Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 5:22-42

22 ದೇವಾಲಯದ ಸಿಪಾಯಿಗಳು ಸೆರೆಮನೆಗೆ ಹೋದಾಗ ಅಲ್ಲಿ ಅಪೊಸ್ತಲರನ್ನು ಕಾಣಲಿಲ್ಲ. ಆದ್ದರಿಂದ ಅವರು ಹಿಂತಿರುಗಿ ಬಂದು ಯೆಹೂದ್ಯನಾಯಕರಿಗೆ, 23 “ಸೆರೆಮನೆ ಮುಚ್ಚಿತ್ತು ಮತ್ತು ಬೀಗವನ್ನು ಹಾಕಲಾಗಿತ್ತು. ಕಾವಲುಗಾರರು ಬಾಗಿಲ ಬಳಿ ನಿಂತುಕೊಂಡಿದ್ದರು. ಆದರೆ ನಾವು ಬಾಗಿಲುಗಳನ್ನು ತೆರೆದಾಗ ಸೆರೆಮನೆಯು ಬರಿದಾಗಿತ್ತು!” ಎಂದು ತಿಳಿಸಿದರು. 24 ದೇವಾಲಯದ ಕಾವಲುಗಾರರ ನಾಯಕನು ಮತ್ತು ಮಹಾಯಾಜಕರು ಇದನ್ನು ಕೇಳಿ ಗಲಿಬಿಲಿಗೊಂಡರು. ಇದರಿಂದ ಏನಾಗುವುದೋ ಎಂದು ಅವರು ಭಯಪಟ್ಟರು.

25 ಬಳಿಕ ಬೇರೊಬ್ಬನು ಬಂದು ಅವರಿಗೆ, “ಕೇಳಿ! ನೀವು ಸೆರೆಮನೆಯಲ್ಲಿ ಹಾಕಿದ್ದ ಜನರು ದೇವಾಲಯದಲ್ಲಿ ನಿಂತಿದ್ದಾರೆ. ಅವರು ಜನರಿಗೆ ಉಪದೇಶ ಮಾಡುತ್ತಿದ್ದಾರೆ!” ಎಂದು ಹೇಳಿದನು. 26 ಆಗ ದಳಪತಿ ಮತ್ತು ಅವನ ಜನರು ಹೋಗಿ ಅಪೊಸ್ತಲರನ್ನು ಮರಳಿ ಕರೆತಂದರು. ಆದರೆ ಸೈನಿಕರು ಒತ್ತಾಯ ಮಾಡಲಿಲ್ಲ. ಯಾಕೆಂದರೆ ಅವರು ಜನರಿಗೆ ಭಯಪಟ್ಟರು. ಜನರು ಕೋಪಗೊಂಡು ಕಲ್ಲೆಸೆದು ತಮ್ಮನ್ನು ಕೊಲ್ಲಬಹುದೆಂದು ಅವರು ಹೆದರಿದರು.

27 ಸೈನಿಕರು ಅಪೊಸ್ತಲರನ್ನು ಸಭೆಗೆ ಕರೆದುಕೊಂಡು ಬಂದು ಯೆಹೂದ್ಯನಾಯಕರ ಮುಂದೆ ನಿಲ್ಲಿಸಿದರು. ಪ್ರಧಾನಯಾಜಕನು ಅಪೊಸ್ತಲರಿಗೆ, 28 “ಈ ಮನುಷ್ಯನ (ಯೇಸುವಿನ) ಬಗ್ಗೆ ನೀವು ಬೋಧಿಸಕೂಡದೆಂದು ನಾವು ನಿಮಗೆ ಆಜ್ಞಾಪಿಸಿದೆವು. ಆದರೆ ನೀವು ಮಾಡಿರುವುದೇನು? ನೀವು ಜೆರುಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿಬಿಟ್ಟಿದ್ದೀರಿ. ಈ ಮನುಷ್ಯನ (ಯೇಸುವಿನ) ಸಾವಿಗೆ ನಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ” ಎಂದರು.

29 ಪೇತ್ರ ಮತ್ತು ಉಳಿದ ಅಪೊಸ್ತಲರು, “ನಾವು ವಿಧೇಯರಾಗಬೇಕಾದದ್ದು ದೇವರಿಗೇ ಹೊರತು ನಿಮಗಲ್ಲ! 30 ನೀವು ಯೇಸುವನ್ನು ಕೊಂದಿರಿ. ನೀವು ಆತನನ್ನು ಶಿಲುಬೆಯ ಮೇಲೆ ನೇತುಹಾಕಿದಿರಿ. ಆದರೆ ದೇವರು, ಅಂದರೆ ನಮ್ಮ ಪಿತೃಗಳ ದೇವರೇ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು! 31 ದೇವರಿಂದ ಆತನ ಬಲಗಡೆಗೆ ಏರಿಸಲ್ಪಟ್ಟಾತನೇ ಯೇಸು. ಎಲ್ಲಾ ಯೆಹೂದ್ಯರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವುದರ ಮೂಲಕ ಪಾಪಕ್ಷಮೆ ಹೊಂದಿಕೊಳ್ಳಲೆಂದು ದೇವರು ಯೇಸುವನ್ನು ನಮ್ಮ ನಾಯಕನನ್ನಾಗಿಯೂ ರಕ್ಷಕನನ್ನಾಗಿಯೂ ಮಾಡಿದ್ದಾನೆ. 32 ಈ ಘಟನೆಗಳಿಗೆ ನಾವೇ ಸಾಕ್ಷಿಗಳು. ನಾವು ಮಾತ್ರವಲ್ಲದೆ ವಿಧೇಯರಾಗುವ ಎಲ್ಲಾ ಜನರಿಗೆ ದೇವರು ದಯಪಾಲಿಸಿರುವ ಪವಿತ್ರಾತ್ಮನೂ ಸಾಕ್ಷಿಯಾಗಿದ್ದಾನೆ” ಎಂದನು.

33 ಯೆಹೂದ್ಯನಾಯಕರು ಈ ಮಾತುಗಳನ್ನು ಕೇಳಿ ಬಹು ಕೋಪಗೊಂಡು, ಅಪೊಸ್ತಲರನ್ನು ಕೊಲ್ಲಬೇಕೆಂದಿದ್ದರು. 34 ಆಗ ಫರಿಸಾಯರಲ್ಲಿ ಒಬ್ಬನು ಸಭೆಯಲ್ಲಿ ಎದ್ದು ನಿಂತುಕೊಂಡನು. ಅವನ ಹೆಸರು ಗಮಲಿಯೇಲ. ಅವನು ಧರ್ಮೋಪದೇಶಕನಾಗಿದ್ದನು ಮತ್ತು ಜನರೆಲ್ಲಾ ಅವನನ್ನು ಗೌರವಿಸುತ್ತಿದ್ದರು. ಕೆಲವು ನಿಮಿಷಗಳವರೆಗೆ ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಬೇಕೆಂದು ಅವನು ಜನರಿಗೆ ಹೇಳಿದನು. 35 ಬಳಿಕ ಅವನು ಅವರಿಗೆ, “ಇಸ್ರೇಲ್ ಜನರೇ, ನೀವು ಇವರಿಗೆ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯಾಗಿರಿ! 36 ಒಮ್ಮೆ, ತೈದ ಎಂಬುವನು ಬಂದದ್ದು ನಿಮ್ಮ ನೆನಪಿನಲ್ಲಿದೆಯೋ? ಅವನು ತನ್ನನ್ನು ಮಹಾಪುರುಷನೆಂದು ಹೇಳಿಕೊಂಡನು. ಸುಮಾರು ನಾನೂರು ಮಂದಿ ಅವನ ಜೊತೆ ಸೇರಿದರು. ಆದರೆ ಅವನು ಕೊಲ್ಲಲ್ಪಟ್ಟನು. ಅವನನ್ನು ಹಿಂಬಾಲಿಸುತ್ತಿದ್ದವರೆಲ್ಲ ಚದರಿ ಓಡಿಹೋದರು. ಅವರಿಂದ ಏನೂ ಮಾಡಲಾಗಲಿಲ್ಲ. 37 ಬಳಿಕ, ಯೂದ ಎಂಬುವನು ಗಲಿಲಾಯದಿಂದ ಬಂದನು. ಅದು ಜನಗಣತಿಯ ಕಾಲವಾಗಿತ್ತು. ಅವನು ಸಹ ಅನುಯಾಯಿಗಳ ಒಂದು ಗುಂಪನ್ನೇ ಕಟ್ಟಿದ. ಅವನು ಸಹ ಕೊಲ್ಲಲ್ಪಟ್ಟನು. ಅವನ ಅನುಯಾಯಿಗಳೆಲ್ಲಾ ಚದರಿ ಓಡಿಹೋದರು. 38 ಆದ್ದರಿಂದ ಈಗ ನಾನು ನಿಮಗೆ ಹೇಳುವುದೇನೆಂದರೆ, ಈ ಜನರಿಂದ ದೂರವಾಗಿರಿ. ಅವರನ್ನು ಅವರಷ್ಟಕ್ಕೇ ಬಿಟ್ಟುಬಿಡಿರಿ. ಅವರ ಯೋಜನೆಯು ಮನುಷ್ಯರಿಂದ ಬಂದದ್ದಾಗಿದ್ದರೆ, ಅದು ಉರುಳಿಹೋಗುವುದು. 39 ಆದರೆ ಅದು ದೇವರಿಂದ ಬಂದದ್ದಾಗಿದ್ದರೆ, ನೀವು ಅವರನ್ನು ತಡೆಯಲು ಸಾಧ್ಯವಾಗುವುದಿಲ್ಲ. ನೀವು ದೇವರಿಗೇ ವಿರುದ್ಧವಾಗಿ ಹೋರಾಡಿದಂತಾದೀತು!” ಎಂದು ಹೇಳಿದನು.

ಗಮಲಿಯೇಲನ ಸಲಹೆಗೆ ಯೆಹೂದ್ಯ ನಾಯಕರು ಒಪ್ಪಿಕೊಂಡರು. 40 ಅವರು ಅಪೊಸ್ತಲರನ್ನು ಒಳಗೆ ಕರೆಸಿ, ಹೊಡೆಸಿ, ಯೇಸುವಿನ ಬಗ್ಗೆ ಜನರಿಗೆ ಹೇಳಕೂಡದೆಂದು ಎಚ್ಚರಿಸಿ ಕಳುಹಿಸಿ ಬಿಟ್ಟರು. 41 ಅಪೊಸ್ತಲರು ಸಭೆಯಿಂದ ಹೊರಟುಹೋದರು. ಯೇಸುವಿನ ಹೆಸರಿಗಾಗಿ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದುಕೊಂಡೆವೆಂದು ಅವರು ಸಂತೋಷಪಟ್ಟರು. 42 ಅವರು ಜನರಿಗೆ ಉಪದೇಶಿಸುವುದನ್ನು ನಿಲ್ಲಿಸಲಿಲ್ಲ. ಯೇಸುವೇ ಕ್ರಿಸ್ತನೆಂಬ ಶುಭವಾರ್ತೆಯನ್ನು ಜನರಿಗೆ ಹೇಳುವುದನ್ನು ಮುಂದುವರಿಸಿದರು. ಅವರು ಪ್ರತಿದಿನ ದೇವಾಲಯದಲ್ಲಿಯೂ ಜನರ ಮನೆಗಳಲ್ಲಿಯೂ ಉಪದೇಶಿಸುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International