Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 9:1-21

ಸೌಲನು ಮಾರ್ಪಾಟಾದನು

ಪ್ರಭುವಿನ ಶಿಷ್ಯರನ್ನು ಹೆದರಿಸಲು ಮತ್ತು ಕೊಲ್ಲಲು ಸೌಲನು ಜೆರುಸಲೇಮಿನಲ್ಲಿ ಇನ್ನೂ ಪ್ರಯತ್ನಿಸುತ್ತಿದ್ದನು. ಆದ್ದರಿಂದ ಅವನು ಪ್ರಧಾನಯಾಜಕನ ಬಳಿಗೆ ಹೋಗಿ, ದಮಸ್ಕದಲ್ಲಿ ಕ್ರಿಸ್ತನ ಮಾರ್ಗವನ್ನು ಅನುಸರಿಸುವವರನ್ನು ಕಂಡುಹಿಡಿದು, ಸ್ತ್ರೀಯರು, ಪುರುಷರು ಎನ್ನದೆ ಅವರನ್ನು ಬಂಧಿಸಿ ಜೆರುಸಲೇಮಿಗೆ ಎಳೆದುಕೊಂಡು ಬರಲು ತನಗೆ ಅಧಿಕಾರ ಕೊಟ್ಟಿರುವುದಾಗಿ ದಮಸ್ಕ ಪಟ್ಟಣದ ಸಭಾಮಂದಿರಗಳಿಗೆ ಪತ್ರಬರೆಯಬೇಕೆಂದು ಕೇಳಿಕೊಂಡನು.

ಅಂತೆಯೇ ಸೌಲನು ದಮಸ್ಕಕ್ಕೆ ಹೊರಟನು. ಅವನು ಪಟ್ಟಣದ ಸಮೀಪಕ್ಕೆ ಬಂದಾಗ, ಬಹು ಪ್ರಕಾಶಮಾನವಾದ ಬೆಳಕೊಂದು ಆಕಾಶದಿಂದ ಇದ್ದಕ್ಕಿದ್ದಂತೆ ಅವನ ಸುತ್ತಲೂ ಹೊಳೆಯಿತು. ಸೌಲನು ನೆಲಕ್ಕೆ ಬಿದ್ದನು. “ಸೌಲನೇ, ಸೌಲನೇ, ನೀನು ನನ್ನನ್ನೇಕೆ ಹಿಂಸಿಸುತ್ತಿರುವೆ?” ಎಂಬ ವಾಣಿಯೊಂದು ಅವನಿಗೆ ಕೇಳಿಸಿತು.

ಸೌಲನು, “ಪ್ರಭುವೇ, ನೀನು ಯಾರು?” ಎಂದನು.

ಆ ವಾಣಿಯು, “ನೀನು ಹಿಂಸಿಸುತ್ತಿರುವ ಯೇಸುವೇ ನಾನು! ಈಗ ಎದ್ದು ಪಟ್ಟಣದೊಳಗೆ ಹೋಗು. ನೀನು ಏನು ಮಾಡಬೇಕೆಂಬುದನ್ನು ಅಲ್ಲಿಯ ಒಬ್ಬನು ನಿನಗೆ ತಿಳಿಸುವನು” ಎಂದಿತು.

ಸೌಲನೊಂದಿಗೆ ಪ್ರಯಾಣ ಮಾಡುತ್ತಿದ್ದವರು ಅಲ್ಲೇ ನಿಂತಿದ್ದರು. ಅವರು ಏನೂ ಮಾತಾಡಲಿಲ್ಲ. ಆ ಜನರು ವಾಣಿಯನ್ನು ಕೇಳಿದರು. ಆದರೆ ಅವರು ಯಾರನ್ನೂ ನೋಡಲಿಲ್ಲ. ಸೌಲನು ನೆಲದ ಮೇಲಿಂದ ಎದ್ದು ಕಣ್ಣುಗಳನ್ನು ತೆರೆದನು. ಆದರೆ ಅವನಿಗೆ ಏನೂ ಕಾಣಲಿಲ್ಲ. ಆದ್ದರಿಂದ ಸೌಲನೊಂದಿಗಿದ್ದ ಜನರು ಅವನನ್ನು ಕೈಹಿಡಿದು ದಮಸ್ಕಕ್ಕೆ ಕರೆದೊಯ್ದರು. ಮೂರು ದಿನಗಳವರೆಗೆ ಸೌಲನಿಗೆ ಏನೂ ಕಾಣಲಿಲ್ಲ. ಅವನು ಊಟವನ್ನೂ ಮಾಡಲಿಲ್ಲ ನೀರನ್ನೂ ಕುಡಿಯಲಿಲ್ಲ.

10 ದಮಸ್ಕದಲ್ಲಿ ಯೇಸುವಿನ ಶಿಷ್ಯನೊಬ್ಬನಿದ್ದನು. ಅವನ ಹೆಸರು ಅನನೀಯ. ಪ್ರಭುವು ಅನನೀಯನನ್ನು ದರ್ಶನದಲ್ಲಿ “ಅನನೀಯನೇ” ಎಂದು ಕರೆದನು.

ಅನನೀಯನು, “ಪ್ರಭುವೇ, ಇಗೋ ಇದ್ದೇನೆ” ಎಂದು ಉತ್ತರಕೊಟ್ಟನು.

11 ಪ್ರಭುವು ಅನನೀಯನಿಗೆ, “ಎದ್ದು, ‘ನೇರಬೀದಿ’ ಎಂಬ ಬೀದಿಗೆ ಹೋಗು. ಅಲ್ಲಿರುವ ಯೂದನ[a] ಮನೆಯನ್ನು ಕಂಡುಕೊಂಡು ತಾರ್ಸಸ್ ಪಟ್ಟಣದ ಸೌಲನ ಬಗ್ಗೆ ವಿಚಾರಿಸು. ಈಗ ಅವನು ಅಲ್ಲಿ ಪ್ರಾರ್ಥಿಸುತ್ತಿದ್ದಾನೆ. 12 ಸೌಲನು ಒಂದು ದರ್ಶನವನ್ನು ಕಂಡಿದ್ದಾನೆ. ಅನನೀಯನೆಂಬ ಒಬ್ಬನು ಅವನ ಬಳಿಗೆ ಬಂದು ತನ್ನ ಕೈಗಳನ್ನು ಅವನ ಮೇಲಿಡುವನು. ಆಗ ಅವನಿಗೆ ಮತ್ತೆ ದೃಷ್ಟಿಬರುವುದು. ಇದೇ ಆ ದರ್ಶನ” ಎಂದು ಹೇಳಿದನು.

13 ಆದರೆ ಅನನೀಯನು, “ಪ್ರಭುವೇ, ಜೆರುಸಲೇಮಿನಲ್ಲಿರುವ ನಿನ್ನ ಪವಿತ್ರ ಜನರಿಗೆ ಈ ಮನುಷ್ಯನು ಮಾಡಿದ ಅನೇಕ ಕೆಟ್ಟಕೃತ್ಯಗಳ ಬಗ್ಗೆ ಜನರು ನನಗೆ ಹೇಳಿದ್ದಾರೆ. 14 ಈಗ ಅವನು ದಮಸ್ಕಕ್ಕೂ ಬಂದಿದ್ದಾನೆ. ನಿನ್ನಲ್ಲಿ ನಂಬಿಕೆ ಇಡುವ[b] ಜನರೆಲ್ಲರನ್ನು ಬಂಧಿಸುವ ಅಧಿಕಾರವನ್ನು ಮಹಾಯಾಜಕರು ಅವನಿಗೆ ಕೊಟ್ಟಿದ್ದಾರೆ” ಎಂದು ಹೇಳಿದನು.

15 ಆದರೆ ಪ್ರಭುವು ಅನನೀಯನಿಗೆ, “ಹೋಗು! ಮುಖ್ಯವಾದ ಕೆಲಸಕ್ಕಾಗಿ ನಾನು ಸೌಲನನ್ನು ಆರಿಸಿಕೊಂಡಿದ್ದೇನೆ. ಅವನು ನನ್ನ ಬಗ್ಗೆ ರಾಜರುಗಳಿಗೂ ಯೆಹೂದ್ಯರಿಗೂ ಮತ್ತು ಇತರ ಜನಾಂಗಗಳಿಗೂ ತಿಳಿಸಬೇಕಾಗಿದೆ. 16 ಅವನು ನನ್ನ ಹೆಸರಿನ ನಿಮಿತ್ತ ಅನುಭವಿಸಬೇಕಾಗಿರುವ ಹಿಂಸೆಯನ್ನು ನಾನೇ ಅವನಿಗೆ ತೋರಿಸಿಕೊಡುವೆನು” ಎಂದು ಹೇಳಿದನು.

17 ಆದ್ದರಿಂದ ಅನನೀಯನು ಅಲ್ಲಿಂದ ಹೊರಟು ಯೂದನ ಮನೆಗೆ ಹೋದನು. ಅವನು ಸೌಲನ ಮೇಲೆ ತನ್ನ ಕೈಗಳನ್ನಿಟ್ಟು, “ಸೌಲನೇ, ನನ್ನ ಸಹೋದರನೇ, ಪ್ರಭುವಾದ ಯೇಸು ನನ್ನನ್ನು ಕಳುಹಿಸಿದ್ದಾನೆ. ನೀನು ಇಲ್ಲಿಗೆ ಬರುವಾಗ ದಾರಿಯಲ್ಲಿ ಕಂಡದ್ದು ಆತನನ್ನೇ. ನೀನು ಮತ್ತೆ ದೃಷ್ಟಿಪಡೆಯಬೇಕೆಂತಲೂ ಪವಿತ್ರಾತ್ಮಭರಿತನಾಗಬೇಕೆಂತಲೂ ಯೇಸು ನನ್ನನ್ನು ಕಳುಹಿಸಿದನು” ಎಂದು ಹೇಳಿದನು. 18 ಇದ್ದಕ್ಕಿದ್ದಂತೆ, ಮೀನಿನ ಪರೆಯಂತಿದ್ದ ಏನೋ ಒಂದು ಸೌಲನ ಕಣ್ಣುಗಳಿಂದ ಕಳಚಿಬಿದ್ದಿತು. ಸೌಲನಿಗೆ ಮತ್ತೆ ಕಣ್ಣುಕಾಣತೊಡಗಿತು! ಸೌಲನು ಮೇಲೆದ್ದು, ದೀಕ್ಷಾಸ್ನಾನ ಮಾಡಿಸಿಕೊಂಡನು. 19 ಬಳಿಕ ಅವನು ಊಟಮಾಡಿ ಚೇತರಿಸಿಕೊಂಡನು.

ಸೌಲನು ದಮಸ್ಕದಲ್ಲಿ ಬೋಧಿಸುವನು

ಸೌಲನು ದಮಸ್ಕದಲ್ಲಿ ಯೇಸುವಿನ ಶಿಷ್ಯರೊಂದಿಗೆ ಕೆಲವು ದಿನಗಳವರೆಗೆ ಇದ್ದನು. 20 ಅವನು ತಡಮಾಡದೆ ಸಭಾಮಂದಿರಗಳಿಗೆ ಹೋಗಿ “ಯೇಸುವೇ ದೇವಕುಮಾರ”ನೆಂದು ಬೋಧಿಸತೊಡಗಿದನು.

21 ಸೌಲನ ಮಾತನ್ನು ಕೇಳಿದ ಜನರೆಲ್ಲರೂ ವಿಸ್ಮಯಗೊಂಡು, “ಜೆರುಸಲೇಮಿನಲ್ಲಿದ್ದವನು ಈ ಮನುಷ್ಯನೇ. ಈ ಹೆಸರಿನಲ್ಲಿ (ಯೇಸುವಿನ) ನಂಬಿಕೆ ಇಡುವ ಜನರನ್ನು ನಾಶಮಾಡಲು ಇವನು ಪ್ರಯತ್ನಿಸುತ್ತಿದ್ದನು! ಯೇಸುವಿನ ಶಿಷ್ಯರನ್ನು ಬಂಧಿಸಿ ಜೆರುಸಲೇಮಿನಲ್ಲಿರುವ ಮಹಾಯಾಜಕರ ಬಳಿಗೆ ಕೊಂಡೊಯ್ಯಲು ಇವನು ಇಲ್ಲಿಗೂ ಬಂದಿದ್ದಾನೆ” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International