Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಗಲಾತ್ಯದವರಿಗೆ 5

ಸ್ವತಂತ್ರರಾಗಿರಿ

ಈಗ ನಮಗೆ ಸ್ವತಂತ್ರವಿದೆ. ಕ್ರಿಸ್ತನು ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ದೃಢವಾಗಿರಿ. ಮನಸ್ಸನ್ನು ಬದಲಾಯಿಸಿಕೊಂಡು ಮತ್ತೆ ಧರ್ಮಶಾಸ್ತ್ರದ ಗುಲಾಮಗಿರಿಗೆ ಹೋಗಬೇಡಿರಿ. ಕೇಳಿ, ನಾನೇ ಪೌಲನು. ನೀವು ಸುನ್ನತಿ ಮಾಡಿಸಿಕೊಂಡು ಧರ್ಮಶಾಸ್ತ್ರಕ್ಕೆ ಹಿಂತಿರುಗಿಕೊಳ್ಳುವುದಾದರೆ ಕ್ರಿಸ್ತನಿಂದ ನಿಮಗೇನೂ ಪ್ರಯೋಜನವಿಲ್ಲ. ಮತ್ತೆ ನಾನು ಪ್ರತಿಯೊಬ್ಬನನ್ನೂ ಎಚ್ಚರಿಸುತ್ತೇನೆ. ನೀವು ಸುನ್ನತಿ ಮಾಡಿಸಿಕೊಂಡರೆ, ಧರ್ಮಶಾಸ್ತ್ರವನ್ನೆಲ್ಲಾ ಅನುಸರಿಸಬೇಕು. ನೀವು ಧರ್ಮಶಾಸ್ತ್ರದ ಮೂಲಕ ನೀತಿವಂತರಾಗಲು ಪ್ರಯತ್ನಿಸುವವರಾಗಿದ್ದರೆ, ದೇವರ ಕೃಪಾಶ್ರಯದಿಂದ ಬಿದ್ದುಹೋದ ಕಾರಣ ಕ್ರಿಸ್ತನೊಂದಿಗಿರುವ ನಿಮ್ಮ ಜೀವಿತವು ಅಂತ್ಯಗೊಳ್ಳುವುದು. ಆದರೆ ನಾವು ನಂಬಿಕೆಯ ಮೂಲಕ ನೀತಿವಂತರಾಗಿದ್ದೇವೆ ಎಂಬ ನಿರೀಕ್ಷೆ ನಮಗುಂಟು. ದೇವರಾತ್ಮನ ಸಹಾಯದಿಂದ ಈ ನಿರೀಕ್ಷೆ ಸಫಲವಾಗುವುದೆಂದು ತವಕದಿಂದ ಎದುರುನೋಡುತ್ತಿದ್ದೇವೆ. ಒಬ್ಬನು ಕ್ರಿಸ್ತ ಯೇಸುವಿನಲ್ಲಿರುವಾಗ ಸುನ್ನತಿ ಹೊಂದಿದ್ದಾನೋ ಇಲ್ಲವೋ ಎಂಬುದು ಮುಖ್ಯವಲ್ಲ. ಮುಖ್ಯವಾದದ್ದೇನೆಂದರೆ ಪ್ರೀತಿಯಿಂದ ಕಾರ್ಯನಡೆಸುವ ನಂಬಿಕೆ.

ನೀವು ಚೆನ್ನಾಗಿ ಓಡುತ್ತಾ ಇದ್ದಿರಿ. ನೀವು ಸತ್ಯಕ್ಕೆ ವಿಧೇಯರಾಗಿದ್ದಿರಿ. ಸತ್ಯಮಾರ್ಗವನ್ನು ಅನುಸರಿಸದಂತೆ ನಿಮ್ಮನ್ನು ಒತ್ತಾಯಪಡಿಸಿದವರ್ಯಾರು? ಆ ಒತ್ತಾಯವು ಬಂದದ್ದು ನಿಮ್ಮನ್ನು ಆರಿಸಿಕೊಂಡಾತನಿಂದಲ್ಲ. ಎಚ್ಚರಿಕೆಯಿಂದಿರಿ! “ಸ್ವಲ್ಪ ಹುಳಿಯಿಂದ ಪಾತ್ರೆಯಲ್ಲಿರುವ ನಾದಿದ ಹಿಟ್ಟೆಲ್ಲಾ ಹುಳಿಯಾಗುವುದು.” 10 ಆ ಬೇರೆ ಅಭಿಪ್ರಾಯಗಳನ್ನು ನೀವು ನಂಬುವುದಿಲ್ಲವೆಂದು ಪ್ರಭುವಿನಲ್ಲಿ ನಿಮ್ಮನ್ನು ಕುರಿತು ಭರವಸೆಯಿಂದಿದ್ದೇನೆ. ಯಾರೊ ಒಬ್ಬನು ಆ ಅಭಿಪ್ರಾಯಗಳಿಂದ ನಿಮ್ಮನ್ನು ಗಲಿಬಿಲಿಗೊಳಿಸುತ್ತಿದ್ದಾನೆ. ಅವನು ಯಾರೇ ಆಗಿದ್ದರೂ ದಂಡನೆ ಹೊಂದುವನು.

11 ನನ್ನ ಸಹೋದರ ಸಹೋದರಿಯರೇ, ಜನರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಾನು ಬೋಧಿಸುವುದಿಲ್ಲ. ಸುನ್ನತಿಯ ಅಗತ್ಯತೆಯನ್ನು ಕುರಿತು ಉಪದೇಶಿಸುವವನಾಗಿದ್ದರೆ, ನಾನಿನ್ನೂ ಹಿಂಸೆಗೆ ಒಳಗಾಗಿರುವುದೇಕೆ? ಜನರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಾನಿನ್ನೂ ಉಪದೇಶಿಸುವುದಾಗಿದ್ದರೆ, ಶಿಲುಬೆಯ ವಿಷಯವಾದ ನನ್ನ ಬೋಧನೆಗೆ ಅಡ್ಡಿಯಾಗುವುದೇ ಇಲ್ಲ. 12 ನಿಮ್ಮನ್ನು ಕಳವಳಪಡಿಸುತ್ತಿರುವವರು ತಮಗಾಗಿರುವ ಸುನ್ನತಿಯಲ್ಲದೆ ತಮ್ಮ ಅಂಗವನ್ನೇ ಕತ್ತರಿಸಿಕೊಂಡರೆ ಒಳ್ಳೆಯದು.

13 ನನ್ನ ಸಹೋದರ ಸಹೋದರಿಯರೇ, ನೀವು ಸ್ವತಂತ್ರರಾಗಬೇಕೆಂದು ದೇವರು ನಿಮ್ಮನ್ನು ಕರೆದಿದ್ದಾನೆ. ಆದರೆ ಪಾಪಮಯವಾದ ನಿಮ್ಮ ಸ್ವಭಾವವನ್ನು ಮೆಚ್ಚಿಸುವುದಕ್ಕಾಗಿ ನಿಮ್ಮ ಸ್ವತಂತ್ರವನ್ನು ನೆಪಮಾಡಿಕೊಳ್ಳಬೇಡಿ. ಆದರೆ ಪ್ರೀತಿಯಿಂದ ಒಬ್ಬರ ಸೇವೆಯನ್ನೊಬ್ಬರು ಮಾಡಿರಿ. 14 “ನೀವು ನಿಮ್ಮನ್ನು ಪ್ರೀತಿಸುವಂತೆ ಇತರರನ್ನು ಪ್ರೀತಿಸಿರಿ”(A) ಎಂಬ ಒಂದೇ ಒಂದು ಆಜ್ಞೆಯಲ್ಲಿ ಇಡೀ ಧರ್ಮಶಾಸ್ತ್ರವೇ ಅಡಕವಾಗಿದೆ. 15 ನೀವು ಒಬ್ಬರನ್ನೊಬ್ಬರು ಕಚ್ಚಿ ಹರಿದುಹಾಕಿ ನುಂಗುವುದಾದರೆ ಒಬ್ಬರಿಂದೊಬ್ಬರು ನಾಶವಾಗುತ್ತೀರಿ. ಆದ್ದರಿಂದ ಎಚ್ಚರಿಕೆಯಿಂದಿರಿ!

ದೇವರಾತ್ಮನು ಮತ್ತು ಮಾನವ ಸ್ವಭಾವ

16 ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಪವಿತ್ರಾತ್ಮನನ್ನು ಅನುಸರಿಸುವವರಾಗಿರಿ. ಆಗ, ನಿಮ್ಮ ಶರೀರಭಾವವು ಬಯಸುವ ಕೆಟ್ಟ ಸಂಗತಿಗಳನ್ನು ನೀವು ಮಾಡುವುದಿಲ್ಲ. 17 ನಮ್ಮ ಶರೀರಭಾವವು ದೇವರಾತ್ಮನಿಗೆ ವಿರುದ್ಧವಾದ ಸಂಗತಿಗಳನ್ನು ಬಯಸುತ್ತದೆ. ದೇವರಾತ್ಮನು ನಮ್ಮ ಶರೀರಭಾವಕ್ಕೆ ವಿರುದ್ಧವಾದ ಸಂಗತಿಗಳನ್ನು ಬಯಸುತ್ತಾನೆ. ಆದ್ದರಿಂದ ನೀವು ನಿಜವಾಗಿಯೂ ಬಯಸುವಂಥವುಗಳನ್ನು ಮಾಡಲಾಗದಂತೆ ಅವು ಒಂದಕ್ಕೊಂದು ಹೋರಾಡುತ್ತವೆ. 18 ಆದರೆ ನೀವು ನಿಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಟ್ಟರೆ ನೀವು ಧರ್ಮಶಾಸ್ತ್ರದ ಅಧೀನದಲ್ಲಿಲ್ಲ.

19 ನಮ್ಮ ಶರೀರಭಾವವು ಮಾಡುವ ಕೆಟ್ಟ ಸಂಗತಿಗಳು ಸ್ಪಷ್ಟವಾಗಿವೆ. ಜಾರತ್ವ, ಅಶುದ್ಧತ್ವ, 20 ಸುಳ್ಳುದೇವರುಗಳ ಆರಾಧನೆ, ಮಾಟಮಂತ್ರ, ದ್ವೇಷ, ಜಗಳ, ಹೊಟ್ಟೆಕಿಚ್ಚು, ಕಡುಕೋಪ, ಸ್ವಾರ್ಥ, ಸಿಟ್ಟು, ಕಕ್ಷಭೇದ, 21 ಮತ್ಸರ, ಕುಡಿಕತನ ಮತ್ತು ಸ್ವೇಚ್ಫಾಚಾರದ ಕೂಟ, ಮೊದಲಾದವುಗಳೇ. ನಾನು ನಿಮ್ಮನ್ನು ಮೊದಲು ಎಚ್ಚರಿಸಿದಂತೆ ಈಗಲೂ ಎಚ್ಚರಿಸುತ್ತೇನೆ. ಇಂಥವುಗಳನ್ನು ಮಾಡುವ ಜನರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. 22 ಆದರೆ ದೇವರಾತ್ಮನು ಹುಟ್ಟಿಸುವುದು ಪ್ರೀತಿ, ಆನಂದ, ಶಾಂತಿ, ತಾಳ್ಮೆ, ಕರುಣೆ, ಉಪಕಾರ, ನಂಬಿಗಸ್ತಿಕೆ, 23 ಸಾಧುತ್ವ, ಇಂದ್ರಿಯ ನಿಗ್ರಹ ಇಂಥವುಗಳೇ. ಇವುಗಳನ್ನು ತಪ್ಪೆಂದು ಯಾವ ಧರ್ಮಶಾಸ್ತ್ರವೂ ಹೇಳುವುದಿಲ್ಲ. 24 ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು ಶಿಲುಬೆಗೇರಿಸಿದ್ದಾರೆ. ಅವರು ತಮ್ಮ ಹಳೆಯ ಸ್ವಾರ್ಥಪರವಾದ ಅಭಿಲಾಷೆಗಳನ್ನು ಮತ್ತು ತಾವು ಮಾಡಬೇಕೆಂದಿದ್ದ ಕೆಟ್ಟಕಾರ್ಯಗಳನ್ನು ಬಿಟ್ಟುಕೊಟ್ಟವರಾಗಿದ್ದಾರೆ. 25 ನಮ್ಮ ಹೊಸ ಜೀವಿತವನ್ನು ಪವಿತ್ರಾತ್ಮನಿಂದ ಪಡೆದುಕೊಂಡಿರುವುದರಿಂದ ನಾವು ಆತನನ್ನೇ ಅನುಸರಿಸಬೇಕು. 26 ನಾವು ಅಹಂಕಾರಿಗಳಾಗಬಾರದು, ಒಬ್ಬರನ್ನೊಬ್ಬರು ಕೆಣಕುವವರಾಗಬಾರದು, ಒಬ್ಬರಮೇಲೊಬ್ಬರು ಮತ್ಸರ ಉಳ್ಳವರಾಗಬಾರದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International