M’Cheyne Bible Reading Plan
ಹೊಸ ಕಲ್ಲಿನ ಹಲಿಗೆಗಳು
34 ತರುವಾಯ ಯೆಹೋವನು ಮೋಶೆಗೆ, “ಒಡೆದುಹೋದ ಮೊದಲಿನ ಎರಡು ಕಲ್ಲಿನ ಹಲಿಗೆಗಳಂತೆ ಇನ್ನೆರಡು ಕಲ್ಲಿನ ಹಲಿಗೆಗಳನ್ನು ಮಾಡು. ಮೊದಲಿನ ಕಲ್ಲುಗಳಲ್ಲಿ ಬರೆದಿದ್ದ ಮಾತುಗಳನ್ನೇ ನಾನು ಈ ಕಲ್ಲುಗಳ ಮೇಲೆ ಬರೆಯುವೆನು. 2 ನಾಳೆ ಮುಂಜಾನೆ ಸೀನಾಯಿ ಬೆಟ್ಟಕ್ಕೇರಿ ಬಾ. ಬೆಟ್ಟದ ಮೇಲೆ ನನ್ನೆದುರಿನಲ್ಲಿ ನಿಂತುಕೊ. 3 ನಿನ್ನೊಂದಿಗೆ ಯಾರೂ ಬರಕೂಡದು. ಬೆಟ್ಟದ ಯಾವ ಸ್ಥಳದಲ್ಲಿಯೂ ಯಾರೂ ಕಾಣಿಸಬಾರದು. ನಿಮ್ಮ ಪಶುಗಳಾಗಲಿ ಕುರಿಮಂದೆಗಳಾಗಲಿ ಬೆಟ್ಟದ ಬುಡದಲ್ಲಿ ಹುಲ್ಲು ಮೇಯಕೂಡದು” ಎಂದು ಹೇಳಿದನು.
4 ಆದ್ದರಿಂದ ಮೋಶೆ ಮೊದಲಿನ ಎರಡು ಕಲ್ಲುಗಳಂತೆ ಇನ್ನೆರಡು ಕಲ್ಲಿನ ಹಲಿಗೆಗಳನ್ನು ಮಾಡಿದನು. ಬಳಿಕ ಮರುದಿನ ಮುಂಜಾನೆ ಬೇಗನೆ ಸೀನಾಯಿ ಬೆಟ್ಟವನ್ನೇರಿದನು. ಯೆಹೋವನು ಆಜ್ಞಾಪಿಸಿದಂತೆ ಮೋಶೆಯು ಪ್ರತಿಯೊಂದನ್ನು ಮಾಡಿದನು. ಮೋಶೆಯು ಎರಡು ಕಲ್ಲಿನ ಹಲಿಗೆಗಳನ್ನು ಹಿಡಿದುಕೊಂಡು ಹೋದನು. 5 ಮೋಶೆಯು ಬೆಟ್ಟವನ್ನೇರಿ ಹೋದನಂತರ ಯೆಹೋವನು ಮೇಘದಲ್ಲಿ ಅವನ ಬಳಿಗೆ ಇಳಿದುಬಂದನು. ಯೆಹೋವನು ಮೋಶೆಯೊಡನೆ ಅಲ್ಲಿ ನಿಂತನು ಮತ್ತು ಮೋಶೆಯು ಯೆಹೋವನ ಹೆಸರನ್ನು ಕರೆದನು.[a] 6 ಯೆಹೋವನು ಮೋಶೆಯ ಮುಂದೆ ಹಾದುಹೋಗುತ್ತಾ, “ದೇವರಾದ ಯೆಹೋವನು ದಯೆಯೂ ಕನಿಕರವೂ ಉಳ್ಳ ದೇವರಾಗಿದ್ದಾನೆ. ಯೆಹೋವನು ಕೋಪಗೊಳ್ಳುವುದರಲ್ಲಿ ನಿಧಾನವಾಗಿದ್ದಾನೆ. ಯೆಹೋವನು ಮಹಾ ಪ್ರೀತಿಸ್ವರೂಪನಾಗಿದ್ದಾನೆ. ಯೆಹೋವನು ಭರವಸೆಗೆ ಯೋಗ್ಯನಾಗಿದ್ದಾನೆ. 7 ಯೆಹೋವನು ಸಾವಿರಾರು ತಲೆಗಳವರೆಗೆ ತನ್ನ ದಯೆ ತೋರಿಸುತ್ತಾನೆ. ಜನರು ಮಾಡುವ ಪಾಪಗಳನ್ನು ಯೆಹೋವನು ಕ್ಷಮಿಸುತ್ತಾನೆ. ಆದರೆ ಅಪರಾಧಿಗಳನ್ನು ಶಿಕ್ಷಿಸುವುದಕ್ಕೆ ಆತನು ಮರೆಯುವುದಿಲ್ಲ. ಯೆಹೋವನು ಅಪರಾಧಿಗಳನ್ನು ಶಿಕ್ಷಿಸುವನು ಮತ್ತು ಅವರ ಅಪರಾಧದ ಫಲವು ಅವರ ಮಕ್ಕಳ ಮೇಲೂ ಮೊಮ್ಮಕ್ಕಳ ಮೇಲೂ ಮತ್ತು ಮರಿಮೊಮ್ಮಕ್ಕಳ ಮೇಲೂ ಬರುವಂತೆ ಮಾಡುವನು” ಎಂದು ಹೇಳಿದನು.
8 ಕೂಡಲೆ ಮೋಶೆಯು ನೆಲದ ಮೇಲೆ ಅಡ್ಡಬಿದ್ದು ಯೆಹೋವನನ್ನು ಆರಾಧಿಸಿದನು. 9 ಮೋಶೆಯು, “ಯೆಹೋವನೇ, ನಿನ್ನ ದಯೆ ನನಗೆ ದೊರಕುವುದಾದರೆ, ದಯವಿಟ್ಟು ನಮ್ಮೊಂದಿಗೆ ಬಾ. ಇವರು ಅವಿಧೇಯರಾದ ಜನರೆಂದು ನಾನು ಬಲ್ಲೆನು. ಆದರೆ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮನ್ನು ನಿನ್ನ ಜನರನ್ನಾಗಿ ಸ್ಪೀಕರಿಸು” ಎಂದು ಬೇಡಿಕೊಂಡನು.
10 ಆಗ ಯೆಹೋವನು, “ನಾನು ನಿಮ್ಮೊಂದಿಗೆ ಈ ಒಡಂಬಡಿಕೆಯನ್ನು ಮಾಡುತ್ತಿದ್ದೇನೆ. ಭೂಲೋಕದಲ್ಲಿ ಎಲ್ಲಿಯೇ ಆಗಲಿ ಯಾವ ಜನಾಂಗದಲ್ಲಿಯೇ ಆಗಲಿ ಹಿಂದೆಂದೂ ನಡೆಯದಂತ ಮಹತ್ಕಾರ್ಯಗಳನ್ನು ಮಾಡುವೆನು. ಎಲ್ಲಾ ಜನರು ಮತ್ತು ನಿನ್ನೊಂದಿಗಿರುವ ಜನರು ಇವುಗಳನ್ನು ನೋಡಿ ಯೆಹೋವನಾದ ನಾನೇ ಮಹಾ ಮಹಿಮಸ್ವರೂಪನೆಂದು ತಿಳಿದುಕೊಳ್ಳುವರು. 11 ನಾನು ಈ ದಿನ ಕೊಡುವ ಆಜ್ಞೆಗಳಿಗೆ ವಿಧೇಯರಾಗಿರಿ. ನಿಮ್ಮ ವೈರಿಗಳಾದ ಅಮೋರಿಯರನ್ನು, ಕಾನಾನ್ಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ನಾನು ಹೊರಗಟ್ಟುವೆನು. 12 ಎಚ್ಚರಿಕೆಯಾಗಿರಿ! ನೀವು ಹೋಗುತ್ತಿರುವ ದೇಶದಲ್ಲಿರುವ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬೇಡಿರಿ. ನೀವು ಆ ಜನರೊಂದಿಗೆ ಒಪ್ಪಂದ ಮಾಡಿಕೊಂಡರೆ, ಅದು ನಿಮಗೆ ಕೇಡನ್ನು ಬರಮಾಡುವುದು. 13 ಅವರ ವೇದಿಕೆಗಳನ್ನು ನಾಶಮಾಡಿರಿ. ಅವರು ಪೂಜಿಸುವ ಕಲ್ಲುಗಳನ್ನು ಒಡೆದು ಹಾಕಿರಿ. ಅವರ ವಿಗ್ರಹಗಳನ್ನು ಕಡಿದು ಹಾಕಿರಿ. 14 ಬೇರೆ ಯಾವ ದೇವರನ್ನೂ ಪೂಜಿಸಬೇಡಿರಿ. ನಾನೇ ಯೆಹೋವನು. ‘ಸ್ವಗೌರವವನ್ನು ಕಾಪಾಡಿಕೊಳ್ಳುವವನು’ ಎಂಬುದೇ ನನ್ನ ಹೆಸರು.
15 “ಎಚ್ಚರಿಕೆಯಾಗಿರಿ, ಆ ದೇಶದಲ್ಲಿ ವಾಸಿಸುವ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬೇಡಿರಿ. ಇಲ್ಲವಾದರೆ ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ನೀವು ಅವರೊಂದಿಗೆ ಸೇರಿಕೊಳ್ಳುವಿರಿ. ಅವರೊಂದಿಗೆ ಸೇರಿಕೊಳ್ಳುವಂತೆ ನಿಮ್ಮನ್ನು ಆಹ್ವಾನಿಸುವರು; ಅವರ ಯಜ್ಞಾರ್ಪಣೆಗಳನ್ನು ತಿನ್ನುವಿರಿ. 16 ನೀವು ಅವರ ಪುತ್ರಿಯರಲ್ಲಿ ಕೆಲವರನ್ನು ನಿಮ್ಮ ಪುತ್ರರಿಗೆ ಹೆಂಡತಿಯರಾಗುವುದಕ್ಕೆ ಆರಿಸಿಕೊಳ್ಳುವಿರಿ. ಅವರ ಪುತ್ರಿಯರು ಸುಳ್ಳುದೇವರುಗಳ ಸೇವೆ ಮಾಡುತ್ತಾರೆ. ನಿಮ್ಮ ಪುತ್ರರನ್ನೂ ಅವರು ಅದೇ ಸೇವೆಗೆ ನಡೆಸುತ್ತಾರೆ.
17 “ವಿಗ್ರಹಗಳನ್ನು ಮಾಡಿಕೊಳ್ಳಬೇಡಿರಿ.
18 “ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಿರಿ. ನಾನು ನಿಮಗೆ ಮೊದಲು ಆಜ್ಞಾಪಿಸಿದಂತೆ ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನಿರಿ. ನಾನು ಆರಿಸಿಕೊಂಡ ಅಬೀಬ್ ಮಾಸದಲ್ಲಿ ಇದನ್ನು ಮಾಡಿರಿ. ಯಾಕೆಂದರೆ ಆ ತಿಂಗಳಲ್ಲಿ ನೀವು ಈಜಿಪ್ಟಿನಿಂದ ಬಿಡುಗಡೆ ಹೊಂದಿದಿರಿ.
19 “ಸ್ತ್ರೀಯಲ್ಲಿ ಹುಟ್ಟಿದ ಮೊದಲಿನ ಮಗು ಯಾವಾಗಲೂ ನನಗೆ ಸೇರಿದ್ದು. ನಿಮ್ಮ ದನಕುರಿಗಳಲ್ಲಿ ಹುಟ್ಟಿದ ಮೊದಲ ಮರಿಗಳು ನನಗೆ ಸೇರಿದವುಗಳಾಗಿವೆ. 20 ಚೊಚ್ಚಲಾಗಿ ಹುಟ್ಟಿದ ಕತ್ತೆಯನ್ನು ನೀವು ಇಟ್ಟುಕೊಳ್ಳಲು ಬಯಸಿದರೆ, ಆಗ ನೀವು ಕುರಿಮರಿಯನ್ನು ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಆದರೆ ನೀವು ಅದನ್ನು ಕೊಂಡುಕೊಳ್ಳದಿದ್ದರೆ, ಅದರ ಕುತ್ತಿಗೆಯನ್ನು ಮುರಿದು ಕೊಂದುಬಿಡಬೇಕು. ನೀವು ನಿಮ್ಮ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ನನ್ನಿಂದ ಕೊಂಡುಕೊಳ್ಳಬೇಕು. ಯಾವ ವ್ಯಕ್ತಿಯೂ ಕಾಣಿಕೆಯಿಲ್ಲದೆ, ನನ್ನ ಸನ್ನಿಧಿಗೆ ಬರಕೂಡದು.
21 “ನೀವು ವಾರದಲ್ಲಿ ಆರುದಿನ ಕೆಲಸ ಮಾಡುವಿರಿ. ಆದರೆ ಏಳನೆಯ ದಿನದಲ್ಲಿ ನೀವು ವಿಶ್ರಮಿಸಿಕೊಳ್ಳಬೇಕು. ನೀವು ಬಿತ್ತುವ ಮತ್ತು ಕೊಯ್ಯುವ ಸಮಯದಲ್ಲಿಯೂ ವಿಶ್ರಮಿಸಿಕೊಳ್ಳಬೇಕು.
22 “ವಾರಗಳ ಹಬ್ಬವನ್ನು ಆಚರಿಸಿರಿ. ಈ ಹಬ್ಬಕ್ಕಾಗಿ ಗೋಧಿಬೆಳೆಯ ಪ್ರಥಮ ಕಾಳನ್ನು ಉಪಯೋಗಿಸಿರಿ ಮತ್ತು ವರ್ಷಾಂತ್ಯದಲ್ಲಿ ಸುಗ್ಗಿಹಬ್ಬವನ್ನು ಆಚರಿಸಿರಿ.
23 “ವರ್ಷದಲ್ಲಿ ಮೂರುಸಲ ನಿಮ್ಮಲ್ಲಿರುವ ಗಂಡಸರೆಲ್ಲರೂ, ಇಸ್ರೇಲರ ದೇವರಾಗಿರುವ ಒಡೆಯನಾದ ಯೆಹೋವನ ಸನ್ನಿಧಿಯಲ್ಲಿ ಸೇರಬೇಕು.
24 “ನೀವು ದೇಶದೊಳಕ್ಕೆ ಹೋದಾಗ, ನಾನು ನಿಮ್ಮ ವೈರಿಗಳನ್ನು ಆ ದೇಶದಿಂದ ಹೊರಗಟ್ಟುವೆನು. ನಾನು ನಿಮ್ಮ ಮೇರೆಗಳನ್ನು ವಿಸ್ತರಿಸುವೆನು. ನಿಮಗೆ ಹೆಚ್ಚೆಚ್ಚಾಗಿ ಭೂಮಿ ದೊರೆಯುವುದು. ಪ್ರತಿ ವರ್ಷ ಮೂರುಸಲ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಗೆ ಹೋಗುವಿರಿ. ಆ ಸಮಯದಲ್ಲಿ ಯಾರೂ ನಿಮ್ಮಿಂದ ಭೂಮಿಯನ್ನು ಅಪಹರಿಸಲು ಪ್ರಯತ್ನಿಸುವುದಿಲ್ಲ.
25 “ನೀವು ಯಜ್ಞಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಹಿಟ್ಟನ್ನು ಸಮರ್ಪಿಸಬಾರದು;
“ಪಸ್ಕ ಭೋಜನದ ಮಾಂಸದಲ್ಲಿ ಏನನ್ನೂ ಮರುದಿನದ ಮುಂಜಾನೆಯವರೆಗೆ ಉಳಿಸಬಾರದು.
26 “ನೀವು ಕೊಯ್ಯುವ ಪ್ರಥಮವಾದ ಬೆಳೆಗಳನ್ನು ಯೆಹೋವನಿಗೆ ಕೊಡಿರಿ. ಅವುಗಳನ್ನು ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ತನ್ನಿರಿ.
“ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಎಂದಿಗೂ ಬೇಯಿಸಬಾರದು.”
27 ಬಳಿಕ ಯೆಹೋವನು ಮೋಶೆಗೆ, “ನಾನು ನಿನಗೆ ಹೇಳಿದ ಸಂಗತಿಗಳನ್ನೆಲ್ಲಾ ಬರೆ. ಆ ಸಂಗತಿಗಳು ನಾನು ನಿನ್ನೊಂದಿಗೆ ಮತ್ತು ಇಸ್ರೇಲರೊಂದಿಗೆ ಮಾಡಿದ ಒಡಂಬಡಿಕೆಯಾಗಿದೆ” ಎಂದು ಹೇಳಿದನು.
28 ಮೋಶೆಯು ಅಲ್ಲಿ ಯೆಹೋವನೊಂದಿಗೆ ಹಗಲಿರುಳು ನಲವತ್ತು ದಿನಗಳಿದ್ದನು. ಆ ದಿನಗಳಲ್ಲಿ ಅವನು ಆಹಾರವನ್ನಾಗಲಿ ನೀರನ್ನಾಗಲಿ ಸೇವಿಸಲಿಲ್ಲ. ಮೋಶೆಯು ಒಡಂಬಡಿಕೆಯ ವಾಕ್ಯಗಳನ್ನು ಅಂದರೆ ದಶಾಜ್ಞೆಗಳನ್ನು ಎರಡು ಕಲ್ಲಿನ ಹಲಿಗೆಗಳ ಮೇಲೆ ಬರೆದನು.
ಮೋಶೆಯ ಹೊಳೆಯುವ ಮುಖ
29 ತರುವಾಯ ಮೋಶೆಯು ಸೀನಾಯಿ ಬೆಟ್ಟದಿಂದ ಇಳಿದು ಬಂದನು. ಒಡಂಬಡಿಕೆಯ ವಾಕ್ಯಗಳು ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಅವನು ಹಿಡಿದುಕೊಂಡಿದ್ದನು. ಯೆಹೋವನು ಅವನೊಡನೆ ಮಾತಾಡಿದ್ದರಿಂದ ಅವನ ಮುಖವು ಹೊಳೆಯುತ್ತಿತ್ತು. ಆದರೆ ಮೋಶೆಗೆ ಇದು ತಿಳಿದಿರಲಿಲ್ಲ. 30 ಮೋಶೆಯ ಮುಖವು ಶುಭ್ರವಾಗಿ ಹೊಳೆಯುತ್ತಿರುವುದನ್ನು ಆರೋನನೂ ಇಸ್ರೇಲರೆಲ್ಲರೂ ನೋಡಿದರು. ಆದ್ದರಿಂದ ಅವನ ಬಳಿಗೆ ಹೋಗಲು ಅವರು ಭಯಪಟ್ಟರು. 31 ಆದರೆ ಮೋಶೆ ಅವರನ್ನು ಕರೆದನು. ಆದ್ದರಿಂದ ಆರೋನನೂ ಜನನಾಯಕರೆಲ್ಲರೂ ಮೋಶೆಯ ಬಳಿಗೆ ಹೋದರು. ಮೋಶೆಯು ಅವರೊಡನೆ ಮಾತಾಡಿದನು. 32 ಅದಾದನಂತರ, ಇಸ್ರೇಲರೆಲ್ಲರೂ ಮೋಶೆಯ ಬಳಿಗೆ ಬಂದರು. ಯೆಹೋವನು ಸೀನಾಯಿ ಬೆಟ್ಟದಲ್ಲಿ ತನಗೆ ಕೊಟ್ಟ ಆಜ್ಞೆಗಳನ್ನು ಮೋಶೆಯು ಅವರಿಗೆ ಕೊಟ್ಟನು.
33 ಮೋಶೆಯು ಜನರೊಡನೆ ಮಾತಾಡಿ ಮುಗಿಸಿದಾಗ, ತನ್ನ ಮುಖದ ಮೇಲೆ ಮುಸುಕನ್ನು ಹಾಕಿಕೊಂಡನು. 34 ಮೋಶೆಯು ಯೆಹೋವನೊಡನೆ ಮಾತಾಡಲು ಆತನ ಸನ್ನಿಧಿಗೆ ಹೋದಾಗಲೆಲ್ಲಾ ಮೋಶೆಯು ಮುಸುಕನ್ನು ತೆಗೆದಿಡುತ್ತಿದ್ದನು. ಬಳಿಕ ಮೋಶೆ ಹೊರಗೆ ಬಂದು ಯೆಹೋವನು ಆಜ್ಞಾಪಿಸಿದ ಸಂಗತಿಗಳನ್ನು ಇಸ್ರೇಲರಿಗೆ ತಿಳಿಸುತ್ತಿದ್ದನು. 35 ಮೋಶೆಯ ಮುಖವು ಶುಭ್ರವಾಗಿ ಹೊಳೆಯುತ್ತಿದ್ದುದನ್ನು ಜನರು ನೋಡಿದರು. ಆದ್ದರಿಂದ ಮೋಶೆಯು ಮುಂದಿನ ಸಾರಿ ಯೆಹೋವನೊಡನೆ ಮಾತಾಡಲು ಹೋಗುವವರೆಗೆ ತನ್ನ ಮುಖಕ್ಕೆ ಮುಸುಕು ಹಾಕಿಕೊಂಡಿರುವನು.
ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆಯುವನು
13 ಯೆಹೂದ್ಯರ ಪಸ್ಕಹಬ್ಬವು ಬಹು ಸಮೀಪವಾಗಿತ್ತು. ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುವ ಸಮಯ ಬಂದಿರುವುದಾಗಿ ಯೇಸುವಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತನ್ನವರನ್ನು ಆತನು ಯಾವಾಗಲೂ ಪ್ರೀತಿಸುತ್ತಿದ್ದನು. ಈಗಲಾದರೋ ಅವರ ಮೇಲೆ ತನಗಿರುವ ಅಪಾರ ಪ್ರೀತಿಯನ್ನು ತೋರಿಸುವ ಕಾಲ ಆತನಿಗೆ ಬಂದಿತ್ತು.
2 ಯೇಸು ಮತ್ತು ಆತನ ಶಿಷ್ಯರು ರಾತ್ರಿಯ ಊಟಕ್ಕಾಗಿ ಕುಳಿತುಕೊಂಡಿದ್ದರು. ಯೇಸುವಿಗೆ ದ್ರೋಹ ಮಾಡುವಂತೆ ಸೈತಾನನು ಇಸ್ಕರಿಯೋತ ಯೂದನನ್ನು ಈಗಾಗಲೇ ಪ್ರೇರೇಪಿಸಿದ್ದನು. (ಯೂದನು ಸಿಮೋನನ ಮಗ.) 3 ತಂದೆಯು ಪ್ರತಿಯೊಂದರ ಮೇಲೆ ತನಗೆ ಅಧಿಕಾರವನ್ನು ಕೊಟ್ಟಿದ್ದಾನೆಂಬುದು ಯೇಸುವಿಗೆ ತಿಳಿದಿತ್ತು. ಅಲ್ಲದೆ ತಾನು ದೇವರ ಬಳಿಯಿಂದ ಬಂದಿರುವುದಾಗಿಯೂ ಮತ್ತು ಈಗ ದೇವರ ಬಳಿಗೆ ಮರಳಿಹೋಗುತ್ತಿರುವುದಾಗಿಯೂ ಆತನಿಗೆ ಗೊತ್ತಿತ್ತು. 4 ಅವರು ಊಟಮಾಡುತ್ತಿದ್ದಾಗ ಯೇಸು ಎದ್ದು ತನ್ನ ಮೇಲಂಗಿಯನ್ನು ತೆಗೆದಿಟ್ಟನು; ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡನು. 5 ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ಶಿಷ್ಯರ ಕಾಲುಗಳನ್ನು ತೊಳೆದು ತಾನು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಅವರ ಪಾದಗಳನ್ನು ಒರಸಿದನು.
6 ಯೇಸು ಸೀಮೋನ್ ಪೇತ್ರನ ಬಳಿಗೆ ಬಂದಾಗ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ನೀನು ತೊಳೆಯಕೂಡದು” ಎಂದನು.
7 ಯೇಸು, “ಈಗ ನಾನು ಏನು ಮಾಡುತ್ತಿರುವೆನೆಂದು ನಿನಗೆ ಗೊತ್ತಿಲ್ಲ. ಆದರೆ ಮುಂದೆ ನೀನು ಅರ್ಥಮಾಡಿಕೊಳ್ಳುವೆ” ಎಂದು ಉತ್ತರಕೊಟ್ಟನು.
8 ಪೇತ್ರನು, “ಇಲ್ಲ! ನನ್ನ ಪಾದಗಳನ್ನು ನೀನು ಎಂದಿಗೂ ತೊಳೆಯಕೂಡದು” ಎಂದು ಪ್ರತಿಭಟಿಸಿದನು.
ಯೇಸು, “ನಿನ್ನ ಪಾದಗಳನ್ನು ನಾನು ತೊಳೆಯದಿದ್ದರೆ, ನನ್ನಲ್ಲಿ ನಿನಗೆ ಪಾಲು ಇಲ್ಲ” ಎಂದು ಹೇಳಿದನು.
9 ಆಗ ಸೀಮೋನ್ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ಮಾತ್ರವಲ್ಲದೆ ನನ್ನ ಕೈಗಳನ್ನು ಮತ್ತು ತಲೆಯನ್ನೂ ತೊಳೆ!” ಎಂದು ಕೇಳಿಕೊಂಡನು.
10 ಯೇಸು, “ಸ್ನಾನಮಾಡಿಕೊಂಡವನ ದೇಹವೆಲ್ಲಾ ಶುದ್ಧವಾಗಿರುತ್ತದೆ. ಅವನು ತನ್ನ ಪಾದಗಳನ್ನು ತೊಳೆದುಕೊಂಡರೆ ಸಾಕು. ನೀವು ಸಹ ಶುದ್ಧರಾಗಿದ್ದೀರಿ, ಆದರೆ ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು. 11 ತನಗೆ ದ್ರೋಹ ಮಾಡುವ ವ್ಯಕ್ತಿ ಯಾರೆಂದು ಯೇಸುವಿಗೆ ತಿಳಿದಿತ್ತು. ಆದಕಾರಣ ಆತನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು.
12 ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲಂಗಿಯನ್ನು ಧರಿಸಿಕೊಂಡು ಮತ್ತೆ ಕುಳಿತುಕೊಂಡು ಹೀಗೆಂದನು: “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೇ? 13 ನೀವು ನನ್ನನ್ನು, ‘ಗುರುವೇ, ಪ್ರಭುವೇ’ ಎಂದು ಕರೆಯುತ್ತೀರಿ. ನೀವು ಹಾಗೆ ಕರೆಯುವುದು ಸರಿ. ಏಕೆಂದರೆ ನಾನು ಗುರುವೂ ಹೌದು, ಪ್ರಭುವೂ ಹೌದು. 14 ನಿಮ್ಮ ಪ್ರಭುವೂ ಗುರುವೂ ಆಗಿರುವ ನಾನು ನಿಮ್ಮ ಪಾದಗಳನ್ನು ಸೇವಕನಂತೆ ತೊಳೆದೆನು. ಆದ್ದರಿಂದ ನೀವು ಸಹ ಒಬ್ಬರ ಪಾದಗಳನ್ನು ಇನ್ನೊಬ್ಬರು ತೊಳೆಯಬೇಕು. 15 ಈ ಕಾರ್ಯಕ್ಕೆ ನಾನೇ ನಿಮಗೆ ಮಾದರಿಯಾಗಿದ್ದೇನೆ. ನಾನು ನಿಮಗೆ ಮಾಡಿದಂತೆ ನೀವೂ ಒಬ್ಬರಿಗೊಬ್ಬರು ಮಾಡಬೇಕು. 16 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸೇವಕನು ಒಡೆಯನಿಗಿಂತ ದೊಡ್ಡವನಲ್ಲ. ಆದ್ದರಿಂದ ಕೆಲಸಕ್ಕಾಗಿ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17 ನೀವು ಈ ಸಂಗತಿಗಳನ್ನು ತಿಳಿದುಕೊಂಡು ಇವುಗಳನ್ನು ಕೈಕೊಂಡು ನಡೆದರೆ ಸಂತೋಷದಿಂದಿರುವಿರಿ.
18 “ನಾನು ನಿಮ್ಮೆಲ್ಲರ ಬಗ್ಗೆ ಮಾತಾಡುತ್ತಿಲ್ಲ. ನಾನು ಆರಿಸಿಕೊಂಡಿರುವ ಜನರ ಬಗ್ಗೆ ನನಗೆ ಗೊತ್ತಿದೆ. ಆದರೆ ‘ನನ್ನೊಂದಿಗೆ ಊಟ ಮಾಡುವವನೇ ನನಗೆ ದ್ರೋಹ ಬಗೆದನು.’[a] ಎಂಬ ಪವಿತ್ರ ಗ್ರಂಥದ ಮಾತು ನೆರವೇರಬೇಕು. 19 ಅದು ನೆರವೇರುವಾಗ ನಾನೇ ಕ್ರಿಸ್ತನೆಂದು ನೀವು ನಂಬಬೇಕೆಂದು, ಅದು ನೆರವೇರವುದಕ್ಕಿಂತ ಮೊದಲೇ ಅದನ್ನು ನಿಮಗೆ ತಿಳಿಸುತ್ತಿದ್ದೇನೆ. 20 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನು ಕಳುಹಿಸುವ ಯಾರನ್ನಾದರೂ ಸ್ವೀಕರಿಸಿಕೊಳ್ಳುವವನು ನನ್ನನ್ನೇ ಸ್ವೀಕರಿಸಿಕೊಳ್ಳುವವನಾಗಿದ್ದಾನೆ. ನನ್ನನ್ನು ಸ್ವೀಕರಿಸಿಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಳ್ಳುವವನಾಗಿದ್ದಾನೆ.”
ಯೇಸುವಿನ ಶಿಷ್ಯನ ದ್ರೋಹ
(ಮತ್ತಾಯ 26:20-25; ಮಾರ್ಕ 14:17-21; ಲೂಕ 22:21-23)
21 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಆತ್ಮದಲ್ಲಿ ತತ್ತರಗೊಂಡು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಮಾಡುವನು” ಎಂದು ಬಹಿರಂಗವಾಗಿ ಹೇಳಿದನು.
22 ಯೇಸುವಿನ ಶಿಷ್ಯರೆಲ್ಲಾ ಒಬ್ಬರನ್ನೊಬ್ಬರು ನೋಡತೊಡಗಿದರು. ಆತನು ಯಾರ ಬಗ್ಗೆ ಮಾತಾಡುತ್ತಿದ್ದಾನೆಂದು ಅವರಿಗೆ ಅರ್ಥವಾಗಲಿಲ್ಲ. 23 ಶಿಷ್ಯರಲ್ಲಿ ಒಬ್ಬನು ಯೇಸುವಿನ ಸಮೀಪದಲ್ಲಿ ಒರಗಿಕೊಂಡಿದ್ದನು. ಯೇಸು ಪ್ರೀತಿಸುತ್ತಿದ್ದ ಶಿಷ್ಯನೇ ಅವನು. 24 ಸೀಮೋನ್ ಪೇತ್ರನು ಈ ಶಿಷ್ಯನಿಗೆ, ಯಾರನ್ನು ಕುರಿತು ಯೇಸು ಹೇಳುತ್ತಿದ್ದಾನೆಂದು ಕೇಳಿ ತಿಳಿದುಕೊಳ್ಳಲು ಸನ್ನೆ ಮಾಡಿದನು.
25 ಆ ಶಿಷ್ಯನು ಯೇಸುವಿನ ಸಮೀಪಕ್ಕೆ ಬಾಗಿಕೊಂಡು, “ಪ್ರಭುವೇ, ಅವನು ಯಾರು?” ಎಂದು ಕೇಳಿದನು.
26 ಯೇಸು, “ನಾನು ಈ ರೊಟ್ಟಿಯನ್ನು ಬಟ್ಟಲಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ ನನಗೆ ದ್ರೋಹ ಮಾಡುವನು” ಎಂದು ಹೇಳಿ ರೊಟ್ಟಿಯ ತುಂಡೊಂದನ್ನು ತೆಗೆದುಕೊಂಡು ಅದನ್ನು ಬಟ್ಟಲಲ್ಲಿ ಅದ್ದಿ ಸಿಮೋನನ ಮಗನಾದ ಇಸ್ಕರಿಯೋತ ಯೂದನಿಗೆ ಕೊಟ್ಟನು. 27 ಯೂದನು ಆ ರೊಟ್ಟಿಯನ್ನು ತೆಗೆದುಕೊಂಡಾಗ ಸೈತಾನನು ಅವನೊಳಗೆ ಪ್ರವೇಶಿಸಿದನು. ಯೇಸು ಯೂದನಿಗೆ, “ನೀನು ಮಾಡುವ ಕೆಲಸವನ್ನು ಬೇಗನೆ ಮಾಡು!” ಎಂದು ಹೇಳಿದನು. 28 ಯೇಸು ಯೂದನಿಗೆ ಏಕೆ ಹಾಗೆ ಹೇಳಿದನೆಂದು ಊಟಕ್ಕೆ ಕುಳಿತಿದ್ದವರಲ್ಲಿ ಯಾರಿಗೂ ಅರ್ಥವಾಗಲಿಲ್ಲ. 29 ಶಿಷ್ಯಸಮುದಾಯದ ಹಣದ ಪೆಟ್ಟಿಗೆಯು ಯೂದನ ವಶದಲ್ಲಿತ್ತು. ಆದ್ದರಿಂದ ಹಬ್ಬಕ್ಕೆ ಅಗತ್ಯವಾದ ಕೆಲವು ವಸ್ತುಗಳನ್ನು ತೆಗೆದುಕೊಂಡು ಬರುವುದಕ್ಕಾಗಲಿ ಬಡಜನರಿಗೆ ಏನಾದರೂ ಕೊಡುವುದಕ್ಕಾಗಲಿ ಯೇಸು ಅವನಿಗೆ ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿಕೊಂಡರು.
30 ಯೇಸು ಕೊಟ್ಟ ರೊಟ್ಟಿಯನ್ನು ತೆಗೆದುಕೊಂಡ ನಂತರ ಯೂದನು ಅಲ್ಲಿಂದ ಹೊರಟುಹೋದನು. ಆಗ ರಾತ್ರಿಯಾಗಿತ್ತು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ
31 ಯೂದನು ಹೊರಟುಹೋದ ಮೇಲೆ ಯೇಸು, “ಈಗ ಮನುಷ್ಯಕುಮಾರನಿಗೆ ಮಹಿಮೆಯಾಗುವುದು. ಅಲ್ಲದೆ, ಮನುಷ್ಯಕುಮಾರನ ಮೂಲಕ ದೇವರಿಗೂ ಮಹಿಮೆಯಾಗುವುದು. 32 ಆತನ ಮೂಲಕವಾಗಿ ದೇವರಿಗೆ ಮಹಿಮೆಯಾಗುವುದರಿಂದ ತಕ್ಷಣವೇ ದೇವರ ಮೂಲಕವಾಗಿಯೂ ಆತನಿಗೆ ಮಹಿಮೆಯಾಗುವುದು” ಎಂದನು.
33 ಯೇಸು, “ನನ್ನ ಮಕ್ಕಳೇ, ಇನ್ನು ಸ್ವಲ್ಪ ಸಮಯ ಮಾತ್ರ ನಾನು ನಿಮ್ಮೊಂದಿಗೆ ಇರುತ್ತೇನೆ. ನೀವು ನನಗಾಗಿ ಹುಡುಕುವಿರಿ. ನಾನು ಯೆಹೂದ್ಯರಿಗೆ ಹೇಳಿದ್ದನ್ನು ನಿಮಗೂ ಹೇಳುತ್ತೇನೆ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ.
34 “ನಾನು ನಿಮಗೆ ಹೊಸ ಆಜ್ಞೆಯನ್ನು ಕೊಡುತ್ತೇನೆ. ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. 35 ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನೀವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ನೀವೂ ನನ್ನ ಶಿಷ್ಯರೆಂಬುದನ್ನು ಎಲ್ಲಾ ಜನರು ತಿಳಿದುಕೊಳ್ಳುವರು” ಎಂದು ಹೇಳಿದನು.
ಪೇತ್ರನ ವಿಶ್ವಾಸದ್ರೋಹದ ಮುನ್ಸೂಚನೆ
(ಮತ್ತಾಯ 26:31-35; ಮಾರ್ಕ 14:27-31; ಲೂಕ 22:31-34)
36 ಸೀಮೋನ್ ಪೇತ್ರನು ಯೇಸುವಿಗೆ, “ಪ್ರಭುವೇ, ನೀನು ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದನು.
ಯೇಸು, “ನಾನು ಹೋಗುವಲ್ಲಿಗೆ ಈಗ ನೀನು ಹಿಂಬಾಲಿಸಿಕೊಂಡು ಬರಲಾರೆ. ಆದರೆ ಮುಂದೆ ನೀನು ಹಿಂಬಾಲಿಸಿಕೊಂಡು ಬರುವೆ” ಎಂದು ಉತ್ತರಕೊಟ್ಟನು.
37 ಪೇತ್ರನು, “ಪ್ರಭುವೇ, ಈಗ ನಾನು ನಿನ್ನನ್ನು ಹಿಂಬಾಲಿಸಲು ಏಕಾಗದು? ನಿನಗೋಸ್ಕರ ಸಾಯುವುದಕ್ಕೂ ನನಗೆ ಮನಸ್ಸಿದೆ!” ಎಂದು ಹೇಳಿದನು.
38 ಯೇಸು, “ನೀನು ನನಗೋಸ್ಕರ ನಿನ್ನ ಪ್ರಾಣವನ್ನು ನಿಜವಾಗಿಯೂ ಕೊಡುವೆಯಾ? ನಾನು ನಿನಗೆ ಸತ್ಯವನ್ನು ಹೇಳುತ್ತೇನೆ, ನಾಳೆ ಮುಂಜಾನೆ ಕೋಳಿ ಕೂಗುವುದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ತಿಳಿದಿಲ್ಲವೆಂದು ಮೂರುಸಾರಿ ಹೇಳುವೆ” ಎಂದು ಉತ್ತರಕೊಟ್ಟನು.
ಸೊಲೊಮೋನನ ಜ್ಞಾನೋಕ್ತಿಗಳು
10 ಇವು ಸೊಲೊಮೋನನ ಜ್ಞಾನೋಕ್ತಿಗಳು:
ಜ್ಞಾನಿಯಾದ ಮಗನಿಂದ ತಂದೆಗೆ ಸಂತೋಷ. ಮೂಢನಾದ ಮಗನಿಂದ ತಾಯಿಗೆ ದುಃಖ.
2 ಅನ್ಯಾಯದ ಹಣವು ನಿಷ್ಪ್ರಯೋಜಕವಾಗಿದೆ. ನೀತಿಯ ಜೀವಿತವು ಮರಣದಿಂದ ರಕ್ಷಿಸಬಲ್ಲದು.
3 ನೀತಿವಂತರು ಹಸಿವೆಯಿಂದಿರಲು ಯೆಹೋವನು ಬಿಡುವುದಿಲ್ಲ. ದುಷ್ಟರ ಆಸೆಯನ್ನಾದರೋ ಆತನು ಭಂಗಪಡಿಸುತ್ತಾನೆ.
4 ಸೋಮಾರಿಯು ಬಡವನಾಗಿರುತ್ತಾನೆ. ಕಷ್ಟಪಟ್ಟು ಕೆಲಸ ಮಾಡುವವನು ಐಶ್ವರ್ಯವಂತನಾಗುತ್ತಾನೆ.
5 ಬುದ್ಧಿವಂತನು ತಕ್ಕಕಾಲದಲ್ಲಿ ಬೆಳೆಯನ್ನು ಕೊಯ್ಯುತ್ತಾನೆ. ಸುಗ್ಗೀಕಾಲದಲ್ಲಿ ತೂಕಡಿಸುವವನು ನಾಚಿಕೆಗೆಟ್ಟವನು.
6 ಒಳ್ಳೆಯವನನ್ನು ಆಶೀರ್ವದಿಸುವಂತೆ ಜನರು ದೇವರನ್ನು ಪ್ರಾರ್ಥಿಸುವರು. ದುಷ್ಟನ ಮಾತುಗಳಲ್ಲಾದರೋ ಕುತಂತ್ರವೇ ಅಡಗಿಕೊಂಡಿದೆ.
7 ನೀತಿವಂತರ ನೆನಪು ಆಶೀರ್ವಾದದಾಯಕ. ಕೆಡುಕರಾದರೋ ಬಹುಬೇಗನೆ ಮರೆಯಲ್ಪಡುವರು.
8 ಜ್ಞಾನಿಯು ಆಜ್ಞೆಗಳಿಗೆ ವಿಧೇಯನಾಗುತ್ತಾನೆ. ಮೂಢನಾದರೋ ವಾದಮಾಡಿ ತನಗೇ ತೊಂದರೆ ತಂದುಕೊಳ್ಳುತ್ತಾನೆ.
9 ಒಳ್ಳೆಯವನೂ ಯಥಾರ್ಥನೂ ಆದ ಮನುಷ್ಯನು ಕ್ಷೇಮವಾಗಿರುವನು. ಮೋಸಮಾಡುವ ಕುಟಿಲ ಮನುಷ್ಯನಾದರೋ ಸಿಕ್ಕಿಕೊಳ್ಳುವನು.
10 ಸತ್ಯವನ್ನು ಅಡಗಿಸಿಕೊಳ್ಳುವವನು ತೊಂದರೆಯನ್ನು ಉಂಟುಮಾಡುವನು. ಧೈರ್ಯದಿಂದ ಮಾತಾಡುವವನು ಸಮಾಧಾನಕರನು.
11 ಒಳ್ಳೆಯವನ ಮಾತುಗಳು ನೀರಿನ ಬುಗ್ಗೆಯಂತೆ ಜೀವದಾಯಕ. ಕೆಡುಕನ ಮಾತುಗಳಲ್ಲಿ ಕೆಟ್ಟದ್ದೇ ಅಡಗಿಕೊಂಡಿರುತ್ತದೆ.
12 ದ್ವೇಷವು ವಾದವನ್ನು ಉಂಟುಮಾಡುತ್ತದೆ. ಆದರೆ ಪ್ರೀತಿಯು ಎಲ್ಲಾ ತಪ್ಪುಗಳನ್ನು ಕ್ಷಮಿಸುತ್ತದೆ.
13 ಬುದ್ಧಿವಂತನು ವಿವೇಕದಿಂದ ಮಾತಾಡುತ್ತಾನೆ. ಆದರೆ ಬುದ್ಧಿಹೀನನಿಗೆ ಹೊಡೆತ ಬೀಳುವುದು.
14 ಜ್ಞಾನಿಗಳು ಮೌನವಾಗಿದ್ದು ಹೊಸ ಸಂಗತಿಗಳನ್ನು ಕಲಿತುಕೊಳ್ಳುತ್ತಾರೆ. ಮೂಢರಾದರೋ ಮಾತಾಡಿ ತಮಗೇ ತೊಂದರೆಯನ್ನು ತಂದುಕೊಳ್ಳುತ್ತಾರೆ.
15 ಐಶ್ವರ್ಯವು ಸಾಹುಕಾರನನ್ನು ಕಾಪಾಡುತ್ತದೆ. ಬಡತನವಾದರೋ ಬಡವನನ್ನು ನಾಶಗೊಳಿಸುತ್ತದೆ.
16 ಒಳ್ಳೆಯವರಿಗೆ ಪ್ರತಿಫಲವಾಗಿ ಜೀವ ದೊರೆಯುವುದು. ಕೆಡುಕರಿಗೆ ದಂಡನೆಯೇ ಸಂಬಳ.
17 ಶಿಸ್ತನ್ನು ಸ್ವೀಕರಿಸಿಕೊಳ್ಳುವವನು ಜೀವಮಾರ್ಗವನ್ನು ತೋರಿಸುತ್ತಾನೆ. ತಿದ್ದುಪಡಿಯನ್ನು ಅಲಕ್ಷಿಸುವವನು ಇತರರನ್ನು ದಾರಿ ತಪ್ಪಿಸುತ್ತಾನೆ.
18 ದ್ವೇಷವನ್ನು ಮರೆಮಾಡಲು ಒಬ್ಬನು ಸುಳ್ಳು ಹೇಳಬೇಕಾಗಬಹುದು. ಆದರೆ ಹರಟೆಗಾರನು ನಿಜವಾಗಿಯೂ ಮೂಢನಾಗಿದ್ದಾನೆ.
19 ಅತಿಯಾಗಿ ಮಾತಾಡುವವನು ತನ್ನನ್ನೇ ತೊಂದರೆಗೆ ಸಿಕ್ಕಿಸಿಕೊಳ್ಳುತ್ತಾನೆ. ವಿವೇಕಿಯು ಮೌನವಾಗಿರಲು ಕಲಿತುಕೊಳ್ಳುತ್ತಾನೆ.
20 ಒಳ್ಳೆಯವನ ಮಾತುಗಳು ಶುದ್ಧ ಬೆಳ್ಳಿಯಂತಿವೆ. ಕೆಡುಕನ ಆಲೋಚನೆಗಳಾದರೋ ಪ್ರಯೋಜನಕ್ಕೆ ಬಾರವು.
21 ಒಳ್ಳೆಯವನ ಮಾತುಗಳು ಅನೇಕರಿಗೆ ಸಹಾಯಮಾಡುತ್ತವೆ. ಮೂಢನ ಮೂಢತನವಾದರೋ ಅನೇಕರನ್ನು ಕೊಲ್ಲುವುದು.
22 ಐಶ್ವರ್ಯವು ಯೆಹೋವನ ಆಶೀರ್ವಾದವೇ. ಶ್ರಮದ ಕೆಲಸವು ಅದನ್ನು ಹೆಚ್ಚಿಸಲಾರದು.
23 ಅವಿವೇಕಿಯು ಕೆಟ್ಟದ್ದನ್ನು ಮಾಡುವುದರಲ್ಲಿ ಸಂತೋಷಿಸುತ್ತಾನೆ. ವಿವೇಕಿಯು ಜ್ಞಾನದಲ್ಲಿ ಸಂತೋಷಿಸುತ್ತಾನೆ.
24 ಕೆಡುಕನಿಗೆ ಅವನು ಭಯಪಡುವುದೇ ಸಂಭವಿಸುವುದು. ಒಳ್ಳೆಯವನಾದರೋ ತನಗೆ ಬೇಕಾದದ್ದನ್ನೆಲ್ಲ ಪಡೆದುಕೊಳ್ಳುವನು.
25 ಆಪತ್ತು ಬಂದಾಗ ದುಷ್ಟನು ನಾಶವಾಗುವನು. ಆದರೆ ಒಳ್ಳೆಯವನು ಸದಾಕಾಲ ಬಲವಾಗಿ ನಿಲ್ಲುವನು.
26 ಸೋಮಾರಿಗೆ ಯಾವ ಕೆಲಸವನ್ನೂ ಒಪ್ಪಿಸಬೇಡಿ. ಅವನು ಬಾಯಿಗೆ ಹುಳಿಯಂತೆಯೂ ಕಣ್ಣುಗಳಿಗೆ ಹೊಗೆಯಂತೆಯೂ ನಿಮ್ಮನ್ನು ಬೇಸರಗೊಳಿಸುವನು.
27 ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದರೆ ಬಹುಕಾಲ ಬದುಕುವಿರಿ. ಆದರೆ ಕೆಡುಕರು ತಮ್ಮ ಜೀವಮಾನದ ವರ್ಷಗಳನ್ನು ಕಳೆದುಕೊಳ್ಳುವರು.
28 ಒಳ್ಳೆಯವರ ನಿರೀಕ್ಷೆಗೆ ಸಂತೋಷವೇ ಫಲಿತಾಂಶ. ಕೆಟ್ಟವರ ನಿರೀಕ್ಷೆಗೆ ಶೂನ್ಯವೇ ಫಲಿತಾಂಶ.
29 ಯೆಹೋವನು ಒಳ್ಳೆಯವರನ್ನು ಕೋಟೆಯಂತೆ ಕಾಪಾಡುತ್ತಾನೆ, ಕೆಡುಕರನ್ನಾದರೋ ನಾಶಮಾಡುತ್ತಾನೆ.
30 ಒಳ್ಳೆಯವರು ಯಾವಾಗಲೂ ಕ್ಷೇಮವಾಗಿರುವರು. ಆದರೆ ಕೆಡುಕರನ್ನು ದೇಶದಿಂದ ಬಲವಂತವಾಗಿ ಹೊರಗಟ್ಟಲಾಗುವುದು.
31 ಒಳ್ಳೆಯವರು ಯಾವಾಗಲೂ ಜ್ಞಾನದ ಮಾತುಗಳನ್ನು ಹೇಳುತ್ತಾರೆ; ಕೆಡುಕರ ಮಾತನ್ನು ಜನರು ಕೇಳುವುದಿಲ್ಲ.
32 ಒಳ್ಳೆಯವನು ಯೋಗ್ಯವಾದವುಗಳನ್ನು ಹೇಳುವನು. ಕೆಡುಕನು ಸುಳ್ಳನ್ನು ಮಾತ್ರ ಹೇಳುತ್ತಾನೆ.
ಅನ್ಯಜನರಿಗಾಗಿ ಪೌಲನ ಸೇವೆ
3 ನಾನು ಕ್ರಿಸ್ತಯೇಸುವಿನ ಸೆರೆಯಾಳು. ಯೆಹೂದ್ಯರಲ್ಲದ ನಿಮಗೋಸ್ಕರ ನಾನು ಸೆರೆಯಾಳಾಗಿದ್ದೇನೆ. 2 ದೇವರು ತನ್ನ ಕೃಪೆಯ ಮೂಲಕ ನನಗೆ ಈ ಕೆಲಸವನ್ನು ಕೊಟ್ಟನೆಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ನಿಮಗೆ ಸಹಾಯ ಮಾಡುವುದಕ್ಕಾಗಿ ದೇವರು ಈ ಕೆಲಸವನ್ನು ನನಗೆ ಕೊಟ್ಟನು. 3 ದೇವರು ತನ್ನ ರಹಸ್ಯವಾದ ಯೋಜನೆಯನ್ನು ನನಗೆ ತಿಳಿಸಿದನು ಮತ್ತು ತೋರಿಸಿದನು. ಇದರ ಬಗ್ಗೆ ನಾನು ಆಗಲೇ ನಿಮಗೆ ಸ್ವಲ್ಪ ಬರೆದಿದ್ದೇನೆ. 4 ನಾನು ಬರೆದಿರುವ ಈ ಸಂಗತಿಗಳನ್ನು ನೀವು ಓದಿದರೆ ಕ್ರಿಸ್ತನ ರಹಸ್ಯವಾದ ಸತ್ಯವನ್ನು ನಾನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೇನೆ ಎಂಬುದು ನಿಮಗೇ ತಿಳಿಯುತ್ತದೆ. 5 ಹಿಂದಿನ ಕಾಲಗಳಲ್ಲಿದ್ದ ಜನರಿಗೆ ಆ ರಹಸ್ಯಸತ್ಯವನ್ನು ಆತನು ತಿಳಿಸಲಿಲ್ಲ. ಈಗಲಾದರೊ ದೇವರು ತನ್ನ ಆತ್ಮನ ಮೂಲಕವಾಗಿ ಆ ರಹಸ್ಯಸತ್ಯವನ್ನು ತನ್ನ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ತೋರಿಸಿದ್ದಾನೆ. 6 ಇದು ಆ ರಹಸ್ಯಸತ್ಯ: ಯೆಹೂದ್ಯರಲ್ಲದವರು ಸುವಾರ್ತೆಯ ಮೂಲಕ ಕ್ರಿಸ್ತಯೇಸುವಿನಲ್ಲಿ ಇರುವವರಾಗಿ ಯೆಹೂದ್ಯರೊಂದಿಗೆ ಬಾಧ್ಯರೂ ಒಂದೇ ದೇಹಕ್ಕೆ ಸೇರಿದವರೂ ಅಬ್ರಹಾಮನಿಗುಂಟಾದ ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆ.
7 ದೇವರು ನೀಡಿದ ವಿಶೇಷವಾದ ಕೃಪಾವರದಿಂದ ನಾನು ಸುವಾರ್ತೆಯನ್ನು ತಿಳಿಸಲು ಸೇವಕನಾದೆನು. ದೇವರು ತನ್ನ ಶಕ್ತಿಯನ್ನು ಪ್ರಯೋಗಿಸಿ ನನಗೆ ಆ ಕೃಪಾವರವನ್ನು ಕೊಟ್ಟನು. 8 ದೇವಜನರಲ್ಲಿ ನಾನೇ ಅತ್ಯಲ್ಪನು. ಕ್ರಿಸ್ತನ ಐಶ್ವರ್ಯವನ್ನು ಕುರಿತಾದ ಸುವಾರ್ತೆಯನ್ನು ನಾನು ಯೆಹೂದ್ಯರಲ್ಲದವರಿಗೆ ತಿಳಿಸಬೇಕೆಂದು ದೇವರು ನನಗೆ ಈ ಕೃಪಾವರವನ್ನು ಕೊಟ್ಟನು. ಆ ಐಶ್ವರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. 9 ರಹಸ್ಯವಾಗಿದ್ದ ತನ್ನ ಯೋಜನೆಯನ್ನು ಜನರೆಲ್ಲರಿಗೆ ತಿಳಿಸಬೇಕೆಂಬ ಕೆಲಸವನ್ನು ದೇವರು ನನಗೆ ಕೊಟ್ಟನು. ಆದಿಯಿಂದಲೂ ಅದು ದೇವರಲ್ಲಿ ಮರೆಯಾಗಿತ್ತು. ಪ್ರತಿಯೊಂದನ್ನೂ ಸೃಷ್ಟಿಸಿದಾತನು ದೇವರೇ. 10 ತನ್ನ ನಾನಾ ವಿಧವಾದ ಜ್ಞಾನವು ಆಕಾಶಮಂಡಲದಲ್ಲಿರುವ ಎಲ್ಲಾ ಅಧಿಪತಿಗಳಿಗೂ ಅಧಿಕಾರಿಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂಬುದೇ ದೇವರ ಉದ್ದೇಶವಾಗಿತ್ತು. 11 ಅನಾದಿಕಾಲದಿಂದಲೂ ಇದೇ ದೇವರ ಯೋಜನೆಯಾಗಿತ್ತು. ದೇವರು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ತನ್ನ ಯೋಜನೆಗನುಸಾರವಾಗಿ ಮಾಡಿದನು. 12 ನಾವು ಕ್ರಿಸ್ತನಲ್ಲಿರುವ ನಂಬಿಕೆಯ ಮೂಲಕ ದೇವರ ಬಳಿಗೆ ಸ್ವತಂತ್ರದಿಂದ ಮತ್ತು ನಿರ್ಭಯದಿಂದ ಹೋಗಲು ಸಾಧ್ಯವಾಯಿತು. 13 ಹೀಗಿರಲಾಗಿ ನಾನು ನಿಮಗೋಸ್ಕರ ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ನಿರಾಶರಾಗಿ ಧೈರ್ಯಗೆಡಬೇಡಿ. ನನ್ನ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.
ಕ್ರಿಸ್ತನ ಪ್ರೀತಿ
14 ಆದ್ದರಿಂದ ತಂದೆಯ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತೇನೆ. 15 ಭೂಪರಲೋಕಗಳಲ್ಲಿರುವ ಪ್ರತಿಯೊಂದು ಕುಟುಂಬವು ಆತನಿಂದ ತನ್ನ ನಿಜ ಹೆಸರನ್ನು ಪಡೆದುಕೊಳ್ಳುತ್ತದೆ. 16 ನೀವು ನಿಮ್ಮ ಆತ್ಮಗಳಲ್ಲಿ ಬಲವಾಗಿರಲು ಅಗತ್ಯವಾದ ಶಕ್ತಿಯನ್ನು ತನ್ನ ಮಹಿಮಾತಿಶಯದ ಪ್ರಕಾರ ಕೊಡಬೇಕೆಂದು ತಂದೆಯನ್ನು ಕೇಳಿಕೊಳ್ಳುತ್ತೇನೆ. ಆತನು ತನ್ನ ಆತ್ಮನ ಮೂಲಕವಾಗಿ ನಿಮಗೆ ಆ ಶಕ್ತಿಯನ್ನು ಕೊಡುತ್ತಾನೆ. 17 ನಿಮ್ಮ ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಬೇಕೆಂದು ಪ್ರಾರ್ಥಿಸುತ್ತೇನೆ. ನಿಮ್ಮ ಜೀವಿತವು ಪ್ರೀತಿಯಲ್ಲಿ ಬಲವಾಗಿ ಬೇರೂರಿರಬೇಕೆಂದು ಮತ್ತು ಪ್ರೀತಿಯ ಮೇಲೆ ಕಟ್ಟಲ್ಪಟ್ಟಿರಬೇಕೆಂದು ಪ್ರಾರ್ಥಿಸುತ್ತೇನೆ. 18 ನೀವು ಮತ್ತು ದೇವರ ಪರಿಶುದ್ಧ ಜನರೆಲ್ಲರೂ ಕ್ರಿಸ್ತನ ಪ್ರೀತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಶಕ್ತಿಯನ್ನು ಹೊಂದಿದವರಾಗಿರಬೇಕೆಂದು ಪ್ರಾರ್ಥಿಸುತ್ತೇನೆ. ಕ್ರಿಸ್ತನ ಪ್ರೀತಿಯ ಉದ್ದಗಲಗಳನ್ನು ಮತ್ತು ಆಳ ಎತ್ತರಗಳನ್ನು ನೀವು ಅರ್ಥಮಾಡಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. 19 ಕ್ರಿಸ್ತನ ಪ್ರೀತಿಯನ್ನು ಮನುಷ್ಯನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ಪ್ರೀತಿಯನ್ನು ನೀವು ತಿಳಿದುಕೊಳ್ಳಶಕ್ತರಾಗಲೆಂದು ಪ್ರಾರ್ಥಿಸುತ್ತೇನೆ. ಆಗ ನೀವು ದೇವರ ಸಂಪೂರ್ಣತೆಯಿಂದ ತುಂಬಿದವರಾಗಲು ಸಾಧ್ಯವಾಗುತ್ತದೆ.
20 ನಮ್ಮಲ್ಲಿ ಕಾರ್ಯಮಾಡುತ್ತಿರುವ ತನ್ನ ಶಕ್ತಿಯಿಂದ ನಾವು ಕೇಳುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಎಷ್ಟೋ ಹೆಚ್ಚೆಚ್ಚಾಗಿ ದೇವರು ಮಾಡಬಲ್ಲನು. 21 ಆತನಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರವಾಗಲಿ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International