M’Cheyne Bible Reading Plan
ಸೌಲನಿಂದ ಅಮಾಲೇಕ್ಯರ ನಾಶನ
15 ಒಂದು ದಿನ ಸಮುವೇಲನು ಸೌಲನಿಗೆ, “ಯೆಹೋವನು ಇಸ್ರೇಲರ ಮೇಲೆ ನಿನ್ನನ್ನು ರಾಜನನ್ನಾಗಿ ಅಭಿಷೇಕಿಸಲು ನನ್ನನ್ನು ಕಳುಹಿಸಿದನು. ಈಗ ಯೆಹೋವನ ಸಂದೇಶವನ್ನು ಕೇಳು. 2 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ಇಸ್ರೇಲರು ಈಜಿಪ್ಟಿನಿಂದ ಹೊರಬಂದಾಗ ಅಮಾಲೇಕ್ಯರು ಅವರನ್ನು ಕಾನಾನಿಗೆ ಹೋಗದಂತೆ ತಡೆಯಲು ಪ್ರಯತ್ನಿಸಿದರು. ಅಮಾಲೇಕ್ಯರು ಮಾಡಿದ್ದನ್ನು ನಾನು ನೋಡಿದೆ. 3 ಈಗ, ನೀನು ಹೋಗಿ ಅಮಾಲೇಕ್ಯರ ವಿರುದ್ಧ ಹೋರಾಡು. ನೀನು ಅಮಾಲೇಕ್ಯರನ್ನೂ ಮತ್ತು ಅವರಿಗೆ ಸೇರಿದ ಎಲ್ಲವನ್ನೂ ನಾಶಗೊಳಿಸಬೇಕು. ಯಾರನ್ನೂ ಜೀವದಿಂದ ಉಳಿಸಬೇಡ, ನೀನು ಎಲ್ಲ ಗಂಡಸರನ್ನು ಮತ್ತು ಹೆಂಗಸರನ್ನು ಕೊಲ್ಲಬೇಕು. ನೀನು ಎಲ್ಲ ಮಕ್ಕಳನ್ನೂ ಎಳೆಕೂಸುಗಳನ್ನೂ ಕೊಲ್ಲಬೇಕು. ನೀನು ಅವರಿಗೆ ಸೇರಿದ ಎಲ್ಲ ಹಸುಗಳನ್ನೂ ಕುರಿಗಳನ್ನೂ ಒಂಟೆಗಳನ್ನೂ ಕತ್ತೆಗಳನ್ನೂ ಕೊಂದುಹಾಕಬೇಕು’” ಎಂದು ಹೇಳಿದನು.
4 ಸೌಲನು ತೆಲಾಯೀಮಿನಲ್ಲಿ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದನು. ಅಲ್ಲಿ ಎರಡು ಲಕ್ಷ ಮಂದಿ ಭೂಸೈನಿಕರಿದ್ದರು ಮತ್ತು ಇತರ ಹತ್ತು ಸಾವಿರ ಮಂದಿ ಜನರಿದ್ದರು. ಯೆಹೂದ್ಯರೂ ಅವರೊಂದಿಗೆ ಸೇರಿಕೊಂಡಿದ್ದರು. 5 ಸೌಲನು ಅಮಾಲೇಕ್ಯರ ನಗರಕ್ಕೆ ಹೋಗಿ ಅಲ್ಲಿನ ಕಣಿವೆಯಲ್ಲಿ ಹೊಂಚುಹಾಕುತ್ತಿದ್ದನು. 6 ಸೌಲನು ಕೇನ್ಯದ ಜನರಿಗೆ, “ಅಮಾಲೇಕ್ಯರನ್ನು ತ್ಯಜಿಸಿ ಹೊರಗೆ ಹೋಗಿ, ಆಗ ನಿಮ್ಮನ್ನು ಅಮಾಲೇಕ್ಯರೊಂದಿಗೆ ನಾಶಗೊಳಿಸುವುದಿಲ್ಲ. ಇಸ್ರೇಲರು ಈಜಿಪ್ಟಿನಿಂದ ಹೊರ ಬಂದಾಗ ನೀವು ಅವರಿಗೆ ಅನುಕಂಪ ತೋರಿದ್ದೀರಿ” ಎಂದು ಹೇಳಿದನು. ಆದ್ದರಿಂದ ಕೇನ್ಯರು ಅಮಾಲೇಕ್ಯರನ್ನು ಬಿಟ್ಟುಹೋದರು.
7 ಸೌಲನು ಅಮಾಲೇಕ್ಯರನ್ನು ಸೋಲಿಸಿದನು. ಅವನು ಹವೀಲಾದಿಂದ ಈಜಿಪ್ಟಿನ ಗಡಿಯಲ್ಲಿರುವ ಶೂರಿನವರೆಗೂ ಅವರೊಡನೆ ಹೋರಾಡಿದನು. 8 ಸೌಲನು ಅಮಾಲೇಕ್ಯರ ರಾಜನಾದ ಅಗಾಗನನ್ನು ಜೀವಸಹಿತ ಉಳಿಸಿದನು. ಆದರೆ ಉಳಿದ ಅಮಾಲೇಕ್ಯರನ್ನೆಲ್ಲ ಕೊಂದುಹಾಕಿದನು. 9 ಹೀಗೆ ಸೌಲನು ಮತ್ತು ಇಸ್ರೇಲ್ ಸೈನಿಕರು ಅಗಾಗನಿಗೆ ಜೀವದಾನ ಮಾಡಿದರು. ಅವರು ಉತ್ತಮ ಕುರಿಗಳನ್ನೂ ದನಗಳನ್ನೂ ಆಡಿನ ಮರಿಗಳನ್ನೂ ಉಳಿಸಿದರು. ಅವರು ಉಪಯುಕ್ತವಾದುದನ್ನು ಉಳಿಸಿ, ಅನುಪಯುಕ್ತವಾದುದನ್ನು ನಾಶಗೊಳಿಸಿದರು.
ಸಮುವೇಲನು ಸೌಲನಿಗೆ ಅವನ ಪಾಪದ ಬಗ್ಗೆ ತಿಳಿಸುವನು
10 ಸಮುವೇಲನಿಗೆ ಯೆಹೋವನ ಸಂದೇಶ ಬಂದಿತು. 11 ಯೆಹೋವನು ಸಮುವೇಲನಿಗೆ, “ಸೌಲನು ನನ್ನ ಮಾರ್ಗವನ್ನು ತ್ಯಜಿಸಿದನು. ನಾನು ಸೌಲನನ್ನು ರಾಜನನ್ನಾಗಿ ಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತೇನೆ. ನಾನು ಆಜ್ಞಾಪಿಸಿದ ಕಾರ್ಯಗಳನ್ನು ಅವನು ಮಾಡುತ್ತಿಲ್ಲ” ಎಂದು ಹೇಳಿದನು. ಸಮುವೇಲನು ತಳಮಳಗೊಂಡನು. ಅವನು ರಾತ್ರಿಯೆಲ್ಲ ಅಳುತ್ತಾ ಯೆಹೋವನಲ್ಲಿ ಮೊರೆಯಿಟ್ಟನು.
12 ಸಮುವೇಲನು ಮಾರನೆಯ ದಿನ ಬೆಳಿಗ್ಗೆ ಮೇಲೆದ್ದು, ಸೌಲನನ್ನು ಭೇಟಿಮಾಡಲು ಹೋದನು. ಆದರೆ ಜನರೆಲ್ಲ ಸಮುವೇಲನಿಗೆ, “ಸೌಲನು ತನ್ನ ಗೌರವಾರ್ಥವಾಗಿ ಜ್ಞಾಪಕಸ್ತಂಭವನ್ನು ನಿರ್ಮಿಸಲು ಕರ್ಮೆಲ್ ಎಂಬ ಪಟ್ಟಣಕ್ಕೆ ಹೋದನು. ನಂತರ ಸೌಲನು ಕೆಲವು ಪ್ರದೇಶಗಳನ್ನು ಸುತ್ತಿಕೊಂಡು ಗಿಲ್ಗಾಲಿಗೆ ಹೋದನು” ಎಂದು ಹೇಳಿದರು.
ಸಮುವೇಲನು ಸೌಲನಿದ್ದ ಸ್ಥಳಕ್ಕೆ ಹೋದನು. ಸೌಲನು ಅಮಾಲೇಕ್ಯರಿಂದ ವಶಪಡಿಸಿಕೊಂಡ ಪಶುಗಳನ್ನು ಪ್ರಥಮ ಸರ್ವಾಂಗಹೋಮವಾಗಿ ಯೆಹೋವನಿಗೆ ಅರ್ಪಿಸುತ್ತಿದ್ದನು. 13 ಸೌಲನು ಸಮುವೇಲನ ಹತ್ತಿರಕ್ಕೆ ಹೋಗಿ, “ಯೆಹೋವನು ನಿನ್ನನ್ನು ಆಶೀರ್ವದಿಸಲಿ; ನಾನು ಯೆಹೋವನ ಆಜ್ಞೆಗಳನ್ನು ಪಾಲಿಸಿದ್ದೇನೆ” ಎಂದು ಹೇಳಿದನು.
14 ಅದಕ್ಕೆ ಸಮುವೇಲನು, “ಹಾಗಿದ್ದರೆ ನಾನು ಕೇಳುತ್ತಿರುವ ಶಬ್ದವೇನು? ದನಕುರಿಗಳ ಶಬ್ದವು ಕೇಳುತ್ತಿದೆಯಲ್ಲಾ!” ಎಂದನು.
15 ಸೌಲನು, “ಸೈನಿಕರು ಅಮಾಲೇಕ್ಯರಿಂದ ವಶಪಡಿಸಿಕೊಂಡ ಪಶುಗಳಲ್ಲಿ ಉತ್ತಮವಾದುದ್ದನ್ನು ನಿನ್ನ ದೇವರಾದ ಯೆಹೋವನಿಗೆ ಅರ್ಪಿಸುವುದಕ್ಕಾಗಿ ತೆಗೆದುಕೊಂಡು ಬಂದಿದ್ದಾರೆ. ಆದರೆ ನಾವು ಉಳಿದೆಲ್ಲವನ್ನು ನಾಶಪಡಿಸಿದೆವು” ಎಂದು ಉತ್ತರಿಸಿದನು.
16 ಸಮುವೇಲನು ಸೌಲನಿಗೆ, “ಯೆಹೋವನು ಕಳೆದ ರಾತ್ರಿ ನನಗೆ ಹೇಳಿದ್ದನ್ನು ನಿನಗೆ ತಿಳಿಸುತ್ತೇನೆ” ಎಂದನು.
ಸೌಲನು. “ಸರಿ, ತಿಳಿಸು” ಎಂದು ಉತ್ತರಿಸಿದನು.
17 ಸಮುವೇಲನು, “ನೀನು ಮೊದಲು ನಿನ್ನನ್ನು ಅಲ್ಪನೆಂದು ತಿಳಿದಿದ್ದೆ. ಯೆಹೋವನು ನಿನ್ನನ್ನು ಇಸ್ರೇಲರಿಗೆ ರಾಜನನ್ನಾಗಿ ಆರಿಸಿಕೊಂಡದ್ದರಿಂದ ಇಸ್ರೇಲ್ ಕುಲಗಳಿಗೆ ನಾಯಕನಾದೆ. 18 ಆತನು ನಿನಗೆ, ‘ಹೋಗು ದುಷ್ಟರಾದ ಅಮಾಲೇಕ್ಯರ ಮೇಲೆ ಯುದ್ಧ ಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಗೊಳಿಸು’ ಎಂದು ಆಜ್ಞಾಪಿಸಿದರು. 19 ಆದರೆ ನೀನು ಯೆಹೋವನ ಮಾತುಗಳಿಗೆ ಕಿವಿಗೊಡಲಿಲ್ಲ. ನೀನು ಅವುಗಳನ್ನು ನಿನ್ನ ಬಳಿಯಲ್ಲಿಟ್ಟುಕೊಳ್ಳಲು ಬಯಸಿದೆ. ಹೀಗೆ ಯೆಹೋವನು ಕೆಟ್ಟದೆಂದು ಹೇಳಿದ್ದನ್ನೇ ನೀನು ಮಾಡಿದೆ!” ಎಂದು ಹೇಳಿದನು.
20 ಸೌಲನು, “ಆದರೆ ನಾನು ಯೆಹೋವನಿಗೆ ವಿಧೇಯನಾದೆ. ಆತನು ಕಳುಹಿಸಿದಲ್ಲಿಗೆ ನಾನು ಹೋಗಿ ಅಮಾಲೇಕ್ಯರೆಲ್ಲರನ್ನು ನಾಶಗೊಳಿಸಿದೆ. ಆದರೆ ಒಬ್ಬನನ್ನೇ ನಾನು ತಂದೆನು. ಅವನೇ ರಾಜನಾದ ಅಗಾಗ. 21 ನಿನ್ನ ದೇವರಾದ ಯೆಹೋವನಿಗೆ ಗಿಲ್ಗಾಲಿನಲ್ಲಿ ಯಜ್ಞವನ್ನರ್ಪಿಸುವುದಕ್ಕಾಗಿ ಸೈನಿಕರು ಉತ್ತಮವಾದ ದನಕುರಿಗಳನ್ನು ವಶಪಡಿಸಿಕೊಂಡು ಬಂದರು” ಎಂದು ಉತ್ತರಿಸಿದನು.
22 ಆದಕ್ಕೆ ಸಮುವೇಲನು, “ಯೆಹೋವನಿಗೆ ಯಾವುದು ಹೆಚ್ಚು ಮೆಚ್ಚಿಗೆಯಾಗಿದೆ? ಸರ್ವಾಂಗಹೋಮಗಳೇ? ಯಜ್ಞಗಳೇ? ಇಲ್ಲವೆ ಯೆಹೋವನ ಆಜ್ಞೆಗಳಿಗೆ ವಿಧೇಯರಾಗುವುದೇ? ದೇವರಿಗೆ ಯಜ್ಞವನ್ನು ಸಮರ್ಪಿಸುವುದಕ್ಕಿಂತ ಆತನ ಆಜ್ಞೆಗಳಿಗೆ ವಿಧೇಯರಾಗಿರುವುದೇ ಉತ್ತಮ. ಟಗರುಗಳ ಕೊಬ್ಬನ್ನು ಅರ್ಪಿಸುವುದಕ್ಕಿಂತ ಆತನ ಮಾತುಗಳನ್ನು ಆಲಿಸುವುದು ಉತ್ತಮ. 23 ಅವಿಧೇಯತೆಯು ಮಾಟಮಂತ್ರಗಳಷ್ಟೇ ಪಾಪಪೂರಿತವಾದುದು. ಮೊಂಡುತನದಿಂದ ತನ್ನ ಇಷ್ಟದಂತೆ ಮಾಡುವುದು ವಿಗ್ರಹಾರಾಧನೆಯಷ್ಟೇ ಪಾಪಪೂರಿತವಾದುದು. ನೀನು ಯೆಹೋವನ ಆಜ್ಞೆಗಳಿಗೆ ವಿಧೇಯನಾಗಲಿಲ್ಲ. ಈ ಕಾರಣದಿಂದ ಈಗ ಯೆಹೋವನು ನಿನ್ನನ್ನು ರಾಜನನ್ನಾಗಿ ಸ್ವೀಕರಿಸಿಕೊಳ್ಳುವುದಿಲ್ಲ” ಎಂದು ಸೌಲನಿಗೆ ಉತ್ತರಿಸಿದನು.
24 ಆಗ ಸೌಲನು ಸಮುವೇಲನಿಗೆ, “ನಾನು ಪಾಪ ಮಾಡಿದ್ದೇನೆ. ನಾನು ಯೆಹೋವನ ಆಜ್ಞೆಗಳಿಗೆ ವಿಧೇಯನಾಗಲಿಲ್ಲ; ನೀನು ಹೇಳಿದ್ದನ್ನು ನಾನು ಮಾಡಲಿಲ್ಲ. ನಾನು ಜನರಿಗೆ ಹೆದರಿ ಅವರು ಹೇಳಿದಂತೆ ಮಾಡಿದೆ. 25 ಈಗ ನಾನು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ, ನನ್ನ ಪಾಪವನ್ನು ಕ್ಷಮಿಸು. ನನ್ನೊಂದಿಗೆ ಹಿಂದಿರುಗಿ ಬಾ, ಆಗ ನಾನು ಯೆಹೋವನನ್ನು ಆರಾಧಿಸಲು ಸಾಧ್ಯವಾಗುವುದು” ಎಂದು ಅವನನ್ನು ಬೇಡಿಕೊಂಡನು.
26 ಆದರೆ ಸಮುವೇಲನು ಸೌಲನಿಗೆ, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಯೆಹೋವನ ಆಜ್ಞೆಯನ್ನು ನಿರಾಕರಿಸಿರುವೆ. ಈಗ ಆತನೂ ನಿನ್ನನ್ನು ಇಸ್ರೇಲಿನ ರಾಜತ್ವದಿಂದ ನಿರಾಕರಿಸುತ್ತಾನೆ” ಎಂದು ಹೇಳಿದನು.
27 ಸಮುವೇಲನು ಹೋಗಲು ತಿರುಗಿದಾಗ ಸೌಲನು ಸಮುವೇಲನ ಮೇಲಂಗಿಯ ಅಂಚನ್ನು ಹಿಡಿದು ಎಳೆದನು. ಮೇಲಂಗಿಯು ಹರಿದುಹೋಯಿತು. 28 ಆಗ ಸಮುವೇಲನು ಸೌಲನಿಗೆ, “ನೀನು ನನ್ನ ಮೇಲಂಗಿಯನ್ನು ಹರಿದುಹಾಕಿದೆ. ಇದೇರೀತಿ ಯೆಹೋವನು ಈ ದಿನ ನಿನ್ನಿಂದ ಇಸ್ರೇಲ್ ರಾಜ್ಯವನ್ನು ಹರಿದುಹಾಕಿದನು. ನಿನ್ನ ಸ್ನೇಹಿತರಲ್ಲಿ ಒಬ್ಬನಿಗೆ ಯೆಹೋವನು ರಾಜ್ಯಾಧಿಕಾರವನ್ನು ಕೊಟ್ಟಿದ್ದಾನೆ. ಅವನು ನಿನಗಿಂತ ಉತ್ತಮ ವ್ಯಕ್ತಿ. 29 ಯೆಹೋವನು ಇಸ್ರೇಲಿನ ದೇವರಾಗಿದ್ದಾನೆ. ಯೆಹೋವನು ಸರ್ವಕಾಲದಲ್ಲೂ ಇರುವನು. ಯೆಹೋವನು ಸುಳ್ಳಾಡುವುದಿಲ್ಲ; ಆತನು ಮನುಷ್ಯನಂತೆ ಪದೇಪದೇ ಮನಸ್ಸನ್ನು ಬದಲಾಯಿಸುವವನಲ್ಲ” ಎಂದು ಹೇಳಿದನು.
30 ಅದಕ್ಕೆ ಸೌಲನು, “ನಾನು ಪಾಪಮಾಡಿದ್ದೇನೆಂಬುದು ಸರಿ. ಆದರೆ ದಯವಿಟ್ಟು ನನ್ನ ಜೊತೆಯಲ್ಲಿ ಹಿಂದಿರುಗಿ ಬಾ. ಇಸ್ರೇಲಿನ ಜನರೆದುರು ಮತ್ತು ನಾಯಕರೆದುರು ಸ್ವಲ್ಪ ಗೌರವವನ್ನು ತೋರಿಸು. ನನ್ನ ಜೊತೆಯಲ್ಲಿ ನೀನು ಹಿಂದಿರುಗಿ ಬಂದರೆ, ನಾನು ನಿನ್ನ ದೇವರಾದ ಯೆಹೋವನನ್ನು ಆರಾಧಿಸಬಹುದು” ಎಂದು ಬೇಡಿಕೊಂಡನು. 31 ಆಗ ಸಮುವೇಲನು ಸೌಲನ ಜೊತೆಯಲ್ಲಿ ಹೋದನು. ಸೌಲನು ದೇವರನ್ನು ಆರಾಧಿಸಿದನು.
32 ಸಮುವೇಲನು, “ಅಮಾಲೇಕ್ಯರ ರಾಜನಾದ ಅಗಾಗನನ್ನು ನನ್ನ ಬಳಿಗೆ ಕರೆದುಕೊಂಡು ಬಾ” ಎಂದು ಹೇಳಿದನು.
ಅಗಾಗನು ಸಮುವೇಲನ ಹತ್ತಿರಕ್ಕೆ ಬಂದನು. ಅಗಾಗನನ್ನು ಸರಪಣಿಗಳಿಂದ ಬಂಧಿಸಲಾಗಿತ್ತು. ಅಗಾಗನು, “ಅವನು ನನ್ನನ್ನು ನಿಜವಾಗಿಯೂ ಕೊಲ್ಲುವುದಿಲ್ಲ” ಎಂದು ಆಲೋಚಿಸಿದನು.
33 ಆದರೆ ಸಮುವೇಲನು ಅಗಾಗನಿಗೆ, “ನಿನ್ನ ಕತ್ತಿಯು ಅನೇಕ ತಾಯಂದಿರಿಗೆ ಮಕ್ಕಳಿಲ್ಲದಂತೆ ಮಾಡಿದೆ. ಆದ್ದರಿಂದ ಈಗ ನಿನ್ನ ತಾಯಿಗೆ ಮಕ್ಕಳಿಲ್ಲದಂತಾಯಿತು” ಎಂದು ಹೇಳಿ ಅಗಾಗನನ್ನು ಗಿಲ್ಗಾಲಿನ ಯೆಹೋವನ ಸನ್ನಿಧಿಯಲ್ಲೇ ಕಡಿದುಹಾಕಿದನು.
34 ನಂತರ ಸಮುವೇಲನು ಅಲ್ಲಿಂದ ಹೊರಟು ರಾಮಕ್ಕೆ ಹೋದನು. ಸೌಲನು ಗಿಬೆಯದ ತನ್ನ ಮನೆಗೆ ಹೋದನು. 35 ಅನಂತರ ಸಮುವೇಲನು ತನ್ನ ಜೀವಿತದ ಅವಧಿಯಲ್ಲಿ ಸೌಲನನ್ನು ನೋಡಲಿಲ್ಲ. ಸಮುವೇಲನು ಸೌಲನಿಗಾಗಿ ಬಹಳ ದುಃಖಪಟ್ಟನು. ಸೌಲನನ್ನು ಇಸ್ರೇಲರ ರಾಜನನ್ನಾಗಿ ಮಾಡಿದ್ದಕ್ಕೆ ಯೆಹೋವನು ಬಹಳ ಸಂತಾಪಪಟ್ಟನು.
ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಿ
13 ನೀವೆಲ್ಲರೂ ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಬೇಕು. ಪ್ರತಿಯೊಬ್ಬ ಅಧಿಕಾರಿಗೆ ಅಧಿಕಾರವನ್ನು ಕೊಟ್ಟಿರುವವನು ದೇವರೇ. ಈಗಿರುವ ಎಲ್ಲಾ ಅಧಿಕಾರಿಗಳಿಗೆ ದೇವರೇ ಅಧಿಕಾರವನ್ನು ಕೊಟ್ಟಿದ್ದಾನೆ. 2 ಆದ್ದರಿಂದ ಸರ್ಕಾರಕ್ಕೆ ವಿರೋಧವಾಗಿರುವ ವ್ಯಕ್ತಿಯು ನಿಜವಾಗಿಯೂ ದೇವರ ಆಜ್ಞೆಗೇ ವಿರೋಧವಾಗಿದ್ದಾನೆ. ಸರ್ಕಾರಕ್ಕೆ ವಿರೋಧವಾಗಿರುವ ಜನರು ತಮ್ಮ ಮೇಲೆ ತಾವೇ ದಂಡನೆಯನ್ನು ಬರಮಾಡಿಕೊಳ್ಳುತ್ತಾರೆ. 3 ಸರಿಯಾದದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುವುದಿಲ್ಲ. ಆದರೆ ಕೆಟ್ಟದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುತ್ತದೆ. ನೀವು ಅಧಿಕಾರಿಗಳಿಗೆ ಭಯಪಡದವರಾಗಿರಬೇಕೆಂದು ಅಪೇಕ್ಷಿಸುತ್ತೀರೋ? ಹಾಗಾದರೆ ನೀವು ಸರಿಯಾದದ್ದನ್ನೇ ಮಾಡಿರಿ. ಆಗ ಅಧಿಕಾರಿಗಳು ನಿಮ್ಮನ್ನು ಹೊಗಳುವರು.
4 ಅಧಿಕಾರಿಯು ನಿಮ್ಮ ಒಳ್ಳೆಯದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. ಆದರೆ ನೀವು ಕೆಟ್ಟದ್ದನ್ನು ಮಾಡಿದರೆ ಭಯಪಡಲೇಬೇಕು. ನಿಮ್ಮನ್ನು ದಂಡಿಸಲು ಅವನಿಗೆ ಅಧಿಕಾರವಿದೆ. ಅವನು ಆ ಅಧಿಕಾರವನ್ನು ಉಪಯೋಗಿಸುವನು. ಅಧಿಕಾರಿಯು ಕೆಟ್ಟದ್ದನ್ನು ಮಾಡುವ ಜನರನ್ನು ದಂಡಿಸುವುದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. 5 ಆದ್ದರಿಂದ ನೀವು ಸರ್ಕಾರಕ್ಕೆ ವಿಧೇಯರಾಗಬೇಕು. ನೀವು ದಂಡನೆಗೆ ಗುರಿಯಾಗಬಹುದೆಂಬ ಕಾರಣದಿಂದ ಮಾತ್ರವಲ್ಲದೆ, ನಿಮ್ಮ ಮನಸ್ಸಾಕ್ಷಿಯ ದೆಸೆಯಿಂದಲೂ ನೀವು ಅವರಿಗೆ ವಿಧೇಯರಾಗಬೇಕು.
6 ಈ ಕಾರಣದಿಂದಲೇ ನೀವು ತೆರಿಗೆಯನ್ನು ಸಹ ಕೊಡುತ್ತೀರಿ. ಆ ಅಧಿಕಾರಿಗಳು ದೇವರಿಗೋಸ್ಕರ ಕೆಲಸ ಮಾಡುವವರಾಗಿದ್ದಾರೆ; ತಮ್ಮ ಸಮಯವನ್ನೆಲ್ಲಾ ಆಡಳಿತ ಮಾಡಲು ಉಪಯೋಗಿಸುವವರಾಗಿದ್ದಾರೆ. 7 ನೀವು ಯಾರ್ಯಾರಿಗೆ ಏನೇನು ಕೊಡಬೇಕೋ ಅದನ್ನೆಲ್ಲಾ ಅವರಿಗೆ ಕೊಡಿರಿ. ಯಾವ ತೆರಿಗೆಯನ್ನಾದರೂ ಕೊಡಬೇಕಿದ್ದರೆ ಅದನ್ನು ಕೊಟ್ಟುಬಿಡಿರಿ. ಯಾರಿಗೆ ಗೌರವ ಕೊಡಬೇಕೋ ಅವರಿಗೆ ಗೌರವ ಕೊಡಿರಿ. ಯಾರಿಗೆ ಮರ್ಯಾದೆ ತೋರಿಸಬೇಕೊ ಅವರಿಗೆ ಮರ್ಯಾದೆಯನ್ನು ತೋರಿಸಿರಿ.
ಇತರ ಜನರನ್ನು ಪ್ರೀತಿಸಬೇಕೆಂಬ ಒಂದೇ ಆಜ್ಞೆ
8 ಜನರಿಗೆ ಯಾವ ವಿಷಯದಲ್ಲಿಯೂ ಸಾಲಗಾರರಾಗಿರಬೇಡಿ. ಆದರೆ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ವಿಷಯದಲ್ಲಿ ಮಾತ್ರ ಯಾವಾಗಲೂ ಸಾಲಗಾರರಾಗಿದ್ದೀರಿ. ಇತರ ಜನರನ್ನು ಪ್ರೀತಿಸುವ ವ್ಯಕ್ತಿಯು ಇಡೀ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದಾನೆ. 9 ಏಕೆಂದರೆ, “ವ್ಯಭಿಚಾರ ಮಾಡಕೂಡದು; ಕೊಲೆ ಮಾಡಕೂಡದು; ಕದಿಯಕೂಡದು; ಇತರರಿಗೆ ಸೇರಿದ ವಸ್ತುಗಳನ್ನು ಅಪೇಕ್ಷಿಸಕೂಡದು”(A) ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಈ ಆಜ್ಞೆಗಳನ್ನು ಮೊದಲುಗೊಂಡು ಉಳಿದೆಲ್ಲಾ ಆಜ್ಞೆಗಳು, “ನೀನು ನಿನ್ನನ್ನು ಪ್ರೀತಿಸುವಂತೆ ಇತರ ಜನರನ್ನೂ ಪ್ರೀತಿಸು”(B) ಎಂಬ ಒಂದೇ ಆಜ್ಞೆಯಲ್ಲಿ ಅಡಕವಾಗಿದೆ. 10 ಪ್ರೀತಿಯು ಬೇರೆಯವರಿಗೆ ಕೇಡುಮಾಡುವುದಿಲ್ಲ. ಆದ್ದರಿಂದ ಪ್ರೀತಿಸುವುದಕ್ಕೂ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವುದಕ್ಕೂ ವ್ಯತ್ಯಾಸವೇನೂ ಇಲ್ಲ.
11 ನಾವು ಪ್ರಾಮುಖ್ಯವಾದ ಸಮಯದಲ್ಲಿ ಜೀವಿಸುತ್ತಿರುವುದರಿಂದ ಈ ವಿಷಯಗಳನ್ನು ಹೇಳುತ್ತಿದ್ದೇನೆ ಎಂಬುದು ನಿಮಗೆ ಗೊತ್ತೇ ಇದೆ. ಹೌದು, ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಕಾಲ ಇದಾಗಿದೆ. ನಾವು ವಿಶ್ವಾಸಿಗಳಾದ ಕಾಲಕ್ಕಿಂತ ಈಗ ನಮ್ಮ ರಕ್ಷಣೆಯು ಸಮೀಪವಾಗಿದೆ. 12 “ರಾತ್ರಿ”ಯು ಬಹುಮಟ್ಟಿಗೆ ಮುಗಿದುಹೋಗಿದೆ. “ಹಗಲು” ಬಹುಮಟ್ಟಿಗೆ ಬಂದಿದೆ. ಆದ್ದರಿಂದ ಕತ್ತಲೆಗೆ ಸೇರಿದ ಕಾರ್ಯಗಳನ್ನು ಇನ್ನು ಮೇಲೆ ಮಾಡದೆ ಬೆಳಕಿಗೆ ಸೇರಿದ ಕಾರ್ಯಗಳನ್ನು ಮಾಡಲು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. 13 ಹಗಲಿಗೆ ಸೇರಿದ ಜನರಂತೆ ಸರಿಯಾದ ರೀತಿಯಲ್ಲಿ ಜೀವಿಸೋಣ. ಕೆಟ್ಟದಾದ ಮತ್ತು ವ್ಯರ್ಥವಾದ ಔತಣಕೂಟಗಳನ್ನು ನಾವು ಏರ್ಪಡಿಸಕೂಡದು; ಕುಡಿದು ಮತ್ತರಾಗಕೂಡದು; ನಾವು ಲೈಂಗಿಕ ಪಾಪವನ್ನಾಗಲಿ ನಮ್ಮ ದೇಹದಿಂದ ಯಾವುದೇ ಬಗೆಯ ಪಾಪವನ್ನಾಗಲಿ ಮಾಡಕೂಡದು; ವಾಗ್ವಾದಗಳನ್ನಾಗಲಿ ಜಗಳಗಳನ್ನಾಗಲಿ ಎಬ್ಬಿಸಬಾರದು; ಅಲ್ಲದೆ ಹೊಟ್ಟೆಕಿಚ್ಚುಪಡಬಾರದು. 14 ಪ್ರಭುವಾದ ಯೇಸು ಕ್ರಿಸ್ತನನ್ನೇ ಧರಿಸಿಕೊಳ್ಳಿರಿ. ನಿಮ್ಮ ಪಾಪಸ್ವಭಾವವನ್ನು ಹೇಗೆ ತೃಪ್ತಿಗೊಳಿಸಬೇಕೆಂದಾಗಲಿ ಕೆಟ್ಟಕಾರ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಹೇಗೆ ಪೂರೈಸಿಕೊಳ್ಳಬೇಕೆಂದಾಗಲಿ ಆಲೋಚಿಸಬೇಡಿ.
ಜೆರುಸಲೇಮಿನ ಪತನ
52 ಚಿದ್ಕೀಯನು ಯೆಹೂದದ ರಾಜನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದನು. ಚಿದ್ಕೀಯನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿಯ ಹೆಸರು ಹಮೂಟಲ್. ಈಕೆ ಯೆರೆಮೀಯನ[a] ಮಗಳು. ಹಮೂಟಲಳ ಮನೆತನದವರು ಲಿಬ್ನ ಪಟ್ಟಣದ ನಿವಾಸಿಗಳಾಗಿದ್ದರು. 2 ರಾಜನಾದ ಯೆಹೋಯಾಕೀಮನು ಮಾಡಿದಂತೆ ಚಿದ್ಕೀಯನು ದುಷ್ಕೃತ್ಯಗಳನ್ನು ಮಾಡಿದನು. ಚಿದ್ಕೀಯನು ಆ ದುಷ್ಕೃತ್ಯಗಳನ್ನು ಮಾಡಿದ್ದು ಯೆಹೋವನಿಗೆ ಒಪ್ಪಿಗೆಯಾಗಲಿಲ್ಲ. 3 ಯೆಹೋವನಿಗೆ ಅವರ ಮೇಲೆ ಕೋಪ ಬಂದುದರಿಂದ ಜೆರುಸಲೇಮ್ ಮತ್ತು ಯೆಹೂದಗಳಿಗೆ ವಿಪತ್ತುಗಳು ಸಂಭವಿಸಿದವು. ಕೊನೆಗೆ, ಯೆಹೋವನು ಜೆರುಸಲೇಮ್ ಮತ್ತು ಯೆಹೂದದ ಜನರನ್ನು ತನ್ನಿದ ದೂರ ಎಸೆದುಬಿಟ್ಟನು.
ಚಿದ್ಕೀಯನು ಬಾಬಿಲೋನ್ ರಾಜನ ವಿರುದ್ಧವಾಗಿ ದಂಗೆ ಎದ್ದನು. 4 ಆದ್ದರಿಂದ ಚಿದ್ಕೀಯನು ತನ್ನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ[b] ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮಿನ ವಿರುದ್ಧ ದಂಡಯಾತ್ರೆ ಕೈಗೊಂಡನು. ನೆಬೂಕದ್ನೆಚ್ಚರನ ಸಂಗಡ ಅವನ ಇಡೀ ಸೈನ್ಯವಿತ್ತು. ಬಾಬಿಲೋನ್ ಸೈನ್ಯವು ಜೆರುಸಲೇಮಿನ ಹೊರಭಾಗದಲ್ಲಿ ಬೀಡುಬಿಟ್ಟಿತು. ಆ ನಗರವನ್ನು ಹತ್ತಲು ಅನುಕೂಲವಾಗುವಂತೆ ಅವರು ನಗರದ ಪೌಳಿಗೋಡೆಗೆ ಅಲ್ಲಲ್ಲಿ ಇಳಿಜಾರಾದ ಗೋಡೆಗಳನ್ನು ಕಟ್ಟಿದ್ದರು. 5 ಚಿದ್ಕೀಯನ ಆಳ್ವಿಕೆಯ ಹನ್ನೊಂದನೇ ವರ್ಷದವರೆಗೆ ಬಾಬಿಲೋನಿನ ಸೈನ್ಯವು ಜೆರುಸಲೇಮ್ ನಗರವನ್ನು ಮುತ್ತಿಗೆ ಹಾಕಿತ್ತು. 6 ಆ ವರ್ಷದ ನಾಲ್ಕನೆ ತಿಂಗಳಿನ ಒಂಭತ್ತನೆ ದಿನದವರೆಗೆ ಆ ನಗರದಲ್ಲಿ ಹಸಿವಿನ ಹಾವಳಿ ತುಂಬ ಹೆಚ್ಚಾಗಿತ್ತು. ಆ ನಗರದಲ್ಲಿ ಜನರಿಗೆ ತಿನ್ನಲು ಆಹಾರವೇ ಇರಲಿಲ್ಲ. 7 ಆ ದಿನ ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿ ನುಗ್ಗಿತ್ತು. ಜೆರುಸಲೇಮಿನ ಸೈನಿಕರು ಓಡಿಹೋದರು. ಅವರು ರಾತ್ರಿಯ ಸಮಯದಲ್ಲಿ ಎರಡು ಗೋಡೆಗಳ ಮಧ್ಯದ ಬಾಗಿಲಿನಿಂದ ನಗರದಿಂದ ಓಡಿಹೋದರು. ಆ ಬಾಗಿಲು ರಾಜನ ಉದ್ಯಾನವನದ ಹತ್ತಿರ ಇತ್ತು. ಬಾಬಿಲೋನಿನ ಸೈನಿಕರು ಜೆರುಸಲೇಮ್ ನಗರವನ್ನು ಮುತ್ತಿದ್ದರೂ ಜೆರುಸಲೇಮಿನ ಸೈನಿಕರು, ಮರುಭೂಮಿಯ ಕಡೆಗೆ ಓಡಿಹೋದರು.
8 ಬಾಬಿಲೋನಿನ ಸೈನಿಕರು ರಾಜನಾದ ಚಿದ್ಕೀಯನನ್ನು ಬೆನ್ನಟ್ಟಿದರು. ಅವರು ಅವನನ್ನು ಜೆರಿಕೊವಿನ ಬಯಲಿನಲ್ಲಿ ಹಿಡಿದರು. ಚಿದ್ಕೀಯನ ಎಲ್ಲಾ ಸೈನಿಕರು ಓಡಿಹೋದರು. 9 ಬಾಬಿಲೋನಿನ ಸೈನಿಕರು ರಾಜನಾದ ಚಿದ್ಕೀಯನನ್ನು ಬಂಧಿಸಿ ಅವನನ್ನು ರಿಬ್ಲದಲ್ಲಿದ್ದ ತಮ್ಮ ರಾಜನ ಬಳಿಗೆ ಹಿಡಿದುಕೊಂಡು ಹೋದರು. ರಿಬ್ಲವು ಹಮಾತ್ ಪ್ರದೇಶದಲ್ಲಿದೆ. ರಿಬ್ಲದಲ್ಲಿ ಬಾಬಿಲೋನಿನ ರಾಜನು ಚಿದ್ಕೀಯನ ಬಗ್ಗೆ ತನ್ನ ತೀರ್ಪನ್ನು ಪ್ರಕಟಪಡಿಸಿದನು. 10 ರಿಬ್ಲ ನಗರದಲ್ಲಿ ಬಾಬೆಲಿನ ರಾಜನು ಚಿದ್ಕೀಯನ ಮಕ್ಕಳನ್ನು ಸಂಹರಿಸಿದನು. ಚಿದ್ಕೀಯನು ತನ್ನ ಮಕ್ಕಳ ಕೊಲೆಯನ್ನು ಕಣ್ಣಾರೆ ನೋಡುವಂತೆ ಮಾಡಲಾಯಿತು. ಬಾಬಿಲೋನಿನ ರಾಜನು ಯೆಹೂದದ ರಾಜನ ಎಲ್ಲಾ ಅಧಿಕಾರಿಗಳನ್ನು ಸಹ ಕೊಲ್ಲಿಸಿದನು. 11 ತರುವಾಯ ಬಾಬಿಲೋನಿನ ರಾಜನು ಚಿದ್ಕೀಯನ ಕಣ್ಣುಗಳನ್ನು ಸಹ ಕೀಳಿಸಿದನು. ಅವನಿಗೆ ಕಂಚಿನ ಸರಪಳಿಗಳನ್ನು ಬಿಗಿಸಿದನು. ಆಮೇಲೆ ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಬಾಬಿಲೋನಿನಲ್ಲಿ ಚಿದ್ಕೀಯನನ್ನು ಸೆರೆಮನೆಯಲ್ಲಿ ಇಟ್ಟನು. ಚಿದ್ಕೀಯನು ಸಾಯುವವರೆಗೆ ಸೆರೆಮನೆಯಲ್ಲಿದ್ದನು.
12 ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಭತ್ತನೆ ವರ್ಷದ ಐದನೆ ತಿಂಗಳಿನ ಹತ್ತನೆ ದಿನ ಬಾಬಿಲೋನಿನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನು ಜೆರುಸಲೇಮಿಗೆ ಬಂದನು. ನೆಬೂಜರದಾನನು ಬಾಬಿಲೋನಿನ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನು. 13 ನೆಬೂಜರದಾನನು ಯೆಹೋವನ ಆಲಯವನ್ನು ಸುಟ್ಟನು. ಅವನು ಜೆರುಸಲೇಮಿನಲ್ಲಿದ್ದ ಅರಮನೆಯನ್ನು ಮತ್ತು ಉಳಿದೆಲ್ಲ ಮನೆಗಳನ್ನು ಸುಟ್ಟುಬಿಟ್ಟನು. ಅವನು ಜೆರುಸಲೇಮಿನ ಎಲ್ಲಾ ಮುಖ್ಯ ಕಟ್ಟಡಗಳನ್ನು ಸುಟ್ಟುಹಾಕಿದನು. 14 ಬಾಬಿಲೋನಿನ ಇಡೀ ಸೈನ್ಯವು ಜೆರುಸಲೇಮಿನ ಪೌಳಿಗೋಡೆಯನ್ನು ಒಡೆದುಹಾಕಿತು. ಆ ಸೈನ್ಯವು ರಾಜನ ವಿಶೇಷ ರಕ್ಷಕದಳದ ಅಧಿಪತಿಯ ಅಧಿನದಲ್ಲಿತ್ತು. 15 ಸೇನಾಧಿಪತಿಯಾದ ನೆಬೂಜರದಾನನು ಜೆರುಸಲೇಮಿನಲ್ಲಿ ಇನ್ನೂ ಉಳಿದುಕೊಂಡಿದ್ದ ಜನರನ್ನು ಬಂಧಿಗಳನ್ನಾಗಿ ಮಾಡಿಕೊಂಡನು. ಈ ಮುಂಚೆ ಬಾಬಿಲೋನಿನ ರಾಜನಿಗೆ ಶರಣಾಗತರಾದವರನ್ನು ಸಹ ಅವನು ತೆಗೆದುಕೊಂಡು ಹೋದನು. ಜೆರುಸಲೇಮಿನಲ್ಲಿ ಉಳಿದ ಕುಶಲಕರ್ಮಿಗಳನ್ನು ಸಹ ಅವನು ತೆಗೆದುಕೊಂಡು ಹೋದನು. 16 ಆದರೆ ಕೆಲವು ಕಡುಬಡವರನ್ನು ನೆಬೂಜರದಾನನು ಆ ಪ್ರದೇಶದಲ್ಲಿಯೇ ಬಿಟ್ಟುಹೋದನು. ಅವನು ಆ ಜನರನ್ನು ದ್ರಾಕ್ಷಿತೋಟಗಳಲ್ಲಿ ಮತ್ತು ಹೊಲಗಳಲ್ಲಿ ಕೆಲಸ ಮಾಡಲು ಬಿಟ್ಟುಹೋದನು.
17 ಬಾಬಿಲೋನಿನ ಸೈನಿಕರು ಪವಿತ್ರಾಲಯದ ಕಂಚಿನ ಕಂಬಗಳನ್ನು ಮುರಿದರು. ಅವರು ಯೆಹೋವನ ಆಲಯದಲ್ಲಿದ್ದ ಪೀಠಗಳನ್ನು ಮತ್ತು ಕಂಚಿನ ಸರೋವರಗಳನ್ನು ಸಹ ಮುರಿದುಬಿಟ್ಟರು. ಅವರು ಎಲ್ಲಾ ಕಂಚಿನ ವಸ್ತುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 18 ಬಾಬಿಲೋನಿನ ಸೈನಿಕರು ಪವಿತ್ರಾಲಯದಿಂದ ಪಾತ್ರೆಗಳು, ಸಲಿಕೆಗಳು, ಕತ್ತರಿಗಳು, ದೊಡ್ಡ ಬೋಗುಣಿಗಳು, ತಟ್ಟೆಗಳು ಮತ್ತು ಪವಿತ್ರಾಲಯದ ಸೇವೆಗಾಗಿ ಉಪಯೋಗಿಸಲಾಗುವ ಕಂಚಿನ ಸಾಮಾನುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 19 ರಾಜನ ವಿಶೇಷ ರಕ್ಷಕದಳದ ಅಧಿಪತಿಯು ಬೋಗುಣಿಗಳನ್ನು, ಧೂಪಾರತಿಗಳನ್ನು, ದೊಡ್ಡ ಬಟ್ಟಲುಗಳನ್ನು, ಪಾತ್ರೆಗಳನ್ನು, ದೀಪಸ್ತಂಭಗಳನ್ನು, ತಟ್ಟೆಗಳನ್ನು, ಪಾನನೈವೇದ್ಯಕ್ಕೆ ಉಪಯೋಗಿಸುವ ಬೋಗುಣಿಗಳನ್ನು ತೆಗೆದುಕೊಂಡು ಹೋದನು. ಚಿನ್ನ ಅಥವಾ ಬೆಳ್ಳಿಯ ಪ್ರತಿಯೊಂದು ವಸ್ತುವನ್ನು ಅವನು ತೆಗೆದುಕೊಂಡನು. 20 ಎರಡು ಕಂಬಗಳು, ಸಮುದ್ರವೆನಿಸಿಕೊಂಡ ಪಾತ್ರೆಯು, ಅದನ್ನು ಹೊತ್ತುಕೊಂಡಿರುವ ಹನ್ನೆರಡು ಕಂಚಿನ ಹೋರಿಗಳು ಮತ್ತು ಚಲಿಸಬಲ್ಲ ಅಡ್ಡಣಿಗಳು ಬಹಳ ಭಾರವಾಗಿದ್ದವು. ರಾಜನಾದ, ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಆ ವಸ್ತುಗಳನ್ನು ಮಾಡಿಸಿದ್ದನು. ಆ ವಸ್ತುಗಳಿಗಾಗಿ ಉಪಯೋಗಿಸಲಾದ ಕಂಚು ತೂಕ ಮಾಡಲಾರದಷ್ಟು ಭಾರವಾಗಿತ್ತು.
21 ಪ್ರತಿಯೊಂದು ಕಂಚಿನ ಕಂಬ ಇಪ್ಪತ್ತೇಳು ಅಡಿ ಎತ್ತರವಾಗಿದ್ದು ಅದರ ಸುತ್ತಳತೆ ಹದಿನೆಂಟು ಅಡಿ ಇತ್ತು. ಪ್ರತಿಯೊಂದು ಕಂಬ ಟೊಳ್ಳಾಗಿದ್ದು ಅದರ ತಗಡು ನಾಲ್ಕು ಅಂಗುಲ ದಪ್ಪವಾಗಿತ್ತು. 22 ಮೊದಲನೇ ಕಂಬದ ಮೇಲೆ ಏಳುವರೆ ಅಡಿ ಎತ್ತರದ ಕಂಚಿನ ಕಂಬವಿತ್ತು. ಅದು ಅಲ್ಲಲ್ಲಿ ಜಾಲರಿಗಳಿಂದ ಮತ್ತು ಕಂಚಿನ ದಾಳಿಂಬೆಗಳಿಂದ ಅಲಂಕೃತವಾಗಿತ್ತು. ಎರಡನೆಯ ಕಂಬದಲ್ಲಿಯೂ ದಾಳಿಂಬೆಗಳು ಶೋಭಿಸುತ್ತಿದ್ದವು. ಅದು ಮೊದಲನೆ ಕಂಬದಂತೆ ಇತ್ತು. 23 ಕಂಬಗಳ ಪಕ್ಕದಲ್ಲಿ ತೊಂಭತ್ತಾರು ದಾಳಿಂಬೆಗಳಿದ್ದವು. ಜಾಲರಿಯ ಮೇಲೆ ಸುತ್ತಲೂ ಒಟ್ಟಾಗಿ ನೂರು ದಾಳಿಂಬೆ ಹಣ್ಣುಗಳಿದ್ದವು.
24 ರಾಜನ ವಿಶೇಷ ರಕ್ಷಕದಳದ ಅಧಿಪತಿಯು ಸೆರಾಯ ಮತ್ತು ಚೆಫನ್ಯರನ್ನು ಸೆರೆಹಿಡಿದನು. ಸೆರಾಯನು ಮಹಾ ಯಾಜಕನಾಗಿದ್ದನು ಮತ್ತು ಚೆಫನ್ಯನು ಅವರ ತರುವಾಯದ ಶ್ರೇಷ್ಠ ಯಾಜಕನಾಗಿದ್ದನು. ಮೂರು ಜನ ದ್ವಾರಪಾಲಕರನ್ನು ಕೂಡ ಸೆರೆಹಿಡಿಯಲಾಯಿತು. 25 ರಾಜನ ವಿಶೇಷ ರಕ್ಷಕದಳದ ಅಧಿಪತಿಯು ಸೈನ್ಯದ ವ್ಯವಸ್ಥಾಪಕನ ಅಧಿಕಾರಿಯನ್ನು ಬಂಧಿಸಿದನು. ಅವನು ರಾಜನ ಏಳು ಜನ ಆಪ್ತ ಮಂತ್ರಿಗಳನ್ನು ಸಹ ಸೆರೆಹಿಡಿದನು. ಅವರೆಲ್ಲ ಇನ್ನೂ ಜೆರುಸಲೇಮಿನಲ್ಲಿದ್ದರು. ಯುದ್ಧಕ್ಕೆ ಹೋಗುವವರ ಪಟ್ಟಿಯನ್ನು ಮಾಡುವ ಲಿಪಿಗಾರನನ್ನು ಸಹ ಅವನು ಸೆರೆಹಿಡಿದನು. ನಗರದಲ್ಲಿದ್ದ ಅರವತ್ತು ಮಂದಿ ಜನಸಾಮಾನ್ಯರನ್ನು ಸಹ ಅವನು ಸೆರೆಹಿಡಿದನು. 26-27 ಸೇನಾಧಿಪತಿಯಾದ ನೆಬೂಜರದಾನನು ಆ ಜನರನ್ನೆಲ್ಲ ಸೆರೆಹಿಡಿದನು. ಬಾಬಿಲೋನಿನ ರಾಜನಲ್ಲಿಗೆ ತಂದನು. ಬಾಬಿಲೋನಿನ ರಾಜನು ರಿಬ್ಲ ನಗರದಲ್ಲಿದ್ದನು. ರಿಬ್ಲ ನಗರವು ಹಮಾತ್ ಪ್ರದೇಶದಲ್ಲಿದೆ. ಆ ರಿಬ್ಲ ನಗರದಲ್ಲಿಯೇ ರಾಜನು ಅವರನ್ನೆಲ್ಲ ವಧಿಸಬೇಕೆಂದು ಅಪ್ಪಣೆ ಮಾಡಿದನು. ಯೆಹೂದದ ಜನರನ್ನು ಅವರ ದೇಶದಿಂದ ತೆಗೆದುಕೊಂಡು ಹೋಗಲಾಯಿತು. 28 ನೆಬೂಕದ್ನೆಚ್ಚರನು ಸೆರೆಹಿಡಿದುಕೊಂಡವರ ವಿವರ ಹೀಗಿದೆ:
ರಾಜನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಏಳನೇ ವರ್ಷದಲ್ಲಿ[c] ಯೆಹೂದದಿಂದ ಒಯ್ಯಲ್ಪಟ್ಟ ಜನರು 3,023.
29 ನೆಬೂಕದ್ನೆಚ್ಚರನ ಹದಿನೆಂಟನೇ ವರ್ಷದಲ್ಲಿ[d] ಜೆರುಸಲೇಮಿನಿಂದ 832.
30 ನೆಬೂಕದ್ನೆಚ್ಚರನ ಇಪ್ಪತ್ಮೂರನೇ ವರ್ಷದಲ್ಲಿ[e] ನೆಬೂಜರದಾನನು 745 ಜನ ಯೆಹೂದಿಯರನ್ನು ಸೆರೆಹಿಡಿದನು. ನೆಬೂಜರದಾನನು ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು.
ಒಟ್ಟಿನಲ್ಲಿ 4,600 ಜನರನ್ನು ಸೆರೆಹಿಡಿಯಲಾಗಿತ್ತು.
ಯೆಹೋಯಾಖೀನನ ಬಿಡುಗಡೆ
31 ಯೆಹೂದದ ರಾಜನಾಗಿದ್ದ ಯೆಹೋಯಾಖೀನನು ಮೂವತ್ತೇಳು ವರ್ಷ ಬಾಬಿಲೋನಿನ ಸೆರೆಮನೆಯಲ್ಲಿದ್ದನು. ಆತನ ಕಾರಾಗೃಹವಾಸದ ಮೂವತ್ತೇಳನೇ ವರ್ಷದಲ್ಲಿ ಬಾಬಿಲೋನಿನ ರಾಜನಾದ ಎವೀಲ್ಮೆರೋದಕನು ಯೆಹೋಯಾಖೀನನ ಮೇಲೆ ದಯೆತೋರಿದನು. ಆ ವರ್ಷ ಅವನು ಯೆಹೋಯಾಖೀನನನ್ನು ಸೆರೆಮನೆಯಿಂದ ಬಿಡುಗಡೆ ಮಾಡಿದನು. ಇದೇ ವರ್ಷ ಎವೀಲ್ಮೆರೋದಕನು ಯೆಹೋಯಾಖೀನನನ್ನು ಆ ವರ್ಷದ ಹನ್ನೆರಡನೆ ತಿಂಗಳಿನ ಇಪ್ಪತ್ತೈದನೆ ದಿನ ಬಿಡುಗಡೆ ಮಾಡಿದನು. 32 ಎವೀಲ್ಮೆರೋದಕನು ಯೆಹೋಯಾಖೀನನೊಂದಿಗೆ ಪ್ರೀತಿಯಿಂದ ಮಾತನಾಡಿದನು. ಅವನು ತನ್ನ ಸಂಗಡ ಬಾಬಿಲೋನಿನಲ್ಲಿದ್ದ ಎಲ್ಲಾ ರಾಜರುಗಳಿಗಿಂತ ಉನ್ನತಸ್ಥಾನವನ್ನು ಯೆಹೋಯಾಖೀನನಿಗೆ ಕೊಟ್ಟನು. 33 ಯೆಹೋಯಾಖೀನನು ತನ್ನ ಸೆರೆಮನೆಯ ಬಟ್ಟೆಗಳನ್ನು ತೆಗೆದುಹಾಕಿದನು. ಅವನು ಬದುಕಿರುವವರೆಗೂ ರಾಜನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು. 34 ಪ್ರತಿದಿನ ಬಾಬಿಲೋನಿನ ರಾಜನು ಯೆಹೋಯಾಖೀನನಿಗೆ ಭತ್ಯವನ್ನು ಕೊಡುತ್ತಿದ್ದನು. ಯೆಹೋಯಾಖೀನನು ಸಾಯುವವರೆಗೆ ಈ ಕ್ರಮ ಮುಂದುವರೆಯಿತು.
ರಚನೆಗಾರ: ದಾವೀದ.
31 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ನನ್ನನ್ನು ನಿರಾಶೆಗೊಳಿಸಬೇಡ.
ಕರುಣೆತೋರಿ ನನ್ನನ್ನು ರಕ್ಷಿಸು.
2 ನನಗೆ ಕಿವಿಗೊಡು.
ಬೇಗನೆ ಬಂದು, ನನ್ನನ್ನು ರಕ್ಷಿಸು.
ನನಗೆ ಬಂಡೆಯೂ ನನ್ನ ಆಶ್ರಯಸ್ಥಾನವೂ ಕೋಟೆಯೂ ಆಗಿದ್ದು
ನನ್ನನ್ನು ಕಾಪಾಡು!
3 ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವುದರಿಂದ
ನಿನ್ನ ಹೆಸರಿನ ಘನತೆಗಾಗಿ ನನ್ನನ್ನು ನಡೆಸು; ನನಗೆ ಮಾರ್ಗದರ್ಶನ ನೀಡು.
4 ನನ್ನ ವೈರಿಗಳು ನನಗೆ ಬಲೆಬೀಸಿದ್ದಾರೆ.
ಅವರ ಬಲೆಗೆ ಸಿಕ್ಕಿಬೀಳದಂತೆ ನನ್ನನ್ನು ರಕ್ಷಿಸು.
ನೀನೇ ನನ್ನ ಆಶ್ರಯಸ್ಥಾನವಾಗಿರುವೆ.
5 ಯೆಹೋವನೇ, ನಮ್ಮ ಭರವಸೆಗೆ ಯೋಗ್ಯನಾದ ದೇವರು ನೀನೊಬ್ಬನೇ.
ನನ್ನ ಜೀವವನ್ನು ನಿನ್ನ ಕೈಗಳಲ್ಲಿ ಇಟ್ಟಿರುವೆ.
ನನ್ನನ್ನು ರಕ್ಷಿಸು!
6 ಸುಳ್ಳುದೇವರುಗಳನ್ನು ಪೂಜಿಸುವವರನ್ನು ನಾನು ದ್ವೇಷಿಸುವೆನು.
ನಾನು ಯೆಹೋವನಲ್ಲಿಯೇ ಭರವಸವಿಡುವೆನು.
7 ದೇವರೇ, ನಿನ್ನ ಕರುಣೆಯು ನನ್ನನ್ನು ಉಲ್ಲಾಸಗೊಳಿಸುವುದು.
ನನ್ನ ಸಂಕಟವನ್ನು ನೀನು ನೋಡಿರುವೆ;
ನನಗಿರುವ ಆಪತ್ತುಗಳು ನಿನಗೆ ತಿಳಿದಿವೆ.
8 ವೈರಿಗಳು ನನ್ನನ್ನು ಸೆರೆಹಿಡಿದೊಯ್ಯಲು ನೀನು ಬಿಟ್ಟುಕೊಡುವುದಿಲ್ಲ;
ನನ್ನನ್ನು ಅವರ ಬಲೆಗಳಿಂದ ಬಿಡುಗಡೆ ಮಾಡುವೆ.
9 ಯೆಹೋವನೇ, ನನಗೆ ಅನೇಕ ಇಕ್ಕಟ್ಟುಗಳಿವೆ;
ನನ್ನನ್ನು ಕರುಣಿಸು.
ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ,
ನನ್ನ ಗಂಟಲು ನೋಯುತ್ತಿದೆ, ಹೊಟ್ಟೆಯೂ ನೋಯುತ್ತಿದೆ.
10 ನನ್ನ ಜೀವಿತವು[a] ದುಃಖದಲ್ಲಿ ಕೊನೆಗೊಳ್ಳುತ್ತಿದೆ.
ನನ್ನ ವರ್ಷಗಳು ನಿಟ್ಟುಸಿರಿನಲ್ಲೇ ಕಳೆದುಹೋಗುತ್ತಿವೆ.
ನನ್ನ ಇಕ್ಕಟ್ಟುಗಳು ನನ್ನ ಶಕ್ತಿಯನ್ನು ಕುಂದಿಸುತ್ತಿವೆ.
ನನ್ನ ಬಲವು ನನ್ನನ್ನು ಬಿಟ್ಟುಹೋಗುತ್ತಿದೆ.[b]
11 ವೈರಿಗಳು ನನ್ನನ್ನು ಕೀಳಾಗಿ ಕಾಣುತ್ತಿದ್ದಾರೆ;
ನನ್ನ ನೆರೆಹೊರೆಯವರೂ ನನ್ನನ್ನು ನಿಂದಿಸುವರು;
ನನ್ನ ಸಂಬಂಧಿಕರೂ ನನ್ನ ವಿಷಯದಲ್ಲಿ ಭಯಪಡುವರು;
ನನ್ನನ್ನು ದಾರಿಯಲ್ಲಿ ಕಂಡರೂ ಕಾಣದಂತೆ ಹೊರಟುಹೋಗುವರು.
12 ನಾನು ಸತ್ತವರಂತೆ ಯಾರ ಜ್ಞಾಪಕಕ್ಕೂ ಬಾರದವನಾದೆನು.
ಕಳೆದುಹೋದ ಉಪಕರಣದಂತೆ ಅವರು ನನ್ನನ್ನು ಮರೆತೇಬಿಟ್ಟಿದ್ದಾರೆ.
13 ಜನರು ನನ್ನನ್ನು ಕುರಿತು ಭಯಂಕರವಾದ ಸಂಗತಿಗಳನ್ನು ಮಾತಾಡಿಕೊಳ್ಳುತ್ತಿದ್ದಾರೆ.
ಅವರು ದಂಗೆಯೆದ್ದು ನನ್ನನ್ನು ಕೊಲ್ಲಬೇಕೆಂದುಕೊಂಡಿದ್ದಾರೆ.
14 ಯೆಹೋವನೇ, ನಾನಂತೂ ನಿನ್ನಲ್ಲೇ ಭರವಸವಿಟ್ಟಿದ್ದೇನೆ.
ನೀನೇ ನನ್ನ ದೇವರು.
15 ನನ್ನ ಜೀವವು ನಿನ್ನ ಕೈಯಲ್ಲಿದೆ.
ವೈರಿಗಳಿಂದ ನನ್ನನ್ನು ರಕ್ಷಿಸು; ನನ್ನನ್ನು ಅಟ್ಟಿಸಿಕೊಂಡು[c] ಬರುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
16 ದಯವಿಟ್ಟು ನಿನ್ನ ಸೇವಕನನ್ನು ಸ್ವೀಕರಿಸಿಕೊ.
ಕರುಣೆಯಿಂದ ನನ್ನನ್ನು ರಕ್ಷಿಸು!
17 ಯೆಹೋವನೇ, ನಾನು ನಿನ್ನಲ್ಲಿ ಪ್ರಾರ್ಥಿಸಿದೆನು.
ಆದ್ದರಿಂದ ನಾನು ನಿರಾಶನಾಗುವುದಿಲ್ಲ.
ಕೆಡುಕರಾದರೋ ನಿರಾಶರಾಗುವರು.
ಅವರು ಮೌನವಾಗಿ ಸಮಾಧಿಗೆ ಹೋಗುವರು.
18 ಕೆಡುಕರು ಜಂಬಕೊಚ್ಚಿಕೊಳ್ಳುತ್ತಾ
ಒಳ್ಳೆಯವರ ಬಗ್ಗೆ ಸುಳ್ಳು ಹೇಳುವರು.
ಅವರು ದುರಹಂಕಾರಿಗಳಾಗಿದ್ದಾರೆ;
ಅವರ ಸುಳ್ಳುತುಟಿಗಳು ಮೌನಗೊಳ್ಳುತ್ತವೆ.
19 ದೇವರೇ, ನೀನು ನಿನ್ನ ಭಕ್ತರಿಗಾಗಿ ಅಮೂಲ್ಯವಾದವುಗಳನ್ನು ಅಡಗಿಸಿಟ್ಟಿರುವೆ.
ನಿನ್ನಲ್ಲಿ ಭರವಸವಿಟ್ಟಿರುವ ಜನರಿಗಾಗಿ
ಎಲ್ಲರ ಮುಂದೆ ನೀನು ಮಾಡುವ ಒಳ್ಳೆಯ ಕಾರ್ಯಗಳು ಎಷ್ಟೋ ವಿಶೇಷವಾಗಿವೆ.
20 ನೀತಿವಂತರಿಗೆ ಕೇಡುಮಾಡಲು ಕೆಡುಕರು ಒಟ್ಟಾಗಿ ಸೇರಿದ್ದಾರೆ.
ನೀನಾದರೋ ನೀತಿವಂತರನ್ನು ಮರೆಮಾಡಿ ಕಾಪಾಡುವೆ;
ಅವರನ್ನು ನಿನ್ನ ಆಶ್ರಯಸ್ಥ್ಥಾನದಲ್ಲಿ ಅಡಗಿಸಿಡುವೆ.
21 ಯೆಹೋವನಿಗೆ ಸ್ತೋತ್ರವಾಗಲಿ! ವೈರಿಗಳು ಈ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ
ಆತನು ತನ್ನ ಶಾಶ್ವತ ಪ್ರೀತಿಯನ್ನು ಆಶ್ಚರ್ಯಕರವಾಗಿ ತೋರಿದ್ದಾನೆ.
22 ನಾನು ಭಯಗೊಂಡು, “ದೇವರು ನನ್ನನ್ನು ತನ್ನ ಸಾನಿಧ್ಯದಿಂದ ಹೊರಗಟ್ಟಿದ್ದಾನೆ” ಎಂದುಕೊಂಡೆನು.
ಆದರೆ ನಾನು ನಿನ್ನನ್ನು ಕೂಗಿಕೊಂಡಾಗ ನೀನು ಕಿವಿಗೊಟ್ಟೆ.
23 ದೇವರ ಭಕ್ತರೇ, ನೀವು ಯೆಹೋವನನ್ನು ಪ್ರೀತಿಸಲೇಬೇಕು!
ಆತನು ನಂಬಿಗಸ್ತರನ್ನು ಕಾಪಾಡುವನು; ಗರ್ವಿಷ್ಠರನ್ನಾದರೋ ದಂಡಿಸುವನು.
24 ಯೆಹೋವನನ್ನು ನಿರೀಕ್ಷಿಸಿಕೊಂಡಿರುವವರೇ, ದೃಢವಾಗಿಯೂ ಧೈರ್ಯವಾಗಿಯೂ ಇರಿ.
Kannada Holy Bible: Easy-to-Read Version. All rights reserved. © 1997 Bible League International