Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 10

ಹೊಸ ಕಲ್ಲಿನ ಹಲಗೆಗಳು

10 “ಆಗ ಯೆಹೋವನು ನನಗೆ, ‘ಮೊದಲಿನ ಎರಡು ಕಲ್ಲಿನ ಹಲಗೆಗಳಂತೆಯೇ ಎರಡು ಕಲ್ಲಿನ ಹಲಗೆಗಳನ್ನು ಮಾಡು. ಆಮೇಲೆ ಬೆಟ್ಟದ ಮೇಲೆ ನನ್ನ ಬಳಿಗೆ ಬಾ. ಅಲ್ಲದೆ ಒಂದು ಮರದ ಪೆಟ್ಟಿಗೆಯನ್ನೂ ತಯಾರು ಮಾಡು. ನೀನು ಒಡೆದುಹಾಕಿದ ಮೊದಲಿನ ಕಲ್ಲು ಹಲಗೆಗಳ ಮೇಲೆ ಯಾವ ಪದಗಳನ್ನು ಬರೆದಿದ್ದೆನೋ ಅದೇ ಪದಗಳನ್ನು ಈ ಕಲ್ಲಿನ ಹಲಗೆಗಳ ಮೇಲೆ ಬರೆಯುತ್ತೇನೆ. ಈ ಹೊಸ ಕಲ್ಲಿನ ಹಲಗೆಗಳನ್ನು ನೀನು ಮರದ ಪೆಟ್ಟಿಗೆಯಲ್ಲಿಡಬೇಕು’ ಎಂದು ಹೇಳಿದನು.

“ನಾನು ಜಾಲೀಮರದಿಂದ ಪೆಟ್ಟಿಗೆಯನ್ನು ಮಾಡಿದೆನು. ಎರಡು ಕಲ್ಲಿನ ಹಲಗೆಗಳನ್ನು ತಯಾರಿಸಿ ಬೆಟ್ಟವನ್ನೇರಿದೆನು. ಆಗ ಯೆಹೋವನು ಮುಂಚಿನಂತೆಯೇ ಇದರಲ್ಲೂ ದಶಾಜ್ಞೆಗಳನ್ನು ಬರೆದು ನನಗೆ ಕೊಟ್ಟನು. ನೀವು ಬೆಟ್ಟದ ಬಳಿ ಒಟ್ಟಾಗಿ ಸೇರಿ ಬಂದಿದ್ದಾಗ ಆತನು ಬೆಂಕಿಯೊಳಗಿಂದ ಹೇಳಿದ್ದ ದಶಾಜ್ಞೆಗಳೇ ಇವು. ನಾನು ಬೆಟ್ಟದಿಂದಿಳಿದು ಆ ಕಲ್ಲಿನ ಹಲಗೆಗಳನ್ನು ಯೆಹೋವನ ಅಪ್ಪಣೆಯಂತೆ ನಾನು ಮಾಡಿದ ಪೆಟ್ಟಿಗೆಯೊಳಗಿಟ್ಟೆನು. ಆ ಕಲ್ಲಿನ ಹಲಗೆಗಳು ಈಗಲೂ ಇವೆ.”

(ಇಸ್ರೇಲರು ಯಾಕಾನ್ಯರ ಬಾವಿಗಳ ಬಳಿಯಿಂದ ಪ್ರಯಾಣ ಮಾಡಿ ಮೋಸೇರಕ್ಕೆ ಬಂದರು. ಆರೋನನು ಸತ್ತುಹೋದದ್ದು ಮತ್ತು ಅವನ ಶವವನ್ನು ಹೂಳಿಟ್ಟದ್ದು ಅಲ್ಲಿಯೇ. ಆರೋನನ ಬದಲಿಗೆ ಅವನ ಮಗನಾದ ಎಲ್ಲಾಜಾರನು ಯಾಜಕನಾದನು. ಆಮೇಲೆ ಇಸ್ರೇಲ್ ಜನರು ಮೋಸೇರದಿಂದ ಗುದ್ಗೋದ ಎಂಬ ಸ್ಥಳಕ್ಕೆ ಬಂದರು. ಆಮೇಲೆ ಗುದ್ಗೋದದಿಂದ ಯೊಟ್ಬಾತ ಎಂಬ ನದಿಗಳುಳ್ಳ ಸ್ಥಳದಲ್ಲಿ ಪಾಳೆಯ ಮಾಡಿದರು. ಆ ಸಮಯದಲ್ಲಿ ಯೆಹೋವನು ಲೇವಿಕುಲದವರನ್ನು ಒಂದು ವಿಶೇಷವಾದ ಕೆಲಸಕ್ಕಾಗಿ ಬೇರೆ ಕುಲಗಳವರಿಂದ ಪ್ರತ್ಯೇಕಿಸಿದನು. ಅವರಿಗೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಎತ್ತಿಕೊಂಡು ಹೋಗುವ ಕೆಲಸ ಕೊಡಲ್ಪಟ್ಟಿತು. ಯೆಹೋವನ ಸನ್ನಿಧಾನದಲ್ಲಿ ಅವರು ಯಾಜಕರ ಕೆಲಸವನ್ನು ಮಾಡಿದರು. ಅಲ್ಲದೆ ಯೆಹೋವನ ಜನರಿಗೆ ದೇವರ ಆಶೀರ್ವಾದ ವಚನಗಳನ್ನು ಹೇಳುವ ಕೆಲಸವನ್ನು ಅವರು ಮಾಡಿದರು. ಹೀಗಿದ್ದುದರಿಂದ ಅವರಿಗೆ ತಮ್ಮ ಸಹೋದರರ ಜೊತೆಯಲ್ಲಿ ವಾಗ್ದಾನದ ದೇಶದೊಳಗೆ ಸ್ವಾಸ್ತ್ಯವು ದೊರಕಲಿಲ್ಲ. ಅವರ ಸ್ವಾಸ್ತ್ಯವು ಯೆಹೋವನೇ ಆಗಿದ್ದನು. ಇದು ದೇವರಾದ ಯೆಹೋವನ ವಾಗ್ದಾನ.)

10 “ಹಿಂದಿನ ಪ್ರಕಾರ ಈ ಸಾರಿಯೂ ನಾನು ನಲವತ್ತು ದಿನ ಹಗಲಿರುಳು ಬೆಟ್ಟದ ಮೇಲಿದ್ದೆನು. ನನ್ನ ಮಾತುಗಳನ್ನು ಯೆಹೋವನು ಆಲೈಸಿದನು; ನಿಮ್ಮನ್ನು ನಾಶಮಾಡುವುದಿಲ್ಲವೆಂದು ಪ್ರಮಾಣ ಮಾಡಿದನು. 11 ಯೆಹೋವನು ನನಗೆ, ‘ನನ್ನ ಜನರನ್ನು ಪ್ರಯಾಣದಲ್ಲಿ ಮುನ್ನಡೆಸು; ನಾನು ಅವರ ಪೂರ್ವಿಕರಿಗೆ ವಾಗ್ದಾನ ಮಾಡಿದ ಆ ದೇಶದಲ್ಲಿ ಅವರು ನೆಲೆಸಬೇಕು’ ಎಂದು ಹೇಳಿದನು.

ಯೆಹೋವನು ಅಪೇಕ್ಷಿಸುವುದೇನೆಂದರೆ

12 “ಇಸ್ರೇಲ್ ಜನರೇ, ಕೇಳಿರಿ! ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ನಿಜವಾಗಿಯೂ ಅಪೇಕ್ಷಿಸುವುದೇನು? ನೀವು ಆತನನ್ನು ಗೌರವಿಸಬೇಕೆಂದೂ ಆತನ ಆಜ್ಞಾವಿಧಿಗಳಿಗೆ ವಿಧೇಯರಾಗಬೇಕೆಂದೂ ಅಪೇಕ್ಷಿಸುತ್ತಾನೆ. ನೀವು ಆತನನ್ನು ಪ್ರೀತಿಸಿ, ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಆತನ ಸೇವೆ ಮಾಡಬೇಕೆಂದು ಆತನು ಅಪೇಕ್ಷಿಸುತ್ತಾನೆ. 13 ಆದ್ದರಿಂದ ನಾನು ನಿಮಗೆ ಕೊಡುವ ಆತನ ಕಟ್ಟಳೆ, ವಿಧಿನಿಯಮಗಳಿಗೆ ವಿಧೇಯರಾಗಿರಿ. ಇವೆಲ್ಲವೂ ನಿಮ್ಮ ಒಳ್ಳೆಯದಕ್ಕಾಗಿಯೇ ಇರುತ್ತದೆ.

14 “ಪ್ರತಿಯೊಂದೂ ಯೆಹೋವನದೇ, ಉನ್ನತವಾದ ಆಕಾಶವೂ ಯೆಹೋವನದೇ. ಈ ಭೂಮಿಯೂ, ಅದರಲ್ಲಿರುವ ಸಮಸ್ತವೂ ದೇವರಿಗೇ ಸೇರಿದ್ದು. 15 ಯೆಹೋವನು ನಿಮ್ಮ ಪೂರ್ವಿಕರನ್ನು ಎಷ್ಟು ಪ್ರೀತಿಮಾಡಿದ್ದನೆಂದರೆ, ಅವರ ಸಂತಾನದವರಾದ ನಿಮ್ಮನ್ನು ತನ್ನ ಜನರನ್ನಾಗಿ ಆರಿಸಿಕೊಳ್ಳುವಷ್ಟು ಪ್ರೀತಿಸಿದನು; ಬೇರೆ ಜನಾಂಗದವರ ಬದಲಾಗಿ ನಿಮ್ಮನ್ನೇ ಆರಿಸಿಕೊಂಡನು. ನೀವು ಇಂದಿಗೂ ಆತನಿಂದ ಆರಿಸಲ್ಪಟ್ಟ ಜನರಾಗಿದ್ದೀರಿ.

16 “ಆದ್ದರಿಂದ ಹಠಮಾರಿಗಳಾಗಬೇಡಿರಿ. ನಿಮ್ಮ ಹೃದಯಗಳನ್ನು ಯೆಹೋವನಿಗೆ ಕೊಡಿರಿ. 17 ಯಾಕೆಂದರೆ ಯೆಹೋವನೇ ನಿಮ್ಮ ದೇವರು. ಆತನು ದೇವರುಗಳ ದೇವರೂ ಪ್ರಭುಗಳ ಪ್ರಭುವೂ ಆಗಿದ್ದಾನೆ. ಆತನು ಮಹಾದೇವರೂ ಆಶ್ಚರ್ಯಕಾರನೂ ಪರಾಕ್ರಮಶಾಲಿಯೂ ಭಯಂಕರನೂ ಆಗಿದ್ದಾನೆ. ಆತನಿಗೆ ಎಲ್ಲಾ ಜನರೂ ಒಂದೇ. ಆತನು ತನ್ನ ತೀರ್ಮಾನವನ್ನು ಬದಲಾಯಿಸಲು ಲಂಚ ಸ್ವೀಕರಿಸುವವನಲ್ಲ. 18 ಅನಾಥಮಕ್ಕಳಿಗೂ ವಿಧವೆಯರಿಗೂ ಆತನು ಸಹಾಯಕನಾಗಿದ್ದಾನೆ. ನಮ್ಮ ದೇಶದಲ್ಲಿರುವ ಪರದೇಶಿಯರನ್ನೂ ಆತನು ಪ್ರೀತಿಸುತ್ತಾನೆ; ಅವರಿಗೆ ಊಟಬಟ್ಟೆಗಳನ್ನು ಒದಗಿಸುತ್ತಾನೆ. 19 ಆದ್ದರಿಂದ ನೀವೂ ಪರದೇಶಿಯರನ್ನು ಪ್ರೀತಿಸಬೇಕು. ನೀವೂ ಸಹ ಈಜಿಪ್ಟ್ ದೇಶದಲ್ಲಿ ಪರದೇಶಿಗಳಾಗಿದ್ದಿರಿ.

20 “ನೀವು ನಿಮ್ಮ ದೇವರಾದ ಯೆಹೋವನನ್ನು ಗೌರವಿಸಿ ಆತನೊಬ್ಬನನ್ನೇ ಆರಾಧಿಸಬೇಕು. ಆತನನ್ನು ಬಿಟ್ಟು ತೊಲಗದಿರಿ. ವಾಗ್ದಾನ, ಒಡಂಬಡಿಕೆಗಳನ್ನು ಮಾಡುವಾಗ ಆತನ ಹೆಸರಿನಲ್ಲಿಯೇ ಮಾಡಿರಿ. 21 ಯೆಹೋವನನ್ನು ಮಾತ್ರ ನೀವು ಸ್ತುತಿಸಬೇಕು. ಆತನೇ ನಿಮ್ಮ ದೇವರು. ಆತನು ನಿಮಗಾಗಿ ಭಯಂಕರವಾದ ಮಹತ್ಕಾರ್ಯಗಳನ್ನು ಮಾಡಿದ್ದಾನೆ. ಅವುಗಳನ್ನು ನೀವು ಕಣ್ಣಾರೆ ಕಂಡಿದ್ದೀರಿ. 22 ನಿಮ್ಮ ಪೂರ್ವಿಕರು ಈಜಿಪ್ಟಿಗೆ ಹೋದಾಗ ಅವರಲ್ಲಿ ಕೇವಲ ಎಪ್ಪತ್ತು ಮಂದಿ ಮಾತ್ರ ಇದ್ದರು. ಆದರೆ ನಿಮ್ಮ ದೇವರಾದ ಯೆಹೋವನು ಆಕಾಶದಲ್ಲಿರುವ ನಕ್ಷತ್ರಗಳಂತೆ ನಿಮ್ಮನ್ನು ಅನೇಕಾನೇಕ ಜನರನ್ನಾಗಿ ಮಾಡಿದ್ದಾನೆ.

ಕೀರ್ತನೆಗಳು 94

94 ಯೆಹೋವನೇ, ನೀನು ಸೇಡು ತೀರಿಸಿಕೊಳ್ಳುವ ದೇವರು!
    ಸೇಡು ತೀರಿಸಿಕೊಳ್ಳುವ ದೇವರೇ ಪ್ರತ್ಯಕ್ಷನಾಗು!
ಇಡೀಲೋಕದ ನ್ಯಾಯಾಧಿಪತಿ ನೀನೇ.
    ಅಹಂಕಾರಿಗಳಿಗೆ ತಕ್ಕ ದಂಡನೆಯನ್ನು ಕೊಡು.
ಯೆಹೋವನೇ, ದುಷ್ಟಜನರು ಎಷ್ಟರವರೆಗೆ ಪರಿಹಾಸ್ಯ ಮಾಡುವರು?
    ಇನ್ನೆಷ್ಟರವರೆಗೆ ಪರಿಹಾಸ್ಯ ಮಾಡುವರು?
ಆ ಅಪರಾಧಿಗಳು ತಮ್ಮ ದುಷ್ಕೃತ್ಯಗಳ ಬಗ್ಗೆ
    ಇನ್ನೆಷ್ಟರವರೆಗೆ ಜಂಬ ಕೊಚ್ಚಿಕೊಳ್ಳುವರು?
ಯೆಹೋವನೇ, ಅವರು ನಿನ್ನ ಜನರಿಗೆ ಕೇಡುಮಾಡಿದ್ದಾರೆ.
    ಅವರು ನಿನ್ನ ಜನರನ್ನು ಹಿಂಸೆಪಡಿಸಿದ್ದಾರೆ.
ನಮ್ಮ ದೇಶದಲ್ಲಿ ವಾಸವಾಗಿರುವ ವಿಧವೆಯರನ್ನೂ ವಿದೇಶಿಯರನ್ನೂ ಆ ದುಷ್ಟರು ಕೊಲ್ಲುತ್ತಾರೆ.
    ಅವರು ಅನಾಥ ಮಕ್ಕಳನ್ನೂ ಕೊಲೆ ಮಾಡುವರು.
ಆ ದುಷ್ಕೃತ್ಯಗಳು ಯೆಹೋವನಿಗೆ ಕಾಣದೆಂದು ಅವರು ಹೇಳಿಕೊಳ್ಳುತ್ತಾರೆ.
    ಅವುಗಳು ಇಸ್ರೇಲಿನ ದೇವರಿಗೆ ತಿಳಿಯದೆಂದು ಅವರು ಹೇಳುತ್ತಾರೆ.

ದುಷ್ಟರೇ, ನೀವು ಮೂಢರಾಗಿದ್ದೀರಿ!
    ನೀವು ಪಾಠವನ್ನು ಕಲಿತುಕೊಳ್ಳುವುದು ಯಾವಾಗ?
ದುಷ್ಟರೇ, ನೀವು ಬಹು ದಡ್ಡರಾಗಿದ್ದೀರಿ!
    ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕು.
ಕಿವಿಗಳನ್ನು ಸೃಷ್ಟಿಸಿದಾತನಿಗೆ, ಕೇಳುವುದಿಲ್ಲವೇ?
    ಕಣ್ಣುಗಳನ್ನು ಸೃಷ್ಟಿಸಿದಾತನಿಗೆ ಕಾಣುವುದಿಲ್ಲವೇ?
10 ಜನಾಂಗಗಳನ್ನು ಶಿಕ್ಷಿಸುವಾತನು ದೇವರೇ.
    ಜನರಿಗೆ ಉಪದೇಶಿಸುವವನೂ ಆತನೇ.
11 ಮನುಷ್ಯರ ಆಲೋಚನೆಗಳೆಲ್ಲಾ ಆತನಿಗೆ ತಿಳಿದಿದೆ.
    ಮನುಷ್ಯರು ಕೇವಲ ಉಸಿರೆಂಬುದು ಆತನಿಗೆ ತಿಳಿದಿದೆ.

12 ಯೆಹೋವನಿಂದ ಶಿಕ್ಷಿಸಲ್ಪಡುವವನು ಭಾಗ್ಯವಂತನೇ ಸರಿ.
    ದೇವರು ಅವನಿಗೆ ನೀತಿಮಾರ್ಗವನ್ನು ಉಪದೇಶಿಸುವನು.
13 ಆಪತ್ತಿನಲ್ಲಿಯೂ ಸಮಾಧಾನದಿಂದಿರಲು ನೀನು ಅವನಿಗೆ ಸಹಾಯಮಾಡುವೆ.
    ದುಷ್ಟರು ಸಮಾಧಿಗಳಿಗೆ ಸೇರುವವರೆಗೆ ಸಮಾಧಾನದಿಂದಿರಲು ನೀನು ಅವನಿಗೆ ನೆರವು ನೀಡುವೆ.
14 ಯೆಹೋವನು ತನ್ನ ಜನರನ್ನು ತೊರೆದುಬಿಡುವುದಿಲ್ಲ.
    ಆತನು ತನ್ನ ಜನರನ್ನು ನಿಸ್ಸಹಾಯಕರನ್ನಾಗಿ ಮಾಡುವುದಿಲ್ಲ.
15 ನ್ಯಾಯವು ನೀತಿಯೊಂದಿಗೆ ಮರಳಿ ಬರುವುದು.
    ಆಗ ಜನರು ಒಳ್ಳೆಯವರೂ ಯಥಾರ್ಥವಂತರೂ ಆಗುವರು.

16 ದುಷ್ಟರಿಗೆ ವಿರೋಧವಾಗಿ ಯಾರೂ ನನಗೆ ಸಹಾಯಮಾಡಲಿಲ್ಲ.
    ದುಷ್ಕೃತ್ಯಗಳನ್ನು ಮಾಡುವವರ ವಿರುದ್ಧವಾಗಿ ಯಾರೂ ನನ್ನೊಂದಿಗೆ ನಿಂತುಕೊಳ್ಳಲಿಲ್ಲ.
17 ಯೆಹೋವನು ನನಗೆ ಸಹಾಯಮಾಡಿಲ್ಲದಿದ್ದರೆ,
    ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು.
18 ಯೆಹೋವನೇ, ಜಾರಿಹೋಗುತ್ತಿರುವೆ ಎಂದು ಮೊರೆಯಿಟ್ಟಾಗ
    ಆತನು ನನಗೆ ಆಧಾರ ನೀಡಿದನು.
19 ನಾನು ಚಿಂತೆಗಳಿಂದ ಗಲಿಬಿಲಿಗೊಂಡಿದ್ದಾಗ
    ನೀನು ನನ್ನನ್ನು ಸಂತೈಸಿ ಸಂತೋಷಪಡಿಸಿದೆ.

20 ದೇವರೇ, ಮೋಸಗಾರರಾದ ನ್ಯಾಯಾಧೀಶರಿಗೆ ಸಹಾಯಮಾಡಬೇಡ.
    ಅವರು ಕಾನೂನನ್ನು ಡೊಂಕು ಮಾಡಿ ಜನರನ್ನು ಹಿಂಸಿಸುವರು.
21 ಅವರು ನೀತಿವಂತರಿಗೆ ಎದುರಾಗಿ
    ನಿರಪರಾಧಿಗಳಿಗೆ ಮರಣದಂಡನೆ ವಿಧಿಸುವರು.
22 ನನಗಾದರೋ ಯೆಹೋವನು ಪರ್ವತದ ಮೇಲಿರುವ ಆಶ್ರಯಸ್ಥಾನವಾಗಿದ್ದಾನೆ.
    ನನ್ನ ಬಂಡೆಯಾಗಿರುವ ದೇವರು ನನಗೆ ಆಶ್ರಯಗಿರಿಯಾಗಿದ್ದಾನೆ!
23 ಆತನು ಆ ದುಷ್ಟ ನ್ಯಾಯಾಧೀಶರನ್ನು ಅವರ ದುಷ್ಕೃತ್ಯಗಳ ನಿಮಿತ್ತ ದಂಡಿಸುವನು.
    ಅವರ ಪಾಪಗಳ ನಿಮಿತ್ತ ದೇವರು ಅವರನ್ನು ನಾಶಮಾಡುವನು.
    ನಮ್ಮ ದೇವರಾದ ಯೆಹೋವನು ಆ ದುಷ್ಟ ನ್ಯಾಯಾಧೀಶರನ್ನು ನಾಶಮಾಡುವನು.

ಯೆಶಾಯ 38

ಹಿಜ್ಕೀಯನ ಅಸ್ವಸ್ಥತೆ

38 ಆ ಸಮಯದಲ್ಲಿ ಹಿಜ್ಕೀಯನು ರೋಗಗ್ರಸ್ತನಾಗಿ ಸಾಯುವ ಸ್ಥಿತಿಯಲ್ಲಿದ್ದನು. ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನನ್ನು ನೋಡಲು ಹೋದನು. ಯೆಶಾಯನು ಅರಸನಿಗೆ, “ಯೆಹೋವನು ಈ ವಿಷಯಗಳನ್ನು ನಿನಗೆ ತಿಳಿಸಲು ಹೇಳಿದ್ದಾನೆ: ‘ನೀನು ಬೇಗನೇ ಸಾಯುವೆ. ಆದ್ದರಿಂದ ನೀನು ಸಾಯುವಾಗ ನಿನ್ನ ಕುಟುಂಬದವರು ಮಾಡಬೇಕಾದದ್ದನ್ನು ಅವರಿಗೆ ತಿಳಿಸು. ನಿನಗೆ ಗುಣವಾಗುವುದಿಲ್ಲ’” ಎಂದು ಹೇಳಿದನು.

ಹಿಜ್ಕೀಯನು ದೇವಾಲಯದ ಕಡೆಗಿರುವ ಗೋಡೆಯ ಕಡೆಗೆ ಮುಖ ಮಾಡಿ ದೇವರಿಗೆ, “ಯೆಹೋವನೇ, ನಾನು ನಿನಗೆ ಪೂರ್ಣಹೃದಯದಿಂದ ನಂಬಿಗಸ್ತನಾಗಿ ಸೇವೆಮಾಡಿದ್ದನ್ನು ಜ್ಞಾಪಿಸಿಕೋ. ನಿನಗೆ ಇಷ್ಟವಾದದ್ದನ್ನೆಲ್ಲ ನಾನು ಮಾಡಿದ್ದೇನೆ” ಎಂದು ಪ್ರಾರ್ಥಿಸಿ ಬಹಳವಾಗಿ ಅತ್ತನು.

ಆಗ ಯೆಶಾಯನಿಗೆ ಈ ಸಂದೇಶವು ಯೆಹೋವನಿಂದ ಬಂದಿತು: “ಹಿಜ್ಕೀಯನ ಬಳಿಗೆ ಹೋಗಿ ಹೇಳು, ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನು ಹೇಳುವುದೇನೆಂದರೆ: ‘ನಿನ್ನ ಪ್ರಾರ್ಥನೆಯನ್ನು ನಾನು ಕೇಳಿದೆನು; ನಿನ್ನ ಕಣ್ಣೀರನ್ನು ನೋಡಿದೆನು. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಸೇರಿಸಿದ್ದೇನೆ. ನಾನು ನಿನ್ನನ್ನೂ ಈ ಪಟ್ಟಣವನ್ನೂ ಕಾಪಾಡುವೆನು. ಅಶ್ಶೂರದ ಅರಸನಿಂದ ರಕ್ಷಿಸುವೆನು.’”

“ದೇವರು ತಾನು ಹೇಳಿದ್ದನ್ನು ನೆರವೇರಿಸುತ್ತಾನೆ ಎಂಬುದಕ್ಕೆ ಗುರುತೇನೆಂದರೆ: ಇಗೋ, ಆಹಾಜನ ಮೆಟ್ಟಿಲಲ್ಲಿರುವ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಹೋಗುವಂತೆ ಮಾಡುವೆನು ಎಂದು ನಿನ್ನ ದೇವರಾಗಿರುವ ಯೆಹೋವನು ಹೇಳುತ್ತಾನೆಂಬದಾಗಿ ತಿಳಿಸು” ಎಂದು ಹೇಳಿದನು. ಅದರಂತೆ ಮೆಟ್ಟಿಲಲ್ಲಿರುವ ಸೂರ್ಯನ ನೆರಳು ಹತ್ತು ಮೆಟ್ಟಿಲು ಹಿಂದಕ್ಕೆ ಹೋಯಿತು.

ಹಿಜ್ಕೀಯನ ಹಾಡು

ಹಿಜ್ಕೀಯನು ತನ್ನ ಕಾಯಿಲೆಯಿಂದ ಗುಣಹೊಂದಿದ ಬಳಿಕ ಬರೆದ ಪತ್ರ:

10 ನಾನು ವೃದ್ಧನಾಗುವ ತನಕ ಬದುಕುವೆನೆಂದು ನಾನು ನನ್ನೊಳಗೆ ಅಂದುಕೊಂಡಿದ್ದೆನು.
    ಆದರೆ ನಾನು ಮರಣದ್ವಾರದ ಮೂಲಕ ಹೋಗುವ ಸಮಯ ಬಂತು.
    ನನ್ನ ಜೀವಮಾನವೆಲ್ಲ ಅಲ್ಲಿ ಕಳೆಯುವೆನು.
11 ಅದಕ್ಕೆ ನಾನೆಂದೆ: “ಇನ್ನು ಮೇಲೆ ಜೀವಿತರ ಲೋಕದಲ್ಲಿ ಇನ್ನು ದೇವರಾದ ಯೆಹೋವನನ್ನು ನೋಡುವದಿಲ್ಲ.
    ಇನ್ನು ಮೇಲೆ ಜನರು ಲೋಕದಲ್ಲಿ ಜೀವಿಸುವದನ್ನು ನಾನು ನೋಡುವದಿಲ್ಲ.
12 ನನ್ನ ಮನೆಯು ಅಂದರೆ ನನ್ನ ಕುರುಬನ ಗುಡಾರವು ಕೀಳಲ್ಪಟ್ಟು ನನ್ನಿಂದ ತೆಗೆಯಲ್ಪಡುತ್ತಿದೆ.
    ಒಬ್ಬನು ಮಗ್ಗದಲ್ಲಿ ಬಟ್ಟೆಯನ್ನು ಸುತ್ತಿ ಕತ್ತರಿಸಿಬಿಡುವಂತೆ ನಾನು ಕತ್ತರಿಸಲ್ಪಟ್ಟಿದ್ದೇನೆ.
    ನನ್ನ ಆಯುಷ್ಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಮುಗಿಸಿಬಿಟ್ಟಿರುವೆ.
13 ಇಡೀರಾತ್ರಿ ನಾನು ಸಿಂಹದಂತೆ ಗರ್ಜಿಸಿದೆನು.
    ಆದರೆ ಸಿಂಹವು ಎಲುಬುಗಳನ್ನು ಜಗಿದು ಪುಡಿಮಾಡುವಂತೆ ನನ್ನ ನಿರೀಕ್ಷೆಯೆಲ್ಲಾ ಜಜ್ಜಿಹೋಯಿತು.
ನೀನು ನನ್ನ ಜೀವಿತವನ್ನು ಅಷ್ಟು ಅಲ್ಪಕಾಲಕ್ಕೇ ಕೊನೆಗೊಳಿಸಿದೆ!
14 ನಾನು ಪಾರಿವಾಳದಂತೆ ಕೂಗಿಕೊಂಡೆನು.
    ಪಕ್ಷಿಯಂತೆ ಅರಚಿಕೊಂಡೆನು.
ನನ್ನ ಕಣ್ಣುಗಳು ಸ್ವರ್ಗದ ಕಡೆಗೆ
    ನೋಡುತ್ತಾ ಆಯಾಸಗೊಂಡವು.
ನನ್ನ ಒಡೆಯನೇ, ನಾನು ತುಂಬಾ ಚಿಂತಾಕ್ರಾಂತನಾಗಿದ್ದೇನೆ.
    ನೀನು ನನಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡು.”
15 ನಾನೇನು ಹೇಳಲಿ?
    ನನಗೆ ಸಂಭವಿಸಲಿರುವುದನ್ನು ನನ್ನ ಒಡೆಯನು ತಿಳಿಸಿದ್ದಾನೆ.
    ನನ್ನ ಒಡೆಯನು ಅದನ್ನು ನೆರವೇರಿಸುತ್ತಾನೆ.
ನನ್ನ ಆತ್ಮದಲ್ಲಿ ಸಂಕಟಗಳೆಲ್ಲಾ ತುಂಬಿವೆ.
    ನಾನು ನನ್ನ ಜೀವಮಾನವೆಲ್ಲಾ ದೀನನಾಗುವೆನು.
16 ನನ್ನ ಒಡೆಯನೇ, ನನ್ನ ಆತ್ಮವು ಪುನರುಜ್ಜೀವಿಸುವಂತೆ ಮಾಡು.
    ನನ್ನ ಆತ್ಮವು ಬಲಗೊಂಡು ಆರೋಗ್ಯದಾಯಕವಾಗುವಂತೆ ಸಹಾಯಮಾಡು.
    ನಾನು ತಿರುಗಿ ಸ್ವಸ್ಥತೆ ಹೊಂದುವಂತೆ ಮಾಡು.
    ನಾನು ಮತ್ತೆ ಜೀವಿಸುವಂತೆ ಮಾಡು.

17 ಇಗೋ, ನನ್ನ ಸಂಕಟವೆಲ್ಲಾ ಹೊರಟುಹೋಯಿತು.
    ನನಗೀಗ ಸಮಾಧಾನವಿದೆ.
ನೀನು ನನ್ನನ್ನು ಬಹಳವಾಗಿ ಪ್ರೀತಿಸುವದರಿಂದ
    ನನ್ನ ಶರೀರವು ಸಮಾಧಿಯಲ್ಲಿ ಕೊಳೆಯುವಂತೆ ಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
    ನನ್ನ ಪಾಪಗಳನ್ನು ಬಹುದೂರ ಬಿಸಾಡಿದೆ.
18 ಸತ್ತವರು ನಿನ್ನನ್ನು ಸ್ತುತಿಸುವದಿಲ್ಲ.
    ಪಾತಾಳದಲ್ಲಿರುವ ಜನರು ನಿನ್ನನ್ನು ಸ್ತುತಿಸುವದಿಲ್ಲ.
ಸತ್ತುಹೋದವರು ಸಹಾಯಕ್ಕಾಗಿ ನಿನ್ನ ಮೇಲೆ ಭರವಸವಿಡರು.
    ಅವರು ಭೂಮಿಯಲ್ಲಿರುವ ಆಳವಾದ ಕುಣಿಗೆ ಸೇರುವರು.
    ಅವರು ತಿರುಗಿ ಮಾತನಾಡುವದೇ ಇಲ್ಲ.
19 ನನ್ನ ಹಾಗೆ ಈ ದಿನ ಜೀವಿಸುವವರೆಲ್ಲಾ ನಿನ್ನನ್ನು ಕೊಂಡಾಡುವರು.
    ತಂದೆಯು ತನ್ನ ಮಕ್ಕಳಿಗೆ ನಿನ್ನ ಮೇಲೆ ಭರವಸವಿಡಲು ಕಲಿಸುವರು.
20 ನಾನು ಹೇಳುವುದೇನೆಂದರೆ: “ಯೆಹೋವನು ನನ್ನನ್ನು ರಕ್ಷಿಸಿದನು.
    ನಮ್ಮ ಜೀವಮಾನದ ಕಾಲವೆಲ್ಲಾ ಯೆಹೋವನ ಆಲಯದಲ್ಲಿ ನಾವು ಹಾಡುತ್ತಾ ವಾದ್ಯಬಾರಿಸುತ್ತಾ ಆತನನ್ನು ಸ್ತುತಿಸುವೆವು.”

21 ಆಗ ಯೆಶಾಯನು ಹಿಜ್ಕೀಯನಿಗೆ, “ನೀನು ಅಂಜೂರದ ಉಂಡೆ ಮಾಡಿ ಅದನ್ನು ನಿನ್ನ ಗಾಯದ ಮೇಲಿಡು. ಆಗ ನೀನು ಗುಣಹೊಂದುವೆ” ಎಂದು ಹೇಳಿದನು.

22 ಆಗ ಹಿಜ್ಕೀಯನು ಯೆಶಾಯನಿಗೆ, “ನಾನು ಸ್ವಸ್ಥ ಹೊಂದುವೆನೆಂಬುದಕ್ಕೆ ಗುರುತೇನು? ನಾನು ದೇವರ ಆಲಯಕ್ಕೆ ಮತ್ತೆ ಹೋಗುವೆನೆಂಬುದಕ್ಕೆ ಗುರುತೇನು?” ಎಂದು ಕೇಳಿದನು.

ಪ್ರಕಟನೆ 8

ಏಳನೆಯ ಮುದ್ರೆ

ಕುರಿಮರಿಯಾದಾತನು ಏಳನೆಯ ಮುದ್ರೆಯನ್ನು ಒಡೆದನು. ಆಗ ಪರಲೋಕದಲ್ಲಿ ಅರ್ಧ ಗಂಟೆಯ ಕಾಲ ನಿಶ್ಯಬ್ದವಾಯಿತು. ದೇವರ ಎದುರಿನಲ್ಲಿ ಏಳು ದೇವದೂತರು ನಿಂತಿರುವುದನ್ನು ನಾನು ನೋಡಿದೆನು. ಅವರಿಗೆ ಏಳು ತುತೂರಿಗಳನ್ನು ಕೊಡಲಾಯಿತು.

ಮತ್ತೊಬ್ಬ ದೇವದೂತನು ಬಂದು, ಯಜ್ಞವೇದಿಕೆಯ ಬಳಿ ನಿಂತನು. ಈ ದೇವದೂತನು ಧೂಪವಿದ್ದ ಬಂಗಾರದ ಪಾತ್ರೆಯನ್ನು ಹಿಡಿದುಕೊಂಡಿದ್ದನು. ದೇವರ ಪರಿಶುದ್ಧ ಜನರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಅರ್ಪಿಸುವುದಕ್ಕಾಗಿ ಅವನಿಗೆ ಬಹಳ ಧೂಪವನ್ನು ಕೊಡಲಾಯಿತು. ಈ ದೇವದೂತನು ಸಿಂಹಾಸನದ ಎದುರಿನಲ್ಲಿರುವ ಚಿನ್ನದ ಯಜ್ಞವೇದಿಕೆಯ ಮೇಲೆ ಈ ಧೂಪವನ್ನು ಇಟ್ಟನು. ಧೂಪದ ಹೊಗೆಯು ದೇವದೂತನ ಕೈಯಿಂದ ದೇವಜನರ ಪ್ರಾರ್ಥನೆಗಳೊಂದಿಗೆ ದೇವರ ಬಳಿಗೆ ಏರಿಹೋಯಿತು. ಆಗ ದೇವದೂತನು ಧೂಪವಿದ್ದ ಪಾತ್ರೆಯನ್ನು ಯಜ್ಞವೇದಿಕೆಯ ಬೆಂಕಿಯಿಂದ ತುಂಬಿಸಿ ಅದನ್ನು ಭೂಮಿಯ ಮೇಲೆ ಎಸೆದನು. ಆಗ ಮಿಂಚು ಗುಡುಗುಗಳೂ ಮತ್ತಿತರ ಧ್ವನಿಗಳೂ ಭೂಕಂಪಗಳೂ ಉಂಟಾದವು.

ಏಳು ತುತೂರಿಗಳನ್ನು ಹಿಡಿದಿರುವ ಏಳು ಮಂದಿ ದೇವದೂತರು

ನಂತರ ಆ ಏಳು ಮಂದಿ ದೇವದೂತರು ಏಳು ತುತೂರಿಗಳನ್ನು ಊದಲು ಸಿದ್ಧರಾದರು.

ಮೊದಲನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ರಕ್ತದಲ್ಲಿ ಕಲಸಿದ್ದ ಆಲಿಕಲ್ಲುಗಳ ಮತ್ತು ಬೆಂಕಿಯ ಮಳೆಯು ಭೂಮಿಯ ಮೇಲೆ ಸುರಿಯಿತು. ಭೂಮಿಯ ಮೂರನೆಯ ಒಂದು ಭಾಗ ಮತ್ತು ಹಸಿರು ಹುಲ್ಲೆಲ್ಲಾ ಸುಟ್ಟುಹೋದವು; ಮತ್ತು ಮರಗಳಲ್ಲಿ ಮೂರನೆಯ ಒಂದು ಭಾಗ ಸುಟ್ಟುಹೋದವು.

ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಬೆಂಕಿಯಿಂದ ಉರಿಯುತ್ತಿದ್ದ ದೊಡ್ಡ ಬೆಟ್ಟವೋ ಎಂಬಂತಿದ್ದ ವಸ್ತುವೊಂದನ್ನು ಸಮುದ್ರದೊಳಕ್ಕೆ ಎಸೆಯಲಾಯಿತು. ಆಗ ಸಮುದ್ರದ ಮೂರನೆಯ ಒಂದು ಭಾಗ ರಕ್ತವಾಯಿತು. ಸಮುದ್ರದಲ್ಲಿದ್ದ ಜೀವಿಗಳಲ್ಲಿ ಮೂರನೆಯ ಒಂದು ಭಾಗ ಸತ್ತುಹೋದವು ಮತ್ತು ಹಡಗುಗಳಲ್ಲಿ ಮೂರನೆಯ ಒಂದು ಭಾಗ ನಾಶವಾದವು.

10 ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪಂಜಿನಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ಕೆಳಗೆ ಬಿತ್ತು. ಆ ನಕ್ಷತ್ರವು ನದಿಗಳಲ್ಲಿ ಮತ್ತು ನೀರಿನ ಬುಗ್ಗೆಗಳಲ್ಲಿ ಮೂರನೆಯ ಒಂದು ಭಾಗದ ಮೇಲೆ ಬಿದ್ದಿತು. 11 ಆ ನಕ್ಷತ್ರಕ್ಕೆ “ಕಹಿ ಮರ”[a] ಎಂದು ಹೆಸರು. ನೀರಿನಲ್ಲಿ ಮೂರನೆಯ ಒಂದು ಭಾಗವು ಕಹಿಯಾಯಿತು. ಈ ಕಹಿಯಾದ ನೀರನ್ನು ಕುಡಿದು ಅನೇಕ ಜನರು ಸತ್ತುಹೋದರು.

12 ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಸೂರ್ಯನಲ್ಲಿ ಮೂರನೆಯ ಒಂದು ಭಾಗ, ಚಂದ್ರನಲ್ಲಿ ಮೂರನೆಯ ಒಂದು ಭಾಗ ಮತ್ತು ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗ ಬಡಿಯಲ್ಪಟ್ಟು ಅವುಗಳಲ್ಲಿ ಮೂರನೆಯ ಒಂದು ಭಾಗ ಕತ್ತಲಾಯಿತು. ಹಗಲಿನಲ್ಲಿಯೂ ರಾತ್ರಿಯಲ್ಲಿಯೂ ಮೂರನೆಯ ಒಂದು ಭಾಗಕ್ಕೆ ಬೆಳಕಿಲ್ಲದಂತಾಯಿತು.

13 ನಾನು ನೋಡುತ್ತಿದ್ದಂತೆ, ವಾಯುಮಂಡಲದ ಅತಿ ಎತ್ತರದಲ್ಲಿ ಗರುಡ ಪಕ್ಷಿಯೊಂದು ಹಾರಾಡುತ್ತಿರುವುದನ್ನು ಕಂಡೆನು. ಆ ಪಕ್ಷಿಯು ಗಟ್ಟಿಯಾದ ಧ್ವನಿಯಲ್ಲಿ, “ತೊಂದರೆ! ತೊಂದರೆ! ಭೂಮಿಯ ಮೇಲೆ ವಾಸಿಸುವ ಜನರಿಗೆ ತೊಂದರೆ! ಇತರ ಮೂರು ಮಂದಿ ದೇವದೂತರು ತಮ್ಮ ತುತೂರಿಗಳನ್ನು ಊದಿದಾಗ ವಿಪತ್ತುಗಳು ಆರಂಭವಾಗುತ್ತವೆ” ಎಂದು ಕೂಗಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International