಯೆಹೂದ್ಯರಿಂದ ತಪ್ಪಿಸಿಕೊಳ್ಳುವನು

23 ಅನೇಕ ದಿನಗಳಾದ ಮೇಲೆ, ಯೆಹೂದ್ಯರು ಸೌಲನನ್ನು ಕೊಲ್ಲಲು ಸಂಚುಮಾಡಿದರು. 24 ಯೆಹೂದ್ಯರು ಸೌಲನಿಗಾಗಿ ಎದುರುನೋಡುತ್ತಾ ನಗರದ ದ್ವಾರಗಳನ್ನು ಹಗಲಿರುಳು ಕಾಯುತ್ತಿದ್ದರು. ಆದರೆ ಅವರ ಯೋಜನೆ ಸೌಲನಿಗೆ ತಿಳಿಯಿತು. 25 ಒಂದು ರಾತ್ರಿ, ಸೌಲನ ಕೆಲವು ಶಿಷ್ಯರು ಅವನನ್ನು ಪಟ್ಟಣದಿಂದ ಹೊರಗೆ ಕಳುಹಿಸುವುದಕ್ಕಾಗಿ ಅವನನ್ನು ಒಂದು ಬುಟ್ಟಿಯಲ್ಲಿ ಕುಳ್ಳಿರಿಸಿ, ನಗರದ ಕೋಟೆಯ ಸಂದಿನ ಮೂಲಕ ಅವನನ್ನು ಕೆಳಗಿಳಿಸಿದರು.

ಜೆರುಸಲೇಮಿನಲ್ಲಿ ಸೌಲನು

26 ಬಳಿಕ ಸೌಲನು ಜೆರುಸಲೇಮಿಗೆ ಹೋದನು. ಅವನು ವಿಶ್ವಾಸಿಗಳ ಸಮುದಾಯವನ್ನು ಸೇರಿಕೊಳ್ಳಲು ಪ್ರಯತ್ನಿಸಿದನು. ಆದರೆ ಅವರೆಲ್ಲರೂ ಅವನಿಗೆ ಭಯಪಟ್ಟರು. ಸೌಲನು ನಿಜವಾಗಿ ಯೇಸುವಿನ ಶಿಷ್ಯನೆಂದು ಅವರು ನಂಬಲಿಲ್ಲ. 27 ಆದರೆ ಬಾರ್ನಬನು ಸೌಲನನ್ನು ಸ್ವೀಕರಿಸಿಕೊಂಡು ಅಪೊಸ್ತಲರ ಬಳಿಗೆ ಕರೆದುಕೊಂಡು ಬಂದನು. ಸೌಲನು ದಮಸ್ಕದ ದಾರಿಯಲ್ಲಿ ಪ್ರಭುವನ್ನು ನೋಡಿರುವುದನ್ನೂ ಪ್ರಭುವು ಸೌಲನೊಂದಿಗೆ ಮಾತಾಡಿದ್ದನ್ನೂ ಬಾರ್ನಬನು ಅವರಿಗೆ ವಿವರಿಸಿದನು. ಅಲ್ಲದೆ ಸೌಲನು ದಮಸ್ಕದಲ್ಲಿ ಜನರಿಗೆ ಪ್ರಭುವಿನ ವಿಷಯದಲ್ಲಿ ನಿರ್ಭಯವಾಗಿ ಬೋಧಿಸಿದ್ದನ್ನೂ ಅವರಿಗೆ ತಿಳಿಸಿದನು.

28 ಅಂದಿನಿಂದ ಸೌಲನು ವಿಶ್ವಾಸಿಗಳೊಂದಿಗೆ ಇದ್ದನು. ಅವನು ಪ್ರಭುವಿನ ವಿಷಯವನ್ನು ಜೆರುಸಲೇಮಿನಲ್ಲಿ ನಿರ್ಭಯವಾಗಿ ಬೋಧಿಸಿದನು. 29 ಗ್ರೀಕ್ ಮಾತಾಡುತ್ತಿದ್ದ ಯೆಹೂದ್ಯರೊಂದಿಗೆ ಸೌಲನು ಪದೇಪದೇ ವಾದಮಾಡಿದನು. ಆದರೆ ಅವರು ಅವನನ್ನು ಕೊಲ್ಲಲು ಪ್ರಯತ್ನಿಸಿದರು. 30 ಇದರ ಬಗ್ಗೆ ಸಹೋದರರಿಗೆ ತಿಳಿದಾಗ ಅವರು ಸೌಲನನ್ನು ಸೆಜರೇಯ ಪಟ್ಟಣಕ್ಕೆ ಕೊಂಡೊಯ್ದು ಅಲ್ಲಿಂದ ತಾರ್ಸಸ್ ಪಟ್ಟಣಕ್ಕೆ ಕಳುಹಿಸಿದರು.

31 ಇಂತಿರಲು, ಜುದೇಯ, ಗಲಿಲಾಯ ಮತ್ತು ಸಮಾರ್ಯ ಪ್ರದೇಶಗಳಲ್ಲಿ ಇದ್ದ ಸಭೆಗಳಲ್ಲಿ ಶಾಂತಿ ನೆಲೆಸಿತು. ಪವಿತ್ರಾತ್ಮನ ಸಹಾಯದಿಂದ ಸಭೆಗಳು ಬಲವಾಗತೊಡಗಿದವು. ವಿಶ್ವಾಸಿಗಳು ತಾವು ಪ್ರಭುವನ್ನು ಗೌರವಿಸುವುದಾಗಿ ತಮ್ಮ ಜೀವಿತಗಳ ಮೂಲಕ ತೋರಿಸಿಕೊಟ್ಟರು. ಇದರಿಂದ ವಿಶ್ವಾಸಿಗಳ ಸಭೆಯು ಹೆಚ್ಚುಹೆಚ್ಚು ಬೆಳೆಯತೊಡಗಿತು.

ಲುದ್ದ ಮತ್ತು ಜೊಪ್ಪದಲ್ಲಿ ಪೇತ್ರನು

32 ಜೆರುಸಲೇಮಿನ ಸುತ್ತಮುತ್ತಲ್ಲಿದ್ದ ಊರುಗಳಲ್ಲೆಲ್ಲಾ ಪೇತ್ರನು ಪ್ರಯಾಣ ಮಾಡುತ್ತಿರುವಾಗ ಲುದ್ದ ಎಂಬ ಊರಲ್ಲಿ ವಾಸವಾಗಿರುವ ವಿಶ್ವಾಸಿಗಳನ್ನು ಭೇಟಿಯಾಗಲು ಅಲ್ಲಿಗೆ ಹೋದನು. 33 ಅವನು ಲುದ್ದದಲ್ಲಿ ಐನೇಯಾ ಎಂಬವನನ್ನು ಕಂಡನು. ಪಾರ್ಶ್ವವಾಯು ರೋಗಿಯಾಗಿದ್ದ ಅವನು ಎಂಟು ವರ್ಷಗಳಿಂದ ಹಾಸಿಗೆ ಮೇಲಿದ್ದನು. 34 ಪೇತ್ರನು ಅವನಿಗೆ, “ಐನೇಯಾ, ಯೇಸು ಕ್ರಿಸ್ತನು ನಿನ್ನನ್ನು ಗುಣಪಡಿಸುತ್ತಾನೆ. ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು!” ಎಂದು ಹೇಳಿದನು. ಆ ಕೂಡಲೇ ಐನೇಯನು ಎದ್ದುನಿಂತನು. 35 ಲುದ್ದದಲ್ಲಿ ಮತ್ತು ಸಾರೋನಿನ ಬಯಲಿನಲ್ಲಿ ವಾಸವಾಗಿದ್ದ ಜನರೆಲ್ಲರು ಅವನನ್ನು ಕಂಡು ಪ್ರಭು ಯೇಸುವಿನಲ್ಲಿ ನಂಬಿಕೆ ಇಟ್ಟರು.

36 ಜೊಪ್ಪ ಪಟ್ಟಣದಲ್ಲಿ ತಬಿಥಾ ಎಂಬ ಯೇಸುವಿನ ಶಿಷ್ಯಳಿದ್ದಳು. ಗ್ರೀಕ್ ಭಾಷೆಯಲ್ಲಿ ಆಕೆಯ ಹೆಸರು ದೊರ್ಕಾ ಅಂದರೆ “ಜಿಂಕೆ.” ಆಕೆಯು ಜನರಿಗೆ ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಳು. ಆಕೆಯು ಕೊರತೆಯಲ್ಲಿದ್ದ ಜನರಿಗೆ ಯಾವಾಗಲೂ ಹಣಕೊಡುತ್ತಿದ್ದಳು. 37 ಪೇತ್ರನು ಲುದ್ದದಲ್ಲಿದ್ದಾಗ ಆಕೆಯು ಕಾಯಿಲೆಯಿಂದ ಸತ್ತುಹೋದಳು. ಜನರು ಆಕೆಯ ದೇಹವನ್ನು ತೊಳೆದು ಮೇಲ್ಮಾಳಿಗೆಯ ಒಂದು ಕೋಣೆಯಲ್ಲಿಟ್ಟರು. 38 ಪೇತ್ರನು ಲುದ್ದದಲ್ಲಿದ್ದಾನೆಂಬ ಸುದ್ದಿಯು ಜೊಪ್ಪದಲ್ಲಿದ್ದ ವಿಶ್ವಾಸಿಗಳಿಗೆ ತಿಳಿಯಿತು. (ಲುದ್ದವು ಜೊಪ್ಪದ ಸಮೀಪದಲ್ಲಿದೆ.) ಆದ್ದರಿಂದ ಅವರು ಇಬ್ಬರನ್ನು ಪೇತ್ರನ ಬಳಿಗೆ ಕಳುಹಿಸಿದರು. ಅವರು, “ತ್ವರೆ ಮಾಡು, ದಯವಿಟ್ಟು ಬೇಗನೆ ಬಾ!” ಎಂದು ಅವನನ್ನು ಬೇಡಿಕೊಂಡರು.

39 ಪೇತ್ರನು ಸಿದ್ಧನಾಗಿ ಅವರೊಂದಿಗೆ ಹೋದನು. ಅವನು ಅಲ್ಲಿಗೆ ತಲುಪಿದಾಗ, ಅವರು ಅವನನ್ನು ಮೇಲ್ಮಾಳಿಗೆಯ ಕೋಣೆಗೆ ಕರೆದುಕೊಂಡು ಹೋದರು. ವಿಧವೆಯರೆಲ್ಲ ಅಳುತ್ತಾ ಪೇತ್ರನನ್ನು ಸುತ್ತುವರಿದರು. ದೊರ್ಕಳು ಜೀವಂತವಾಗಿದ್ದಾಗ ತಮಗಾಗಿ ತಯಾರಿಸಿ ಕೊಟ್ಟ ಮೇಲಂಗಿಗಳನ್ನು ಮತ್ತು ಬಟ್ಟೆಗಳನ್ನು ಅವರು ಪೇತ್ರನಿಗೆ ತೋರಿಸಿದರು. 40 ಪೇತ್ರನು ಜನರೆಲ್ಲರನ್ನು ಕೋಣೆಯಿಂದ ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥಿಸಿದನು. ಬಳಿಕ ಅವನು ತಬಿಥಳ ದೇಹದ ಕಡೆಗೆ ತಿರುಗಿ, “ತಬಿಥಾ, ಎದ್ದುನಿಲ್ಲು!” ಎಂದನು. ಆಕೆ ತನ್ನ ಕಣ್ಣುಗಳನ್ನು ತೆರೆದಳು. ಆಕೆಯು ಪೇತ್ರನನ್ನು ಕಂಡು ಎದ್ದು ಕುಳಿತುಕೊಂಡಳು. 41 ಅವನು ಕೈನೀಡಿ, ಎದ್ದುನಿಲ್ಲಲು ಆಕೆಗೆ ಸಹಾಯ ಮಾಡಿದನು. ಬಳಿಕ ಅವನು ವಿಶ್ವಾಸಿಗಳನ್ನು ಮತ್ತು ವಿಧವೆಯರನ್ನು ಕೋಣೆಯೊಳಗೆ ಕರೆದು ಅವರಿಗೆ ತಬಿಥಳನ್ನು ತೋರಿಸಿದನು. ಆಕೆ ಜೀವಂತವಾಗಿದ್ದಳು.

42 ಜೊಪ್ಪದ ಎಲ್ಲಾ ಕಡೆಗಳಲ್ಲಿಯೂ ಇದ್ದ ಜನರಿಗೆ ಈ ವಿಷಯ ತಿಳಿಯಿತು. ಈ ಜನರಲ್ಲಿ ಅನೇಕರು ಪ್ರಭುವನ್ನು ನಂಬಿದರು. 43 ಪೇತ್ರನು ಅನೇಕ ದಿನಗಳವರೆಗೆ ಜೊಪ್ಪದಲ್ಲಿದ್ದನು. ಚರ್ಮಕಾರನಾದ ಸಿಮೋನನ ಮನೆಯಲ್ಲಿ ಅವನು ಇಳಿದುಕೊಂಡಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International