Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಹಾನ 1:29-51

ಯೇಸು—ದೇವರ ಕುರಿಮರಿ

29 ಮರುದಿನ ಯೋಹಾನನು, ತನ್ನ ಬಳಿಗೆ ಬರುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕಾಗಿ ದೇವರು ನೇಮಿಸಿದ ಕುರಿಮರಿ. ಆತನು ಈ ಲೋಕದ ಪಾಪಗಳನ್ನು ಪರಿಹರಿಸುವನು. 30 ‘ನನ್ನ ನಂತರ ಒಬ್ಬ ವ್ಯಕ್ತಿಯು ಬರುವನು. ಆತನು ನನಗಿಂತಲೂ ದೊಡ್ಡವನು. ಏಕೆಂದರೆ ಆತನು ನನಗಿಂತಲೂ ಮೊದಲೇ ಇದ್ದವನು ಮತ್ತು ಯಾವಾಗಲೂ ಇದ್ದವನು’ ಎಂದು ನಾನು ಹೇಳುತ್ತಿದ್ದುದು ಈತನ ವಿಷಯವಾಗಿಯೇ. 31 ಆತನು ಯಾರೆಂಬುದು ನನಗೂ ಗೊತ್ತಿರಲಿಲ್ಲ. ಆದರೆ ಆತನನ್ನು ಇಸ್ರೇಲರಿಗೆ ತಿಳಿಸುವುದಕ್ಕೋಸ್ಕರ ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೆನು” ಎಂದು ಹೇಳಿದನು.

32-33 ಇದಲ್ಲದೆ ಯೋಹಾನನು ಸಾಕ್ಷಿಕೊಟ್ಟು ಹೇಳಿದ್ದೇನೆಂದರೆ, “ಆತನು ಯಾರೆಂದು ನನಗೂ ಗೊತ್ತಿರಲಿಲ್ಲ. ಆದರೆ ಜನರಿಗೆ ದೀಕ್ಷಾಸ್ನಾನ ಕೊಡಲು ನನ್ನನ್ನು ಕಳುಹಿಸಿದಾತನು ನನಗೆ, ‘ಪವಿತ್ರಾತ್ಮನು ಇಳಿದುಬಂದು ಒಬ್ಬ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವೆ. ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವವನು ಆ ವ್ಯಕ್ತಿಯೇ’ ಎಂದು ಹೇಳಿದ್ದನು. ಇದು ನೆರವೇರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪವಿತ್ರಾತ್ಮನು ಪರಲೋಕದಿಂದ ಪಾರಿವಾಳದ ರೂಪದಲ್ಲಿ ಇಳಿದುಬಂದು ಆತನ (ಯೇಸುವಿನ) ಮೇಲೆ ನೆಲಸುವುದನ್ನು ನಾನು ನೋಡಿದೆನು. 34 ಆದ್ದರಿಂದ ಆತನೇ (ಯೇಸುವೇ) ದೇವರ ಮಗನೆಂದು ನಾನು ಜನರಿಗೆ ತಿಳಿಸುವೆನು” ಎಂದನು.

ಯೇಸುವಿನ ಪ್ರಥಮ ಶಿಷ್ಯರು

35 ಮರುದಿನ ಯೋಹಾನನು ತನ್ನ ಇಬ್ಬರು ಶಿಷ್ಯರೊಂದಿಗೆ ಇದ್ದಾಗ, 36 ಸಮೀಪದಲ್ಲಿ ನಡೆದುಹೋಗುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕೆ ದೇವರು ನೇಮಿಸಿದ ಕುರಿಮರಿ!” ಎಂದು ಹೇಳಿದನು.

37 ಯೋಹಾನನ ಈ ಮಾತನ್ನು ಕೇಳಿದ ಆ ಇಬ್ಬರು ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. 38 ಯೇಸು ಹಿಂತಿರುಗಿ ನೋಡಿ, “ನಿಮಗೇನು ಬೇಕು?” ಎಂದು ಕೇಳಿದನು.

ಆ ಇಬ್ಬರು, “ರಬ್ಬಿ, ನೀನು ಎಲ್ಲಿ ಇಳಿದುಕೊಂಡಿರುವೆ?” ಎಂದು ಕೇಳಿದರು. (“ರಬ್ಬಿ” ಅಂದರೆ “ಗುರು” ಎಂದರ್ಥ.)

39 ಯೇಸು, “ನನ್ನೊಂದಿಗೆ ಬನ್ನಿ, ಆಗ ನೀವೇ ನೋಡುವಿರಿ” ಎಂದು ಹೇಳಿದನು. ಆದ್ದರಿಂದ ಆ ಇಬ್ಬರು ಹೋಗಿ ಯೇಸು ಇಳಿದುಕೊಂಡಿದ್ದ ಸ್ಥಳವನ್ನು ನೋಡಿದರು. ಆ ದಿನ ಅವರು ಅಲ್ಲಿಯೇ ಆತನೊಂದಿಗೆ ಇದ್ದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು.

40 ಈ ಇಬ್ಬರು ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು. ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಇವರಲ್ಲಿ ಒಬ್ಬನಾಗಿದ್ದನು. 41 ಮೊದಲನೆಯದಾಗಿ, ಅವನು ತನ್ನ ಅಣ್ಣನಾದ ಸೀಮೋನನನ್ನು ಕಾಣಲು ಹೋಗಿ ಅವನಿಗೆ, “ನಾವು ಮೆಸ್ಸೀಯನನ್ನು ಕಂಡುಕೊಂಡೆವು” ಎಂದು ಹೇಳಿದನು. (“ಮೆಸ್ಸೀಯ” ಅಂದರೆ “ಕ್ರಿಸ್ತನು” ಎಂದರ್ಥ.)

42 ಅವನು ಸೀಮೋನನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಸೀಮೋನನ ಕಡೆಗೆ ನೋಡಿ, “ಯೋಹಾನನ ಮಗನಾದ ನಿನ್ನ ಹೆಸರು ಸೀಮೋನ. ನೀನು ಕೇಫನೆಂದು ಕರೆಸಿಕೊಳ್ಳುವೆ” ಎಂದು ಹೇಳಿದನು. (“ಕೇಫ” ಅಂದರೆ “ಪೇತ್ರ” ಎಂದರ್ಥ).

43 ಮರುದಿನ ಯೇಸು ಗಲಿಲಾಯಕ್ಕೆ ಹೋಗಲು ನಿರ್ಧರಿಸಿದನು. ಯೇಸು ಫಿಲಿಪ್ಪನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 44 ಅಂದ್ರೆಯ ಮತ್ತು ಪೇತ್ರರಂತೆ ಫಿಲಿಪ್ಪನು ಸಹ ಬೆತ್ಸಾಯಿದ ಎಂಬ ಊರಿನವನಾಗಿದ್ದನು. 45 ಫಿಲಿಪ್ಪನು ನತಾನಿಯೇಲನನ್ನು ಕಂಡು ಅವನಿಗೆ, “ಯಾವನ ವಿಷಯದಲ್ಲಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನನ್ನು ನಾವು ಕಂಡುಕೊಂಡೆವು. ಆತನ ಹೆಸರು ಯೇಸು. ಆತನು ಯೋಸೇಫನ ಮಗನು. ಆತನು ನಜರೇತಿನವನು” ಎಂದು ಹೇಳಿದನು.

46 ಆದರೆ ನತಾನಿಯೇಲನು ಫಿಲಿಪ್ಪನಿಗೆ, “ನಜರೇತಿನಿಂದ ಒಳ್ಳೆಯದೇನಾದರೂ ಬರುವುದೇ?” ಎಂದು ಕೇಳಿದನು.

ಫಿಲಿಪ್ಪನು, “ಬಂದು ನೋಡು” ಎಂದು ಉತ್ತರಕೊಟ್ಟನು.

47 ಯೇಸು ತನ್ನ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡು ಅವನ ಬಗ್ಗೆ, “ಇವನು ನಿಜವಾದ ಇಸ್ರೇಲ. ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು.

48 ನತಾನಿಯೇಲನು, “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಕೇಳಿದನು.

ಯೇಸು, “ಫಿಲಿಪ್ಪನು ನನ್ನ ಬಗ್ಗೆ ನಿನಗೆ ತಿಳಿಸುವುದಕ್ಕಿಂತ ಮೊದಲೇ ನೀನು ಅಂಜೂರದ ಮರದ ಕೆಳಗಿದ್ದಾಗ ನಾನು ನಿನ್ನನ್ನು ನೋಡಿದೆನು” ಎಂದು ಹೇಳಿದನು.

49 ಆಗ ನತಾನಿಯೇಲನು ಯೇಸುವಿಗೆ, “ಗುರುವೇ, ನೀನೇ ದೇವರ ಮಗನು. ನೀನೇ ಇಸ್ರೇಲರ ರಾಜ” ಎಂದು ಹೇಳಿದನು.

50 ಯೇಸು ನತಾನಿಯೇಲನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ನೋಡಿದೆನೆಂದು ನಾನು ನಿನಗೆ ಹೇಳಿದ್ದರಿಂದ ನೀನು ನನ್ನನ್ನು ನಂಬುವೆ. ಆದರೆ ಅದಕ್ಕಿಂತಲೂ ಹೆಚ್ಚು ದೊಡ್ಡ ಕಾರ್ಯಗಳನ್ನು ನೀನು ನೋಡುವೆ!” ಎಂದು ಹೇಳಿದನು. 51 ಅದಲ್ಲದೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ ದೇವದೂತರುಗಳು ಏರಿಹೋಗುವುದನ್ನೂ ಕೆಳಗೆ ಇಳಿದುಬರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International