M’Cheyne Bible Reading Plan
ಇಸ್ರೇಲರ ಜೊತೆ ಮಿದ್ಯಾನ್ಯರ ಯುದ್ಧ
6 ಇಸ್ರೇಲರು ಯೆಹೋವನಿಗೆ ವಿರೋಧವಾಗಿ ಮತ್ತೆ ದುಷ್ಕೃತ್ಯಗಳನ್ನೇ ಮಾಡಿದರು. ಆದ್ದರಿಂದ ಮಿದ್ಯಾನ್ಯರು ಇಸ್ರೇಲರ ಮೇಲೆ ಏಳುವರ್ಷ ಪ್ರಭುತ್ವ ನಡೆಸುವಂತೆ ಯೆಹೋವನು ಆಸ್ಪದ ಮಾಡಿದನು.
2 ಮಿದ್ಯಾನ್ಯರು ಬಹಳ ಬಲಶಾಲಿಗಳಾಗಿದ್ದು ಇಸ್ರೇಲರಿಗೆ ಕ್ರೂರಿಗಳಾಗಿದ್ದರು. ಆದ್ದರಿಂದ ಇಸ್ರೇಲರು ಅಡಗಿಕೊಳ್ಳುವುದಕ್ಕಾಗಿ ಬೆಟ್ಟಗಳಲ್ಲಿ ಸ್ಥಳಗಳನ್ನು ಮಾಡಿಕೊಂಡರು. ಕಂಡುಹಿಡಿಯಲಾಗದ ಸ್ಥಳಗಳಲ್ಲಿ ಅವರು ತಮ್ಮ ಆಹಾರವನ್ನು ಬಚ್ಚಿಡುತ್ತಿದ್ದರು. 3 ಪೂರ್ವದಿಂದ ಮಿದ್ಯಾನ್ಯರೂ ಅಮಾಲೇಕ್ಯರೂ ಯಾವಾಗಲೂ ಬಂದು ಇವರ ಬೆಳೆಗಳನ್ನು ನಾಶಪಡಿಸುತ್ತಿದ್ದರು. 4 ಅವರು ಈ ಪ್ರದೇಶದಲ್ಲಿ ಪಾಳೆಯಮಾಡಿಕೊಂಡು ಇಸ್ರೇಲರ ಬೆಳೆಗಳನ್ನು ನಾಶಪಡಿಸುತ್ತಿದ್ದರು. ಅವರು ಗಾಜಾ ನಗರದವರೆಗಿರುವ ಪ್ರದೇಶದಲ್ಲಿನ ಬೆಳೆಗಳನ್ನು ಹಾಳುಮಾಡಿದರು. ಅವರು ಇಸ್ರೇಲರ ಆಹಾರಕ್ಕಾಗಿ ಏನೂ ಉಳಿಸಲಿಲ್ಲ. ಅವರು ಕುರಿ, ದನ, ಕತ್ತೆಗಳನ್ನು ಸಹ ಉಳಿಸಲಿಲ್ಲ. 5 ಮಿದ್ಯಾನ್ಯರು ಬಂದು ಈ ಪ್ರದೇಶದಲ್ಲಿ ಪಾಳೆಯ ಮಾಡಿಕೊಂಡರು. ಅವರು ತಮ್ಮ ಸಂಗಡ ತಮ್ಮ ಕುಟುಂಬದವರನ್ನೂ ಪಶುಗಳನ್ನೂ ತಂದರು. ಅವರು ಮಿಡತೆಗಳ ಗುಂಪಿನಂತೆ ಅಸಂಖ್ಯರಾಗಿದ್ದರು. ಅವರು ಮತ್ತು ಅವರ ಒಂಟೆಗಳು ಅತಿದೊಡ್ಡ ಪ್ರಮಾಣದಲ್ಲಿದ್ದು ಎಣಿಸಲು ಸಾಧ್ಯವಿರಲಿಲ್ಲ. ಇವರೆಲ್ಲರೂ ಇಸ್ರೇಲರ ಪ್ರದೇಶಕ್ಕೆ ನುಗ್ಗಿ ಹಾಳುಮಾಡಿದರು. 6 ಇಸ್ರೇಲರು ಮಿದ್ಯಾನ್ಯರಿಂದಾಗಿ ತುಂಬ ಬಡವರಾಗಿ ಬಿಟ್ಟರು. ಆದ್ದರಿಂದ ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟರು.
7 [a] ಮಿದ್ಯಾನ್ಯರು ಕೆಟ್ಟದ್ದನ್ನೆಲ್ಲಾ ಮಾಡಿದರು. ಅದಕ್ಕಾಗಿ ಇಸ್ರೇಲರು ಸಹಾಯಕೋರಿ ಯೆಹೋವನಲ್ಲಿ ಮೊರೆಯಿಟ್ಟರು. 8 ಆದ್ದರಿಂದ ಯೆಹೋವನು ಅವರ ಹತ್ತಿರಕ್ಕೆ ಒಬ್ಬ ಪ್ರವಾದಿಯನ್ನು ಕಳುಹಿಸಿದನು. ಆ ಪ್ರವಾದಿಯು ಇಸ್ರೇಲರಿಗೆ ಹೀಗೆ ಹೇಳಿದನು: “ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಿರಿ. ನಾನು ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿ ಅಲ್ಲಿಂದ ಹೊರಗೆ ತಂದೆನು. 9 ನಾನು ನಿಮ್ಮನ್ನು ಬಲಶಾಲಿಗಳಾದ ಈಜಿಪ್ಟಿನ ಜನರಿಂದ ರಕ್ಷಿಸಿದೆ. ತರುವಾಯ ಕಾನಾನ್ಯರು ನಿಮ್ಮನ್ನು ಪೀಡಿಸಿದರು. ಆಗ ಮತ್ತೊಮ್ಮೆ ನಾನು ನಿಮ್ಮನ್ನು ರಕ್ಷಿಸಿದೆ. ನಾನು ಅವರನ್ನು ಅವರ ಪ್ರದೇಶದಿಂದ ಓಡಿಸಿ ಅದನ್ನು ನಿಮಗೆ ಕೊಟ್ಟೆ’ 10 ಆಗ ನಾನು ನಿಮಗೆ, ‘ಯೆಹೋವನಾದ ನಾನೇ ನಿಮ್ಮ ದೇವರು! ಅಮೋರಿಯರ ಪ್ರದೇಶದಲ್ಲಿದ್ದರೂ ಅವರ ಸುಳ್ಳುದೇವರುಗಳನ್ನು ನೀವು ಪೂಜಿಸಕೂಡದು ಎಂದು ಹೇಳಿದ್ದೆ.’ ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ.”
ಯೆಹೋವನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾದನು
11 ಆ ಸಮಯದಲ್ಲಿ ಯೆಹೋವನ ದೂತನು ಗಿದ್ಯೋನ ಎಂಬ ವ್ಯಕ್ತಿಯ ಬಳಿಗೆ ಬಂದನು. ಯೆಹೋವನ ದೂತನು ಒಫ್ರ ಎಂಬ ಊರಲ್ಲಿ ಏಲಾ ವೃಕ್ಷದ ಕೆಳಗೆ ಕುಳಿತುಕೊಂಡನು. ಆ ಗಿಡವು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಯೋವಾಷನು ಗಿದ್ಯೋನನ ತಂದೆ. ಗಿದ್ಯೋನನು ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋಧಿಯನ್ನು ಬಡಿಯುತ್ತಿದ್ದನು. ಯೆಹೋವನ ದೂತನು ಗಿದ್ಯೋನನ ಹತ್ತಿರ ಕುಳಿತುಕೊಂಡನು. ಮಿದ್ಯಾನ್ಯರಿಗೆ ಗೋಧಿ ಕಾಣಬಾರದೆಂದು ಗಿದ್ಯೋನನು ಮರೆಯಾಗಿದ್ದನು. 12 ಯೆಹೋವನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ, “ಪರಾಕ್ರಮಶಾಲಿಯೇ, ಯೆಹೋವನು ನಿನ್ನ ಸಂಗಡ ಇದ್ದಾನೆ” ಎಂದು ಹೇಳಿದನು.
13 ಆಗ ಗಿದ್ಯೋನನು, “ಸ್ವಾಮೀ, ಯೆಹೋವನು ನಮ್ಮ ಸಂಗಡವಿದ್ದರೆ ನಮಗೆ ಇಷ್ಟೊಂದು ಕಷ್ಟಗಳೇಕೆ ಬರುತ್ತವೆ? ನಮ್ಮ ಪೂರ್ವಿಕರಿಗಾಗಿ ಆತನು ಬಹಳಷ್ಟು ಅದ್ಭುತಕಾರ್ಯಗಳನ್ನು ಮಾಡಿದ್ದನೆಂದು ನಾವು ಕೇಳಿದ್ದೇವೆ. ಆತನು ಅವರನ್ನು ಈಜಿಪ್ಟಿನಿಂದ ಹೊರಗೆ ಕರೆತಂದನೆಂದು ನಮ್ಮ ಪೂರ್ವಿಕರು ನಮಗೆ ಹೇಳಿದರು. ಆದರೆ ಈಗ ಯೆಹೋವನು ನಮ್ಮನ್ನು ಕೈಬಿಟ್ಟಿದ್ದಾನೆ; ಮಿದ್ಯಾನ್ಯರು ನಮ್ಮನ್ನು ಸೋಲಿಸುವಂತೆ ಮಾಡಿದ್ದಾನೆ” ಎಂದು ಹೇಳಿದನು.
14 ಯೆಹೋವನು ಗಿದ್ಯೋನನ ಕಡೆಗೆ ತಿರುಗಿ, “ನಿನ್ನ ಬಲವನ್ನು ಉಪಯೋಗಿಸು. ಹೋಗು, ಮಿದ್ಯಾನ್ಯರಿಂದ ಇಸ್ರೇಲರನ್ನು ರಕ್ಷಿಸು. ನಾನು ಅವರನ್ನು ರಕ್ಷಿಸುವುದಕ್ಕಾಗಿ ನಿನ್ನನ್ನು ಕಳುಹಿಸುತ್ತಿದ್ದೇನೆ” ಅಂದನು.
15 ಅದಕ್ಕೆ ಗಿದ್ಯೋನನು, “ಸ್ವಾಮೀ, ಮನಸ್ಸೆ ಕುಲದಲ್ಲಿ ನನ್ನ ಕುಟುಂಬವು ಕೇವಲ ಅಲ್ಪವಾದದ್ದು. ನನ್ನ ಕುಟುಂಬದಲ್ಲಿ ನಾನು ಎಲ್ಲರಿಗಿಂತ ಚಿಕ್ಕವನು. ನಾನು ಇಸ್ರೇಲರನ್ನು ರಕ್ಷಿಸಲು ಹೇಗೆ ಸಾಧ್ಯ?” ಎಂದು ಕೇಳಿದನು.
16 ಯೆಹೋವನು ಗಿದ್ಯೋನನಿಗೆ, “ನಾನು ನಿನ್ನ ಸಂಗಡವಿದ್ದೇನೆ! ಆದ್ದರಿಂದ ನೀನು ಮಿದ್ಯಾನ್ಯರನ್ನು ಸೋಲಿಸುವೆ. ಕೇವಲ ಒಬ್ಬನೊಂದಿಗೆ ಯುದ್ಧ ಮಾಡುತ್ತಿರುವಿಯೋ ಎಂಬಂತೆ ನಿನಗೆ ಅನಿಸುತ್ತದೆ” ಎಂದು ಹೇಳಿದನು.
17 ಆಗ ಗಿದ್ಯೋನನು ಯೆಹೋವನಿಗೆ, “ನೀನು ನನಗೆ ಕೃಪೆ ತೋರಿದರೆ, ನೀನು ನಿಜವಾಗಿಯೂ ಯೆಹೋವನು ಎಂಬುದಕ್ಕೆ ನನಗೆ ಒಂದು ಗುರುತನ್ನು ಕೊಡು. 18 ದಯವಿಟ್ಟು ಇಲ್ಲಿಯೇ ಇರು. ನಾನು ಬರುವವರೆಗೆ ಎಲ್ಲಿಗೂ ಹೋಗಬೇಡ. ನಾನು ನಿನಗೆ ಕಾಣಿಕೆಯನ್ನು ತಂದು ಅರ್ಪಿಸುವುದಕ್ಕೆ ಅವಕಾಶಕೊಡು” ಎಂದು ಪ್ರಾರ್ಥಿಸಿದನು.
ಅದಕ್ಕೆ, ಆತನು, “ನೀನು ಬರುವವರೆಗೂ ನಾನು ಇರುತ್ತೇನೆ” ಎಂದು ಹೇಳಿದನು.
19 ಗಿದ್ಯೋನನು ಒಳಗೆ ಹೋಗಿ ಒಂದು ಆಡಿನ ಮರಿಯನ್ನು ಬೇಯಿಸಿದನು. ಅವನು ಸುಮಾರು ಇಪ್ಪತ್ತು ಸೇರಿನಷ್ಟು ಹಿಟ್ಟನ್ನು ತೆಗೆದುಕೊಂಡು ಹುಳಿಯಿಲ್ಲದ ರೊಟ್ಟಿಯನ್ನು ಮಾಡಿದನು. ತರುವಾಯ ಗಿದ್ಯೋನನು ಆ ಮಾಂಸವನ್ನು ಒಂದು ಬುಟ್ಟಿಯಲ್ಲಿಟ್ಟನು, ಮಾಂಸ ಬೇಯಿಸಿದ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿದನು. ಗಿದ್ಯೋನನು ಆ ಮಾಂಸವನ್ನೂ ಮಾಂಸ ಬೇಯಿಸಿದ ನೀರನ್ನೂ ಹುಳಿಯಿಲ್ಲದ ರೊಟ್ಟಿಯನ್ನೂ ತೆಗೆದುಕೊಂಡು ಬಂದನು. ಗಿದ್ಯೋನನು ಏಲಾ ಮರದ ಕೆಳಗೆ ಯೆಹೋವನಿಗೆ ಆಹಾರವನ್ನು ಕೊಟ್ಟನು.
20 ದೇವದೂತನು ಗಿದ್ಯೋನನಿಗೆ, “ಆ ಮಾಂಸವನ್ನೂ ಹುಳಿಯಿಲ್ಲದ ಆ ರೊಟ್ಟಿಯನ್ನೂ ಆ ಕಲ್ಲಿನ ಮೇಲೆ ಇಡು. ಆಮೇಲೆ ಆ ನೀರನ್ನು ಅದರ ಮೇಲೆ ಸುರಿ” ಎಂದನು. ದೇವದೂತನು ಹೇಳಿದಂತೆಯೇ ಗಿದ್ಯೋನನು ಮಾಡಿದನು.
21 ಯೆಹೋವನ ದೂತನ ಕೈಯಲ್ಲಿ ಒಂದು ಕೋಲಿತ್ತು. ಯೆಹೋವನ ದೂತನು ತನ್ನ ಕೋಲಿನ ತುದಿಯಿಂದ ಮಾಂಸವನ್ನು ಮತ್ತು ರೊಟ್ಟಿಯನ್ನು ಮುಟ್ಟಿದನು. ಆಗ ಆ ಕಲ್ಲಿನಿಂದ ಬೆಂಕಿಯ ಜ್ವಾಲೆಯು ಎದ್ದಿತು! ಮಾಂಸ ಮತ್ತು ರೊಟ್ಟಿ ಸಂಪೂರ್ಣವಾಗಿ ಸುಟ್ಟುಹೋದವು! ಆಮೇಲೆ ಯೆಹೋವನ ದೂತನು ಅದೃಶ್ಯನಾದನು.
22 ತಾನು ಈವರೆಗೆ ಮಾತಾಡುತ್ತಿದ್ದದ್ದು ಯೆಹೋವನ ದೂತನೊಡನೆ ಎಂಬುದು ಗಿದ್ಯೋನನಿಗೆ ಆಗ ಅರಿವಾಯಿತು.
ಗಿದ್ಯೋನನು, “ಸರ್ವಶಕ್ತನಾದ ಯೆಹೋವನೇ, ನಿನ್ನ ದೂತನನ್ನು ಮುಖಾಮುಖಿಯಾಗಿ ಕಂಡೆನು” ಎಂದು ಕೂಗಿಕೊಂಡನು.
23 “ಶಾಂತನಾಗು, ಭಯಪಡಬೇಡ, ನೀನು ಸಾಯುವುದಿಲ್ಲ” ಎಂದು ಗಿದ್ಯೋನನಿಗೆ ಯೆಹೋವನು ಹೇಳಿದನು.
24 ಗಿದ್ಯೋನನು ಯೆಹೋವನ್ನು ಆರಾಧಿಸಲು ಆ ಸ್ಥಳದಲ್ಲಿ ಒಂದು ಯಜ್ಞವೇದಿಕೆಯನ್ನು ಕಟ್ಟಿದನು. ಗಿದ್ಯೋನನು ಅದಕ್ಕೆ “ಯೆಹೋವನು ಶಾಂತಿಸ್ವರೂಪನು” ಎಂದು ಹೆಸರಿಟ್ಟನು. ಆ ಯಜ್ಞವೇದಿಕೆಯು ಇಂದಿಗೂ ಅಬೀಯೆಜೆರ್ ಗೋತ್ರದವರು ವಾಸಿಸುವ ಒಫ್ರದಲ್ಲಿದೆ.
ಗಿದ್ಯೋನನು ಬಾಳನ ಯಜ್ಞವೇದಿಕೆಯನ್ನು ಕೆಡವಿದನು
25 ಅದೇ ರಾತ್ರಿ ಯೆಹೋವನು ಗಿದ್ಯೋನನೊಂದಿಗೆ ಮಾತನಾಡಿ, “ನಿನ್ನ ತಂದೆಯ ಹೋರಿಗಳಲ್ಲಿ ಒಂದು ಚಿಕ್ಕ ಹೋರಿಯನ್ನು ಮತ್ತು ಏಳು ವರ್ಷದ ಹೋರಿಯನ್ನು ತೆಗೆದುಕೊಂಡು ಹೋಗಿ ನಿನ್ನ ತಂದೆಯು ಸುಳ್ಳುದೇವರಾದ ಬಾಳನಿಗೆ ಕಟ್ಟಿರುವ ಯಜ್ಞವೇದಿಕೆಯನ್ನು ಕೆಡವಿಬಿಡು; ಅದರ ಬಳಿಯಲ್ಲಿರುವ ಅಶೇರ ಎಂಬ ವಿಗ್ರಹಸ್ತಂಭವನ್ನು ಕಡಿದುಹಾಕು. 26 ಬಳಿಕ ನಿಮ್ಮ ದೇವರಾದ ಯೆಹೋವನಿಗಾಗಿ ಸರಿಯಾದ ಯಜ್ಞವೇದಿಕೆಯನ್ನು ಈ ಗುಡ್ಡದ ಶಿಖರದಲ್ಲಿ ಕಟ್ಟಿಸು. ಆಮೇಲೆ ಆ ಎರಡನೆಯ ಹೋರಿಯನ್ನು ಈ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸು; ಅಶೇರಸ್ತಂಭದ ಕಟ್ಟಿಗೆಯನ್ನು ಈ ಸರ್ವಾಂಗಹೋಮಕ್ಕೆ ಉಪಯೋಗಿಸು” ಎಂದು ಹೇಳಿದನು.
27 ಗಿದ್ಯೋನನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಕರೆದುಕೊಂಡು ಹೋಗಿ ಯೆಹೋವನು ಹೇಳಿದಂತೆಯೇ ಮಾಡಿದನು. ಆದರೆ ಅವನು ತನ್ನ ಕುಟುಂಬದವರಿಗೂ ನಗರ ನಿವಾಸಿಗಳಿಗೂ ಹೆದರಿಕೊಂಡಿದ್ದರಿಂದ ಅವನು ಅದನ್ನು ಹಗಲಿನಲ್ಲಿ ಮಾಡದೆ ರಾತ್ರಿಯಲ್ಲಿ ಮಾಡಿದನು.
28 ನಗರದ ಜನರು ಮರುದಿನ ಬೆಳಿಗ್ಗೆ ಎದ್ದಾಗ ಬಾಳನ ಯಜ್ಞವೇದಿಕೆಯು ಕೆಡವಲ್ಪಟ್ಟಿರುವುದನ್ನೂ ಅಶೇರಸ್ತಂಭವು ಕಡಿದು ಹಾಕಲ್ಪಟ್ಟಿರುವುದನ್ನೂ ನೋಡಿದರು. ಅಶೇರಸ್ತಂಭವು ಬಾಳನ ಯಜ್ಞವೇದಿಕೆಯ ಪಕ್ಕದಲ್ಲಿತ್ತು. ಗಿದ್ಯೋನನು ಕಟ್ಟಿದ್ದ ಯಜ್ಞವೇದಿಕೆಯನ್ನು ಸಹ ಅವರು ನೋಡಿದರು. ಯಜ್ಞವೇದಿಕೆಯ ಮೇಲೆ ಎರಡನೆಯ ಹೋರಿಯನ್ನು ಸರ್ವಾಂಗಹೋಮವಾಗಿ ಅರ್ಪಿಸಿರುವುದನ್ನೂ ಅವರು ನೋಡಿದರು.
29 ನಗರದ ಜನರು ಒಬ್ಬರಿಗೊಬ್ಬರು, “ನಮ್ಮ ಯಜ್ಞವೇದಿಕೆಯನ್ನು ಯಾರು ಕೆಡವಿದರು? ನಮ್ಮ ಅಶೇರಸ್ತಂಭವನ್ನು ಯಾರು ಕಡಿದುಹಾಕಿದರು? ಈ ಹೊಸ ಯಜ್ಞವೇದಿಕೆಯ ಮೇಲೆ ಈ ಹೋರಿಯನ್ನು ಯಾರು ಸರ್ವಾಂಗಹೋಮ ಮಾಡಿದರು?” ಎಂಬ ಹಲವಾರು ಪ್ರಶ್ನೆಗಳನ್ನು ಕೇಳಿ ಇದೆಲ್ಲವನ್ನು ಮಾಡಿದವರು ಯಾರೆಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.
“ಯೋವಾಷನ ಮಗನಾದ ಗಿದ್ಯೋನನು ಇದನ್ನೆಲ್ಲ ಮಾಡಿದನು” ಎಂದು ಯಾರೋ ಹೇಳಿದರು.
30 ನಗರದ ಜನರು ಯೋವಾಷನಲ್ಲಿಗೆ ಬಂದು ಯೋವಾಷನಿಗೆ, “ನೀನು ನಿನ್ನ ಮಗನನ್ನು ಹೊರಗೆ ಕರೆದುಕೊಂಡು ಬಾ. ಅವನು ಬಾಳನ ಯಜ್ಞವೇದಿಕೆಯನ್ನು ಕೆಡವಿದ್ದಾನೆ. ಆ ಯಜ್ಞವೇದಿಕೆಯ ಪಕ್ಕದಲ್ಲಿದ್ದ ಅಶೇರಸ್ತಂಭವನ್ನು ಕಡಿದುಹಾಕಿದ್ದಾನೆ. ಅವನನ್ನು ನಾವು ಕೊಂದು ಬಿಡುತ್ತೇವೆ” ಅಂದರು.
31 ತನ್ನ ಸುತ್ತಲೂ ನಿಂತಿದ್ದ ಜನರಿಗೆ ಯೋವಾಷನು, “ನೀವು ಬಾಳನ ಪಕ್ಷವನ್ನು ವಹಿಸುವಿರಾ? ನೀವು ಬಾಳನನ್ನು ರಕ್ಷಿಸುವಿರಾ? ಬಾಳನ ಪಕ್ಷದವರನ್ನು ಬೆಳಗಾಗುವುದರೊಳಗೆ ಕೊಂದು ಬಿಡಲಾಗುವುದು. ಬಾಳನು ನಿಜವಾಗಿಯೂ ದೇವರಾಗಿದ್ದರೆ ಅವನ ಯಜ್ಞವೇದಿಕೆಯನ್ನು ಬೀಳಿಸುವಾಗ ಅವನು ತನ್ನ ರಕ್ಷಣೆಯನ್ನು ಏಕೆ ಮಾಡಿಕೊಳ್ಳಲಿಲ್ಲ?” ಅಂದನು. 32 ಯೋವಾಷನು, “ಗಿದ್ಯೋನನು ಬಾಳನ ಯಜ್ಞವೇದಿಕೆಯನ್ನು ಕೆಡವಿದ ಪಕ್ಷದಲ್ಲಿ ಬಾಳನು ಅವನೊಡನೆ ವಾದಿಸಲಿ” ಎಂದು ಹೇಳಿದನು. ಅಂದು ಯೋವಾಷನು ಗಿದ್ಯೋನನಿಗೆ ಯೆರುಬ್ಬಾಳ[b] ಎಂಬ ಹೊಸ ಹೆಸರನ್ನು ಕೊಟ್ಟನು.
ಮಿದ್ಯಾನ್ಯರನ್ನು ಗಿದ್ಯೋನನು ಸೋಲಿಸಿದನು
33 ಮಿದ್ಯಾನ್ಯರು, ಅಮಾಲೇಕ್ಯರು ಮತ್ತು ಪೂರ್ವ ದೇಶದ ಕೆಲವರು ಇಸ್ರೇಲರ ಮೇಲೆ ಯುದ್ಧಮಾಡಲು ಒಟ್ಟುಗೂಡಿದರು. ಅವರು ಜೋರ್ಡನ್ ನದಿಯನ್ನು ದಾಟಿಹೋಗಿ ಇಜ್ರೇಲಿನ ತಗ್ಗಿನಲ್ಲಿ ಪಾಳೆಯಮಾಡಿಕೊಂಡರು. 34 ಗಿದ್ಯೋನನ ಮೇಲೆ ಯೆಹೋವನ ಆತ್ಮವು ಬಂದಿತು; ಅವನಿಗೆ ಹೆಚ್ಚಿನ ಶಕ್ತಿಯನ್ನು ಕೊಟ್ಟಿತು. ಅಬೀಯೇಜೆರನ ಗೋತ್ರದವರನ್ನು ತನ್ನನ್ನು ಹಿಂಬಾಲಿಸಲು ಕರೆಯುವುದಕ್ಕಾಗಿ ಗಿದ್ಯೋನನು ತುತ್ತೂರಿಯನ್ನು ಊದಿದನು. 35 ಮನಸ್ಸೆ ಕುಲದ ಜನರೆಲ್ಲರನ್ನು ಕರೆಯುವುದಕ್ಕಾಗಿ ಗಿದ್ಯೋನನು ದೂತರನ್ನು ಕಳುಹಿಸಿದನು. ಆ ದೂತರು ಮನಸ್ಸೆ ಕುಲದ ಜನರಿಗೆ ತಮ್ಮ ಆಯುಧಗಳನ್ನು ತೆಗೆದುಕೊಂಡು ಯುದ್ಧಕ್ಕೆ ಸಿದ್ಧರಾಗಬೇಕೆಂದು ತಿಳಿಸಿದರು. ಗಿದ್ಯೋನನು ಆಶೇರ್, ಜೆಬುಲೂನ್ ಮತ್ತು ನಫ್ತಾಲಿ ಕುಲದವರ ಹತ್ತಿರವೂ ಸಹ ದೂತರನ್ನು ಕಳುಹಿಸಿದನು. ಆ ದೂತರು ಸಹ ಅದೇ ಸಂದೇಶವನ್ನು ತಿಳಿಸಿದರು. ಆದ್ದರಿಂದ ಆ ಕುಲಗಳವರು ಸಹ ಗಿದ್ಯೋನನನ್ನು ಮತ್ತು ಅವನ ಜನರನ್ನು ಸೇರಿಕೊಳ್ಳಲು ಹೋದರು.
36 ಆಗ ಗಿದ್ಯೋನನು ದೇವರಿಗೆ, “ಇಸ್ರೇಲಿನ ಜನರನ್ನು ರಕ್ಷಿಸಲು ನೀನು ನನಗೆ ಸಹಾಯ ಮಾಡುವುದಾಗಿ ಹೇಳಿರುವೆ. ಅದಕ್ಕೆ ಸಾಕ್ಷ್ಯವನ್ನು ಈಗ ಒದಗಿಸು. 37 ನಾನು ಕಣದಲ್ಲಿ ಕುರಿಯ ತುಪ್ಪಟವನ್ನು ಹಾಸುತ್ತೇನೆ. ನೆಲವೆಲ್ಲ ಒಣಗಿದ್ದು ಕೇವಲ ಕುರಿಯ ತುಪ್ಪಟದ ಮೇಲೆ ಇಬ್ಬನಿ ಬಿದ್ದರೆ, ನೀನು ಹೇಳಿದಂತೆಯೇ ಇಸ್ರೇಲನ್ನು ರಕ್ಷಿಸಲು ನನ್ನನ್ನು ಬಳಸುವೆ ಎಂದು ಅರಿತುಕೊಳ್ಳುವೆ” ಅಂದನು.
38 ಹಾಗೆಯೇ ಆಯಿತು. ಗಿದ್ಯೋನನು ಮರುದಿನ ಬೆಳಿಗ್ಗೆ ಬೇಗ ಎದ್ದು ಕುರಿಯ ತುಪ್ಪಟವನ್ನು ಹಿಂಡಿದನು. ಆ ಕುರಿಯ ತುಪ್ಪಟದಿಂದ ಒಂದು ಬಟ್ಟಲು ತುಂಬ ನೀರು ಬಂದಿತು.
39 ಆಗ ಗಿದ್ಯೋನನು ದೇವರಿಗೆ, “ನನ್ನ ಮೇಲೆ ಕೋಪಿಸಿಕೊಳ್ಳಬೇಡ. ನಾನು ಇನ್ನೊಂದು ಸಾಕ್ಷ್ಯವನ್ನು ಕೇಳುತ್ತೇನೆ. ಇನ್ನೊಂದು ಸಲ ಕುರಿಯ ತುಪ್ಪಟದಿಂದ ನಿನ್ನನ್ನು ಪರೀಕ್ಷಿಸುತ್ತೇನೆ. ಈ ಸಲ, ಸುತ್ತಮುತ್ತಲಿನ ಭೂಮಿಯ ಮಂಜಿನಿಂದ ಹಸಿಯಾಗಿ, ಕುರಿಯ ತುಪ್ಪಟ ಮಾತ್ರ ಒಣಗಿರಲಿ” ಎಂದು ಪ್ರಾರ್ಥಿಸಿದನು.
40 ಆ ರಾತ್ರಿ ದೇವರು ಹಾಗೆಯೇ ಮಾಡಿದನು. ಕೇವಲ ಕುರಿಯ ತುಪ್ಪಟ ಮಾತ್ರ ಒಣಗಿದಂತಿದ್ದು ಸುತ್ತಲಿರುವ ನೆಲವೆಲ್ಲಾ ಮಂಜಿನ ನೀರಿನಿಂದ ಹಸಿಯಾಗಿತ್ತು.
ಪೇತ್ರ ಮತ್ತು ಕೊರ್ನೇಲಿಯ
10 ಸೆಜರೇಯ ಪಟ್ಟಣದಲ್ಲಿ ಕೊರ್ನೇಲಿಯ ಎಂಬವನಿದ್ದನು. ರೋಮಿನ ಸೈನ್ಯಕ್ಕೆ ಸೇರಿದ “ಇಟಲಿಯ ದಳ”ದಲ್ಲಿ ಅವನು ಅಧಿಕಾರಿಯಾಗಿದ್ದನು. 2 ಕೊರ್ನೇಲಿಯನು ದೈವಭಕ್ತನಾಗಿದ್ದನು. ಅವನು ಮತ್ತು ಅವನ ಕುಟುಂಬದಲ್ಲಿ ವಾಸವಾಗಿದ್ದ ಇತರ ಎಲ್ಲಾ ಜನರು ನಿಜದೇವರನ್ನು ಆರಾಧಿಸುತ್ತಿದ್ದರು. ಅವನು ಬಡವರಿಗೆ ಧಾರಾಳವಾಗಿ ಹಣವನ್ನು ಕೊಡುತ್ತಿದ್ದನು. ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಿದ್ದನು. 3 ಒಂದು ಮಧ್ಯಾಹ್ನ ಸುಮಾರು ಮೂರು ಗಂಟೆಯಲ್ಲಿ ಕೊರ್ನೇಲಿಯನಿಗೆ ಒಂದು ದರ್ಶನವಾಯಿತು. ಅವನು ಅದನ್ನು ಸ್ಪಷ್ಟವಾಗಿ ಕಂಡನು. ಆ ದರ್ಶನದಲ್ಲಿ ದೇವದೂತನೊಬ್ಬನು ಅವನ ಬಳಿಗೆ ಬಂದು, “ಕೊರ್ನೇಲಿಯನೇ” ಎಂದು ಕರೆದನು.
4 ಕೊರ್ನೇಲಿಯನು ದೇವದೂತನನ್ನು ಕಂಡು ಭಯದಿಂದ “ಸ್ವಾಮೀ, ನಿಮಗೇನು ಬೇಕು?” ಎಂದು ಕೇಳಿದನು.
ಆ ದೇವದೂತನು ಅವನಿಗೆ, “ದೇವರು ನಿನ್ನ ಪ್ರಾರ್ಥನೆಗಳನ್ನು ಕೇಳಿದ್ದಾನೆ. ನೀನು ಬಡವರಿಗೆ ಕೊಟ್ಟವುಗಳನ್ನು ಆತನು ನೋಡಿದ್ದಾನೆ. ದೇವರು ನಿನ್ನನ್ನು ಮೆಚ್ಚಿಕೊಂಡಿದ್ದಾನೆ. 5 ಈಗ ಸೀಮೋನ ಎಂಬ ವ್ಯಕ್ತಿಯನ್ನು ಕರೆದುಕೊಂಡು ಬರುವುದಕ್ಕಾಗಿ ನೀನು ಜನರನ್ನು ಜೊಪ್ಪ ಪಟ್ಟಣಕ್ಕೆ ಕಳುಹಿಸು. ಸೀಮೋನನನ್ನು ‘ಪೇತ್ರ’ ಎಂತಲೂ ಕರೆಯುತ್ತಾರೆ. 6 ಸೀಮೋನನು ಚರ್ಮಕಾರನ ಮನೆಯಲ್ಲಿ ಇಳಿದುಕೊಂಡಿದ್ದಾನೆ. ಅವನ ಮನೆಯು ಸಮುದ್ರ ತೀರದಲ್ಲಿದೆ” ಎಂದು ಹೇಳಿದನು. 7 ಕೊರ್ನೇಲಿಯನೊಂದಿಗೆ ಮಾತಾಡಿದ ದೇವದೂತನು ಹೊರಟುಹೋದನು. ಬಳಿಕ ಕೊರ್ನೇಲಿಯನು ತನ್ನ ಸೇವಕರಲ್ಲಿ ಇಬ್ಬರನ್ನೂ ಒಬ್ಬ ಸೈನಿಕನನ್ನೂ ಕರೆದನು. ಈ ಸೈನಿಕನು ದೈವಭಕ್ತನಾಗಿದ್ದನು. ಕೊರ್ನೇಲಿಯನ ಆಪ್ತಸಹಾಯಕರಲ್ಲಿ ಇವನೂ ಒಬ್ಬನಾಗಿದ್ದನು. 8 ಕೊರ್ನೇಲಿಯನು ಈ ಮೂವರಿಗೆ ಪ್ರತಿಯೊಂದನ್ನೂ ವಿವರಿಸಿದನು. ಬಳಿಕ ಅವರನ್ನು ಜೊಪ್ಪಕ್ಕೆ ಕಳುಹಿಸಿದನು.
9 ಮರುದಿನ ಈ ಜನರು ಜೊಪ್ಪಕ್ಕೆ ಸಮೀಪಿಸಿದಾಗ ಮಧ್ಯಾಹ್ನದ ಸಮಯವಾಗಿತ್ತು. ಆ ಸಮಯದಲ್ಲಿ ಪೇತ್ರನು ಪ್ರಾರ್ಥಿಸುವುದಕ್ಕಾಗಿ ಮಾಳಿಗೆಯ ಮೇಲೆ ಹೋದನು. 10 ಪೇತ್ರನಿಗೆ ಹಸಿವೆಯಾಗಿ ಊಟಮಾಡಬೇಕೆನಿಸಿತು. ಅಲ್ಲಿ ಅವನಿಗಾಗಿ ಅಡಿಗೆ ಮಾಡುತ್ತಿದ್ದರು. ಇತ್ತ, ಪೇತ್ರನಿಗೊಂದು ದರ್ಶನವಾಯಿತು. 11 ತೆರೆದ ಆಕಾಶದಿಂದ ಯಾವುದೋ ಒಂದು ವಸ್ತು ಇಳಿದು ಬರುತ್ತಿರುವುದನ್ನು ಅವನು ಕಂಡನು. ಅದು ದೊಡ್ಡ ತಟ್ಟೆಯಂತಿತ್ತು. ಅದರ ನಾಲ್ಕು ಮೂಲೆಗಳಲ್ಲಿ ಹಗ್ಗಗಳನ್ನು ಕಟ್ಟಿ ಭೂಮಿಯ ಮೇಲೆ ಇಳಿಯಬಿಡಲಾಗಿತ್ತು. 12 ಅದರಲ್ಲಿ ಎಲ್ಲಾ ಬಗೆಯ ಪ್ರಾಣಿಗಳಿದ್ದವು. ಅಂದರೆ ನಡೆದಾಡುವ ಪ್ರಾಣಿಗಳು, ಹರಿದಾಡುವ ಕ್ರಿಮಿಕೀಟಗಳು ಮತ್ತು ಹಾರಾಡುವ ಪಕ್ಷಿಗಳು ಇದ್ದವು. 13 ಆಗ ವಾಣಿಯೊಂದು, “ಪೇತ್ರನೇ, ಎದ್ದೇಳು! ಕೊಯ್ದು ತಿನ್ನು” ಎಂದು ಹೇಳಿತು.
14 ಆದರೆ ಪೇತ್ರನು, “ಪ್ರಭುವೇ, ನಾನು ಹಾಗೆ ಮಾಡಲಾರೆ! ಅಪವಿತ್ರವಾದದ್ದನ್ನು ಮತ್ತು ಅಶುದ್ಧವಾದದ್ದನ್ನು ನಾನೆಂದೂ ತಿಂದವನಲ್ಲ” ಎಂದು ಹೇಳಿದನು.
15 ಆದರೆ ಆ ವಾಣಿಯು ಅವನಿಗೆ, “ದೇವರು ಇವುಗಳನ್ನು ಶುದ್ಧೀಕರಿಸಿದ್ದಾನೆ. ಇವುಗಳನ್ನು ‘ಅಪವಿತ್ರ’ವೆಂದು ಹೇಳಬೇಡ” ಎಂದು ಮತ್ತೆ ಹೇಳಿತು. 16 ಹೀಗೆ ಮೂರು ಸಾರಿ ಆಯಿತು. ಬಳಿಕ ಅವುಗಳನ್ನೆಲ್ಲ ಆಕಾಶಕ್ಕೆ ಹಿಂತೆಗೆದುಕೊಳ್ಳಲಾಯಿತು. 17 ಪೇತ್ರನು ತಾನು ಕಂಡ ಈ ದರ್ಶನದ ಅರ್ಥವೇನಿರಬಹುದೆಂದು ಆಶ್ಚರ್ಯಗೊಂಡನು.
ಅಷ್ಟರಲ್ಲಿಯೇ, ಕೊರ್ನೇಲಿಯನು ಕಳುಹಿಸಿದ್ದ ಜನರು ಸೀಮೋನನ ಮನೆಯನ್ನು ಕಂಡುಕೊಂಡಿದ್ದರು. ಅವರು ಬಾಗಿಲ ಬಳಿಯಲ್ಲಿ ನಿಂತುಕೊಂಡು, 18 “ಸೀಮೋನ್ ಪೇತ್ರನು ಇಲ್ಲಿ ವಾಸವಾಗಿರುವನೇ?” ಎಂದು ಕೇಳಿದರು.
19 ಈ ದರ್ಶನದ ಬಗ್ಗೆ ಪೇತ್ರನು ಇನ್ನೂ ಆಲೋಚಿಸುತ್ತಿದ್ದನು. ಆದರೆ ಪವಿತ್ರಾತ್ಮನು ಅವನಿಗೆ, “ಇಗೋ, ನಿನ್ನನ್ನು ಮೂರು ಜನರು ಹುಡುಕುತ್ತಾ ಬಂದಿದ್ದಾರೆ. 20 ನೀನೆದ್ದು ಕೆಳಗಿಳಿದು ಅವರೊಂದಿಗೆ ಹೋಗು. ಯಾವ ಪ್ರಶ್ನೆಗಳನ್ನೂ ಕೇಳಬೇಡ. ನಾನೇ ಅವರನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ” ಎಂದು ಹೇಳಿದನು. 21 ಆದ್ದರಿಂದ ಪೇತ್ರನು ಕೆಳಗಿಳಿದು ಆ ಜನರ ಬಳಿಗೆ ಹೋಗಿ, “ನೀವು ಹುಡುಕುತ್ತಿರುವ ವ್ಯಕ್ತಿ ನಾನೇ, ನೀವು ಇಲ್ಲಿಗೇಕೆ ಬಂದಿರಿ?” ಎಂದು ಕೇಳಿದನು.
22 ಆ ಜನರು, “ಕೊರ್ನೇಲಿಯ ಎಂಬ ಒಬ್ಬ ಸೇನಾಧಿಕಾರಿ ಇದ್ದಾನೆ. ಅವನು ಧಾರ್ಮಿಕ ವ್ಯಕ್ತಿ. ಅವನು ದೇವರನ್ನು ಆರಾಧಿಸುತ್ತಾನೆ. ಯೆಹೂದ್ಯ ಜನರೆಲ್ಲರೂ ಅವನನ್ನು ಗೌರವಿಸುತ್ತಾರೆ. ನಿನ್ನನ್ನು ತನ್ನ ಮನೆಗೆ ಆಹ್ವಾನಿಸಿ ನೀನು ಹೇಳುವ ಸಂಗತಿಗಳನ್ನು ಕೇಳಬೇಕೆಂದು ದೇವದೂತನೊಬ್ಬನು ಕೊರ್ನೇಲಿಯನಿಗೆ ತಿಳಿಸಿದ್ದಾನೆ” ಎಂದು ಹೇಳಿದರು. 23 ಪೇತ್ರನು ಅವರನ್ನು ಒಳಗೆ ಕರೆದು, ಆ ರಾತ್ರಿ ಅಲ್ಲೇ ಇರಬೇಕೆಂದು ಕೇಳಿಕೊಂಡನು.
ಮರುದಿನ ಪೇತ್ರನು ಸಿದ್ಧನಾಗಿ, ಆ ಮೂವರೊಂದಿಗೆ ಹೊರಟನು. ಜೊಪ್ಪದ ವಿಶ್ವಾಸಿಗಳಲ್ಲಿ ಕೆಲವರು ಅವನೊಂದಿಗೆ ಹೋದರು. 24 ಮರುದಿನ ಅವರು ಸೆಜರೇಯ ಪಟ್ಟಣವನ್ನು ತಲುಪಿದರು. ಕೊರ್ನೇಲಿಯನು ಅವರಿಗೋಸ್ಕರ ಕಾಯುತ್ತಿದ್ದನು. ಅವನು ತನ್ನ ಸಂಬಂಧಿಕರನ್ನು ಮತ್ತು ಆಪ್ತಸ್ನೇಹಿತರನ್ನು ಆಗಲೇ ತನ್ನ ಮನೆಗೆ ಆಹ್ವಾನಿಸಿದ್ದನು.
25 ಪೇತ್ರನು ಮನೆಯನ್ನು ಪ್ರವೇಶಿಸುತ್ತಿರಲು ಕೊರ್ನೇಲಿಯನು ಅವನನ್ನು ಎದುರುಗೊಂಡನು. ಕೊರ್ನೇಲಿಯನು ಪೇತ್ರನ ಪಾದಕ್ಕೆ ಅಡ್ಡಬಿದ್ದು ನಮಸ್ಕಾರ ಮಾಡಿದನು. 26 ಆದರೆ ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ, “ಎದ್ದುನಿಲ್ಲು! ನಾನೂ ನಿನ್ನಂತೆಯೇ ಕೇವಲ ಒಬ್ಬ ಮನುಷ್ಯನು” ಎಂದು ಹೇಳಿದನು. 27 ಪೇತ್ರನು ಕೊರ್ನೇಲಿಯನೊಂದಿಗೆ ಮಾತನ್ನು ಮುಂದುವರಿಸಿದನು. ಬಳಿಕ ಪೇತ್ರನು ಒಳಗೆ ಹೋದಾಗ, ಅಲ್ಲಿ ನೆರೆದು ಬಂದಿದ್ದ ಜನರ ದೊಡ್ಡ ಗುಂಪನ್ನು ಕಂಡನು.
28 ಪೇತ್ರನು ಅವರಿಗೆ, “ಯೆಹೂದ್ಯನೊಬ್ಬನು ಅನ್ಯಜನರೊಂದಿಗೆ ಸಂಪರ್ಕವಿಟ್ಟುಕೊಳ್ಳುವುದಾಗಲಿ ಅವರನ್ನು ಭೇಟಿಮಾಡುವುದಾಗಲಿ ನಮ್ಮ ಯೆಹೂದ್ಯ ಧರ್ಮಶಾಸ್ತ್ರಕ್ಕೆ ವಿರುದ್ಧವಾದದ್ದು ಎಂಬುದು ನಿಮಗೆ ಗೊತ್ತೇ ಇದೆ. ಆದರೆ ಯಾವ ವ್ಯಕ್ತಿಯನ್ನೂ ಅಪವಿತ್ರನೆಂದಾಗಲಿ ಅಶುದ್ಧನೆಂದಾಗಲಿ ಕರೆಯಕೂಡದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾನೆ. 29 ಆದ್ದರಿಂದ, ನನ್ನನ್ನು ಇಲ್ಲಿಗೆ ಬರಬೇಕೆಂದು ಕರೆದ ಜನರೊಂದಿಗೆ ನಾನು ವಾದಮಾಡಲಿಲ್ಲ. ಆದರೆ ನೀವು ನನ್ನನ್ನು ಯಾಕೆ ಕರೆಸಿದಿರೆಂದು ದಯವಿಟ್ಟು ಈಗ ಹೇಳಿರಿ” ಎಂದನು.
30 ಆಗ ಕೊರ್ನೇಲಿಯನು, “ನಾಲ್ಕು ದಿನಗಳ ಹಿಂದೆ, ನಾನು ನನ್ನ ಮನೆಯಲ್ಲಿ ಪ್ರಾರ್ಥಿಸುತ್ತಿದ್ದೆನು. ಆಗ ಮಧ್ಯಾಹ್ನದ ಸುಮಾರು ಮೂರು ಗಂಟೆ ಸಮಯವಾಗಿತ್ತು. ಇದ್ದಕ್ಕಿದ್ದಂತೆ ಒಬ್ಬ ಮನುಷ್ಯನು ನನ್ನ ಮುಂದೆ ನಿಂತನು. ಅವನು ಧರಿಸಿಕೊಂಡಿದ್ದ ಬಟ್ಟೆಗಳು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು. 31 ಆ ಮನುಷ್ಯನು, ‘ಕೊರ್ನೇಲಿಯನೇ! ದೇವರು ನಿನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ. ನೀನು ಬಡಜನರಿಗೆ ಕೊಡುವಂಥವುಗಳನ್ನು ನೋಡಿದ್ದಾನೆ. ದೇವರು ನಿನ್ನನ್ನು ಮೆಚ್ಚಿಕೊಂಡಿದ್ದಾನೆ. 32 ಆದ್ದರಿಂದ ಕೆಲವು ಜನರನ್ನು ಜೊಪ್ಪಪಟ್ಟಣಕ್ಕೆ ಕಳುಹಿಸಿ ಸೀಮೋನ್ ಪೇತ್ರನನ್ನು ಬರಬೇಕೆಂದು ಕೇಳಿಕೊ. ಪೇತ್ರನು ಚರ್ಮಕಾರನಾದ ಸೀಮೋನ ಎಂಬವನ ಮನೆಯಲ್ಲಿ ಇಳಿದುಕೊಂಡಿದ್ದಾನೆ. ಅವನ ಮನೆಯು ಸಮುದ್ರ ತೀರದಲ್ಲಿದೆ’ ಎಂದನು. 33 ಆದ್ದರಿಂದ, ನಾನು ತಕ್ಷಣ ನಿನಗೆ ಕರೆಕಳುಹಿಸಿದೆ. ನೀನು ಇಲ್ಲಿಗೆ ಬಂದದ್ದು ಉಪಕಾರವಾಯಿತು. ನಮಗೆ ತಿಳಿಸಬೇಕೆಂದು ಪ್ರಭುವು ನಿನಗೆ ಆಜ್ಞಾಪಿಸಿರುವ ಪ್ರತಿಯೊಂದನ್ನು ಕೇಳಲು ನಾವೆಲ್ಲರು ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ” ಎಂದು ಹೇಳಿದನು.
ಕೊರ್ನೇಲಿಯನ ಮನೆಯಲ್ಲಿ ಪೇತ್ರನ ಪ್ರಸಂಗ
34 ಪೇತ್ರನು ಮಾತಾಡಲಾರಂಭಿಸಿ ಹೀಗೆಂದನು: “ದೇವರಿಗೆ ಎಲ್ಲರೂ ಒಂದೇ ಎಂಬುದು ನನಗೆ ಈಗ ಅರ್ಥವಾಯಿತು. 35 ತನ್ನನ್ನು ಆರಾಧಿಸುವ ನೀತಿವಂತರು ಯಾರೇ ಆಗಿದ್ದರೂ ಅವರನ್ನು ದೇವರು ಸ್ವೀಕರಿಸಿಕೊಳ್ಳುವನು. ಅವನು ಯಾವ ದೇಶದವನು ಎಂಬುದು ಮುಖ್ಯವಲ್ಲ. 36 ದೇವರು ಯೆಹೂದ್ಯ ಜನರೊಂದಿಗೆ ಮಾತಾಡಿದ್ದಾನೆ. ಯೇಸು ಕ್ರಿಸ್ತನ ಮೂಲಕವಾಗಿ ಶಾಂತಿ ಬಂದಿದೆ ಎಂಬ ಸುವಾರ್ತೆಯನ್ನು ದೇವರು ಅವರಿಗೆ ಕಳುಹಿಸಿದನು. ಯೇಸುವು ಎಲ್ಲಾ ಜನರಿಗೆ ಪ್ರಭುವಾಗಿದ್ದಾನೆ!
37 “ಜುದೇಯದಲ್ಲೆಲ್ಲಾ ಏನಾಯಿತೆಂಬುದು ನಿಮಗೆ ಗೊತ್ತಿದೆ. ಗಲಿಲಾಯದಲ್ಲಿ ಯೋಹಾನನು[a] ದೀಕ್ಷಾಸ್ನಾನದ ಬಗ್ಗೆ ಜನರಿಗೆ ಬೋಧಿಸಿದ ಮೇಲೆ ಅದು ಆರಂಭವಾಯಿತು. 38 ನಜರೇತಿನ ಯೇಸುವಿನ ಬಗ್ಗೆ ನಿಮಗೆ ಗೊತ್ತಿದೆ. ದೇವರು ಆತನಿಗೆ ಪವಿತ್ರಾತ್ಮನನ್ನೂ ಶಕ್ತಿಯನ್ನೂ ಕೊಡುವುದರ ಮೂಲಕ ಆತನನ್ನು ಅಭಿಷೇಕಿಸಿದನು. ಆತನು ಎಲ್ಲಾ ಕಡೆಗಳಲ್ಲೂ ಜನರಿಗೆ ಒಳ್ಳೆಯದನ್ನು ಮಾಡುತ್ತಾ ಸಂಚರಿಸಿದನು. ದೆವ್ವದಿಂದ ಪೀಡಿತರಾಗಿದ್ದವರನ್ನು ಯೇಸು ಗುಣಪಡಿಸಿದನು. ದೇವರು ಯೇಸುವಿನೊಂದಿಗೆ ಇದ್ದನೆಂಬುದನ್ನು ಇದು ತೋರಿಸಿಕೊಟ್ಟಿತು.
39 “ಜುದೇಯದಲ್ಲಿ ಮತ್ತು ಜೆರುಸಲೇಮಿನಲ್ಲಿ ಯೇಸು ಮಾಡಿದ ಎಲ್ಲಾ ಕಾರ್ಯಗಳನ್ನು ನಾವು ನೋಡಿದೆವು. ಆ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ. ಆದರೆ ಯೇಸು ಕೊಲ್ಲಲ್ಪಟ್ಟನು. ಅವರು ಆತನನ್ನು ಮರದ ಶಿಲುಬೆಗೆ ಏರಿಸಿದರು. 40 ಆದರೆ, ದೇವರು ಆತನನ್ನು ಮೂರನೆಯ ದಿನದಲ್ಲಿ ಜೀವಂತವಾಗಿ ಎಬ್ಬಿಸಿದನು! ಯೇಸುವನ್ನು ಸ್ಪಷ್ಟವಾಗಿ ನೋಡುವ ಅವಕಾಶವನ್ನು ದೇವರು ಜನರಿಗೆ ಒದಗಿಸಿಕೊಟ್ಟನು. 41 ಆದರೆ ಯೇಸುವು ಎಲ್ಲಾ ಜನರಿಗೆ ಕಾಣಿಸಿಕೊಳ್ಳಲಿಲ್ಲ. ದೇವರಿಂದ ಮೊದಲೇ ಸಾಕ್ಷಿಗಳಾಗಿ ಆಯ್ಕೆಗೊಂಡಿದ್ದವರು ಮಾತ್ರ ಆತನನ್ನು ಕಂಡರು! ನಾವೇ ಆ ಸಾಕ್ಷಿಗಳು! ಯೇಸು ಜೀವಂತವಾಗಿ ಎದ್ದುಬಂದ ಮೇಲೆ ನಾವು ಆತನೊಂದಿಗೆ ಊಟ ಮಾಡಿದೆವು ಮತ್ತು ಪಾನ ಮಾಡಿದೆವು.
42 “ಜನರಿಗೆ ಬೋಧಿಸಬೇಕೆಂದು ಯೇಸು ನಮಗೆ ಹೇಳಿದನು. ಜೀವಂತವಾಗಿರುವ ಜನರಿಗೂ ಮತ್ತು ಸತ್ತುಹೋಗಿರುವ ಜನರಿಗೂ ದೇವರಿಂದ ನ್ಯಾಯಾಧಿಪತಿಯಾಗಿ ಆಯ್ಕೆಯಾಗಿರುವ ವ್ಯಕ್ತಿ ತಾನೇ ಎಂಬುದನ್ನು ಜನರಿಗೆ ತಿಳಿಸಬೇಕೆಂದು ಆತನು ನಮಗೆ ಹೇಳಿದನು. 43 ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನ ಪಾಪಗಳನ್ನು ದೇವರು ಯೇಸುವಿನ ಮೂಲಕ ಕ್ಷಮಿಸುವನು. ಇದು ಸತ್ಯವೆಂದು ಪ್ರವಾದಿಗಳು ಹೇಳಿದ್ದಾರೆ” ಅಂದನು.
ಯೆಹೂದ್ಯರಲ್ಲದವರಿಗೆ ಪವಿತ್ರಾತ್ಮಧಾರೆ
44 ಪೇತ್ರನು ಇನ್ನೂ ಹೀಗೆ ಹೇಳುತ್ತಿರುವಾಗಲೇ, ಅವನ ಉಪದೇಶವನ್ನು ಕೇಳುತ್ತಿದ್ದವರ ಮೇಲೆ ಪವಿತ್ರಾತ್ಮನು ಇಳಿದು ಬಂದನು. 45 ಪೇತ್ರನೊಂದಿಗೆ ಬಂದಿದ್ದ ಯೆಹೂದ್ಯ ವಿಶ್ವಾಸಿಗಳು ವಿಸ್ಮಿತರಾದರು. ಯೆಹೂದ್ಯರಲ್ಲದ ಜನರಿಗೂ ಸಹ ಪವಿತ್ರಾತ್ಮಧಾರೆಯಾದದ್ದನ್ನು ಕಂಡು ಅವರು ಆಶ್ಚರ್ಯಪಟ್ಟರು. 46 ಅವರು ಬೇರಬೇರೆ ಭಾಷೆಗಳನ್ನು ಮಾತಾಡುತ್ತಾ ದೇವರಿಗೆ ಸ್ತೋತ್ರ ಸಲ್ಲಿಸುತ್ತಿರುವುದನ್ನು ಆ ಯೆಹೂದ್ಯ ವಿಶ್ವಾಸಿಗಳು ಕೇಳಿದರು. ಬಳಿಕ ಪೇತ್ರನು, 47 “ನೀರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳದಂತೆ ನಾವು ಈ ಜನರಿಗೆ ಅಡ್ಡಿಮಾಡಲು ಸಾಧ್ಯವಿಲ್ಲ. ನಾವು ಹೊಂದಿಕೊಂಡಂತೆ ಇವರೂ ಪವಿತ್ರಾತ್ಮನನ್ನು ಹೊಂದಿಕೊಂಡರು!” ಎಂದು ಹೇಳಿ, 48 ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಲು ಅವರಿಗೆ ಅಪ್ಪಣೆಕೊಟ್ಟನು. ಬಳಿಕ ಅವರು ತಮ್ಮೊಂದಿಗೆ ಕೆಲವು ದಿನಗಳವರೆಗೆ ಇರಬೇಕೆಂದು ಪೇತ್ರನನ್ನು ಕೇಳಿಕೊಂಡರು.
ಮುರಿದ ಮಣ್ಣಿನ ಕೊಡ
19 ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಒಬ್ಬ ಕುಂಬಾರನ ಹತ್ತಿರ ಹೋಗಿ ಅವನಿಂದ ಒಂದು ಮಣ್ಣಿನ ಕೊಡವನ್ನು ಕೊಂಡುಕೊಂಡು 2 ಬೋಕಿಯ ದ್ವಾರದ[a] ಸಮೀಪದಲ್ಲಿರುವ ಬೆನ್‌ಹಿನ್ನೊಮ್ ತಗ್ಗಿಗೆ ಹೋಗು. ನಿನ್ನ ಸಂಗಡ ಜನರ ಹಿರಿಯರಲ್ಲಿ ಕೆಲವರನ್ನೂ ಯಾಜಕರ ಹಿರಿಯರಲ್ಲಿ ಕೆಲವರನ್ನೂ ಕರೆದುಕೊಂಡು ಹೋಗು. ನಾನು ನಿನಗೆ ಹೇಳುವುದನ್ನು ನೀನು ಅಲ್ಲಿ ಅವರಿಗೆ ಹೇಳು. 3 ನಿನ್ನ ಜೊತೆಯಲ್ಲಿದ್ದ ಜನರಿಗೆ ಹೇಳು, ‘ಯೆಹೂದದ ರಾಜನೇ, ಜೆರುಸಲೇಮಿನ ಜನರೇ, ಯೆಹೋವನ ಈ ಸಂದೇಶವನ್ನು ಕೇಳಿರಿ. ಇಸ್ರೇಲರ ದೇವರೂ ಸರ್ವಶಕ್ತನಾದ ಯೆಹೋವನೂ ಹೀಗೆ ಹೇಳುತ್ತಾನೆ: ನಾನು ಈ ಸ್ಥಳಕ್ಕೆ ಒಂದು ಭಯಂಕರವಾದ ಕೇಡನ್ನು ಉಂಟುಮಾಡುವೆನು. ಅದರ ಬಗ್ಗೆ ಕೇಳಿದ ಪ್ರತಿಯೊಬ್ಬ ವ್ಯಕ್ತಿಯು ವಿಸ್ಮಯಪಡುವನು ಮತ್ತು ಭಯಪಡುವನು. 4 ಯೆಹೂದದ ಜನರು ನನ್ನ ಅನುಸರಣೆಯನ್ನು ಬಿಟ್ಟಿದ್ದರಿಂದ ನಾನು ಹೀಗೆ ಮಾಡುವೆನು. ಇದನ್ನು ಅವರು ಅನ್ಯದೇವರುಗಳ ಸ್ಥಳವನ್ನಾಗಿ ಮಾಡಿದ್ದಾರೆ. ಯೆಹೂದದ ಜನರು ಈ ಸ್ಥಳದಲ್ಲಿ ಅನ್ಯದೇವರುಗಳಿಗಾಗಿ ಧೂಪವನ್ನು ಹಾಕಿದ್ದಾರೆ. ಬಹಳ ಹಿಂದೆ ಈ ಜನರು ಆ ದೇವರುಗಳನ್ನು ಪೂಜಿಸುತ್ತಿರಲಿಲ್ಲ. ಅವರ ಹಿರಿಯರೂ ಆ ದೇವರುಗಳನ್ನು ಪೂಜಿಸುತ್ತಿರಲಿಲ್ಲ. ಇವುಗಳು ಅನ್ಯದೇಶದ ಹೊಸ ದೇವರುಗಳು. ಯೆಹೂದದ ರಾಜರು ಈ ಸ್ಥಳವನ್ನು ಮುಗ್ಧಮಕ್ಕಳ ರಕ್ತದಿಂದ ತುಂಬಿದರು. 5 ಯೆಹೂದದ ರಾಜರು ಬಾಳ್ ದೇವರಿಗಾಗಿ ಉನ್ನತವಾದ ಸ್ಥಳಗಳನ್ನು ಕಟ್ಟಿಸಿದರು. ಅವರು ಆ ಸ್ಥಳಗಳಲ್ಲಿ ತಮ್ಮ ಗಂಡುಮಕ್ಕಳನ್ನು ಹೋಮಮಾಡಿದರು. ಅವರು ಬಾಳ್ ದೇವರಿಗೆ ತಮ್ಮ ಗಂಡುಮಕ್ಕಳನ್ನು ಆಹುತಿಕೊಟ್ಟರು. ನಾನು ಹಾಗೆ ಮಾಡಲು ಅವರಿಗೆ ಹೇಳಿರಲಿಲ್ಲ. ನಿಮ್ಮ ಗಂಡುಮಕ್ಕಳನ್ನು ಆಹುತಿಯಾಗಿ ಕೊಡಿ ಎಂದು ನಿಮಗೆ ಹೇಳಲಿಲ್ಲ. ಅಂಥ ವಿಚಾರ ನನ್ನ ಮನಸ್ಸಿನಲ್ಲಿ ಬರಲೇ ಇಲ್ಲ. 6 ಈಗ, ಬೆನ್‌ಹಿನ್ನೊಮೀನ ಕಣಿವೆಯಲ್ಲಿದ್ದ ಈ ಸ್ಥಳವನ್ನು ಜನರು “ತೋಫೆತ್” ಎಂದು ಕರೆಯುತ್ತಾರೆ. ಆದರೆ ಜನರು ಇದನ್ನು “ಕೊಲೆಯ ಕಣಿವೆ” ಎಂದು ಕರೆಯುವ ದಿನಗಳು ಬರುತ್ತಿವೆ ಎಂದು ನಾನು ನಿಮಗೆ ಮುನ್ನೆಚ್ಚರಿಕೆಯನ್ನು ಕೊಡುತ್ತೇನೆ. ಇದು ಯೆಹೋವನ ನುಡಿ. 7 ಈ ಸ್ಥಳದಲ್ಲಿ ನಾನು ಯೆಹೂದದ ಮತ್ತು ಜೆರುಸಲೇಮಿನ ಜನರ ಯೋಜನೆಗಳನ್ನು ಹಾಳು ಮಾಡುತ್ತೇನೆ. ಶತ್ರುವು ಈ ಜನರನ್ನು ಬೆನ್ನಟ್ಟಿ ಬರುವನು. ನಾನು ಈ ಸ್ಥಳದಲ್ಲಿ ಖಡ್ಗದಿಂದ ಯೆಹೂದದ ಜನರ ಕೊಲೆಯಾಗುವಂತೆ ಮಾಡುವೆನು. ಅವರ ಹೆಣಗಳು ಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ಆಹಾರವಾಗುವಂತೆ ಮಾಡುವೆನು. 8 ನಾನು ಈ ನಗರವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಜೆರುಸಲೇಮಿನಿಂದ ಹಾದುಹೋಗುವಾಗ ಜನರು ಸಿಳ್ಳುಹಾಕಿ ತಲೆಯಾಡಿಸಿ ಹೋಗುವರು. ನಗರವು ಹಾಳಾಗಿರುವುದನ್ನು ಕಂಡು ಅವರು ಬೆರಗಾಗುವರು. 9 ಶತ್ರುವು ನಗರದ ಸುತ್ತಲೂ ತನ್ನ ಸೈನ್ಯವನ್ನು ತರುವನು. ಜನರು ಆಹಾರವನ್ನು ಶೇಖರಿಸಲು ಹೊರಗೆ ಹೋಗದಂತೆ ಆ ಸೈನ್ಯವು ತಡೆಯುವದು. ನಗರದಲ್ಲಿದ್ದ ಜನರು ಉಪವಾಸ ಬೀಳುವರು. ಅವರು ಹಸಿವು ತಾಳಲಾರದೆ ತಮ್ಮ ಮಕ್ಕಳನ್ನೇ ತಿನ್ನುವರು. ಆಮೇಲೆ ಅವರು ಒಬ್ಬರನ್ನೊಬ್ಬರು ತಿನ್ನಲು ಪ್ರಾರಂಭಿಸುವರು.’
10 “ಯೆರೆಮೀಯನೇ, ನೀನು ಜನರಿಗೆ ಆ ವಿಷಯಗಳನ್ನು ಹೇಳು. ಅವರು ಗಮನವಿಟ್ಟು ಕೇಳುತ್ತಿರುವಾಗ ಆ ಮಣ್ಣಿನ ಕೊಡವನ್ನು ಒಡೆದುಹಾಕಿ 11 ಹೀಗೆ ಹೇಳು: ‘ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ಈ ಮಣ್ಣಿನ ಕೊಡವನ್ನು ಒಡೆದುಹಾಕಿದಂತೆ ನಾನು ಯೆಹೂದ ಜನಾಂಗವನ್ನು ಮತ್ತು ಜೆರುಸಲೇಮ್ ನಗರವನ್ನು ಒಡೆದುಹಾಕುವೆನು. ಈ ಕೊಡವನ್ನು ಪುನಃ ಜೋಡಿಸಲು ಸಾಧ್ಯವಿಲ್ಲ. ಯೆಹೂದ ಜನಾಂಗದ ಸ್ಥಿತಿಯೂ ಹೀಗೆಯೇ ಆಗುವುದು. ತೋಫೆತಿನಲ್ಲಿ ಸ್ಥಳವಿಲ್ಲದಂತಾಗುವವರೆಗೂ ಸತ್ತವರನ್ನು ಅಲ್ಲಿ ಹೂಳಲಾಗುವುದು. 12 ನಾನು ಈ ಜನರಿಗೂ ಮತ್ತು ಈ ಸ್ಥಳಕ್ಕೂ ಹೀಗೆ ಮಾಡುತ್ತೇನೆ. ನಾನು ಈ ನಗರವನ್ನು ತೋಫೆತಿನಂತೆ ಮಾಡುತ್ತೇನೆ’ ಇದು ಯೆಹೋವನ ನುಡಿ. 13 ‘ಜೆರುಸಲೇಮಿನ ಮನೆಗಳು ಈ ತೋಫೆತಿನಷ್ಟೆ “ಹೊಲಸಾಗುವವು.” ಯೆಹೂದದ ರಾಜರ ಅರಮನೆಗಳು ಈ ತೋಫೆತಿನಂತೆ ಹಾಳಾಗುವವು. ಏಕೆಂದರೆ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರುಗಳನ್ನು ಪೂಜಿಸಿದರು. ಅವರು ನಕ್ಷತ್ರಗಳನ್ನು ಪೂಜಿಸಿ ಅವುಗಳ ಗೌರವಾರ್ಥವಾಗಿ ಧೂಪಹಾಕಿದರು. ಅವರು ಸುಳ್ಳುದೇವರುಗಳಿಗೆ ಪಾನನೈವೇದ್ಯಗಳನ್ನು ಅರ್ಪಿಸಿದರು.’”
14 ಯೆರೆಮೀಯನು ಯೆಹೋವನ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಮೇಲೆ ಅಲ್ಲಿಂದ ಬಂದು ಪವಿತ್ರಾಲಯದ ಪ್ರಾಕಾರದಲ್ಲಿ ನಿಂತುಕೊಂಡು, ಎಲ್ಲಾ ಜನರನ್ನುದ್ದೇಶಿಸಿ ಹೀಗೆ ಹೇಳಿದನು: 15 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: ‘ನಾನು ಜೆರುಸಲೇಮಿಗೂ ಅದರ ಸುತ್ತಲಿನ ಹಳ್ಳಿಗಳಿಗೂ ಅನೇಕ ವಿಪತ್ತುಗಳನ್ನು ಬರಮಾಡುವುದಾಗಿ ಹೇಳಿದೆನು. ಅವುಗಳನ್ನು ಬೇಗನೆ ಬರಮಾಡುತ್ತೇನೆ. ಏಕೆಂದರೆ ಜನರು ಬಹಳ ಮೊಂಡರಾಗಿದ್ದಾರೆ. ನಾನು ಹೇಳಿದ್ದನ್ನು ಅವರು ಕೇಳುವುದೂ ಇಲ್ಲ, ಅನುಸರಿಸುವುದೂ ಇಲ್ಲ.’”
ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ
(ಮತ್ತಾಯ 8:28-34; ಲೂಕ 8:26-39)
5 ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು ದಾಟಿ ಗೆರಸೇನರ ಪ್ರಾಂತ್ಯಕ್ಕೆ ಹೋದರು. 2 ಯೇಸು ದೋಣಿಯಿಂದ ಹೊರಕ್ಕೆ ಬಂದಾಗ, ಒಬ್ಬ ಮನುಷ್ಯನು ಸಮಾಧಿಯ ಗವಿಗಳಿಂದ ಆತನ ಬಳಿಗೆ ಬಂದನು. ಅವನಿಗೆ ದೆವ್ವಹಿಡಿದಿತ್ತು. 3 ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು. ಅವನನ್ನು ಕಟ್ಟಿಹಾಕಲು ಯಾರಿಗೂ ಸಾಧ್ಯವಿರಲಿಲ್ಲ. ಅವನನ್ನು ಸರಪಣಿಗಳಿಂದ ಕಟ್ಟಿದರೂ ಪ್ರಯೋಜನವಾಗುತ್ತಿರಲಿಲ್ಲ. 4 ಜನರು ಅನೇಕ ಸಾರಿ ಅವನ ಕೈ ಕಾಲುಗಳನ್ನು ಸರಪಣಿಗಳಿಂದ ಕಟ್ಟಿಹಾಕಿದರು. ಆದರೆ ಅವನು ಅವುಗಳನ್ನೆಲ್ಲ ಕಿತ್ತೊಗೆದುಬಿಟ್ಟನು. ಅವನನ್ನು ಹತೋಟಿಗೆ ತರುವ ಬಲಿಷ್ಠನು ಅಲ್ಲಿ ಯಾರೂ ಇರಲಿಲ್ಲ. 5 ಅವನು ಹಗಲಿರುಳು ಸಮಾಧಿಯ ಗವಿಗಳ ಸುತ್ತಲು ಮತ್ತು ಬೆಟ್ಟಗಳ ಮೇಲೆ ನಡೆದಾಡುತ್ತಿದ್ದನು. ಅವನು ಕಿರುಚುತ್ತಾ ತನ್ನನ್ನು ಕಲ್ಲುಗಳಿಂದ ಜಜ್ಜಿಕೊಳ್ಳುತ್ತಿದ್ದನು.
6 ಯೇಸು ಬಹಳ ದೂರದಲ್ಲಿದ್ದಾಗಲೇ, ಅವನು ಆತನನ್ನು ಕಂಡು, ಆತನ ಬಳಿಗೆ ಓಡಿಹೋಗಿ ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿದನು. 7-8 ಯೇಸು ಅವನಿಗೆ, “ಎಲೈ ದೆವ್ವವೇ, ಅವನೊಳಗಿಂದ ಹೊರಗೆ ಬಾ” ಎಂದು ಹೇಳಿದನು. ಆಗ ಅವನು ಗಟ್ಟಿಯಾದ ಧ್ವನಿಯಿಂದ ಅರಚುತ್ತಾ, “ಯೇಸುವೇ, ಪರಾತ್ಪರನಾದ ದೇವಕುಮಾರನೇ, ನನ್ನಿಂದ ನಿನಗೆ ಏನಾಗಬೇಕಾಗಿದೆ? ದೇವರಾಣೆಯಿಟ್ಟು ಬೇಡಿಕೊಳ್ಳುತ್ತೇನೆ, ನನ್ನನ್ನು ಹಿಂಸಿಸಬೇಡ” ಎಂದು ಕೇಳಿಕೊಂಡನು.
9 ಆಗ ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು.
ಅವನು “ನನ್ನ ಹೆಸರು ದಂಡು,[a] ಏಕೆಂದರೆ ನನ್ನಲ್ಲಿ ಅನೇಕ ದೆವ್ವಗಳಿವೆ” ಎಂದು ಉತ್ತರಕೊಟ್ಟನು. 10 ಆ ಮನುಷ್ಯನ ಒಳಗಿದ್ದ ದೆವ್ವಗಳು ಆ ಪ್ರದೇಶದಿಂದ ತಮ್ಮನ್ನು ಹೊರಕ್ಕೆ ಕಳುಹಿಸದಂತೆ ಯೇಸುವಿನಲ್ಲಿ ಮತ್ತೆ ಮತ್ತೆ ಬೇಡಿಕೊಂಡವು.
11 ಅಲ್ಲಿಗೆ ಹತ್ತಿರವಿದ್ದ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. 12 ದೆವ್ವಗಳು ಯೇಸುವಿಗೆ, “ನಮ್ಮನ್ನು ಹಂದಿಗಳೊಳಗೆ ಕಳುಹಿಸಿಕೊಡು” ಎಂದು ಬೇಡಿಕೊಂಡವು. 13 ಯೇಸು ಅವುಗಳಿಗೆ ಅಪ್ಪಣೆ ಕೊಡಲು ಅವು ಅವನನ್ನು ಬಿಟ್ಟು, ಹಂದಿಗಳೊಳಗೆ ಹೊಕ್ಕವು. ಆಗ ಹಂದಿಗಳೆಲ್ಲಾ ಬೆಟ್ಟದಿಂದ ಇಳಿದು, ಸರೋವರದೊಳಕ್ಕೆ ಬಿದ್ದು ಮುಳುಗಿಹೋದವು. ಆ ಹಿಂಡಿನಲ್ಲಿ ಸುಮಾರು ಎರಡು ಸಾವಿರ ಹಂದಿಗಳಿದ್ದವು.
14 ಹಂದಿಗಳನ್ನು ಕಾಯುತ್ತಿದ್ದ ಜನರು ಪಟ್ಟಣದೊಳಕ್ಕೆ ಮತ್ತು ತೋಟಗಳಿಗೆ ಓಡಿಹೋಗಿ ಜನರಿಗೆಲ್ಲ ತಿಳಿಸಿದರು. 15 ಆಗ ಜನರು ನಡೆದ ಸಂಗತಿಯನ್ನು ನೋಡಲು ಯೇಸುವಿನ ಬಳಿಗೆ ಬಂದರು. ಅನೇಕ ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯನು ಬಟ್ಟೆ ಹಾಕಿಕೊಂಡು ಅಲ್ಲಿ ಕುಳಿತಿರುವುದನ್ನು ಅವರು ಕಂಡರು. ಅವನು ಮತ್ತೆ ಸ್ವಸ್ಥ ಬುದ್ಧಿಯುಳ್ಳವನಾಗಿದ್ದನು. ಆ ಜನರು ಅವನನ್ನು ನೋಡಿ ಹೆದರಿದರು. 16 ಅಲ್ಲಿದ್ದ ಕೆಲವು ಜನರು, ಯೇಸು ಮಾಡಿದ ಈ ಕಾರ್ಯವನ್ನು ನೋಡಿದ್ದರು. ಈ ಜನರೇ ಉಳಿದ ಜನರಿಗೆಲ್ಲರಿಗೂ ನಡೆದ ಸಂಗತಿಯನ್ನು ಅಂದರೆ ದೆವ್ವದಿಂದ ಪೀಡಿತನಾಗಿದ್ದವನಿಗೂ ದೆವ್ವಗಳಿಗೂ ಮತ್ತು ಹಂದಿಗಳಿಗೂ ಸಂಭವಿಸಿದ್ದನ್ನು ತಿಳಿಸಿದರು. 17 ಆಗ ಜನರು ತಮ್ಮ ಪ್ರಾಂತ್ಯವನ್ನು ಬಿಟ್ಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು.
18 ಯೇಸು ಅಲ್ಲಿಂದ ಹೋಗಲು ದೋಣಿ ಹತ್ತುವುದಕ್ಕೆ ಸಿದ್ಧನಾದಾಗ ದೆವ್ವಗಳಿಂದ ಬಿಡುಗಡೆ ಹೊಂದಿದ್ದ ಮನುಷ್ಯನು, “ನಾನೂ ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಬೇಡಿಕೊಂಡನು. 19 ಆದರೆ ಯೇಸು ಅವನನ್ನು ಕರೆದುಕೊಂಡು ಹೋಗಲು ಒಪ್ಪದೆ, “ನಿನ್ನ ಮನೆಗೂ ನಿನ್ನ ಸ್ನೇಹಿತರ ಬಳಿಗೂ ಹೋಗು. ಪ್ರಭುವು ನಿನಗೆ ಮಾಡಿದ ಒಳ್ಳೆಯದನ್ನೂ ಆತನು ನಿನಗೆ ತೋರಿದ ಕರುಣೆಯನ್ನೂ ಅವರಿಗೆ ತಿಳಿಸು” ಎಂದು ಹೇಳಿದನು.
20 ಆಗ ಅವನು ಅಲ್ಲಿಂದ ಹೊರಟುಹೋದನು ಮತ್ತು ಯೇಸು ತನಗೆ ಮಾಡಿದ ಉಪಕಾರವನ್ನು ಹತ್ತು ಪಟ್ಟಣಗಳ ಪ್ರದೇಶದ ಜನರಿಗೆ ತಿಳಿಸಿದನು. ಆ ಜನರೆಲ್ಲರೂ ಅತ್ಯಾಶ್ಚರ್ಯಪಟ್ಟರು.
ಸತ್ತು ಹೋಗಿದ್ದ ಹುಡುಗಿಯೊಬ್ಬಳಿಗೆ ಜೀವದಾನ ಕಾಯಿಲೆಯ ಸ್ತ್ರೀಗೆ ಆರೋಗ್ಯದಾನ
(ಮತ್ತಾಯ 9:18-26; ಲೂಕ 8:40-56)
21 ಯೇಸು ದೋಣಿಯಲ್ಲಿ ಸರೋವರದ ಆಚೆ ದಡಕ್ಕೆ ಹೋದನು. ಸರೋವರದ ತೀರದಲ್ಲಿ ಅನೇಕ ಜನರು ಆತನ ಸುತ್ತಲೂ ಸೇರಿದರು. 22 ಸಭಾಮಂದಿರದ ಅಧಿಕಾರಿಯೊಬ್ಬನು ಆ ಸ್ಥಳಕ್ಕೆ ಬಂದನು. ಅವನ ಹೆಸರು ಯಾಯಿರ. ಅವನು ಯೇಸುವನ್ನು ಕಂಡು, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ, 23 “ನನ್ನ ಚಿಕ್ಕಮಗಳು ಸಾಯುತ್ತಿದ್ದಾಳೆ. ದಯವಿಟ್ಟು ನೀನು ಬಂದು, ನಿನ್ನ ಕೈಗಳಿಂದ ಅವಳನ್ನು ಸ್ಪರ್ಶಿಸು. ಆಗ ಅವಳು ಗುಣವಾಗಿ ಬದುಕಿಕೊಳ್ಳುತ್ತಾಳೆ” ಎಂದು ಬಹಳವಾಗಿ ಬೇಡಿಕೊಂಡನು.
24 ಯೇಸು ಅಧಿಕಾರಿಯೊಂದಿಗೆ ಹೋದನು. ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಅವರು ಆತನ ಸುತ್ತಲೂ ನೂಕುತ್ತಾ ಹೋದರು.
25 ಆ ಜನರ ನಡುವೆ ಒಬ್ಬ ಸ್ತ್ರೀ ಇದ್ದಳು. ಆಕೆಗೆ ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿತ್ತು. 26 ಆಕೆಯು ಬಹಳ ಸಂಕಟಪಟ್ಟಿದ್ದಳು. ಅವಳಿಗೆ ಸಹಾಯ ಮಾಡಲು ಅನೇಕ ವೈದ್ಯರು ಪ್ರಯತ್ನಿಸಿದ್ದರು. ಆಕೆಯಲ್ಲಿದ್ದ ಹಣವೆಲ್ಲವೂ ವೆಚ್ಚವಾಯಿತು. ಆದರೆ ಆಕೆಗೆ ವಾಸಿಯಾಗಲಿಲ್ಲ. ಅವಳ ಕಾಯಿಲೆಯು ಇನ್ನೂ ಹೆಚ್ಚಾಗುತ್ತಿತ್ತು.
27 ಆಕೆಗೆ ಯೇಸುವನ್ನು ಕುರಿತು ತಿಳಿದುಬಂತು. ಆದ್ದರಿಂದ ಆಕೆಯು ಜನರ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಮೇಲಂಗಿಯನ್ನು ಮುಟ್ಟಿದಳು. 28 ಆ ಸ್ತ್ರೀಯು, “ಆತನ ಉಡುಪನ್ನು ಮುಟ್ಟಿದರೆ ಸಾಕು ನಾನು ಗುಣಮುಖಳಾಗುತ್ತೇನೆ” ಎಂದುಕೊಂಡದ್ದರಿಂದ 29 ಮುಟ್ಟಿದ ಕೂಡಲೆ, ಆಕೆಯ ರಕ್ತಸ್ರಾವ ನಿಂತುಹೋಯಿತು. ತನಗೆ ಗುಣವಾಯಿತೆಂಬುದು ಆಕೆಗೆ ಅರಿವಾಯಿತು. 30 ತನ್ನಿಂದ ಶಕ್ತಿಯು ಹೊರಟದ್ದು ಸಹ ಯೇಸುವಿಗೆ ತಿಳಿಯಿತು. ಆತನು ಅಲ್ಲೇ ನಿಂತು ಹಿಂತಿರುಗಿ ನೋಡಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಿದನು.
31 ಶಿಷ್ಯರು ಯೇಸುವಿಗೆ, “ಅನೇಕ ಜನರು ನಿನ್ನ ಮೇಲೆ ಬೀಳುತ್ತಿದ್ದಾರೆ. ಹೀಗಿರಲು ‘ನನ್ನನ್ನು ಸ್ಪರ್ಶಿಸಿದವರು ಯಾರು?’ ಎಂದು ಕೇಳುತ್ತಿರುವೆಯಲ್ಲಾ” ಎಂದರು.
32 ಆದರೆ ಯೇಸು ತನ್ನನ್ನು ಸ್ಪರ್ಶಿಸಿದವರು ಯಾರೆಂದು ಇನ್ನೂ ನೋಡುತ್ತಲೇ ಇದ್ದನು. 33 ತನಗೆ ಗುಣವಾಯಿತೆಂಬುದು ಆ ಸ್ತ್ರೀಗೆ ತಿಳಿದಿತ್ತು. ಆದ್ದರಿಂದ ಆಕೆ ಬಂದು, ಯೇಸುವಿನ ಪಾದಗಳ ಮುಂದೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ಹೇಳಿದಳು. 34 ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯಿಂದಲೇ ನಿನಗೆ ವಾಸಿಯಾಯಿತು. ಸಮಾಧಾನದಿಂದ ಹೋಗು. ನಿನಗೆ ಇನ್ನು ಮೇಲೆ ಆ ಕಾಯಿಲೆಯ ಬಾಧೆ ಇರುವುದಿಲ್ಲ” ಎಂದು ಹೇಳಿದನು.
35 ಯೇಸು ಅಲ್ಲಿ ಇನ್ನೂ ಮಾತನಾಡುತ್ತಿದ್ದನು. ಅಷ್ಟರಲ್ಲಿ ಕೆಲವು ಜನರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಯಿಂದ ಬಂದು ಯಾಯಿರನಿಗೆ, “ನಿನ್ನ ಮಗಳು ಸತ್ತುಹೋದಳು. ಈಗ ಬೋಧಕನಿಗೆ ತೊಂದರೆ ಕೊಡುವ ಅಗತ್ಯವಿಲ್ಲ” ಎಂದು ಹೇಳಿದರು.
36 ಆದರೆ ಯೇಸು ಅವರ ಮಾತನ್ನು ಗಣನೆಗೆ ತಂದುಕೊಳ್ಳದೆ, ಸಭಾಮಂದಿರದ ಅಧಿಕಾರಿಗೆ, “ಹೆದರಬೇಡ, ನಂಬಿಕೆ ಮಾತ್ರ ಇರಲಿ” ಎಂದು ಹೇಳಿದನು.
37 ಯೇಸು ಪೇತ್ರನನ್ನು, ಯಾಕೋಬನನ್ನು ಮತ್ತು ಯಾಕೋಬನ ತಮ್ಮನಾದ ಯೋಹಾನನನ್ನು ಮಾತ್ರ ತನ್ನ ಜೊತೆಯಲ್ಲಿ ಕರೆದೊಯ್ದನು. 38 ಯೇಸು ಮತ್ತು ಈ ಶಿಷ್ಯರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಗೆ ಹೋದರು. ಅಲ್ಲಿ ಅನೇಕ ಜನರು ಜೋರಾಗಿ ಅಳುತ್ತಿರುವುದನ್ನು ಯೇಸು ನೋಡಿದನು. ಅಲ್ಲಿ ಬಹಳ ಗದ್ದಲವಿತ್ತು. 39 ಯೇಸು ಮನೆಯನ್ನು ಪ್ರವೇಶಿಸಿ, ಆ ಜನರಿಗೆ, “ನೀವು ಅಳುತ್ತಿರುವುದೇಕೆ? ಇಷ್ಟೊಂದು ಗದ್ದಲ ಮಾಡುತ್ತಿರುವುದೇಕೆ? ಈ ಹುಡುಗಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ” ಎಂದು ಹೇಳಿದನು. 40 ಆದರೆ ಆ ಜನರೆಲ್ಲರೂ ಯೇಸುವನ್ನು ಗೇಲಿ ಮಾಡಿದರು.
ಯೇಸು ಆ ಜನರೆಲ್ಲರನ್ನು ಹೊರಗೆ ಕಳುಹಿಸಿ, ಆ ಬಾಲಕಿಯ ತಂದೆತಾಯಿಗಳನ್ನು ಮತ್ತು ತನ್ನ ಮೂವರು ಶಿಷ್ಯರನ್ನು ಮಾತ್ರ ತನ್ನೊಂದಿಗೆ ಕರೆದುಕೊಂಡು ಆ ಬಾಲಕಿಯ ಕೊಠಡಿಯೊಳಕ್ಕೆ ಹೋದನು. 41 ಯೇಸು ಆ ಬಾಲಕಿಯ ಕೈ ಹಿಡಿದು, ಅವಳಿಗೆ, “ತಲಿಥಾ ಕೂಮ್!” ಎಂದು ಹೇಳಿದನು. (ಅಂದರೆ “ಚಿಕ್ಕ ಹುಡುಗಿಯೇ, ಎದ್ದೇಳು ಎಂದು ನಾನು ಹೇಳುತ್ತಿದ್ದೇನೆ” ಎಂದರ್ಥ.) 42 ಕೂಡಲೇ ಆ ಬಾಲಕಿ ಎದ್ದುನಿಂತು ನಡೆಯಲಾರಂಭಿಸಿದಳು. ಆ ಬಾಲಕಿಗೆ ಹನ್ನೆರಡು ವರ್ಷ ವಯಸ್ಸಾಗಿತ್ತು. ಅವಳ ತಂದೆತಾಯಿಗಳು ಮತ್ತು ಶಿಷ್ಯರು ಅತ್ಯಾಶ್ಚರ್ಯಗೊಂಡರು. 43 ಈ ವಿಷಯವನ್ನು ಯಾರಿಗೂ ಹೇಳಕೂಡದೆಂದು ಯೇಸು ಆಕೆಯ ತಂದೆತಾಯಿಗಳಿಗೆ ಖಂಡಿತವಾಗಿ ಹೇಳಿ, “ಆ ಬಾಲಕಿಗೆ ಊಟ ಮಾಡಿಸಿರಿ” ಎಂದನು.
Kannada Holy Bible: Easy-to-Read Version. All rights reserved. © 1997 Bible League International