Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಹಾನ 9:1-23

ಯೇಸು ಹುಟ್ಟು ಕುರುಡನನ್ನು ಗುಣಪಡಿಸುವನು

ಯೇಸು ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಹುಟ್ಟು ಕುರುಡನನ್ನು ಕಂಡನು. ಯೇಸುವಿನ ಶಿಷ್ಯರು ಆತನಿಗೆ, “ಗುರುವೇ, ಈ ಮನುಷ್ಯನು ಹುಟ್ಟು ಕುರುಡನಾಗಲು ಯಾರ ಪಾಪ ಕಾರಣ? ಅವನ ಸ್ವಂತ ಪಾಪವೇ ಅಥವಾ ಅವನ ತಂದೆತಾಯಿಗಳ ಪಾಪವೇ?” ಎಂದು ಕೇಳಿದರು.

ಯೇಸು, “ಅವನ ಪಾಪವಾಗಲಿ ಅವನ ತಂದೆತಾಯಿಗಳ ಪಾಪವಾಗಲಿ ಇದಕ್ಕೆ ಕಾರಣವಲ್ಲ. ದೇವರ ಕಾರ್ಯವು ಅವನಲ್ಲಿ ತೋರಿಬಲೆಂದು ಹೀಗಾಗಿದ್ದಾನೆ. ನನ್ನನ್ನು ಕಳುಹಿಸಿದಾತನ ಕಾರ್ಯವನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬರುತ್ತದೆ. ಆಗ ಯಾವನೂ ಕೆಲಸ ಮಾಡಲಾರನು. ನಾನು ಈ ಲೋಕದಲ್ಲಿರುವಾಗ, ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ” ಎಂದು ಹೇಳಿದನು.

ಯೇಸು ಈ ಮಾತನ್ನು ಹೇಳಿದ ಮೇಲೆ ನೆಲದ ಮೇಲೆ ಉಗುಳಿ ಅದರಿಂದ ಕೆಸರನ್ನು ಮಾಡಿಕೊಂಡು ಆ ಮನುಷ್ಯನ ಕಣ್ಣುಗಳಿಗೆ ಹಚ್ಚಿದನು. ಯೇಸು ಆ ಮನುಷ್ಯನಿಗೆ, “ಹೋಗಿ ಸಿಲೋವ ಕೊಳದಲ್ಲಿ ತೊಳೆದುಕೊ” ಎಂದು ಹೇಳಿದನು. (ಸಿಲೋವ ಅಂದರೆ “ಕಳುಹಿಸಲ್ಪಟ್ಟವನು.”) ಅಂತೆಯೇ ಅವನು ಹೋಗಿ ತೊಳೆದುಕೊಂಡನು. ಆ ಕೂಡಲೇ ಅವನಿಗೆ ದೃಷ್ಟಿಬಂದಿತು.

ಈ ಮನುಷ್ಯನು ಮೊದಲು ಭಿಕ್ಷೆ ಬೇಡುತ್ತಿದ್ದುದನ್ನು ನೋಡಿದ್ದ ಕೆಲವರು ಮತ್ತು ಅವನ ನೆರೆಯವರು, “ನೋಡಿ! ಯಾವಾಗಲೂ ಭಿಕ್ಷೆ ಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ” ಎಂದು ವಿಚಾರಿಸಿದರು.

ಕೆಲವು ಜನರು, “ಹೌದು ಅವನೇ” ಎಂದು ಹೇಳಿದರು. ಇನ್ನು ಕೆಲವರು, “ಇಲ್ಲ, ಇವನು ಆ ಮನುಷ್ಯನಲ್ಲ. ಇವನು ಅವನಂತಿದ್ದಾನಷ್ಟೇ” ಎಂದು ಹೇಳಿದರು.

ಅದಕ್ಕೆ ಆ ಮನುಷ್ಯನು, “ನಾನೇ ಅವನು” ಎಂದು ಹೇಳಿದನು.

10 ಜನರು, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು.

11 ಆ ಮನುಷ್ಯನು, “ಯೇಸು ಎಂಬವನು ಸ್ವಲ್ಪ ಕೆಸರನ್ನು ಮಾಡಿ ನನ್ನ ಕಣ್ಣುಗಳಿಗೆ ಹಚ್ಚಿ, ಸಿಲೋವ ಕೊಳಕ್ಕೆ ಹೋಗಿ ತೊಳೆದುಕೊಳ್ಳಲು ಹೇಳಿದನು. ಅಂತೆಯೇ ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.

12 ಜನರು ಆ ಮನುಷ್ಯನಿಗೆ, “ಆ ವ್ಯಕ್ತಿ ಎಲ್ಲಿದ್ದಾನೆ?” ಎಂದು ಕೇಳಿದರು.

ಆ ಮನುಷ್ಯನು, “ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.

ಗುಣಹೊಂದಿದ ವ್ಯಕ್ತಿಗೆ ಫರಿಸಾಯರಿಂದ ವಿಚಾರಣೆ

13 ಬಳಿಕ ಜನರು ಆ ಮನುಷ್ಯನನ್ನು ಫರಿಸಾಯರ ಬಳಿಗೆ ಕರೆದು ತಂದರು. ಮೊದಲು ಕುರುಡನಾಗಿದ್ದವನು ಅವನೇ. 14 ಯೇಸು ಕೆಸರು ಮಾಡಿ ಅವನ ಕಣ್ಣುಗಳನ್ನು ಗುಣಪಡಿಸಿದ್ದನು. ಯೇಸು ಈ ಕಾರ್ಯವನ್ನು ಮಾಡಿದ್ದು ಸಬ್ಬತ್‌ದಿನದಲ್ಲಿ. 15 ಆದ್ದರಿಂದ ಅವರು ಆ ಮನುಷ್ಯನಿಗೆ, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು.

ಆ ಮನುಷ್ಯನು, “ಆತನು ನನ್ನ ಕಣ್ಣುಗಳಿಗೆ ಕೆಸರನ್ನು ಹಚ್ಚಿದನು. ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.

16 ಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು (ಯೇಸು) ಸಬ್ಬತ್‌ದಿನದ ವಿಷಯದಲ್ಲಿ ಧರ್ಮಶಾಸ್ತ್ರಕ್ಕೆ ವಿಧೇಯನಾಗುವುದಿಲ್ಲ. ಆದ್ದರಿಂದ ಇವನು ದೇವರಿಂದ ಬಂದಿಲ್ಲ” ಎಂದು ಹೇಳಿದರು.

ಇತರರು, “ಇವನು ಪಾಪಿಯಾಗಿದ್ದರೆ ಇಂಥ ಅದ್ಭುತಕಾರ್ಯಗಳನ್ನು ಹೇಗೆ ಮಾಡಲಾದೀತು?” ಎಂದರು. ಹೀಗೆ ಯೆಹೂದ್ಯರಲ್ಲೇ ಭಿನ್ನಾಭಿಪ್ರಾಯ ಉಂಟಾಯಿತು.

17 ಯೆಹೂದ್ಯನಾಯಕರು ಗುಣಹೊಂದಿದವನಿಗೆ, “ಆ ಮನುಷ್ಯನು (ಯೇಸು) ನಿನ್ನನ್ನು ಗುಣಪಡಿಸಿದನು ಮತ್ತು ನಿನಗೆ ಕಣ್ಣು ಕಾಣಿಸುತ್ತಿದೆ. ಆದರೆ ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ಕೇಳಿದರು.

ಅದಕ್ಕೆ ಅವನು, “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.

18 ಈ ಮನುಷ್ಯನು ಮೊದಲು ಕುರುಡನಾಗಿದ್ದನು. ಆದರೆ ಈಗ ಇವನಿಗೆ ಗುಣವಾಗಿದೆ ಎಂದು ಯೆಹೂದ್ಯನಾಯಕರುಗಳು ನಂಬಲಿಲ್ಲ. ಆದ್ದರಿಂದ ಅವರು ಅವನ ತಂದೆತಾಯಿಗಳನ್ನು ಕರೆಯಿಸಿದರು. 19 ಅವರು ಅವನ ತಂದೆತಾಯಿಗಳಿಗೆ, “ಇವನು ನಿಮ್ಮ ಮಗನೋ? ಇವನು ಹುಟ್ಟುಕುರುಡನೆಂದು ನೀವು ಹೇಳುತ್ತೀರಿ. ಹಾಗಾದರೆ ಇವನಿಗೆ ಈಗ ಹೇಗೆ ಕಣ್ಣು ಕಾಣಿಸುತ್ತದೆ?” ಎಂದು ಕೇಳಿದರು.

20 ತಂದೆತಾಯಿಗಳು, “ಇವನು ನಮ್ಮ ಮಗನೆಂದು ನಮಗೆ ಗೊತ್ತು. ಇವನು ಹುಟ್ಟುಕುರುಡನೆಂಬುದೂ ನಮಗೆ ಗೊತ್ತು. 21 ಆದರೆ ಈಗ ಅವನಿಗೆ ಹೇಗೆ ಕಣ್ಣು ಕಾಣಿಸುತ್ತದೆಯೋ ಯಾರು ಗುಣಪಡಿಸಿದರೋ ನಮಗೆ ತಿಳಿಯದು. ಅವನನ್ನೇ ಕೇಳಿ. ಇವನು ತನ್ನ ವಿಷಯವಾಗಿ ಹೇಳುವಷ್ಟು ಪ್ರಾಯಸ್ಥನಾಗಿದ್ದಾನೆ” ಎಂದು ಉತ್ತರಕೊಟ್ಟರು. 22 ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಹೆದರಿಕೊಂಡಿದ್ದರಿಂದ ಹಾಗೆ ಹೇಳಿದರು. ಯೇಸುವನ್ನು ಕ್ರಿಸ್ತನೆಂದು ಹೇಳುವ ಯಾರನ್ನೇ ಆಗಲಿ ಸಭಾಮಂದಿರದಿಂದ ಬಹಿಷ್ಕರಿಸುವುದಾಗಿ ಯೆಹೂದ್ಯನಾಯಕರುಗಳು ಪ್ರಕಟಿಸಿದ್ದರು. 23 ಆದಕಾರಣವೇ ಅವನ ತಂದೆತಾಯಿಗಳು, “ಅವನು ಪ್ರಾಯಸ್ಥನಾಗಿದ್ದಾನೆ. ಅವನನ್ನೇ ಕೇಳಿ” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International