M’Cheyne Bible Reading Plan
ಅನ್ಯಜನಾಂಗಗಳ ಮೇಲೆ ದಾವೀದನ ಜಯ
18 ಅನಂತರ ದಾವೀದನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋದನು. ಅವರನ್ನು ಸೋಲಿಸಿ ಗತ್ ಪಟ್ಟಣ ಮತ್ತು ಅದರ ಸುತ್ತಮುತ್ತಲಿದ್ದ ಊರುಗಳನ್ನು ವಶಪಡಿಸಿಕೊಂಡನು.
2 ಅನಂತರ ದಾವೀದನು ಮೋವಾಬ್ಯರ ಸಂಗಡ ಯುದ್ಧಮಾಡಿ ಸೋಲಿಸಿದನು. ಅವರು ದಾವೀದನ ಸೇವಕರಾಗಿ ಕಪ್ಪ ಕೊಡಬೇಕಾಯಿತು.
3 ದಾವೀದನು ಚೋಬದ ಅರಸನಾದ ಹದದೆಜರನ ಸೈನ್ಯದೊಡನೆ ಕಾದಾಡಿ ಅವರನ್ನು ಹಮಾತಿನ ತನಕ ಹಿಂದಟ್ಟಿದನು. ಹದದೆಜರನು ತನ್ನ ರಾಜ್ಯವನ್ನು ಯೂಫ್ರೇಟೀಸ್ ನದಿಯ ತನಕ ವಿಸ್ತರಿಸಲು ಪ್ರಯತ್ನಿಸುತ್ತಿದ್ದನು. 4 ಹದದೆಜರನಿಂದ ದಾವೀದನು ಒಂದು ಸಾವಿರ ರಥಗಳನ್ನೂ ಏಳು ಸಾವಿರ ಮಂದಿ ರಾಹುತರನ್ನೂ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದು ಹದದೆಜರನ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದು ಆ ಕುದುರೆಗಳು ರಥಗಳನ್ನು ಎಳೆಯದಂತೆ ಮಾಡಿದನು. ಆದರೆ ನೂರು ರಥಗಳನ್ನು ಎಳೆಯಲು ಬೇಕಾಗುವಷ್ಟು ಕುದುರೆಗಳನ್ನು ಉಳಿಸಿದನು.
5 ಹದದೆಜರನಿಗೆ ದಮಸ್ಕದಲ್ಲಿರುವ ಅರಾಮ್ಯರು ಸಹಾಯಕ್ಕೆ ಬಂದರು. ಆದರೆ ದಾವೀದನು ಅರಾಮ್ಯರ ಸೈನ್ಯವನ್ನು ಸೋಲಿಸಿ ಅವರ ಇಪ್ಪತ್ತೆರಡು ಸಾವಿರ ಮಂದಿ ಸೈನಿಕರನ್ನು ಕೊಂದನು. 6 ನಂತರ ಅರಾಮ್ಯರ ದಮಸ್ಕದಲ್ಲಿ ತನ್ನ ಕೋಟೆಯನ್ನು ಸ್ಥಾಪಿಸಿದನು. ಅರಾಮ್ಯರು ದಾವೀದನ ಸೇವಕರಾಗಿ ಅವನಿಗೆ ಕಪ್ಪಕಾಣಿಕೆಯನ್ನು ತಂದೊಪ್ಪಿಸುತ್ತಿದ್ದರು. ಹೀಗೆ ದಾವೀದನು ಹೋದ ಕಡೆಯಲ್ಲೆಲ್ಲಾ ಯೆಹೋವನು ಅವನಿಗೆ ಜಯವನ್ನು ಕೊಟ್ಟನು.
7 ಹದದೆಜರನ ಸೇನಾಧಿಪತಿಗಳು ಉಪಯೋಗಿಸುತ್ತಿದ್ದ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು ಜೆರುಸಲೇಮಿಗೆ ತಂದನು. 8 ಅಲ್ಲದೆ ಟಿಭತ್ ಮತ್ತು ಕೂನ್ ಪಟ್ಟಣಗಳಿಂದ ಬಹಳ ತಾಮ್ರವನ್ನು ತೆಗೆದುಕೊಂಡನು. ಇವುಗಳಿಂದ ಸೊಲೊಮೋನನು ತಾಮ್ರದ ತೊಟ್ಟಿ, ತಾಮ್ರದ ಕಂಬ ಮತ್ತು ದೇವಾಲಯದ ಬೇರೆ ಸಾಮಾಗ್ರಿಗಳನ್ನು ಮಾಡಿಸಿದನು.
9 ದಾವೀದನು ಹದದೆಜರನನ್ನು ಸದೆಬಡಿದನೆಂದು ತಿಳಿದ ಹಮಾತಿನ ಅರಸನಾದ ತೋವನು 10 ತನ್ನ ಮಗನಾದ ಹದೋರಾಮನನ್ನು ದಾವೀದನ ಬಳಿಗೆ ಸಮಾಧಾನಕ್ಕಾಗಿಯೂ ಆಶೀರ್ವದಿಸುವುದಕ್ಕಾಗಿಯೂ ಕಳುಹಿಸಿದನು; ಯಾಕೆಂದರೆ ದಾವೀದನು ಹದದೆಜರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದನು. ಹದದೆಜರನು ತೋವನೊಂದಿಗೆ ಯುದ್ಧ ಮಾಡಿದ್ದನು. ಹದೋರಾಮನು ಬೆಳ್ಳಿಬಂಗಾರಗಳ ಮತ್ತು ತಾಮ್ರಗಳ ವಸ್ತುಗಳನ್ನು ದಾವೀದನಿಗೆ ಕೊಟ್ಟನು. 11 ದಾವೀದ ರಾಜನು ಅವುಗಳನ್ನು ಶುದ್ಧೀಕರಿಸಿ ಯೆಹೋವನಿಗೆ ಪ್ರತಿಷ್ಠಿಸಿದನು. ಅದೇ ರೀತಿಯಾಗಿ ಎದೋಮ್ಯರಿಂದ, ಮೋವಾಬ್ಯರಿಂದ, ಫಿಲಿಷ್ಟಿಯರಿಂದ, ಅಮಾಲೇಕ್ಯರಿಂದ ಮತ್ತು ಅಮ್ಮೋನಿಯರಿಂದ ತೆಗೆದುಕೊಂಡಿದ್ದ ಬೆಳ್ಳಿಬಂಗಾರದ ವಸ್ತುಗಳನ್ನು ಶುದ್ಧಿಮಾಡಿ ದೇವರಿಗೆ ಪ್ರತಿಷ್ಠಿಸಿದನು.
12 ಚೆರೂಯಳ ಮಗನಾದ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಒಮ್ಮೆ ಹದಿನೆಂಟು ಸಾವಿರ ಮಂದಿ ಎದೋಮ್ಯರನ್ನು ಕೊಂದುಹಾಕಿದನು. 13 ಅಬ್ಷೈಯು ಎದೋಮಿನಲ್ಲಿ ಕೋಟೆಯನ್ನು ಕಟ್ಟಿ ಎದೋಮ್ಯರೆಲ್ಲರನ್ನು ದಾವೀದನ ಸೇವಕರನ್ನಾಗಿ ಮಾಡಿದನು. ದಾವೀದನು ಹೋದಕಡೆಗಳಲ್ಲೆಲ್ಲಾ ಯೆಹೋವನು ಅವನಿಗೆ ಜಯವನ್ನು ಕೊಟ್ಟನು.
ದಾವೀದನ ಮುಖ್ಯಾಧಿಕಾರಿಗಳು
14 ಇಸ್ರೇಲರೆಲ್ಲರಿಗೆ ಅರಸನಾಗಿದ್ದ ದಾವೀದನು ಪಕ್ಷಪಾತವಿಲ್ಲದೆ ನ್ಯಾಯತೀರಿಸುತ್ತಿದ್ದನು. 15 ಚೆರೂಯಳ ಮಗನಾದ ಯೋವಾಬನು ಅವನ ಪ್ರಧಾನ ಸೇನಾಪತಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಲೇಖಕನಾಗಿದ್ದು ದಾವೀದನ ಚರಿತ್ರೆಯನ್ನು ಬರೆದಿಟ್ಟನು. 16 ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಬೀಮೆಲೆಕನೂ ಯಾಜಕರಾಗಿದ್ದರು. ಶವ್ಷನು ಲೇಖಕನಾಗಿದ್ದನು. 17 ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳಿಗೆ ಬೆನಾಯನು ಅಧಿಕಾರಿಯಾಗಿದ್ದನು. ಬೆನಾಯನು ಯೆಹೋಯಾದನ ಮಗ. ದಾವೀದನ ಗಂಡುಮಕ್ಕಳು ಮುಖ್ಯ ಸ್ಥಾನಗಳಲ್ಲಿದ್ದು ದಾವೀದನ ಸೇವೆಮಾಡುತ್ತಿದ್ದರು.
ಸ್ವಾರ್ಥಪರರರಾದ ಶ್ರೀಮಂತರನ್ನು ದಂಡಿಸಲಾಗುವುದು
5 ಶ್ರೀಮಂತ ಜನರೇ, ಕೇಳಿರಿ! ನಿಮಗೆ ಮಹಾಕಷ್ಟವು ಬರಲಿರುವುದರಿಂದ ಗೋಳಾಡಿರಿ, ದುಃಖಪಡಿರಿ. 2 ನಿಮ್ಮ ಶ್ರೀಮಂತಿಕೆಯು ಕೊಳೆತುಹೋಗುತ್ತದೆ ಮತ್ತು ಬೆಲೆಯಿಲ್ಲದಂತಾಗುತ್ತದೆ. ನಿಮ್ಮ ಬಟ್ಟೆಗಳನ್ನು ನುಸಿಗಳು ತಿಂದುಹಾಕುತ್ತವೆ. 3 ನಿಮ್ಮ ಬೆಳ್ಳಿಬಂಗಾರಗಳು ತುಕ್ಕು ಹಿಡಿಯುತ್ತವೆ. ನೀವು ತಪ್ಪಿತಸ್ಥರೆಂಬುದಕ್ಕೆ ಅದೇ ಸಾಕ್ಷಿಯಾಗಿದೆ. ಅವುಗಳ ತುಕ್ಕು ನಿಮ್ಮ ದೇಹವನ್ನು ಬೆಂಕಿಯಂತೆ ತಿಂದುಬಿಡುತ್ತವೆ. ನೀವು ಈ ಕೊನೆಯ ದಿನಗಳಲ್ಲಿ ನಿಮ್ಮ ಭಂಡಾರವನ್ನು ತುಂಬಿಸಿಕೊಂಡಿದ್ದೀರಿ. 4 ಜನರು ನಿಮ್ಮ ಹೊಲಗಳಲ್ಲಿ ಕೆಲಸ ಮಾಡಿದರೂ ನೀವು ಅವರಿಗೆ ಕೂಲಿಯನ್ನು ಕೊಡಲಿಲ್ಲ. ಅವರು ನಿಮ್ಮ ವಿರುದ್ಧವಾಗಿ ಗೋಳಾಡುತ್ತಿದ್ದಾರೆ. ಅವರು ನಿಮ್ಮ ಬೆಳೆಗಳ ಸುಗ್ಗಿಯನ್ನು ಮಾಡಿದರು. ಈಗ ಪರಲೋಕ ಸೇನೆಯ ಅಧಿಪತಿಯಾದ ಪ್ರಭುವು ಅವರ ಗೋಳಾಟವನ್ನು ಕೇಳಿಸಿಕೊಂಡಿದ್ದಾನೆ.
5 ನಿಮ್ಮ ಈ ಲೋಕದ ಜೀವನವು ಐಶ್ವರ್ಯದಿಂದ ತುಂಬಿದೆ. ನೀವು ಇಷ್ಟಪಟ್ಟದ್ದನ್ನೆಲ್ಲ ಪಡೆದುಕೊಂಡು ತೃಪ್ತರಾದಿರಿ. ವಧಿಸುವ ಕಾಲಕ್ಕೆ ಸಿದ್ಧವಾಗಿರುವ ಪಶುವಿನಂತೆ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ. 6 ನೀವು ಒಳ್ಳೆಯ ಜನರಿಗೆ ದಂಡನೆ ವಿಧಿಸಿದಿರಿ. ಅವರು ನಿಮಗೆ ವಿರೋಧವಾಗಿಲ್ಲದಿದ್ದರೂ ಅವರನ್ನು ಕೊಂದುಹಾಕಿದಿರಿ.
ತಾಳ್ಮೆಯಿಂದಿರಿ
7 ಸಹೋದರ ಸಹೋದರಿಯರೇ, ತಾಳ್ಮೆಯಿಂದಿರಿ, ಪ್ರಭುವಾದ ಯೇಸು ಪ್ರತ್ಯಕ್ಷನಾಗುತ್ತಾನೆ. ಆದ್ದರಿಂದ ಅಲ್ಲಿಯವರೆಗೆ ತಾಳ್ಮೆಯಿಂದಿರಿ. ತನ್ನ ಅಮೂಲ್ಯ ಬೆಳೆಯು ಭೂಮಿಯಿಂದ ಬರುವ ತನಕ ರೈತನು ತಾಳ್ಮೆಯಿಂದ ಕಾಯುತ್ತಾನೆ. ಮೊದಲ ಹಾಗೂ ಕೊನೆಯ ಮಳೆಯು ತನ್ನ ಬೆಳೆಯ ಮೇಲೆ ಸುರಿಯುವ ತನಕ ರೈತನು ತಾಳ್ಮೆಯಿಂದ ಕಾದಿರುತ್ತಾನೆ. 8 ನೀವೂ ತಾಳ್ಮೆಯಿಂದಿರಬೇಕು. ನಿಮ್ಮ ನಿರೀಕ್ಷೆಯನ್ನು ಬಿಡಬೇಡಿ. ಪ್ರಭು ಯೇಸು ಬೇಗನೆ ಪ್ರತ್ಯಕ್ಷನಾಗುವನು. 9 ಸಹೋದರ ಸಹೋದರಿಯರೇ, ಒಬ್ಬರ ಮೇಲೊಬ್ಬರು ದೂರದಿರಿ. ನೀವು ದೂರುವುದನ್ನು ನಿಲ್ಲಿಸದಿದ್ದರೆ ದೋಷಿಗಳೆಂದು ನಿಮಗೆ ತೀರ್ಪು ನೀಡಲಾಗುವುದು. ನ್ಯಾಯಧಿಪತಿಯು ಬರಲು ಸಿದ್ಧನಾಗಿದ್ದಾನೆ!
10 ಸಹೋದರ ಸಹೋದರಿಯರೇ, ಪ್ರಭುವಿನ ಸಂದೇಶವನ್ನು ತಿಳಿಸಿದ ಪ್ರವಾದಿಗಳು ನಿಮಗೆ ಮಾದರಿಯಾಗಿರಲಿ. ಅವರು ಅನೇಕ ರೀತಿಯಲ್ಲಿ ಸಂಕಟವನ್ನು ಅನುಭವಿಸಿದರೂ ತಾಳ್ಮೆಯಿಂದಿದ್ದರು. 11 ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ಯೋಬನ ತಾಳ್ಮೆಯ ಬಗ್ಗೆ ನಿಮಗೆ ತಿಳಿದಿದೆ. ಯೋಬನು ಎಲ್ಲಾ ಬಗೆಯ ಸಂಕಟಗಳನ್ನು ಅನುಭವಿಸಿದ ಮೇಲೆ ಪ್ರಭುವು ಅವನಿಗೆ ಸಹಾಯ ಮಾಡಿದನು. ಪ್ರಭುವು ದಯೆಯಿಂದಲೂ ಕರುಣೆಯಿಂದಲೂ ತುಂಬಿದ್ದಾನೆಂದು ಇದು ತೋರಿಸುತ್ತದೆ.
ಎಚ್ಚರಿಕೆಯಿಂದ ಮಾತಾಡಿರಿ
12 ನನ್ನ ಸಹೋದರ ಸಹೋದರಿಯರೇ, ನೀವು ವಾಗ್ದಾನ ಮಾಡುವಾಗ ಆಣೆ ಇಡಬೇಡಿರಿ. ಇದು ಬಹಳ ಮುಖ್ಯವಾದದ್ದು. ನಿಮ್ಮ ಹೇಳಿಕೆಯನ್ನು ನಿರೂಪಿಸಲು ಪರಲೋಕದ, ಭೂಲೋಕದ ಮತ್ತು ಬೇರಾವುದರ ಹೆಸರನ್ನೂ ಬಳಸಬೇಡಿ. ಹೌದಾಗಿದ್ದರೆ, “ಹೌದು” ಎನ್ನಿರಿ. ಇಲ್ಲವಾಗಿದ್ದರೆ, “ಇಲ್ಲ” ಎನ್ನಿರಿ. ನೀವು ಹೀಗೆ ಮಾಡಿದರೆ, ನಿಮಗೆ ದೋಷಿಗಳೆಂಬ ತೀರ್ಪಾಗುವುದಿಲ್ಲ.
ಪ್ರಾರ್ಥನೆಯ ಶಕ್ತಿ
13 ನಿಮ್ಮಲ್ಲಿ ತೊಂದರೆಗೆ ಒಳಗಾಗಿರುವವನು ಪ್ರಾರ್ಥಿಸಬೇಕು. ನಿಮ್ಮಲ್ಲಿ ಸಂತೋಷದಿಂದಿರುವವನು ಹಾಡಬೇಕು. 14 ನಿಮ್ಮಲ್ಲಿ ಕಾಯಿಲೆಯಾಗಿರುವವನು ಸಭಾಹಿರಿಯರನ್ನು ಕರೆಯಿಸಬೇಕು. ಹಿರಿಯರು ಅವನಿಗೆ ಎಣ್ಣೆಯನ್ನು ಹಚ್ಚಿ, ಪ್ರಭುವಿನ ಹೆಸರಿನಲ್ಲಿ ಅವನಿಗೋಸ್ಕರ ಪ್ರಾರ್ಥಿಸಬೇಕು. 15 ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಕಾಯಿಲೆಯಲ್ಲಿರುವವನನ್ನು ಗುಣಪಡಿಸುತ್ತದೆ. ಪ್ರಭುವು ಅವನನ್ನು ಗುಣಪಡಿಸುತ್ತಾನೆ. ಒಂದುವೇಳೆ, ಆ ವ್ಯಕ್ತಿಯು ಪಾಪ ಮಾಡಿದ್ದರೆ, ಪ್ರಭುವು ಅವನನ್ನು ಕ್ಷಮಿಸುತ್ತಾನೆ.
16 ನೀವು ಮಾಡಿದ ತಪ್ಪುಗಳನ್ನು ಒಬ್ಬರಿಗೊಬ್ಬರು ಯಾವಾಗಲೂ ಹೇಳಿಕೊಳ್ಳಿರಿ. ಬಳಿಕ ಒಬ್ಬರಿಗೊಬ್ಬರು ಪ್ರಾರ್ಥಿಸಿರಿ. ನೀವು ಹೀಗೆ ಮಾಡಿದರೆ, ದೇವರು ನಿಮ್ಮನ್ನು ಗುಣಪಡಿಸುವನು. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಲವಾಗಿದೆ. 17 ಎಲೀಯನು ಸಹ ನಮ್ಮಂತೆಯೇ ಒಬ್ಬ ಮನುಷ್ಯನಾಗಿದ್ದನು. ಮಳೆ ಬಾರದಂತೆ ಅವನು ಪ್ರಾರ್ಥಿಸಿದಾಗ ಮೂರುವರೆ ವರ್ಷಗಳವರೆಗೆ ಆ ನಾಡಿನಲ್ಲಿ ಮಳೆಯೇ ಬೀಳಲಿಲ್ಲ! 18 ಬಳಿಕ ಎಲೀಯನು ಮಳೆ ಬರುವಂತೆ ಪ್ರಾರ್ಥಿಸಿದಾಗ ಆಕಾಶದಿಂದ ಮಳೆ ಸುರಿದು ಭೂಮಿಯಲ್ಲಿ ಮತ್ತೆ ಬೆಳೆಯು ಫಲಿಸಿತು.
ಆತ್ಮವನ್ನು ರಕ್ಷಿಸಿ
19 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಬ್ಬನು ಸತ್ಯದಿಂದ ದೂರವಾಗಿ ಅಲೆದಾಡುತ್ತಿದ್ದರೆ, ಮತ್ತೊಬ್ಬನು ಅವನಿಗೆ ಸಹಾಯಮಾಡಿ ಅವನನ್ನು ಸತ್ಯಕ್ಕೆ ನಡೆಸಬೇಕು. 20 ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ: ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ಸರಿಯಾದ ಮಾರ್ಗಕ್ಕೆ ನಡೆಸುವವನು ಆ ಪಾಪಿಯ ಆತ್ಮವನ್ನು ಮರಣದಿಂದ ಪಾರುಮಾಡಿದವನೂ ಅನೇಕ ಪಾಪಗಳಿಗೆ ಕ್ಷಮಾಪಣೆಯಾಗುವಂತೆ ಮಾಡಿದವನೂ ಆಗುತ್ತಾನೆ.
ಯೋನನ ಪ್ರಾರ್ಥನೆ
2 ಯೋನನು ಮೀನಿನ ಹೊಟ್ಟೆಯೊಳಗಿದ್ದಾಗ ದೇವರಾದ ಯೆಹೋವನಿಗೆ ಪ್ರಾರ್ಥಿಸಿ ಹೀಗೆಂದನು:
2 “ನಾನು ದೊಡ್ಡ ಆಪತ್ತಿನಲ್ಲಿದ್ದೆನು.
ಸಹಾಯಕ್ಕಾಗಿ ನಾನು ಯೆಹೋವನಿಗೆ ಮೊರೆಯಿಟ್ಟೆನು.
ಆತನು ನನಗೆ ಉತ್ತರ ದಯಪಾಲಿಸಿದನು.
ನಾನು ಆಳವಾದ ಸಮಾಧಿಯೊಳಗಿದ್ದೆನು.
ನಾನು ನಿನಗೆ ಮೊರೆಯಿಟ್ಟಾಗ,
ಯೆಹೋವನೇ, ನೀನು ನನ್ನ ಸ್ವರವನ್ನು ಕೇಳಿದೆ.
3 “ನೀನು ನನ್ನನ್ನು ಸಮುದ್ರಕ್ಕೆ ಎಸೆದೆ.
ನಿನ್ನ ಬಲವಾದ ತೆರೆಗಳು ನನ್ನ ಮೇಲೆ ಅಪ್ಪಳಿಸಿದವು.
ನಾನು ನೀರಿನ ಆಳವಾದ ಸ್ಥಳಕ್ಕೆ ಮುಳುಗಿಹೋದೆ.
ನಾನು ಸಮುದ್ರದ ನೀರಿನಿಂದ ಆವರಿಸಲ್ಪಟ್ಟೆನು.
4 ಆಗ ನಾನು, ‘ನಾನು ನಿನ್ನ ಕಣ್ಣೆದುರಿನಿಂದ ಹೊರದೂಡಲ್ಪಟ್ಟಿದ್ದೇನೆ’ ಅಂದುಕೊಂಡೆನು.
ಆದರೂ ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ನೋಡುವೆನು.
5 “ಸಮುದ್ರದ ನೀರು ನನ್ನನ್ನು ಮುಚ್ಚಿಬಿಟ್ಟಿತು.
ನೀರು ನನ್ನ ಬಾಯಿಯನ್ನು ಮುಚ್ಚಿತು.
ಆಗ ನನಗೆ ಉಸಿರಾಡಲಾಗಲಿಲ್ಲ.
ನಾನು ಮುಳುಗುತ್ತಾ ಮುಳುಗುತ್ತಾ ಸಮುದ್ರದ ಆಳಕ್ಕೆ ಹೋದೆನು.
ಸಮುದ್ರ ಪಾಚಿಗಳು ನನ್ನ ತಲೆಯನ್ನು ಸುತ್ತುಹಾಕಿದವು.
6 ನಾನು ಸಮುದ್ರದ ತಳದಲ್ಲಿದ್ದೆನು.
ಅಲ್ಲಿಂದ ಪರ್ವತಗಳು ಉಗಮವಾಗುತ್ತವೆ.
‘ನಾನು ಈ ಸೆರೆಮನೆಯಲ್ಲಿ ಎಂದೆಂದಿಗೂ ಬಂಧಿತನಾದೆನು’ ಎಂದು ನೆನಸಿದೆನು.
ಆದರೆ ನನ್ನ ದೇವರಾದ ಯೆಹೋವನು ಸಮಾಧಿಯಿಂದ ನನ್ನನ್ನು ಹೊರತಂದನು.
ಯೆಹೋವನೇ ನೀನು ಪುನಃ ನನಗೆ ಜೀವ ಕೊಟ್ಟೆ.
7 “ನನ್ನ ಆತ್ಮಕ್ಕೆ ಯಾವ ನಿರೀಕ್ಷೆಯೂ ಇರಲಿಲ್ಲ.
ಆಗ ನಾನು ಯೆಹೋವನನ್ನು ಸ್ಮರಿಸಿದೆನು.
ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದೆನು.
ನೀನು ನಿನ್ನ ಪವಿತ್ರ ಆಲಯದಿಂದ ನನ್ನ ಪ್ರಾರ್ಥನೆಯನ್ನು ಕೇಳಿದೆ.
8 “ಕೆಲವು ಜನರು ಪ್ರಯೋಜನವಿಲ್ಲದ ವಿಗ್ರಹಗಳನ್ನು ಪೂಜಿಸುತ್ತಾರೆ.
ಆದರೆ ಆ ವಿಗ್ರಹಗಳು ಅವರಿಗೆ ಸಹಾಯ ಮಾಡುವುದಿಲ್ಲ.
9 ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು.
ಯೆಹೋವನೇ, ನಾನು ನಿನಗೆ ಯಜ್ಞವನ್ನರ್ಪಿಸುವೆನು.
ನಾನು ನಿನ್ನನ್ನು ಕೊಂಡಾಡಿ ಸ್ತೋತ್ರಸಲ್ಲಿಸುವೆನು.
ನಾನು ನಿನಗೆ ವಿಶೇಷವಾದ ಹರಕೆಗಳನ್ನು ಮಾಡುವೆನು.
ನಾನು ಕೊಟ್ಟ ವಚನಗಳನ್ನು ಪಾಲಿಸುವೆನು.”
10 ಆಗ ಯೆಹೋವನು ಆ ಮೀನಿಗೆ ಆಜ್ಞಾಪಿಸಲು ಆ ಮೀನು ಯೋನನನ್ನು ಒಣನೆಲದಲ್ಲಿ ತನ್ನ ಹೊಟ್ಟೆಯೊಳಗಿಂದ ಕಾರಿಬಿಟ್ಟಿತು.
ಗುಣಹೊಂದಿದ ಸೇವಕ
(ಮತ್ತಾಯ 8:5-13; ಯೋಹಾನ 4:43-54)
7 ಯೇಸುವು ಜನರಿಗೆ ಈ ಸಂಗತಿಗಳೆಲ್ಲವನ್ನು ಹೇಳಿ ಮುಗಿಸಿದ ನಂತರ ಕಪೆರ್ನೌಮಿಗೆ ಹೋದನು. 2 ಅಲ್ಲಿ ಒಬ್ಬ ಸೇನಾಧಿಪತಿ[a] ಇದ್ದನು. ಅವನ ಪ್ರಿಯ ಸೇವಕನೊಬ್ಬನು ಕಾಯಿಲೆಯಿಂದ ಸಾಯುವ ಸ್ಥಿತಿಯಲ್ಲಿದ್ದನು. 3 ಯೇಸುವಿನ ಸುದ್ದಿಯನ್ನು ಕೇಳಿದಾಗ, ಅವನು ಕೆಲವು ಹಿರಿಯ ಯೆಹೂದ್ಯನಾಯಕರನ್ನು ಆತನ ಬಳಿಗೆ ಕಳುಹಿಸಿ ತನ್ನ ಸೇವಕನ ಪ್ರಾಣವನ್ನು ಉಳಿಸಿಕೊಡಬೇಕೆಂದು ಬೇಡಿಕೊಂಡನು. 4 ಆ ಜನರು ಯೇಸುವಿನ ಬಳಿಗೆ ಬಂದು, “ಈ ಸೇನಾಧಿಪತಿ ನಿನ್ನ ಸಹಾಯ ಹೊಂದುವುದಕ್ಕೆ ಯೋಗ್ಯನಾಗಿದ್ದಾನೆ. 5 ಅವನು ನಮ್ಮ ಜನರನ್ನು ಪ್ರೀತಿಸುತ್ತಾನೆ ಮತ್ತು ನಮಗೋಸ್ಕರ ಸಭಾಮಂದಿರವನ್ನು ಕಟ್ಟಿಸಿಕೊಟ್ಟಿದ್ದಾನೆ” ಎಂದು ಹೇಳಿ ಬಹಳವಾಗಿ ಬೇಡಿಕೊಂಡರು.
6 ಆದ್ದರಿಂದ ಯೇಸು ಅವರ ಜೊತೆ ಹೊರಟನು. ಯೇಸು ಮನೆಯ ಹತ್ತಿರ ಬರುತ್ತಿರುವಾಗ, ಆ ಅಧಿಕಾರಿಯು ಸ್ನೇಹಿತರನ್ನು, “ಪ್ರಭುವೇ, ನೀನು ನನ್ನ ಮನೆಗೆ ಬರುವಷ್ಟು ನಾನು ಯೋಗ್ಯನಲ್ಲ. 7 ನಿನ್ನ ಬಳಿಗೆ ಬರುವುದಕ್ಕೂ ನನಗೆ ಯೋಗ್ಯತೆ ಇಲ್ಲ. ನೀನು ಕೇವಲ ಒಂದು ಆಜ್ಞೆ ಕೊಟ್ಟರೆ ಸಾಕು, ನನ್ನ ಆಳು ಗುಣಹೊಂದುವನು. 8 ನಿನ್ನ ಅಧಿಕಾರವನ್ನು ನಾನು ತಿಳಿದುಕೊಂಡಿದ್ದೇನೆ. ನಾನೂ ಮತ್ತೊಬ್ಬರ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ. ನಾನು ಒಬ್ಬ ಸೈನಿಕನಿಗೆ, ‘ಹೋಗು’ ಎಂದು ಹೇಳಿದರೆ, ಅವನು ಹೋಗುತ್ತಾನೆ. ಇನ್ನೊಬ್ಬ ಸೈನಿಕನಿಗೆ, ‘ಬಾ’ ಎಂದು ಹೇಳಿದರೆ, ಅವನು ಬರುತ್ತಾನೆ. ನನ್ನ ಆಳಿಗೆ, ‘ಇದನ್ನು ಮಾಡು’ ಎಂದು ಹೇಳಿದರೆ, ಅವನು ನನಗೆ ವಿಧೇಯನಾಗುತ್ತಾನೆ” ಎಂದು ಯೇಸುವಿಗೆ ಹೇಳಲು ಕಳುಹಿಸಿದನು.
9 ಯೇಸು ಇದನ್ನು ಕೇಳಿ ಆಶ್ಚರ್ಯಪಟ್ಟು ತನ್ನನ್ನು ಹಿಂಬಾಲಿಸುತ್ತಿದ್ದ ಜನರ ಕಡೆಗೆ ನೋಡಿ, “ಇಷ್ಟು ದೊಡ್ಡ ನಂಬಿಕೆಯಿರುವ ವ್ಯಕ್ತಿಯನ್ನು ನಾನು ಇಸ್ರೇಲಿನಲ್ಲಿಯೂ ನೋಡಲಿಲ್ಲ ಎಂದು ನಿಮಗೆ ಹೇಳುತ್ತೇನೆ” ಎಂದನು.
10 ಆ ಅಧಿಕಾರಿಯು ಕಳುಹಿಸಿದ್ದ ಜನರು ಯೇಸುವಿನ ಬಳಿಯಿಂದ ಹಿಂತಿರುಗಿ ಹೋದಾಗ, ಆ ಸೇವಕನಿಗೆ ಆಗಲೇ ಗುಣವಾಗಿರುವುದನ್ನು ಕಂಡರು.
ಸತ್ತವನಿಗೆ ಜೀವದಾನ
11 ಮರುದಿನ ಯೇಸು ನಾಯಿನ್ ಎಂಬ ಊರಿಗೆ ಹೋದನು. ಯೇಸುವಿನೊಡನೆ ಆತನ ಶಿಷ್ಯರೂ ಹೋಗುತ್ತಿದ್ದರು. ಅವರೊಡನೆ ಅನೇಕ ಜನರು ದೊಡ್ಡ ಸಮೂಹವಾಗಿ ಹೋಗುತ್ತಿದ್ದರು. 12 ಯೇಸು ಊರಬಾಗಿಲಿನ ಬಳಿಗೆ ಬಂದಾಗ, ಸತ್ತುಹೋಗಿದ್ದ ಒಬ್ಬನನ್ನು ಸಮಾಧಿ ಮಾಡುವುದಕ್ಕಾಗಿ ಹೊತ್ತುಕೊಂಡು ಹೋಗುತ್ತಿದ್ದ ಜನರ ಗುಂಪನ್ನು ಕಂಡನು. ವಿಧವೆಯೊಬ್ಬಳ ಒಬ್ಬನೇ ಮಗನು ಸತ್ತುಹೋಗಿದ್ದನು. ಅವನ ಶವವನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ಊರಿನ ಅನೇಕ ಜನರು ಆಕೆಯೊಡನೆ ಇದ್ದರು. 13 ಪ್ರಭುವು (ಯೇಸು) ಆಕೆಯನ್ನು ಕಂಡು ತನ್ನ ಹೃದಯದಲ್ಲಿ ಮರುಕಗೊಂಡು, “ಅಳಬೇಡ” ಎಂದು ಹೇಳಿ 14 ಶವದ ಪೆಟ್ಟಿಗೆಯ ಬಳಿಹೋಗಿ ಅದನ್ನು ಮುಟ್ಟಿದನು. ಆ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವವರು ನಿಂತುಕೊಂಡರು. ಯೇಸು ಸತ್ತುಹೋಗಿದ್ದವನಿಗೆ, “ಯೌವನಸ್ಥನೇ, ಎದ್ದೇಳು! ಎಂದು ನಾನು ನಿನಗೆ ಹೇಳುತ್ತೇನೆ” ಎಂದನು. 15 ಆಗ ಅವನು ಎದ್ದು ಕುಳಿತುಕೊಂಡು ಮಾತಾಡತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದನು.
16 ಜನರೆಲ್ಲರೂ ವಿಸ್ಮಯಪಟ್ಟರು. ಅವರು ದೇವರನ್ನು ಸ್ತುತಿಸುತ್ತಾ, “ಒಬ್ಬ ಮಹಾಪ್ರವಾದಿ ನಮ್ಮ ಬಳಿಗೆ ಬಂದಿದ್ದಾನೆ! ದೇವರು ತನ್ನ ಜನರಿಗೆ ಸಹಾಯ ಮಾಡಲು ಬಂದಿದ್ದಾನೆ” ಎಂದು ಹೇಳಿದರು.
17 ಯೇಸುವಿನ ಕುರಿತಾದ ಈ ಸುದ್ದಿಯು ಜುದೇಯದಲ್ಲಿಯೂ ಅದರ ಸುತ್ತಮುತ್ತಲಿನ ಎಲ್ಲಾ ಸ್ಥಳಗಳಲ್ಲಿಯೂ ಹಬ್ಬಿಕೊಂಡಿತು.
ಯೋಹಾನನು ಯೇಸುವಿಗೆ ಕೇಳಿದ ಪ್ರಶ್ನೆ
(ಮತ್ತಾಯ 11:2-19)
18 ಯೋಹಾನನ ಶಿಷ್ಯರು ಈ ಸಂಗತಿಗಳನ್ನೆಲ್ಲಾ ಯೋಹಾನನಿಗೆ ತಿಳಿಸಿದರು. ಯೋಹಾನನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, 19 “ಬರಬೇಕಾದವನು ನೀನೋ ಅಥವಾ ಬೇರೊಬ್ಬ ವ್ಯಕ್ತಿಗಾಗಿ ನಾವು ಕಾಯಬೇಕೋ?” ಎಂದು ಕೇಳುವುದಕ್ಕಾಗಿ ಅವರನ್ನು ಪ್ರಭುವಿನ (ಯೇಸುವಿನ) ಬಳಿಗೆ ಕಳುಹಿಸಿದನು.
20 ಆದ್ದರಿಂದ ಅವರು ಯೇಸುವಿನ ಬಳಿಗೆ ಬಂದು, “ಸ್ನಾನಿಕ ಯೋಹಾನನು ‘ಬರಬೇಕಾದವನು ನೀನೋ ಅಥವಾ ಬೇರೊಬ್ಬ ವ್ಯಕ್ತಿಗಾಗಿ ನಾವು ಕಾಯಬೇಕೋ?’ ಎಂದು ನಿನ್ನನ್ನು ಕೇಳುವುದಕ್ಕಾಗಿ ನಮ್ಮನ್ನು ಇಲ್ಲಿಗೆ ಕಳುಹಿಸಿದ್ದಾನೆ” ಎಂದು ಹೇಳಿದರು.
21 ಅದೇ ಸಮಯದಲ್ಲಿ, ಯೇಸು ಅನೇಕ ಜನರನ್ನು ಅವರವರ ಕಾಯಿಲೆಗಳಿಂದ, ರೋಗಗಳಿಂದ ಗುಣಪಡಿಸಿದನು. ದೆವ್ವಗಳಿಂದ ಪೀಡಿತರಾಗಿದ್ದವರನ್ನು ಬಿಡಿಸಿದನು. ಅನೇಕ ಕುರುಡರಿಗೆ ದೃಷ್ಟಿಯನ್ನು ಕೊಟ್ಟನು. 22 ಬಳಿಕ ಯೇಸು ಯೋಹಾನನ ಶಿಷ್ಯರಿಗೆ, “ನೀವು ಇಲ್ಲಿ ಕಂಡು ಕೇಳಿದ ಸಂಗತಿಗಳನ್ನು ಹೋಗಿ ಯೋಹಾನನಿಗೆ ತಿಳಿಸಿರಿ. ಕುರುಡರಿಗೆ ದೃಷ್ಟಿ ಬರುತ್ತದೆ, ಕುಂಟರು ಕಾಲನ್ನು ಪಡೆದು ನಡೆಯುತ್ತಾರೆ. ಕುಷ್ಠರೋಗಿಗಳು ಗುಣಹೊಂದುತ್ತಾರೆ. ಕಿವುಡರು ಕೇಳುತ್ತಾರೆ, ಸತ್ತವರಿಗೆ ಜೀವ ಬರುತ್ತದೆ ಮತ್ತು ದೇವರ ರಾಜ್ಯದ ಸುವಾರ್ತೆಯು ಬಡವರಿಗೆ ಕೊಡಲ್ಪಡುತ್ತದೆ. 23 ಸಂಶಯಪಡದೆ ನನ್ನನ್ನು ಸ್ವೀಕರಿಸಿಕೊಳ್ಳುವವನೇ ಧನ್ಯನು!” ಎಂದು ಹೇಳಿ ಕಳುಹಿಸಿದನು.
24 ಯೋಹಾನನ ಶಿಷ್ಯರು ಹೊರಟುಹೋದಾಗ, ಯೇಸು ಜನರಿಗೆ ಯೋಹಾನನ ಕುರಿತು ಹೇಳತೊಡಗಿ, “ಏನನ್ನು ನೋಡುವುದಕ್ಕೆ ನೀವು ಮರಳುಗಾಡಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? 25 ನೀವು ಏನನ್ನು ನೋಡಲು ಹೊರಗೆ ಹೋದಿರಿ? ನಯವಾದ ಉಡುಪನ್ನು ಧರಿಸಿರುವ ಮನುಷ್ಯನನ್ನೋ? ಇಲ್ಲ. ನಯವಾದ ಮತ್ತು ಚಂದವಾದ ಉಡುಪನ್ನು ಧರಿಸಿದವರು ಅರಮನೆಗಳಲ್ಲಿ ವಾಸಮಾಡುತ್ತಾರೆ. 26 ನಿಜವಾಗಿಯೂ, ನೀವು ಏನನ್ನು ನೋಡಲು ಹೊರಗೆ ಹೋದಿರಿ? ಪ್ರವಾದಿಯನ್ನೋ? ಹೌದು. ನಾನು ನಿಮಗೆ ಹೇಳುವುದೇನೆಂದರೆ, ಯೋಹಾನನು ಪ್ರವಾದಿಗಿಂತಲೂ ಶ್ರೇಷ್ಠನಾಗಿದ್ದಾನೆ.
27 ‘ಇಗೋ! ನಾನು (ದೇವರು) ನನ್ನ ದೂತನನ್ನು[b] ನಿನ್ನ ಮುಂದೆ ಕಳುಹಿಸುತ್ತೇನೆ.
ಅವನು ನಿನಗೋಸ್ಕರ ದಾರಿಯನ್ನು ಸಿದ್ಧಮಾಡುವನು’(A)
ಎಂದು ಯೋಹಾನನ ಕುರಿತು ಬರೆದಿದೆ. 28 ಈ ಲೋಕದಲ್ಲಿ ಹುಟ್ಟಿದ ಎಲ್ಲಾ ಮನುಷ್ಯರಲ್ಲಿ ಯೋಹಾನನೇ ದೊಡ್ಡವನು ಎಂದು ನಾನು ನಿಮಗೆ ಹೇಳುತ್ತೇನೆ. ಆದರೂ ದೇವರ ರಾಜ್ಯದಲ್ಲಿರುವ ಕನಿಷ್ಠನು ಸಹ ಅವನಿಗಿಂತ ಶ್ರೇಷ್ಠನೇ ಸರಿ” ಎಂದನು.
29 ಯೋಹಾನನು ಉಪದೇಶಿಸಿದ ದೇವರ ವಾಕ್ಯವನ್ನು ಜನರೆಲ್ಲರೂ ಸ್ವೀಕರಿಸಿಕೊಂಡರು. ಸುಂಕವಸೂಲಿಗಾರರೂ ಸ್ವೀಕರಿಸಿಕೊಂಡರು. ಇವರೆಲ್ಲರೂ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡರು. 30 ಆದರೆ ಫರಿಸಾಯರು[c] ಮತ್ತು ಧರ್ಮೋಪದೇಶಕರು ದೇವರ ಯೋಜನೆಯನ್ನು ತಿರಸ್ಕರಿಸಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲಿಲ್ಲ.
31 “ಈ ಕಾಲದ ಜನರ ಬಗ್ಗೆ ನಾನು ಏನು ಹೇಳಲಿ? ನಾನು ಅವರನ್ನು ಯಾವುದಕ್ಕೆ ಹೋಲಿಸಲಿ? ಅವರು ಯಾರನ್ನು ಹೋಲುತ್ತಾರೆ? 32 ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಿಗೆ ಹೋಲುತ್ತಾರೆ. ಒಂದು ಗುಂಪಿನ ಮಕ್ಕಳು ಇನ್ನೊಂದು ಗುಂಪಿನ ಮಕ್ಕಳನ್ನು ಕರೆದು,
‘ನಾವು ನಿಮಗೋಸ್ಕರ ವಾದ್ಯಬಾರಿಸಿದೆವು,
ಆದರೆ ನೀವು ಕುಣಿಯಲಿಲ್ಲ;
ನಾವು ದುಃಖದ ಹಾಡನ್ನು ಹಾಡಿದೆವು,
ಆದರೆ ನೀವು ಅಳಲಿಲ್ಲ’
ಎಂದು ಹೇಳುತ್ತಾರೆ. 33 ಸ್ನಾನಿಕ ಯೋಹಾನನು ಬಂದನು. ಅವನು ಇತರರಂತೆ ತಿನ್ನಲಿಲ್ಲ ಅಥವಾ ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ನೀವು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತೀರಿ. 34 ಮನುಷ್ಯಕುಮಾರನು ಬಂದನು. ಅವನು ಇತರ ಜನರಂತೆ ಊಟಮಾಡುತ್ತಾನೆ ಮತ್ತು ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ನೀವು, ‘ನೋಡಿರಿ! ಅವನೊಬ್ಬ ಹೊಟ್ಟೆಬಾಕ, ಕುಡುಕ! ಸುಂಕವಸೂಲಿಗಾರರು ಮತ್ತು ಇತರ ಕೆಟ್ಟಜನರೇ ಅವನ ಸ್ನೇಹಿತರು!’ ಎನ್ನುತ್ತೀರಿ. 35 ಆದರೆ ಜ್ಞಾನವು ತನ್ನ ಕಾರ್ಯಗಳಿಂದಲೇ ತನ್ನನ್ನು ಸಮರ್ಥಿಸಿಕೊಳ್ಳುವುದು” ಎಂದು ಹೇಳಿದನು.
ಫರಿಸಾಯನಾದ ಸಿಮೋನನು
36 ಫರಿಸಾಯರಲ್ಲಿ ಒಬ್ಬನು ಯೇಸುವನ್ನು ಊಟಕ್ಕೆ ಬರಬೇಕೆಂದು ಕೇಳಿಕೊಂಡನು. ಆದ್ದರಿಂದ ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತುಕೊಂಡನು.
37 ಆ ಊರಿನಲ್ಲಿ ಪಾಪಿಷ್ಠಳಾದ ಒಬ್ಬ ಸ್ತ್ರೀ ಇದ್ದಳು. ಯೇಸುವು ಫರಿಸಾಯನ ಮನೆಯಲ್ಲಿ ಊಟಮಾಡುತ್ತಿದ್ದಾನೆಂದು ಆಕೆಗೆ ತಿಳಿಯಿತು. ಆದ್ದರಿಂದ ಆಕೆ ಭರಣಿಯಲ್ಲಿ[d] ಸ್ವಲ್ಪ ಪರಿಮಳತೈಲವನ್ನು ತೆಗೆದುಕೊಂಡು ಬಂದಳು. 38 ಆಕೆ ಯೇಸುವಿನ ಪಾದಗಳ ಬಳಿ ಅಳುತ್ತಾ, ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿನಿಂದ ಯೇಸುವಿನ ಪಾದಗಳನ್ನು ಒರೆಸಿದಳು. ಆಕೆ ಅನೇಕಸಲ ಆತನ ಪಾದಗಳಿಗೆ ಮುದ್ದಿಟ್ಟು ಪರಿಮಳತೈಲವನು ಹಚ್ಚಿದಳು.
39 ಯೇಸುವನ್ನು ತನ್ನ ಮನೆಗೆ ಊಟಕ್ಕೆ ಕರೆದಿದ್ದ ಫರಿಸಾಯನು ಇದನ್ನು ಕಂಡು ತನ್ನೊಳಗೆ, “ಯೇಸು ಪ್ರವಾದಿಯೇ ಆಗಿದ್ದರೆ, ತನ್ನನ್ನು ಮುಟ್ಟುತ್ತಿರುವ ಸ್ತ್ರೀಯು ಪಾಪಿಷ್ಠಳೆಂದು ತಿಳಿದುಕೊಳ್ಳುತ್ತಿದ್ದನು” ಎಂದುಕೊಂಡನು.
40 ಅದಕ್ಕೆ ಯೇಸು ಫರಿಸಾಯನಿಗೆ, “ಸಿಮೋನನೇ, ನಾನು ನಿನಗೆ ಒಂದು ವಿಷಯವನ್ನು ಹೇಳಬೇಕಾಗಿದೆ” ಎಂದನು.
ಸಿಮೋನನು, “ಗುರುವೇ, ಹೇಳು!” ಎಂದನು.
41 ಯೇಸು, “ಇಬ್ಬರು ಮನುಷ್ಯರಿದ್ದರು. ಅವರಿಬ್ಬರೂ ಒಬ್ಬನೇ ಸಾಹುಕಾರನಿಂದ ಹಣವನ್ನು ಬಡ್ಡಿಗೆ ತೆಗೆದುಕೊಂಡಿದ್ದರು. ಒಬ್ಬನು ಐನೂರು ಬೆಳ್ಳಿ ನಾಣ್ಯಗಳನ್ನು[e] ತೆಗೆದುಕೊಂಡಿದ್ದನು. ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡಿದ್ದನು. 42 ಅವರಲ್ಲಿ ಹಣವಿರಲಿಲ್ಲ. ಆದ್ದರಿಂದ ಅವರು ಸಾಲ ತೀರಿಸಲು ಆಗಲಿಲ್ಲ. ಸಾಹುಕಾರನು ಅವರಿಗೆ, ‘ನೀವು ಸಾಲ ತೀರಿಸಬೇಕಾಗಿಲ್ಲ’ ಎಂದು ಹೇಳಿದನು. ಆ ಇಬ್ಬರಲ್ಲಿ ಯಾರು ಹೆಚ್ಚಾಗಿ ಸಾಹುಕಾರನನ್ನು ಪ್ರೀತಿಸುವರು?” ಎಂದು ಕೇಳಿದನು.
43 ಸಿಮೋನನು, “ಹೆಚ್ಚು ಸಾಲ ತೆಗೆದುಕೊಂಡಿದ್ದವನೇ ಎಂದು ತೋರುತ್ತದೆ” ಎಂದನು.
ಯೇಸು ಸಿಮೋನನಿಗೆ, “ನೀನು ಸರಿಯಾಗಿ ಹೇಳಿದೆ” ಎಂದನು. 44 ಬಳಿಕ ಯೇಸು ಸ್ತ್ರೀಯ ಕಡೆಗೆ ನೋಡಿ ಸಿಮೋನನಿಗೆ, “ಈ ಸ್ತ್ರೀಯು ನಿನಗೆ ಕಾಣುತ್ತಿರುವಳೇ? ನಾನು ನಿನ್ನ ಮನೆಯೊಳಗೆ ಬಂದಾಗ ನೀನು ನನ್ನ ಪಾದಗಳಿಗೆ ನೀರು ಕೊಡಲಿಲ್ಲ. ಆದರೆ ಈಕೆ ತನ್ನ ಕಣ್ಣೀರಿನಿಂದ ನನ್ನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿಂದ ಒರೆಸಿದಳು. 45 ನೀನು ನನಗೆ ಮುದ್ದಿಡಲಿಲ್ಲ. ಈಕೆಯಾದರೋ ನಾನು ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ ಮುದ್ದಿಡುತ್ತಿದ್ದಾಳೆ! 46 ನೀನು ನನ್ನ ತಲೆಗೆ ಎಣ್ಣೆಯನ್ನು ಹಚ್ಚಲಿಲ್ಲ. ಈಕೆಯಾದರೋ ನನ್ನ ಪಾದಗಳಿಗೆ ಪರಿಮಳತೈಲವನ್ನು ಹಚ್ಚಿದಳು. 47 ಈಕೆಯ ಅನೇಕ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ನಾನು ನಿನಗೆ ಹೇಳುತ್ತೇನೆ. ಏಕೆಂದರೆ ಈಕೆ ಅಧಿಕವಾದ ಪ್ರೀತಿಯನ್ನು ತೋರಿದಳು. ಆದರೆ ಸ್ವಲ್ಪ ಕ್ಷಮೆ ಹೊಂದುವವನು ಕೇವಲ ಸ್ವಲ್ಪ ಪ್ರೀತಿಯನ್ನೇ ತೋರುವನು” ಎಂದು ಹೇಳಿದನು.
48 ಬಳಿಕ ಯೇಸು ಆಕೆಗೆ, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
49 ಊಟಕ್ಕೆ ಕುಳಿತುಕೊಂಡಿದ್ದವರು, “ಇವನು (ಯೇಸು) ತನ್ನನ್ನು ಯಾರೆಂದುಕೊಂಡಿದ್ದಾನೆ? ಪಾಪಗಳನ್ನು ಕ್ಷಮಿಸಲು ಇವನಿಗೆ ಹೇಗೆ ಸಾಧ್ಯ?” ಎಂದು ತಮ್ಮೊಳಗೆ ಅಂದುಕೊಂಡರು.
50 ಯೇಸು ಆ ಸ್ತ್ರೀಗೆ, “ನಿನ್ನ ನಂಬಿಕೆಯಿಂದಲೇ ನಿನಗೆ ರಕ್ಷಣೆ ಆಯಿತು. ಸಮಾಧಾನದಿಂದ ಹೋಗು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International