New Testament in a Year
ಪ್ರಧಾನಯಾಜಕನು ಮಾಡಿದ ವಿಚಾರಣೆ
(ಮತ್ತಾಯ 26:59-66; ಮಾರ್ಕ 14:55-64; ಲೂಕ 22:66-71)
19 ಪ್ರಧಾನಯಾಜಕನು ಯೇಸುವಿಗೆ ಆತನ ಶಿಷ್ಯರ ಬಗ್ಗೆಯೂ ಆತನು ಉಪದೇಶಿಸಿದ ಸಂಗತಿಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದನು. 20 ಅದಕ್ಕೆ ಯೇಸು, “ನಾನು ಬಹಿರಂಗವಾಗಿ ಜನರೊಂದಿಗೆ ಮಾತಾಡಿದ್ದೇನೆ; ಯಾವಾಗಲೂ ಸಭಾಮಂದಿರಗಳಲ್ಲಿ ಮತ್ತು ದೇವಾಲಯದಲ್ಲಿ ಬೋಧಿಸಿದ್ದೇನೆ. ಯೆಹೂದ್ಯರೆಲ್ಲರೂ ಅಲ್ಲಿಗೆ ಒಟ್ಟಾಗಿ ಸೇರಿಬರುತ್ತಿದ್ದರು. ನಾನು ಯಾವುದನ್ನೂ ರಹಸ್ಯವಾಗಿ ಎಂದೂ ಹೇಳಿಲ್ಲ. 21 ಹೀಗಿರಲು, ನೀನು ನನ್ನನ್ನು ಪ್ರಶ್ನಿಸುವುದೇಕೆ? ನನ್ನ ಉಪದೇಶವನ್ನು ಕೇಳಿದ ಜನರನ್ನು ಕೇಳು. ನಾನು ಹೇಳಿದ್ದನ್ನು ಅವರು ಬಲ್ಲರು” ಎಂದು ಉತ್ತರಕೊಟ್ಟನು.
22 ಯೇಸು ಹೀಗೆ ಹೇಳಿದ ಕೂಡಲೇ, ಅಲ್ಲಿ ನಿಂತಿದ್ದ ಕಾವಲುಗಾರರಲ್ಲಿ ಒಬ್ಬನು ಯೇಸುವಿಗೆ ಹೊಡೆದು, “ನೀನು ಪ್ರಧಾನಯಾಜಕನೊಂದಿಗೆ ಆ ರೀತಿ ಮಾತಾಡಕೂಡದು” ಎಂದನು.
23 ಯೇಸು, “ನಾನು ತಪ್ಪಾಗಿ ಮಾತಾಡಿದ್ದರೆ, ನಾನು ಹೇಳಿದ್ದು ತಪ್ಪೆಂದು ಎಲ್ಲರಿಗೂ ತೋರಿಸಿಕೊಡು. ಆದರೆ ನಾನು ಹೇಳಿದ್ದು ಸರಿಯಾಗಿದ್ದರೆ ನೀನು ನನ್ನನ್ನು ಹೊಡೆಯುವುದೇಕೆ?” ಎಂದು ಉತ್ತರಕೊಟ್ಟನು.
24 ಆಗ ಅನ್ನನು ಯೇಸುವನ್ನು ಮತ್ತೆ ಕಟ್ಟಿಸಿ, ಪ್ರಧಾನಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.
ಮತ್ತೊಮ್ಮೆ ಪೇತ್ರನ ವಿಶ್ವಾಸದ್ರೋಹ
(ಮತ್ತಾಯ 26:71-75; ಮಾರ್ಕ 14:69-72; ಲೂಕ 22:58-62)
25 ಸೀಮೋನ್ ಪೇತ್ರನು ತನ್ನನ್ನು ಬೆಚ್ಚಗೆ ಮಾಡಿಕೊಳ್ಳುತ್ತಾ ಬೆಂಕಿಯ ಸಮೀಪದಲ್ಲಿ ನಿಂತುಕೊಂಡಿದ್ದನು. ಅಲ್ಲಿದ್ದವರು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದರು.
ಆದರೆ ಪೇತ್ರನು, “ಇಲ್ಲ, ನಾನಲ್ಲ!” ಎಂದು ಹೇಳಿದನು.
26 ಪ್ರಧಾನಯಾಜಕನ ಸೇವಕರಲ್ಲಿ ಒಬ್ಬನು ಪೇತ್ರನಿಂದ ಕಿವಿ ಕತ್ತರಿಸಿಹಾಕಲ್ಪಟ್ಟ ಸೇವಕನ ಸಂಬಂಧಿಕನಾಗಿದ್ದನು. ಆ ಸೇವಕನು, “ನೀನು ತೋಟದಲ್ಲಿ ಅವನೊಂದಿಗೆ (ಯೇಸುವಿನೊಂದಿಗೆ) ಇದ್ದುದನ್ನು ನಾನು ನೋಡಿದಂತಿದೆ!” ಎಂದು ಹೇಳಿದನು.
27 ಆದರೆ ಪೇತ್ರನು ಮತ್ತೆ, “ಇಲ್ಲ, ನಾನು ಆತನೊಂದಿಗೆ ಇರಲಿಲ್ಲ!” ಎಂದನು. ಆ ಕೂಡಲೇ ಕೋಳಿ ಕೂಗಿತು.
ಪಿಲಾತನ ಮುಂದೆ ಯೇಸು
(ಮತ್ತಾಯ 27:1-2,11-31; ಮಾರ್ಕ 15:1-20; ಲೂಕ 23:1-25)
28 ಬಳಿಕ ಯೆಹೂದ್ಯರು ಯೇಸುವನ್ನು ಕಾಯಫನ ಮನೆಯಿಂದ ರೋಮ್ ರಾಜ್ಯಪಾಲನ ಭವನಕ್ಕೆ ಕರೆದುಕೊಂಡು ಬಂದರು. ಆಗ ಮುಂಜಾನೆಯಾಗಿತ್ತು. ಯೆಹೂದ್ಯರು ಭವನದೊಳಗೆ ಹೋಗಲಿಲ್ಲ. ಅವರು ಪಸ್ಕಹಬ್ಬದ ಊಟಮಾಡ ಬೇಕೆಂದಿದ್ದ ಕಾರಣ ತಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಲು ಇಷ್ಟಪಡಲಿಲ್ಲ. 29 ಆದ್ದರಿಂದ ಪಿಲಾತನು ಆ ಯೆಹೂದ್ಯರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ನೀವು ಹೊರಿಸುತ್ತಿರುವ ಅಪರಾಧಗಳೇನು?” ಎಂದು ಕೇಳಿದನು.
30 ಯೆಹೂದ್ಯರು, “ಇವನು ಒಬ್ಬ ಕೆಟ್ಟ ಮನುಷ್ಯ. ಆದಕಾರಣ, ನಾವು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆವು” ಎಂದು ಉತ್ತರಕೊಟ್ಟರು.
31 ಪಿಲಾತನು ಯೆಹೂದ್ಯರಿಗೆ, “ಯೆಹೂದ್ಯರಾದ ನೀವೇ ಇವನನ್ನು ಕರೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ತೀರ್ಪುಮಾಡಿ” ಎಂದು ಹೇಳಿದನು.
ಯೆಹೂದ್ಯರು, “ಆದರೆ ಒಬ್ಬನಿಗೆ ಮರಣದಂಡನೆ ವಿಧಿಸಲು ನಿನ್ನ ಕಾನೂನು ನಮಗೆ ಅವಕಾಶ ಕೊಡುವುದಿಲ್ಲ” ಎಂದು ಉತ್ತರಕೊಟ್ಟರು. 32 (ತಾನು ಸಾಯುವ ರೀತಿಯ ಬಗ್ಗೆ ಯೇಸು ಹೇಳಿದ್ದ ಮಾತು ಹೀಗೆ ನಿಜವಾಯಿತು.)
33 ಬಳಿಕ ಪಿಲಾತನು, ಭವನದೊಳಗೆ ಹಿಂತಿರುಗಿ ಹೋಗಿ, ಯೇಸುವನ್ನು ಕರೆದು, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು.
34 ಯೇಸು, “ಇದು ನಿನ್ನ ಪ್ರಶ್ನೆಯೋ? ಅಥವಾ ನನ್ನ ಬಗ್ಗೆ ಬೇರೆ ಜನರು ನಿನಗೆ ತಿಳಿಸಿದರೋ?” ಎಂದನು.
35 ಪಿಲಾತನು, “ನಾನು ಯೆಹೂದ್ಯನಲ್ಲ! ನಿನ್ನ ಸ್ವಂತ ಜನರು ಮತ್ತು ಅವರ ಮಹಾಯಾಜಕರು ನಿನ್ನನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಿದ್ದಾರೆ. ನೀನು ಏನು ಮಾಡಿದೆ?” ಎಂದು ಕೇಳಿದನು.
36 ಯೇಸು, “ನನ್ನ ರಾಜ್ಯವು ಈ ಲೋಕಕ್ಕೆ ಸೇರಿದ್ದಲ್ಲ. ಅದು ಈ ಲೋಕಕ್ಕೆ ಸೇರಿದ್ದಾಗಿದ್ದರೆ, ಯೆಹೂದ್ಯರ ಕೈಗೆ ನಾನು ಸಿಗದಂತೆ ನನ್ನ ಸೇವಕರು ಹೋರಾಡುತ್ತಿದ್ದರು. ಆದರೆ ನನ್ನ ರಾಜ್ಯವು ಮತ್ತೊಂದು ಸ್ಥಳದ್ದು” ಎಂದನು.
37 ಪಿಲಾತನು, “ಹಾಗಾದರೆ ನೀನು ರಾಜ!” ಎಂದನು.
ಯೇಸು, “ನೀನೇ ನನ್ನನ್ನು ರಾಜನೆಂದು ಹೇಳುತ್ತಿರುವೆ. ಅದು ಸತ್ಯ. ನಾನು ಜನರಿಗೆ ಸತ್ಯದ ಬಗ್ಗೆ ಹೇಳುವುದಕ್ಕಾಗಿಯೇ ಹುಟ್ಟಿದೆನು. ಆದಕಾರಣವೇ ನಾನು ಈ ಲೋಕಕ್ಕೆ ಬಂದೆನು. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನೂ ನನಗೆ ಕಿವಿಗೊಡುತ್ತಾನೆ” ಎಂದು ಉತ್ತರಕೊಟ್ಟನು.
38 ಪಿಲಾತನು, “ಸತ್ಯವೆಂದರೇನು?” ಎಂದು ಕೇಳಿ, ಮತ್ತೆ ಯೆಹೂದ್ಯರ ಬಳಿಗೆ ಹೊರಕ್ಕೆ ಬಂದನು. ಅವನು ಯೆಹೂದ್ಯರಿಗೆ, “ಈ ಮನುಷ್ಯನ ಮೇಲೆ ಅಪವಾದ ಹೊರಿಸಲು ನನಗೆ ಏನೂ ಕಾಣುತ್ತಿಲ್ಲ. 39 ಆದರೆ ಪಸ್ಕಹಬ್ಬದ ಕಾಲದಲ್ಲಿ ನಾನು ನಿಮಗೋಸ್ಕರ ಕೈದಿಗಳಲ್ಲಿ ಒಬ್ಬನನ್ನು ಬಿಡುಗಡೆ ಮಾಡುವುದು ನಿಮ್ಮ ಪದ್ಧತಿಯಾಗಿದೆ. ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ನೀವು ಬಯಸುತ್ತೀರಾ?” ಎಂದು ಕೇಳಿದನು.
40 ಯೆಹೂದ್ಯರು, “ಇಲ್ಲ, ಅವನನ್ನಲ್ಲ! ಬರಬ್ಬನಿಗೆ ಬಿಡುಗಡೆಯಾಗಲಿ!” ಎಂದು ಕೂಗಿದರು. (ಬರಬ್ಬನು ಒಬ್ಬ ದರೋಡೆಕೋರ.)
Kannada Holy Bible: Easy-to-Read Version. All rights reserved. © 1997 Bible League International