New Testament in a Year
ದೇವರ ಆಜ್ಞೆ ಮತ್ತು ಮನುಷ್ಯರ ನಿಯಮ
(ಮಾರ್ಕ 7:1-23)
15 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಯೇಸುವಿನ ಬಳಿಗೆ ಬಂದು, 2 “ನಮ್ಮ ಪೂರ್ವಿಕರಿಂದ ಬಂದ ಸಂಪ್ರದಾಯಗಳಿಗೆ ನಿನ್ನ ಶಿಷ್ಯರು ಏಕೆ ವಿಧೇಯರಾಗಿರುವುದಿಲ್ಲ? ನಿನ್ನ ಶಿಷ್ಯರು ಊಟ ಮಾಡುವುದಕ್ಕೆ ಮುಂಚೆ ಕೈ ತೊಳೆಯುವುದಿಲ್ಲವೇಕೆ?” ಎಂದು ಕೇಳಿದರು.
3 ಯೇಸು, “ನಿಮ್ಮ ಸಂಪ್ರದಾಯಗಳನ್ನು ಅನುಸರಿಸಲು ದೇವರ ಆಜ್ಞೆಗೆ ಅವಿಧೇಯರಾಗುವುದೇಕೆ? 4 ‘ನಿಮ್ಮ ತಂದೆತಾಯಿಗಳಿಗೆ ಗೌರವ ನೀಡಿ’(A) ಎಂಬುದು ದೇವರ ಆಜ್ಞೆ. ‘ಯಾವನಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಹೀನೈಸಿದರೆ ಅವನನ್ನು ಕೊಲ್ಲಬೇಕು’(B) ಎಂಬುದೂ ದೇವರ ಆಜ್ಞೆ. 5 ಆದರೆ ಒಬ್ಬ ವ್ಯಕ್ತಿಯು ತನ್ನ ತಂದೆಗಾಗಲಿ ತಾಯಿಗಾಗಲಿ ‘ನಿಮಗೆ ಸಹಾಯ ಮಾಡಲು ನನಗೆ ಸಾಧ್ಯವಿಲ್ಲ, ಏಕೆಂದರೆ ನನ್ನಲ್ಲಿರುವ ಪ್ರತಿಯೊಂದು ದೇವರಿಗೆ ಪ್ರತಿಷ್ಠಿತವಾಗಿದೆ’ ಎಂದು ಹೇಳಿದರೆ, 6 ಅವನು ತನ್ನ ತಂದೆಯನ್ನು ಗೌರವಿಸಬೇಕಿಲ್ಲ ಎಂದು ನೀವು ಬೋಧಿಸುತ್ತೀರಿ. ಹೀಗಿರಲು ನಿಮ್ಮ ಸಂಪ್ರದಾಯವೇ ದೇವರ ಆಜ್ಞೆಯನ್ನು ತಳ್ಳಿಹಾಕಿದೆ. 7 ನೀವು ಕಪಟಿಗಳು. ಯೆಶಾಯನು ನಿಮ್ಮನ್ನು ಕುರಿತು ಸರಿಯಾಗಿ ಹೇಳಿದ್ದಾನೆ. ಅದೇನೆಂದರೆ:
8 ‘ಇವರು ನನ್ನನ್ನು ಮಾತಿನಿಂದ ಗೌರವಿಸುತ್ತಾರೆ.
ಇವರ ಮನಸ್ಸಾದರೋ ನನಗೆ ದೂರವಾಗಿದೆ.
9 ಇವರು ನನ್ನನ್ನು ಆರಾಧಿಸುವುದೂ ನಿರರ್ಥಕ.
ಇವರು ಮನುಷ್ಯರ ಕಟ್ಟಳೆಗಳನ್ನೇ ಉಪದೇಶಿಸುತ್ತಾರೆ.’(C)”
10 ಯೇಸು ಜನರನ್ನು ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಆಲಿಸಿರಿ ಮತ್ತು ಅರ್ಥಮಾಡಿಕೊಳ್ಳಿರಿ. 11 ಒಬ್ಬನು ಕಲುಷಿತನಾಗುವುದು ತನ್ನ ಬಾಯಿಂದ ತಿನ್ನುವ ಪದಾರ್ಥಗಳಿಂದಲ್ಲ. ಅವನ ಬಾಯಿಂದ ಬರುವ ಕೆಟ್ಟಮಾತುಗಳೇ ಅವನನ್ನು ಕಲುಷಿತಗೊಳಿಸುತ್ತವೆ” ಎಂದು ಹೇಳಿದನು.
12 ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಹೇಳಿದ್ದನ್ನು ಕೇಳಿ ಫರಿಸಾಯರು ಬೇಸರಗೊಂಡದ್ದು ನಿನಗೆ ತಿಳಿಯಿತೋ?” ಎಂದು ಕೇಳಿದರು.
13 ಯೇಸು, “ಪರಲೋಕದಲ್ಲಿರುವ ನನ್ನ ತಂದೆ ನೆಡದಿರುವ ಪ್ರತಿಯೊಂದು ಗಿಡವನ್ನು ಬೇರಿನೊಂದಿಗೆ ಕಿತ್ತುಹಾಕಲಾಗುವುದು. 14 ಫರಿಸಾಯರಿಂದ ದೂರವಾಗಿರಿ. ಅವರೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಹಳ್ಳದಲ್ಲಿ ಬೀಳುವರು” ಎಂದು ಉತ್ತರಕೊಟ್ಟನು.
15 ಆಗ ಪೇತ್ರನು, “ನೀನು ಜನರಿಗೆ ಮೊದಲು ಹೇಳಿದ್ದನ್ನು ನಮಗೆ ವಿವರಿಸು” ಎಂದನು.
16 ಯೇಸು, “ನಿಮಗೆ ಇನ್ನೂ ಅರ್ಥವಾಗುವುದಿಲ್ಲವೇ? 17 ಒಬ್ಬ ಮನುಷ್ಯನ ಬಾಯಿಂದ ಆಹಾರ ಹೊಟ್ಟೆಯೊಳಕ್ಕೆ ಹೋಗುತ್ತದೆ. ನಂತರ ಅದು ದೇಹದಿಂದ ಹೊರಗೆ ಹೋಗಿಬಿಡುತ್ತದೆ. ಇದು ನಿಮಗೆ ತಿಳಿದೇ ಇದೆ. 18 ಆದರೆ ಒಬ್ಬ ಮನುಷ್ಯನ ಬಾಯಿಂದ ಹೊರಡುವ ಕೆಟ್ಟಮಾತುಗಳು ಅವನ ಆಲೋಚನೆಯಿಂದ ಉದ್ಭವಿಸಿ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ. 19 ಮನುಷ್ಯನ ಮನಸ್ಸಿನಲ್ಲಿ ದುರಾಲೋಚನೆ, ಕೊಲೆ, ವ್ಯಭಿಚಾರ, ಸೂಳೆಗಾರಿಕೆ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ಬೈಗಳು ಹೊರಟುಬರುತ್ತವೆ. 20 ಇವು ಮನುಷ್ಯನನ್ನು ಅಶುದ್ಧನನ್ನಾಗಿ ಮಾಡುತ್ತವೆ. ಆದರೆ ಊಟಕ್ಕೆ ಮೊದಲು ಕೈತೊಳೆಯದ ಮಾತ್ರಕ್ಕೆ ಮನುಷ್ಯನೇನೂ ಅಶುದ್ಧನಾಗುವುದಿಲ್ಲ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International