Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 31

ಅರಸನಾದ ಹಿಜ್ಕೀಯನ ಅಭಿವೃದ್ಧಿಕಾರ್ಯಗಳು

31 ಪಸ್ಕಹಬ್ಬದ ಆಚರಣೆಯು ಮುಕ್ತಾಯವಾಯಿತು. ಇಸ್ರೇಲಿನಿಂದ ಜೆರುಸಲೇಮಿಗೆ ಬಂದಿದ್ದವರು ಯೆಹೂದದ ಪಟ್ಟಣಗಳಿಗೆ ಹೋದರು. ಅಲ್ಲಿದ್ದ ಕಲ್ಲಿನ ವಿಗ್ರಹಗಳನ್ನು ಒಡೆದು ನಾಶಮಾಡಿದರು; ಅಶೇರಸ್ತಂಭಗಳನ್ನು ಮತ್ತು ಪೂಜಾಸ್ಥಳಗಳನ್ನು ಕೆಡವಿಹಾಕಿದರು. ಹೀಗೆ ಅವರು ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯಗಳಲ್ಲೆಲ್ಲಾ ಸಂಚಾರ ಮಾಡಿದರು. ಆ ಜನರು ಎಫ್ರಾಯೀಮ್ ಮನಸ್ಸೆ ಪ್ರಾಂತ್ಯಗಳಲ್ಲಿಯೂ ಹಾಗೆಯೇ ಮಾಡಿದರು. ವಿಗ್ರಹಗಳನ್ನು ಪೂಜಿಸಲು ಮಾಡಿದ ಎಲ್ಲಾ ವಸ್ತುಗಳನ್ನು ನಾಶಮಾಡಿದರು. ಬಳಿಕ ಆ ಇಸ್ರೇಲರೆಲ್ಲಾ ತಮ್ಮತಮ್ಮ ಮನೆಗಳಿಗೆ ಹಿಂದಿರುಗಿದರು.

ಯಾಜಕರೂ ಲೇವಿಯರೂ ಬೇರೆಬೇರೆ ಗುಂಪುಗಳಾಗಿ ವಿಭಾಗಿಸಲ್ಪಟ್ಟಿದ್ದರು. ಪ್ರತಿಯೊಂದು ಗುಂಪಿನವರಿಗೂ ಪ್ರತ್ಯೇಕವಾದ ಸೇವಾಕಾರ್ಯವು ಕೊಡಲ್ಪಟ್ಟಿತ್ತು. ಅರಸನಾದ ಹಿಜ್ಕೀಯನು ಅವರ ಕೆಲಸಗಳನ್ನು ಮತ್ತೆ ಪ್ರಾರಂಭಿಸಲು ಈ ಗುಂಪಿನವರಿಗೆ ಹೇಳಿದನು. ಹೀಗೆ ಯಾಜಕರೂ ಲೇವಿಯರೂ ಮತ್ತೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುತ್ತಿದ್ದರು. ಅಲ್ಲದೆ ದೇವಾಲಯದೊಳಗೆ ದೇವರಿಗೆ ಸ್ತುತಿಗೀತೆ ಹಾಡುವ ಕೆಲಸವೂ ಅವರದೇ ಆಗಿತ್ತು. ಹಿಜ್ಕೀಯನು ತನ್ನ ಪಶುಗಳಲ್ಲಿ ಕೆಲವನ್ನು ಸರ್ವಾಂಗಹೋಮಕ್ಕಾಗಿ ಕೊಟ್ಟನು. ಇವುಗಳನ್ನು ಪ್ರತಿನಿತ್ಯದ ಬೆಳಿಗ್ಗೆ ಮತ್ತು ಸಂಜೆ ಸಮರ್ಪಿಸುವ ಸರ್ವಾಂಗಹೋಮಗಳಿಗಾಗಿ ಉಪಯೋಗಿಸಿಕೊಳ್ಳಲಾಯಿತು; ಅಲ್ಲದೆ ಸಬ್ಬತ್ ದಿನದಂದೂ ಅಮವಾಸ್ಯೆ ದಿನದಂದೂ ಅವುಗಳನ್ನು ಅರ್ಪಿಸಿದರು. ಇವೆಲ್ಲಾ ದೇವರ ಕಟ್ಟಳೆಗಳಿಗನುಸಾರವಾಗಿದ್ದವು.

ದೇಶದ ಜನರು ಯಾಜಕರಿಗೂ ಲೇವಿಯರಿಗೂ ತಮ್ಮ ಬೆಳೆಯ ಒಂದು ಪಾಲನ್ನು ಕೊಡಬೇಕಾಗಿತ್ತು. ಹಿಜ್ಕೀಯನು ಯಾಜಕರಿಗೂ ಲೇವಿಯರಿಗೂ ಅವರು ಕೊಡಬೇಕಾಗಿದ್ದ ಪಾಲನ್ನು ಕೊಡಬೇಕೆಂದು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ಜನರಿಗೆ ಆಜ್ಞಾಪಿಸಿದನು. ಹೀಗಿರುವಾಗ ಯಾಜಕರೂ ಲೇವಿಯರೂ ತಮ್ಮ ಸಮಯವನ್ನೆಲ್ಲಾ ದೇವರ ಸೇವೆಯಲ್ಲಿ ಕಳೆಯಬಹುದು. ದೇಶದ ಜನರೆಲ್ಲಾ ಅರಸನ ಈ ಆಜ್ಞೆಯನ್ನು ಕೇಳಿ ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನುತುಪ್ಪ ಮುಂತಾದ ಎಲ್ಲವುಗಳಲ್ಲಿ ಮತ್ತು ಪ್ರಥಮ ಫಲಗಳಲ್ಲಿ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಕೊಟ್ಟರು. ಇಸ್ರೇಲಿನ ಮತ್ತು ಯೆಹೂದದ ಊರುಗಳಲ್ಲಿ ವಾಸವಾಗಿದ್ದ ಜನರು ತಮ್ಮ ದನಕರುಗಳಲ್ಲಿ ಮತ್ತು ಕುರಿಗಳಲ್ಲಿ ದಶಾಂಶವನ್ನು ತಂದುಕೊಟ್ಟರು. ಯೆಹೋವನಿಗೆ ಮೀಸಲಾಗಿ ವಿಶೇಷ ಸ್ಥಳದಲ್ಲಿ ಇಡತಕ್ಕ ಪವಿತ್ರ ವಸ್ತುಗಳಲ್ಲಿಯೂ ದಶಾಂಶವನ್ನು ತಂದುಕೊಟ್ಟರು. ಇವುಗಳನ್ನೆಲ್ಲ ಅವರು ತಮ್ಮ ದೇವರಾದ ಯೆಹೋವನಿಗೆ ತಂದು ರಾಶಿ ಹಾಕಿದರು.

ವರ್ಷದ ಮೂರನೆಯ ತಿಂಗಳಿನಲ್ಲಿ ಜನರು ತಮ್ಮ ಕಾಣಿಕೆಗಳನ್ನು ತರಲು ಪ್ರಾರಂಭ ಮಾಡಿದರೆ ಅದು ಏಳನೆಯ ತಿಂಗಳಲ್ಲಿ ಮುಗಿಯುತ್ತಿತ್ತು. ಹಿಜ್ಕೀಯನೂ ಪ್ರಧಾನರೂ ಜನರ ಕಾಣಿಕೆಯ ರಾಶಿಯನ್ನು ನೋಡಿ ಯೆಹೋವನಿಗೆ ಸ್ತೋತ್ರ ಮಾಡಿದರು ಮತ್ತು ಅದನ್ನು ಅರ್ಪಿಸಿದ ಜನರಿಗಾಗಿ ಸ್ತೋತ್ರ ಮಾಡಿದರು.

ಹಿಜ್ಕೀಯನು ಕಾಣಿಕೆಯ ರಾಶಿಯ ವಿಷಯವಾಗಿ ಯಾಜಕರೊಂದಿಗೆ ಮತ್ತು ಲೇವಿಯರೊಂದಿಗೆ ಮಾತನಾಡಿದಾಗ 10 ಚಾದೋಕನ ಕುಲದ ಮಹಾಯಾಜಕನಾದ ಅಜರ್ಯನು ಹಿಜ್ಕೀಯನಿಗೆ, “ದೇವಾಲಯಕ್ಕೆ ಜನರು ಕಾಣಿಕೆಗಳನ್ನು ತರಲು ಪ್ರಾರಂಭ ಮಾಡಿದಂದಿನಿಂದ ನಮಗೆ ಊಟಕ್ಕೆ ಯಾವ ಕೊರತೆಯೂ ಇಲ್ಲವಾಗಿದೆ. ನಾವು ತೃಪ್ತಿಯಾಗುವಷ್ಟು ಊಟಮಾಡಿದರೂ ಇನ್ನೂ ಉಳಿದಿರುತ್ತದೆ. ದೇವರು ನಿಜವಾಗಲೂ ತನ್ನ ಜನರನ್ನು ಆಶೀರ್ವದಿಸಿರುತ್ತಾನೆ. ಆದ್ದರಿಂದಲೇ ನಮಗೆ ಹೇರಳವಾಗಿ ಉಳಿದಿದೆ” ಎಂದು ಹೇಳಿದನು.

11 ಆಗ ಹಿಜ್ಕೀಯನು ದೇವಾಲಯದಲ್ಲಿ ಉಗ್ರಾಣದ ಕೋಣೆಗಳನ್ನು ಕಟ್ಟಲು ಯಾಜಕರಿಗೆ ಆಜ್ಞಾಪಿಸಿದನು. ಅಂತೆಯೇ ಅವುಗಳನ್ನು ಕಟ್ಟಲಾಯಿತು. 12 ಆ ಬಳಿಕ ದೇವರಿಗೆ ಕೊಟ್ಟಿದ್ದ ದಶಮಾಂಶ ಮತ್ತು ಬೇರೆ ಕಾಣಿಕೆಗಳನ್ನು ಆ ಉಗ್ರಾಣದ ಕೋಣೆಗಳಲ್ಲಿ ಕೂಡಿಸಿಟ್ಟರು. ಲೇವಿಯನಾದ ಕೋನನ್ಯನು ಇದರ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟನು. ಇವನಿಗೆ ಸಹಾಯಕನಾಗಿ ಕೋನನ್ಯನ ಸೋದರನಾದ ಶಿಮ್ಮಿಯು ನೇಮಿಸಲ್ಪಟ್ಟನು. 13 ಕೋನನ್ಯ ಮತ್ತು ಶಿಮ್ಮಿಯು ಈ ಜನರ ಮೇಲ್ವಿಚಾರಕರಾಗಿದ್ದರು; ಯೆಹೀಯೇಲ್, ಅಜಜ್ಯ, ನಹತ್, ಅಸಾಹೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಾಕ್ಯ, ಮಹತ್ ಮತ್ತು ಬೆನಾಯ ಇವರನ್ನು ಸಹಾಯಕರಾಗಿ ಅರಸನಾದ ಹಿಜ್ಕೀಯನೂ ದೇವಾಲಯದ ಮೇಲ್ವಿಚಾರಕನಾದ ಅಜರ್ಯನೂ ಆರಿಸಿದರು.

14 ಕೋರೆ ಎಂಬ ಲೇವಿಯು ಜನರು ದೇವರಿಗೆ ಸ್ವ ಇಚ್ಛೆಯಿಂದ ಸಮರ್ಪಿಸಿದ ಕಾಣಿಕೆಗೆ ಮುಖ್ಯಸ್ತನಾಗಿದ್ದನು. ಅವನು ಅದರ ಲೆಕ್ಕವನ್ನು ಒಪ್ಪಿಸುತ್ತಿದ್ದನು. ಅಲ್ಲದೆ ಯೆಹೋವನಿಗೆ ಕೊಟ್ಟವುಗಳನ್ನು ಮತ್ತು ಯೆಹೋವನಿಗೆ ಮೀಸಲಾಗಿಟ್ಟ ಕಾಣಿಕೆಗಳನ್ನು ಹಂಚಿಕೊಡುವುದು ಅವನ ಜವಾಬ್ದಾರಿಕೆಯಾಗಿತ್ತು. ಅಲ್ಲದೆ ಅವನು ಪೂರ್ವದ ಬಾಗಿಲಿನ ದ್ವಾರಪಾಲಕನಾಗಿದ್ದನು. ಅವನು ಲೇವಿಯನಾದ ಇಮ್ನನ ಮಗನು. 15 ಏದೆನ್, ಮಿನ್ಯಾಮಿನ್, ಯೇಷೂವ, ಶೆಮಾಯ, ಅಮರ್ಯ ಮತ್ತು ಶೆಕನ್ಯ ಇವರು ಕೋರೆಯ ಸಹಾಯಕರು. ಇವರು ಯಾಜಕರು ವಾಸಿಸುವ ಪಟ್ಟಣಗಳಲ್ಲಿದ್ದು ನಂಬಿಗಸ್ತಿಕೆಯಿಂದ ಸೇವೆ ಮಾಡಿದರು. ಕೂಡಿಸಿದ ಕಾಣಿಕೆಗಳನ್ನು ನಂಬಿಗಸ್ತಿಕೆಯಿಂದ ಯಾಜಕರ ಕುಟುಂಬದವರಿಗೆ ಪಕ್ಷಪಾತವಿಲ್ಲದೆ ಹಂಚಿದರು.

16 ಮೂರು ವರ್ಷಕ್ಕೆ ಮೇಲ್ಪಟ್ಟ ಎಲ್ಲಾ ಗಂಡುಮಕ್ಕಳಿಗೂ ಲೇವಿಯರ ವಂಶಾವಳಿ ಪಟ್ಟಿಯಲ್ಲಿ ಹೆಸರು ದಾಖಲಾದವರೆಲ್ಲರಿಗೂ ಹಂಚಿದರು. ಗಂಡಸರು ದೇವಾಲಯದಲ್ಲಿ ತಮಗೆ ಒಪ್ಪಿಸಿರುವ ಕೆಲಸಗಳನ್ನು ಮಾಡಿದರು. 17 ಒಟ್ಟುಗೂಡಿಸಿದ ಕಾಣಿಕೆಯಲ್ಲಿ ಯಾಜಕರೂ ತಮ್ಮ ಪಾಲನ್ನು ತೆಗೆದುಕೊಂಡರು. ಇದನ್ನು ವಂಶಾವಳಿಗನುಸಾರವಾಗಿ ಮಾಡಲಾಯಿತು. ಲೇವಿಯರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕಿಂತ ಹೆಚ್ಚು ವಯಸ್ಸಾದವರೂ ತಮ್ಮ ಪಾಲನ್ನು ಜವಾಬ್ದಾರಿಗಳಿಗನುಸಾರವಾಗಿಯೂ ತಮ್ಮ ಗುಂಪುಗಳಿಗನುಸಾರವಾಗಿಯೂ ಪಡೆದುಕೊಂಡರು. 18 ಲೇವಿಯರ ಹೆಂಡತಿಯರಿಗೂ ಮಕ್ಕಳಿಗೂ ಎಲ್ಲರಿಗೂ ಅದರಲ್ಲಿ ಪಾಲು ದೊರೆಯಿತು. ಯಾರ್ಯಾರ ಹೆಸರುಗಳು ಲೇವಿಯರ ಕುಟುಂಬದ ಪಟ್ಟಿಯಲ್ಲಿ ಬರೆಯಲ್ಪಟ್ಟಿತ್ತೊ ಅವರೆಲ್ಲರಿಗೆ ಪಾಲು ದೊರೆಯಿತು. ಯಾಕೆಂದರೆ ಲೇವಿಯರು ತಮ್ಮನ್ನು ದೇವಾಲಯದ ಸೇವೆಗೆ ಯಾವಾಗಲೂ ಸಿದ್ಧಪಡಿಸಿಕೊಳ್ಳುತ್ತಿದ್ದರು.

19 ಆರೋನನ ಸಂತತಿಯ ಕೆಲವು ಯಾಜಕರಿಗೆ ಲೇವಿಯರು ವಾಸಿಸುತ್ತಿದ್ದ ಪಟ್ಟಣಗಳ ಹತ್ತಿರ ಹೊಲಗಳಿದ್ದವು. ಆರೋನನ ಸಂತತಿಯವರಲ್ಲಿ ಕೆಲವರು ಲೇವಿಯರ ಪಟ್ಟಣಗಳಲ್ಲಿಯೂ ವಾಸಮಾಡುತ್ತಿದ್ದರು. ಈ ಆರೋನನ ಸಂತತಿಯವರಿಗೆ ಪಾಲು ಕೊಡಲು ಕೆಲವರನ್ನು ನೇಮಿಸಲಾಯಿತು. ಗಂಡಸರಿಗೆ ಮತ್ತು ವಂಶಾವಳಿಯಲ್ಲಿ ಹೆಸರನ್ನು ಹೊಂದಿದ್ದ ಎಲ್ಲಾ ಲೇವಿಯರಿಗೆ ಸಂಗ್ರಹಿಸಲ್ಪಟ್ಟಿದ್ದರಲ್ಲಿ ಅವರವರ ಪಾಲು ದೊರೆಯಿತು.

20 ಹೀಗೆ ಅರಸನಾದ ಹಿಜ್ಕೀಯನು ಯೆಹೂದ ದೇಶದಲ್ಲಿ ಈ ಒಳ್ಳೆಯ ಕಾರ್ಯವನ್ನು ಮಾಡಿದನು. ದೇವರಾದ ಯೆಹೋವನ ದೃಷ್ಟಿಯಲ್ಲಿ ಯೋಗ್ಯವಾದದ್ದನ್ನು ನಂಬಿಗಸ್ತಿಕೆಯಿಂದ ಮಾಡಿದನು. 21 ಹಿಜ್ಕೀಯನು ತಾನು ಪ್ರಾರಂಭಿಸಿದ ಪ್ರತಿಯೊಂದು ಕಾರ್ಯಗಳನ್ನೂ ದೇವಾಲಯದ ಕಾರ್ಯಗಳನ್ನೂ ದೇವರ ಕಟ್ಟಳೆಗಳನ್ನೂ ಅನುಸರಿಸುವದನ್ನು ಪೂರ್ಣಹೃದಯದಿಂದ ಮಾಡಿ ಯಶಸ್ವಿಯಾದನು.

ಪ್ರಕಟನೆ 17

ಮೃಗದ ಮೇಲಿದ್ದ ಸ್ತ್ರೀ

17 ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡಿದನು. ಏಳು ಪಾತ್ರೆಗಳನ್ನು ಹೊಂದಿದ್ದವರಲ್ಲಿ ಇವನೂ ಒಬ್ಬನಾಗಿದ್ದನು. ಆ ದೇವದೂತನು, “ಬಾ, ಪ್ರಸಿದ್ಧಳಾದ ವೇಶ್ಯಾಸ್ತ್ರೀಗೆ ನೀಡುವ ದಂಡನೆಯನ್ನು ನಾನು ನಿನಗೆ ತೋರಿಸುತ್ತೇನೆ. ಬಹಳ ನೀರುಗಳ ಮೇಲೆ ಕುಳಿತುಕೊಂಡಿರುವವಳು ಅವಳೇ. ಲೋಕದ ರಾಜರುಗಳು ಅವಳೊಂದಿಗೆ ಲೈಂಗಿಕ ಪಾಪ ಮಾಡಿದರು. ಲೋಕದ ಜನರು ಅವಳ ಲೈಂಗಿಕ ಪಾಪವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು” ಎಂದು ಹೇಳಿದನು.

ಬಳಿಕ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಎತ್ತಿಕೊಂಡು ಮರಳುಗಾಡಿಗೆ ಹೋದನು. ಅಲ್ಲಿ ಒಬ್ಬ ಸ್ತ್ರೀಯು ಕೆಂಪು ಮೃಗದ ಮೇಲೆ ಕುಳಿತಿರುವುದನ್ನು ನಾನು ನೋಡಿದೆನು. ಆ ಮೃಗದ ಮೈಮೇಲೆಲ್ಲಾ ದೇವದೂಷಣೆಯ ಹೆಸರುಗಳು ಬರೆದಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಆ ಸ್ತ್ರೀಯು ಧೂಮ್ರ ವರ್ಣದ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿದ್ದಳು. ಅವಳು ತಾನು ತೊಟ್ಟಿದ್ದ ಚಿನ್ನ, ರತ್ನ, ಮುತ್ತು, ಮುಂತಾದವುಗಳಿಂದ ಪ್ರಕಾಶಿಸುತ್ತಿದ್ದಳು. ಅವಳು ತನ್ನ ಕೈಯಲ್ಲಿ ಚಿನ್ನದ ಬಟ್ಟಲನ್ನು ಹಿಡಿದಿದ್ದಳು. ಆ ಬಟ್ಟಲು ಅಸಹ್ಯವಾದವುಗಳಿಂದ ಮತ್ತು ಅವಳ ಲೈಂಗಿಕ ಪಾಪಗಳ ಅಶುದ್ಧತೆಯಿಂದ ತುಂಬಿಹೋಗಿತ್ತು. ಅವಳ ಹಣೆಯ ಮೇಲೆ ಒಂದು ಬರಹವನ್ನು ಬರೆದಿತ್ತು. ಆ ಬರಹಕ್ಕೆ ಗೂಢಾರ್ಥವಿತ್ತು. ಅಲ್ಲಿ ಬರೆದಿದ್ದುದು ಹೀಗಿತ್ತು:

ಬಾಬಿಲೋನ್ ಎಂಬ ಮಹಾನಗರಿಯು

ಭೂಮಿಯಲ್ಲಿರುವ ಕೆಟ್ಟಕಾರ್ಯಗಳಿಗೆ

ಮತ್ತು ಜಾರಸ್ತ್ರೀಯರಿಗೆ ತಾಯಿ.

ಆ ಸ್ತ್ರೀಯು ಕುಡಿದು ಮತ್ತಳಾಗಿರುವುದನ್ನು ನಾನು ನೋಡಿದೆನು. ಅವಳು ದೇವರ ಪರಿಶುದ್ಧ ಜನರ ರಕ್ತವನ್ನು ಕುಡಿದು ಮತ್ತಳಾಗಿದ್ದಳು. ಯೇಸುವಿನಲ್ಲಿ ತಮಗಿರುವ ನಂಬಿಕೆಯ ಕುರಿತಾಗಿ ತಿಳಿಸಿದ ಜನರ ರಕ್ತವನ್ನು ಅವಳು ಕುಡಿದು ಮತ್ತಳಾಗಿದ್ದಳು.

ಆ ಸ್ತ್ರೀಯನ್ನು ನಾನು ನೋಡಿದಾಗ ನನಗೆ ತುಂಬಾ ಆಶ್ಚರ್ಯವಾಯಿತು. ಆಗ ದೇವದೂತನು ನನಗೆ, “ನೀನೇಕೆ ಆಶ್ಚರ್ಯಗೊಂಡೆ? ಈ ಸ್ತ್ರೀಯ ಗೂಢಾರ್ಥವನ್ನು ಮತ್ತು ಈಕೆ ಸವಾರಿ ಮಾಡುತ್ತಿರುವ ಏಳು ತಲೆಗಳನ್ನು ಮತ್ತು ಹತ್ತು ಕೊಂಬುಗಳನ್ನು ಹೊಂದಿರುವ ಮೃಗದ ಗೂಢಾರ್ಥವನ್ನು ನಾನು ನಿನಗೆ ಹೇಳುತ್ತೇನೆ. ನೀನು ನೋಡಿದ ಆ ಮೃಗವು ಒಂದು ಕಾಲದಲ್ಲಿ ಜೀವಿಸಿತ್ತು. ಆದರೆ ಈಗ ಆ ಮೃಗವು ಜೀವಂತವಾಗಿಲ್ಲ. ಆದರೆ ಆ ಮೃಗವು ತಳವಿಲ್ಲದ ಕೂಪದಿಂದ ಜೀವಂತವಾಗಿ ಮೇಲೆದ್ದುಬಂದು ನಾಶವಾಗು ವುದು. ಲೋಕದಲ್ಲಿ ಜೀವಿಸುತ್ತಿರುವ ಜನರು ಆ ಮೃಗವನ್ನು ನೋಡಿ, ಅದು ಒಂದು ಕಾಲದಲ್ಲಿ ಜೀವಂತವಾಗಿತ್ತು, ಈಗ ಇಲ್ಲ, ಆದರೆ ಮತ್ತೆ ಬರುವುದು ಎಂಬುದನ್ನು ತಿಳಿದು ಅವರು ಆಶ್ಚರ್ಯಪಡುವರು. ಲೋಕವು ಸೃಷ್ಟಿಯಾದಂದಿನಿಂದ ಜೀವಬಾಧ್ಯರ ಪುಸ್ತಕದಲ್ಲಿ ಈ ಜನರ ಹೆಸರುಗಳನ್ನು ಬರೆದೇ ಇಲ್ಲ.

“ಇದನ್ನು ಅರ್ಥಮಾಡಿಕೊಳ್ಳಲು ನಿನಗೆ ಬುದ್ಧಿ ಬೇಕು. ಆ ಮೃಗದ ಏಳು ತಲೆಗಳೇ ಆ ಸ್ತ್ರೀಯು ಕುಳಿತುಕೊಳ್ಳುವ ಏಳು ಬೆಟ್ಟಗಳಾಗಿವೆ. ಅವು ಏಳು ಮಂದಿ ರಾಜರುಗಳೂ ಆಗಿವೆ. 10 ಐದು ಮಂದಿ ರಾಜರುಗಳು ಈಗಾಗಲೇ ಸತ್ತಿದ್ದಾರೆ. ಒಬ್ಬ ರಾಜನು ಮಾತ್ರ ಈಗ ಜೀವಿಸಿದ್ದಾನೆ. ಕೊನೆಯ ರಾಜನು ಬರುತ್ತಾನೆ. ಅವನು ಬಂದು ಸ್ವಲ್ಪಕಾಲ ಮಾತ್ರ ಇರುತ್ತಾನೆ. 11 ಒಂದುಕಾಲದಲ್ಲಿ ಜೀವಿಸಿದ್ದು, ಆದರೆ ಈಗ ಜೀವಿಸಿಲ್ಲದ ಈ ಮೃಗವು ಎಂಟನೆಯ ರಾಜ. ಈ ಎಂಟನೆಯ ರಾಜನೂ ಮೊದಲ ಏಳು ರಾಜರುಗಳ ಗುಂಪಿಗೆ ಸೇರಿದವನು. ಅವನೂ ನಾಶವಾಗುತ್ತಾನೆ.

12 “ನೀನು ನೋಡಿದ ಹತ್ತು ಕೊಂಬುಗಳೇ ಹತ್ತು ರಾಜರುಗಳಾಗಿವೆ. ಈ ಹತ್ತು ರಾಜರುಗಳು ಇನ್ನೂ ತಮ್ಮ ರಾಜ್ಯವನ್ನು ಪಡೆದಿಲ್ಲ. ಆದರೆ ಅವರು ಆಳುವ ಅಧಿಕಾರವನ್ನು ಮೃಗದ ಸಂಗಡ ಒಂದು ಗಂಟೆ ಪಡೆಯುತ್ತಾರೆ. 13 ಈ ಹತ್ತು ರಾಜರುಗಳೆಲ್ಲರೂ ಒಂದೇ ಉದ್ದೇಶವುಳ್ಳವರಾಗಿದ್ದಾರೆ. ಅವರು ತಮ್ಮ ಶಕ್ತಿಯನ್ನು ಮತ್ತು ಅಧಿಕಾರವನ್ನು ಮೃಗಕ್ಕೆ ಕೊಡುತ್ತಾರೆ. 14 ಅವರು ಕುರಿಮರಿಯಾದಾತನ ವಿರುದ್ಧ ಯುದ್ಧಗಳನ್ನು ಮಾಡುತ್ತಾರೆ. ಆದರೆ ಕುರಿಮರಿಯಾದಾತನು ಪ್ರಭುಗಳ ಪ್ರಭುವಾದ್ದರಿಂದ ಮತ್ತು ರಾಜಾಧಿರಾಜನಾದ್ದರಿಂದ ಅವರನ್ನು ಸೋಲಿಸುತ್ತಾನೆ. ಆತನೊಂದಿಗೆ, ತಾನು ಕರೆದಿರುವ ಜನರು, ಆಯ್ಕೆಮಾಡಿಕೊಂಡಿರುವ ಜನರು ಮತ್ತು ತನ್ನ ನಂಬಿಗಸ್ತ ಹಿಂಬಾಲಕರು ಇದ್ದರು” ಎಂದನು.

15 ನಂತರ ದೇವದೂತನು ನನಗೆ ಹೀಗೆ ಹೇಳಿದನು: “ಆ ವೇಶ್ಯೆಯು ಕುಳಿತುಕೊಳ್ಳುವ ನೀರುಗಳನ್ನು ನೀನು ನೋಡಿದೆ. ಈ ನೀರುಗಳು ಈ ಲೋಕದ ಅನೇಕ ಜನರನ್ನೂ ವಿವಿಧ ಜನಾಂಗಗಳನ್ನೂ ಪ್ರಜೆಗಳನ್ನೂ ಭಾಷೆಗಳನ್ನೂ ಸೂಚಿಸು ತ್ತವೆ. 16 ನೀನು ನೋಡಿದ ಆ ಮೃಗ ಮತ್ತು ಅದರ ಹತ್ತು ಕೊಂಬುಗಳು (ರಾಜರುಗಳು) ಆ ವೇಶ್ಯೆಯನ್ನು ದ್ವೇಷಿಸುತ್ತವೆ. ಅವಳಲ್ಲಿರುವುದನ್ನೆಲ್ಲ ಅವರು ಕಿತ್ತುಕೊಂಡು, ಅವಳನ್ನು ನಗ್ನಾವಸ್ಥೆಯಲ್ಲಿ ಬಿಡುತ್ತಾರೆ. ಅವರು ಅವಳ ದೇಹವನ್ನು ತಿಂದು, ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. 17 ತನ್ನ ಕಾರ್ಯವನ್ನು ಮಾಡಬೇಕೆಂಬ ಬಯಕೆಯನ್ನು ದೇವರು ಆ ಹತ್ತು ರಾಜರುಗಳಲ್ಲಿ ಉಂಟುಮಾಡಿದ್ದರಿಂದ ಅವರು ಆಳಲು ತಮಗಿದ್ದ ಅಧಿಕಾರವನ್ನು ಮೃಗಕ್ಕೆ ಕೊಡಲು ಸಮ್ಮತಿಸಿದರು. ದೇವರು ಹೇಳಿದ್ದೆಲ್ಲ ಸಂಪೂರ್ಣವಾಗಿ ನೆರವೇರುವ ತನಕ ಅವರು ಆಳುತ್ತಾರೆ. 18 ನೀನು ನೋಡಿದ ಸ್ತ್ರೀಯು ಲೋಕದ ರಾಜರುಗಳನ್ನು ಆಳುವ ಮಹಾನಗರಿಯಾಗಿದ್ದಾಳೆ.”

ಜೆಕರ್ಯ 13:2-9

ಇನ್ನು ಮುಂದೆ ಸುಳ್ಳು ಪ್ರವಾದಿಗಳಿರುವದಿಲ್ಲ

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಈ ಪ್ರಪಂಚದಲ್ಲಿರುವ ವಿಗ್ರಹಗಳನ್ನೆಲ್ಲಾ ನಾನು ತೆಗೆದುಬಿಡುವೆನು. ಜನರು ಅವುಗಳ ಹೆಸರನ್ನು ತಮ್ಮ ನೆನಪಿಗೆ ತಾರರು. ಸುಳ್ಳು ಪ್ರವಾದಿಗಳನ್ನೂ ಅಶುದ್ಧ ಆತ್ಮಗಳನ್ನೂ ನಾನು ಭೂಮಿಯ ಮೇಲಿಂದ ತೆಗೆದುಬಿಡುವೆನು. ಯಾವನಾದರೂ ಪ್ರವಾದಿಸುವದನ್ನು ಮಂದುವರಿಸಿದರೆ ಅವನು ಶಿಕ್ಷೆಗೆ ಗುರಿಯಾಗುವನು. ‘ನೀನು ಯೆಹೋವನ ಹೆಸರಿನಲ್ಲಿ ಸುಳ್ಳನ್ನು ಹೇಳಿರುವೆ. ಆದ್ದರಿಂದ ನೀನು ಸಾಯಲೇಬೇಕು’ ಎಂದು ಅವನ ಸ್ವಂತ ತಂದೆತಾಯಿಗಳು ಅವನಿಗೆ ಹೇಳುವರು. ಅವನ ಸ್ವಂತ ತಂದೆ ತಾಯಿಗಳು ಅವನು ಸುಳ್ಳು ಪ್ರವಾದನೆ ಹೇಳಿದ್ದಕ್ಕೆ ಅವನನ್ನು ಖಡ್ಗದಿಂದ ಕೊಲ್ಲಿಸುವರು. ಆ ಸಮಯದಲ್ಲಿ ಪ್ರವಾದಿಗಳು ತಮ್ಮ ದರ್ಶನ, ಪ್ರವಾದನೆಗಳಿಗಾಗಿ ನಾಚಿಕೊಳ್ಳುವರು. ತಾವು ಪ್ರವಾದಿಗಳೆಂದು ತೋರಿಸಿಕೊಳ್ಳಲು ಧರಿಸುವ ಗಡುಸಾದ ಬಟ್ಟೆಗಳನ್ನು ಧರಿಸಿಕೊಳ್ಳುವದಿಲ್ಲ. ಅವರು ಪ್ರವಾದನೆಗಳೆಂದು ಹೇಳುವ ತಮ್ಮ ಸುಳ್ಳುಗಳಿಂದ ಜನರನ್ನು ಮೋಸಪಡಿಸುವದಿಲ್ಲ. ಅವನು, ‘ನಾನು ಪ್ರವಾದಿಯಲ್ಲ, ನಾನೊಬ್ಬ ರೈತ. ನಾನು ಬಾಲ್ಯಪ್ರಾಯದಿಂದಲೇ ರೈತನಾಗಿದ್ದೇನೆ’ ಎಂದು ಹೇಳುವನು. ಆದರೆ ಬೇರೆ ಜನರು, ‘ಹಾಗಾದರೆ ನಿನ್ನ ಕೈಯಲ್ಲಿ ಗಾಯಗಳೇನು?’ ಎಂದು ಕೇಳಿದಾಗ ಅವನು, ‘ನನ್ನ ಸ್ನೇಹಿತರ ಮನೆಯಲ್ಲಿ ನನಗೆ ಏಟು ಬಿತ್ತು’ ಎಂದು ಅನ್ನುವನು.”

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ: “ಖಡ್ಗವೇ, ಕುರುಬನನ್ನು ಹೊಡೆ. ನನ್ನ ಸ್ನೇಹಿತನಿಗೆ ಹೊಡೆ. ಕುರುಬನನ್ನು ಹೊಡೆ. ಆಗ ಕುರಿಗಳು ಚದರಿಹೋಗುವವು. ಮತ್ತು ನಾನು ಆ ಚಿಕ್ಕವುಗಳನ್ನು ಶಿಕ್ಷಿಸುವೆನು. ದೇಶದ ಮೂರನೇ ಎರಡು ಪಾಲಷ್ಟು ಜನರು ಗಾಯಗೊಂಡು ಸಾಯುವರು. ಒಂದು ಪಾಲಷ್ಟು ಜನರು ಬದುಕಿ ಉಳಿಯುವರು. ಆ ಬಳಿಕ ನಾನು ಉಳಿದವರನ್ನು ಪರೀಕ್ಷಿಸುವೆನು. ಅವರಿಗೆ ಅನೇಕ ಸಂಕಟ ಬರಮಾಡುವೆನು. ಅದು ಬೆಳ್ಳಿಯನ್ನು ಬೆಂಕಿಯಲ್ಲಿ ಪರೀಕ್ಷಿಸಿದಂತಿರುವುದು. ಒಬ್ಬನು ಬಂಗಾರವನ್ನು ಪರೀಕ್ಷಿಸುವಂತೆ ನಾನು ಅವರನ್ನು ಪರೀಕ್ಷಿಸುವೆನು. ಆಗ ಅವರು ಸಹಾಯ ಮಾಡುವಂತೆ ನನಗೆ ಮೊರೆಯಿಡುವರು ಮತ್ತು ನಾನು ಅವರಿಗೆ ಉತ್ತರಕೊಡುವೆನು. ಆಗ ನಾನು, ‘ನೀವು ನನ್ನ ಜನರು’ ಎಂದು ಹೇಳುವೆನು. ಅದಕ್ಕವರು, ‘ಯೆಹೋವನು ನಮ್ಮ ದೇವರು’ ಎಂದು ಹೇಳುವರು.”

ಯೋಹಾನ 16

16 “ಜನರು ನಿಮ್ಮ ನಂಬಿಕೆಯನ್ನು ನಾಶಮಾಡಲಾಗದಂತೆ ನಾನು ಈ ಸಂಗತಿಗಳನ್ನೆಲ್ಲಾ ನಿಮಗೆ ಹೇಳಿದ್ದೇನೆ. ಜನರು ನಿಮ್ಮನ್ನು ತಮ್ಮ ಸಭಾಮಂದಿರಗಳಿಂದ ಬಹಿಷ್ಕರಿಸುವರು. ಹೌದು, ನಿಮ್ಮನ್ನು ಕೊಂದರೆ ದೇವರ ಸೇವೆ ಮಾಡಿದಂತಾಗುವುದು ಎಂದು ಜನರು ಯೋಚಿಸುವ ಕಾಲ ಬರಲಿದೆ. ಜನರು ತಂದೆಯನ್ನು ಮತ್ತು ನನ್ನನ್ನು ತಿಳಿದಿಲ್ಲದ ಕಾರಣ ಇವುಗಳನ್ನು ಮಾಡುವರು. ಈಗ ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಹೀಗಿರಲು, ಈ ಸಂಗತಿಗಳೆಲ್ಲಾ ನೆರವೇರುವ ಕಾಲ ಬಂದಾಗ ನನ್ನ ಎಚ್ಚರಿಕೆಯ ಮಾತುಗಳನ್ನು ನೀವು ಜ್ಞಾಪಿಸಿಕೊಳ್ಳುವಿರಿ.

ಪವಿತ್ರಾತ್ಮನ ಕಾರ್ಯ

“ನಾನು ಈ ಸಂಗತಿಗಳನ್ನೆಲ್ಲಾ ನಿಮಗೆ ಆರಂಭದಲ್ಲೇ ತಿಳಿಸಲಿಲ್ಲ. ಏಕೆಂದರೆ, ಆಗ ನಾನು ನಿಮ್ಮ ಸಂಗಡವಿದ್ದೆನು. ಈಗಲಾದರೋ, ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹೋಗುತ್ತಿದ್ದೇನೆ. ಆದರೆ ನಿಮ್ಮಲ್ಲಿ ಒಬ್ಬರಾದರೂ, ‘ನೀನು ಎಲ್ಲಿಗೆ ಹೋಗುತ್ತಿರುವೆ?’ ಎಂದು ನನ್ನನ್ನು ಕೇಳಲಿಲ್ಲ. ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದರಿಂದ ನಿಮ್ಮ ಹೃದಯಗಳು ದುಃಖದಿಂದ ತುಂಬಿಹೋಗಿವೆ. ಆದರೆ ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ನಾನು ಹೋಗುವುದು ನಿಮ್ಮ ಒಳ್ಳೆಯದಕ್ಕಾಗಿಯೇ ಏಕೆಂದರೆ ನಾನು ಹೋಗಿ ಸಹಾಯಕನನ್ನು ನಿಮ್ಮ ಬಳಿಗೆ ಕಳುಹಿಸುವೆನು. ನಾನು ಹೋಗದಿದ್ದರೆ, ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ.

“ಸಹಾಯಕನು ಬಂದು ಪಾಪ, ನೀತಿ, ನ್ಯಾಯತೀರ್ಪು ಈ ವಿಷಯಗಳ ಬಗ್ಗೆ ಲೋಕಕ್ಕೆ ತಿಳಿಸಿಕೊಡುವನು. ನನ್ನನ್ನು ನಂಬದಿರುವುದರಿಂದ ಜನರಲ್ಲಿ ಪಾಪವಿದೆಯೆಂದು ಆ ಸಹಾಯಕನು ನಿರೂಪಿಸುವನು. 10 ನಾನು ತಂದೆಯ ಬಳಿಗೆ ಹೋಗುವುದರಿಂದ ನೀತಿಯ ವಿಷಯವಾಗಿಯೂ ಆತನು ಜನರಿಗೆ ನಿರೂಪಿಸುವನು. ಇನ್ನು ಮೇಲೆ ನೀವು ನನ್ನನ್ನು ನೋಡುವುದಿಲ್ಲ. 11 ನ್ಯಾಯತೀರ್ಪಿನ ಕುರಿತಾದ ಸತ್ಯವನ್ನು ಆ ಸಹಾಯಕನು ಈ ಲೋಕಕ್ಕೆ ಸಾಧರಪಡಿಸುವನು, ಏಕೆಂದರೆ ಈ ಲೋಕದ ಅಧಿಪತಿಗೆ ಈಗಾಗಲೇ ನ್ಯಾಯತೀರ್ಪಾಗಿದೆ.

12 “ನಾನು ನಿಮಗೆ ತಿಳಿಸಬೇಕಾದ ಇನ್ನೂ ಅನೇಕ ಸಂಗತಿಗಳಿವೆ. ಆದರೆ ಈಗ ಆ ಸಂಗತಿಗಳನ್ನು ಸ್ವೀಕರಿಸಿಕೊಳ್ಳಲು ನಿಮಗೆ ಬಹು ಕಷ್ಟವಾಗಬಹುದು. 13 ಆದರೆ ಸತ್ಯದ ಆತ್ಮನು ಬಂದಾಗ, ಆತನು ನಿಮ್ಮನ್ನು ಸಕಲ ವಿಷಯದಲ್ಲಿಯೂ ಸತ್ಯಕ್ಕೆ ನಡೆಸುವನು. ಸತ್ಯದ ಆತ್ಮನು ಹೇಳುವುದು ಆತನ ಸ್ವಂತ ಮಾತುಗಳಲ್ಲ. ತಾನು ಕೇಳಿದ್ದನ್ನು ಮಾತ್ರ ಆತನು ಹೇಳುತ್ತಾನೆ. ಸಂಭವಿಸಲಿರುವ ಸಂಗತಿಗಳನ್ನು ಆತನು ನಿಮಗೆ ತಿಳಿಸುತ್ತಾನೆ. 14 ಸತ್ಯದ ಆತ್ಮನು ನನ್ನಿಂದಲೇ ವಿಷಯಗಳನ್ನು ತೆಗೆದುಕೊಂಡು ನಿಮಗೆ ತಿಳಿಸುವುದರ ಮೂಲಕ ನನ್ನನ್ನು ಮಹಿಮೆಪಡಿಸುವನು. 15 ನನ್ನ ತಂದೆಗೆ ಇರುವುದೆಲ್ಲಾ ನನ್ನದೇ. ಆದಕಾರಣ, ಪವಿತ್ರಾತ್ಮನು ನನ್ನಿಂದಲೇ ವಿಷಯಗಳನ್ನು ತೆಗೆದುಕೊಂಡು, ನಿಮಗೆ ತಿಳಿಸುತ್ತಾನೆ ಎಂದು ನಾನು ಹೇಳಿದೆನು.

ದುಃಖವು ಸಂತೋಷವಾಗುವುದು

16 “ಸ್ವಲ್ಪಕಾಲವಾದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಅನಂತರ ಸ್ವಲ್ಪಕಾಲವಾದ ಮೇಲೆ ನೀವು ನನ್ನನ್ನು ಮತ್ತೆ ನೋಡುವಿರಿ.”

17 ಶಿಷ್ಯರಲ್ಲಿ ಕೆಲವರು, “‘ಸ್ವಲ್ಪಕಾಲದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ಪಲ್ಪಕಾಲವಾದ ಬಳಿಕ ನನ್ನನ್ನು ಮತ್ತೆ ನೋಡುವಿರಿ. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ’ ಎಂದು ಆತನು ಹೇಳಿದ್ದರ ಅರ್ಥವೇನು?” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 18 ಶಿಷ್ಯರು, “‘ಸ್ವಲ್ಪಕಾಲ’ ಎಂದರೇನು? ಆತನ ಮಾತೇ ನಮಗೆ ಅರ್ಥವಾಗುತ್ತಿಲ್ಲ” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.

19 ಶಿಷ್ಯರು ಇದರ ಬಗ್ಗೆ ತನ್ನನ್ನು ಕೇಳಬೇಕೆಂದಿದ್ದಾರೆ ಎಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು, “‘ಸ್ವಲ್ಪಕಾಲವಾದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ವಲ್ಪಕಾಲವಾದ ಬಳಿಕ ನನ್ನನ್ನು ನೋಡುವಿರಿ’ ಎಂದು ನಾನು ಹೇಳಿದ್ದರ ಅರ್ಥವೇನೆಂದು ನೀವು ಒಬ್ಬರನ್ನೊಬ್ಬರು ಕೇಳುತ್ತಿದ್ದೀರಾ? 20 ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಅಳುವಿರಿ, ದುಃಖಪಡುವಿರಿ. ಆದರೆ ಲೋಕವು ಸಂತೋಷಪಡುವುದು. ನೀವು ದುಃಖಪಡುವಿರಿ, ಆದರೆ ನಿಮ್ಮ ದುಃಖವು ಆನಂದವಾಗುವುದು.

21 “ಗರ್ಭಿಣಿ ಸ್ತ್ರೀಯು ಪ್ರಸವಿಸುವ ಗಳಿಗೆ ಬಂದಾಗ ವೇದನೆಪಡುತ್ತಾಳೆ. ಮಗುವು ಜನಿಸಿದಾಗ, ಲೋಕದಲ್ಲಿ ಮಗುವೊಂದು ಜನಿಸಿತೆಂಬ ಸಂತೋಷದಿಂದ ಆಕೆ ಆ ವೇದನೆಯನ್ನು ಮರೆತುಬಿಡುತ್ತಾಳೆ. 22 ಇದು ನಿಮಗೂ ಅನ್ವಯಿಸುತ್ತದೆ. ಈಗ ನೀವು ದುಃಖದಿಂದಿದ್ದೀರಿ. ಆದರೆ ನಾನು ನಿಮ್ಮನ್ನು ಮತ್ತೆ ನೋಡಿದಾಗ ಹರ್ಷಿಸುವಿರಿ. ಆ ಹರ್ಷವನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳಲಾರರು. 23 ಆ ದಿನದಲ್ಲಿ ನೀವು ನನಗೆ ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 24 ನೀವು ನನ್ನ ಹೆಸರಿನಲ್ಲಿ ಏನೂ ಕೇಳಿಕೊಳ್ಳಲಿಲ್ಲ. ಕೇಳಿರಿ, ಆಗ ನಿಮಗೆ ದೊರೆಯುವುದು ಮತ್ತು ನಿಮ್ಮ ಆನಂದವು ಪರಿಪೂರ್ಣವಾಗುವುದು.

ಲೋಕದ ಮೇಲೆ ವಿಜಯ

25 “ನಾನು ನಿಮಗೆ ಈ ಸಂಗತಿಗಳನ್ನು ಸಾಮ್ಯಗಳ ರೂಪದಲ್ಲಿ ತಿಳಿಸಿದೆನು. ಆದರೆ ಸಮಯವು ಬರಲಿದೆ. ಆಗ ನಾನು ಸಾಮ್ಯಗಳನ್ನು ಬಳಸದೆ ನನ್ನ ತಂದೆಯ ಬಗ್ಗೆ ಸರಳವಾದ ಮಾತುಗಳಲ್ಲಿ ತಿಳಿಸುವೆನು. 26 ಆಗ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಬೇಡಿಕೊಳ್ಳುವಿರಿ. ನಾನು ನಿಮಗೋಸ್ಕರ ತಂದೆಯನ್ನು ಕೇಳಿಕೊಳ್ಳುವ ಅಗತ್ಯವಿರುವುದಿಲ್ಲ. 27 ಹೌದು, ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ. ನೀವು ನನ್ನನ್ನು ಪ್ರೀತಿಸಿದರಿಂದ ಮತ್ತು ನಾನು ದೇವರಿಂದ ಬಂದೆನೆಂದು ನೀವು ನಂಬುವುದರಿಂದ ಆತನು ನಿಮ್ಮನ್ನು ಪ್ರೀತಿಸುತ್ತಾನೆ. 28 ನಾನು ತಂದೆಯ ಬಳಿಯಿಂದ ಈ ಲೋಕಕ್ಕೆ ಬಂದೆನು. ಈಗ ನಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹಿಂತಿರುಗಿ ಹೋಗುತ್ತಿದ್ದೇನೆ” ಎಂದು ಹೇಳಿದನು.

29 ಆಗ ಶಿಷ್ಯರು ಯೇಸುವಿಗೆ, “ಈಗ ನೀನು ನಮ್ಮೊಂದಿಗೆ ಸ್ಪಷ್ಟವಾಗಿ ಮಾತಾಡುತ್ತಿರುವೆ. ಅರ್ಥವಾಗದಂಥ ಕಠಿಣ ಮಾತುಗಳನ್ನು ನೀನು ಬಳಸುತ್ತಿಲ್ಲ. 30 ನಿನಗೆ ಎಲ್ಲಾ ಸಂಗತಿಗಳು ತಿಳಿದಿವೆಯೆಂದು ನಮಗೆ ಈಗ ತಿಳಿಯಿತು. ಒಬ್ಬನು ಪ್ರಶ್ನೆಯನ್ನು ಕೇಳುವುದಕ್ಕಿಂತ ಮೊದಲೇ ನೀನು ಅವನ ಪ್ರಶ್ನೆಗೆ ಉತ್ತರ ಕೊಡಬಲ್ಲೆ. ಇದರಿಂದಾಗಿ, ನೀನು ದೇವರಿಂದ ಬಂದವನೆಂದು ನಾವು ನಂಬುತ್ತೇವೆ” ಎಂದು ಹೇಳಿದರು.

31 ಯೇಸು, “ಹಾಗಾದರೆ ಈಗ ನೀವು ನಂಬುತ್ತೀರಾ? 32 ನನಗೆ ಕಿವಿಗೊಡಿರಿ. ನೀವು ಚದರಿಹೋಗುವ ಕಾಲ ಬರುತ್ತಿದೆ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಮನೆಗೆ ಚದರಿಹೋಗುವನು. ಆ ಸಮಯ ಈಗಲೇ ಬಂದಿದೆ. ನೀವು ನನ್ನನ್ನು ಬಿಟ್ಟು ಹೋಗುವಿರಿ. ನಾನು ಒಬ್ಬಂಟಿಗನಾಗಿರುವೆನು. ಆದರೆ ನಿಜವಾಗಿ ನಾನೆಂದಿಗೂ ಒಬ್ಬಂಟಿಗನಲ್ಲ. ಏಕೆಂದರೆ ತಂದೆಯು ನನ್ನೊಂದಿಗಿದ್ದಾನೆ.

33 “ನೀವು ನನ್ನಲ್ಲಿ ಶಾಂತಿಯನ್ನು ಹೊಂದಿದವರಾಗಿರಬೇಕೆಂದು ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಈ ಲೋಕದಲ್ಲಿ ನಿಮಗೆ ಸಂಕಟವಿದೆ. ಆದರೆ ಧೈರ್ಯದಿಂದಿರಿ! ನಾನು ಈ ಲೋಕವನ್ನು ಸೋಲಿಸಿದ್ದೇನೆ!” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International