New Testament in a Year
ಯೋಹಾನನ ಜನನ
57 ಎಲಿಜಬೇತಳಿಗೆ ಹೆರಿಗೆ ಕಾಲ ಬಂದಿತು. ಆಕೆಯಲ್ಲಿ ಒಬ್ಬ ಮಗನು ಹುಟ್ಟಿದನು. 58 ಪ್ರಭುವು ಆಕೆಗೆ ತೋರಿದ ಮಹಾಕರುಣೆಯು ಆಕೆಯ ನೆರೆಹೊರೆಯವರಿಗೆ ಮತ್ತು ಬಂಧುಗಳಿಗೆ ತಿಳಿಯಿತು. ಅವರು ಆಕೆಯ ವಿಷಯದಲ್ಲಿ ಸಂತೋಷಪಟ್ಟರು.
59 ಮಗುವಿಗೆ ಎಂಟು ದಿನವಾದಾಗ ಅವರು ಸುನ್ನತಿ ಮಾಡಿಸುವುದಕ್ಕಾಗಿ ಬಂದರು. ಅವರು ಆ ಮಗುವಿಗೆ “ಜಕರೀಯ” ಎಂಬ ಹೆಸರು ಇಡಬೇಕೆಂದಿದ್ದರು. ಏಕೆಂದರೆ ಅದು ಮಗುವಿನ ತಂದೆಯ ಹೆಸರಾಗಿತ್ತು. 60 ಆದರೆ ಮಗುವಿನ ತಾಯಿ, “ಇಲ್ಲ! ಆತನಿಗೆ ‘ಯೋಹಾನ’ ಎಂಬ ಹೆಸರಿಡಬೇಕು” ಎಂದು ಹೇಳಿದಳು.
61 ಜನರು ಎಲಿಜಬೇತಳಿಗೆ, “ನಿನ್ನ ಕುಟುಂಬದಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ!” ಎಂದು ಹೇಳಿದರು. 62 ಬಳಿಕ ಅವರು ಅವನ ತಂದೆಗೆ ಸನ್ನೆಮಾಡಿ, “ಆತನಿಗೆ ಯಾವ ಹೆಸರಿಡಬೇಕು?” ಎಂದು ಕೇಳಿದರು.
63 ಆಗ ಜಕರೀಯನು ಸನ್ನೆಮಾಡಿ, ಒಂದು ಹಲಗೆಯನ್ನು ತರಿಸಿಕೊಂಡು, “ಈತನ ಹೆಸರು ಯೋಹಾನ” ಎಂದು ಬರೆದನು. ಜನರೆಲ್ಲರಿಗೂ ಆಶ್ಚರ್ಯವಾಯಿತು. 64 ಆ ಕೂಡಲೇ ಜಕರೀಯನು ಮತ್ತೆ ಮಾತಾಡಬಲ್ಲವನಾಗಿ ದೇವರನ್ನು ಸ್ತುತಿಸತೊಡಗಿದನು. 65 ಇದನ್ನು ಕೇಳಿ ನೆರೆಹೊರೆಯವರಿಗೆಲ್ಲಾ ಭಯವಾಯಿತು. ಜುದೇಯದ ಗುಡ್ಡಪ್ರದೇಶದಲ್ಲೆಲ್ಲಾ ಈ ಸಂಗತಿಗಳ ಬಗ್ಗೆ ಜನರು ಮಾತನಾಡತೊಡಗಿದರು. 66 ಈ ಸಂಗತಿಗಳನ್ನು ಕೇಳಿದ ಜನರೆಲ್ಲರು ಆಶ್ಚರ್ಯಪಟ್ಟು “ಈ ಮಗು (ಯೋಹಾನ) ಬೆಳೆದು ದೊಡ್ಡವನಾದ ಮೇಲೆ ಎಂಥ ವ್ಯಕ್ತಿಯಾಗುವನೋ?” ಎಂದು ಯೋಚಿಸತೊಡಗಿದರು. ಏಕೆಂದರೆ ಪ್ರಭುವು ಈ ಮಗುವಿನ ಸಂಗಡವಿದ್ದನು.
ಜಕರೀಯನ ಪ್ರವಾದನೆ
67 ಬಳಿಕ ಯೋಹಾನನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು:
68 “ಇಸ್ರೇಲರ ಪ್ರಭುವಾದ ದೇವರಿಗೆ ಸ್ತೋತ್ರವಾಗಲಿ.
ಆತನು ಬಂದು ತನ್ನ ಜನರನ್ನು ಬಿಡುಗಡೆ ಮಾಡಿದ್ದಾನೆ.
69 ತನ್ನ ಸೇವಕನಾದ ದಾವೀದನ ಮನೆತನದಿಂದ
ದೇವರು ವೀರರಕ್ಷಕನನ್ನು ನಮಗೆ ಕೊಟ್ಟಿದ್ದಾನೆ.
70 ಇದನ್ನು ಆತನು ಪೂರ್ವಕಾಲದ
ತನ್ನ ಪವಿತ್ರ ಪ್ರವಾದಿಗಳ ಮೂಲಕ ತಿಳಿಸಿದ್ದಾನೆ.
71 ದೇವರು ನಮ್ಮನ್ನು ನಮ್ಮ ವೈರಿಗಳಿಂದಲೂ
ದ್ವೇಷಿಗಳ ಹಿಡಿತದಿಂದಲೂ ರಕ್ಷಿಸಿದ್ದಾನೆ.
72 ಕರುಣೆ ತೋರುವುದಾಗಿ ನಮ್ಮ ಪಿತೃಗಳಿಗೆ ನೀಡಿದ
ತನ್ನ ಪವಿತ್ರ ವಾಗ್ದಾನವನ್ನು ಆತನು ಜ್ಞಾಪಿಸಿಕೊಂಡಿದ್ದಾನೆ.
73 ನಮ್ಮ ವೈರಿಗಳ ಹಿಡಿತದಿಂದ ನಮ್ಮನ್ನು ಬಿಡಿಸುವುದಾಗಿ ದೇವರು ನಮ್ಮ ಪಿತೃವಾದ ಅಬ್ರಹಾಮನಿಗೆ ವಾಗ್ದಾನ ಮಾಡಿದ್ದಾನೆ.
74-75 ಏಕೆಂದರೆ ನಮ್ಮ ಜೀವಮಾನವೆಲ್ಲಾ ನಾವು ಆತನ ಸನ್ನಿಧಿಯಲ್ಲಿ ನೀತಿವಂತರೂ ಪರಿಶುದ್ಧರೂ ಆಗಿದ್ದು
ಭಯವಿಲ್ಲದೆ ಆತನ ಸೇವೆ ಮಾಡಬೇಕೆಂಬುದೇ ಆತನ ಉದ್ದೇಶವಾಗಿತ್ತು.
76 “ಮಗುವೇ, ನೀನು ಮಹೋನ್ನತನ ಪ್ರವಾದಿ ಎನಿಸಿಕೊಳ್ಳುವೆ.
ಪ್ರಭುವಿನ ಮುಂದೆ ಹೋಗಿ ಆತನ ಬರುವಿಕೆಗಾಗಿ ಜನರನ್ನು ಸಿದ್ಧಮಾಡುವೆ.
77 ಪಾಪಕ್ಷಮೆಯ ಮೂಲಕವಾಗಿ ರಕ್ಷಣೆಯಾಗುವುದೆಂಬ ತಿಳುವಳಿಕೆಯನ್ನು ನೀನು ಜನರಿಗೆ ಕೊಡುವೆ.
78 “ನಮ್ಮ ದೇವರ ಮಹಾಕರುಣೆಯಿಂದ
ಪರಲೋಕದಿಂದ ಹೊಸ ದಿನವೊಂದು ನಮಗಾಗಿ ಉದಯಿಸುವುದು.
79 ಅಂಧಕಾರದಲ್ಲಿ ಜೀವಿಸುತ್ತಾ ಮರಣಭಯದಲ್ಲಿರುವ ಜನರಿಗೆ ದೇವರು ಸಹಾಯ ಮಾಡುವನು.
ಆತನು ನಮ್ಮನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವನು.”
80 ಆ ಮಗುವು (ಯೋಹಾನನು) ಬೆಳೆದು ದೊಡ್ಡವನಾಗಿ ಆತ್ಮದಲ್ಲಿ ಬಲವುಳ್ಳವನಾದನು. ಇಸ್ರೇಲರಿಗೆ ತನ್ನ ಉಪದೇಶವನ್ನು ಆರಂಭಿಸುವ ತನಕ ಯೋಹಾನನು ಅಡವಿಯಲ್ಲಿ ವಾಸವಾಗಿದ್ದನು.
Kannada Holy Bible: Easy-to-Read Version. All rights reserved. © 1997 Bible League International