Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 7:1-21

ಸ್ತೆಫನನ ಪ್ರಸಂಗ

ಪ್ರಧಾನಯಾಜಕನು ಸ್ತೆಫನನಿಗೆ, “ಈ ಸಂಗತಿಗಳು ನಿಜವೋ?” ಎಂದು ಕೇಳಿದನು. ಪ್ರತ್ಯುತ್ತರವಾಗಿ ಅವನು ಹೀಗೆಂದನು: “ನನ್ನ ಯೆಹೂದ್ಯತಂದೆಗಳೇ, ಸಹೋದರರೇ, ನನಗೆ ಕಿವಿಗೊಡಿರಿ. ನಮ್ಮ ಪಿತೃವಾದ ಅಬ್ರಹಾಮನಿಗೆ ನಮ್ಮ ಪ್ರಭಾವಸ್ವರೂಪನಾದ ದೇವರು ಕಾಣಸಿಕೊಂಡನು. ಅಬ್ರಹಾಮನು ಹಾರಾನಿನಲ್ಲಿ ವಾಸಮಾಡುವ ಮೊದಲು ಮೆಸಪೊಟೇಮಿಯದಲ್ಲಿದ್ದನು. ದೇವರು ಅಬ್ರಹಾಮನಿಗೆ, ‘ನಿನ್ನ ದೇಶವನ್ನೂ ನಿನ್ನ ಜನರನ್ನೂ ಬಿಟ್ಟು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು’(A) ಎಂದು ಹೇಳಿದನು.

“ಆದ್ದರಿಂದ ಅಬ್ರಹಾಮನು ಖಾಲ್ದೆಯ[a] ದೇಶವನ್ನು ಬಿಟ್ಟು ಹಾರಾನಿನಲ್ಲಿ ವಾಸಿಸಲು ಹೋದನು. ಅಬ್ರಹಾಮನ ತಂದೆ ಸತ್ತಮೇಲೆ ದೇವರು ಅವನನ್ನು ಈಗ ನೀವು ವಾಸಿಸುತ್ತಿರುವ ಈ ಸ್ಥಳಕ್ಕೆ ಕಳುಹಿಸಿದನು. ಆದರೆ ದೇವರು ಅಬ್ರಹಾಮನಿಗೆ ಇಲ್ಲಿ ಯಾವ ಭೂಮಿಯನ್ನೂ ಕೊಡಲಿಲ್ಲ. ದೇವರು ಅವನಿಗೆ ಒಂದು ಅಡಿ ಸ್ಥಳವನ್ನೂ ಕೊಡಲಿಲ್ಲ. ಆದರೆ ಮುಂದಿನ ಕಾಲದಲ್ಲಿ ಈ ದೇಶವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವುದಾಗಿ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದನು. (ಅಬ್ರಹಾಮನಿಗೆ ಮಕ್ಕಳೇ ಇಲ್ಲದಿದ್ದಾಗ ಇದಾಯಿತು.)

“ದೇವರು ಅವನಿಗೆ, ‘ನಿನ್ನ ಸಂತಾನದವರು ಬೇರೊಂದು ದೇಶದಲ್ಲಿ ವಾಸಿಸುವರು. ಅವರು ಪರದೇಶಿಗಳಾಗಿರುವರು. ಅಲ್ಲಿಯ ಜನರು ಅವರನ್ನು ಗುಲಾಮರನ್ನಾಗಿ ಮಾಡಿಕೊಂಡು ನಾನೂರು ವರ್ಷಗಳವರೆಗೆ ಅವರಿಗೆ ಕೇಡುಗಳನ್ನು ಮಾಡುವರು. ಆದರೆ ಅವರನ್ನು ಗಲಾಮರನ್ನಾಗಿ ಮಾಡಿಕೊಂಡ ಜನಾಂಗವನ್ನು ನಾನು ದಂಡಿಸುವೆನು’(B) ಎಂದು ಹೇಳಿದನು. ಇದಲ್ಲದೆ ದೇವರು ಅವನಿಗೆ, ‘ಆ ಬಳಿಕ ನಿನ್ನ ಜನರು ಆ ದೇಶದಿಂದ ಹೊರಗೆ ಬಂದು ನನ್ನನ್ನು ಈ ಸ್ಥಳದಲ್ಲಿ ಆರಾಧಿಸುವರು’(C) ಎಂದು ಹೇಳಿದನು.

“ದೇವರು ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಆ ಒಡಂಬಡಿಕೆಯ ಗುರುತೇ ಸುನ್ನತಿ. ಹೀಗಿರಲು ಅಬ್ರಹಾಮನು ಒಬ್ಬ ಮಗನನ್ನು ಪಡೆದಾಗ, ಆ ಮಗನಿಗೆ ಎಂಟನೆಯ ದಿನದಲ್ಲಿ ಸುನ್ನತಿ ಮಾಡಿದನು. ಅವನ ಮಗನ ಹೆಸರು ಇಸಾಕ. ಇಸಾಕನು ಸಹ ತನ್ನ ಮಗನಾದ ಯಾಕೋಬನಿಗೆ ಸುನ್ನತಿ ಮಾಡಿದನು. ಮತ್ತು ಯಾಕೋಬನು ತನ್ನ ಗಂಡುಮಕ್ಕಳಿಗೆಲ್ಲಾ ಸುನ್ನತಿ ಮಾಡಿದನು. ಈ ಗಂಡುಮಕ್ಕಳೇ ಮುಂದೆ ಹನ್ನೆರಡು ಮಂದಿ ಪಿತೃಗಳಾದರು.

“ಈ ಪಿತೃಗಳು ಯೋಸೇಫನ (ಅವರು ತಮ್ಮ) ಮೇಲೆ ಹೊಟ್ಟೆಕಿಚ್ಚುಪಟ್ಟರು. ಅವರು ಯೋಸೇಫನನ್ನು ಈಜಿಪ್ಟಿನ ಜನರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಯೋಸೇಫನೊಂದಿಗೆ ಇದ್ದನು. 10 ಯೋಸೇಫನಿಗೆ ಅಲ್ಲಿ ಅನೇಕ ತೊಂದರೆಗಳು ಬಂದವು. ಆದರೆ ದೇವರು ಆ ಎಲ್ಲಾ ತೊಂದರೆಗಳಿಂದ ಅವನನ್ನು ರಕ್ಷಿಸಿದನು. ಆಗ ಫರೋಹನು ಈಜಿಪ್ಟಿನ ರಾಜನಾಗಿದ್ದನು. ದೇವರು ಯೋಸೇಫನಿಗೆ ಕೊಟ್ಟ ಜ್ಞಾನದ ದೆಸೆಯಿಂದ ಫರೋಹನು ಯೋಸೇಫನನ್ನು ಇಷ್ಟಪಟ್ಟನು ಮತ್ತು ಗೌರವಿಸಿದನು. ಫರೋಹನು ಯೋಸೇಫನನ್ನು ಈಜಿಪ್ಟಿನ ರಾಜ್ಯಪಾಲನನ್ನಾಗಿಯೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರ ಮೇಲೆ ಅಧಿಪತಿಯನ್ನಾಗಿಯೂ ಮಾಡಿದನು. 11 ಆದರೆ ಈಜಿಪ್ಟಿನಲ್ಲಿ ಮತ್ತು ಕಾನಾನಿನಲ್ಲಿ ಬರಗಾಲ ಉಂಟಾಯಿತು. ಆಹಾರವಿಲ್ಲದೆ ನಮ್ಮ ಪಿತೃಗಳಿಗೆ ಬಹಳ ಕಷ್ಟವಾಯಿತು.

12 “ಆದರೆ ಈಜಿಪ್ಟಿನಲ್ಲಿ ಆಹಾರವನ್ನು ಸಂಗ್ರಹಿಸಲಾಗಿದೆ ಎಂಬ ಸುದ್ದಿಯನ್ನು ಯಾಕೋಬನು ಕೇಳಿ, ನಮ್ಮ ಪಿತೃಗಳನ್ನು ಅಲ್ಲಿಗೆ ಕಳುಹಿಸಿದನು. (ಇದು ಈಜಿಪ್ಟಿಗೆ ಅವರ ಮೊದಲ ಪ್ರಯಾಣ.) 13 ಬಳಿಕ ಅವರು ಅಲ್ಲಿಗೆ ಎರಡನೆಯ ಸಲ ಹೋದರು. ಈ ಸಲ, ತಾನು ಯಾರೆಂಬುದನ್ನು ಯೋಸೇಫನು ತನ್ನ ಸಹೋದರರಿಗೆ ತಿಳಿಸಿದನು ಮತ್ತು ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೆ ತಿಳಿಯಿತು. 14 ಬಳಿಕ, ಯೋಸೇಫನು ತನ್ನ ತಂದೆಯಾದ ಯಾಕೋಬನನ್ನು ಮತ್ತು ಸಂಬಂಧಿಕರನ್ನು (ಅವರೆಲ್ಲರು ಒಟ್ಟಿಗೆ ಎಪ್ಪತ್ತೈದು ಮಂದಿ) ಈಜಿಪ್ಟಿಗೆ ಆಹ್ವಾನಿಸಲು ಕೆಲವು ಜನರನ್ನು ಕಳುಹಿಸಿದನು. 15 ಆದ್ದರಿಂದ ಯಾಕೋಬನು ಈಜಿಪ್ಟಿಗೆ ಹೋದನು. ಯಾಕೋಬನು ಮತ್ತು ನಮ್ಮ ಪಿತೃಗಳು ತಾವು ಸಾಯುವವರೆಗೆ ಅಲ್ಲೇ ಇದ್ದರು. 16 ಬಳಿಕ ಅವರ ದೇಹಗಳನ್ನು ಶೇಕೆಮಿಗೆ ಸಾಗಿಸಲಾಯಿತು. ಅಲ್ಲಿಯ ಸಮಾಧಿಯೊಂದರಲ್ಲಿ ಅವರನ್ನು ಹೂಳಲಾಯಿತು. (ಅಬ್ರಹಾಮನು ಹಾಮೋರನ ಗಂಡುಮಕ್ಕಳಿಂದ ಕೊಂಡುಕೊಂಡದ್ದು ಈ ಸಮಾಧಿಯನ್ನೇ. ಅವನು ಅವರಿಗೆ ಬೆಳ್ಳಿಯನ್ನು ಕ್ರಯವಾಗಿ ಕೊಟ್ಟಿದ್ದನು.)

17 “ಈಜಿಪ್ಟಿನಲ್ಲಿ ನಮ್ಮ ಜನರಾದ ಯೆಹೂದ್ಯರ ಸಂಖ್ಯೆಯು ಹೆಚ್ಚತೊಡಗಿತು. (ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ ಕಾಲ ಬಹು ಶೀಘ್ರದಲ್ಲೇ ಬರಲಿತ್ತು.) 18 ಬಳಿಕ, ಬೇರೊಬ್ಬ ರಾಜನು ಈಜಿಪ್ಟನ್ನು ಆಳಲಾರಂಭಿಸಿದನು. ಅವನಿಗೆ ಯೋಸೇಫನ ಬಗ್ಗೆ ಏನೂ ತಿಳಿದಿರಲಿಲ್ಲ. 19 ಈ ರಾಜನು ನಮ್ಮ ಜನರಿಗೆ ಮೋಸ ಮಾಡಿದನು. ಅವನು ನಮ್ಮ ಪಿತೃಗಳಿಗೆ ಕೇಡನ್ನು ಮಾಡಿದನು. ಅವರ ಕೂಸುಗಳನ್ನು ಸಾಯಿಸಬೇಕೆಂದು ಹೊರಗೆ ಹಾಕಿಸಿದನು.

20 “ಮೋಶೆಯು ಜನಿಸಿದ್ದು ಈ ಕಾಲದಲ್ಲೇ. ಅವನು ಬಹು ಸುಂದರನಾಗಿದ್ದನು. ಮೋಶೆಯನ್ನು ಅವನ ತಂದೆಯ ಮನೆಯಲ್ಲಿ ಮೂರು ತಿಂಗಳವರೆಗೆ ನೋಡಿಕೊಳ್ಳಲಾಯಿತು. 21 ಅವರು ಮೋಶೆಯನ್ನು ಹೊರಗೆ ಹಾಕಿದಾಗ ಫರೋಹನ ಮಗಳು ಅವನನ್ನು ತೆಗೆದುಕೊಂಡಳು. ಆಕೆಯು ಅವನನ್ನು ತನ್ನ ಸ್ವಂತ ಮಗನಂತೆ ಬೆಳೆಸಿದಳು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International