Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
1 ಕೊರಿಂಥದವರಿಗೆ 15:1-28

ಕ್ರಿಸ್ತನ ವಿಷಯವಾದ ಸುವಾರ್ತೆ

15 ಸಹೋದರ ಸಹೋದರಿಯರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನೀವು ಜ್ಞಾಪಿಸಿಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿಕೊಂಡಿರಿ ಮತ್ತು ಅದರಲ್ಲಿ ದೃಢವಾಗಿದ್ದೀರಿ. ನೀವು ಆ ಸಂದೇಶದ ಮೂಲಕ ರಕ್ಷಣೆ ಹೊಂದಿದ್ದೀರಿ. ನಾನು ನಿಮಗೆ ತಿಳಿಸಿದ ಸಂದೇಶದಲ್ಲಿ ನಿಮಗೆ ದೃಢವಾದ ನಂಬಿಕೆ ಇರಲೇಬೇಕು. ನೀವು ಹೀಗೆ ಮಾಡದಿದ್ದರೆ, ನಿಮ್ಮ ನಂಬಿಕೆಯು ನಿರರ್ಥಕವಾಗುವುದು.

ನಾನು ಸ್ವೀಕರಿಸಿಕೊಂಡ ಸಂದೇಶವನ್ನು ನಾನು ನಿಮಗೆ ತಿಳಿಸಿದೆನು. ಆ ಸಂಗತಿಗಳು ಬಹಳ ಮುಖ್ಯವಾದುವುಗಳಾಗಿವೆ. ಪವಿತ್ರ ಗ್ರಂಥವು ಹೇಳುವಂತೆ, ಕ್ರಿಸ್ತನು ನಮ್ಮ ಪಾಪಗಳಿಗೋಸ್ಕರವಾಗಿ ಸತ್ತು ಹೂಳಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬಂದನು. ಬಳಿಕ ಕ್ರಿಸ್ತನು ಪೇತ್ರನಿಗೆ ಕಾಣಿಸಿಕೊಂಡನು. ಅನಂತರ ಹನ್ನೆರಡು ಮಂದಿ ಅಪೊಸ್ತಲರಿಗೆ ಕಾಣಿಸಿಕೊಂಡನು. ತರುವಾಯ, ಒಂದೇ ಸಮಯದಲ್ಲಿ ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರಿಗೆ ಕಾಣಿಸಿಕೊಂಡನು. ಈ ಸಹೋದರರಲ್ಲಿ ಬಹುಮಂದಿ ಇಂದಿನವರೆಗೂ ಬದುಕಿದ್ದಾರೆ. ಆದರೆ ಕೆಲವರು ಸತ್ತುಹೋದರು. ಬಳಿಕ ಕ್ರಿಸ್ತನು ಯಾಕೋಬನಿಗೆ ಕಾಣಿಸಿಕೊಂಡನು. ಅನಂತರ ಮತ್ತೊಮ್ಮೆ ಎಲ್ಲಾ ಅಪೊಸ್ತಲರಿಗೆ ಕಾಣಿಸಿಕೊಂಡನು. ಕಟ್ಟಕಡೆಗೆ, ಕ್ರಿಸ್ತನು, ದಿನ ತುಂಬುವ ಮೊದಲೇ ಹುಟ್ಟಿದಂತಿದ್ದ ನನಗೆ ಕಾಣಿಸಿಕೊಂಡನು.

ಉಳಿದೆಲ್ಲಾ ಅಪೊಸ್ತಲರು ನನಗಿಂತಲೂ ಶ್ರೇಷ್ಠರಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು. ಆದ್ದರಿಂದ ಅಪೊಸ್ತಲನೆಂದು ಕರೆಸಿಕೊಳ್ಳುವುದಕ್ಕೂ ನಾನು ಯೋಗ್ಯನಲ್ಲ. 10 ಆದರೆ, ದೇವರ ಕೃಪೆಯಿಂದ ನಾನು ಅಪೊಸ್ತಲನಾಗಿದ್ದೇನೆ. ಆತನು ನನಗೆ ತೋರಿದ ಕೃಪೆಯು ನಿಷ್ಛಲವಾಗಲಿಲ್ಲ. ಉಳಿದೆಲ್ಲ ಅಪೊಸ್ತಲರಿಗಿಂತ ನಾನು ಹೆಚ್ಚು ಕಷ್ಟಪಟ್ಟು ಸೇವೆ ಮಾಡಿದ್ದೇನೆ. (ಆದರೆ ಸೇವೆ ಮಾಡುತ್ತಿದ್ದವನು ನಿಜವಾಗಿಯೂ ನಾನಲ್ಲ ದೇವರ ಕೃಪೆಯೇ ನನ್ನೊಂದಿಗಿತ್ತು.) 11 ಆದ್ದರಿಂದ ನಾನು ಬೋಧನೆ ಮಾಡಿದೆನೊ ಅಥವಾ ಇತರ ಅಪೊಸ್ತಲರು ಬೋಧನೆ ಮಾಡಿದರೊ ಎಂಬುದು ಮುಖ್ಯವಲ್ಲ. ನಾವೆಲ್ಲರೂ ಒಂದೇ ಸಂದೇಶವನ್ನು ಬೋಧಿಸುತ್ತೇವೆ ಮತ್ತು ನೀವು ನಂಬಿರುವುದೂ ಅದನ್ನೇ.

ನಾವು ಪುನರುತ್ಥಾನ ಹೊಂದುವೆವು

12 ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ನಾವು ಬೋಧಿಸಿದ್ದೇವೆ. ಹೀಗಿರಲಾಗಿ, ಜನರಿಗೆ ಪುನರುತ್ಥಾನವಿಲ್ಲವೆಂದು ನಿಮ್ಮಲ್ಲಿ ಕೆಲವರು ಹೇಳುತ್ತಿರುವುದೇಕೆ? 13 ಜನರಿಗೆ ಪುನರುತ್ಥಾನವಿಲ್ಲದಿದ್ದರೆ ಕ್ರಿಸ್ತನು ಸಹ ಸತ್ತವರೊಳಗಿಂದ ಎದ್ದೇಬಂದಿಲ್ಲ. 14 ಕ್ರಿಸ್ತನು ಎದ್ದೇಬಂದಿಲ್ಲವಾದರೆ ನಮ್ಮ ಬೋಧನೆಗೂ ನಿಮ್ಮ ನಂಬಿಕೆಗೂ ಯಾವ ಬೆಲೆಯೂ ಇಲ್ಲ. 15 ಅಲ್ಲದೆ, ದೇವರ ಬಗ್ಗೆ ನಾವು ಸುಳ್ಳುಸಾಕ್ಷಿ ಹೇಳಿದಂತಾಗುವುದು. ಏಕೆಂದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಿದನೆಂದು ನಾವು ದೇವರ ಬಗ್ಗೆ ಬೋಧಿಸಿದೆವು. ಜನರು ಜೀವಂತವಾಗಿ ಎದ್ದುಬರದಿದ್ದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಲೇ ಇಲ್ಲ. 16 ಸತ್ತುಹೋದ ಜನರು ಎಬ್ಬಿಸಲ್ಪಡದಿದ್ದರೆ, ಕ್ರಿಸ್ತನು ಸಹ ಎಬ್ಬಿಸಲ್ಪಡಲೇ ಇಲ್ಲ. 17 ಕ್ರಿಸ್ತನು ಜೀವಂತವಾಗಿ ಎಬ್ಬಿಸಲ್ಪಟ್ಟಿಲ್ಲದಿದ್ದರೆ, ನಿಮ್ಮ ನಂಬಿಕೆಯು ನಿಷ್ಪ್ರಯೋಜಕವಾಗಿದೆ ಮತ್ತು ನೀವು ನಿಮ್ಮ ಪಾಪಗಳಿಂದ ಇನ್ನೂ ಅಪರಾಧಿಗಳಾಗಿದ್ದೀರಿ. 18 ಇದಲ್ಲದೆ ಕ್ರಿಸ್ತನಲ್ಲಿದ್ದು ಸತ್ತುಹೋದವರು ನಾಶವಾಗಿದ್ದಾರೆ. 19 ನಮಗೆ ಕ್ರಿಸ್ತನಲ್ಲಿರುವ ನಿರೀಕ್ಷೆಯು ಈ ಲೋಕಕ್ಕೆ ಮಾತ್ರ ಸೀಮಿತವಾಗಿದ್ದರೆ, ನಾವು ಬೇರೆಲ್ಲ ಜನರಿಗಿಂತಲೂ ದುಃಖಕ್ಕೆ ಪಾತ್ರರಾಗಿದ್ದೇವೆ.

20 ಆದರೆ ಕ್ರಿಸ್ತನು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ. ನಿದ್ರೆಹೋದವರಲ್ಲಿ ಅಂದರೆ ಸತ್ತುಹೋದ ಎಲ್ಲಾ ವಿಶ್ವಾಸಿಗಳಲ್ಲಿ ಆತನೇ ಪ್ರಥಮ ಫಲವಾದನು. 21 ಒಬ್ಬ ಮನುಷ್ಯನು (ಆದಾಮನು) ಮಾಡಿದ ಕಾರ್ಯದಿಂದಾಗಿ ಜನರು ಮರಣ ಹೊಂದುವಂತೆಯೇ ಒಬ್ಬ ಮನುಷ್ಯನ (ಕ್ರಿಸ್ತನ) ಮೂಲಕವಾಗಿಯೇ ಜನರು ಜೀವಂತವಾಗಿ ಎದ್ದುಬರುವರು. 22 ಆದಾಮನ ಸಂಬಂಧದಿಂದ ಎಲ್ಲರೂ ಸಾಯುತ್ತಾರೆ. ಇದೇರೀತಿ ಕ್ರಿಸ್ತನ ಸಂಬಂಧದಿಂದ ನಾವೆಲ್ಲರೂ ಮತ್ತೆ ಜೀವಂತರಾಗುತ್ತೇವೆ. 23 ಆದರೆ ಪ್ರತಿಯೊಬ್ಬನು ಕ್ರಮಬದ್ಧ ರೀತಿಯಲ್ಲಿ ಜೀವಂತವಾಗಿ ಎದ್ದುಬರುವನು. ಮೊಟ್ಟಮೊದಲನೆಯದಾಗಿ ಕ್ರಿಸ್ತನೇ ಎದ್ದುಬಂದನು. ಕ್ರಿಸ್ತನು ಮತ್ತೆ ಬರುವಾಗ ಕ್ರಿಸ್ತನಿಗೆ ಸೇರಿದ ಜನರು ಜೀವಂತವಾಗಿ ಎದ್ದುಬರುವರು. 24 ಅನಂತರ ಅಂತ್ಯ ಬರುವುದು. ಕ್ರಿಸ್ತನು ಎಲ್ಲಾ ಅಧಿಪತಿಗಳನ್ನು, ಅಧಿಕಾರಗಳನ್ನು ಮತ್ತು ಶಕ್ತಿಗಳನ್ನು ನಾಶಮಾಡುವನು. ಬಳಿಕ ಕ್ರಿಸ್ತನು ತಂದೆಯಾದ ದೇವರಿಗೆ ರಾಜ್ಯವನ್ನು ಕೊಡುವನು.

25 ದೇವರು ಎಲ್ಲಾ ಶತ್ರುಗಳನ್ನು ಕ್ರಿಸ್ತನಿಗೆ ಅಧೀನಗೊಳಿಸುವ ತನಕ ಕ್ರಿಸ್ತನು ಆಳಲೇಬೇಕು. 26 ನಾಶವಾಗುವ ಕಡೆಯ ಶತ್ರುವೆಂದರೆ ಮರಣವೇ. 27 “ದೇವರು ಸಮಸ್ತವನ್ನು ಆತನಿಗೆ ಅಧೀನಗೊಳಿಸುತ್ತಾನೆ”(A) ಎಂದು ಪವಿತ್ರಗ್ರಂಥವು ಹೇಳುತ್ತದೆ. “ಸಮಸ್ತವನ್ನು” ಕ್ರಿಸ್ತನಿಗೆ ಅಧೀನಗೊಳಿಸುತ್ತಾನೆಂದು ಹೇಳುವಾಗ, ಅದು ದೇವರನ್ನು ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಸಮಸ್ತವನ್ನು ಕ್ರಿಸ್ತನಿಗೆ ಅಧೀನಗೊಳಿಸಿದಾತನು ದೇವರೇ. 28 ಸಮಸ್ತವು ತನ್ನ ಅಧೀನಕ್ಕೆ ಬಂದ ಮೇಲೆ, ಕ್ರಿಸ್ತನು ತನ್ನನ್ನೇ ದೇವರಿಗೆ ಅಧೀನಪಡಿಸಿಕೊಳ್ಳುವನು. ಸಮಸ್ತವನ್ನು ಕ್ರಿಸ್ತನಿಗೆ ಅಧೀನಪಡಿಸಿದಾತನು ದೇವರೇ. ಹೀಗೆ ದೇವರು ಸಮಸ್ತಕ್ಕೂ ಸರ್ವಾಧಿಪತಿಯಾಗುವನು.[a]

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International