New Testament in a Year
17 ನಿಮ್ಮ ಜೀವಿತಗಳ ಬಗ್ಗೆ ಮೂರ್ಖರಾಗಿರದೆ ದೇವರ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ. 18 ಮದ್ಯಪಾನಮಾಡಿ ಮತ್ತರಾಗಬೇಡಿ, ಅದು ಪಾಪಕೃತ್ಯಗಳಿಗೆ ನಡೆಸುತ್ತದೆ, ಆದರೆ ಯಾವಾಗಲೂ ಪವಿತ್ರಾತ್ಮಭರಿತರಾಗಿರಿ. 19 ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿರಿ. ನಿಮ್ಮ ಹೃದಯಗಳಲ್ಲಿ ಪ್ರಭುವಿಗೆ ವಾದ್ಯ ನುಡಿಸುತ್ತಾ ಹಾಡಿರಿ. 20 ಪ್ರತಿಯೊಂದು ವಿಷಯದಲ್ಲಿಯೂ ತಂದೆಯಾದ ದೇವರಿಗೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಯಾವಾಗಲೂ ಸ್ತೋತ್ರಮಾಡಿರಿ.
ಗಂಡ ಹೆಂಡತಿಯರು
21 ನೀವು ಒಬ್ಬರಿಗೊಬ್ಬರು ವಿಧೇಯರಾಗಿರಬೇಕು. ಏಕೆಂದರೆ ನೀವು ಕ್ರಿಸ್ತನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು.
22 ಸ್ತ್ರೀಯರೇ, ನೀವು ಪ್ರಭುವಿಗೆ ಅಧೀನರಾಗಿರುವಂತೆ ನಿಮ್ಮ ಗಂಡಂದಿರಿಗೂ ಅಧೀನರಾಗಿರಿ. 23 ಕ್ರಿಸ್ತನು ಸಭೆಗೆ ಶಿರಸ್ಸಾಗಿರುವಂತೆ ಗಂಡನು ಹೆಂಡತಿಗೆ ಶಿರಸ್ಸಾಗಿದ್ದಾನೆ. ಸಭೆಯು ಕ್ರಿಸ್ತನ ದೇಹವಾಗಿದೆ. ಕ್ರಿಸ್ತನು ಆ ದೇಹದ ರಕ್ಷಕನಾಗಿದ್ದಾನೆ. 24 ಸಭೆಯು ಕ್ರಿಸ್ತನ ಅಧೀನದಲ್ಲಿದೆ. ಇದೇ ನಿಯಮವು ಸ್ತ್ರೀಯರಿಗೆ ಅನ್ವಯಿಸುತ್ತದೆ. ಪ್ರತಿಯೊಂದು ವಿಷಯದಲ್ಲಿಯೂ ಸ್ತ್ರೀಯರು ತಮ್ಮ ಗಂಡಂದಿರಿಗೆ ಅಧೀನರಾಗಿರಬೇಕು.
25 ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದಂತೆ ನೀವು ನಿಮ್ಮ ಹೆಂಡತಿಯರನ್ನು ಪ್ರೀತಿಸಬೇಕು. 26 ಕ್ರಿಸ್ತನು ಸಭೆಯನ್ನು ಪರಿಶುದ್ಧಗೊಳಿಸುವುದಕ್ಕಾಗಿ ಪ್ರಾಣಕೊಟ್ಟನು. ಸುವಾರ್ತೆಯನ್ನು ತಿಳಿಸುವುದರ ಮೂಲಕ ಜಲಸ್ನಾನವನ್ನು ಮಾಡಿಸಿ ಆತನು ಸಭೆಯನ್ನು ಶುದ್ಧಗೊಳಿಸಿದನು. 27 ಮಹಿಮಾಪೂರ್ಣಳಾದ ಕನ್ನಿಕೆಯೋ ಎಂಬಂತಿರುವ ಸಭೆಯನ್ನು ತನಗೇ ಕೊಡಬೇಕೆಂದು ಆತನು ಪ್ರಾಣಕೊಟ್ಟನು. ಸಭೆಯು ದೋಷವಿಲ್ಲದೆ ಶುದ್ಧವಾಗಿರಬೇಕೆಂದು ಮತ್ತು ದುಷ್ಟತ್ವವಾಗಲಿ ಪಾಪವಾಗಲಿ ಅಥವಾ ಬೇರೆ ಯಾವುದೇ ತಪ್ಪಾಗಲಿ ಸಭೆಯಲ್ಲಿರಕೂಡದೆಂದು ಆತನು ಪ್ರಾಣಕೊಟ್ಟನು.
28 ಆದ್ದರಿಂದ ಪುರುಷರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸುವಂತೆ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುವವನಾಗಿದ್ದಾನೆ. 29 ಏಕೆಂದರೆ ಯಾವನೂ ತನ್ನ ದೇಹವನ್ನು ದ್ವೇಷಿಸುವುದಿಲ್ಲ. ಪ್ರತಿಯೊಬ್ಬನು ತನ್ನ ದೇಹವನ್ನು ಪೋಷಿಸಿ ಜಾಗ್ರತೆಯಿಂದ ನೋಡಿಕೊಳ್ಳುತ್ತಾನೆ. ಕ್ರಿಸ್ತನು ಸಭೆಗೋಸ್ಕರ ಮಾಡುವಂಥದ್ದು ಅದೇ ಆಗಿದೆ. 30 ಏಕೆಂದರೆ ನಾವು ಆತನ ದೇಹದ ಅಂಗಗಳಾಗಿದ್ದೇವೆ. 31 ಪವಿತ್ರ ಗ್ರಂಥವು ಹೇಳುವಂತೆ, “ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ದೇಹವಾಗುವರು.”(A) 32 ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತಾಡುತ್ತಿದ್ದೇನೆ. ರಹಸ್ಯವಾದ ಈ ಸತ್ಯವು ಬಹು ಮುಖ್ಯವಾದದ್ದು. 33 ಆದರೆ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ತಾನು ಪ್ರೀತಿಸುವಂತೆ ತನ್ನ ಹೆಂಡತಿಯನ್ನು ಪ್ರೀತಿಸಬೇಕು ಮತ್ತು ಸ್ತ್ರೀಯು ತನ್ನ ಗಂಡನಿಗೆ ಭಯಭಕ್ತಿಯಿಂದರಬೇಕು.
Kannada Holy Bible: Easy-to-Read Version. All rights reserved. © 1997 Bible League International