M’Cheyne Bible Reading Plan
20 “ನೀವು ಕೆಟ್ಟಕಾರ್ಯಗಳನ್ನು ಮಾಡಿ ಯೆಹೋವನಿಂದ ದೂರವಾಗಿ ಹೋದರೆ ನಿಮಗೆ ಕೆಟ್ಟಸಂಗತಿಗಳು ಉಂಟಾಗುವವು. ನಿಮಗೆ ಉಪದ್ರವಗಳೂ ಮನಸ್ಸಿಗೆ ಅಸಮಾಧಾನವೂ ಉಂಟಾಗುವವು. ನೀವು ಸಂಪೂರ್ಣವಾಗಿ ನಾಶವಾಗುವ ತನಕ ಈ ಸಂಗತಿಗಳು ನಿಮ್ಮನ್ನು ಬಾಧಿಸುವವು. ನೀವು ಆತನನ್ನು ತೊರೆದದ್ದರಿಂದ ನಿಮಗೆ ಹಾಗೆ ಮಾಡುವನು. 21 ನೀವು ಸ್ವಾಸ್ತ್ಯವಾಗಿ ಹೊಂದಲಿರುವ ದೇಶದಿಂದ ನೀವು ನಾಶವಾಗುವವರೆಗೆ, ನಿಮ್ಮ ದೇವರಾದ ಯೆಹೋವನು ನಿಮಗೆ ಭಯಂಕರವಾದ ರೋಗಗಳನ್ನು ಬರಮಾಡುವನು. 22 ಜ್ವರ, ಬಾಧೆ, ದೇಹ ಊದಿಕೊಳ್ಳುವಿಕೆ ಇವುಗಳಿಂದ ನಿಮ್ಮನ್ನು ಶಿಕ್ಷಿಸುವನು. ನಿಮ್ಮ ದೇಶದೊಳಗೆ ಸಹಿಸಲಾರದ ಉಷ್ಣವನ್ನು ಕಳುಹಿಸಿ ಮಳೆಬೀಳದಂತೆ ಮಾಡುವನು. ನಿಮ್ಮ ಬೆಳೆ ರೋಗದಿಂದಲೂ ಬಿಸಿಲಿನಿಂದಲೂ ನಾಶವಾಗುವುದು. ಇವೆಲ್ಲಾ ನಿಮಗೆ ಉಂಟಾಗಿ ನೀವು ನಾಶವಾಗುವ ತನಕ ಮುಂದುವರಿಯುವವು. 23 ಆಕಾಶವು ಮೋಡಗಳೇ ಇರದ ಕಾದ ಹಿತ್ತಾಳೆಯಂತಿರುವುದು. ಕಾಲಿನ ಅಡಿಯಲ್ಲಿರುವ ನೆಲವು ಕಬ್ಬಿಣದಂತೆ ಗಟ್ಟಿಯಾಗಿರುವುದು. 24 ಯೆಹೋವನು ನಿಮಗೆ ಮಳೆಯನ್ನು ಬೀಳಮಾಡುವುದಿಲ್ಲ; ಕೇವಲ ಧೂಳು ಮತ್ತು ಮರಳು ಆಕಾಶದಿಂದ ಬೀಳುವುದು. ನೀವು ನಾಶವಾಗುವವರೆಗೆ ಅದು ಮೇಲಿನಿಂದ ಬೀಳುತ್ತಿರುವುದು.
25 “ನಿಮ್ಮ ವೈರಿಗಳು ಬಂದು ನಿಮ್ಮನ್ನು ಸೋಲಿಸಿಬಿಡುವಂತೆ ಮಾಡುವನು. ನೀವು ಒಂದು ದಾರಿಯಿಂದ ನಿಮ್ಮ ವೈರಿಗೆ ಎದುರಾಗಿ ಯುದ್ಧಕ್ಕೆ ಇಳಿದರೆ ಏಳುದಾರಿಗಳಿಂದ ರಣರಂಗದಿಂದ ಪಲಾಯನ ಮಾಡುವಿರಿ. ನಿಮಗೆ ಸಂಭವಿಸುವ ಬಾಧೆಗಳನ್ನು ನೋಡಿ ಇತರ ಜನಾಂಗದವರು ಭಯಪಡುವರು. 26 ಕಾಡುಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ನಿಮ್ಮ ಹೆಣಗಳು ಆಹಾರವಾಗುವವು. ಅವುಗಳನ್ನು ಓಡಿಸಲು ಯಾರೂ ಇರುವುದಿಲ್ಲ.
27 “ಈಜಿಪ್ಟಿನವರಿಗೆ ಕಳುಹಿಸಿದಂತೆ ನಿಮಗೂ ಮೈಯಲ್ಲಿ ಬಾಧಿಸುವ ಹುಣ್ಣುಗಳನ್ನು ಕಳುಹಿಸುವನು. ದೇಹದಲ್ಲಿ ಗಡ್ಡೆಗಳುಂಟಾಗುವವು. ಕೀವುಸೋರುವ ಹುಣ್ಣುಗಳು, ಗುಣವಾಗದ ತುರಿಸುವ ಕಜ್ಜಿಗಳು ಉಂಟಾಗುವವು. 28 ಯೆಹೋವನು ನಿಮ್ಮನ್ನು ದಿಗ್ಬ್ರಾಂತರನ್ನಾಗಿ ಮಾಡುವನು; ನಿಮ್ಮನ್ನು ಕುರುಡರನ್ನಾಗಿ ಮಾಡಿ ಗಲಿಬಿಲಿ ಮಾಡುವನು. 29 ಹಗಲಿನಲ್ಲೂ ಕುರುಡರಂತೆ ನೀವು ತಡವರಿಸುವಿರಿ. ನೀವು ಮಾಡುವ ಕಾರ್ಯವೆಲ್ಲವೂ ನಿಷ್ಫಲವಾಗುವವು. ಜನರು ನಿಮ್ಮನ್ನು ಬಾಧಿಸಿ ನಿಮ್ಮಲ್ಲಿರುವದನ್ನೆಲ್ಲಾ ದೋಚಿಕೊಂಡು ಹೋಗುವರು. ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ.
30 “ನೀವು ಮದುವೆಯಾಗಲು ಕನ್ನಿಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವಿರಿ. ಆದರೆ ಬೇರೊಬ್ಬನು ಆಕೆಯನ್ನು ಕೂಡುವನು. ನೀವೊಂದು ಮನೆಯನ್ನು ಕಟ್ಟುವಿರಿ. ಆದರೆ ಬೇರೊಬ್ಬನು ಅದರಲ್ಲಿ ವಾಸಿಸುವನು. ನೀವು ದ್ರಾಕ್ಷಾತೋಟ ಮಾಡಿ ದ್ರಾಕ್ಷಾಲತೆಗಳನ್ನು ನೆಡುವಿರಿ. ಆದರೆ ಅದರ ಫಲಗಳನ್ನು ನೀವು ಕೂಡಿಸುವುದಿಲ್ಲ. 31 ನಿಮ್ಮ ದನಗಳನ್ನು ನಿಮ್ಮೆದುರಿನಲ್ಲಿ ಜನರು ಕೊಯ್ಯುವರು. ಆದರೆ ನೀವು ಅದರ ಮಾಂಸವನ್ನು ತಿನ್ನುವುದಿಲ್ಲ. ನಿಮ್ಮ ಕತ್ತೆಗಳನ್ನು ಜನರು ನಿಮ್ಮಿಂದ ತೆಗೆದುಕೊಂಡು ಹೋಗುವರು. ಆದರೆ ಅವುಗಳನ್ನು ಹಿಂದಕ್ಕೆ ಕೊಡರು. ನಿಮ್ಮ ಕುರಿಗಳನ್ನು ವೈರಿಗಳು ಕೊಂಡೊಯ್ಯುವರು. ನಿಮ್ಮನ್ನು ರಕ್ಷಿಸಲು ಯಾರೂ ಬರಲಾರರು.
32 “ನಿಮ್ಮ ಗಂಡುಹೆಣ್ಣು ಮಕ್ಕಳನ್ನು ಬೇರೆಯವರು ಎತ್ತಿಕೊಂಡು ಹೋಗುವರು. ನೀವು ಹಗಲುರಾತ್ರಿ ನಿಮ್ಮ ಮಕ್ಕಳಿಗಾಗಿ ಹುಡುಕಾಡುವಿರಿ. ಹುಡುಕಾಡುತ್ತಾ ನಿಮ್ಮ ಕಣ್ಣುಗಳು ಕಂಗೆಡುವವು; ಆದರೆ ಅವರು ನಿಮಗೆ ದೊರಕುವುದಿಲ್ಲ. ಯೆಹೋವನು ನಿಮಗೆ ಸಹಾಯ ಮಾಡುವುದಿಲ್ಲ.
33 “ನೀವು ಅರಿಯದಿರುವ ದೇಶದವರು ಬಂದು ನಿಮ್ಮ ಪೈರನ್ನು ಕೊಯ್ದುಕೊಂಡು ಹೋಗುವರು; ನೀವು ದುಡಿದು ಸಂಪಾದಿಸಿದವುಗಳನ್ನು ಎತ್ತಿಕೊಂಡು ಹೋಗುವರು. ಜನರು ನಿಮ್ಮನ್ನು ಕುಗ್ಗಿಸಿ ಬಲಹೀನರನ್ನಾಗಿ ಮಾಡುವರು. 34 ನೀವು ನೋಡುವ ಸಂಗತಿಗಳು ನಿಮ್ಮನ್ನು ಹುಚ್ಚರನ್ನಾಗಿ ಮಾಡುತ್ತವೆ. 35 ಯೆಹೋವನು ನಿಮ್ಮನ್ನು ಉರಿಯುವ ಹುಣ್ಣುಗಳಿಂದ ಬಾಧಿಸುವನು; ಅವುಗಳು ಗುಣವಾಗುವುದಿಲ್ಲ. ಈ ಹುಣ್ಣುಗಳು ನಿಮ್ಮ ದೇಹದ ಎಲ್ಲಾ ಭಾಗಗಳಲ್ಲಿ ಅಂದರೆ ನಿಮ್ಮ ಪಾದದಿಂದ ಹಿಡಿದು ನಡುನೆತ್ತಿಯ ತನಕ ಇರುವವು.
36 “ಯೆಹೋವನು ನಿಮ್ಮನ್ನೂ ನಿಮ್ಮ ಅರಸನನ್ನೂ ನೀವು ಅರಿಯದ ದೇಶಕ್ಕೆ ಅಟ್ಟಿಬಿಡುವನು. ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಆ ದೇಶವನ್ನು ಎಂದೂ ನೋಡಲಿಲ್ಲ. ಅಲ್ಲಿ ಮರ, ಕಲ್ಲುಗಳಿಂದ ಮಾಡಿದ ಸುಳ್ಳುದೇವರನ್ನು ಆರಾಧಿಸುವಿರಿ. 37 ನೀವು ಯಾವ ದೇಶಕ್ಕೆ ಕಳುಹಿಸಲ್ಪಡುವಿರೋ ಆ ದೇಶದವರು ನಿಮ್ಮ ದುರವಸ್ಥೆಯನ್ನು ನೋಡಿ ನಗುವರು; ಕೆಟ್ಟಮಾತುಗಳನ್ನಾಡುವರು.
ಸೋಲು
38 “ಹೊಲದಲ್ಲಿ ಧಾನ್ಯ ಯಥೇಚ್ಛವಾಗಿ ಬೆಳೆದರೂ ನೀವು ಮನೆಯೊಳಗೆ ತರುವುದು ಸ್ವಲ್ಪ ಮಾತ್ರ. ಮಿಡತೆಯು ನಿಮ್ಮ ಬೆಳೆಯನ್ನು ತಿಂದು ಬಿಡುವದು. 39 ನೀವು ದ್ರಾಕ್ಷಾತೋಟ ಮಾಡಿ ಪ್ರಯಾಸಪಟ್ಟು ಅದರಲ್ಲಿ ಕೆಲಸ ಮಾಡುವಿರಿ. ಆದರೆ ಅದರ ಫಲವನ್ನು ಹುಳಗಳು ತಿಂದುಬಿಡುವುದರಿಂದ ನೀವು ದ್ರಾಕ್ಷಿಯನ್ನು ಸಂಗ್ರಹಿಸುವುದಿಲ್ಲ; ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. 40 ನಿಮ್ಮ ಭೂಮಿಯಲ್ಲಿ ಆಲಿವ್ ಮರಗಳು ತುಂಬಿದ್ದರೂ ಎಣ್ಣೆಯ ಬರದಲ್ಲಿ ಸಂಕಟಪಡುವಿರಿ. ಯಾಕೆಂದರೆ ಆಲಿವ್ ಕಾಯಿಗಳು ಭೂಮಿಯ ಮೇಲೆ ಉದುರಿಬಿದ್ದು ಹಾಳಾಗುವವು. 41 ನಿಮಗೆ ಗಂಡುಹೆಣ್ಣು ಮಕ್ಕಳು ಹುಟ್ಟುವರು. ಆದರೆ ಅವರು ನಿಮ್ಮೊಂದಿಗೆ ಇರುವುದಿಲ್ಲ. ಅವರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು. 42 ನಿಮ್ಮ ತೋಟದ ಎಲ್ಲಾ ಮರಗಳನ್ನೂ ಹೊಲದ ಪೈರುಗಳನ್ನೂ ಮಿಡತೆಗಳು ತಿಂದುಬಿಡುವವು. 43 ನಿಮ್ಮ ಮಧ್ಯದಲ್ಲಿ ವಾಸಿಸುವ ಅನ್ಯರು ಬಲಿಷ್ಠರಾಗುವರು. ನೀವಾದರೋ ಬಲಹೀನರಾಗುವಿರಿ. 44 ನಿಮಗೆ ಸಾಲ ಕೊಡಲು ವಿದೇಶಿಯರಿಗೆ ಹಣವಿರುವುದು. ಆದರೆ ಅವರಿಗೆ ಸಾಲ ಕೊಡಲು ನಿಮ್ಮಲ್ಲಿ ಹಣವಿರುವುದಿಲ್ಲ. ತಲೆಯು ದೇಹವನ್ನು ಹೇಗೆ ಹಿಡಿತದಲ್ಲಿಟ್ಟುಕೊಂಡಿರುತ್ತದೋ ಹಾಗೆಯೇ ಅವರು ನಿಮ್ಮನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವರು. ನೀವು ಅವರಿಗೆ ಬಾಲದಂತಿರುವಿರಿ.
45 “ನಿಮ್ಮ ದೇವರಾದ ಯೆಹೋವನು ಹೇಳಿದ ಸಂಗತಿಗಳಿಗೆ ನೀವು ಕಿವಿಗೊಡದೆ ಹೋದದ್ದರಿಂದ, ಆತನು ಕೊಟ್ಟ ಆಜ್ಞೆಗಳಿಗೂ ನಿಯಮಗಳಿಗೂ ನೀವು ವಿಧೇಯರಾಗದಿದ್ದ ಕಾರಣ ಈ ಶಾಪಗಳೆಲ್ಲಾ ನಿಮ್ಮ ಮೇಲೆ ಬರುತ್ತವೆ. ನೀವು ನಾಶವಾಗುವವರೆಗೂ ಅವು ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತವೆ. 46 ನೀವೂ ನಿಮ್ಮ ಸಂತತಿಯವರೂ ದೇವರ ಶಾಶ್ವತವಾದ ತೀರ್ಪನ್ನು ಹೊಂದಿದ್ದೀರೆಂಬುದಕ್ಕೆ ಬೇರೆಯವರಿಗೆ ಈ ಶಾಪಗಳೇ ಸೂಚನೆಯಾಗಿಯೂ ರುಜುವಾತಾಗಿಯೂ ಇರುತ್ತವೆ.
47 “ನಿಮ್ಮದೇವರಾದ ಯೆಹೋವನು ನಿಮಗೆ ಹೆಚ್ಚಾದ ಆಶೀರ್ವಾದವನ್ನು ಕೊಟ್ಟನು. ಆದರೆ ನೀವು ಸಂತೋಷ ಮತ್ತು ಉಪಕಾರದ ಹೃದಯದಿಂದ ಆತನ ಸೇವೆಮಾಡಲಿಲ್ಲ. 48 ಆದ್ದರಿಂದ ಆತನು ನಿಮ್ಮ ವೈರಿಗಳನ್ನು ಕಳುಹಿಸಿ ಅವರ ಸೇವೆ ನೀವು ಮಾಡುವಂತೆ ಮಾಡುವನು. ನೀವು ಹಸಿವು ಬಾಯಾರಿಕೆಗಳಿಂದ ಬಳಲುವಿರಿ; ಬಟ್ಟೆಯಿಲ್ಲದೆ ಬಡವರಾಗಿ ಜೀವಿಸುವಿರಿ. ನಿಮ್ಮ ಯೆಹೋವನು ನಿಮ್ಮ ಮೇಲೆ ಭಾರವನ್ನು ಹೊರಿಸುವನು. ಆ ಭಾರವನ್ನು ನಿಮ್ಮಿಂದ ತೆಗೆಯಲಾಗುವುದಿಲ್ಲ; ನೀವು ನಾಶವಾಗುವಿರಿ.
ವೈರಿಜನಾಂಗದ ಶಾಪ
49 “ಬಹಳ ದೂರದಿಂದ ಒಂದು ಜನಾಂಗವು ನಿಮ್ಮೊಂದಿಗೆ ಯುದ್ಧಮಾಡಲು ಬರುವಂತೆ ಯೆಹೋವನು ಮಾಡುವನು. ನೀವು ಅವರ ಭಾಷೆಯನ್ನು ಅರಿಯದಿರುವಿರಿ. ಆಕಾಶದಿಂದ ಹದ್ದು ಹಾರಿಬರುವಂತೆ ಅತೀ ವೇಗವಾಗಿ ಅವರು ನಿಮ್ಮ ಮೇಲೆ ಬೀಳುವರು. 50 ಅವರು ಮಹಾಕ್ರೂರಿಗಳು. ಅವರು ನಿಮ್ಮಲ್ಲಿರುವ ಮುದುಕರಿಗೆ ಅಥವಾ ಎಳೆಗೂಸುಗಳಿಗೆ ಕರುಣೆ ತೋರಿಸರು. 51 ಅವರು ನಿಮ್ಮ ಪಶುಗಳನ್ನು ಅಟ್ಟಿಸಿಕೊಂಡು ಹೋಗುವರು; ನೀವು ಬೆಳೆದ ಬೆಳೆಯನ್ನು ಕೊಂಡೊಯ್ಯುವರು. ನಿಮ್ಮನ್ನು ನಾಶಪಡಿಸುವ ತನಕ ಅವರು ಪ್ರತಿಯೊಂದನ್ನೂ ತೆಗೆದುಕೊಂಡು ಹೋಗುವರು. ಅವರು ನಿಮಗೆ ದವಸಧಾನ್ಯವನ್ನಾಗಲಿ ದ್ರಾಕ್ಷಾರಸವನ್ನಾಗಲಿ ಎಣ್ಣೆಯನ್ನಾಗಲಿ ಹಸುಗಳನ್ನಾಗಲಿ ಕುರಿಗಳನ್ನಾಗಲಿ ಮೇಕೆಗಳನ್ನಾಗಲಿ ಬಿಟ್ಟುಹೋಗುವುದಿಲ್ಲ. ಅವರು ನಿಮ್ಮನ್ನು ನಾಶಪಡಿಸುವ ತನಕ ಪ್ರತಿಯೊಂದನ್ನೂ ತೆಗೆದುಕೊಂಡು ಹೋಗುವರು.
52 “ಆ ವೈರಿಗಳು ನಿಮ್ಮ ಪಟ್ಟಣಗಳನ್ನೆಲ್ಲಾ ಮುತ್ತಿ ವಶಪಡಿಸಿಕೊಳ್ಳುವರು. ಆ ಪಟ್ಟಣಗಳಿಗೆ ಎತ್ತರದ ಪೌಳಿಗೋಡೆಗಳಿವೆ. ಆದ್ದರಿಂದ ನಮಗೆ ಭಯವಿಲ್ಲವೆಂದು ನೀವು ಭರವಸೆಯಿಂದಿರುವಿರಿ. ಆದರೆ ಅವರು ಪೌಳಿಗೋಡೆಗಳನ್ನು ಕೆಡವಿ ನೆಲಸಮ ಮಾಡುವರು. ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲೆಲ್ಲಾ ತೊಂದರೆ ಮಾಡುವರು. 53 ವೈರಿಗಳು ನಿಮ್ಮ ಪಟ್ಟಣವನ್ನು ಮುತ್ತಿಗೆ ಹಾಕಿದಾಗ ನೀವು ಸಂಕಟ ಅನುಭವಿಸುವಿರಿ. ಆಗ ನೀವು ಊಟಕ್ಕೆ ಇಲ್ಲದೆ ತೊಂದರೆಗೊಳಗಾಗುವಿರಿ; ಹಸಿವು ತಾಳಲಾರದೆ ನಿಮ್ಮ ಮಕ್ಕಳನ್ನೇ ತಿನ್ನುವಿರಿ.
54 “ನಿಮ್ಮಲ್ಲಿರುವ ಮೃದುವಾದ ಮತ್ತು ಕನಿಕರವುಳ್ಳ ಮನುಷ್ಯನೂ ಬೇರೆಯವರಿಗೆ ಕ್ರೂರಿಯಾಗುವನು; ತನ್ನನ್ನು ಬಹಳವಾಗಿ ಪ್ರೀತಿಸುವ ಹೆಂಡತಿಗೂ ಅವನು ಕ್ರೂರಿಯಾಗುವನು; ಇನ್ನೂ ಜೀವಂತವಾಗಿರುವ ತನ್ನ ಮಕ್ಕಳಿಗೂ ಅವನು ಕ್ರೂರಿಯಾಗುವನು. 55 ಅವನಿಗೆ ಊಟಕ್ಕೇನೂ ಇಲ್ಲದಿರುವುದರಿಂದ ಸ್ವಂತ ಮಕ್ಕಳನ್ನೇ ತಿನ್ನುವನು. ಅವರನ್ನು ಇತರರೊಂದಿಗೆ ಹಂಚಿಕೊಳ್ಳದೆ, ತನ್ನ ಸ್ವಂತ ಕುಟುಂಬದವರೊಂದಿಗೆ ಹಂಚಿಕೊಳ್ಳದೆ ತಾನೊಬ್ಬನೇ ತಿನ್ನುವನು. ನಿಮ್ಮ ವೈರಿಗಳು ಬಂದು ನಿಮ್ಮ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ನಿಮಗೆ ಇವೆಲ್ಲಾ ಸಂಭವಿಸುತ್ತವೆ.
56 “ನಿಮ್ಮಲ್ಲಿರುವ ಅತ್ಯಂತ ಮೃದುವಾದ ಮತ್ತು ಕನಿಕರವುಳ್ಳ ಸ್ತ್ರೀಯೂ ಕ್ರೂರಿಯಾಗುವಳು. ನೆಲದ ಮೇಲೆ ಬರಿಗಾಲಿನಲ್ಲಿ ಎಂದೂ ನಡೆಯದಷ್ಟು ಮೃದುವೂ ಕೋಮಲೆಯೂ ಆಗಿದ್ದ ಆಕೆ ತನ್ನನ್ನು ಬಹಳವಾಗಿ ಪ್ರೀತಿಸುವ ಗಂಡನಿಗೇ ಕ್ರೂರಿಯಾಗುವಳು; ಅವಳು ತನ್ನ ಸ್ವಂತ ಮಗನಿಗೂ ಮಗಳಿಗೂ ಕ್ರೂರಿಯಾಗುವಳು. 57 ಅವಳು ಅಡಗಿಕೊಂಡು ಮಗುವನ್ನು ಹೆರುವಳು. ಬಳಿಕ ಆ ಮಗುವನ್ನೂ ಅದರೊಡನೆ ಬರುವುದೆಲ್ಲವನ್ನೂ ಭಯಂಕರವಾದ ಹಸಿವೆಯಿಂದಾಗಿ ತಿಂದುಬಿಡುವಳು. ನಿಮ್ಮ ಶತ್ರುವು ಬಂದು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಸಂಕಟಕ್ಕೆ ಗುರಿ ಮಾಡಿದಾಗ ಈ ಕೆಟ್ಟ ಸಂಗತಿಗಳೆಲ್ಲಾ ನಿಮಗೆ ಸಂಭವಿಸುತ್ತವೆ.
58 “ಈ ಪುಸ್ತಕದಲ್ಲಿ ಬರೆದಿರುವ ಎಲ್ಲಾ ಆಜ್ಞೆಗಳಿಗೂ ಉಪದೇಶಗಳಿಗೂ ನೀವು ವಿಧೇಯರಾಗಬೇಕು. ನಿಮ್ಮ ದೇವರಾದ ಯೆಹೋವನು ಅದ್ಭುತನೂ ಭಯಂಕರನೂ ಆಗಿರುವುದರಿಂದ ಆತನ ಹೆಸರನ್ನು ನೀವು ಗೌರವಿಸಬೇಕು. 59 ನಿಮಗೂ ನಿಮ್ಮ ಸಂತತಿಯವರಿಗೂ ಅನೇಕ ತೊಂದರೆಗಳನ್ನು ಕೊಡುವನು. ಆ ತೊಂದರೆಗಳು ಮತ್ತು ರೋಗಗಳು ಭಯಂಕರವಾಗಿವೆ. 60 ನೀವು ಈಜಿಪ್ಟಿನಲ್ಲಿರುವಾಗ ದೇವರು ಅವರಿಗೆ ಕಳುಹಿಸಿದ ವ್ಯಾಧಿಸಂಕಟಗಳನ್ನು ನೋಡಿ ಭಯಗ್ರಸ್ತರಾದಿರಿ. ಅಂಥ ಸಂಕಟಗಳು ನಿಮಗೆ ಬರುವವು. 61 ಈ ಪುಸ್ತಕದಲ್ಲಿ ಬರೆದಿಲ್ಲದ ಸಂಕಟಗಳೂ ರೋಗಗಳೂ ನಿಮಗೆ ಪ್ರಾಪ್ತಿಯಾಗುವವು. ನೀವು ನಾಶವಾಗುವ ತನಕ ಅವೆಲ್ಲಾ ನಿಮಗೆ ಬರುತ್ತವೆ. 62 ನೀವು ಆಕಾಶದ ನಕ್ಷತ್ರದಷ್ಟು ಅಸಂಖ್ಯಾತರಾಗಿದ್ದರೂ ನಿಮ್ಮಲ್ಲಿ ಕೆಲವರೇ ಉಳಿದುಕೊಳ್ಳುವರು. ಯಾಕೆಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಕಿವಿಗೊಡಲಿಲ್ಲ.
63 “ಯೆಹೋವನು ನಿಮ್ಮ ಅಭಿವೃದ್ದಿಯಲ್ಲಿ ಸಂತೋಷಪಡುವಂತೆ ನಿಮ್ಮ ಅವನತಿಯಲ್ಲಿಯೂ ನಿಮ್ಮ ನಾಶನದಲ್ಲಿಯೂ ಸಂತೋಷಪಡುವನು. ನೀವು ಆ ದೇಶವನ್ನು ನಿಮ್ಮದನ್ನಾಗಿಸಿಕೊಳ್ಳಲು ಹೋಗುವಿರಿ. ಆದರೆ ಜನರು ನಿಮ್ಮನ್ನು ದೇಶದಿಂದ ಹೊರಡಿಸಿ ಅಟ್ಟಿಬಿಡುವರು. 64 ಯೆಹೋವನು ನಿಮ್ಮನ್ನು ಲೋಕದ ಎಲ್ಲಾ ದೇಶಗಳಿಗೆ ಚದರಿಸಿಬಿಡುವನು. ಆತನು ಪ್ರಪಂಚದ ಒಂದು ಕಡೆಯಿಂದ ಇನ್ನೊಂದು ಕಡೆಯ ತನಕ ನಿಮ್ಮನ್ನು ಚದರಿಸುವನು. ಅಲ್ಲಿ ನೀವು ಕಲ್ಲುಮರಗಳಿಂದ ಮಾಡಿದ ದೇವರುಗಳನ್ನು ಪೂಜಿಸುವಿರಿ. ಆ ಸುಳ್ಳುದೇವರುಗಳನ್ನು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ಎಂದೂ ಪೂಜಿಸಿರಲಿಲ್ಲ.
65 “ಆ ಜನಾಂಗದವರೊಂದಿಗೆ ಜೀವಿಸುವಾಗ ನಿಮಗೆ ಸಮಾಧಾನವಿರುವುದಿಲ್ಲ; ನಿಮಗೆ ವಿಶ್ರಾಂತಿ ಇರುವುದಿಲ್ಲ. ನಿಮ್ಮ ಯೆಹೋವನು ನಿಮಗೆ ಚಿಂತೆಬೇಸರಗಳನ್ನು ತಂದು ತುಂಬಿಸುವನು. ನಿಮ್ಮ ಕಣ್ಣುಗಳು ಆಯಾಸದಿಂದ ತುಂಬಿರುವವು; ನೀವು ಕಳವಳದಿಂದಿರುವಿರಿ. 66 ನೀವು ಹಗಲಿರುಳು ಭಯದಿಂದಿರುವಿರಿ ಮತ್ತು ಅಪಾಯದಲ್ಲಿ ಜೀವಿಸುವಿರಿ. ನಿಮ್ಮ ಜೀವಿತದ ಬಗ್ಗೆ ನಿಮಗೆಂದಿಗೂ ನಿಶ್ಚಯತ್ವವಿರುವುದಿಲ್ಲ. 67 ಮುಂಜಾನೆಯಲ್ಲಿ ನೀವು, ‘ಇದು ಸಾಯಂಕಾಲವಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ಸಾಯಂಕಾಲದಲ್ಲಿ, ‘ಇದು ಮುಂಜಾನೆಯಾಗಿದ್ದರೆ ಉತ್ತಮವಾಗಿರುತ್ತಿತ್ತು’ ಎಂದು ಅನ್ನುವಿರಿ. ನಿಮ್ಮ ಹೃದಯದಲ್ಲಿರುವ ಭಯ ಮತ್ತು ನೀವು ಕಣ್ಣಾರೆ ಕಾಣುವ ಭಯಂಕರ ಸಂಗತಿಗಳೇ ಇದಕ್ಕೆ ಕಾರಣ. 68 ಯೆಹೋವನು ನಿಮ್ಮನ್ನು ಹಡಗುಗಳ ಮುಖಾಂತರ ಈಜಿಪ್ಟಿಗೆ ಕೊಂಡೊಯ್ಯುವನು. ನೀವು ಅಲ್ಲಿಗೆ ಹೋಗುವುದೇ ಇಲ್ಲವೆಂದು ನಾನು ಹೇಳಿದ್ದೆನು. ಆದರೆ ದೇವರು ನಿಮ್ಮನ್ನು ಅಲ್ಲಿಗೆ ಕಳುಹಿಸುವನು. ಈಜಿಪ್ಟಿನಲ್ಲಿ ನಿಮ್ಮನ್ನು ನೀವೇ ಗುಲಾಮರನ್ನಾಗಿ ನಿಮ್ಮ ವೈರಿಗಳಿಗೆ ಮಾರಿಕೊಳ್ಳುವಿರಿ; ಆದರೆ ಯಾರೂ ನಿಮ್ಮನ್ನು ಕೊಂಡುಕೊಳ್ಳುವವರಿರುವುದಿಲ್ಲ.”
25 ನನಗೆ ಸಾವು ಸಮೀಪಿಸಿದೆ.
ಯೆಹೋವನೇ, ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
26 ನನ್ನ ಜೀವಿತದ ಬಗ್ಗೆ ನಿನ್ನೊಂದಿಗೆ ಹೇಳಿಕೊಂಡೆ.
ಆಗ ನೀನು ನನಗೆ ಉತ್ತರಿಸಿದೆ.
ಈಗ ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
27 ನಿನ್ನ ಕಟ್ಟಳೆಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು.
ನೀನು ಮಾಡಿದ ಅದ್ಭುತಕಾರ್ಯಗಳನ್ನು ನನಗೆ ತಿಳಿಯಪಡಿಸು.
28 ನಾನು ದುಃಖಗೊಂಡಿರುವೆ ಮತ್ತು ಆಯಾಸಗೊಂಡಿರುವೆ.
ನೀನು ನನ್ನನ್ನು ಜ್ಞಾಪಿಸಿಕೊಂಡು ಮತ್ತೆ ಬಲಗೊಳಿಸು.
29 ಮೋಸಮಾರ್ಗದಲ್ಲಿ ಜೀವಿಸಲು ನನ್ನನ್ನು ಬಿಡಬೇಡ.
ನಿನ್ನ ಉಪದೇಶಗಳಿಂದ ಮಾರ್ಗದರ್ಶನ ಮಾಡು.
30 ನಾನು ಸತ್ಯಮಾರ್ಗವನ್ನು ಆರಿಸಿಕೊಂಡಿದ್ದೇನೆ.
ನಿನ್ನ ಜ್ಞಾನದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತಿಳಿದುಕೊಳ್ಳುವೆನು.
31 ನಿನ್ನ ಒಡಂಬಡಿಕೆಗೆ ಅಂಟಿಕೊಂಡಿದ್ದೇನೆ.
ನನ್ನನ್ನು ನಿರಾಶೆಗೊಳಿಸಬೇಡ.
32 ನಿನ್ನ ಆಜ್ಞೆಗಳಿಗೆ ಹರ್ಷದಿಂದ ವಿಧೇಯನಾಗುವೆನು.
ನಿನ್ನ ಆಜ್ಞೆಗಳು ನನ್ನನ್ನು ಉಲ್ಲಾಸಗೊಳಿಸುತ್ತವೆ.
33 ಯೆಹೋವನೇ, ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು,
ಆಗ ಅವುಗಳನ್ನು ಅನುಸರಿಸುವೆನು.
34 ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು.
ಆಗ ನಿನ್ನ ಉಪದೇಶಗಳಿಗೆ ಸಂಪೂರ್ಣವಾಗಿ ವಿಧೇಯನಾಗುವೆನು.
35 ನಿನ್ನ ಆಜ್ಞೆಗಳ ಮಾರ್ಗದಲ್ಲಿ ನನ್ನನ್ನು ನಡೆಸು.
ಆ ಮಾರ್ಗವೇ ನನಗೆ ಬಹು ಇಷ್ಟ.
36 ಐಶ್ವರ್ಯದ ಮೇಲೆ ಮನಸ್ಸಿಡದೆ
ನಿನ್ನ ಒಡಂಬಡಿಕೆಯ ಬಗ್ಗೆ ಧ್ಯಾನಿಸಲು ನನಗೆ ಸಹಾಯಮಾಡು.
37 ನಿಷ್ಪ್ರಯೋಜಕವಾದವುಗಳ ಮೇಲೆ ದೃಷ್ಟಿಸದಂತೆ ನನ್ನನ್ನು ಕಾಪಾಡು.
ನಿನ್ನ ಮಾರ್ಗದಲ್ಲಿ ಜೀವಿಸಲು ನನಗೆ ಸಹಾಯಮಾಡು.
38 ನಿನ್ನ ಸೇವಕನಾದ ನನಗೆ ನೀನು ಮಾಡಿದ ವಾಗ್ದಾನಗಳನ್ನು ನೆರವೇರಿಸು.
ಆಗ ಜನರು ನಿನ್ನನ್ನು ಗೌರವಿಸುವರು.
39 ಅವಮಾನವನ್ನು ನನ್ನಿಂದ ತೊಲಗಿಸು. ನಾನು ಅದಕ್ಕೆ ಹೆದರಿಕೊಂಡಿದ್ದೇನೆ.
ನಿನ್ನ ಜ್ಞಾನದ ನಿರ್ಧಾರಗಳು ಒಳ್ಳೆಯವುಗಳಾಗಿವೆ.
40 ಇಗೋ, ನಿನ್ನ ಆಜ್ಞೆಗಳನ್ನು ಪ್ರೀತಿಸುವೆನು.
ನನಗೆ ಒಳ್ಳೆಯವನಾಗಿದ್ದು ನನ್ನನ್ನು ಉಜ್ಜೀವನಗೊಳಿಸು.
41 ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು.
ನಿನ್ನ ವಾಗ್ದಾನದಂತೆ ನನ್ನನ್ನು ರಕ್ಷಿಸು.
42 ನನ್ನನ್ನು ಗೇಲಿಮಾಡುವ ಜನರಿಗೆ ಆಗ ನಾನು ಉತ್ತರ ಕೊಡುವೆನು.
ಯೆಹೋವನೇ, ನಿನ್ನ ಮಾತುಗಳಲ್ಲೇ ನಾನು ಭರವಸವಿಟ್ಟಿದ್ದೇನೆ.
43 ನಿನ್ನ ಸತ್ಯೋಪದೇಶಗಳನ್ನು ನಾನು ಯಾವಾಗಲೂ ಮಾತಾಡುವಂತಾಗಲಿ.
ನಿನ್ನ ಜ್ಞಾನದ ನಿರ್ಧಾರಗಳನ್ನೇ ನಾನು ಆಶ್ರಯಿಸಿಕೊಂಡಿದ್ದೇನೆ.
44 ನಿನ್ನ ಉಪದೇಶಗಳನ್ನು ಎಂದೆಂದಿಗೂ ಅನುಸರಿಸುವೆನು.
45 ಯಾಕೆಂದರೆ, ನಿನ್ನ ನಿಯಮಗಳಿಗೆ ವಿಧೇಯನಾಗಲು
ನಾನು ಬಹಳವಾಗಿ ಪ್ರಯತ್ನಿಸುತ್ತಿರುವುದರಿಂದ ಯಾರ ಹಂಗಿಲ್ಲದೆ ನಡೆಯುವೆನು.
46 ರಾಜರುಗಳ ಮುಂದೆಯೂ
ಯೆಹೋವನ ಒಡಂಬಡಿಕೆಯ ಕುರಿತು ಚರ್ಚಿಸುವೆನು, ನಾಚಿಕೆಪಡುವುದಿಲ್ಲ.
47 ನಿನ್ನ ಆಜ್ಞೆಗಳಲ್ಲಿ ಆನಂದಿಸುವೆನು;
ಅವು ನನಗೆ ಇಷ್ಟವಾಗಿವೆ.
48 ನಿನ್ನ ಆಜ್ಞೆಗಳನ್ನು ಕೊಂಡಾಡುವೆನು, ಅವುಗಳನ್ನು ಧ್ಯಾನಿಸುವೆನು.
ಅವು ನನಗೆ ಇಷ್ಟವಾಗಿವೆ.
ತೃಪ್ತಿಗೊಳಿಸುವ ಆಹಾರವನ್ನು ದೇವರು ಕೊಡುತ್ತಾನೆ
55 “ಎಲೈ ಬಾಯಾರಿದ ಜನರೆಲ್ಲರೇ,
ಬಂದು ನೀರನ್ನು ಕುಡಿಯಿರಿ.
ನಿಮ್ಮಲ್ಲಿ ಹಣವಿಲ್ಲವೆಂದು ಚಿಂತೆಮಾಡಬೇಡಿರಿ.
ಬಂದು ಹೊಟ್ಟೆತುಂಬಾ ತಿಂದು ಕುಡಿಯಿರಿ.
ನೀವು ಹಣ ಕೊಡಬೇಕಿಲ್ಲ.
ಹೊಟ್ಟೆತುಂಬಾ ತಿಂದು ಕುಡಿಯಿರಿ ಹಾಲಿಗೂ ದ್ರಾಕ್ಷಾರಸಕ್ಕೂ ಕ್ರಯವಿಲ್ಲ.
2 ಆಹಾರವಲ್ಲದ್ದಕ್ಕಾಗಿ ಹಣವನ್ನು ಯಾಕೆ ವೆಚ್ಚ ಮಾಡುತ್ತೀರಿ?
ತೃಪ್ತಿಗೊಳಿಸದ ಆಹಾರಕ್ಕಾಗಿ ನೀವು ಯಾಕೆ ಶ್ರಮಿಸುತ್ತೀರಿ?
ಗಮನವಿಟ್ಟು ಕೇಳಿರಿ.
ನೀವು ಒಳ್ಳೆಯ ಆಹಾರವನ್ನು ತಿನ್ನುವಿರಿ; ನಿಮ್ಮ ಊಟದಲ್ಲಿ ಆನಂದಿಸುವಿರಿ.
ಅವು ನಿಮ್ಮ ಆತ್ಮವನ್ನು ತೃಪ್ತಿಗೊಳಿಸುತ್ತವೆ.
3 ನಾನು ಹೇಳುವ ವಿಷಯಗಳಿಗೆ ಸರಿಯಾಗಿ ಕಿವಿಗೊಡಿರಿ.
ನಿಮ್ಮ ಆತ್ಮಗಳು ಜೀವಿಸುವಂತೆ ನನ್ನ ಮಾತುಗಳನ್ನು ಕೇಳಿರಿ.
ನನ್ನ ಬಳಿಗೆ ಬನ್ನಿರಿ, ನಾನು ನಿಮ್ಮೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.
ನಾನು ದಾವೀದನೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ ಅದಿರುವುದು.
ನಾನು ದಾವೀದನಿಗೆ ಅವನನ್ನು ಪ್ರೀತಿಸುವೆನೆಂದೂ ಅವನಿಗೆ ಪ್ರಾಮಾಣಿಕನಾಗಿರುವೆನೆಂದೂ ವಾಗ್ದಾನ ಮಾಡಿದ್ದೆನು.
ಆ ಒಡಂಬಡಿಕೆಯನ್ನು ನೀವು ಖಂಡಿತವಾಗಿ ನಂಬಬಹುದು.
4 ದಾವೀದನು ನನ್ನ ಸಾಮರ್ಥ್ಯದ ವಿಷಯದಲ್ಲಿ ಎಲ್ಲ ಜನಾಂಗಗಳವರಿಗೆ ಸಾಕ್ಷಿಯಾಗಿರುವಂತೆ ನಾನೇ ಮಾಡಿದೆನು.
ನಾನು ದಾವೀದನಿಗೆ, ‘ನೀನು ಅಧಿಪತಿಯಾಗುವೆ ಮತ್ತು ಅನೇಕ ಜನಾಂಗಗಳಿಗೆ ನೀನು ಸೈನ್ಯಾಧಿಪತಿಯಾಗುವೆ’ ಎಂದು ಪ್ರಮಾಣ ಮಾಡಿದೆ.”
5 ನಿನಗೆ ಗೊತ್ತಿರದ ಸ್ಥಳಗಳಲ್ಲಿ ಜನಾಂಗಗಳು ನೆಲೆಸಿವೆ.
ಆ ದೇಶಗಳನ್ನು ನೀನು ಕರೆಯುವೆ.
ಆ ದೇಶಗಳಿಗೆ ನಿನ್ನ ಪರಿಚಯವಿರುವದಿಲ್ಲ.
ಆದರೆ ಅವುಗಳು ನಿನ್ನ ಬಳಿಗೆ ಓಡಿಬರುವವು.
ಇವೆಲ್ಲಾ ನಿನ್ನ ದೇವರಾದ ಯೆಹೋವನ ಚಿತ್ತಕ್ಕನುಸಾರವಾಗಿ ಆಗುತ್ತವೆ.
ಇಸ್ರೇಲಿನ ಪರಿಶುದ್ಧ ದೇವರು ನಿನ್ನನ್ನು ಗೌರವಿಸುವದರಿಂದ ಇದನ್ನು ನೆರವೇರಿಸುವನು.
6 ಆದ್ದರಿಂದ ಸಮಯವು ದಾಟುವ ಮೊದಲು
ನೀವು ಯೆಹೋವನಿಗಾಗಿ ಹುಡುಕಿರಿ.
ಆತನು ಹತ್ತಿರವಿರುವಾಗಲೇ ಕರೆಯಿರಿ.
7 ಕೆಟ್ಟಜನರು ಕೆಟ್ಟತನದಲ್ಲಿ ಜೀವಿಸುವದನ್ನು ನಿಲ್ಲಿಸಲಿ.
ಅವರು ಕೆಟ್ಟ ಆಲೋಚನೆಗಳನ್ನು ಮಾಡದಿರಲಿ.
ಅವರು ಯೆಹೋವನ ಬಳಿಗೆ ಹಿಂತಿರುಗಲಿ.
ಆಗ ಯೆಹೋವನು ಅವರನ್ನು ಆದರಿಸುವನು.
ದೇವರಾದ ಯೆಹೋವನು ಕ್ಷಮಿಸುವುದರಿಂದ
ಅವರು ಆತನ ಬಳಿಗೆ ಬರಲಿ.
ಜನರು ದೇವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ
8 ಯೆಹೋವನು ಹೇಳುವುದೇನೆಂದರೆ: “ನಿಮ್ಮ ಆಲೋಚನೆಗಳು ನನ್ನ ಆಲೋಚನೆಗಳಲ್ಲ.
ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ.
9 ಆಕಾಶವು ಭೂಮಿಗಿಂತ ಎಷ್ಟು ಎತ್ತರವಾಗಿದೆಯೋ
ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತ ಅಷ್ಟೇ ಉನ್ನತವಾಗಿವೆ;
ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಿಗಿಂತ ಅಷ್ಟೇ ಉನ್ನತವಾಗಿವೆ.” ಇದು ಯೆಹೋವನ ನುಡಿ.
10 “ಮಳೆಯೂ ಹಿಮವೂ ಆಕಾಶದಿಂದ ಬೀಳುವವು.
ಅವು ನೆಲವನ್ನು ತೇವಮಾಡದೆ ಆಕಾಶಕ್ಕೆ ಹಿಂತಿರುಗುವುದಿಲ್ಲ.
ಆಗ ನೆಲವು ಬೀಜವನ್ನು ತೋಯಿಸಿ ಸಸಿ ಚಿಗುರುವಂತೆ ಮಾಡುವದು.
ಆ ಸಸಿಗಳು ವ್ಯವಸಾಯಗಾರನಿಗೆ ಧಾನ್ಯವನ್ನು ಫಲಿಸುತ್ತವೆ.
ಜನರು ಆ ಧಾನ್ಯದಿಂದ ರೊಟ್ಟಿಗಳನ್ನು ಮಾಡುವರು.
11 ಅದೇ ಪ್ರಕಾರ ನನ್ನ ಬಾಯಿಂದ ಹೊರಟ ಮಾತುಗಳು
ಯೋಚಿಸಿದ ಕಾರ್ಯಗಳನ್ನು ಮಾಡದೆ ಹಿಂತಿರುಗುವುದಿಲ್ಲ.
ನನ್ನ ಮಾತುಗಳು ನನ್ನ ಆಲೋಚನೆಗೆ ಸರಿಯಾಗಿ ಕಾರ್ಯ ಮಾಡುವವು.
ನನ್ನ ಮಾತುಗಳು ತಮಗೆ ನೇಮಕವಾದ ಆ ಕಾರ್ಯಗಳನ್ನು ಮಾಡಿಮುಗಿಸುವವು.
12 “ಆದ್ದರಿಂದ ನೀವು ಸಂತೋಷದಿಂದ ಹೊರಡುವಿರಿ
ಮತ್ತು ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ.
ಪರ್ವತಗಳೂ ಬೆಟ್ಟಗಳೂ ಸಂತೋಷದಿಂದ ನಿಮ್ಮ ಮುಂದೆ ಕುಣಿದಾಡುವವು.
ಭೂಮಿಯ ಮೇಲಿರುವ ಮರಗಳೆಲ್ಲಾ ಚಪ್ಪಾಳೆ ತಟ್ಟುವವು.
13 ಪೊದೆಗಳು ಇದ್ದ ಸ್ಥಳಗಳಲ್ಲಿ ಎತ್ತರವಾದ ದೇವದಾರು ಮರಗಳು ಬೆಳೆಯುವವು.
ಹಣಜಿಯಿರುವ ಸ್ಥಳಗಳಲ್ಲಿ ಸುಗಂಧ ಮರಗಳು ಬೆಳೆಯುವವು.
ಇವು ಯೆಹೋವನಾಮವನ್ನು ಪ್ರಸಿದ್ಧಿಪಡಿಸುವವು.
ಯೆಹೋವನೇ ಸರ್ವಶಕ್ತನೆಂದು ಇವು ತೋರಿಸುವವು.
ಈ ಸಾಕ್ಷಿಯು ಎಂದಿಗೂ ನಾಶವಾಗುವದಿಲ್ಲ.”
ಸ್ನಾನಿಕ ಯೋಹಾನನ ಉಪದೇಶ
(ಮಾರ್ಕ 1:1-8; ಲೂಕ 3:1-9,15-17; ಯೋಹಾನ 1:19-28)
3 ಆ ಕಾಲದಲ್ಲಿ ಸ್ನಾನಿಕ ಯೋಹಾನನು ಜುದೇಯದ ಅಡವಿಯಲ್ಲಿ ಬೋಧಿಸುವುದಕ್ಕೆ ಪ್ರಾರಂಭಿಸಿದನು. 2 “ಪರಲೋಕರಾಜ್ಯವು ಸಮೀಪಿಸಿತು. ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಅವನು ಬೋಧಿಸಿದನು.
3 “‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಮಾಡಿರಿ;
ಆತನ ಹಾದಿಗಳನ್ನು ನೆಟ್ಟಗೆಮಾಡಿರಿ’
ಎಂದು ಅಡವಿಯಲ್ಲಿ ಒಬ್ಬನು ಕೂಗುತ್ತಿದ್ದಾನೆ”(A)
ಎಂದು ಸ್ನಾನಿಕ ಯೋಹಾನನನ್ನೇ ಕುರಿತು ಪ್ರವಾದಿಯಾದ ಯೆಶಾಯ ಹೇಳಿದ್ದನು.
4 ಯೋಹಾನನ ಉಡುಪುಗಳು ಒಂಟೆಯ ಕೂದಲಿನಿಂದ ಮಾಡಲ್ಪಟ್ಟಿದ್ದವು. ಅವನಿಗೆ ಸೊಂಟದಲ್ಲಿ ತೊಗಲಿನ ನಡುಪಟ್ಟಿ ಇತ್ತು. ಅವನು ಮಿಡತೆ ಮತ್ತು ಕಾಡುಜೇನನ್ನು ಆಹಾರವಾಗಿ ತಿನ್ನುತ್ತಿದ್ದನು. 5 ಜನರು ಯೋಹಾನನ ಉಪದೇಶವನ್ನು ಕೇಳಲು ಜೆರುಸಲೇಮಿನಿಂದಲೂ, ಜುದೇಯ ಮತ್ತು ಜೋರ್ಡನ್ ನದಿಯ ಸುತ್ತಲಿದ್ದ ಎಲ್ಲಾ ಸ್ಥಳಗಳಿಂದಲೂ ಬರುತ್ತಿದ್ದರು. 6 ಜನರು ತಾವು ಮಾಡಿದ ಪಾಪಗಳನ್ನು ಒಪ್ಪಿಕೊಂಡ ಮೇಲೆ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಡುತ್ತಿದ್ದನು.
7 ಅನೇಕ ಫರಿಸಾಯರು ಮತ್ತು ಸದ್ದುಕಾಯರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರನ್ನು ನೋಡಿ, “ನೀವೆಲ್ಲರು ಸರ್ಪಗಳು! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳಲು ನಿಮಗೆ ಎಚ್ಚರಿಸಿದವರು ಯಾರು? 8 ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿದೆ ಎಂಬುದನ್ನು ನೀವು ತಕ್ಕ ಕಾರ್ಯಗಳ ಮೂಲಕ ತೋರಿಸಿ. 9 ‘ಅಬ್ರಹಾಮನು ನಮ್ಮ ತಂದೆ’ ಎಂದು ನೀವು ಜಂಬಪಡುವುದೇಕೆ? ದೇವರು ಅಬ್ರಹಾಮನಿಗಾಗಿ ಇಲ್ಲಿರುವ ಬಂಡೆಗಳಿಂದಲೂ ಮಕ್ಕಳನ್ನು ಸೃಷ್ಟಿಸಬಲ್ಲನು ಎಂದು ನಾನು ನಿಮಗೆ ಹೇಳುತ್ತೇನೆ. 10 ಮರಗಳನ್ನು ಕಡಿದುಹಾಕಲು ಕೊಡಲಿ ಈಗಲೇ ಸಿದ್ಧವಾಗಿದೆ. ಒಳ್ಳೆಯ ಫಲಬಿಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು.
11 “ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿಕೊಂಡಿದೆ ಎಂಬುದಕ್ಕೆ ಗುರುತಾಗಿ ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವೆನು. ಆದರೆ ನನ್ನ ಹಿಂದೆ ಬರುವವನು ನನಗಿಂತ ಹೆಚ್ಚಿನವನು. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ನಿಮಗೆ ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು. 12 ಆತನು ಕಾಳನ್ನು ಸ್ವಚ್ಛಗೊಳಿಸಲು ಸಿದ್ಧನಾಗಿದ್ದಾನೆ. ಆತನು ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿ ಒಳ್ಳೆಯ ಕಾಳುಗಳನ್ನು ಕಣಜದಲ್ಲಿ ತುಂಬಿಸಿ ಹೊಟ್ಟನ್ನು ನಂದಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವನು” ಎಂದು ಹೇಳಿದನು.
ಯೋಹಾನನಿಂದ ಯೇಸುವಿಗೆ ದೀಕ್ಷಾಸ್ನಾನ
(ಮಾರ್ಕ 1:9-11; ಲೂಕ 3:21-22)
13 ಆ ಸಮಯದಲ್ಲಿ ಯೋಹಾನನಿಂದ ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಗಲಿಲಾಯದಿಂದ ಜೋರ್ಡನ್ ನದಿಗೆ ಬಂದನು. 14 ಆದರೆ ಯೋಹಾನನು, “ನಾನೇ ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾಗಿದೆ. ಹೀಗಿರಲು ನನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ನೀನು ಬರುವುದೇಕೆ?” ಎಂದು ಹೇಳಿ ಆತನನ್ನು ತಡೆಯಲೆತ್ನಿಸಿದನು.
15 ಯೇಸು, “ಸದ್ಯಕ್ಕೆ ಒಪ್ಪಿಕೊ. ನಾವು ಯೋಗ್ಯವಾದ ಕಾರ್ಯಗಳನ್ನೆಲ್ಲ ಮಾಡಬೇಕು” ಎಂದು ಉತ್ತರಕೊಟ್ಟನು. ಆಗ ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸಲು ಒಪ್ಪಿಕೊಂಡನು.
16 ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡು ನೀರಿನಿಂದ ಮೇಲಕ್ಕೆ ಬಂದನು. ಕೂಡಲೇ ಆಕಾಶವು ತೆರೆಯಿತು. ದೇವರಾತ್ಮನು ಪಾರಿವಾಳದ ರೂಪದಲ್ಲಿ ಕೆಳಗಿಳಿದು ತನ್ನ ಮೇಲೆ ಬರುತ್ತಿರುವುದನ್ನು ಯೇಸು ಕಂಡನು. 17 ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ಈತನೇ (ಯೇಸು) ನನ್ನ ಪ್ರಿಯ ಮಗನು. ಈತನನ್ನು ನಾನು ಬಹಳ ಮೆಚ್ಚಿದ್ದೇನೆ” ಎಂದು ಹೇಳಿತು.
Kannada Holy Bible: Easy-to-Read Version. All rights reserved. © 1997 Bible League International