Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 12-13

ಮಿರ್ಯಾಮಳು ಮತ್ತು ಆರೋನನು ಮೋಶೆಗೆ ವಿರುದ್ಧವಾಗಿ ಗೊಣಗುಟ್ಟಿದ್ದು

12 ಮೋಶೆಯು ಇಥಿಯೋಪ್ಯದ ಸ್ತ್ರೀಯನ್ನು ಮದುವೆ ಮಾಡಿಕೊಂಡ ಕಾರಣ ಮಿರ್ಯಾಮಳೂ ಆರೋನನೂ ಮೋಶೆಗೆ ವಿರೋಧವಾಗಿ ಮಾತಾಡಿದರು. ಅವರು, “ಯೆಹೋವನು ಮೋಶೆಯೊಡನೆ ಮಾತ್ರ ಮಾತಾಡಿದ್ದಾನೋ? ಆತನು ನಮ್ಮೊಡನೆಯೂ ಮಾತಾಡಿದನಲ್ಲವೇ?” ಅಂದರು.

ಯೆಹೋವನು ಅವರ ಮಾತುಗಳನ್ನು ಕೇಳಿದನು. (ಮೋಶೆಯು ಬಹಳ ದೀನನಾದ ವ್ಯಕ್ತಿ. ಅವನು ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ದೀನನಾಗಿದ್ದನು.) ಆದ್ದರಿಂದ ಕೂಡಲೇ ಯೆಹೋವನು, ಮೋಶೆ, ಆರೋನರ ಮತ್ತು ಮಿರ್ಯಾಮಳ ಸಂಗಡ ಮಾತಾಡಿ, “ನೀವು ಮೂವರು ದೇವದರ್ಶನಗುಡಾರಕ್ಕೆ ಬನ್ನಿ” ಎಂದು ಹೇಳಿದನು.

ಆದ್ದರಿಂದ ಮೋಶೆ, ಆರೋನರು ಮತ್ತು ಮಿರ್ಯಾಮಳು ದೇವದರ್ಶನಗುಡಾರಕ್ಕೆ ಹೋದರು. ಯೆಹೋವನು ಎತ್ತರವಾದ ಮೇಘದಲ್ಲಿ ಇಳಿದು ಬಂದು ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿ ನಿಂತನು. ಯೆಹೋವನು ಆರೋನನನ್ನೂ ಮಿರ್ಯಾಮಳನ್ನೂ ಕರೆದನು. ಆರೋನನೂ ಮಿರ್ಯಾಮಳೂ ಹತ್ತಿರಕ್ಕೆ ಹೋದರು. ದೇವರು, “ನನ್ನ ಮಾತನ್ನು ಕೇಳಿರಿ. ನಿಮ್ಮಲ್ಲಿ ಪ್ರವಾದಿಯಿದ್ದರೆ, ನಾನು ಅವನಿಗೆ ನನ್ನನ್ನು ದರ್ಶನದಲ್ಲಿ ಗೊತ್ತುಪಡಿಸಿಕೊಳ್ಳುವೆನು ಅಥವಾ ಸ್ವಪ್ನದಲ್ಲಿ ಅವನ ಸಂಗಡ ಮಾತಾಡುವೆನು. ಆದರೆ ಮೋಶೆಯೊಡನೆ ನಾನು ಆ ರೀತಿ ಮಾಡುವುದಿಲ್ಲ. ಮೋಶೆಯು ನನ್ನ ನಂಬಿಗಸ್ತನಾದ ಸೇವಕನು. ಅವನ ಮೇಲೆ ನನಗೆ ಭರವಸೆಯಿದೆ. ನಾನು ಅವನೊಂದಿಗೆ ಗೂಡಾರ್ಥದಿಂದ ಮಾತಾಡದೆ ನೇರವಾಗಿಯೂ ಸ್ಪಷ್ಟವಾಗಿಯೂ ಮಾತಾಡುತ್ತೇನೆ. ಅವನು ನನ್ನ ಸ್ವರೂಪವನ್ನೇ ನೋಡಬಲ್ಲನು. ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತಾಡಲು ನೀವು ಯಾಕೆ ಭಯಪಡಲಿಲ್ಲ?” ಎಂದು ಹೇಳಿದನು.

ಯೆಹೋವನು ಅವರ ಮೇಲೆ ಬಹಳವಾಗಿ ಕೋಪಗೊಂಡು ಹೊರಟುಹೋದನು. 10 ಮೇಘವು ಗುಡಾರದಿಂದ ಮೇಲಕ್ಕೆ ಎದ್ದಿತು. ಆರೋನನು ಹಿಂತಿರುಗಿ ಮಿರ್ಯಾಮಳನ್ನು ನೋಡಿದನು. ಆಕೆಯ ಚರ್ಮವು ಹಿಮದಂತೆ ಬೆಳ್ಳಗಾಗಿತ್ತು. ಆಕೆಗೆ ಭಯಂಕರವಾದ ಚರ್ಮರೋಗ ಹಿಡಿದಿತ್ತು.

11 ಆಗ ಆರೋನನು ಮೋಶೆಗೆ, “ಸ್ವಾಮೀ, ನಾವು ಮೂರ್ಖತನದಿಂದ ಮಾಡಿದ ಪಾಪಕ್ಕೆ ದಯವಿಟ್ಟು ನಮ್ಮನ್ನು ದಂಡಿಸಬೇಡ. 12 ಗರ್ಭದಲ್ಲೇ ಅರ್ಧ ಮಾಂಸ ಕೊಳೆತುಹೋಗಿ, ಹುಟ್ಟುವಾಗಲೇ ಸತ್ತ ಮಗುವಿನಂತೆ ಈಕೆಗೆ ಆಗದಂತೆ ದಯವಿಟ್ಟು ಕಾಪಾಡು” ಎಂದು ಬೇಡಿಕೊಂಡನು.

13 ಆದ್ದರಿಂದ ಮೋಶೆ ಯೆಹೋವನಿಗೆ ಪ್ರಾರ್ಥಿಸಿ, “ದೇವರೇ, ದಯಮಾಡಿ ಈಕೆಯನ್ನು ವಾಸಿಮಾಡು” ಎಂದು ಮೊರೆಯಿಟ್ಟನು.

14 ಅದಕ್ಕೆ ಯೆಹೋವನು, “ಆಕೆಯ ತಂದೆ ಮುಖದ ಮೇಲೆ ಉಗುಳಿದ್ದರೆ ಆಕೆ ಏಳು ದಿವಸ ನಾಚಿಕೆಯಿಂದ ಇರುತ್ತಿರಲಿಲ್ಲವೇ? ಹಾಗಾದರೆ ಆಕೆ ಏಳು ದಿವಸ ಪಾಳೆಯದ ಹೊರಗೆ ಇರಬೇಕು. ತರುವಾಯ ಆಕೆ ಪಾಳೆಯದೊಳಗೆ ಬರಬಹುದು” ಎಂದು ಉತ್ತರಿಸಿದನು.

15 ಆದಕಾರಣ ಅವರು ಮಿರ್ಯಾಮಳನ್ನು ಏಳು ದಿವಸಗಳವರೆಗೆ ಪಾಳೆಯದ ಹೊರಗೆ ಇಟ್ಟರು. ಆಕೆ ತಿರುಗಿ ಸೇರಿಕೊಳ್ಳುವ ತನಕ ಇಸ್ರೇಲರು ಪ್ರಯಾಣ ಮಾಡಲಿಲ್ಲ. 16 ಇದಾದನಂತರ, ಜನರು ಹಚೇರೋತಿನಿಂದ ಹೊರಟು ಪಾರಾನ್ ಮರುಭೂಮಿಯಲ್ಲಿ ಪಾಳೆಯ ಮಾಡಿಕೊಂಡರು.

ಗೂಢಚಾರರು ಕಾನಾನ್ ದೇಶಕ್ಕೆ ಹೋದದ್ದು

13 ಯೆಹೋವನು ಮೋಶೆಗೆ, “ಕಾನಾನ್ ದೇಶದ ಬಗ್ಗೆ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಗೂಢಚಾರರನ್ನು ಕಳುಹಿಸು. ನಾನು ಇಸ್ರೇಲರಿಗೆ ಕೊಡುವ ದೇಶ ಇದಾಗಿದೆ. ಹನ್ನೆರಡು ಕುಲಗಳಿಂದ ಒಬ್ಬೊಬ್ಬ ನಾಯಕನನ್ನು ಕಳುಹಿಸು” ಎಂದು ಹೇಳಿದನು.

ಜನರು ಪಾರಾನ್ ಮರುಭೂಮಿಯಲ್ಲಿ ಇಳಿದುಕೊಂಡಿದ್ದಾಗ ಯೆಹೋವನ ಆಜ್ಞೆಗನುಸಾರವಾಗಿ ಮೋಶೆಯು ಈ ನಾಯಕರನ್ನು ಕಳುಹಿಸಿದನು. ಆ ನಾಯಕರು ಯಾರೆಂದರೆ:

ರೂಬೇನ್ ಕುಲದಿಂದ ಜಕ್ಕೂರನ ಮಗನಾದ ಶಮ್ಮೂವ,

ಸಿಮೆಯೋನ್ ಕುಲದಿಂದ ಹೋರಿಯ ಮಗನಾದ ಶಾಫಾಟ್,

ಯೆಹೂದ ಕುಲದಿಂದ ಯೆಫುನ್ನೆಯ ಮಗನಾದ ಕಾಲೇಬ್,

ಇಸ್ಸಾಕಾರ್ ಕುಲದಿಂದ ಯೋಸೇಫನ ಮಗನಾದ ಇಗಾಲ್,

ಎಫ್ರಾಯೀಮ್ ಕುಲದಿಂದ ನೂನನ ಮಗನಾದ ಹೋಶೇಯ,

ಬೆನ್ಯಾಮೀನ್ ಕುಲದಿಂದ ರಾಫೂವನ ಮಗನಾದ ಪಲ್ಟೀ,

10 ಜೆಬುಲೂನ್ ಕುಲದಿಂದ ಸೋದೀಯ ಮಗನಾದ ಗದ್ದೀಯೇಲ್,

11 ಯೋಸೇಫನ ಮಗನಾದ ಮನಸ್ಸೆ ಕುಲದಿಂದ ಸೂಸೀಯ ಮಗನಾದ ಗದ್ದೀ,

12 ದಾನ್ ಕುಲದಿಂದ ಗೆಮಲ್ಲೀಯ ಮಗನಾದ ಅಮ್ಮೀಯೇಲ್,

13 ಆಶೇರ್ ಕುಲದಿಂದ ಮೀಕಾಯೇಲನ ಮಗನಾದ ಸೆತೂರ್,

14 ನಫ್ತಾಲಿ ಕುಲದಿಂದ ವಾಪೆಸೀಯನ ಮಗನಾದ ನಹಬೀ,

15 ಗಾದ್ ಕುಲದಿಂದ ಮಾಕೀಯನ ಮಗನಾದ ಗೆಯೂವೇಲ್.

16 ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಮೋಶೆ ಕಳುಹಿಸಿದ ಗೂಢಚಾರರ ಹೆಸರುಗಳು ಇವೇ. (ಮೋಶೆಯು ನೂನನ ಮಗನಾದ ಹೋಶೇಯನಿಗೆ ಯೆಹೋಶುವನೆಂದು ಹೆಸರಿಟ್ಟನು.)

17 ಕಾನಾನ್ ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬರಲು ಮೋಶೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ಬೆಟ್ಟದ ಸೀಮೆಗೆ ನೆಗೆವ್ ಮೂಲಕ ಹತ್ತಿ ಹೋಗಿ 18 ಆ ದೇಶದ ಸಂಗತಿಯನ್ನೆಲ್ಲಾ ತಿಳಿದುಕೊಳ್ಳಿರಿ. ಅಲ್ಲಿನ ನಿವಾಸಿಗಳು ಬಲಿಷ್ಠರೋ ಅಥವಾ ಬಲಹೀನರೋ, ಬಹಳ ಮಂದಿಯೋ ಅಥವಾ ಸ್ವಲ್ಪ ಮಂದಿಯೋ, 19 ಅವರ ದೇಶ ಒಳ್ಳೆಯದೋ ಅಥವಾ ಕೆಟ್ಟದ್ದೋ, ಅವರ ಪಟ್ಟಣಗಳು ಗೋಡೆಗಳನ್ನು ಹೊಂದಿವೆಯೋ ಅಥವಾ ಇಲ್ಲವೋ, 20 ಭೂಮಿಯು ಸಾರವಾದದ್ದೋ ಅಥವಾ ನಿಸ್ಸಾರವಾದದ್ದೋ, ಮರಗಳನ್ನು ಹೊಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ಅದಲ್ಲದೆ ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಲು ಪ್ರಯತ್ನ ಮಾಡಿ” ಎಂದು ಹೇಳಿದನು. (ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.)

21 ಅವರು ಬೆಟ್ಟದ ಸೀಮೆಗೆ ಹತ್ತಿಹೋಗಿ, ಚಿನ್ ಮರುಭೂಮಿಯಿಂದಿಡಿದು ಲೆಬೊಹಮಾತಿನ ಬಳಿಯಲ್ಲಿರುವ ರೆಹೋಬಿನವರೆಗೂ ದೇಶದ ವಿಷಯಗಳನ್ನು ಸಂಗ್ರಹಿಸಿಕೊಂಡರು. 22 ಅವರು ನೆಗೆವ್ ಮೂಲಕ ದೇಶವನ್ನು ಪ್ರವೇಶಿಸಿ ಹೆಬ್ರೋನಿಗೆ ಹೋದರು. ಹೆಬ್ರೋನ್ ಪಟ್ಟಣವು ಈಜಿಪ್ಟ್ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷಗಳ ಮುಂಚೆ ಕಟ್ಟಲ್ಪಟ್ಟಿತ್ತು. ಅಲ್ಲಿ ಅಹೀಮನ್, ಶೇಫೈ ಮತ್ತು ತಲ್ಮೈ ಎಂಬವರು ವಾಸಿಸುತ್ತಿದ್ದರು. ಇವರು ಅನಾಕನ ಸಂತತಿಯವರು. 23 ಬಳಿಕ ಅವರು ಎಷ್ಕೋಲ್ ಕಣಿವೆಗೆ ಹೋದರು. ಅಲ್ಲಿ ಅವರು ದ್ರಾಕ್ಷಾಲತೆಯಿಂದ ಒಂದು ಕೊಂಬೆಯನ್ನು ಕಡಿದರು. ಆ ಕೊಂಬೆಯಲ್ಲಿ ದ್ರಾಕ್ಷೆಯ ಗೊಂಚಲಿತ್ತು. ಅವರು ಅದನ್ನು ಒಂದು ಕೋಲಿಗೆ ಕಟ್ಟಿ ಇಬ್ಬರು ಅದನ್ನು ಹೊತ್ತುಕೊಂಡು ಬಂದರು. ಕೆಲವು ದಾಳಿಂಬೆ ಹಣ್ಣುಗಳನ್ನು ಮತ್ತು ಅಂಜೂರದ ಹಣ್ಣುಗಳನ್ನು ಹೊತ್ತುತಂದರು. 24 ಇಸ್ರೇಲರು ಅಲ್ಲಿ ದ್ರಾಕ್ಷೆಯ ಗೊಂಚಲನ್ನು ಕತ್ತರಿಸಿದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್ ಕಣಿವೆ ಎಂದು ಹೆಸರಾಯಿತು.

25 ಜನರು ನಲವತ್ತು ದಿನಗಳವರೆಗೆ ದೇಶವನ್ನು ಸಂಚರಿಸಿ ನೋಡಿ, ತಮ್ಮ ಪಾಳೆಯಕ್ಕೆ ಹಿಂತಿರುಗಿದರು. 26 ಇಸ್ರೇಲರು ಪಾರಾನ್ ಮರುಭೂಮಿಯ ಕಾದೇಶಿನಲ್ಲಿ ತಂಗಿದ್ದರು. ಅವರು ನೋಡಿದ್ದರ ಬಗ್ಗೆ ಎಲ್ಲವನ್ನು ಮೋಶೆಗೂ ಆರೋನನಿಗೂ ಎಲ್ಲಾ ಇಸ್ರೇಲರಿಗೂ ತಿಳಿಸಿದರು. ಅವರು ಕಾನಾನ್ ದೇಶದಿಂದ ತಂದ ಹಣ್ಣುಗಳನ್ನು ತೋರಿಸಿದರು. 27 ಜನರು ಮೋಶೆಗೆ, “ನೀನು ಕಳುಹಿಸಿದ ದೇಶಕ್ಕೆ ನಾವು ಹೋಗಿ ಸಂಚರಿಸಿ ನೋಡಿದೆವು. ಅದು ಹಾಲೂ ಜೇನೂ ಹರಿಯುವ ದೇಶವಾಗಿದೆ. ಇಗೋ, ಹಣ್ಣುಗಳಲ್ಲಿ ಕೆಲವು ಇಲ್ಲಿವೆ. 28 ಅಲ್ಲಿನ ಜನರು ಬಲಿಷ್ಠರು. ಪಟ್ಟಣಗಳೂ ಬಹಳ ದೊಡ್ಡದಾಗಿವೆ. ಪಟ್ಟಣಗಳು ಕೋಟೆಕೊತ್ತಲುಗಳುಳ್ಳದಾಗಿವೆ. ನಾವು ಕೆಲವು ಅನಾಕ್ಯರನ್ನು ಸಹ ನೋಡಿದೆವು. 29 ಅಮಾಲೇಕ್ಯರು ನೆಗೆವ್‌ನಲ್ಲಿ ವಾಸಿಸುತ್ತಾರೆ. ಹಿತ್ತಿಯರು, ಯೆಬೂಸಿಯರು ಮತ್ತು ಅಮೋರಿಯರು ಪರ್ವತ ಪ್ರದೇಶದಲ್ಲಿ ವಾಸಿಸುತ್ತಾರೆ. ಕಾನಾನ್ಯರು ಸಮುದ್ರ ತೀರದಲ್ಲಿಯೂ ಮತ್ತು ಯೋರ್ದನ್ ನದಿಯ ಉದ್ದಕ್ಕೂ ವಾಸಿಸುತ್ತಾರೆ” ಎಂದು ಹೇಳಿದರು.

30 ಕಾಲೇಬನು ಮೋಶೆಯ ಬಳಿಯಲ್ಲಿದ್ದ ಗೊಣಗುಟ್ಟುವ ಜನರನ್ನು ಸುಮ್ಮನಿರಿಸಿ, “ನಾವು ಹೋಗಿ ದೇಶವನ್ನು ವಶಪಡಿಸಿಕೊಳ್ಳಬೇಕು. ನಾವು ಸುಲಭವಾಗಿ ದೇಶವನ್ನು ವಶಪಡಿಸಿಕೊಳ್ಳಬಹುದು” ಎಂದು ಹೇಳಿದನು.

31 ಆದರೆ ಅವನೊಡನೆ ಹೋದ ಜನರು, “ನಾವು ಆ ಜನರೊಡನೆ ಹೋರಾಡಲಾರೆವು, ಅವರು ನಮಗಿಂತಲೂ ಬಲಿಷ್ಠರು” ಎಂದು ಹೇಳಿದರು. 32 “ನಾವು ಸಂಚರಿಸಿ ವಿಷಯ ಸಂಗ್ರಹಿಸಿಕೊಂಡು ಬಂದ ದೇಶವು ಅಲ್ಲಿ ವಾಸಿಸುವವರನ್ನು ನಾಶಪಡಿಸುವ ದೇಶವಾಗಿದೆ. ನಾವು ಅಲ್ಲಿ ನೋಡಿದ ಎಲ್ಲಾ ಜನರು ರಾಕ್ಷಸರಂತಿದ್ದಾರೆ. 33 ಪ್ರಚಂಡರಾದ ನೆಫೀಲಿಯರು ಅಲ್ಲಿ ವಾಸವಾಗಿರುವುದನ್ನು ನಾವು ನೋಡಿದೆವು. (ಅನಾಕ್ಯರು ನೆಫೀಲಿಯ ಜನರ ಸಂತತಿಯವರಾಗಿದ್ದಾರೆ.) ಅವರ ಮುಂದೆ ನಾವು ಮಿಡತೆಗಳೊ ಎಂದೆನಿಸಿತು. ಅವರಿಗೂ ಸಹ ನಾವು ಮಿಡತೆಗಳಂತೆ ಕಂಡುಬಂದೆವು” ಎಂದರು.

ಕೀರ್ತನೆಗಳು 49

ರಚನೆಗಾರರು: ಕೋರಹೀಯರು.

49 ಸರ್ವಜನಾಂಗಗಳೇ, ಕೇಳಿರಿ,
    ಭೂನಿವಾಸಿಗಳೆಲ್ಲರೇ, ಆಲಿಸಿರಿ.
    ಸಾಮಾನ್ಯ ಜನರೇ, ಅಧಿಪತಿಗಳೇ, ಬಡವರೇ, ಶ್ರೀಮಂತರೇ, ನೀವೆಲ್ಲರೂ ಒಂದಾಗಿ ಬಂದು ಕೇಳಿರಿ.
ನಾನು ನಿಮಗೆ ಸುಜ್ಞಾನವನ್ನೂ
    ವಿವೇಕವನ್ನೂ ಬೋಧಿಸುವೆನು.
ನಾನು ಅವುಗಳನ್ನು ಕಿವುಗೊಟ್ಟು ಕೇಳಿದ್ದೇನೆ.
    ನಾನು ಹಾರ್ಪ್‌ವಾದ್ಯವನ್ನು ನುಡಿಸುತ್ತಾ ಅವುಗಳನ್ನು ನಿಮಗಾಗಿ ಹಾಡುವೆನು.

ಆಪತ್ತು ಬಂದಾಗ ನಾನೇಕೆ ಭಯಪಡಬೇಕು?
    ದುಷ್ಟರು ನನ್ನನ್ನು ಆವರಿಸಿ ಮೋಸದಿಂದ ಹಿಡಿಯಲು ಪ್ರಯತ್ನಿಸುವಾಗ ನಾನೇಕೆ ಭಯಪಡಬೇಕು?
ಅವರು ತಮ್ಮ ಸ್ವಂತ ಬಲದಲ್ಲಿಯೂ ಐಶ್ವರ್ಯದಲ್ಲಿಯೂ ಭರವಸೆಯಿಟ್ಟಿದ್ದಾರೆ;
    ಅವರು ಬುದ್ಧಿಹೀನರಾಗಿದ್ದಾರೆ.
ಯಾವ ಮಾನವ ಸ್ನೇಹಿತನೂ ನಿನ್ನನ್ನು ರಕ್ಷಿಸಲಾರನು.
    ಅಲ್ಲದೆ ದೇವರಿಗೆ ಈಡನ್ನು ಕೊಟ್ಟು ನಿನ್ನನ್ನು ಬಿಡಿಸಿಕೊಳ್ಳಲಾರನು.
ಸ್ವಂತ ಪ್ರಾಣವನ್ನು ಖರೀದಿಸಲು ಬೇಕಾಗುವಷ್ಟು
    ಹಣ ಯಾವನಿಗೂ ದೊರೆಯುವುದಿಲ್ಲ.
ಸದಾಕಾಲ ಬದುಕುವ ಹಕ್ಕನ್ನು ಖರೀದಿಸಲು
    ಮತ್ತು ತನ್ನ ಸಮಾಧಿಯಲ್ಲಿ ತನ್ನ ಸ್ವಂತ ದೇಹ ಕೊಳೆಯದಂತೆ ಮಾಡಲು
    ಬೇಕಾಗುವಷ್ಟು ಹಣವನ್ನು ಯಾವನೂ ಪಡೆದುಕೊಳ್ಳಲಾರನು.
10 ಬುದ್ಧಿಹೀನರೂ ಮೂಢರೂ ಸಾಯುವಂತೆ ಜ್ಞಾನಿಗಳೂ ಸಾಯುವರು.
    ಅವರು ಸತ್ತಾಗ ಅವರ ಆಸ್ತಿಯು ಬೇರೆಯವರ ಪಾಲಾಗುವುದು.
11 ಸಮಾಧಿಯೇ ಅವರ ಶಾಶ್ವತವಾದ ಹೊಸ ಮನೆ.
    ಅವರೆಷ್ಟೇ ಭೂ ಆಸ್ತಿಯನ್ನು ಹೊಂದಿದ್ದರೂ ಅದರಿಂದೇನೂ ಪ್ರಯೋಜನವಿಲ್ಲ.
12 ಜನರು ಐಶ್ವರ್ಯವಂತರಾಗಿದ್ದರೂ ಭೂಲೋಕದಲ್ಲಿ ಶಾಶ್ವತವಾಗಿ ಇರಲಾಗದು.
    ಎಲ್ಲರೂ ಪ್ರಾಣಿಗಳಂತೆಯೇ ಸಾಯುವರು.
13 ತಮ್ಮ ಐಶ್ವರ್ಯವನ್ನು ಮೆಚ್ಚಿಕೊಂಡಿರುವ
    ಬುದ್ಧಿಹೀನರಿಗೆ ಇದೇ ಗತಿ.
14 ಅವರು ಕುರಿಗಳಂತಿದ್ದಾರೆ. ಸಮಾಧಿಯೇ ಅವರ ಕೊಟ್ಟಿಗೆ.
    ಮರಣವೇ ಅವರ ಕುರುಬ.
ಒಂದು ಮುಂಜಾನೆ, ಅವರ ದೇಹಗಳು ಅವರ ಮನೆಗಳಿಂದ ದೂರವಾಗಿ ಸಮಾಧಿಯಲ್ಲಿ ಕೊಳೆಯುತ್ತಿರಲು,
    ನೀತಿವಂತರು ಜಯಶಾಲಿಗಳಾಗಿರುವರು.

15 ಆದರೆ ದೇವರು ಈಡುಕೊಟ್ಟು ನನ್ನ ಪ್ರಾಣವನ್ನು ರಕ್ಷಿಸುವನು.
    ಆತನು ನನ್ನನ್ನು ತನ್ನೊಂದಿಗಿರಲು ಕೊಂಡೊಯ್ಯುವಾಗ ನನ್ನನ್ನು ಸಮಾಧಿಯ ಬಲದಿಂದ ರಕ್ಷಿಸುವನು.

16 ಜನರು ಐಶ್ವರ್ಯವಂತರಾಗಿದ್ದ ಮಾತ್ರಕ್ಕೆ ನೀವು ಅವರಿಗೆ ಭಯಪಡಬೇಕಿಲ್ಲ.
    ಜನರು ಭವ್ಯವಾದ ಮನೆಗಳಲ್ಲಿದ್ದ ಮಾತ್ರಕ್ಕೆ ನೀವು ಅವರಿಗೆ ಭಯಪಡಬೇಕಿಲ್ಲ.
17 ಅವರು ಸಾಯುವಾಗ ತಮ್ಮೊಂದಿಗೆ ಏನನ್ನೂ ತೆಗೆದುಕೊಂಡು ಹೋಗಲಾರರು.
    ಅವರ ವೈಭವವು ಅವರೊಂದಿಗೆ ಹೋಗಲಾರದು.
18 ಐಶ್ವರ್ಯವಂತನು ತನ್ನ ವಿಷಯದಲ್ಲಿ ಉಬ್ಬಿಕೊಂಡಿದ್ದರೂ
    ಜನರು ಅವನನ್ನು ಹೊಗಳುತ್ತಿದ್ದರೂ
19 ಸತ್ತು ತನ್ನ ಪೂರ್ವಿಕರ ಬಳಿ ಸೇರುವ ಕಾಲ ಅವನಿಗೆ ಬಂದೇ ಬರುವುದು.
    ಅವನು ಹಗಲಿನ ಬೆಳಕನ್ನು ಮತ್ತೆಂದಿಗೂ ನೋಡಲಾರ.
20 ಅರ್ಥಮಾಡಿಕೊಳ್ಳಲಾರದವನು ಎಷ್ಟೇ ಐಶ್ವರ್ಯವಂತನಾಗಿದ್ದರೂ
    ಪ್ರಾಣಿಗಳಂತೆಯೇ ನಾಶವಾಗುವನು.

ಯೆಶಾಯ 2

ಯೆಹೂದ ಮತ್ತು ಜೆರುಸಲೇಮಿಗೆ ದೈವಸಂದೇಶ

ಆಮೋಚನ ಮಗನಾದ ಯೆಶಾಯನು ಯೆಹೂದ ಮತ್ತು ಜೆರುಸಲೇಮಿನ ಬಗ್ಗೆ ನೋಡಿದ ದರ್ಶನ.

ಕೊನೆಯ ದಿನಗಳಲ್ಲಿ ಯೆಹೋವನಾಲಯದ ಪರ್ವತವು
    ಎಲ್ಲಾ ಬೆಟ್ಟಗಳಿಗಿಂತಲೂ ಮಹೋನ್ನತವಾದ ಪರ್ವತವಾಗಿರುವುದು.
ಅಲ್ಲಿಗೆ ಎಲ್ಲಾ ದೇಶಗಳಿಂದ ಜನರು ಸತತವಾಗಿ ತೊರೆಗಳಂತೆ ಬರುವರು.
    ಹೊರಟುಬಂದ ಆ ಜನರು, “ಬನ್ನಿರಿ, ನಾವು ಯೆಹೋವನ ಪರ್ವತಕ್ಕೆ ಹೋಗೋಣ.
    ಯಾಕೋಬನ ದೇವರ ಆಲಯಕ್ಕೆ ಹೋಗೋಣ.
ಆತನು ನಮಗೆ ಜೀವಮಾರ್ಗವನ್ನು ಅಲ್ಲಿ ಬೋಧಿಸುವನು.
    ನಾವು ಆತನನ್ನು ಹಿಂಬಾಲಿಸೋಣ” ಎಂದು ಹೇಳುವರು.

ಯೆಹೋವನ ಸಂದೇಶ, ಬೋಧನೆಗಳು ಜೆರುಸಲೇಮಿನಲ್ಲಿರುವ
    ಚೀಯೋನ್ ಪರ್ವತದಿಂದ ಪ್ರಾರಂಭವಾಗಿ ಇಡೀ ಪ್ರಪಂಚಕ್ಕೆ ಹರಡುವದು.
ಈಗ ಎಲ್ಲಾ ದೇಶಗಳಿಗೆ ದೇವರೇ ನ್ಯಾಯಾಧೀಶನಾಗಿರುವನು.
    ಅನೇಕ ಜನರ ತರ್ಕಗಳನ್ನು ದೇವರು ಕೊನೆಗಾಣಿಸುವನು.
ಆ ಜನರು ಯುದ್ಧಕ್ಕಾಗಿ ಆಯುಧಗಳನ್ನು ಉಪಯೋಗಿಸುವದನ್ನು ನಿಲ್ಲಿಸುವರು;
    ತಮ್ಮ ಖಡ್ಗಗಳಿಂದ ಅವರು ನೇಗಿಲುಗಳನ್ನು ತಯಾರಿಸುವರು;
    ತಮ್ಮ ಬರ್ಜಿಗಳಿಂದ ಸಸಿಗಳನ್ನು ಕೊಯ್ಯುವ ಕುಡುಗೋಲುಗಳನ್ನು ಮಾಡುವರು.
ಪರಸ್ಪರ ಹೊಡೆದಾಡಿಕೊಳ್ಳುವದನ್ನು ಜನಾಂಗಗಳು ನಿಲ್ಲಿಸುವರು.
    ಇನ್ನೆಂದಿಗೂ ಜನಾಂಗಗಳು ಯುದ್ಧಾಭ್ಯಾಸ ತರಬೇತಿಯನ್ನು ಹೊಂದುವುದಿಲ್ಲ.

ಯಾಕೋಬನ ಮನೆತನದವರೇ, ನೀವು ಯೆಹೋವನ ಬೆಳಕನ್ನು ಹಿಂಬಾಲಿಸುವವರಾಗಬೇಕು.

ನೀವು ನಿಮ್ಮ ಜನರನ್ನು ತೊರೆದದ್ದರಿಂದ ನಾನು ನಿಮಗೆ ಹೀಗೆ ಹೇಳಿದೆನು. ಪೂರ್ವದೇಶದ ಜನರಿಗಿರುವ ತಪ್ಪು ತಿಳುವಳಿಕೆಯು ನಿಮ್ಮ ಜನರಲ್ಲಿ ತುಂಬಿಹೋಯಿತು. ಫಿಲಿಷ್ಟಿಯರಂತೆ ನಿಮ್ಮ ಜನರು ಭವಿಷ್ಯ ಹೇಳಲು ಪ್ರಯತ್ನಿಸಿ ಆ ತಪ್ಪು ತಿಳುವಳಿಕೆಗೆ ಮಾರುಹೋದರು. ನಿಮ್ಮ ದೇಶವು ಬೆಳ್ಳಿಬಂಗಾರಗಳಿಂದಲೂ ಮಿತಿಯಿಲ್ಲದ ನಿಕ್ಷೇಪಗಳಿಂದಲೂ ಕುದುರೆಗಳಿಂದಲೂ ಅಸಂಖ್ಯಾತವಾದ ರಥಗಳಿಂದಲೂ ತುಂಬಿಹೋಯಿತು. ನಿಮ್ಮ ದೇಶವು ಕೈಯಿಂದ ಮಾಡಿದ ವಿಗ್ರಹಗಳಿಂದ ತುಂಬಿದ್ದು ಜನರು ಅವುಗಳನ್ನು ಆರಾಧಿಸುತ್ತಾರೆ. ಜನರು ಕೆಟ್ಟದಾರಿಯಲ್ಲಿ ಹೋಗುತ್ತಿದ್ದಾರೆ; ಹೀನಸ್ಥಿತಿಯಲ್ಲಿ ಮುಂದುವರಿಯುತ್ತಿದ್ದಾರೆ. ದೇವರೇ, ನೀನು ಅವರನ್ನು ಖಂಡಿತವಾಗಿಯೂ ಕ್ಷಮಿಸಬೇಡ.

10 ಬಂಡೆಗಳ ಹಿಂಬದಿಯಲ್ಲಿಯೂ ಹೊಲಸಿನಲ್ಲಿಯೂ ಅವಿತುಕೊಳ್ಳಿರಿ. ನೀವು ಯೆಹೋವನಿಗೆ ಭಯಪಟ್ಟು ಆತನ ಮಹಾಶಕ್ತಿಗೆ ಮರೆಯಾಗಿ ಅವಿತುಕೊಳ್ಳಬೇಕು.

11 ಗರ್ವಿಷ್ಠರ ಗರ್ವವು ಕುಗ್ಗಿಸಲ್ಪಡುವುದು; ಅಹಂಕಾರಿಗಳ ಅಹಂಕಾರವು ತಗ್ಗಿಸಲ್ಪಡುವುದು. ಆ ಸಮಯದಲ್ಲಿ ಯೆಹೋವನೊಬ್ಬನೇ ಉನ್ನತೋನ್ನತವಾಗಿರುವನು.

12 ಸರ್ವಶಕ್ತನಾದ ಯೆಹೋವನು ಒಂದು ವಿಶೇಷ ದಿನವನ್ನು ಯೋಜಿಸಿರುತ್ತಾನೆ. ಆ ದಿನದಲ್ಲಿ ಯೆಹೋವನು ಅಹಂಕಾರಿಗಳನ್ನೂ ಜಂಬಕೊಚ್ಚಿಕೊಳ್ಳುವವರನ್ನೂ ಶಿಕ್ಷಿಸುವನು. ಆಗ ಆ ಅಹಂಕಾರಿಗಳನ್ನು ಜನರು ದೊಡ್ಡಜನರೆಂದು ಪರಿಗಣಿಸುವುದಿಲ್ಲ. 13 ಆ ಅಹಂಕಾರದ ಜನರು ಲೆಬನೋನಿನ ದೇವದಾರು ಮರಗಳಂತಿರುವರು. ಬಾಷಾನಿನ ಮಹಾದೇವದಾರು ಮರಗಳಂತಿರುವರು. ಆದರೆ ಯೆಹೋವನು ಅವರನ್ನು ಶಿಕ್ಷಿಸುವನು. 14 ಆ ಅಹಂಕಾರಿಗಳು ಉನ್ನತವಾದ ಪರ್ವತಗಳಂತೆಯೂ, ಎತ್ತರವಾದ ಬೆಟ್ಟಗಳಂತೆಯೂ ಇದ್ದಾರೆ. 15 ಅವರು ಎತ್ತರವಾದ ಬುರುಜುಗಳಂತೆಯೂ ಬಲಿಷ್ಠವಾದ ಕೋಟೆಗೋಡೆಯಂತೆಯೂ ಇರುವರು. ಆದರೆ ದೇವರು ಅವರನ್ನು ಶಿಕ್ಷಿಸುವನು. 16 ಆ ಅಹಂಕಾರಿಗಳು ತಾರ್ಷೀಷಿನ ದೊಡ್ಡ ಹಡಗುಗಳಂತಿದ್ದಾರೆ. ಈ ಹಡಗುಗಳಲ್ಲಿ ಶ್ರೇಷ್ಠವಾದ ವಸ್ತುಗಳು ತುಂಬಿವೆ. ಆದರೆ ದೇವರು ಆ ಅಹಂಕಾರಿಗಳನ್ನು ಶಿಕ್ಷಿಸುವನು.

17 ಆ ಸಮಯದಲ್ಲಿ ಜನರು ತಮ್ಮ ಅಹಂಕಾರವನ್ನು ತೋರಿಸುವುದಿಲ್ಲ. ಈಗ ಅಹಂಕಾರಿಗಳಾಗಿರುವವರು ನೆಲದತನಕ ಬಗ್ಗಿಹೋಗುವರು. ಆ ಸಮಯದಲ್ಲಿ ಯೆಹೋವನೊಬ್ಬನೇ ಉನ್ನತೋನ್ನತವಾಗಿರುವನು. 18 ಎಲ್ಲಾ ವಿಗ್ರಹಗಳು ಇಲ್ಲವಾಗುವವು. 19 ಜನರು ಬಂಡೆಗಳ ಸಂದುಗಳಲ್ಲಿಯೂ ನೆಲದ ಬಿರುಕುಗಳಲ್ಲಿಯೂ ಅಡಗಿಕೊಳ್ಳುವರು. ಜನರು ಯೆಹೋವನಿಗೂ ಆತನ ಪರಾಕ್ರಮಕ್ಕೂ ಭಯಪಡುವರು. ಯೆಹೋವನು ಎದ್ದು ಈ ಪ್ರಪಂಚವನ್ನು ಅಲುಗಾಡಿಸುವಾಗ ಇವೆಲ್ಲಾ ಸಂಭವಿಸುವವು.

20 ಆ ಸಮಯದಲ್ಲಿ ಜನರು ತಮ್ಮ ಬೆಳ್ಳಿಬಂಗಾರಗಳ ವಿಗ್ರಹಗಳನ್ನೆತ್ತಿ ಬಿಸಾಡಿಬಿಡುವರು. ಈ ವಿಗ್ರಹಗಳನ್ನು ಜನರು ಪೂಜಿಸುವದಕ್ಕಾಗಿ ಮಾಡಿಕೊಂಡರು. ಬಾವಲಿಗಳೂ, ಇಲಿಗಳೂ ವಾಸಿಸುವ ಸಂದುಗಳಲ್ಲಿ ಈ ವಿಗ್ರಹಗಳನ್ನು 21 ಜನರು ಬಿಸಾಡಿ, ಸಂದುಗೊಂದುಗಳಲ್ಲಿ ಅಡಗಿಕೊಳ್ಳುವರು. ಯೆಹೋವನಿಗೂ ಆತನ ಮಹಾಶಕ್ತಿಗೂ ಹೆದರಿ ಅವರು ಹಾಗೆ ಮಾಡುವರು. ಯೆಹೋವನು ಎದ್ದು ಭೂಮಿಯನ್ನು ಅಲುಗಾಡಿಸುವ ಸಮಯದಲ್ಲಿ ಇವೆಲ್ಲಾ ಸಂಭವಿಸುವವು.

22 ನಿಮ್ಮ ರಕ್ಷಣೆಗಾಗಿ ನೀವು ಇತರರ ಮೇಲೆ ನಂಬಿಕೆ ಇಡಕೂಡದು. ಅವರು ಕೇವಲ ಸಾಯುವ ಮನುಷ್ಯರಷ್ಟೇ. ಆದ್ದರಿಂದ ಅವರನ್ನು ನೀವು ದೇವರಂತೆ ಬಲಿಷ್ಠರೆಂದು ನೆನಸಬಾರದು.

ಇಬ್ರಿಯರಿಗೆ 10

ಕ್ರಿಸ್ತನ ಯಜ್ಞವು ನಮ್ಮನ್ನು ನಿಷ್ಕಳಂಕರನ್ನಾಗಿ ಮಾಡುವುದು

10 ಧರ್ಮಶಾಸ್ತ್ರವು ಮುಂದೆ ಬರುವ ಉತ್ತಮ ಸಂಗತಿಗಳ ಅಸ್ಪಷ್ಟ ಚಿತ್ರಣವಾಗಿದೆ. ಅದು ನಿಜವಾದ ಸಂಗತಿಗಳ ಸ್ಪಷ್ಟ ಚಿತ್ರಣವಲ್ಲ. ಪ್ರತಿ ವರ್ಷವೂ ಒಂದೇ ರೀತಿಯ ಯಜ್ಞಗಳನ್ನು ಅರ್ಪಿಸಬೇಕೆಂದು ಅದು ಜನರಿಗೆ ತಿಳಿಸಿತು. ದೇವರನ್ನು ಆರಾಧಿಸಲು ಬರುವ ಜನರು ಅದೇ ರೀತಿಯ ಯಜ್ಞಗಳನ್ನು ಅರ್ಪಿಸುತ್ತಿದ್ದರು. ಆದರೆ ಆ ಜನರನ್ನು ಧರ್ಮಶಾಸ್ತ್ರವು ಎಂದಿಗೂ ನಿಷ್ಕಳಂಕರನ್ನಾಗಿ ಮಾಡಲಿಲ್ಲ. ಅದು ಜನರನ್ನು ನಿಷ್ಕಳಂಕರನ್ನಾಗಿ ಮಾಡಿದ್ದರೆ, ಆ ಯಜ್ಞಗಳು ಈಗಾಗಲೇ ನಿಂತುಹೋಗುತ್ತಿದ್ದವು. ಆ ಜನರು ಆಗಲೇ ತಮ್ಮ ಪಾಪಗಳಿಂದ ಬಿಡುಗಡೆ ಹೊಂದಿ ಪರಿಶುದ್ಧರಾಗುತ್ತಿದ್ದರು. ತಾವು ಪಾಪಿಗಳೆಂಬ ಅರಿವು ಅವರಿಗಿರುತ್ತಿರಲಿಲ್ಲ. ಆ ಜನರು ಪ್ರತಿವರ್ಷ ಅರ್ಪಿಸುತ್ತಿದ್ದ ಯಜ್ಞಗಳು ಅವರ ಪಾಪಗಳನ್ನು ನೆನಪಿಗೆ ತರುತ್ತಿದ್ದವು. ಏಕೆಂದರೆ ಅವರ ಪಾಪಗಳನ್ನು ತೆಗೆದುಹಾಕಲು ಹೋರಿಗಳ ಮತ್ತು ಹೋತಗಳ ರಕ್ತಕ್ಕೆ ಸಾಧ್ಯವಿರಲಿಲ್ಲ.

ಕ್ರಿಸ್ತನು ಈ ಲೋಕದಲ್ಲಿ ಪ್ರತ್ಯಕ್ಷನಾದಾಗ ಹೇಳಿದ್ದೇನೆಂದರೆ:

“ದೇವರೇ, ನಿನಗೆ ಯಜ್ಞನೈವೇದ್ಯಗಳು ಬೇಕಾಗಿಲ್ಲ.
    ಆದರೆ ನೀನು ನನಗಾಗಿ ಒಂದು ದೇಹವನ್ನು ಸಿದ್ಧಮಾಡಿಕೊಟ್ಟಿರುವೆ.
ನೀನು ಸರ್ವಾಂಗಹೋಮಗಳಲ್ಲಿಯೂ
    ಪಾಪಪರಿಹಾರಕ ಯಜ್ಞಗಳಲ್ಲಿಯೂ ಸಂತೋಷಪಡಲಿಲ್ಲ.
ಆಗ ನಾನು, ‘ದೇವರೇ, ನಾನು ಇಲ್ಲಿದ್ದೇನೆ.
    ಧರ್ಮಶಾಸ್ತ್ರದಲ್ಲಿ ನನ್ನ ಬಗ್ಗೆ ಬರೆದಿರುವಂತೆಯೇ
    ನಿನ್ನ ಚಿತ್ತಕ್ಕನುಸಾರವಾಗಿ ಮಾಡಲು ನಾನು ಬಂದಿದ್ದೇನೆ’ ಎಂದು ಹೇಳಿದೆ.”(A)

ಈ ಪವಿತ್ರ ಗ್ರಂಥದಲ್ಲಿ ಕ್ರಿಸ್ತನು ಮೊದಲನೆಯದಾಗಿ ಹೇಳಿದ್ದೇನೆಂದರೆ: “ನಿನಗೆ ಯಜ್ಞನೈವೇದ್ಯಗಳು ಬೇಕಾಗಿಲ್ಲ. ನೀನು ಸರ್ವಾಂಗಹೋಮಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ಸಂತೋಷಪಡಲಿಲ್ಲ.” (ಇವುಗಳೆಲ್ಲ ಧರ್ಮಶಾಸ್ತ್ರವು ಆಜ್ಞಾಪಿಸುವ ಯಜ್ಞಗಳು.) ನಂತರ ಕ್ರಿಸ್ತನು ಹೇಳಿದ್ದೇನೆಂದರೆ, “ದೇವರೇ, ನಾನು ಇಲ್ಲಿದ್ದೇನೆ. ನಿನ್ನ ಚಿತ್ತಕ್ಕನುಸಾರವಾಗಿ ಮಾಡಲು ನಾನು ಬಂದಿದ್ದೇನೆ.”(B) ಆದ್ದರಿಂದ ದೇವರು ಯಜ್ಞಗಳ ಮೊದಲನೆ ವ್ಯವಸ್ಥೆಯನ್ನು ಕೊನೆಗೊಳಿಸಿ, ತನ್ನ ಹೊಸ ಮಾರ್ಗವನ್ನು ಆರಂಭಿಸಿದ್ದಾನೆ. 10 ದೇವರ ಇಷ್ಟಕ್ಕನುಸಾರವಾದ ಕಾರ್ಯಗಳನ್ನು ಯೇಸು ಕ್ರಿಸ್ತನು ಮಾಡಿದನು. ಆ ಕಾರಣದಿಂದಲೇ, ಯಜ್ಞವಾಗಿ ಅರ್ಪಿತವಾದ ಆತನ ದೇಹದ ಮೂಲಕ ನಾವು ಪರಿಶುದ್ಧರಾದೆವು. ಆತನು ಶಾಶ್ವತವಾದ ಯಜ್ಞವನ್ನು ಒಂದೇ ಸಲ ಅರ್ಪಿಸಿದನು.

11 ಪ್ರತಿದಿನವೂ ಯಾಜಕರು ನಿಂತುಕೊಂಡು ತಮ್ಮ ಧಾರ್ಮಿಕ ಸೇವೆಯನ್ನು ಮಾಡುತ್ತಾರೆ. ಅವರು ಮತ್ತೆಮತ್ತೆ ಅದೇ ಯಜ್ಞಗಳನ್ನು ಅರ್ಪಿಸುತ್ತಾರೆ. ಆದರೆ ಅವರ ಪಾಪಗಳನ್ನು ತೆಗೆದುಹಾಕಲು ಯಜ್ಞಗಳಿಗೆ ಎಂದಿಗೂ ಸಾಧ್ಯವಿಲ್ಲ. 12 ಆದರೆ ಕ್ರಿಸ್ತನು ಪಾಪಗಳಿಗಾಗಿ ಶಾಶ್ವತವಾದ ಒಂದೇ ಯಜ್ಞವನ್ನು ಅರ್ಪಿಸಿದನು. ನಂತರ ಆತನು ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 13 ಶತ್ರುಗಳನ್ನು ತನ್ನ ಪಾದಪೀಠವನ್ನಾಗಿ ಮಾಡುವ ತನಕ ಕ್ರಿಸ್ತನು ಕಾಯುತ್ತಿದ್ದಾನೆ. 14 ಒಂದೇ ಯಜ್ಞದ ಮೂಲಕ ಆತನು ತನ್ನ ಜನರನ್ನು ಎಂದೆಂದಿಗೂ ನಿಷ್ಕಳಂಕರನ್ನಾಗಿ ಮಾಡಿದನು. ಪರಿಶುದ್ಧರಾಗಿ ಮಾಡಲ್ಪಡುತ್ತಿರುವ ಜನರೇ ಇವರು.

15 ಪವಿತ್ರಾತ್ಮನು ನಮಗೆ ಇದರ ಬಗ್ಗೆ ತಿಳಿಸಿದ್ದಾನೆ. ಮೊದಲನೆಯದಾಗಿ ಆತನು ಹೇಳುವುದೇನೆಂದರೆ:

16 “ಮುಂದಿನ ಕಾಲದಲ್ಲಿ ನಾನು ನನ್ನ ಜನರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿದೆ ಎಂದು ಪ್ರಭುವು ಹೇಳುತ್ತಾನೆ:
ನಾನು ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ಇಡುವೆನು;
    ಅವರ ಮನಸ್ಸಿನ ಮೇಲೆ ಬರೆಯುವೆನು.”(C)

17 ನಂತರ ಆತನು ಹೇಳುವುದೇನೆಂದರೆ:

“ನಾನು ಅವರ ಪಾಪಗಳನ್ನು ಮತ್ತು ಅವರ ಕೆಟ್ಟಕಾರ್ಯಗಳನ್ನು ಕ್ಷಮಿಸುತ್ತೇನೆ.
    ಅವುಗಳನ್ನು ಮತ್ತೆಂದಿಗೂ ನೆನಪು ಮಾಡಿಕೊಳ್ಳುವುದಿಲ್ಲ.”(D)

18 ಈ ಪಾಪಗಳೆಲ್ಲಾ ಕ್ಷಮಿಸಲ್ಪಟ್ಟ ಮೇಲೆ, ಅವುಗಳಿಗಾಗಿ ಮತ್ತೆ ಯಜ್ಞಗಳನ್ನು ಅರ್ಪಿಸುವುದು ಅಗತ್ಯವಿಲ್ಲ.

ಸಮೀಪಕ್ಕೆ ಬನ್ನಿರಿ

19-20 ಸಹೋದರ ಸಹೋದರಿಯರೇ, ನಾವು ಮಹಾ ಪವಿತ್ರಸ್ಥಳವನ್ನು ಪ್ರವೇಶಿಸಲು ಸಂಪೂರ್ಣವಾಗಿ ಸ್ವತಂತ್ರರಾಗಿದ್ದೇವೆ. ಯೇಸು ನಮಗಾಗಿ ತೆರೆದಿರುವ ಹೊಸ ಮಾರ್ಗದ ಮೂಲಕ ನಾವು ಭಯವಿಲ್ಲದೆ ಪ್ರವೇಶಿಸಬಹುದು. ಅದು ಜೀವವುಳ್ಳ ಮಾರ್ಗ. ಕ್ರಿಸ್ತನ ದೇಹವೆಂಬ ತೆರೆಯ ಮೂಲಕ ಈ ಹೊಸ ಮಾರ್ಗವು ನಮ್ಮನ್ನು ಮುಂದಕ್ಕೆ ಕೊಂಡೊಯ್ಯವುದು. 21 ದೇವರ ಮನೆಯನ್ನು ಆಳಲು ನಮಗೊಬ್ಬ ಶ್ರೇಷ್ಠ ಯಾಜಕನಿರುವನು. 22 ನಾವು ತೊಳೆಯಲ್ಪಟ್ಟವರಾಗಿದ್ದು ಕೆಟ್ಟ ಮನಸ್ಸಾಕ್ಷಿಯಿಂದ ಬಿಡುಗಡೆ ಹೊಂದಿದ್ದೇವೆ. ನಮ್ಮ ದೇಹಗಳನ್ನು ಶುದ್ಧವಾದ ನೀರಿನಿಂದ ತೊಳೆಯಲಾಗಿದೆ. ಆದ್ದರಿಂದ ಪೂರ್ಣನಂಬಿಕೆಯಿಂದಲೂ ಶುದ್ಧವಾದ ಹೃದಯದಿಂದಲೂ ದೇವರ ಬಳಿಗೆ ಬರೋಣ. 23 ನಮ್ಮಲ್ಲಿರುವ ನಿರೀಕ್ಷೆಯನ್ನು ದೃಢವಾಗಿ ಕಾಯ್ದುಕೊಂಡು ಅದರ ಬಗ್ಗೆ ಜನರಿಗೆ ತಿಳಿಸುವುದರಲ್ಲಿ ದೃಢವಾಗಿರೋಣ. ದೇವರು ತನ್ನ ವಾಗ್ದಾನವನ್ನು ಈಡೇರಿಸುತ್ತಾನೆ ಎಂಬ ಭರವಸೆ ನಮ್ಮಲ್ಲಿರಬೇಕು.

ಒಬ್ಬರಿಗೊಬ್ಬರು ಸಹಾಯಮಾಡಿ ಶಕ್ತಿಯುಳ್ಳವರಾಗಿರಿ

24 ಒಬ್ಬರಿಗೊಬ್ಬರು ಹಿತಚಿಂತಕರಾಗಿರೋಣ. ಆಗ ಒಬ್ಬರಿಗೊಬ್ಬರು ಪ್ರೀತಿಯನ್ನು ತೋರ್ಪಡಿಸುವುದಕ್ಕೂ ಒಳ್ಳೆಯಕಾರ್ಯಗಳನ್ನು ಮಾಡುವುದಕ್ಕೂ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. 25 ನಾವು ಸಭೆಯಾಗಿ ಸೇರಿಬರುವುದನ್ನು ಬಿಡಬಾರದು. ಕೆಲವರು ಸಭೆಗೆ ಬರುತ್ತಿಲ್ಲ. ನಾವು ಒಟ್ಟಾಗಿ ಸೇರಿಬಂದು ಒಬ್ಬರನ್ನೊಬ್ಬರು ಬಲಪಡಿಸಬೇಕು. ಯೇಸುವು ಪ್ರತ್ಯಕ್ಷನಾಗುವ ದಿನ[a] ಸಮೀಪವಾಗುತ್ತಿರುವುದರಿಂದ ನೀವು ಇದನ್ನು ಮತ್ತಷ್ಟು ಹೆಚ್ಚಾಗಿ ಮಾಡಬೇಕು.

ಕ್ರಿಸ್ತನಿಂದ ದೂರ ಸರಿಯದಿರಿ

26 ನಾವು ಸತ್ಯವನ್ನು ತಿಳಿದುಕೊಂಡ ಮೇಲೆಯೂ ಪಾಪಗಳನ್ನು ಮಾಡುತ್ತಲೇ ಇದ್ದರೆ, ನಮ್ಮ ಪಾಪಗಳನ್ನು ಯಾವ ಯಜ್ಞವೂ ಪರಿಹರಿಸುವುದಿಲ್ಲ. 27 ನಾವು ಪಾಪಗಳಲ್ಲಿಯೇ ಮುಂದುವರಿದರೆ, ನ್ಯಾಯತೀರ್ಪಿನ ಭಯದಲ್ಲಿ ಮತ್ತು ದೇವರ ವಿರುದ್ಧವಾಗಿ ಜೀವಿಸುವವರನ್ನು ದಹಿಸುವ ಭಯಂಕರ ಬೆಂಕಿಯ ಭಯದಲ್ಲಿ ಜೀವಿಸಬೇಕಾಗುತ್ತದೆ. 28 ಮೋಶೆಯ ನಿಯಮಗಳಿಗೆ ಅವಿಧೇಯನಾದ ವ್ಯಕ್ತಿಯು ಇಬ್ಬರು ಅಥವಾ ಮೂವರು ಸಾಕ್ಷಿಗಳಿಂದ ತಪ್ಪಿತಸ್ಥನೆಂದು ನಿರ್ಧರಿಸಲ್ಪಟ್ಟರೆ, ಅವನಿಗೆ ಕ್ಷಮೆ ದೊರೆಯುತ್ತಿರಲಿಲ್ಲ. ಅವನನ್ನು ಕೊಂದುಹಾಕುತ್ತಿದ್ದರು. 29 ಹೀಗಿರಲು ದೇವರ ಮಗನನ್ನು ದ್ವೇಷಿಸುವ ಒಬ್ಬ ವ್ಯಕ್ತಿಯನ್ನು ಏನು ಮಾಡಬೇಕೆಂದು ನೀವು ಆಲೋಚಿಸುವಿರಿ? ನಿಜವಾಗಿಯೂ ಆ ವ್ಯಕ್ತಿಗೆ ಇದಕ್ಕಿಂತಲೂ ತೀವ್ರವಾದ ದಂಡನೆಯನ್ನು ವಿಧಿಸಬೇಕಲ್ಲವೇ? ಹೌದು, ಹೊಸ ಒಡಂಬಡಿಕೆಯ ರಕ್ತಕ್ಕೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ಕ್ರೂರವಾದ ದಂಡನೆಯಾಗಬೇಕು. ಆ ರಕ್ತವು ಅವನನ್ನು ಪವಿತ್ರನನ್ನಾಗಿಸಿತು. ದೇವರಾತ್ಮನ ಕೃಪೆಗೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ತೀವ್ರವಾದ ದಂಡನೆಯಾಗಬೇಕು. 30 “ಜನರು ಮಾಡುವ ತಪ್ಪು ಕಾರ್ಯಗಳಿಗಾಗಿ ನಾನು ಅವರನ್ನು ದಂಡಿಸುತ್ತೇನೆ. ನಾನು ಮುಯ್ಯಿಗೆ ಮುಯ್ಯಿ ತೀರಿಸುತ್ತೇನೆ.”(E) ಎಂದು ದೇವರು ಹೇಳಿದ್ದು ನಮಗೆ ತಿಳಿದೇ ಇದೆ. 31 “ಪ್ರಭುವು ತನ್ನ ಜನರಿಗೆ ನ್ಯಾಯತೀರ್ಪು ನೀಡುತ್ತಾನೆ” ಎಂದು ಸಹ ದೇವರು ಹೇಳಿದ್ದಾನೆ. ಜೀವಸ್ವರೂಪನಾದ ದೇವರ ಹಿಡಿತಕ್ಕೆ ಸಿಕ್ಕಿ ಬೀಳುವುದು ಪಾಪಿಗೆ ಭಯಂಕರವಾಗಿದೆ.

ನಿಮ್ಮಲ್ಲಿರುವ ಸಂತೋಷ ಮತ್ತು ಧೈರ್ಯಗಳನ್ನು ಬಿಡಬೇಡಿ

32 ನೀವು ಸತ್ಯವನ್ನು ತಿಳಿದುಕೊಂಡ ಆ ದಿನಗಳನ್ನು ನೆನಪು ಮಾಡಿಕೊಳ್ಳಿ. ನೀವು ಅನೇಕ ಸಂಕಟಗಳಲ್ಲಿ ಹೋರಾಟ ಮಾಡಿದರೂ, ಧೃತಿಗೆಡದೆ ಮುಂದುವರಿದಿರಿ. 33 ಕೆಲವು ಸಂದರ್ಭಗಳಲ್ಲಿ ಜನರು ನಿಮಗೆ ದ್ವೇಷಮಯ ಸಂಗತಿಗಳನ್ನು ಹೇಳಿದರು ಹಾಗೂ ಅನೇಕ ಜನರ ಮುಂದೆ ನಿಮ್ಮನ್ನು ಹಿಂಸಿಸಿದರು. ಅದೇ ರೀತಿಯ ಹಿಂಸೆಗೆ ಗುರಿಯಾಗಿದ್ದ ಜನರಿಗೆ ಕೆಲವು ಸಂದರ್ಭಗಳಲ್ಲಿ ಸಹಾಯ ಮಾಡಿದಿರಿ. 34 ಹೌದು, ಸೆರೆಯಲ್ಲಿರುವ ಜನರಿಗೆ ಸಹಾಯ ಮಾಡಿದಿರಿ ಮತ್ತು ಅವರ ಸಂಕಟಗಳಲ್ಲಿ ಪಾಲ್ಗೊಂಡಿರಿ. ನಿಮ್ಮ ಸ್ವತ್ತುಗಳನ್ನೆಲ್ಲ ನಿಮ್ಮಿಂದ ಕಿತ್ತುಕೊಂಡು ಹೋದಾಗಲೂ ಸಂತೋಷದಿಂದಲೇ ಇದ್ದಿರಿ. ಅದಕ್ಕಿಂತಲೂ ಉತ್ತಮವಾದದ್ದೂ ಶಾಶ್ವತವಾದದ್ದೂ ನಿಮಗೆ ದೊರೆತಿದೆ ಎಂದು ನಿಮಗೆ ತಿಳಿದಿದ್ದ ಕಾರಣ ನೀವು ಸಂತೋಷವಾಗಿದ್ದಿರಿ.

35 ಹಿಂದೆ ಹೊಂದಿದ್ದ ಧೈರ್ಯವನ್ನು ಬಿಟ್ಟುಬಿಡಬೇಡಿ. ನಿಮ್ಮ ಧೈರ್ಯಕ್ಕೆ ತಕ್ಕ ಪ್ರತಿಫಲವು ಸಿಗುತ್ತದೆ. 36 ನೀವು ತಾಳ್ಮೆಯಿಂದಿರಬೇಕು, ನೀವು ದೇವರ ಚಿತ್ತಾನುಸಾರವಾಗಿ ಮಾಡಿದ ನಂತರ ಆತನ ವಾಗ್ದಾನದಂತೆ ನಿಮಗೆ ಪ್ರತಿಫಲವು ಸಿಕ್ಕೇ ಸಿಗುತ್ತದೆ. 37 ಆತನು ಹೀಗೆ ಹೇಳುತ್ತಾನೆ:

“ಸ್ವಲ್ಪಕಾಲದಲ್ಲಿಯೇ, ಬರುವಾತನು ಬರುತ್ತಾನೆ.
    ಆತನು ತಡಮಾಡುವುದಿಲ್ಲ.
38 ನೀತಿವಂತನು ನಂಬಿಕೆಯಿಂದಲೇ
    ಜೀವವನ್ನು ಹೊಂದಿಕೊಳ್ಳುವನು.
ಆದರೆ ಅವನು ಭಯದಿಂದ ಹಿಂಜರಿದರೆ
    ನಾನು ಅವನಲ್ಲಿ ಸಂತೋಷಪಡುವುದಿಲ್ಲ.”(F)

39 ಆದರೆ ನಾವು ಹಿಂಜರಿಯುವ ಜನರಲ್ಲ, ನಾಶವಾಗುವ ಜನರೂ ಅಲ್ಲ. ನಾವು ನಂಬಿಕೆಯುಳ್ಳವರಾಗಿದ್ದೇವೆ ಮತ್ತು ರಕ್ಷಣೆ ಹೊಂದಿದವರಾಗಿದ್ದೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International