M’Cheyne Bible Reading Plan
ಯೆಹೋವಾಷನು ದೇವಾಲಯವನ್ನು ತಿರಿಗಿ ಕಟ್ಟಿದ್ದು
24 ಯೆಹೋವಾಷನು ಪಟ್ಟಕ್ಕೆ ಬಂದಾಗ ಏಳು ವರ್ಷದವನಾಗಿದ್ದನು. ಅವನು ನಲವತ್ತು ವರ್ಷಗಳ ಕಾಲ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಚಿಬ್ಯ. ಆಕೆ ಬೇರ್ಷೆಬದವಳಾಗಿದ್ದಳು. 2 ಯಾಜಕನಾದ ಯೆಹೋಯಾದನು ಜೀವದಿಂದಿರುವ ತನಕ ಯೆಹೋವಾಷನು ಯೆಹೋವನಿಗೆ ಯೋಗ್ಯವಾಗಿ ನಡೆದುಕೊಂಡನು. 3 ಯೆಹೋಯಾದನು ಅವನಿಗೆ ಇಬ್ಬರು ಕನ್ನಿಕೆಯರನ್ನು ಮದುವೆ ಮಾಡಿಸಿದನು. ಅವನು ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.
4 ಸ್ವಲ್ಪಕಾಲವಾದ ಬಳಿಕ ಯೆಹೋವಾಷನು ದೇವಾಲಯವನ್ನು ಸರಿಪಡಿಸಲು ಆಲೋಚಿಸಿದನು. 5 ಅವನು ಯಾಜಕರನ್ನೂ ಲೇವಿಯರನ್ನೂ ಒಟ್ಟಾಗಿ ಕರೆದು, “ಯೆಹೂದ ದೇಶದ ಊರುಗಳಿಗೆ ಹೋಗಿ ಜನರು ಪ್ರತಿ ವರ್ಷ ದೇವಾಲಯಕ್ಕೆ ಕೊಡಬೇಕಾದ ಹಣವನ್ನು ಸಂಗ್ರಹಿಸಿರಿ. ದೇವಾಲಯನ್ನು ಸರಿಪಡಿಸಲು ಆ ಹಣವನ್ನು ಉಪಯೋಗಿಸಿರಿ. ಇದನ್ನು ಬೇಗನೆ ಮಾಡಿರಿ” ಎಂದು ಹೇಳಿದನು. ಆದರೆ ಲೇವಿಯರು ಅವಸರ ಮಾಡಲಿಲ್ಲ.
6 ಆಗ ಅರಸನಾದ ಯೆಹೋವಾಷನು ಮಹಾಯಾಜಕನಾದ ಯೆಹೋಯಾದನನ್ನು ಕರೆದು, “ದೇವಾಲಯಕ್ಕೆ ಕೊಡಬೇಕಾದ ಹಣವನ್ನು ಯೆಹೂದ ಮತ್ತು ಜೆರುಸಲೇಮಿನ ಜನರಿಂದ ಲೇವಿಯರು ಸಂಗ್ರಹಿಸಿಕೊಂಡು ಬರಲು ನೀನೇಕೆ ಅವರನ್ನು ಒತ್ತಾಯಿಸಲಿಲ್ಲ? ಮೋಶೆಯೂ ಇಸ್ರೇಲರೂ ಆ ಹಣವನ್ನು ಪವಿತ್ರ ಗುಡಾರಕ್ಕಾಗಿ ಉಪಯೋಗಿಸುತ್ತಿರಲಿಲ್ಲವೇ?” ಎಂದು ಕೇಳಿದನು.
7 ಗತಿಸಿದ ವರ್ಷಗಳಲ್ಲಿ ಅತಲ್ಯಳ ಮಕ್ಕಳು ದೇವಾಲಯದೊಳಗೆ ಬಲಾತ್ಕಾರದಿಂದ ನುಗ್ಗಿ ಅಲ್ಲಿದ್ದ ಪವಿತ್ರ ವಸ್ತುಗಳನ್ನು ತೆಗೆದು ಬಾಳ್ ದೇವರ ಪೂಜೆಗಾಗಿ ಉಪಯೋಗಿಸಿದ್ದರು. ಅತಲ್ಯಳು ಬಹಳ ದುಷ್ಟಳಾಗಿದ್ದಳು.
8 ಅರಸನಾದ ಯೆಹೋವಾಷನು ಒಂದು ಪೆಟ್ಟಿಗೆಯನ್ನು ಮಾಡಿಸಿ ಅದನ್ನು ದೇವಾಲಯದ ಬಾಗಿಲಲ್ಲಿ ಇರಿಸಿದನು. 9 ಯೆಹೂದ ಮತ್ತು ಜೆರುಸಲೇಮಿನಲ್ಲಿ ಲೇವಿಯರು ಜನರಿಗೆಲ್ಲಾ ತಮ್ಮ ತಮ್ಮ ತೆರಿಗೆ ಹಣವನ್ನು ತಂದು ದೇವರಿಗೆ ಸಮರ್ಪಿಸುವಂತೆ ಪ್ರಕಟಿಸಿದರು. ಇಸ್ರೇಲರು ಅರಣ್ಯಮಾರ್ಗವಾಗಿ ಪ್ರಯಾಣ ಮಾಡುತ್ತಿರುವಾಗ ದೇವರ ಸೇವಕನಾದ ಮೋಶೆಯು ಜನರಿಗೆ ಇದನ್ನು ಆಜ್ಞಾಪಿಸಿದ್ದನು. 10 ಎಲ್ಲಾ ನಾಯಕರೂ ಜನರೂ ಸಂತೋಷದಿಂದ ತಮ್ಮ ಹಣವನ್ನು ತಂದು ಪೆಟ್ಟಿಗೆಯಲ್ಲಿ ಹಾಕತೊಡಗಿದರು. ಆ ಪೆಟ್ಟಿಗೆ ತುಂಬಿದ ಮೇಲೆ 11 ಲೇವಿಯರು ಅದನ್ನು ಅರಸನ ಅಧಿಕಾರಿಗಳ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದರು; ರಾಜನ ಕಾರ್ಯದರ್ಶಿ ಮತ್ತು ಯಾಜಕರ ಮುಖಂಡನು ಬಂದು ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಮತ್ತೆ ಆ ಪೆಟ್ಟಿಗೆಯನ್ನು ಮುಂಚಿನ ಸ್ಥಳದಲ್ಲಿ ಇಡುತ್ತಿದ್ದರು. ಹೀಗೆ ಅವರು ಮಾಡುತ್ತಾ ಬಂದಕಾರಣ ಬಹಳ ಹಣ ಸಂಗ್ರಹಿಸಲ್ಪಟ್ಟಿತು. 12 ಯೆಹೋಯಾದನು ಮತ್ತು ರಾಜನು ದೇವಾಲಯವನ್ನು ದುರಸ್ತಿ ಮಾಡುವವರ ಕೈಗೆ ಅದನ್ನು ಕೊಟ್ಟರು. ಅವರು ಮರದ ಕುಶಲಕರ್ಮಿಗಳನ್ನೂ ಬಡಗಿಗಳನ್ನೂ ದೇವಾಲಯವನ್ನು ಸರಿಪಡಿಸಲು ನೇಮಿಸಿದರು. ಅಲ್ಲದೆ ತಾಮ್ರಕಬ್ಬಿಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನೂ ಕೆಲಸಕ್ಕೆ ನೇಮಿಸಿದರು. 13 ಕೆಲಸಗಳ ಮೇಲ್ವಿಚಾರಣೆ ಮಾಡುವವರು ನಂಬಿಗಸ್ತರಾಗಿದ್ದರು. ದೇವಾಲಯವನ್ನು ಸರಿಪಡಿಸುವ ಯೋಜನೆಯು ಪೂರ್ಣಗೊಂಡಿತು. ಅವರು ಅದನ್ನು ಮುಂಚೆ ಹೇಗಿತ್ತೋ ಹಾಗೆಯೇ ಮಾಡಿದರು; ಅಲ್ಲದೆ ಅದಕ್ಕಿಂತಲೂ ಹೆಚ್ಚು ಭದ್ರಪಡಿಸಿದರು. 14 ಕೆಲಸಗಾರರು ತಮ್ಮ ಕೆಲಸವು ಮುಗಿದ ಬಳಿಕ ಉಳಿದ ಹಣವನ್ನು ಅರಸನಾದ ಯೆಹೋವಾಷನಿಗೆ ಮತ್ತು ಯೆಹೋಯಾದನಿಗೆ ತಂದುಕೊಟ್ಟರು. ಆ ಹಣವನ್ನು ದೇವಾಲಯದ ಉಪಕರಣಗಳನ್ನು ಮಾಡಿಸಲು ಉಪಯೋಗಿಸಿದರು. ಅವು ದೇವಾಲಯದೊಳಗಿನ ಸೇವೆಗೂ ಸರ್ವಾಂಗಹೋಮಕ್ಕೂ ಉಪಯುಕ್ತವಾಗಿದ್ದವು. ಮಾತ್ರವಲ್ಲದೆ ಬೆಳ್ಳಿಬಂಗಾರಗಳಿಂದ ಬೋಗುಣಿ ಮತ್ತು ಇತರ ವಸ್ತುಗಳನ್ನು ಮಾಡಿದರು. ಯೆಹೋಯಾದನು ಜೀವದಿಂದಿರುವ ತನಕ ಪ್ರತೀ ದಿವಸ ಸರ್ವಾಂಗಹೋಮವನ್ನರ್ಪಿಸುತ್ತಿದ್ದನು.
15 ಯೆಹೋಯಾದನು ವೃದ್ಧನಾದನು. ಅವನು ದೀರ್ಘಕಾಲ ಬಾಳಿ ತೀರಿಹೋದನು. ಅವನು ಸಾಯುವಾಗ ಅವನಿಗೆ ನೂರ ಮೂವತ್ತು ವರ್ಷವಾಗಿತ್ತು. 16 ಅವನ ದೇಹವನ್ನು ದಾವೀದ ನಗರದಲ್ಲಿ ಅರಸುಗಳ ಸಮಾಧಿಯ ಬಳಿಯಲ್ಲಿ ಸಮಾಧಿ ಮಾಡಿದರು. ಯಾಕೆಂದರೆ ಅವನು ಜೀವಂತನಾಗಿದ್ದಾಗ ಇಸ್ರೇಲಿನ ದೇವರಿಗೂ ಆತನ ಆಲಯಕ್ಕೂ ಒಳ್ಳೆಯದನ್ನೇ ಮಾಡಿದ್ದನು.
17 ಯೆಹೋಯಾದನು ಸತ್ತ ಬಳಿಕ ಯೆಹೂದದೇಶದ ಪ್ರಮುಖರು ಅರಸನಾದ ಯೆಹೋವಾಷನ ಬಳಿಗೆ ಬಂದು ನಮಸ್ಕರಿಸಿದರು. ಅರಸನು ಅವರ ಮಾತುಗಳನ್ನು ಕೇಳಿದನು. 18 ಅರಸನೂ ಆ ನಾಯಕರುಗಳೂ ದೇವಾಲಯವನ್ನು ನಿರಾಕರಿಸಿ ಅಶೇರ ಸ್ತಂಭಗಳನ್ನೂ ಇತರ ವಿಗ್ರಹಗಳನ್ನೂ ಆರಾಧಿಸಿದರು. ಯೆಹೋವನು ಜೆರುಸಲೇಮಿನ ಮತ್ತು ಯೆಹೂದದ ಜನರ ಮೇಲೆ ಕೋಪಗೊಂಡನು. ಯಾಕೆಂದರೆ ಅರಸನೂ ಆ ನಾಯಕರುಗಳೂ ಯೆಹೋವನ ಮುಂದೆ ದೋಷಿಗಳಾಗಿದ್ದರು. 19 ಆತನು ಅವರನ್ನು ತನ್ನ ಕಡೆಗೆ ತಿರುಗಿಕೊಳ್ಳುವಂತೆ ಪ್ರವಾದಿಗಳನ್ನು ಅವರ ಬಳಿಗೆ ಕಳುಹಿಸಿದನು. ಪ್ರವಾದಿಗಳು ಜನರನ್ನು ಎಚ್ಚರಿಸಿದರೂ ಅವರ ಮಾತುಗಳಿಗೆ ಅವರು ಗಮನಕೊಡಲಿಲ್ಲ.
20 ಜೆಕರ್ಯನ ಮೇಲೆ ದೇವರಾತ್ಮನು ಬಂದನು. ಅವನು ಯಾಜಕನಾದ ಯೆಹೋಯಾದನ ಮಗ. ಜೆಕರ್ಯನು ಜನರ ಮುಂದೆ ನಿಂತು, “ಯೆಹೋವನು ಹೀಗೆನ್ನುತ್ತಾನೆ: ‘ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲು ನೀವು ಏಕೆ ನಿರಾಕರಿಸುತ್ತೀರಿ? ಏತಕ್ಕೆ? ನೀವು ಉದ್ಧಾರವಾಗುವುದಿಲ್ಲ. ನೀವು ಯೆಹೋವನನ್ನು ತೊರೆದದ್ದರಿಂದ ಆತನು ನಿಮ್ಮನ್ನೂ ತೊರೆದುಬಿಟ್ಟಿರುತ್ತಾನೆ’” ಎಂದು ಹೇಳಿದನು.
21 ಆದರೆ ಅವರು ಜೆಕರ್ಯನ ವಿರೋಧವಾಗಿ ಒಳಸಂಚು ಮಾಡಿದರು. ಅವನನ್ನು ಕೊಲ್ಲಲು ಅರಸನು ಅವರಿಗೆ ಆಜ್ಞಾಪಿಸಿದನು. ಆಗ ಅವರು ಅವನನ್ನು ದೇವಾಲಯದ ಅಂಗಳದಲ್ಲಿಯೇ ಕಲ್ಲೆಸೆದು ಕೊಂದರು. 22 ಯೆಹೋವಾಷನು ಯೆಹೋಯಾದನ ಉಪಕಾರವನ್ನು ನೆನಸಲಿಲ್ಲ. ಯೆಹೋಯಾದನು ಜೆಕರ್ಯನ ತಂದೆ. ಯೆಹೋಯಾದನ ಮಗನನ್ನು ಯೆಹೋವಾಷನು ಕೊಂದನು. ಜೆಕರ್ಯನು ಸಾಯುವಾಗ, ಹೇಳಿದ್ದೇನೆಂದರೆ, “ನೀನು ಮಾಡುತ್ತಿರುವದನ್ನು ಯೆಹೋವನೇ ನೋಡಿ ನ್ಯಾಯ ತೀರಿಸಲಿ” ಎಂದು ಹೇಳಿದನು.
23 ಆ ವರ್ಷಾಂತ್ಯದಲ್ಲಿ ಅರಾಮ್ಯರ ಸೈನ್ಯವು ಯೆಹೋವಾಷನಿಗೆ ವಿರುದ್ಧವಾಗಿ ಬಂತು. ಅವರು ಯೆಹೂದದೇಶ ಮತ್ತು ಜೆರುಸಲೇಮಿನ ಮೇಲೆ ದಾಳಿ ಮಾಡಿ ಎಲ್ಲಾ ನಾಯಕರನ್ನು ಸಂಹರಿಸಿದರು. ಅಲ್ಲಿದ್ದ ಬೆಲೆಬಾಳುವ ಎಲ್ಲಾ ವಸ್ತುಗಳನ್ನು ದಮಸ್ಕದ ಅರಸನಿಗೆ ಕಳುಹಿಸಿದರು. 24 ಅರಾಮ್ಯರ ಸೈನ್ಯವು ಸ್ವಲ್ಪ ಮಂದಿಯಿಂದ ಕೂಡಿದ್ದರೂ ಯೆಹೂದದ ದೊಡ್ಡ ಸೈನ್ಯವನ್ನು ಸೋಲಿಸಿಬಿಟ್ಟಿತು. ಯೆಹೂದ್ಯರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತೊರೆದುದರಿಂದ ದೇವರಾದ ಯೆಹೋವನು ಹಾಗೆ ಮಾಡಿದನು. ಈ ರೀತಿಯಾಗಿ ಯೆಹೋವಾಷನು ಶಿಕ್ಷಿಸಲ್ಪಟ್ಟನು. 25 ಅರಾಮ್ಯರು ಯೆಹೋವಾಷನನ್ನು ಬಿಟ್ಟುಹೋಗುವಾಗ ಅವನು ರೋಗದಿಂದ ಬಹಳ ಅಸ್ವಸ್ಥನಾಗಿದ್ದನು. ಅವನ ಸ್ವಂತ ಸೇವಕರೇ ಅವನಿಗೆ ವಿರೋಧವಾಗಿ ಸಂಚು ಮಾಡಿದರು. ಯಾಕೆಂದರೆ ಅವನು ಯೆಹೋಯಾದನ ಮಗನಾದ ಜೆಕರ್ಯನನ್ನು ಕೊಂದದ್ದರಿಂದ ಸೇವಕರು ಯೆಹೋವಾಷನನ್ನು ಅವನ ಮಂಚದ ಮೇಲೆಯೇ ಕೊಂದುಹಾಕಿದರು. ಜನರು ಅವನನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಆದರೆ ಅರಸರುಗಳ ಸಮಾಧಿಯಲ್ಲಿ ಹೂಳಿಡಲಿಲ್ಲ.
26 ಯೆಹೋವಾಷನನ್ನು ಕೊಲ್ಲಲು ಸಂಚುಮಾಡಿದ ಸೇವಕರು ಯಾರೆಂದರೆ: ಜಾಬಾದ್ ಮತ್ತು ಯೆಹೋಜಾಬಾದ್, ಜಾಬಾದನ ತಾಯಿಯ ಹೆಸರು ಶಿಮ್ಗಾತ್, ಈಕೆ ಅಮ್ಮೋನಿಯಳು. ಯೆಹೋಜಾಬಾದನ ತಾಯಿಯು ಶಿಮ್ರೀತ್ ಎಂಬಾಕೆ, ಈಕೆ ಮೋವಾಬ್ಯಳು. 27 ಯೆಹೋವಾಷನ ಮಕ್ಕಳ ಚರಿತ್ರೆ, ಅವನ ವಿರುದ್ಧವಾಗಿ ಹೇಳಿದ ಪ್ರವಾದನೆಗಳು, ಅವನು ದೇವಾಲಯವನ್ನು ಸರಿಪಡಿಸಿದ ವಿಷಯಗಳು ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ಬರೆಯಲ್ಪಟ್ಟಿದೆ. ಯೆಹೋವಾಷನ ನಂತರ ಅವನ ಮಗನಾದ ಅಮಚ್ಯನು ರಾಜನಾದನು.
ಇಬ್ಬರು ಸಾಕ್ಷಿಗಳು
11 ತರುವಾಯ ದಂಡದಂತಿರುವ ಒಂದು ಅಳತೆಯ ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು: “ಹೋಗು, ದೇವರ ಆಲಯವನ್ನೂ ಯಜ್ಞವೇದಿಕೆಯನ್ನೂ ಅಳತೆಮಾಡು; ಮತ್ತು ಅಲ್ಲಿ ಆರಾಧಿಸುವ ಜನರನ್ನು ಲೆಕ್ಕಹಾಕು. 2 ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳತೆ ಮಾಡದೆ ಬಿಟ್ಟುಬಿಡು. ಅದನ್ನು ಯೆಹೂದ್ಯರಲ್ಲದ ಜನರಿಗೆ ಬಿಟ್ಟಿದೆ. ಆ ಜನರು ಪವಿತ್ರ ನಗರದ ಮೇಲೆ ನಲವತ್ತೆರಡು ತಿಂಗಳ ಕಾಲ ತುಳಿದಾಡುವರು. 3 ನಾನು ನನ್ನ ಇಬ್ಬರು ಸಾಕ್ಷಿಗಳಿಗೆ ಅಧಿಕಾರವನ್ನು ಕೊಡುತ್ತೇನೆ. ಅವರು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪ್ರವಾದನೆ ಮಾಡುತ್ತಾರೆ. ಅವರು ಗೋಣಿತಟ್ಟುಗಳನ್ನು ಧರಿಸಿಕೊಂಡಿರುತ್ತಾರೆ.”
4 ಭೂಲೋಕದ ಪ್ರಭುವಿನ ಸನ್ನಿಧಿಯಲ್ಲಿ ನಿಂತಿರುವ ಎರಡು ಆಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳೇ ಈ ಇಬ್ಬರು ಸಾಕ್ಷಿಗಳು. 5 ಈ ಸಾಕ್ಷಿಗಳಿಗೆ ಯಾರಾದರೂ ಕೇಡು ಮಾಡಲು ಪ್ರಯತ್ನಿಸಿದರೆ, ಸಾಕ್ಷಿಗಳ ಬಾಯಿಂದ ಬೆಂಕಿಯು ಹೊರಬಂದು ಅವರ ಶತ್ರುವನ್ನು ಅಂದರೆ ಅವರಿಗೆ ತೊಂದರೆ ಮಾಡಲು ಪ್ರಯತ್ನಿಸಿದ್ದವರನ್ನೆಲ್ಲ ಸಾಯಿಸುತ್ತದೆ. 6 ಈ ಸಾಕ್ಷಿಗಳು ತಮ್ಮ ಪ್ರವಾದನೆಯ ಕಾಲದಲ್ಲಿ ಆಕಾಶದಿಂದ ಸುರಿಯುವ ಮಳೆಯನ್ನು ನಿಲ್ಲಿಸಲೂ ನೀರನ್ನು ರಕ್ತವನ್ನಾಗಿಸಲೂ ಭೂಮಿಗೆ ಎಲ್ಲಾ ವಿಧವಾದ ವಿಪತ್ತುಗಳನ್ನು ಕಳುಹಿಸಲೂ ಅಧಿಕಾರವನ್ನು ಹೊಂದಿರುತ್ತಾರೆ. ಅವರು ತಮಗೆ ಇಷ್ಟ ಬಂದಷ್ಟು ಸಲ ಹೀಗೆ ಮಾಡಶಕ್ತರಾಗಿದ್ದಾರೆ.
7 ಈ ಇಬ್ಬರು ಸಾಕ್ಷಿಗಳು ತಮ್ಮ ಸಂದೇಶವನ್ನು ಹೇಳಿ ಮುಗಿಸಿದ ನಂತರ, ತಳವಿಲ್ಲದ ಕೂಪದಿಂದ ಮೇಲಕ್ಕೆ ಬರುವ ಮೃಗವು ಅವರ ವಿರುದ್ಧ ಹೋರಾಟ ಮಾಡುತ್ತದೆ. ಈ ಮೃಗವು ಅವರನ್ನು ಸೋಲಿಸಿ, ಕೊಂದು ಹಾಕುತ್ತದೆ. 8 ಈ ಸಾಕ್ಷಿಗಳ ಎರಡು ಶವಗಳು ಮಹಾನಗರದ ಬೀದಿಯಲ್ಲಿ ಬಿದ್ದಿರುತ್ತವೆ. ಈ ನಗರಕ್ಕೆ ಸೊದೋಮ್[a] ಮತ್ತು ಈಜಿಪ್ಟ್ ಎಂದು ಹೆಸರಾಗುತ್ತದೆ. ಆ ನಗರದ ಹೆಸರುಗಳಿಗೆ ವಿಶೇಷ ಅರ್ಥವಿದೆ. ಪ್ರಭುವು ಈ ನಗರದಲ್ಲಿಯೇ ಶಿಲುಬೆಗೇರಿಸಲ್ಪಟ್ಟನು. 9 ಸಕಲ ಪ್ರಜೆ, ಕುಲ, ಭಾಷೆ, ಜನಾಂಗದವರು ಮೂರುವರೆ ದಿನಗಳ ಕಾಲ ಈ ಸಾಕ್ಷಿಗಳ ಶವಗಳನ್ನು ನೋಡುತ್ತಾ ಇರುತ್ತಾರೆ. ಅವರನ್ನು ಸಮಾಧಿ ಮಾಡಲು ಜನರು ಒಪ್ಪುವುದಿಲ್ಲ. 10 ಈ ಇಬ್ಬರು ಸತ್ತದ್ದಕ್ಕಾಗಿ ಭೂಮಿಯ ಮೇಲಿನ ಜನರು ಸಂತೋಷಗೊಳ್ಳುವರು. ಅವರು ಸಮಾರಂಭಗಳನ್ನು ನಡೆಸಿ, ಒಬ್ಬರಿಗೊಬ್ಬರು ಉಡುಗೊರೆಗಳನ್ನು ನೀಡುತ್ತಾರೆ. ಈ ಇಬ್ಬರು ಪ್ರವಾದಿಗಳು ಭೂಮಿಯ ಮೇಲೆ ವಾಸಿಸುತ್ತಿರುವ ಜನರಿಗೆ ಹೆಚ್ಚು ಸಂಕಟವನ್ನು ಉಂಟುಮಾಡಿದ್ದರಿಂದ ಆ ಜನರು ಹೀಗೆ ಮಾಡುತ್ತಾರೆ.
11 ಆದರೆ ಮೂರುವರೆ ದಿನಗಳ ನಂತರ ದೇವರು ಆ ಇಬ್ಬರು ಪ್ರವಾದಿಗಳೊಳಗೆ ಮತ್ತೆ ಜೀವ ಪ್ರವೇಶಿಸುವಂತೆ ಮಾಡಿದನು. ಆಗ ಅವರು ತಮ್ಮ ಕಾಲೂರಿ ನಿಂತುಕೊಂಡರು. ಅವರನ್ನು ನೋಡಿದ ಜನರೆಲ್ಲರೂ ಭಯಗ್ರಸ್ತರಾದರು. 12 ಅನಂತರ “ಮೇಲೇರಿ ಬನ್ನಿ!” ಎಂದು ಪರಲೋಕದಿಂದ ಮಹಾವಾಣಿಯು ಆ ಪ್ರವಾದಿಗಳಿಗೆ ತಿಳಿಸಿತು. ಆಗ ಆ ಇಬ್ಬರು ಪ್ರವಾದಿಗಳು ಮೋಡದೊಂದಿಗೆ ಪರಲೋಕಕ್ಕೆ ಏರಿಹೋದರು. ಅವರು ಹೋಗುವುದನ್ನು ಅವರ ಶತ್ರುಗಳು ನೋಡುತ್ತಾ ಇದ್ದರು.
13 ಆ ಸಮಯದಲ್ಲಿ ಮಹಾಭೂಕಂಪವಾಯಿತು. ಆ ನಗರದ ಹತ್ತನೆಯ ಒಂದು ಭಾಗ ನಾಶವಾಯಿತು. ಭೂಕಂಪದಲ್ಲಿ ಏಳು ಸಾವಿರ ಜನರು ನಾಶವಾದರು. ಸಾಯದೆ ಉಳಿದಿದ್ದ ಜನರು ಬಹು ಭಯಗೊಂಡು ಪರಲೋಕದ ದೇವರನ್ನು ಘನಪಡಿಸಿದರು.
14 ಎರಡನೆಯ ಮಹಾವಿಪತ್ತು ಮುಗಿಯಿತು. ಮೂರನೆಯ ಮಹಾವಿಪತ್ತು ಬೇಗನೆ ಬರಲಿದೆ.
ಏಳನೆಯ ತುತೂರಿ
15 ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳು ಉಂಟಾದವು. ಆ ಶಬ್ದಗಳು ಹೀಗೆ ಹೇಳಿದವು:
“ಈ ಲೋಕದ ರಾಜ್ಯವು ಈಗ ನಮ್ಮ ಪ್ರಭುವಿನ ಮತ್ತು ಆತನವನಾಗಿರುವ ಕ್ರಿಸ್ತನ ರಾಜ್ಯವಾಗಿ ಮಾರ್ಪಾಟಾಯಿತು.
ಆತನು ಯುಗಯುಗಾಂತರಗಳಲ್ಲಿಯೂ ಆಳುವನು.”
16 ನಂತರ ಇಪ್ಪತ್ನಾಲ್ಕು ಮಂದಿ ಹಿರಿಯರು ಮೊಣಕಾಲೂರಿ ದೇವರನ್ನು ಆರಾಧಿಸಿದರು. ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿರುವ ಹಿರಿಯರೇ ಇವರು. 17 ಆ ಹಿರಿಯರು ಹೀಗೆ ಹೇಳಿದರು:
“ಪ್ರಭುವೇ, ಸರ್ವಶಕ್ತನಾದ ದೇವರೇ, ಭೂತಕಾಲದಲ್ಲಿ ಇದ್ದಾತನೇ,
ವರ್ತಮಾನ ಕಾಲದಲ್ಲಿ ಇರುವಾತನೇ, ನಿನಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
ನೀನು ನಿನ್ನ ಮಹಾ ಅಧಿಕಾರವನ್ನು ಉಪಯೋಗಿಸಿ ನಿನ್ನ ಆಡಳಿತವನ್ನು
ಆರಂಭಿಸಿದ್ದರಿಂದ ನಿನಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
18 ಲೋಕದ ಜನರು ಕೋಪಗೊಂಡಿದ್ದರು.
ಆದರೆ ಇದು ನಿನ್ನ ಕೋಪದ ಸಮಯ.
ಸತ್ತವರಿಗೆ ತೀರ್ಪು ನೀಡುವ ಸಮಯವಿದು.
ನಿನ್ನ ಸೇವಕರಾದ ಪ್ರವಾದಿಗಳಿಗೂ
ನಿನ್ನ ಪರಿಶುದ್ಧ ಜನರಿಗೂ ನಿನ್ನನ್ನು ಗೌರವಿಸುವ
ದೊಡ್ಡವರಿಗೂ ಚಿಕ್ಕವರಿಗೂ ಪ್ರತಿಫಲ ನೀಡುವ ಸಮಯವಿದು.
ಲೋಕನಾಶಕರನ್ನು ನಾಶಪಡಿಸುವ ಸಮಯವಿದು.”
19 ನಂತರ ಪರಲೋಕದಲ್ಲಿರುವ ದೇವರ ಆಲಯವು ತೆರೆಯಿತು. ದೇವರು ತನ್ನ ಜನರಿಗೆ ಅನುಗ್ರಹಿಸಿದ ಒಡಂಬಡಿಕೆಯನ್ನು ಇಟ್ಟಿದ್ದ ಪೆಟ್ಟಿಗೆಯು ಆತನ ಆಲಯದಲ್ಲಿ ಕಾಣಿಸಿತು. ಆಗ ಮಿಂಚುಗಳು ಹೊಳೆದವು, ಶಬ್ದಗಳಾದವು, ಗುಡುಗುಗಳಾದವು, ಭೂಕಂಪಗಳಾದವು ಮತ್ತು ಆಲಿಕಲ್ಲಿನ ಮಳೆಯೂ ಸುರಿಯಿತು.
ಯೆಹೋವನಿಗೆ ದಯೆ ಕರುಣೆಗಳು ಬೇಕಾಗಿವೆ
7 ಪರ್ಶಿಯದ ಅರಸನಾದ ದಾರ್ಯಾವೆಷನ ಆಳ್ವಿಕೆಯ ನಾಲ್ಕನೇ ವರ್ಷದ ಒಂಭತ್ತನೇ ತಿಂಗಳಿನ (ಕಿಸ್ಲೇವ್) ನಾಲ್ಕನೇ ದಿವಸದಲ್ಲಿ ಯೆಹೋವನ ಸಂದೇಶವನ್ನು ಜೆಕರ್ಯನು ಹೊಂದಿದನು. 2 ಬೇತೇಲಿನ ಜನರು ಸರೆಚರ್, ರೆಗೆಮ್ ಮೆಲೆಕ್ ಮತ್ತು ಅವರ ಜನರನ್ನು ಯೆಹೋವನಿಗೆ ಒಂದು ಪ್ರಶ್ನೆಯನ್ನು ಕೇಳಲು ಕಳುಹಿಸಿದರು. 3 ಅವರು ಸರ್ವಶಕ್ತನಾದ ಯೆಹೋವನ ಆಲಯದಲ್ಲಿದ್ದ ಯಾಜಕರ ಬಳಿಗೂ ಪ್ರವಾದಿಗಳ ಬಳಿಗೂ ಹೋದರು. ಅವರು ಹೀಗೆ ಪ್ರಶ್ನೆ ಕೇಳಿದರು: “ಅನೇಕ ವರ್ಷಗಳಿಂದ ಆಲಯವು ಕೆಡವಲ್ಪಟ್ಟದ್ದಕ್ಕಾಗಿ ನಮ್ಮ ದುಃಖವನ್ನು ತೋರಿಸಿದೆವು. ಪ್ರತೀ ವರ್ಷದ ಐದನೇ ತಿಂಗಳಿನಲ್ಲಿ ಉಪವಾಸಕ್ಕಾಗಿ ಮತ್ತು ರೋದಿಸುವುದಕ್ಕಾಗಿ ನಾವು ಪ್ರತ್ಯೇಕ ಸಮಯವನ್ನು ನೇಮಿಸುತ್ತಿದ್ದೆವು. ನಾವು ಇದನ್ನು ಹೀಗೆಯೇ ಮುಂದುವರಿಸಬೇಕೋ?”
4 ಆಗ ನನಗೆ ಸರ್ವಶಕ್ತನಾದ ಯೆಹೋವನಿಂದ ಈ ಸಂದೇಶವು ದೊರಕಿತು: 5 “ಯಾಜಕರಿಗೂ, ದೇಶದ ಇತರ ಜನರಿಗೂ ಇದನ್ನು ಹೇಳು, ಎಪ್ಪತ್ತು ವರ್ಷಗಳ ತನಕ ನೀವು ಐದನೇ ಮತ್ತು ಏಳನೇ ತಿಂಗಳಿನಲ್ಲಿ ನಿಮ್ಮ ದುಃಖವನ್ನು ಉಪವಾಸ ಮಾಡವದರಲ್ಲಿ ತೋರಿಸಿದಿರಿ. ಆದರೆ ಮಾಡಿದ ಆ ಉಪವಾಸವು ನಿಜವಾಗಿಯೂ ನನಗಾಗಿಯೋ? ಇಲ್ಲ! 6 ನೀವು ತಿಂದು ಕುಡಿದಾಗ ಅದು ನನಗಾಗಿ ಇತ್ತೋ? ಇಲ್ಲ. ಅದು ನಿಮ್ಮ ಒಳ್ಳೆಯದಕ್ಕಾಗಿಯೇ ಇತ್ತು. 7 ಇದನ್ನು ತಿಳಿಸುವುದಕ್ಕಾಗಿಯೇ ದೇವರು ಹಿಂದಿನ ಕಾಲದಲ್ಲಿ ಪ್ರವಾದಿಗಳನ್ನು ಉಪಯೋಗಿಸಿದ್ದನು. ಜೆರುಸಲೇಮ್ ಜನಭರಿತವಾದ ಪಟ್ಟಣವಾಗಿದ್ದಾಗ ದೇವರು ಇದನ್ನು ಜನರಿಗೆ ತಿಳಿಸಿದ್ದನು. ಜೆರುಸಲೇಮಿನ ಸುತ್ತಮುತ್ತ ಇರುವ ಪಟ್ಟಣಗಳಲ್ಲಿ ಜನರು ವಾಸಿಸುತ್ತಿದ್ದ ಸಮಯದಲ್ಲಿ ದೇವರು ಇದನ್ನು ತಿಳಿಸಿದ್ದನು. ನೆಗೆವ್‌ನಲ್ಲಿಯೂ ಪಶ್ಚಿಮದ ಪರ್ವತಗಳ ಬುಡದಲ್ಲಿಯೂ ದೇವರು ಇದನ್ನು ಜನರಿಗೆ ತಿಳಿಸಿದ್ದನು.”
8 ಇದು ಜೆಕರ್ಯನಿಗೆ ಯೆಹೋವನ ಸಂದೇಶ:
9 “ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
‘ನೀವು ಯಾವದು ನ್ಯಾಯವೋ ಯಾವುದು ಯೋಗ್ಯವೋ ಅದನ್ನು ಮಾಡಬೇಕು.
ನೀವು ಒಬ್ಬರಿಗೊಬ್ಬರು ದಯೆಕರುಣೆಗಳನ್ನು ತೋರಿಸಬೇಕು.
10 ವಿಧವೆಯರಿಗೂ ಅನಾಥರಿಗೂ ಹಾನಿಮಾಡಬೇಡಿರಿ.
ಅಪರಿಚಿತರಿಗೂ ಬಡವರಿಗೂ ಕೇಡುಮಾಡಬೇಡಿ.
ಒಬ್ಬರಿಗೊಬ್ಬರು ಕೇಡುಮಾಡಲು ಯೋಚಿಸಲೂಬೇಡಿ!’”
11 ಆದರೆ ಆ ಜನರು ಈ ಮಾತುಗಳನ್ನು ಕೇಳಲಿಲ್ಲ.
ಆತನು ಹೇಳಿದ ಹಾಗೆ ನಡೆಯಲಿಲ್ಲ.
ದೇವರು ಹೇಳುವುದು ತಮಗೆ ಕೇಳದಂತೆ
ತಮ್ಮ ಕಿವಿಗಳನ್ನು ಮುಚ್ಚಿಕೊಂಡರು.
12 ಅವರು ಹಠಮಾರಿಗಳಾಗಿದ್ದರು.
ನ್ಯಾಯವಿಧಿಗಳಿಗೆ ಅವರು ವಿಧೇಯರಾಗಲಿಲ್ಲ.
ಸರ್ವಶಕ್ತನಾದ ಯೆಹೋವನು ತನ್ನ ಆತ್ಮನಿಂದ
ಪ್ರವಾದಿಗಳ ಮೂಲಕ ಅವರಿಗೆ ಸಂದೇಶ ಕಳುಹಿಸಿದನು.
ಆದರೂ ಜನರು ಅವರಿಗೆ ಕಿವಿಗೊಡಲಿಲ್ಲ.
ಆದ್ದರಿಂದ ಸರ್ವಶಕ್ತನಾದ ಯೆಹೋವನು ಬಹಳ ಕೋಪಗೊಂಡನು.
13 ಆತನು ಹೇಳಿದ್ದೇನೆಂದರೆ, “ನಾನು ಅವರನ್ನು ಕರೆದರೂ
ಅವರು ನನಗೆ ಕಿವಿಗೊಡಲಿಲ್ಲ.
ಆದ್ದರಿಂದ ಈಗ ಅವರು ನನ್ನನ್ನು ಕರೆದರೂ
ನಾನು ಅವರಿಗೆ ಉತ್ತರಕೊಡುವುದಿಲ್ಲ.
14 ನಾನು ಇತರ ಜನಾಂಗಗಳನ್ನು ಬಿರುಗಾಳಿಯಂತೆ ಅವರ ಬಳಿಗೆ ಕಳುಹಿಸುವೆನು.
ಆ ರಾಷ್ಟ್ರಗಳನ್ನು ಅವರು ತಿಳಿದಿರಲಿಲ್ಲ.
ಆದರೆ ಆ ದೇಶಗಳವರು ಇವರ ದೇಶವನ್ನು ದಾಟಿಹೋಗುವಾಗ
ಆ ಸುಂದರವಾದ ದೇಶವು ನಾಶವಾಗುವದು.”
ಕುರುಬನು ಮತ್ತು ಅವನ ಕುರಿಗಳು
10 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಕುರಿಹಟ್ಟಿಯೊಳಗೆ ಪ್ರವೇಶಿಸುವಾಗ ಬಾಗಿಲಿನ ಮೂಲಕ ಪ್ರವೇಶಿಸಬೇಕು. ಮತ್ತೆಲ್ಲಿಂದಾದರೂ ಹತ್ತಿ ಬರುವವನು ಸುಲಿಗೆಗಾರನಾಗಿದ್ದಾನೆ; ಕುರಿಗಳನ್ನು ಕದ್ದುಕೊಳ್ಳಲು ಪ್ರಯತ್ನಿಸುವವನಾಗಿದ್ದಾನೆ. 2 ಆದರೆ ಕುರುಬನು ಬಾಗಿಲ ಮೂಲಕ ಪ್ರವೇಶಿಸುತ್ತಾನೆ. 3 ಕಾವಲುಗಾರನು ಕುರುಬನಿಗೆ ಬಾಗಿಲನ್ನು ತೆರೆಯುತ್ತಾನೆ. ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಕುರುಬನು ತನ್ನ ಸ್ವಂತ ಕುರಿಗಳನ್ನು ಹೆಸರು ಹಿಡಿದು ಕರೆದು ಹೊರಗೆ ಬಿಡುತ್ತಾನೆ. 4 ಆ ಬಳಿಕ ಅವುಗಳ ಮುಂದೆ ಹೋಗುತ್ತಾ ಅವುಗಳಿಗೆ ಮಾರ್ಗದರ್ಶನ ಮಾಡುತ್ತಾನೆ. ಕುರಿಗಳು ಅವನನ್ನು ಹಿಂಬಾಲಿಸುತ್ತವೆ; ಏಕೆಂದರೆ ಅವು ಅವನ ಸ್ವರವನ್ನು ತಿಳಿದಿವೆ. 5 ಆದರೆ ಕುರಿಗಳು ತಮಗೆ ಗೊತ್ತಿಲ್ಲದ ವ್ಯಕ್ತಿಯನ್ನು ಎಂದಿಗೂ ಹಿಂಬಾಲಿಸುವುದಿಲ್ಲ. ಅವುಗಳು ಆ ವ್ಯಕ್ತಿಯ ಬಳಿಯಿಂದ ಓಡಿಹೋಗುತ್ತವೆ. ಏಕೆಂದರೆ ಅವುಗಳು ಅವನ ಸ್ವರವನ್ನು ತಿಳಿದಿಲ್ಲ” ಎಂದು ಹೇಳಿದನು.
6 ಯೇಸು ಹೇಳಿದ ಈ ಸಾಮ್ಯದ ಅರ್ಥವನ್ನು ಜನರು ಗ್ರಹಿಸಿಕೊಳ್ಳಲಿಲ್ಲ.
ಯೇಸು ಒಳ್ಳೆಯ ಕುರುಬ
7 ಆದ್ದರಿಂದ ಯೇಸು ಮತ್ತೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನೇ ಕುರಿಗಳಿಗೆ ಬಾಗಿಲಾಗಿದ್ದೇನೆ. 8 ನಾನು ಬರುವುದಕ್ಕಿಂತ ಮೊದಲು ಬಂದವರೆಲ್ಲರೂ ಕಳ್ಳರಾಗಿದ್ದರು ಮತ್ತು ಸುಲಿಗೆಗಾರರಾಗಿದ್ದರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ. 9 ನಾನೇ ಬಾಗಿಲಾಗಿದ್ದೇನೆ. ನನ್ನ ಮೂಲಕವಾಗಿ ಪ್ರವೇಶಿಸುವವರು ರಕ್ಷಣೆ ಹೊಂದುವರು. ಅವರು ಒಳಗೆ ಬರಬಲ್ಲರು. ಹೊರಗೆ ಹೋಗಬಲ್ಲರು ಮತ್ತು ಹುಲ್ಲುಗಾವಲನ್ನು ಕಂಡುಕೊಳ್ಳುವರು. 10 ಕಳ್ಳನು ಕದಿಯುವುದಕ್ಕೂ ಕೊಲ್ಲುವುದಕ್ಕೂ ನಾಶಮಾಡುವುದಕ್ಕೂ ಬರುತ್ತಾನೆ. ನಾನಾದರೋ ಸಮೃದ್ಧಿಕರವಾದ ಜೀವವನ್ನು ಕೊಡಲು ಬಂದೆನು.
11 “ನಾನೇ ಒಳ್ಳೆಯ ಕುರುಬ. ಒಳ್ಳೆಯ ಕುರುಬನು ಕುರಿಗಳಿಗಾಗಿ ತನ್ನ ಪ್ರಾಣವನ್ನು ಕೊಡುತ್ತಾನೆ. 12 ಕುರಿಗಳನ್ನು ನೋಡಿಕೊಳ್ಳುವುದಕ್ಕಾಗಿ ನೇಮಿತನಾಗಿರುವ ಕೂಲಿಯಾಳು ಕುರುಬನಿಗಿಂತ ಭಿನ್ನವಾಗಿದ್ದಾನೆ. ಕೂಲಿಯಾಳು ಕುರಿಗಳ ಒಡೆಯನಲ್ಲ. ಆದ್ದರಿಂದ ಕೂಲಿಯಾಳು ತೋಳ ಬರುವುದನ್ನು ಕಾಣುವಾಗ ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ಆಗ ತೋಳವು ಕುರಿಗಳ ಮೇಲೆ ಬಿದ್ದು ಅವುಗಳನ್ನು ಚದರಿಸಿಬಿಡುತ್ತದೆ. 13 ಆ ವ್ಯಕ್ತಿಯು ಓಡಿಹೋಗುತ್ತಾನೆ. ಏಕೆಂದರೆ ಅವನು ಕೇವಲ ಕೂಲಿಗಾರನಾಗಿದ್ದಾನೆ. ಅವನ ಕುರಿಗಳ ಬಗ್ಗೆ ನಿಜವಾಗಿಯೂ ಚಿಂತಿಸುವುದಿಲ್ಲ.
14-15 “ನಾನು ಕುರಿಗಳಿಗಾಗಿ (ಜನರಿಗಾಗಿ) ಚಿಂತಿಸುವ ಕುರುಬನಾಗಿದ್ದೇನೆ. ನನ್ನ ತಂದೆಯು ನನ್ನನ್ನು ತಿಳಿದಿರುವಂತೆ ನನ್ನ ಕುರಿಗಳನ್ನು ನಾನು ತಿಳಿದಿದ್ದೇನೆ. ಮತ್ತು ನಾನು ನನ್ನ ತಂದೆಯನ್ನು ತಿಳಿದಿರುವಂತೆ ನನ್ನ ಕುರಿಗಳು ನನ್ನನ್ನು ತಿಳಿದಿವೆ. ಈ ಕುರಿಗಳಿಗೋಸ್ಕರ ನನ್ನ ಜೀವವನ್ನೇ ಕೊಡುತ್ತೇನೆ. 16 ನನಗೆ ಬೇರೆ ಕುರಿಗಳು ಸಹ ಇವೆ. ಅವುಗಳು ಇಲ್ಲಿರುವ ಈ ಮಂದೆಯಲ್ಲಿಲ್ಲ. ನಾನು ಅವುಗಳನ್ನು ಸಹ ಒಳಗೆ ನಡೆಸಬೇಕು. ಅವುಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಮುಂದಿನ ಕಾಲದಲ್ಲಿ ಒಂದೇ ಮಂದೆಯಿರುವುದು ಮತ್ತು ಒಬ್ಬನೇ ಕುರುಬನಿರುವನು. 17 ತಂದೆಯು ನನ್ನನ್ನು ಪ್ರೀತಿಸುತ್ತಾನೆ. ಏಕೆಂದರೆ ನಾನು ನನ್ನ ಪ್ರಾಣವನ್ನು ಮತ್ತೆ ಪಡೆದುಕೊಳ್ಳುವುದಕ್ಕಾಗಿ ಕೊಡುತ್ತೇನೆ. 18 ನನ್ನ ಪ್ರಾಣವನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು; ನಾನೇ ಅದನ್ನು ಇಚ್ಛಾಪೂರ್ವಕವಾಗಿ ಕೊಡುತ್ತೇನೆ. ನನ್ನ ಪ್ರಾಣವನ್ನು ಕೊಡುವುದಕ್ಕೂ ಅದನ್ನು ಮತ್ತೆ ಪಡೆದುಕೊಳ್ಳುವುದಕ್ಕೂ ನನಗೆ ಹಕ್ಕಿದೆ. ಹೀಗೆ ಮಾಡಬೇಕೆಂದು ತಂದೆಯೇ ನನಗೆ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು.
19 ಯೇಸು ಈ ಸಂಗತಿಗಳನ್ನು ಹೇಳಿದ್ದರಿಂದ ಯೆಹೂದ್ಯರಲ್ಲಿ ಮತ್ತೆ ಭೇದ ಉಂಟಾಯಿತು. 20 ಅವರಲ್ಲಿ ಅನೇಕರು, “ಅವನೊಳಗೆ ದೆವ್ವವು ಸೇರಿಕೊಂಡು ಅವನನ್ನು ಹುಚ್ಚನನ್ನಾಗಿ ಮಾಡಿದೆ. ಅವನಿಗೆ ಏಕೆ ಕಿವಿಗೊಡುತ್ತೀರಿ?” ಎಂದು ಹೇಳಿದರು.
21 ಆದರೆ ಇತರರು, “ದೆವ್ವದಿಂದ ಹುಚ್ಚು ಹಿಡಿದಿರುವ ಮನುಷ್ಯನು ಈ ರೀತಿಯ ಸಂಗತಿಗಳನ್ನು ಹೇಳುವುದಿಲ್ಲ. ಕುರುಡರ ಕಣ್ಣುಗಳನ್ನು ಗುಣಪಡಿಸಲು ದೆವ್ವಕ್ಕೆ ಸಾಧ್ಯವೇ? ಇಲ್ಲ!” ಎಂದು ಹೇಳಿದರು.
ಯೇಸುವಿನ ವಿರುದ್ಧ ಯೆಹೂದ್ಯರು
22 ಜೆರುಸಲೇಮಿನಲ್ಲಿ ಆಚರಿಸುವ ಪ್ರತಿಷ್ಠೆಯ ಹಬ್ಬವು ನಡೆಯುತ್ತಿತ್ತು. ಅದು ಚಳಿಗಾಲದಲ್ಲಿ ಆಚರಿಸುವ ಹಬ್ಬ. 23 ಯೇಸು ದೇವಾಲಯದೊಳಗೆ ಸೊಲೊಮೋನನ ಆಲಯದಲ್ಲಿದ್ದನು. 24 ಯೆಹೂದ್ಯರು ಯೇಸುವಿನ ಸುತ್ತಲೂ ನೆರೆದರು. ಅವರು ಆತನಿಗೆ, “ಇನ್ನೆಷ್ಟುಕಾಲ ನೀನು ನಿನ್ನ ಬಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುವೆ? ನೀನು ಕ್ರಿಸ್ತನಾಗಿದ್ದರೆ, ನಮಗೆ ಸ್ಪಷ್ಟವಾಗಿ ತಿಳಿಸು” ಎಂದು ಹೇಳಿದರು.
25 ಯೇಸು, “ನಾನು ಆಗಲೇ ನಿಮಗೆ ಹೇಳಿದೆನು. ಆದರೆ ನೀವು ನಂಬಲಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಅದ್ಭುತಕಾರ್ಯಗಳನ್ನು ಮಾಡುತ್ತೇನೆ. ನಾನು ಯಾರೆಂಬುದನ್ನು ಆ ಅದ್ಭುತಕಾರ್ಯಗಳು ತೋರಿಸುತ್ತವೆ. 26 ಆದರೆ ನೀವು ನಂಬುವುದಿಲ್ಲ. ಏಕೆಂದರೆ ನೀವು ನನ್ನ ಕುರಿಗಳಲ್ಲ (ಜನರಲ್ಲ). 27 ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು ಮತ್ತು ಅವುಗಳು ನನ್ನನ್ನು ಹಿಂಬಾಲಿಸುತ್ತವೆ. 28 ನನ್ನ ಕುರಿಗಳಿಗೆ ನಾನು ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದಿಗೂ ಸಾಯುವುದಿಲ್ಲ, ಮತ್ತು ಅವುಗಳನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು. 29 ನನ್ನ ಕುರಿಗಳನ್ನು ನನ್ನ ತಂದೆಯೇ ನನಗೆ ಕೊಟ್ಟನು. ಆತನು ಎಲ್ಲರಿಗಿಂತಲೂ ದೊಡ್ಡವನಾಗಿದ್ದಾನೆ. ನನ್ನ ಕುರಿಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕದ್ದುಕೊಳ್ಳಲಾರರು. 30 ತಂದೆಯು ಮತ್ತು ನಾನು ಒಂದೇ ಆಗಿದ್ದೇವೆ” ಎಂದು ಉತ್ತರಕೊಟ್ಟನು.
31 ಯೆಹೂದ್ಯರು ಯೇಸುವನ್ನು ಕೊಲ್ಲಲು ಮತ್ತೆ ಕಲ್ಲುಗಳನ್ನು ತೆಗೆದುಕೊಂಡರು. 32 ಆದರೆ ಯೇಸು ಅವರಿಗೆ, “ನಾನು ತಂದೆಯಿಂದ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದ್ದೇನೆ. ನೀವು ಆ ಕಾರ್ಯಗಳನ್ನು ನೋಡಿದ್ದೀರಿ. ಆ ಒಳ್ಳೆಯ ಕಾರ್ಯಗಳಲ್ಲಿ ಯಾವುದರ ನಿಮಿತ್ತ ನೀವು ನನ್ನನ್ನು ಕೊಲ್ಲಬೇಕೆಂದಿದ್ದೀರಿ?” ಎಂದು ಹೇಳಿದನು.
33 ಯೆಹೂದ್ಯರು, “ನಾವು ನಿನ್ನನ್ನು ಕೊಲ್ಲುತ್ತಿರುವುದು ನೀನು ಮಾಡಿದ ಯಾವುದೇ ಒಳ್ಳೆಯ ಕಾರ್ಯದ ನಿಮಿತ್ತದಿಂದಲ್ಲ. ನೀನು ಮಾಡುತ್ತಿರುವ ದೇವದೂಷಣೆಗಾಗಿ. ನೀನು ಕೇವಲ ಒಬ್ಬ ಮನುಷ್ಯ. ನೀನು ನಿನ್ನನ್ನೇ ದೇವರೆಂದು ಹೇಳಿಕೊಳ್ಳುತ್ತಿರುವೆ! ಆದಕಾರಣ ಕಲ್ಲುಗಳಿಂದ ನಿನ್ನನ್ನು ಕೊಲ್ಲಬೇಕೆಂದಿದ್ದೇವೆ!” ಎಂದು ಉತ್ತರಕೊಟ್ಟರು.
34 ಅದಕ್ಕೆ ಯೇಸು, “ನಿಮ್ಮ ಧರ್ಮಶಾಸ್ತ್ರದಲ್ಲಿ, ‘ನಾನು ನಿಮ್ಮನ್ನು ದೇವರುಗಳೆಂದು ಹೇಳಿದೆನು’(A) ಎಂಬುದಾಗಿ ಬರೆದಿದೆ. 35 ದೇವರ ಸಂದೇಶವನ್ನು ಹೊಂದಿದ್ದ ಜನರನ್ನು ಈ ಪವಿತ್ರ ಗ್ರಂಥವು ದೇವರುಗಳೆಂದು ಕರೆದಿದೆ. ಪವಿತ್ರ ಗ್ರಂಥವು ಯಾವಾಗಲೂ ಸತ್ಯವಾದದ್ದು. 36 ತಂದೆಯೇ ನನ್ನನ್ನು ಪ್ರತಿಷ್ಠಿಸಿ ಈ ಲೋಕಕ್ಕೆ ಕಳುಹಿಸಿಕೊಟ್ಟಿರುವುದರಿಂದ ನಾನು ದೇವರ ಮಗನು ಎಂದು ಹೇಳಿದ್ದಕ್ಕೆ ನೀವು ನನ್ನನ್ನು ದೇವದೂಷಣೆ ಮಾಡುವವನೆಂದು ಹೇಳುವುದೇಕೆ? 37 ನನ್ನ ತಂದೆಯು ಮಾಡುವುದನ್ನು ನಾನು ಮಾಡದಿದ್ದರೆ, ನಾನು ಹೇಳುವುದನ್ನು ನಂಬಬೇಡಿ. 38 ಆದರೆ ನನ್ನ ತಂದೆಯು ಮಾಡುವ ಕಾರ್ಯಗಳನ್ನೇ ನಾನು ಮಾಡಿದರೆ, ಆ ಕಾರ್ಯಗಳಲ್ಲಿ ನೀವು ನಂಬಿಕೆ ಇಡಬೇಕು. ನೀವು ನನ್ನಲ್ಲಿ ನಂಬಿಕೆ ಇಡದಿದ್ದರೂ ನನ್ನ ಕಾರ್ಯಗಳಲ್ಲಾದರೂ ನಂಬಿಕೆ ಇಡಿರಿ. ತಂದೆಯು ನನ್ನಲ್ಲಿದ್ದಾನೆ ಮತ್ತು ನಾನು ತಂದೆಯಲ್ಲಿದ್ದೇನೆ ಎಂಬುದನ್ನು ಆಗ ನೀವು ತಿಳಿದುಕೊಳ್ಳುವಿರಿ ಮತ್ತು ಅರ್ಥಮಾಡಿಕೊಳ್ಳುವಿರಿ” ಎಂದು ಹೇಳಿದನು.
39 ಯೇಸುವನ್ನು ಬಂಧಿಸಲು ಯೆಹೂದ್ಯರು ಮತ್ತೆ ಪ್ರಯತ್ನಿಸಿದರು. ಆದರೆ ಯೇಸು ಅವರಿಂದ ತಪ್ಪಿಸಿಕೊಂಡನು.
40 ಬಳಿಕ ಯೇಸು ಜೋರ್ಡನ್ ನದಿಯ ಆಚೆಯ ದಡಕ್ಕೆ ಹೋದನು. ಯೋಹಾನನು ಮೊದಲು ದೀಕ್ಷಾಸ್ನಾನ ಕೊಡುತ್ತಿದ್ದ ಸ್ಥಳಕ್ಕೆ ಯೇಸು ಹೋಗಿ ಅಲ್ಲಿ ತಂಗಿದನು. 41 ಆಗ ಅನೇಕ ಜನರು ಆತನ ಬಳಿಗೆ ಬಂದರು. “ಯೋಹಾನನು ಎಂದೂ ಅದ್ಭುತಕಾರ್ಯವನ್ನು ಮಾಡಲಿಲ್ಲ. ಆದರೆ ಯೋಹಾನನು ಈ ಮನುಷ್ಯನ (ಯೇಸುವಿನ) ಬಗ್ಗೆ ಹೇಳಿದ ಪ್ರತಿಯೊಂದೂ ಸತ್ಯವಾದದ್ದು” ಎಂದು ಅವರು ಮಾತಾಡಿಕೊಂಡರು. 42 ಮತ್ತು ಅಲ್ಲಿ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು.
Kannada Holy Bible: Easy-to-Read Version. All rights reserved. © 1997 Bible League International