Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
1 ಯೋಹಾನ 4

ಸುಳ್ಳುಬೋಧಕರ ವಿರುದ್ಧ ಯೋಹಾನನ ಎಚ್ಚರಿಕೆ

ನನ್ನ ಪ್ರಿಯ ಸ್ನೇಹಿತರೇ, ಈಗ ಲೋಕದಲ್ಲಿ ಅನೇಕ ಸುಳ್ಳುಪ್ರವಾದಿಗಳಿದ್ದಾರೆ. ಆದ್ದರಿಂದ ಪ್ರತಿಯೊಂದು ಆತ್ಮವನ್ನು ನಂಬಬೇಡಿ. ಆದರೆ ಆ ಆತ್ಮಗಳು ದೇವರಿಂದ ಬಂದವುಗಳೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ. ದೇವರಾತ್ಮವನ್ನು ನೀವು ಇದೇ ರೀತಿ ತಿಳಿದುಕೊಳ್ಳಲು ಸಾಧ್ಯ. “ಈ ಲೋಕಕ್ಕೆ ಮನುಷ್ಯನಾಗಿ ಬಂದ ಯೇಸುವೇ ಕ್ರಿಸ್ತನೆಂದು ನಾನು ನಂಬುತ್ತೇನೆ” ಎಂದು ಹೇಳುವ ಆತ್ಮವು ದೇವರಿಂದ ಬಂದದ್ದಾಗಿದೆ. ಯೇಸುವಿನ ಬಗ್ಗೆ ಹೀಗೆ ಹೇಳದ ಆತ್ಮವು ದೇವರಿಂದ ಬಂದದ್ದಲ್ಲ. ಅದು ಕ್ರಿಸ್ತವಿರೋಧಿಯ ಆತ್ಮ. ಕ್ರಿಸ್ತವಿರೋಧಿಯು ಬರುತ್ತಾನೆ ಎಂಬುದನ್ನು ನೀವು ಕೇಳಿರುವಿರಿ. ಕ್ರಿಸ್ತವಿರೋಧಿಯು ಈಗಾಗಲೇ ಈ ಲೋಕದಲ್ಲಿದ್ದಾನೆ.

ನನ್ನ ಪ್ರಿಯ ಮಕ್ಕಳೇ, ನೀವು ದೇವರಿಗೆ ಸೇರಿದವರು. ಆದ್ದರಿಂದ ನೀವು ಅವರನ್ನು (ಸುಳ್ಳುಬೋಧಕರು) ಸೋಲಿಸಿದ್ದೀರಿ. ಏಕೆಂದರೆ ನಿಮ್ಮಲ್ಲಿರುವಾತನು (ದೇವರು) ಈ ಲೋಕದ ಜನರಲ್ಲಿರುವವನಿಗಿಂತ (ಸೈತಾನ) ದೊಡ್ಡವನಾಗಿದ್ದಾನೆ. ಆ ಜನರು (ಸುಳ್ಳುಬೋಧಕರು) ಈ ಲೋಕಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಅವರು ಹೇಳುವುದೆಲ್ಲವೂ ಈ ಲೋಕಕ್ಕೆ ಸೇರಿವೆ. ಅವರು ಏನೇ ಹೇಳಿದರೂ ಲೋಕವು ಕೇಳುತ್ತದೆ. ನಾವಾದರೋ ದೇವರಿಂದ ಬಂದವರು. ಆದ್ದರಿಂದ ದೇವರನ್ನು ಬಲ್ಲ ಜನರು ನಮಗೆ ಕಿವಿಗೊಡುತ್ತಾರೆ, ಆದರೆ ದೇವರಿಂದ ಬಂದಿಲ್ಲದ ಜನರು ನಮ್ಮ ಮಾತುಗಳನ್ನು ಕೇಳುವುದಿಲ್ಲ. ಯಾವುದು ಸತ್ಯವನ್ನು ಬೋಧಿಸುವ ಆತ್ಮ, ಯಾವುದು ಸುಳ್ಳನ್ನು ಬೋಧಿಸುವ ಆತ್ಮ ಎಂಬುದನ್ನು ಹೀಗೆ ತಿಳಿದುಕೊಳ್ಳುತ್ತೇವೆ.

ಪ್ರೀತಿಯು ದೇವರಿಂದ ಬರುತ್ತದೆ

ಪ್ರಿಯ ಸ್ನೇಹಿತರೇ, ಪ್ರೀತಿಯು ದೇವರಿಂದ ಬಂದಿರುವುದರಿಂದ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಪ್ರೀತಿಸುವವನು ದೇವರಿಂದ ಹೊಸದಾಗಿ ಹುಟ್ಟಿದವನಾಗಿದ್ದಾನೆ. ಆದ್ದರಿಂದ ಅವನು ದೇವರನ್ನು ಬಲ್ಲವನಾಗಿರುತ್ತಾನೆ. ಪ್ರೀತಿಸದಿರುವವನು ದೇವರನ್ನು ತಿಳಿದಿಲ್ಲ. ಏಕೆಂದರೆ ದೇವರು ಪ್ರೀತಿಸ್ವರೂಪಿ. ದೇವರು ತನ್ನ ಒಬ್ಬನೇ ಮಗನ ಮೂಲಕ ನಮಗೆ ಜೀವವನ್ನು ಕೊಡುವುದಕ್ಕಾಗಿ ಆತನನ್ನು ಈ ಲೋಕಕ್ಕೆ ಕಳುಹಿಸಿದನು. ಹೀಗೆ ದೇವರು ತನ್ನ ಪ್ರೀತಿಯನ್ನು ನಮಗೆ ತೋರಿಸಿದ್ದಾನೆ. 10 ದೇವರಿಗೆ ನಮ್ಮ ಮೇಲಿರುವ ಪ್ರೀತಿಯೇ ನಿಜವಾದ ಪ್ರೀತಿ. ನಮಗೆ ದೇವರ ಮೇಲಿರುವ ಪ್ರೀತಿ ನಿಜವಾದ ಪ್ರೀತಿಯಲ್ಲ. ನಮ್ಮ ಪಾಪ ನಿವಾರಣೆಗಾಗಿ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು.

11 ಪ್ರಿಯ ಸ್ನೇಹಿತರೇ, ಹೀಗೆ ದೇವರು ನಮ್ಮನ್ನು ಬಹಳವಾಗಿ ಪ್ರೀತಿಸಿದನು! ಆದ್ದರಿಂದ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. 12 ದೇವರನ್ನು ಯಾರೂ ಎಂದೂ ನೋಡಿಲ್ಲ. ಆದರೆ ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರು ನಮ್ಮಲ್ಲಿ ನೆಲೆಸಿರುತ್ತಾನೆ. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರ ಪ್ರೀತಿಯು ನಮ್ಮಲ್ಲಿ ಪರಿಪೂರ್ಣವಾದ ಮಟ್ಟವನ್ನು ತಲುಪುತ್ತದೆ.

13 ನಾವು ದೇವರಲ್ಲಿ ನೆಲೆಸಿದ್ದೇವೆ ಮತ್ತು ದೇವರು ನಮ್ಮಲ್ಲಿ ನೆಲೆಸಿದ್ದಾನೆ ಎಂಬುದು ನಮಗೆ ತಿಳಿದದೆ. ದೇವರು ನಮಗೆ ತನ್ನ ಆತ್ಮವನ್ನು ಕೊಟ್ಟಿರುವುದರಿಂದ ಇದು ನಮಗೆ ತಿಳಿದಿದೆ. 14 ದೇವರು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿದ್ದನ್ನು ನಾವು ನೋಡಿದ್ದೇವೆ. ನಾವು ಈಗ ಜನರಿಗೆ ಹೇಳುತ್ತಿರುವುದು ಅದನ್ನೇ. 15 “ಯೇಸುವೇ ದೇವರ ಮಗನೆಂದು ನಾನು ನಂಬುತ್ತೇನೆ” ಎಂದು ಹೇಳುವವನಲ್ಲಿ ದೇವರು ನೆಲೆಸಿದ್ದಾನೆ ಮತ್ತು ಅವನು ದೇವರಲ್ಲಿ ನೆಲೆಸಿದ್ದಾನೆ. 16 ಹೀಗಿರಲಾಗಿ ನಮ್ಮ ಮೇಲೆ ದೇವರಿಗಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ನಾವು ಆ ಪ್ರೀತಿಯಲ್ಲಿ ಭರವಸವಿಟ್ಟಿದ್ದೇವೆ.

ದೇವರು ಪ್ರೀತಿಸ್ವರೂಪಿ. ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ. ದೇವರೂ ಅವನಲ್ಲಿ ನೆಲೆಸಿದ್ದಾನೆ. 17 ಹೀಗೆ ಪ್ರೀತಿಯು ನಮ್ಮಲ್ಲಿ ಪರಿಪೂರ್ಣವಾಗುವುದರಿಂದ ದೇವರು ನಮಗೆ ತೀರ್ಪು ನೀಡುವ ದಿನದಂದು ನಾವು ನಿರ್ಭಯದಿಂದಿರುತ್ತೇವೆ. ಈ ಲೋಕದಲ್ಲಿ ನಾವು ಆತನಂತೆಯೇ (ಕ್ರಿಸ್ತನು ಅಥವಾ ದೇವರು) ಇರುವುದರಿಂದ ನಾವು ಧೈರ್ಯದಿಂದಿರುತ್ತೇವೆ. 18 ದೇವರ ಪ್ರೀತಿಯು ಎಲ್ಲಿರುವುದೋ ಅಲ್ಲಿ ಭಯವಿರುವುದಿಲ್ಲ. ಏಕೆಂದರೆ ದೇವರ ಪರಿಪೂರ್ಣ ಪ್ರೀತಿಯು ಭಯವನ್ನು ತೆಗೆದುಹಾಕುತ್ತದೆ. ದೇವರ ದಂಡನೆಯೇ ಒಬ್ಬ ವ್ಯಕ್ತಿಯಲ್ಲಿ ಭಯವನ್ನು ಉಂಟುಮಾಡುವಂಥದ್ದು. ಆದ್ದರಿಂದ ಭಯವಿರುವವನಲ್ಲಿ ದೇವರ ಪ್ರೀತಿ ಪರಿಪೂರ್ಣವಾಗಿಲ್ಲ.

19 ದೇವರು ನಮ್ಮನ್ನು ಮೊದಲು ಪ್ರೀತಿಸಿದ್ದರಿಂದಲೇ ನಾವು ಆತನನ್ನು ಪ್ರೀತಿಸುತ್ತೇವೆ. 20 “ನಾನು ದೇವರನ್ನು ಪ್ರೀತಿಸುತ್ತೇನೆ” ಎಂದು ಹೇಳಿಕೊಳ್ಳುವವನು ತನ್ನ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ದ್ವೇಷಿಸಿದರೆ, ಅವನು ಸುಳ್ಳುಗಾರನಾಗಿದ್ದಾನೆ. ಅವನು ತನ್ನ ಸಹೋದರನನ್ನು ಕಣ್ಣಾರೆ ನೋಡುತ್ತಿದ್ದರೂ ಅವನನ್ನು ದ್ವೇಷಿಸುತ್ತಾನೆ. ಆದ್ದರಿಂದ ಅವನು ದೇವರನ್ನು ಪ್ರೀತಿಸಲಾಗುವುದಿಲ್ಲ. ಏಕೆಂದರೆ ಅವನು ದೇವರನ್ನು ಎಂದೂ ನೋಡಿಲ್ಲ! 21 ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬುದು ದೇವರು ನಮಗೆ ನೀಡಿರುವ ಆಜ್ಞೆಯಾಗಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International