New Testament in a Year
22 ಜನರು ಪೌಲ ಸೀಲರಿಗೆ ವಿರೋಧವಾಗಿದ್ದರು. ಆಗ ನಾಯಕರು ಪೌಲ ಸೀಲರ ಬಟ್ಟೆಗಳನ್ನು ಹರಿದುಹಾಕಿಸಿ ಅವರಿಬ್ಬರಿಗೂ ಕೋಲುಗಳಿಂದ ಬಲವಾಗಿ ಹೊಡೆಸಿ, ಸೆರೆಮನೆಗೆ ಹಾಕಿಸಿದರು. 23 ಬಳಿಕ ಸೆರೆಮನೆಯ ಅಧಿಕಾರಿಗೆ, “ಅವರನ್ನು ಬಹು ಎಚ್ಚರಿಕೆಯಿಂದ ಕಾಯಿರಿ!” ಎಂದು ಆಜ್ಞಾಪಿಸಿದರು. 24 ಆದ್ದರಿಂದ ಸೆರೆಮನೆಯ ಅಧಿಕಾರಿಯು ಅವರನ್ನು ಸೆರೆಮನೆಯ ಒಳಕೋಣೆಗೆ ಹಾಕಿಸಿ, ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಿಗಿಸಿದನು.
25 ಸುಮಾರು ಮಧ್ಯರಾತ್ರಿಯಲ್ಲಿ ಪೌಲ ಸೀಲರು ಪ್ರಾರ್ಥನೆ ಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಾ ಇದ್ದರು. ಇತರ ಕೈದಿಗಳೆಲ್ಲರೂ ಆಲಿಸುತ್ತಿದ್ದರು. 26 ಇದ್ದಕ್ಕಿದ್ದಂತೆ ದೊಡ್ಡ ಭೂಕಂಪವಾಯಿತು. ಭೀಕರವಾಗಿದ್ದ ಅದು ಸೆರೆಮನೆಯ ಅಡಿಪಾಯವನ್ನೇ ನಡುಗಿಸಿತು. ಆಗ ಸೆರೆಮನೆಯ ಬಾಗಿಲುಗಳೆಲ್ಲಾ ತೆರೆದುಕೊಂಡವು. ಎಲ್ಲಾ ಕೈದಿಗಳ ಸರಪಣಿಗಳು ಕಳಚಿಬಿದ್ದವು. 27 ಆಗ ಸೆರೆಮನೆಯ ಅಧಿಕಾರಿಗೆ ಎಚ್ಚರವಾಯಿತು. ಸೆರೆಮನೆಯ ಬಾಗಿಲುಗಳು ತೆರೆದುಕೊಂಡಿರುವುದನ್ನು ಕಂಡು ಈಗಾಗಲೇ ಕೈದಿಗಳು ತಪ್ಪಿಸಿಕೊಂಡಿದ್ದಾರೆಂದು ಅವನು ಭಾವಿಸಿದನು. ಆದ್ದರಿಂದ ಅವನು ತನ್ನ ಕತ್ತಿಯನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿಯೇ 28 ಪೌಲನು ಅವನಿಗೆ, “ಹಾನಿ ಮಾಡಿಕೊಳ್ಳಬೇಡ! ನಾವೆಲ್ಲಾ ಇಲ್ಲೇ ಇದ್ದೇವೆ!” ಎಂದು ಕೂಗಿ ಹೇಳಿದನು.
29 ಸೆರೆಮನೆಯ ಅಧಿಕಾರಿಯು ಒಬ್ಬನಿಗೆ ದೀಪವನ್ನು ತರಬೇಕೆಂದು ಹೇಳಿದನು. ಬಳಿಕ ಅವನು ಒಳಗೆ ಓಡಿಹೋದನು. ಅವನು ನಡುಗುತ್ತಾ ಪೌಲ ಸೀಲರ ಮುಂದೆ ಕುಸಿದುಬಿದ್ದನು. 30 ಬಳಿಕ ಅವನು ಅವರನ್ನು ಹೊರಗೆ ಕರೆದುಕೊಂಡು ಬಂದು, “ಸ್ವಾಮಿಗಳೇ, ನಾನು ರಕ್ಷಣೆ ಹೊಂದಬೇಕಾದರೆ ಏನು ಮಾಡಬೇಕು?” ಎಂದು ಕೇಳಿದನು.
31 ಅವರು ಅವನಿಗೆ, “ಪ್ರಭು ಯೇಸುವಿನಲ್ಲಿ ನಂಬಿಕೆಯಿಡು. ಆಗ ನೀನು ರಕ್ಷಣೆ ಹೊಂದುವೆ ಮತ್ತು ನಿನ್ನ ಮನೆಯವರೆಲ್ಲರೂ ರಕ್ಷಣೆ ಹೊಂದುವರು” ಎಂದು ಹೇಳಿ, 32 ಅವನಿಗೂ ಅವನ ಮನೆಯವರೆಲ್ಲರಿಗೂ ಪ್ರಭುವಿನ ಸಂದೇಶವನ್ನು ತಿಳಿಸಿದರು. 33 ಆಗ ಮಧ್ಯರಾತ್ರಿ ಕಳೆದಿತ್ತು. ಆದರೂ ಅವನು ಪೌಲ ಸೀಲರನ್ನು ಕರೆದೊಯ್ದು ಅವರ ಗಾಯಗಳನ್ನು ತೊಳೆದನು. ಬಳಿಕ ಅವನು ಮತ್ತು ಅವನ ಮನೆಯವರೆಲ್ಲರೂ ದೀಕ್ಷಾಸ್ನಾನ ಮಾಡಿಸಿಕೊಂಡರು. 34 ಇದಾದ ಮೇಲೆ ಅವನು ಪೌಲ ಸೀಲರನ್ನು ಮನೆಗೆ ಕರೆದೊಯ್ದು ಅವರಿಗೆ ಊಟಮಾಡಿಸಿದನು. ಆ ಜನರೆಲ್ಲರೂ ಪ್ರಭುವಿನಲ್ಲಿ ನಂಬಿಕೆ ಇಟ್ಟದ್ದರಿಂದ ಬಹ ಸಂತೋಷಭರಿತರಾದರು.
35 ಮರುದಿನ ಮುಂಜಾನೆ ನಾಯಕರು ಸೆರೆಮನೆಯ ಅಧಿಕಾರಿಗೆ, “ಈ ಜನರನ್ನು ಬಿಟ್ಟುಬಿಡು!” ಎಂದು ಕೆಲವು ಸೈನಿಕರ ಮೂಲಕ ಹೇಳಿ ಕಳುಹಿಸಿದರು.
36 ಸೆರೆಮನೆಯ ಅಧಿಕಾರಿಯು ಪೌಲನಿಗೆ, “ನಮ್ಮ ನಾಯಕರು ನಿಮ್ಮನ್ನು ಬಿಡುಗಡೆ ಮಾಡಬೇಕೆಂದು ಸೈನಿಕರ ಮೂಲಕ ಹೇಳಿ ಕಳುಹಿಸಿದ್ದಾರೆ. ಈಗ ನೀವು ಸಮಾಧಾನದಿಂದ ಹೋಗಿರಿ” ಎಂದು ಹೇಳಿದನು.
37 ಆದರೆ ಪೌಲನು, “ನಾವು ಏನು ತಪ್ಪು ಮಾಡಿದ್ದೇವೆಂಬುದನ್ನು ನಿಮ್ಮ ನಾಯಕರು ನಿರೂಪಿಸದೆ ನಮ್ಮನ್ನು ಜನರ ಎದುರಿನಲ್ಲಿ ಹೊಡೆಸಿ ಸೆರೆಮನೆಗೆ ಹಾಕಿಸಿದರು. ನಾವು ರೋಮಿನ ಪ್ರಜೆಗಳು. ಆದ್ದರಿಂದ ನಮಗೂ ಹಕ್ಕುಗಳಿವೆ. ಈಗ ಅವರು ನಮ್ಮನ್ನು ಗೋಪ್ಯವಾಗಿ ಬಿಡುಗಡೆ ಮಾಡಬೇಕೆಂದಿರುವರೇ? ಇಲ್ಲ! ನಾಯಕರೇ ಬಂದು ನಮ್ಮನ್ನು ಹೊರಗೆ ಕರೆದುಕೊಂಡು ಹೋಗಬೇಕು!” ಎಂದು ಹೇಳಿದನು.
38 ಆ ಸೈನಿಕರು ನಾಯಕರ ಬಳಿಗೆ ಹೋಗಿ ಪೌಲನು ಹೇಳಿದ್ದನ್ನೆಲ್ಲ ತಿಳಿಸಿದರು. ಪೌಲ ಸೀಲರು ರೋಮಿನ ಪ್ರಜೆಗಳೆಂಬುದನ್ನು ಕೇಳಿದ ಕೂಡಲೇ ನಾಯಕರಿಗೆ ಭಯವಾಯಿತು. 39 ಆದ್ದರಿಂದ ಅವರು ಪೌಲ ಸೀಲರ ಬಳಿಗ ಬಂದು ಕ್ಷಮೆ ಕೇಳಿದರು. ಅಲ್ಲದೆ ಅವರನ್ನು ಸೆರೆಮನೆಯಿಂದ ಹೊರಗೆ ಕರೆದುಕೊಂಡು ಹೋದರು ಮತ್ತು ತಮ್ಮ ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಕೇಳಿಕೊಂಡರು. 40 ಆದರೆ ಪೌಲ ಸೀಲರು ಸೆರೆಮನೆಯಿಂದ ಹೊರಟು ಲಿಡಿಯಾಳ ಮನೆಗೆ ಹೋದರು. ಅಲ್ಲಿ ಅವರು ಕೆಲವು ವಿಶ್ವಾಸಿಗಳನ್ನು ಕಂಡು ಅವರನ್ನು ಸಂತೈಸಿದರು. ಬಳಿಕ ಪೌಲ ಸೀಲರು ಅಲ್ಲಿಂದ ಹೊರಟುಹೋದರು.
Kannada Holy Bible: Easy-to-Read Version. All rights reserved. © 1997 Bible League International