Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 32

ಜೋರ್ಡನ್ ಹೊಳೆಯ ಪೂರ್ವದಲ್ಲಿ ಇಸ್ರೇಲರ ಕುಟುಂಬಗಳು

32 ರೂಬೇನ್ ಕುಲದವರಿಗೂ ಗಾದ್ ಕುಲದವರಿಗೂ ಬಹಳ ದನಕುರಿಗಳಿದ್ದವು. ಅವರು ಯಗ್ಜೇರ್ ಮತ್ತು ಗಿಲ್ಯಾದ್ ಪ್ರದೇಶಗಳನ್ನು ನೋಡಿದಾಗ ಅವು ಅವರ ಪಶುಗಳ ಮೇವಿಗೆ ಒಳ್ಳೆಯ ಸ್ಥಳವೆಂದು ತಿಳಿದುಕೊಂಡರು. ಆದ್ದರಿಂದ ರೂಬೇನ್ ಮತ್ತು ಗಾದ್ ಕುಲದವರು ಮೋಶೆಯ ಬಳಿಗೆ ಬಂದರು. ಅವರು ಮೋಶೆಯ ಸಂಗಡದಲ್ಲೂ ಯಾಜಕನಾದ ಎಲ್ಲಾಜಾರನ ಸಂಗಡದಲ್ಲೂ ಜನರ ನಾಯಕರ ಸಂಗಡದಲ್ಲೂ ಮಾತಾಡಿ ಹೀಗೆ ಹೇಳಿದರು: 3-4 “ಯೆಹೋವನು ಇಸ್ರೇಲರಿಗೆ ಅಧೀನಪಡಿಸಿದ ಈ ಪ್ರದೇಶವು ಅಂದರೆ, ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬ ಪಟ್ಟಣಗಳ ಪ್ರದೇಶವು ಪಶುಗಳ ಮೇವಿಗೆ ಒಳ್ಳೆಯ ಸ್ಥಳವಾಗಿದೆ. ನಿಮ್ಮ ದಾಸರಾದ ನಮಗೆ ಬಹಳ ಪಶುಗಳು ಇವೆ. ಆದ್ದರಿಂದ ಈ ಪ್ರದೇಶವನ್ನೇ ನಮಗೆ ಸ್ವಾಸ್ತ್ಯವನ್ನಾಗಿ ಕೊಟ್ಟರೆ ನಮಗೆ ಉಪಕಾರ ಮಾಡಿದಂತಾಗುವುದು. ನಾವು ಜೋರ್ಡನ್ ನದಿಯನ್ನು ದಾಟಿ ಹೋಗುವಂತೆ ಮಾಡಬೇಡ.”

ಮೋಶೆಯು ರೂಬೇನ್ ಮತ್ತು ಗಾದ್ ಕುಲಗಳವರಿಗೆ, “ನಿಮ್ಮ ಸಹೋದರರು ಯುದ್ಧಕ್ಕೆ ಹೋಗುವಾಗ ನೀವು ಇಲ್ಲೇ ಕುಳಿತಿರಬೇಕೇ? ಯೆಹೋವನು ಇಸ್ರೇಲರಿಗೆ ಕೊಟ್ಟ ದೇಶಕ್ಕೆ ಅವರು ಹೋಗದಂತೆ ನೀವು ಯಾಕೆ ಅವರಿಗೆ ಅಧೈರ್ಯವನ್ನು ಹುಟ್ಟಿಸುತ್ತೀರಿ? ಆ ದೇಶವನ್ನು ನೋಡಿಕೊಂಡು ಬರುವುದಕ್ಕೆ ನಾನು ಕಾದೇಶ್ ಬರ್ನೇಯದಿಂದ ನಿಮ್ಮ ಪೂರ್ವಿಕರನ್ನು ಗೂಢಚಾರರನ್ನಾಗಿ ಕಳುಹಿಸಿದಾಗ ಅವರೂ ಹಾಗೆಯೇ ಮಾಡಿದರಲ್ಲಾ. ಅವರು ಎಷ್ಕೋಲ್ ತಗ್ಗಿಗೆ ಬಂದು ಆ ದೇಶವನ್ನು ನೋಡಿ ಇಸ್ರೇಲರಿಗೆ ಅಧೈರ್ಯವನ್ನು ಹುಟ್ಟಿಸಿದ್ದರಿಂದ ಇಸ್ರೇಲರು ತಮಗೆ ಯೆಹೋವನು ವಾಗ್ದಾನ ಮಾಡಿದ್ದ ದೇಶಕ್ಕೆ ಹೋಗಲೇ ಇಲ್ಲ. 10 ಆಗ ಯೆಹೋವನು ಕೋಪಗೊಂಡು, 11-12 ‘ಈಜಿಪ್ಟಿನಿಂದ ಬಂದ ಈ ಜನರಲ್ಲಿ ಮತ್ತು ಇಪ್ಪತ್ತು ವರ್ಷ ಮೊದಲುಗೊಂಡು ಅದಕ್ಕಿಂತ ಹೆಚ್ಚು ವಯಸ್ಸಾದ ನಿಮ್ಮವರೆಲ್ಲಾ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನ ಮತ್ತು ನೂನನ ಮಗನಾದ ಯೆಹೋಶುವನ ಹೊರತು ಯಾರೂ ನನ್ನನ್ನು ನಿಜವಾಗಿಯೂ ಅನುಸರಿಸದೆ ಹೋದದ್ದರಿಂದ, ನಾನು ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ದೇಶವನ್ನು ಅವರಿಬ್ಬರೇ ಹೊರತು ಬೇರೆ ಯಾರೂ ನೋಡುವುದೇ ಇಲ್ಲ’ ಎಂದು ಖಂಡಿತವಾಗಿ ಹೇಳಿದನು.

13 “ಆದ್ದರಿಂದ ಯೆಹೋವನು ಇಸ್ರೇಲರ ಮೇಲೆ ಕೋಪಗೊಂಡು, ತನ್ನನ್ನು ಬೇಸರಗೊಳಿಸಿದ್ದ ಇಡೀ ತಲೆಮಾರು ಸಾಯುವತನಕ ಇಸ್ರೇಲರನ್ನು ಮರುಭೂಮಿಯಲ್ಲಿ ನಲವತ್ತು ವರ್ಷಗಳ ಕಾಲ ಅಲೆದಾಡಿಸಿದನು. 14 ದುಷ್ಟ ಸಂತತಿಯವರೇ, ಈಗ ನೀವು ಯೆಹೋವನ ಭಯಂಕರವಾದ ಕೋಪವನ್ನು ಇನ್ನೂ ಹೆಚ್ಚಾಗಿ ಮಾಡಲು ನಿಮ್ಮ ಪೂರ್ವಿಕರ ಸ್ಥಾನವನ್ನು ತೆಗೆದುಕೊಂಡಿದ್ದೀರಿ. 15 ನೀವು ಆತನನ್ನು ಹಿಂಬಾಲಿಸದೆ ಹೋದರೆ, ಆತನು ಇಸ್ರೇಲರನ್ನು ಮರುಭೂಮಿಯಲ್ಲಿ ಇನ್ನೂ ಹೆಚ್ಚು ಕಾಲ ಬಿಟ್ಟುಬಿಡುವನು. ಈ ಜನರೆಲ್ಲರ ನಾಶನಕ್ಕೆ ನೀವೇ ಕಾರಣರಾಗುವಿರಿ” ಎಂದು ಹೇಳಿದನು.

16 ಆಗ ಅವರು ಮೋಶೆಯ ಬಳಿಗೆ ಬಂದು, “ನಮ್ಮ ಪಶುಗಳಿಗಾಗಿ ನಾವು ಬೇಲಿಯನ್ನು ಹಾಕೋಣ ಮತ್ತು ಸ್ತ್ರೀಯರಿಗಾಗಿ ಮತ್ತು ಮಕ್ಕಳಿಗಾಗಿ ಊರುಗಳನ್ನು ಕಟ್ಟುವೆವು. 17 ಬಳಿಕ ಇಸ್ರೇಲರನ್ನು ಅವರವರ ಸ್ಥಳಗಳಿಗೆ ಸೇರಿಸುವವರೆಗೆ ನಾವು ಅವರ ಮುಂದೆ ಹೋಗುವ ಸೈನಿಕರಾಗಿ ಹೊರಡುವೆವು ಅಲ್ಲದೆ ನಮ್ಮ ಸ್ತ್ರೀಯರು ಮತ್ತು ಮಕ್ಕಳು ಈ ದೇಶದ ಇತರ ನಿವಾಸಿಗಳಿಂದ ತೊಂದರೆಗೊಳಗಾಗದೆ ಕೋಟೆಗಳುಳ್ಳ ಊರುಗಳಲ್ಲಿ ಸುರಕ್ಷಿತವಾಗಿರುವರು. 18 ಪ್ರತಿಯೊಬ್ಬ ಇಸ್ರೇಲನು ದೇಶದಲ್ಲಿ ತನಗೆ ಬರಬೇಕಾದ ಸ್ವಾಸ್ತ್ಯವನ್ನು ತೆಗೆದುಕೊಳ್ಳುವ ತನಕ ನಾವು ನಮ್ಮ ಮನೆಗಳಿಗೆ ಹೋಗುವುದಿಲ್ಲ. 19 ನಮಗೆ ಜೋರ್ಡನ್ ಹೊಳೆಯ ಈಚೆ ಪೂರ್ವದಿಕ್ಕಿನಲ್ಲಿ ಸ್ವಾಸ್ತ್ಯವು ದೊರಕಿದ್ದರಿಂದ ನಾವು ಹೊಳೆಯ ಆಚೆ ಎಲ್ಲಿಯೂ ಅವರೊಂದಿಗೆ ಸ್ವಾಸ್ತ್ಯವನ್ನು ಅಪೇಕ್ಷಿಸುವುದಿಲ್ಲ” ಅಂದರು.

20-22 ಅದಕ್ಕೆ ಮೋಶೆ, “ನೀವು ನಿಮ್ಮ ಮಾತಿನಂತೆ ಯೆಹೋವನ ಮುಂದೆ ಸನ್ನದ್ಧರಾದ ಸೈನಿಕರಾಗಿ ಯುದ್ಧಕ್ಕೆ ಹೋಗುವುದಾದರೆ, ಯೆಹೋವನು ತನ್ನ ವೈರಿಗಳನ್ನು ಓಡಿಸುವ ತನಕ ಮತ್ತು ಆ ದೇಶವನ್ನು ಗೆದ್ದುಕೊಳ್ಳುವ ತನಕ ಪ್ರತಿಯೊಬ್ಬ ಪ್ರವೀಣ ಸೈನಿಕನು ಯೆಹೋವನ ಮುಂದೆ ಜೋರ್ಡನ್ ನದಿಯನ್ನು ದಾಟುವುದಾದರೆ, ಆ ಬಳಿಕ ನೀವು ನಿಮ್ಮ ಮನೆಗಳಿಗೆ ಹಿಂತಿರುಗಬಹುದು ಮತ್ತು ನೀವು ಯೆಹೋವನ ದೃಷ್ಟಿಯಲ್ಲಿಯೂ ಇಸ್ರೇಲರ ದೃಷ್ಟಿಯಲ್ಲಿಯೂ ನಿಮ್ಮ ಕರ್ತವ್ಯವನ್ನು ಮಾಡಿದವರಾಗಿರುವಿರಿ. 23 ಆದರೆ ನೀವು ಈ ಸಂಗತಿಗಳನ್ನು ಮಾಡದಿದ್ದರೆ, ಯೆಹೋವನಿಗೆ ವಿರೋಧವಾಗಿ ಪಾಪ ಮಾಡಿದವರಾಗಿರುವಿರಿ. ಮತ್ತು ನಿಮ್ಮ ಪಾಪವು ನಿಮ್ಮನ್ನು ಹಿಡಿಯುವ ತನಕ ಹುಡುಕಿಕೊಂಡೇ ಬರುವುದು ಎಂದು ಖಚಿತವಾಗಿ ತಿಳಿದುಕೊಳ್ಳಿರಿ. 24 ನಿಮ್ಮ ಸ್ತ್ರೀಯರಿಗಾಗಿಯೂ ಮಕ್ಕಳಿಗಾಗಿಯೂ ಊರುಗಳನ್ನು ಕಟ್ಟಿರಿ ಮತ್ತು ಪಶುಗಳಿಗಾಗಿ ದೊಡ್ಡಿಯನ್ನು ಕಟ್ಟಿರಿ. ಬಳಿಕ ನೀವು ವಾಗ್ದಾನ ಮಾಡಿದಂತೆಯೇ ಮಾಡಿರಿ” ಎಂದನು.

25 ಆಗ ಗಾದ್ಯರು ಮತ್ತು ರೂಬೇನ್ಯರು ಮೋಶೆಗೆ, “ಸ್ವಾಮೀ, ನಾವು ನಿನ್ನ ಸೇವಕರಾಗಿದ್ದೇವೆ. ಆದ್ದರಿಂದ ನೀನು ಆಜ್ಞಾಪಿಸಿದಂತೆಯೇ ನಾವು ಮಾಡುತ್ತೇವೆ. 26 ನಮ್ಮ ಹೆಂಡತಿಯರು, ಮಕ್ಕಳು, ಪಶುಗಳು ಮತ್ತು ಇತರ ಪ್ರಾಣಿಗಳು ಗಿಲ್ಯಾದಿನ ಊರುಗಳಲ್ಲಿ ವಾಸಿಸುವರು. 27 ಆದರೆ ನಿನ್ನ ಸೇವಕರಾದ ನಾವು ಮತ್ತು ದಂಡೆಯಾತ್ರೆಗಾಗಿ ಆರಿಸಲ್ಪಟ್ಟವರು ನಿನ್ನ ಆಜ್ಞೆಯ ಪ್ರಕಾರ ಜೋರ್ಡನ್ ನದಿಯನ್ನು ಯೆಹೋವನ ಮುಂದೆ ದಾಟಿಹೋಗಿ ಹೋರಾಡುತ್ತೇವೆ” ಎಂದರು.

28 ಆದ್ದರಿಂದ ಮೋಶೆಯು, ಅವರ ಬಗ್ಗೆ ಯಾಜಕ ಎಲ್ಲಾಜಾರನಿಗೂ ನೂನನ ಮಗನಾದ ಯೆಹೋಶುವನಿಗೂ ಇಸ್ರೇಲ್ ಕುಲಗಳ ಗೋತ್ರಪ್ರಧಾನರಿಗೂ ಆದೇಶಗಳನ್ನು ಕೊಟ್ಟನು. 29 ಮೋಶೆ ಅವರಿಗೆ, “ಗಾದ್ ಮತ್ತು ರೂಬೇನ್ ಕುಲಗಳಿಂದ ಯುದ್ಧಕ್ಕಾಗಿ ಆರಿಸಲ್ಪಟ್ಟವರು ಜೋರ್ಡನ್ ನದಿಯನ್ನು ಯೆಹೋವನ ಮುಂದೆ ದಾಟಿ ಆ ದೇಶವನ್ನು ಗೆದ್ದುಕೊಂಡರೆ, ನೀವು ಅವರಿಗೆ ಗಿಲ್ಯಾದ್ ಪ್ರಾಂತ್ಯವನ್ನು ಸ್ವಾಸ್ತ್ಯವಾಗಿ ಕೊಡಬೇಕು. 30 ಆದರೆ ಆರಿಸಲ್ಪಟ್ಟವರು ನಿಮ್ಮೊಂದಿಗೆ ನದಿಯನ್ನು ದಾಟದಿದ್ದರೆ, ಅವರು ನಿಮ್ಮೊಂದಿಗೆ ಕಾನಾನ್ ದೇಶದಲ್ಲಿ ಭೂಮಿಯನ್ನು ಪಡೆದುಕೊಳ್ಳಬೇಕು” ಎಂದು ಹೇಳಿದನು.

31 ಅದಕ್ಕೆ ಗಾದ್ ಮತ್ತು ರೂಬೇನ್ ಕುಲಗಳವರು ಒಪ್ಪಿ, “ನಿನ್ನ ಸೇವಕರಾದ ನಾವು ಯೆಹೋವನ ಆಜ್ಞೆಯಂತೆಯೇ ಮಾಡುವೆವು. 32 ನಾವೇ ಯುದ್ಧ ಮಾಡುವ ಸೈನಿಕರಾಗಿ ನದಿಯನ್ನು ದಾಟಿ ಯೆಹೋವನ ಮುಂದೆ ಕಾನಾನ್ ದೇಶದೊಳಗೆ ಹೋಗುವೆವು. ಆದರೆ ನಮ್ಮ ಸ್ವಾಸ್ತ್ಯವಾದ ಭೂಮಿಯು ಜೋರ್ಡನ್ ನದಿಯ ಈಚೆಕಡೆಯಲ್ಲಿರುವುದು” ಎಂದರು.

33 ಆಗ ಮೋಶೆಯು ಗಾದ್ ಮತ್ತು ರೂಬೇನ್ ಕುಲಗಳವರಿಗೆ ಮತ್ತು ಯೋಸೇಫನ ಮಗನಾದ ಮನಸ್ಸೆಯ ಅರ್ಧಕುಲದವರಿಗೆ ಅಮೋರಿಯರ ರಾಜನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ರಾಜನಾದ ಓಗನ ರಾಜ್ಯವನ್ನೂ ಅವುಗಳ ಎಲ್ಲಾ ಊರುಗಳನ್ನೂ ಆ ಊರುಗಳಿಗೆ ಸೇರಿದ ಭೂಮಿಗಳನ್ನೂ ಕೊಟ್ಟನು.

34 ಗಾದ್ ಕುಲದವರು ದೀಬೋನ್, ಅಟಾರೋತ್, ಅರೋಯೇರ್, 35 ಅಟ್ರೋತ್ಷೋಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ, 36 ಬೇತ್‌ಹಾರಾನ್ ಎಂಬ ಕೋಟೆಗಳುಳ್ಳ ಊರುಗಳನ್ನು ಹೊಸದಾಗಿ ಕಟ್ಟಿಕೊಂಡರು ಮತ್ತು ತಮ್ಮ ಪಶುಗಳಿಗಾಗಿ ದೊಡ್ಡಿಗಳನ್ನು ಕಟ್ಟಿಕೊಂಡರು.

37-38 ರೂಬೇನ್ ಕುಲದವರು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್, ನೆಬೋ, ಬಾಳ್ಮೆಯೋನ್ ಮತ್ತು ಸಿಬ್ಮಾ ಎಂಬ ಊರುಗಳನ್ನು ಕೋಟೆ ಸಮೇತವಾಗಿ ಕಟ್ಟಿದರು; ಅಲ್ಲದೆ ತಮ್ಮ ಪಶುಗಳಿಗಾಗಿ ದೊಡ್ಡಿಯನ್ನು ಕಟ್ಟಿದರು. ಅವರು ತಾವು ಮತ್ತೆ ಕಟ್ಟಿದ ಊರುಗಳಿಗೆ ಅವುಗಳ ಮೊದಲಿನ ಹೆಸರುಗಳನ್ನು ಕೊಟ್ಟರು; ಆದರೆ ನೆಬೋ ಮತ್ತು ಬಾಳ್ಮೆಯೋನ್‌ಗಳ ಹೆಸರುಗಳನ್ನು ಬದಲಾಯಿಸಿದರು.

39 ಮಾಕೀರನ ವಂಶದವರು ಗಿಲ್ಯಾದಿಗೆ ಹೋದರು. (ಮಾಕೀರನು ಮನಸ್ಸೆಯ ಮಗ.) ಅವರು ಆ ಪಟ್ಟಣದಲ್ಲಿ ವಾಸಿಸುತ್ತಿದ್ದ ಅಮೋರಿಯರನ್ನು ಓಡಿಸಿ ಅದನ್ನು ವಶಪಡಿಸಿಕೊಂಡರು. 40 ಆದ್ದರಿಂದ ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗನಾದ ಮಾಕೀರನ ವಂಶದವರಿಗೆ ಕೊಟ್ಟನು. ಮಾಕೀರನ ವಂಶದವರು ಅಲ್ಲಿ ನೆಲೆಸಿದರು. 41 ಮನಸ್ಸೆಯ ಕುಲದವನಾದ ಯಾಯೀರನು ಅಮೋರಿಯರ ಕೋಟೆಗಳುಳ್ಳ ಹಳ್ಳಿಗಳನ್ನು ವಶಪಡಿಸಿಕೊಂಡು ಅವುಗಳಿಗೆ, “ಯಾಯೀರನ ಹಳ್ಳಿಗಳು” ಎಂದು ಹೆಸರಿಟ್ಟನು. 42 ನೋಬಹ ಎಂಬವನು ಕೆನಾತ್ ಮತ್ತು ಅದರ ಹತ್ತಿರವಿದ್ದ ಚಿಕ್ಕ ಊರುಗಳನ್ನು ವಶಪಡಿಸಿಕೊಂಡು ಅವುಗಳಿಗೆ “ನೋಬಹ” ಎಂಬ ತನ್ನ ಹೆಸರನ್ನೇ ಕೊಟ್ಟನು.

ಕೀರ್ತನೆಗಳು 77

ರಚನೆಗಾರ: ಆಸಾಫ.

77 ನಾನು ಸ್ವರವೆತ್ತಿ ದೇವರಿಗೆ ಮೊರೆಯಿಡುವೆನು.
    ದೇವರೇ, ಸ್ವರವೆತ್ತಿ ಮೊರೆಯಿಡುವೆನು, ನನಗೆ ಕಿವಿಗೊಡು.
ನನ್ನ ಯೆಹೋವನೇ, ಇಕ್ಕಟ್ಟಿನಲ್ಲಿ ನಿನ್ನನ್ನು ಕರೆದೆನು;
    ರಾತ್ರಿಯೆಲ್ಲಾ ನಿನಗಾಗಿ ಕೈಚಾಚಿಕೊಂಡಿದ್ದೆನು.
    ಆದರೆ ನನ್ನ ಮನಸ್ಸು ಸಮಾಧಾನಗೊಳ್ಳಲಿಲ್ಲ.
ನಾನು ದೇವರನ್ನೇ ಧ್ಯಾನಿಸುತ್ತಾ ನನ್ನ ವ್ಯಥೆಯನ್ನು ಹೇಳಿಕೊಳ್ಳಬಯಸಿದೆ.
    ಆದರೂ ನನ್ನಿಂದಾಗಲಿಲ್ಲ.
ನೀನು ನನಗೆ ನಿದ್ರೆಮಾಡಗೊಡಿಸಲಿಲ್ಲ.
    ನಾನು ಬಹು ಗಲಿಬಿಲಿಗೊಂಡಿದ್ದರಿಂದ ನಿನ್ನೊಂದಿಗೆ ಮಾತಾಡಲಾಗಲಿಲ್ಲ.
ಹಿಂದಿನಕಾಲದ ಬಗ್ಗೆ ಯೋಚಿಸತೊಡಗಿದೆನು.
    ಬಹುಕಾಲದ ಹಿಂದೆ ನಡೆದ ಸಂಗತಿಗಳ ಬಗ್ಗೆ ಯೋಚಿಸತೊಡಗಿದೆನು.
ರಾತ್ರಿಯಲ್ಲಿ, ನಾನು ಮಾಡುತ್ತಿದ್ದ ಗಾನವನ್ನು ನೆನಸಿಕೊಳ್ಳುವೆನು;
    ಆಂತರ್ಯದಲ್ಲಿ ಮಾತಾಡುತ್ತಾ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವೆನು.
ನಾನು ಆಶ್ಚರ್ಯದಿಂದ ಹೀಗೆಂದುಕೊಳ್ಳುವೆನು:
    “ನಮ್ಮ ಯೆಹೋವನು ನಮ್ಮನ್ನು ಶಾಶ್ವತವಾಗಿ ಕೈಬಿಟ್ಟಿರುವನೇ?
    ಆತನು ನಮ್ಮನ್ನು ಮತ್ತೆಂದಾದರೂ ಅಪೇಕ್ಷಿಸುವನೇ?
ದೇವರ ಕೃಪಾವಾತ್ಸಲ್ಯವು ಎಂದೆಂದಿಗೂ ನಿಂತುಹೋಯಿತೇ?
    ಆತನು ನಮ್ಮೊಂದಿಗೆ ಮತ್ತೆಂದೂ ಮಾತಾಡುವುದಿಲ್ಲವೇ?
ದೇವರು ಕರುಣೆಯನ್ನು ಮರೆತುಬಿಟ್ಟಿರುವನೇ?
    ಆತನ ಕನಿಕರವು ಬದಲಾವಣೆ ಹೊಂದಿ ಕೋಪವಾಗಿರುವುದೇ?”

10 ಬಳಿಕ ನಾನು ಹೀಗೆ ಆಲೋಚಿಸಿಕೊಂಡೆ: “ಮಹೋನ್ನತವಾದ ದೇವರು ತನ್ನ ಶಕ್ತಿಯನ್ನು ಕಳೆದುಕೊಂಡನೇ?”
    ಎಂಬುದೇ ನನ್ನನ್ನು ಕಾಡಿಸುವ ಪ್ರಶ್ನೆ.

11 ಯೆಹೋವನೇ, ನಿನ್ನ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
    ಬಹುಕಾಲದ ಹಿಂದೆ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
12 ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು;
    ನಿನ್ನ ಕಾರ್ಯಗಳ ಕುರಿತಾಗಿ ಆಲೋಚಿಸುವೆನು.
13 ದೇವರೇ, ನಿನ್ನ ಮಾರ್ಗಗಳು ಪರಿಶುದ್ಧವಾಗಿವೆ.
    ದೇವರೇ, ನಿನ್ನಂತೆ ಮಹತ್ವವುಳ್ಳವರು ಬೇರೆ ಯಾರೂ ಇಲ್ಲ.
14 ಅದ್ಭುತಕಾರ್ಯಗಳನ್ನು ಮಾಡಿದ ದೇವರು ನೀನೇ.
    ನೀನು ಜನರಿಗೆ ನಿನ್ನ ಮಹಾಶಕ್ತಿಯನ್ನು ತೋರಿಸಿದೆ.
15 ನೀನು ನಿನ್ನ ಶಕ್ತಿಯಿಂದ ನಿನ್ನ ಜನರನ್ನು ರಕ್ಷಿಸಿದೆ.
    ಯಾಕೋಬನ ಮತ್ತು ಯೋಸೇಫನ ಸಂತತಿಯವರನ್ನು ನೀನು ರಕ್ಷಿಸಿದೆ.

16 ದೇವರೇ, ನಿನ್ನನ್ನು ಕಂಡು ಜಲರಾಶಿಗಳು ಭಯಗೊಂಡವು.
    ಆಳವಾದ ಜಲರಾಶಿಗಳು ಭಯದಿಂದ ನಡುಗಿದವು.
17 ದಟ್ಟವಾದ ಕಪ್ಪುಮೋಡಗಳು ಮಳೆಗರೆದವು.
    ಜನರಿಗೆ ಮೇಘಮಂಡಲದಿಂದ ಗುಡುಗು ಕೇಳಿಸಿತು.
    ನಿನ್ನ ಮಿಂಚಿನ ಬಾಣಗಳು ಆ ಮೋಡಗಳಲ್ಲಿ ಹಾರಿದವು.
18 ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು.
    ಮಿಂಚುಗಳು ಭೂಮಂಡಲವನ್ನು ಬೆಳಗಿಸಿದವು.
    ಭೂಮಿಯು ಅಲ್ಲಾಡಿ ಕಂಪಿಸಿತು.
19 ನೀನು ಸಮುದ್ರದಲ್ಲಿ ಮಾರ್ಗಮಾಡಿದೆ;
    ಆಳವಾದ ಜಲರಾಶಿಗಳನ್ನು ದಾಟಿದೆ.
    ಆದರೆ ನಿನ್ನ ಹೆಜ್ಜೆಯ ಗುರುತು ಕಾಣಲೇ ಇಲ್ಲ.
20 ಕುರುಬನು ಕುರಿಹಿಂಡನ್ನು ಕರೆದೊಯ್ಯುವಂತೆ
    ನಿನ್ನ ಜನರನ್ನು ಕರೆದೊಯ್ಯಲು ಮೋಶೆಯನ್ನೂ ಆರೋನನನ್ನೂ ಉಪಯೋಗಿಸಿದೆ.

ಯೆಶಾಯ 24

ದೇವರು ಇಸ್ರೇಲನ್ನು ಶಿಕ್ಷಿಸುವನು

24 ಇಗೋ, ಯೆಹೋವನು ಈ ದೇಶವನ್ನು ನಾಶಮಾಡುವನು. ಆತನು ಅದನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವನು. ಜನರನ್ನು ಅತಿದೂರಕ್ಕೆ ಚದರಿಸಿಬಿಡುವನು. ಆ ಸಮಯದಲ್ಲಿ ಸಾಧಾರಣ ಜನರಿಗೂ ಯಾಜಕವರ್ಗದವರಿಗೂ ವ್ಯತ್ಯಾಸವಿರದು. ಸೇವಕರಿಗೂ ಅವರ ಯಜಮಾನರಿಗೂ ವ್ಯತ್ಯಾಸವಿರದು. ದಾಸಿಯರಿಗೂ ಅವರ ಯಜಮಾನಿಯರಿಗೂ ವ್ಯತ್ಯಾಸವಿರದು. ಮಾರುವವರಿಗೂ ಕೊಳ್ಳುವವರಿಗೂ ವ್ಯತ್ಯಾಸವಿರದು. ಸಾಲಕೊಡುವವರಿಗೂ ಸಾಲ ತೆಗೆದುಕೊಳ್ಳುವವರಿಗೂ ವ್ಯತ್ಯಾಸವಿರದು. ಬಡ್ಡಿಹಾಕುವವನಿಗೂ ಬಡ್ಡಿಕೊಡುವವನಿಗೂ ವ್ಯತ್ಯಾಸವಿರದು. ಎಲ್ಲಾ ಜನರು ದೇಶದಿಂದ ಹೊರಕ್ಕೆ ಹಾಕಲ್ಪಡುವರು. ದೇಶದ ಸಂಪತ್ತನ್ನು ಕಿತ್ತುಕೊಳ್ಳಲಾಗುವದು. ಇದು ಯೆಹೋವನ ಆಜ್ಞೆಯಾಗಿರುವದರಿಂದ ನೆರವೇರುವದು. ದೇಶವು ನಿರ್ಜನವಾಗಿ ಶೋಕಿಸುವದು. ಇಡೀ ಪ್ರಪಂಚವೇ ನಿರ್ಜನವಾಗಿ ಬಲಹೀನವಾಗುವದು. ಈ ಪ್ರಪಂಚದ ಪ್ರಸಿದ್ಧ ಜನರೂ ಬಲಹೀನರಾಗುವರು.

ದೇಶದ ಜನರು ದೇವರ ಉಪದೇಶಗಳಿಗೆ ವಿರುದ್ಧವಾಗಿ ನಡೆದು ತಮ್ಮ ದೇಶವನ್ನು ಹೊಲಸುಮಾಡಿದರು. ದೇವರ ಕಟ್ಟಳೆಗಳನ್ನು ಅವರು ಅನುಸರಿಸಲಿಲ್ಲ. ಬಹಳ ಕಾಲದ ಹಿಂದೆ ಜನರು ದೇವರೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಆದರೆ ಆ ಜನರು ಆ ಒಡಂಬಡಿಕೆಯನ್ನು ಮುರಿದರು. ಆ ದೇಶದಲ್ಲಿ ವಾಸಿಸುವ ಜನರು ದೇವರಿಗೆ ವಿರುದ್ಧವಾಗಿ ನಡೆದರು. ಆದ್ದರಿಂದ ದೇವರು ಈ ದೇಶವನ್ನು ನಾಶಮಾಡಲು ತೀರ್ಮಾನಿಸಿದನು. ಜನರು ಶಿಕ್ಷಿಸಲ್ಪಡುವರು. ಕೆಲವೇ ಮಂದಿ ಮಾತ್ರ ಉಳಿಯುವರು.

ದ್ರಾಕ್ಷಿಬಳ್ಳಿಗಳು ಸಾಯುತ್ತಲಿವೆ. ಹೊಸ ದ್ರಾಕ್ಷಾರಸವು ಹುಳಿಯಾಗಿದೆ. ಹಿಂದಿನ ಕಾಲದಲ್ಲಿ ಜನರು ಹರ್ಷಭರಿತರಾಗಿದ್ದರು. ಆದರೆ ಈಗ ಆ ಜನರು ದುಃಖದಲ್ಲಿರುತ್ತಾರೆ. ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುವದಿಲ್ಲ. ಸಂತಸದ ಗದ್ದಲವು ಕೇಳಿಸುವದಿಲ್ಲ. ಆ ಶಬ್ದಗಳೆಲ್ಲಾ ನಿಂತುಹೋಗಿವೆ. ಹಾರ್ಪ್‌ವಾದ್ಯದ ಮತ್ತು ದಮ್ಮಡಿಗಳ ಶಬ್ದವು ನಿಂತಿದೆ. ಜನರು ದ್ರಾಕ್ಷಾರಸ ಕುಡಿಯುತ್ತಿರುವಾಗ ಹಾಡು ಹಾಡುವುದಿಲ್ಲ. ಅವರು ಕುಡಿಯುವ ಮದ್ಯವು ಅವರಿಗೆ ಕಹಿಯಾಗಿದೆ.

10 ಈ ನಗರಕ್ಕೆ “ಪೂರ್ಣ ಗಲಿಬಿಲಿ” ಎಂಬುದೇ ತಕ್ಕ ಹೆಸರು. ನಗರವು ಕೆಡವಲ್ಪಟ್ಟಿತು. ಜನರು ಮನೆಗಳಿಗೆ ಪ್ರವೇಶಿಸಲಿಕ್ಕಾಗದು. ಕದಗಳನ್ನು ತೆರೆಯಲು ಸಾಧ್ಯವಾಗದು. 11 ಮಾರುಕಟ್ಟೆಗಳಲ್ಲಿ ಜನರು ಈಗಲೂ ದ್ರಾಕ್ಷಾರಸವನ್ನು ಕೇಳುವರು. ಆದರೆ ಸಂತೋಷವೇ ಹೋಗಿಬಿಟ್ಟಿದೆ. ಹರ್ಷವು ಬಹುದೂರ ಒಯ್ಯಲ್ಪಟ್ಟಿದೆ. 12 ನಗರಕ್ಕೆ ನಾಶನವು ಕಾದಿದೆ; ಪುರದ್ವಾರವು ನಜ್ಜುಗುಜ್ಜಾಗಿದೆ.

13 ಕೊಯ್ಯುವ ಕಾಲದಲ್ಲಿ ಜನರು ಆಲೀವ್ ಮರಗಳನ್ನು ಹೊಡೆದು ಕಾಯಿಗಳನ್ನು ಉದುರಿಸುವರು.
    ಆದರೆ ಕೆಲವು ಕಾಯಿಗಳು ಮರದಲ್ಲಿ ಉಳಿಯುವವು.
ಜನಾಂಗಗಳ ಮಧ್ಯದಲ್ಲಿ ದೇಶವೂ ಹೀಗೆಯೇ ಇರುವದು.
14 ಉಳಿದ ಜನರು ಚೀರಾಡುವರು.
    ಅದು ಭೋರ್ಗರೆಯುವ ಸಮುದ್ರದ ಶಬ್ದಕ್ಕಿಂತಲೂ ಜೋರಾಗಿ ಕೇಳಿಸುವದು.
    ದೇವರ ಕೃಪೆಯ ನಿಮಿತ್ತ ಅವರು ಸಂತೋಷದಲ್ಲಿರುವರು.
15 ಆ ಜನರು, “ಪೂರ್ವದಲ್ಲಿರುವ ಜನರೇ, ದೇವರಿಗೆ ಸ್ತೋತ್ರಮಾಡಿರಿ!
    ದೂರ ದೇಶಗಳಲ್ಲಿರುವ ಜನರೇ,
    ಇಸ್ರೇಲರ ದೇವರಾದ ಯೆಹೋವನ ಹೆಸರನ್ನು ಕೊಂಡಾಡಿರಿ” ಎಂದು ಹೇಳುವರು.
16 ದೇವರ ಸ್ತುತಿಯನ್ನು ನಾವು ಭೂಮಿಯ ಎಲ್ಲಾ ಕಡೆಗಳಿಂದಲೂ ಕೇಳಿಸಿಕೊಳ್ಳುತ್ತೇವೆ.
    ಈ ಸ್ತುತಿಹಾಡುಗಳು ದೇವರ ಒಳ್ಳೆತನವನ್ನು ವರ್ಣಿಸುವವು.
ಆದರೆ ನಾನು, “ಸಾಕು, ನನಗೆ ಸಾಕು.
ನಾನು ನೋಡುವ ವಿಷಯಗಳು ಭಯಂಕರವಾಗಿವೆ.
    ದ್ರೋಹಿಗಳು ಜನರಿಗೆ ವಿರುದ್ಧವಾಗಿ ಎದ್ದು ಅವರಿಗೆ ಹಾನಿಮಾಡುವರು.”

17 ಈ ದೇಶದಲ್ಲಿ ವಾಸಿಸುವ ಜನರಿಗೆ ಅಪಾಯವು ಕಾದಿದೆ ಎಂದು ನನಗೆ ತೋರುತ್ತಿದೆ.
    ಅವರಿಗೆ ಭಯ, ಉರುಲು, ಗುಂಡಿಗಳು ಕಾದಿವೆ.
18 ಜನರು ಅಪಾಯದ ವಿಷಯ ಕೇಳಿ ಭಯಗ್ರಸ್ಥರಾಗುವರು.
ಕೆಲವರು ಓಡಿಹೋಗುವರು.
    ಆದರೆ ಅವರು ಗುಂಡಿಯೊಳಗೆ ಬಿದ್ದು ಸಿಕ್ಕಿಕೊಳ್ಳುವರು.
ಅವರಲ್ಲಿ ಕೆಲವರು ಗುಂಡಿಯಿಂದ ಹೊರಬರುವರು,
    ಆದರೆ ಅವರು ಇನ್ನೊಂದು ಉರುಲಿನೊಳಗೆ ಸಿಕ್ಕಿಹಾಕಿಕೊಳ್ಳುವರು.
ಆಕಾಶದಲ್ಲಿರುವ ಪ್ರವಾಹದ ದ್ವಾರಗಳು ತೆರೆಯಲ್ಪಡುವವು.
    ಪ್ರವಾಹವು ತುಂಬುವದು; ಭೂಮಿಯ ಅಸ್ತಿವಾರಗಳು ಕದಲುವವು.
19 ಭೂಕಂಪಗಳಾಗುವವು.
    ಭೂಮಿಯು ಸೀಳಿಹೋಗುವದು.
20 ಲೋಕದ ಪಾಪವು ತುಂಬಾ ಭಾರವಾಗಿದೆ.
    ಆ ಭಾರದಿಂದಾಗಿ ಭೂಮಿಯು ಬೀಳುವದು.
ಒಂದು ಹಳೆಯ ಮನೆಯಂತೆ ಭೂಮಿಯು ಅಲುಗಾಡುವದು.
    ಕುಡಿದು ಮತ್ತನಾಗಿ ನೆಲಕ್ಕೆ ಬೀಳುವವನಂತೆ ಭೂಮಿಯು ಇರುವದು.
    ಭೂಮಿಗೆ ಮುಂದುವರಿಯಲು ಆಗದು.

21 ಆ ಸಮಯದಲ್ಲಿ ಯೆಹೋವನು ಪರಲೋಕ ಸೈನ್ಯಕ್ಕೆ
    ಪರಲೋಕದಲ್ಲಿ ನ್ಯಾಯತೀರಿಸುವನು.
    ಭೂಮಿಯ ಅರಸರನ್ನು ಭೂಮಿಯ ಮೇಲೆ ನ್ಯಾಯವಿಚಾರಣೆಮಾಡುವನು.
22 ಅನೇಕ ಮಂದಿ ಒಟ್ಟು ಸೇರುವರು.
    ಕೆಲವರು ಗುಂಡಿಯಲ್ಲಿ ಸಿಕ್ಕಿಹಾಕಿಕೊಳ್ಳುವರು.
    ಕೆಲವರು ಸೆರೆಹಿಡಿಯಲ್ಪಡುವರು.
    ಆಮೇಲೆ ಸ್ವಲ್ಪ ಕಾಲದ ನಂತರ ಅವರ ನ್ಯಾಯವಿಚಾರಣೆ ನಡಿಯುವದು.
23 ಯೆಹೋವನು ಜೆರುಸಲೇಮಿನ ಚೀಯೋನ್ ಪರ್ವತದಿಂದ ರಾಜ್ಯವನ್ನಾಳುವನು.
    ಆತನ ಮಹಿಮೆಯು ಹಿರಿಯರ ಮುಂದಿರುವದು.
    ಆತನ ಮಹಿಮೆಯ ಪ್ರಕಾಶಕ್ಕೆ ಚಂದ್ರನು ನಾಚಿಕೊಳ್ಳುವನು;
    ಸೂರ್ಯನು ಲಜ್ಜೆಗೊಳ್ಳುವನು.

1 ಯೋಹಾನ 2

ಯೇಸು ನಮ್ಮ ಸಹಾಯಕ

ನನ್ನ ಪ್ರಿಯ ಮಕ್ಕಳೇ, ನೀವು ಪಾಪಗಳನ್ನು ಮಾಡದಿರಲೆಂದು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಆದರೆ ಯಾರಾದರೂ ಪಾಪವನ್ನು ಮಾಡಿದರೆ ನಮಗೆ ಸಹಾಯ ಮಾಡಲು ಯೇಸು ಕ್ರಿಸ್ತನಿದ್ದಾನೆ. ನೀತಿವಂತನಾಗಿರುವ ಆತನು ತಂದೆಯಾದ ದೇವರ ಬಳಿಯಲ್ಲಿದ್ದಾನೆ. ನಮ್ಮ ಪಾಪಗಳ ನಿವಾರಣೆಗೂ ಎಲ್ಲಾ ಜನರ ಪಾಪಗಳ ನಿವಾರಣೆಗೂ ಯೇಸುವೇ ಮಾರ್ಗವಾಗಿದ್ದಾನೆ.

ದೇವರ ಆಜ್ಞೆಗಳಿಗೆ ನಾವು ವಿಧೇಯರಾಗಿದ್ದರೆ, ದೇವರ ಬಗ್ಗೆ ನಿಜವಾಗಿಯೂ ತಿಳಿದಿದ್ದೇವೆಂಬುದು ಖಚಿತವಾಗುತ್ತದೆ. “ದೇವರನ್ನು ನಾನು ಬಲ್ಲೆನು” ಎಂದು ಹೇಳುವವನು ದೇವರ ಆಜ್ಞೆಗಳಿಗೆ ವಿಧೇಯನಾಗಿರದಿದ್ದರೆ, ಅವನು ಸುಳ್ಳುಗಾರನಾಗಿದ್ದಾನೆ. ಅವನಲ್ಲಿ ಸತ್ಯವಿಲ್ಲ. ಆದರೆ ಯಾವನಾದರೂ ದೇವರ ವಾಕ್ಯಕ್ಕೆ ವಿಧೇಯನಾಗಿದ್ದರೆ, ದೇವರ ಮೇಲೆ ಅವನಿಗಿರುವ ಪ್ರೀತಿಯು ಪರಿಪೂರ್ಣವಾಗಿದೆ. ನಾವು ದೇವರನ್ನು ಅನುಸರಿಸುತ್ತಿದ್ದೇವೆ ಎಂಬುದನ್ನು ಇದರಿಂದಲೇ ತಿಳಿದುಕೊಳ್ಳುತ್ತೇವೆ. ದೇವರಲ್ಲಿ ನೆಲೆಗೊಂಡಿದ್ದೇನೆ ಎಂದು ಹೇಳುವವನು, ಯೇಸು ಜೀವಿಸಿದಂತೆಯೇ ಜೀವಿಸಬೇಕು.

ಇತರರನ್ನು ಪ್ರೀತಿಸಿ

ನನ್ನ ಪ್ರಿಯ ಸ್ನೇಹೀತರೇ, ನಾನು ನಿಮಗೆ ಹೊಸ ಆಜ್ಞೆಯನ್ನು ಬರೆಯುತ್ತಿಲ್ಲ. ಮೊದಲಿಂದಲೂ ಈ ಆಜ್ಞೆಯು ನಿಮಗಿತ್ತು. ನೀವು ಈಗಾಗಲೇ ಕೇಳಿರುವ ವಾಕ್ಯವೇ ಈ ಆಜ್ಞೆಯಾಗಿದೆ. ಆದರೆ ಈ ಆಜ್ಞೆಯನ್ನು ನಾನು ನಿಮಗೆ ಹೊಸ ಆಜ್ಞೆಯೋ ಎಂಬಂತೆ ಬರೆಯುತ್ತಿದ್ದೇನೆ. ಈ ಆಜ್ಞೆಯು ಸತ್ಯವಾದದ್ದು. ಅದರ ಸತ್ಯತೆಯನ್ನು ನೀವು ಯೇಸುವಿನಲ್ಲಿಯೂ ನಿಮ್ಮಲ್ಲಿಯೂ ಕಾಣಬಹುದು. ಕತ್ತಲೆಯು ಕಳೆದುಹೋಗುತ್ತಿದೆ ಮತ್ತು ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತಿದೆ.

“ನಾನು ಬೆಳಕಿನಲ್ಲಿದ್ದೇನೆ” ಎಂದು ಹೇಳುವವನು ತನ್ನ ಸಹೋದರನನ್ನು ದ್ವೇಷಿಸುತ್ತಿದ್ದರೆ, ಅವನಿನ್ನೂ ಅಂಧಕಾರದಲ್ಲಿದ್ದಾನೆ. 10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿದ್ದಾನೆ. ಬೇರೊಬ್ಬನನ್ನು ಪಾಪಕ್ಕೆ ನಡೆಸುವಂಥದ್ದೇನೂ ಅವನಲ್ಲಿರುವುದಿಲ್ಲ. 11 ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಅಂಧಕಾರದಲ್ಲಿದ್ದಾನೆ. ಅವನು ಅಂಧಕಾರದಲ್ಲಿಯೇ ಜೀವಿಸುತ್ತಾನೆ. ಅವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ತಿಳಿದಿಲ್ಲ. ಏಕೆಂದರೆ ಅಂಧಕಾರವು ಅವನನ್ನು ಕುರುಡನನ್ನಾಗಿ ಮಾಡಿದೆ.

12 ಪ್ರಿಯ ಮಕ್ಕಳೇ, ನಿಮ್ಮ ಪಾಪಗಳು ಕ್ರಿಸ್ತನ ಮೂಲಕ ಕ್ಷಮಿಸಲ್ಪಟ್ಟಿರುವುದರಿಂದ
    ನಾನು ನಿಮಗೆ ಬರೆಯುತ್ತಿದ್ದೇನೆ.
13 ತಂದೆಗಳೇ, ಆದಿಯಿಂದ ಇರುವಾತನನ್ನು ನೀವು ತಿಳಿದಿರುವುದರಿಂದ
    ನಾನು ನಿಮಗೆ ಬರೆಯುತ್ತಿದ್ದೇನೆ.
ಯುವಕರೇ, ನೀವು ಕೆಡುಕನನ್ನು ಸೋಲಿಸಿರುವುದರಿಂದ
    ನಾನು ನಿಮಗೆ ಬರೆಯುತ್ತಿದ್ದೇನೆ.
14 ಮಕ್ಕಳೇ, ನೀವು ತಂದೆಯನ್ನು ತಿಳಿದಿರುವುದರಿಂದ
    ನಾನು ನಿಮಗೆ ಬರೆಯುತ್ತಿದ್ದೇನೆ.
ತಂದೆಗಳೇ, ಆದಿಯಿಂದ ಇರುವಾತನನ್ನು ನೀವು ತಿಳಿದಿರುವುದರಿಂದ
    ನಾನು ನಿಮಗೆ ಬರೆಯುತ್ತಿದ್ದೇನೆ.
ಯುವಕರೇ, ನೀವು ಬಲಶಾಲಿಗಳಾಗಿರುವುದರಿಂದ,
    ದೇವರ ವಾಕ್ಯವು ನಿಮ್ಮಲ್ಲಿ ನೆಲಸಿರುವುದರಿಂದ
ಮತ್ತು ನೀವು ಕೆಡುಕನನ್ನು ಸೋಲಿಸಿರುವುದರಿಂದ
    ನಾನು ನಿಮಗೆ ಬರೆಯುತ್ತಿದ್ದೇನೆ.

15 ಈ ಲೋಕವನ್ನಾಗಲಿ ಈ ಲೋಕದಲ್ಲಿರುವ ವಸ್ತುಗಳನ್ನಾಗಲಿ ನೀವು ಪ್ರೀತಿಸಬೇಡಿ. ಈ ಲೋಕವನ್ನು ಪ್ರೀತಿಸುವವನಿಗೆ ತಂದೆಯ (ದೇವರ) ಮೇಲೆ ಪ್ರೀತಿಯಿರುವುದಿಲ್ಲ. 16 ಈ ಲೋಕದಲ್ಲಿರುವ ಕೆಟ್ಟವುಗಳು ಇಂತಿವೆ: ನಮ್ಮ ಪಾಪಸ್ವಭಾವವನ್ನು ತಣಿಸಲು ಮಾಡಲಿಚ್ಛಿಸುವ ಕಾರ್ಯಗಳು, ನಾವು ನೋಡುವ ಪಾಪಪೂರಿತವಾದದ್ದನ್ನು ಪಡೆಯಲಿಚ್ಛಿಸುವುದು, ಮತ್ತು ನಮ್ಮಲ್ಲಿರುವ ವಸ್ತುಗಳಲ್ಲಿಯೇ ದುರಹಂಕಾರಪಡುವುದು. ಆದರೆ ಇವುಗಳಲ್ಲಿ ಯಾವುದೂ ತಂದೆಯಿಂದ ಬರುವುದಿಲ್ಲ. ಇವುಗಳೆಲ್ಲ ಈ ಲೋಕದಿಂದ ಬರುತ್ತವೆ. 17 ಈ ಲೋಕವು ಮತ್ತು ಜನರು ಬಯಸುವಂಥವುಗಳು ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತಕ್ಕನುಸಾರವಾಗಿ ಮಾಡುವವನು ಸದಾಕಾಲ ಜೀವಿಸುವನು.

ಕ್ರಿಸ್ತನ ಶತ್ರುಗಳನ್ನು ಅನುಸರಿಸಬೇಡಿ

18 ನನ್ನ ಪ್ರಿಯ ಮಕ್ಕಳೇ, ಅಂತ್ಯವು ಸಮೀಪಿಸಿದೆ! ಕ್ರಿಸ್ತನ ಶತ್ರು ಬರುತ್ತಿದ್ದಾನೆಂಬುದನ್ನು ನೀವು ಕೇಳಿದ್ದೀರಿ. ಕ್ರಿಸ್ತನ ಅನೇಕ ಶತ್ರುಗಳು ಈಗಾಗಲೇ ಇಲ್ಲಿದ್ದಾರೆ. ಆದ್ದರಿಂದ ಅಂತ್ಯವು ಸಮೀಪಿಸಿದೆ ಎಂಬುದು ನಮಗೆ ತಿಳಿದಿದೆ. 19 ಕ್ರಿಸ್ತನ ಶತ್ರುಗಳು ನಮ್ಮ ಗುಂಪಿನಲ್ಲೇ ಇದ್ದರು. ಅವರು ನಮ್ಮನ್ನು ಬಿಟ್ಟುಹೋದರು. ಅವರು ನಿಜವಾಗಿಯೂ ನಮ್ಮವರಾಗಿರಲಿಲ್ಲ. ಅವರು ನಿಜವಾಗಿಯೂ ನಮ್ಮ ಸಭೆಗೆ ಸೇರಿದವರಾಗಿದ್ದರೆ ನಮ್ಮೊಂದಿಗೆ ಇರುತ್ತಿದ್ದರು. ಆದರೆ ಅವರು ಹೊರಟುಹೋದರು. ಅವರು ನಿಜವಾಗಿಯೂ ನಮ್ಮವರಾಗಿರಲಿಲ್ಲ ಎಂಬುದನ್ನು ಇದೇ ತೋರ್ಪಡಿಸುತ್ತದೆ.

20 ಪರಿಶುದ್ಧವಾಗಿರುವಾತನು (ದೇವರು ಅಥವಾ ಕ್ರಿಸ್ತನು) ಕೊಟ್ಟಿರುವ ವರವನ್ನು ನೀವು ಹೊಂದಿದ್ದೀರಿ. ಆದ್ದರಿಂದ ನೀವೆಲ್ಲರೂ ಸತ್ಯವನ್ನು ತಿಳಿದಿದ್ದೀರಿ. 21 ನಾನು ನಿಮಗೆ ಏಕೆ ಬರೆಯಬೇಕು? ನೀವು ಸತ್ಯವನ್ನು ತಿಳಿದಿಲ್ಲವೆಂದು ನಾನು ಬರೆಯಬೇಕೇ? ಇಲ್ಲ! ನೀವು ಸತ್ಯವನ್ನು ತಿಳಿದಿರುವುದರಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಸತ್ಯದಿಂದ ಯಾವ ಸುಳ್ಳೂ ಬರುವುದಿಲ್ಲ ಎಂಬುದು ನಿಮಗೆ ತಿಳಿದಿದೆ.

22 ಆದ್ದರಿಂದ ಸುಳ್ಳು ಹೇಳುವವನು ಯಾರು? ಯೇಸುವನ್ನು ಕ್ರಿಸ್ತನಲ್ಲವೆಂದು ಹೇಳುವವನೇ ಸುಳ್ಳುಗಾರ. ಅವನು ಕ್ರಿಸ್ತನ ವೈರಿಯಾಗಿದ್ದಾನೆ. ಅವನು ತಂದೆಯನ್ನಾಗಲಿ (ದೇವರು), ಆತನ ಮಗನನ್ನಾಗಲಿ (ಕ್ರಿಸ್ತನು) ನಂಬುವುದಿಲ್ಲ. 23 ಮಗನನ್ನು ನಂಬದೆ ಇರುವವನು ತಂದೆಯನ್ನು ಹೊಂದಿಲ್ಲ. ಆದರೆ ಮಗನನ್ನು ಸ್ವೀಕರಿಸಿಕೊಳ್ಳುವವನು ತಂದೆಯನ್ನು ಸಹ ಹೊಂದಿದ್ದಾನೆ.

24 ನೀವು ಆರಂಭದಿಂದಲೂ ಕೇಳಿರುವ ಬೋಧನೆಯನ್ನೇ ಅನುಸರಿಸಿರಿ. ಆ ಬೋಧನೆಯನ್ನು ಅನುಸರಿಸುವವರಾಗಿದ್ದರೆ ನೀವು ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿದ್ದೀರಿ. 25 ಕ್ರಿಸ್ತನು ನಮಗೆ ಕೊಡುವುದಾಗಿ ಮಾಡಿದ್ದ ವಾಗ್ದಾನವೇ ಈ ನಿತ್ಯಜೀವ.

26 ನಿಮ್ಮನ್ನು ತಪ್ಪುಮಾರ್ಗಕ್ಕೆ ಸೆಳೆಯುವ ಜನರನ್ನು ಕುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. 27 ಕ್ರಿಸ್ತನು ನಿಮಗೆ ವಿಶೇಷವಾದ ವರವನ್ನು ದಯಪಾಲಿಸಿರುವನು. ಅದು ನಿಮ್ಮಲ್ಲಿ ಇನ್ನೂ ಇದೆ. ಆದ್ದರಿಂದ ನಿಮಗೆ ಯಾವ ಉಪದೇಶಕರ ಅಗತ್ಯವೂ ಇಲ್ಲ. ಆತನು ನಿಮಗೆ ಕೊಟ್ಟಿರುವ ವರವು ನಿಮಗೆ ಎಲ್ಲವನ್ನೂ ಉಪದೇಶಿಸುತ್ತದೆ. ಅದು ನಿಜವಾದುದು, ಸುಳ್ಳಲ್ಲ. ಆದ್ದರಿಂದ ಅದರ ಉಪದೇಶಕ್ಕನುಸಾರವಾಗಿ ನೀವು ಆತನಲ್ಲಿ ನೆಲೆಗೊಂಡಿರಿ.

28 ಹೌದು, ನನ್ನ ಪ್ರಿಯ ಮಕ್ಕಳೇ, ಆತನಲ್ಲಿಯೇ ನೆಲೆಗೊಂಡಿರೋಣ. ನಾವು ಹೀಗೆ ಮಾಡಿದರೆ, ಕ್ರಿಸ್ತನು ಮರಳಿ ಬರುವ ದಿನದಂದು ನಾವು ಭಯಪಡಬೇಕಾಗಿಲ್ಲ; ಅಡಗಿಕೊಳ್ಳುವ ಅಗತ್ಯವಿರುವುದಿಲ್ಲ; ನಾಚಿಕೆಪಡುವ ಅಗತ್ಯವೂ ಇರುವುದಿಲ್ಲ. 29 ಕ್ರಿಸ್ತನು ನೀತಿವಂತನೆಂಬುದು ನಿಮಗೆ ತಿಳಿದಿದೆ. ಆದ್ದರಿಂದ ಯೋಗ್ಯವಾದುದನ್ನು ಮಾಡುವ ಜನರೆಲ್ಲರೂ ದೇವರ ಮಕ್ಕಳೆಂಬುದು ನಿಮಗೆ ತಿಳಿದಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International