Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 13:26-52

26 “ನನ್ನ ಸಹೋದರರೇ, ಅಬ್ರಹಾಮನ ಕುಟುಂಬದ ಪುತ್ರರೇ, ನಿಜದೇವರನ್ನು ಆರಾಧಿಸುತ್ತಿರುವ ಯೆಹೂದ್ಯರಲ್ಲದವರೇ, ಕೇಳಿರಿ! ಈ ರಕ್ಷಣೆಯ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ. 27 ಜೆರುಸಲೇಮಿನಲ್ಲಿ ವಾಸವಾಗಿದ್ದ ಯೆಹೂದ್ಯರು ಮತ್ತು ಯೆಹೂದ್ಯನಾಯಕರು ಯೇಸುವೇ ರಕ್ಷಕನೆಂಬುದನ್ನು ಅರ್ಥಮಾಡಿಕೊಳ್ಳಲಿಲ್ಲ. ಪ್ರವಾದಿಗಳು ಯೇಸುವಿನ ಬಗ್ಗೆ ಬರೆದಿದ್ದ ಮಾತುಗಳನ್ನು ಪ್ರತಿ ಸಬ್ಬತ್‌ದಿನದಂದು ಓದಲಾಗುತ್ತಿತ್ತು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ. ಆ ಯೆಹೂದ್ಯರು ಯೇಸುವನ್ನು ಅಪರಾಧಿಯೆಂದು ತೀರ್ಪುಮಾಡಿದರು. ಹೀಗೆ ಮಾಡುವುದರ ಮೂಲಕವಾಗಿ ಅವರು ಪ್ರವಾದಿಗಳ ನುಡಿಗಳನ್ನು ನೆರವೇರಿಸಿದರು! 28 ಯೇಸು ಸಾಯಲೇಬೇಕೆಂಬುದಕ್ಕೆ ಸರಿಯಾದ ಕಾರಣವನ್ನು ಅವರು ಕಂಡುಹಿಡಿಯಲಾಗದಿದ್ದರೂ ಯೇಸುವನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು.

29 “ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಯೇಸುವಿಗೆ ಸಂಭವಿಸಬೇಕಾಗಿದ್ದ ಕೆಟ್ಟವುಗಳನ್ನೆಲ್ಲ ಯೆಹೂದ್ಯರು ಆತನಿಗೆ ಮಾಡಿದರು. ಬಳಿಕ ಅವರು ಯೇಸುವನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಯಲ್ಲಿಟ್ಟರು. 30 ಆದರೆ ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು! 31 ಇದಾದ ಮೇಲೆ ಗಲಿಲಾಯದಿಂದ ಯೇಸುವಿನೊಂದಿಗೆ ಜೆರುಸಲೇಮಿಗೆ ಬಂದಿದ್ದವರು, ಅನೇಕ ದಿನಗಳವರೆಗೆ ಆತನನ್ನು ನೋಡಿದರು. ಈಗ ಅವರೇ ಜನರಿಗೆ ಸಾಕ್ಷಿಗಳಾಗಿದ್ದಾರೆ.

32 “ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದ ವಿಷಯವಾದ ಸುವಾರ್ತೆಯನ್ನು ನಾವು ನಿಮಗೆ ಹೇಳುತ್ತೇವೆ. 33 ನಾವು ಅವರ ಸಂತತಿಯವರಾಗಿದ್ದೇವೆ. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವುದರ ಮೂಲಕ ಆ ವಾಗ್ದಾನವನ್ನು ನಮಗಾಗಿ ನೆರವೇರಿಸಿದ್ದಾನೆ. ಇದರ ಬಗ್ಗೆ ಎರಡನೆ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ:

‘ನೀನೇ ನನ್ನ ಮಗನು.
    ಇಂದೇ ನಾನು ನಿನ್ನನ್ನು ಪಡೆದೆನು.’(A)

34 ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಸಮಾಧಿಗೆ ಸೇರಿ ಕೊಳೆಯುವುದಿಲ್ಲ ಎಂಬ ವಿಷಯದಲ್ಲಿ ದೇವರು ಇಂತೆಂದಿದ್ದಾನೆ:

‘ನಾನು ದಾವೀದನಿಗೆ ಮಾಡಿದ ಸತ್ಯವೂ ಪವಿತ್ರವೂ
    ಆದ ವಾಗ್ದಾನಗಳನ್ನು ನಿನಗೆ ಕೊಡುತ್ತೇನೆ.’(B)

35 ಆದರೆ ಮತ್ತೊಂದು ಸ್ಥಳದಲ್ಲಿ ದೇವರು ಹೀಗೆನ್ನುತ್ತಾನೆ:

‘ನೀನು ನಿನ್ನ ಪರಿಶುದ್ಧನ ದೇಹವನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.’(C)

36 “ದಾವೀದನು ತನ್ನ ಜೀವಮಾನಕಾಲದಲ್ಲಿ ದೇವರ ಚಿತ್ತಕ್ಕನುಸಾರವಾಗಿ ಬಾಳಿದನು. ಬಳಿಕ ಅವನು ಸತ್ತುಹೋದನು. ದಾವೀದನನ್ನು ಅವನ ಪಿತೃಗಳೊಂದಿಗೆ ಸಮಾಧಿಮಾಡಲಾಯಿತು. ಅವನ ದೇಹ ಸಮಾಧಿಯಲ್ಲಿ ಕೊಳೆತುಹೋಯಿತು! 37 ಆದರೆ ದೇವರಿಂದ ಜೀವಂತವಾಗಿ ಎಬ್ಬಿಸಲ್ಪಟ್ಟ ಯೇಸುವಿನ ದೇಹ ಸಮಾಧಿಯಲ್ಲಿ ಕೊಳೆಯಲ್ಪಡಲಿಲ್ಲ. 38-39 ಸಹೋದರರೇ, ಇದು ನಿಮಗೆ ತಿಳಿದಿರಲಿ: ಆತನ ಮೂಲಕವಾಗಿ ನಿಮ್ಮ ಪಾಪಗಳಿಗೆ ಕ್ಷಮೆ ದೊರೆಯುತ್ತದೆ. ಮೋಶೆಯ ಧರ್ಮಶಾಸ್ತ್ರಕ್ಕೆ, ನಿಮ್ಮನ್ನು ನಿಮ್ಮ ಪಾಪಗಳಿಂದ ಬಿಡಿಸಲಾಗಲಿಲ್ಲ. ಆದರೆ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನು ಆತನ ಮೂಲಕವಾಗಿ ತನ್ನ ಎಲ್ಲಾ ಪಾಪಗಳಿಂದ ಬಿಡುಗಡೆಯಾಗುವನು. 40 ಆದ್ದರಿಂದ ಪ್ರವಾದಿಗಳು ತಿಳಿಸಿರುವ ಈ ಕೆಲವು ಸಂಗತಿಗಳು ನಿಮ್ಮಲ್ಲಿ ನಿಜವಾಗದಂತೆ ಎಚ್ಚರಿಕೆಯಾಗಿರಿ:

41 ‘ಅಪಹಾಸ್ಯ ಮಾಡುವವರೇ,
    ಆಶ್ಚರ್ಯಪಡುತ್ತಾ ನಾಶವಾಗಿಹೋಗಿರಿ.
ನೀವು ನಂಬಲೊಲ್ಲದ ಒಂದು ಕಾರ್ಯವನ್ನು
    ನಾನು ಮಾಡುವೆನು.
ಬೇರೊಬ್ಬನು ನಿಮಗೆ ಅದನ್ನು ವಿವರಿಸಿದರೂ
    ನೀವು ನಂಬುವುದಿಲ್ಲ!’”(D)

42 ಪೌಲ ಮತ್ತು ಬಾರ್ನಬ ಸಭಾಮಂದಿರದಿಂದ ಹೋಗುವಾಗ, ಈ ಸಂಗತಿಗಳ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿಸುವುದಕ್ಕಾಗಿ ಮುಂದಿನ ಸಬ್ಬತ್‌ದಿನದಂದು ಮತ್ತೆ ಬರಬೇಕೆಂದು ಜನರು ಅವರನ್ನು ಕೇಳಿಕೊಂಡರು. 43 ಸಭೆಯು ಮುಗಿದ ಮೇಲೆ ಅನೇಕ ಯೆಹೂದ್ಯರು ಪೌಲ ಬಾರ್ನಬರನ್ನು ಆ ಸ್ಥಳದಿಂದ ಹಿಂಬಾಲಿಸಿದರು. ಯೆಹೂದ್ಯರ ಧರ್ಮಕ್ಕೆ ಸೇರಿಕೊಂಡಿದ್ದ ಅನೇಕ ಅನ್ಯಮತೀಯರೂ ಆ ಯೆಹೂದ್ಯರೊಂದಿಗಿದ್ದರು. ಮತಾಂತರಗೊಂಡಿದ್ದ ಇವರು ಸಹ ನಿಜದೇವರನ್ನು ಆರಾಧಿಸುತ್ತಿದ್ದರು. ಪೌಲ ಬಾರ್ನಬರು ಅವರೊಂದಿಗೆ ಮಾತಾಡಿ, ದೇವರ ಕೃಪೆಯಲ್ಲೇ ಭರವಸವಿಟ್ಟು ಮುಂದುವರಿಯಬೇಕೆಂದು ಪ್ರೋತ್ಸಾಹಪಡಿಸಿದರು.

44 ಮುಂದಿನ ಸಬ್ಬತ್‌ದಿನದಂದು, ಪ್ರಭುವಿನ ವಾಕ್ಯವನ್ನು ಕೇಳುವುದಕ್ಕಾಗಿ ಬಹುಮಟ್ಟಿಗೆ ನಗರದ ಜನರೆಲ್ಲರೂ ನೆರೆದುಬಂದರು. 45 ಇದನ್ನು ಕಂಡ ಯೆಹೂದ್ಯರಿಗೆ ಬಹಳ ಅಸೂಯೆಯಾಯಿತು. ಅವರು ಪೌಲನ ಮಾತುಗಳನ್ನು ಕಟುವಾಗಿ ದೂಷಿಸಿ ಅವುಗಳಿಗೆ ವಿರೋಧವಾಗಿ ವಾದಿಸಿದರು. 46 ಆದರೆ ಪೌಲ ಬಾರ್ನಬರು ಬಹು ಧೈರ್ಯದಿಂದ ಮಾತಾಡಿ, “ನಾವು ದೇವರ ಸಂದೇಶವನ್ನು ಯೆಹೂದ್ಯರಾದ ನಿಮಗೆ ಮೊದಲು ಹೇಳಬೇಕು. ಆದರೆ ನೀವು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ಎಣಿಸಿಕೊಂಡು ತಿರಸ್ಕರಿಸುತ್ತಿದ್ದೀರಿ. ಆದ್ದರಿಂದ ನಾವು ಅನ್ಯಧರ್ಮದವರ ಬಳಿಗೆ ಹೋಗುತ್ತೇವೆ! 47 ಏಕೆಂದರೆ ಪ್ರಭುವು ನಮಗೆ ಕೊಟ್ಟ ಆಜ್ಞೆ ಇಂತಿದೆ:

‘ಲೋಕದ ಕಟ್ಟಕಡೆಯಲ್ಲಿರುವ ಜನರೆಲ್ಲರಿಗೂ ನೀನು ರಕ್ಷಕನಾಗಿರಬೇಕೆಂದು
    ನಾನು ನಿನ್ನನ್ನು ಇತರ ಜನಾಂಗಗಳಿಗೆ ಬೆಳಕನ್ನಾಗಿ ಮಾಡಿದ್ದೇನೆ.’(E)

48 ಪೌಲನ ಈ ಮಾತುಗಳನ್ನು ಕೇಳಿದ ಯೆಹೂದ್ಯರಲ್ಲದ ಜನರು ಬಹು ಸಂತೋಷಪಟ್ಟು ಪ್ರಭುವಿನ ಸಂದೇಶಕ್ಕಾಗಿ ಸ್ತುತಿಸಿದರು. ನಿತ್ಯಜೀವವನ್ನು ಹೊಂದಿಕೊಳ್ಳಲು ಆಯ್ಕೆಯಾಗಿದ್ದವರೆಲ್ಲರೂ ನಂಬಿಕೊಂಡರು.

49 ಪ್ರಭುವಿನ ಸಂದೇಶವನ್ನು ಆ ನಾಡಿನಲ್ಲೆಲ್ಲಾ ಸಾರಲಾಯಿತು. 50 ಆದರೆ ಯೆಹೂದ್ಯರು ಕೆಲವು ಧಾರ್ಮಿಕ ಸ್ತ್ರೀಯರನ್ನೂ ನಗರದ ನಾಯಕರನ್ನೂ ಪ್ರಚೋಧಿಸಿ, ಪೌಲ ಬಾರ್ನಬರ ಮೇಲೆ ಅವರು ಕೋಪಗೊಳ್ಳುವಂತೆಯೂ ಅವರಿಗೆ ವಿರೋಧಿಗಳಾಗುವಂತೆಯೂ ಮಾಡಿ ಪೌಲ ಬಾರ್ನಬರನ್ನು ಪಟ್ಟಣದಿಂದ ಹೊರಗಟ್ಟಿಸಿದರು. 51 ಆದ್ದರಿಂದ ಪೌಲ ಬಾರ್ನಬರು ಅವರ ವಿರೋಧವಾಗಿ ತಮ್ಮ ಕಾಲಿನ ಧೂಳನ್ನು ಝಾಡಿಸಿ,[a] ಇಕೋನಿಯಾ ಪಟ್ಟಣಕ್ಕೆ ಹೋದರು. 52 ಆದರೆ ಯೇಸುವಿನ ಶಿಷ್ಯರು ಸಂತೋಷವಾಗಿದ್ದರು ಮತ್ತು ಪವಿತ್ರಾತ್ಮಭರಿತರಾಗಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International