M’Cheyne Bible Reading Plan
22 ಆಗ ದಾವೀದನು, “ದೇವರ ಆಲಯವೂ ಆತನ ಯಜ್ಞವೇದಿಕೆಯೂ ಇದೇ ಸ್ಥಳದಲ್ಲಿ ಕಟ್ಟಲ್ಪಡುವದು” ಅಂದನು.
ದೇವಾಲಯವನ್ನು ಕಟ್ಟಲು ದಾವೀದನ ಯೋಜನೆ
2 ಇಸ್ರೇಲಿನಲ್ಲಿ ವಾಸಿಸುತ್ತಿದ್ದ ಪರದೇಶಸ್ಥರನ್ನೆಲ್ಲಾ ದಾವೀದನು ಬರಹೇಳಿ ಅವರಲ್ಲಿಂದ ಕಲ್ಲುಕುಟಿಗರನ್ನು ಆರಿಸಿ ತೆಗೆದುಕೊಂಡನು. ದೇವಾಲಯವನ್ನು ಕಟ್ಟಲು ಕಲ್ಲುಗಳನ್ನು ಕೆತ್ತಿ ತಯಾರಿಸುವ ಕೆಲಸ ಅವರದಾಗಿತ್ತು. 3 ದೇವಾಲಯದ ಬಾಗಿಲುಗಳಿಗೆ ಬೇಕಾದ ಮೊಳೆಗಳಿಗೆ ಮತ್ತು ಕೀಲುಗಳಿಗೆ ಬೇಕಾದ ಕಬ್ಬಿಣವನ್ನು ಶೇಖರಿಸಿಟ್ಟನು. ಅವನು ತನ್ನ ಬಳಿಯಲ್ಲಿ ತೂಕಮಾಡಲು ಸಾಧ್ಯವಾಗದಷ್ಟು ತಾಮ್ರವನ್ನು ಶೇಖರಿಸಿಟ್ಟಿದ್ದನು. 4 ಅಲ್ಲದೆ ಲೆಕ್ಕಮಾಡಲು ಅಸಾಧ್ಯವಾದಷ್ಟು ದೇವದಾರು ಮರಗಳ ದಿಮ್ಮಿಯನ್ನು ಕೂಡಿಸಿಟ್ಟಿದ್ದನು. ತೂರ್ಯರು ಮತ್ತು ಚೀದೋನಿನವರು ಆ ದಿಮ್ಮಿಗಳನ್ನು ದಾವೀದನಿಗೆ ತಂದು ಕೊಟ್ಟಿದ್ದರು.
5 ದಾವೀದನು, “ನಾವು ನಮ್ಮ ದೇವರಿಗೆ ಮಹಾದೊಡ್ಡ ಆಲಯವನ್ನು ಕಟ್ಟಿಸಬೇಕು. ಆದರೆ ನನ್ನ ಮಗನಾದ ಸೊಲೊಮೋನನು ಇನ್ನೂ ಎಳೆಪ್ರಾಯದವನು; ಅವನು ಕಲಿಯ ಬೇಕಾದದ್ದು ಇನ್ನೂ ಬೇಕಾದಷ್ಟಿದೆ. ದೇವಾಲಯವು ಎಲ್ಲಾ ಜನಾಂಗಗಳಲ್ಲಿ ಪ್ರಸಿದ್ಧವಾಗಿದ್ದು ಅದರ ಸೌಂದರ್ಯ ಮತ್ತು ವಿನ್ಯಾಸವು ಹೆಸರುವಾಸಿಯಾಗಿರಬೇಕು. ಅದಕ್ಕಾಗಿಯೇ ನಾನು ಆ ದೇವಾಲಯಕ್ಕಾಗಿ ಸಮಸ್ತವನ್ನು ಸಿದ್ಧಪಡಿಸುತ್ತೇನೆ” ಅಂದುಕೊಂಡನು. ಅಲ್ಲದೆ ಅವನು ಸಾಯುವುದಕ್ಕಿಂತ ಮುಂಚೆ ದೇವಾಲಯವನ್ನು ಕಟ್ಟುವುದಕ್ಕೆ ಬೇಕಾಗಿರುವವುಗಳನ್ನೆಲ್ಲಾ ಕೂಡಿಸಿಟ್ಟನು.
6 ದಾವೀದನು ತನ್ನ ಮಗನಾದ ಸೊಲೊಮೋನನನ್ನು ಕರೆದು ಇಸ್ರೇಲಿನ ದೇವರಾದ ಯೆಹೋವನಿಗೆ ಆಲಯವನ್ನು ಕಟ್ಟುವಂತೆ ಹೇಳಿದನು. 7 ದಾವೀದನು ಸೊಲೊಮೋನನಿಗೆ, “ನನ್ನ ಮಗನೇ, ನಾನು ನನ್ನ ದೇವರ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಬೇಕೆಂದಿದ್ದೆನು. 8 ಆದರೆ ಯೆಹೋವನು ನನಗೆ, ‘ದಾವೀದನೇ, ನೀನು ಅನೇಕ ಯುದ್ಧಗಳನ್ನು ಮಾಡಿ ಅನೇಕರನ್ನು ಕೊಂದಿರುತ್ತೀ. ಹೀಗಿರುವದರಿಂದ ನೀನು ನನಗೆ ಆಲಯವನ್ನು ಕಟ್ಟಬಾರದು. 9 ಆದರೆ ನಿನ್ನ ನಂತರ ಬರುವ ನಿನ್ನ ಮಗನು ಸಮಾಧಾನ ಪುರುಷನಾಗಿರುವನು. ಅವನ ರಾಜ್ಯದಲ್ಲಿ ನಾನು ಶಾಂತಿಯನ್ನು ನೆಲೆಗೊಳಿಸುವೆನು. ಅವನ ಸುತ್ತಮುತ್ತಲಿರುವ ವೈರಿಗಳಿಂದ ಅವನಿಗೆ ಯಾವ ಕೇಡೂ ಉಂಟಾಗದು. ಅವನೇ ಸೊಲೊಮೋನನು. ಅವನ ಕಾಲದಲ್ಲಿ ಇಸ್ರೇಲರು ಸಮಾಧಾನದಿಂದ ವಾಸಿಸುವರು. 10 ಅವನು ನನ್ನ ಹೆಸರಿಗಾಗಿ ಆಲಯವನ್ನು ಕಟ್ಟುವನು. ಅವನು ನನ್ನ ಮಗನಾಗಿರುವನು; ನಾನು ಅವನಿಗೆ ತಂದೆಯಾಗಿರುವೆನು. ನಾನು ಅವನ ರಾಜ್ಯವನ್ನು ಬಲಗೊಳಿಸುವೆನು; ಅವನ ಸಂತಾನದವರು ಇಸ್ರೇಲ್ ರಾಜ್ಯವನ್ನು ನಿರಂತರಕ್ಕೂ ಆಳುವರು’” ಎಂದು ಹೇಳಿದನು.
11 “ಮಗನೇ, ನೀನು ದೇವಾಲಯವನ್ನು ಕಟ್ಟುವಾಗ ಯೆಹೋವನು ನಿನ್ನ ಸಂಗಡವಿದ್ದು ನಿನಗೆ ಯಶಸ್ಸನ್ನು ದಯಪಾಲಿಸಲಿ. 12 ಯೆಹೋವನು ನಿನ್ನನ್ನು ಇಸ್ರೇಲರಿಗೆ ಅರಸನನ್ನಾಗಿ ಮಾಡುವನು. ನೀನು ಆತನ ಆಜ್ಞೆಗಳನ್ನು ಅನುಸರಿಸಿ, ದಕ್ಷತೆಯಿಂದ ರಾಜ್ಯಭಾರ ಮಾಡುವದಕ್ಕೆ ಬೇಕಾದ ಜ್ಞಾನವನ್ನು ನಿನಗೆ ದಯಪಾಲಿಸಲಿ. 13 ಯೆಹೋವನು ಮೋಶೆಗೆ ಕೊಟ್ಟಿರುವ ಕಟ್ಟಳೆಗಳನ್ನು ನೀನು ಜಾಗ್ರತೆಯಾಗಿ ಅನುಸರಿಸಿ ನಡೆದರೆ ನಿನಗೆ ಯಶಸ್ಸು ಪ್ರಾಪ್ತವಾಗುವುದು. ಸ್ಥಿರಚಿತ್ತನಾಗಿರು; ಧೈರ್ಯದಿಂದಿರು; ಹೆದರಬೇಡ; ಕಳವಳಪಡಬೇಡ.
14 “ಸೊಲೊಮೋನನೇ, ನಾನು ಬಹು ಪ್ರಯಾಸಪಟ್ಟು ಯೆಹೋವನ ಆಲಯಕ್ಕೋಸ್ಕರ ಮೂರು ಸಾವಿರದ ಏಳುನೂರೈವತ್ತು ಟನ್ ಬಂಗಾರ, ಮೂವತ್ತೇಳು ಸಾವಿರದ ಐನೂರು ಟನ್ ಬೆಳ್ಳಿ ಮತ್ತು ತೂಕ ಮಾಡಲಾಗದಷ್ಟು ತಾಮ್ರ ಮತ್ತು ಕಬ್ಬಿಣವನ್ನು ಕೂಡಿಸಿಟ್ಟಿದ್ದೇನೆ. ಅಲ್ಲದೆ ಮರಗಳನ್ನು ಮತ್ತು ಕಲ್ಲುಗಳನ್ನು ಕೊಟ್ಟಿರುತ್ತೇನೆ. ಸೊಲೊಮೋನನೇ, ನೀನು ಇವುಗಳಿಗೆ ಇನ್ನೂ ಕೂಡಿಸು. 15 ನಿನ್ನ ಬಳಿಯಲ್ಲಿ ಅನೇಕ ಬಡಗಿಗಳು ಮತ್ತು ಕಲ್ಲುಕುಟಿಗರು ಇದ್ದಾರೆ. ಬೇರೆ ಕೆಲಸಗಳ ಕುಶಲಕರ್ಮಿಗಳೂ 16 ಬಂಗಾರದ ಕೆಲಸಗಾರರೂ ಬೆಳ್ಳಿ, ತಾಮ್ರ, ಕಬ್ಬಿಣದ ಕೆಲಸಗಾರರೂ ಲೆಕ್ಕವಿಲ್ಲದಷ್ಟು ಇದ್ದಾರೆ. ಈಗ ನೀನು ಕೆಲಸ ಪ್ರಾರಂಭಿಸು. ದೇವರು ನಿನ್ನ ಸಂಗಡವಿರಲಿ” ಎಂದು ಹೇಳಿದನು.
17 ಬಳಿಕ ತನ್ನ ಮಗನಾದ ಸೊಲೊಮೋನನೊಂದಿಗೆ ಸಹಕರಿಸಲು ಇಸ್ರೇಲರ ಮುಖಂಡರಿಗೆ ಆಜ್ಞಾಪಿಸಿದನು. 18 ಬಳಿಕ ತನ್ನ ಮಾತನ್ನು ಮುಂದುವರಿಸಿ, “ದೇವರಾದ ಯೆಹೋವನು ನಿಮ್ಮೊಂದಿಗಿದ್ದಾನೆ. ಆತನು ನಿಮಗೆ ಸಮಾಧಾನವನ್ನು ಅನುಗ್ರಹಿಸಿರುತ್ತಾನೆ. ನಮ್ಮ ಸುತ್ತಮುತ್ತಲಿನ ಶತ್ರುಗಳನ್ನು ಸೋಲಿಸಲು ಆತನು ನಮಗೆ ಸಹಾಯಮಾಡಿದ್ದಾನೆ. ಈಗ ಯೆಹೋವನೂ ಆತನ ಜನರೂ ಈ ದೇಶವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. 19 ಈಗ ನಿಮ್ಮ ಹೃದಯಗಳನ್ನೂ ಆತ್ಮಗಳನ್ನೂ ನಿಮ್ಮ ದೇವರಾದ ಯೆಹೋವನಿಗೆ ಕೊಡಿರಿ. ಆತನಿಗೆ ಪರಿಶುದ್ಧ ನಿವಾಸವನ್ನು ಆತನ ಹೆಸರಿಗಾಗಿ ಕಟ್ಟಿರಿ; ಒಡಂಬಡಿಕೆಯ ಪೆಟ್ಟಿಗೆಯನ್ನೂ ಇತರ ಪವಿತ್ರ ಸಾಮಾಗ್ರಿಗಳನ್ನೂ ಆತನ ಆಲಯಕ್ಕೆ ತನ್ನಿರಿ” ಎಂದು ಹೇಳಿದನು.
ಗಂಡ ಮತ್ತು ಹೆಂಡತಿ
3 ಸ್ತ್ರೀಯರೇ, ಇದೇ ರೀತಿಯಲ್ಲಿ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ 2 ನೀವು ದೇವರಲ್ಲಿ ಭಯಭಕ್ತಿಯುಳ್ಳವರಾಗಿದ್ದು ನಿಷ್ಕಳಂಕರಾಗಿ ಜೀವಿಸುವುದನ್ನು ಕಂಡು ವಾಕ್ಯೋಪದೇಶವಿಲ್ಲದಿದ್ದರೂ ದೇವರ ವಾಕ್ಯದ ಮೇಲೆ ನಂಬಿಕೆಯಿಡಲು ನಿಮ್ಮ ನಡತೆಯಿಂದಲೇ ಪ್ರೋತ್ಸಾಹಿಸಲ್ಪಡುವರು. 3 ತಲೆಕೂದಲನ್ನು ಸುಂದರವಾಗಿ ಬಾಚಿಕೊಳ್ಳುವುದಾಗಲಿ ಬಂಗಾರದ ಒಡವೆಗಳಾಗಲಿ ಒಳ್ಳೆಯ ಬಟ್ಟೆಗಳಾಗಲಿ ನಿಮ್ಮ ಸೌಂದರ್ಯದ ಸಾಧನಗಳಾಗದಿರಲಿ. 4 ಸಾತ್ವಿಕವೂ ಶಾಂತವೂ ಆದ ಆಂತರ್ಯವೇ ನಿಮ್ಮ ಸೌಂದರ್ಯವಾಗಿರಬೇಕು. ಆ ಸೌಂದರ್ಯ ನಶಿಸಿಹೋಗುವುದಿಲ್ಲ. ಅದು ದೇವರಿಗೆ ಬಹು ಅಮೂಲ್ಯವಾದದ್ದು.
5 ಬಹು ಕಾಲದ ಹಿಂದೆ ಜೀವಿಸಿದ್ದು ದೇವರನ್ನು ಅನುಸರಿಸುತ್ತಾ ಪರಿಶುದ್ಧರಾಗಿದ್ದ ಸ್ತ್ರೀಯರು ಇದೇ ರೀತಿಯಲ್ಲಿ ತಮ್ಮನ್ನು ಶೃಂಗರಿಸಿಕೊಂಡರು. ಅವರು ತಮ್ಮ ಗಂಡಂದಿರಿಗೆ ಅಧೀನರಾಗಿದ್ದರು. 6 ನಾನು ಸಾರಳಂತಹ ಸ್ತ್ರೀಯರ ಬಗ್ಗೆ ಹೇಳುತ್ತಿದ್ದೇನೆ. ಅವಳು ತನ್ನ ಗಂಡನಾದ ಅಬ್ರಹಾಮನಿಗೆ ವಿಧೇಯಳಾಗಿದ್ದು, ಅವನನ್ನು ತನ್ನ ಒಡೆಯನೆಂದು ಕರೆದಳು. ಸ್ತ್ರೀಯರಾದ ನೀವು ಭಯಪಡದೆ ಯಾವಾಗಲೂ ಯೋಗ್ಯವಾದುದನ್ನು ಮಾಡಿದರೆ, ನೀವು ಸಾರಳ ನಿಜವಾದ ಮಕ್ಕಳಾಗುವಿರಿ.
7 ಪುರುಷರೇ, ಇದೇ ರೀತಿಯಲ್ಲಿ ನೀವು ನಿಮ್ಮ ಪತ್ನಿಯರನ್ನು ಅರ್ಥಮಾಡಿಕೊಂಡು ಅವರೊಂದಿಗೆ ಬಾಳಬೇಕು. ನೀವು ನಿಮ್ಮ ಪತ್ನಿಯರಿಗೆ ಗೌರವ ತೋರಬೇಕು. ಅವರು ನಿಮಗಿಂತ ದುರ್ಬಲರು. ಆದರೆ ದೇವರು ನಿಮಗೆ ಕೊಡುವ ಆಶೀರ್ವಾದವನ್ನೇ ಅಂದರೆ ನಿಜಜೀವವನ್ನು ನೀಡುವ ಕೃಪೆಯನ್ನೇ ನಿಮ್ಮ ಪತ್ನಿಯರಿಗೂ ಕೊಡುವನು. ನೀವು ಹೀಗೆ ಜೀವಿಸುವುದಾಗಿದ್ದರೆ ಪ್ರಾರ್ಥಿಸಲು ನಿಮಗೆ ಅಡ್ಡಿಯಾಗುವುದಿಲ್ಲ.
ಒಳ್ಳೆಯದರ ನಿಮಿತ್ತ ಉಂಟಾಗುವ ಸಂಕಟ
8 ಆದ್ದರಿಂದ ನೀವೆಲ್ಲರೂ ಒಟ್ಟಾಗಿ ಶಾಂತಿಯಿಂದ ಬಾಳಿರಿ; ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಒಬ್ಬರನ್ನೊಬ್ಬರು ಸಹೋದರರಂತೆ ಪ್ರೀತಿಸಿರಿ. ದಯೆ ತೋರುವವರೂ ಮತ್ತು ದೀನತೆ ಉಳ್ಳವರೂ ಆಗಿರಿ. 9 ಅಪಕಾರ ಮಾಡಿದವನಿಗೆ ಅಪಕಾರ ಮಾಡದೆ, ನಿಂದಿಸಿದವನನ್ನು ನಿಂದಿಸದೆ, ಅವನನ್ನು ಆಶೀರ್ವದಿಸುವಂತೆ ದೇವರಲ್ಲಿ ಬೇಡಿಕೊಳ್ಳಿರಿ. ಏಕೆಂದರೆ ಆಶೀರ್ವಾದವನ್ನು ಹೊಂದಿಕೊಳ್ಳಲು ನೀವು ಕರೆಯಲ್ಪಟ್ಟವರಾಗಿದ್ದೀರಿ. 10 ಪವಿತ್ರ ಗ್ರಂಥವು ಹೇಳುವುದೇನೆಂದರೆ,
“ಈ ಜೀವಿತದಲ್ಲಿ ಸಂತೋಷಿಸುತ್ತಾ
ಸುದಿನಗಳನ್ನು ನೋಡಲು ಅಪೇಕ್ಷಿಸುವವನು
ಕೆಟ್ಟ ಮಾತುಗಳನ್ನಾಡದಿರಲಿ;
ಸುಳ್ಳನ್ನು ನುಡಿಯದಿರಲಿ.
11 ಅವನು ಕೆಟ್ಟದ್ದನ್ನು ಮಾಡದೆ ಒಳ್ಳೆಯದನ್ನೇ ಮಾಡಲಿ.
ಅವನು ಶಾಂತಿಯನ್ನು ಎದುರುನೋಡುತ್ತಾ ಅದನ್ನು ಪಡೆಯಲು ಪ್ರಯತ್ನಿಸಲಿ.
12 ನೀತಿವಂತರನ್ನು ಪ್ರಭುವು ಕಾಯುತ್ತಾನೆ;
ಅವರ ಪ್ರಾರ್ಥನೆಗಳನ್ನು ಆಲಿಸುತ್ತಾನೆ.
ಆದರೆ ಕೆಟ್ಟದ್ದನ್ನು ಮಾಡುವ ಜನರನ್ನು ಪ್ರಭುವು ವಿರೋಧಿಸುತ್ತಾನೆ.”(A)
13 ನೀವು ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಿದ್ದರೆ, ಯಾರೂ ನಿಮಗೆ ಕೇಡು ಮಾಡುವುದಿಲ್ಲ. 14 ಆದರೆ ಯೋಗ್ಯವಾದುದನ್ನು ಮಾಡುವಾಗ ನೀವು ಸಂಕಟಪಡಬೇಕಾಗಬಹುದು. ಆದರೆ “ನಿಮ್ಮನ್ನು ಸಂಕಟಕ್ಕೆ ಒಳಪಡಿಸುವ ಜನರಿಗೆ ಹೆದರಬೇಡಿರಿ ಮತ್ತು ಚಿಂತಿಸಬೇಡಿರಿ.”(B) 15 ನಿಮ್ಮ ಹೃದಯಗಳಲ್ಲಿ ಕ್ರಿಸ್ತನೇ ಪ್ರಭುವಾಗಿರಲಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ನಿಮ್ಮನ್ನು ಕೇಳುವ ಪ್ರತಿಯೊಬ್ಬರಿಗೂ ಉತ್ತರ ಹೇಳಲು ಯಾವಾಗಲೂ ಸಿದ್ಧವಾಗಿರಿ. 16 ಆದರೆ ಸಾತ್ವಿಕತೆಯಿಂದ ಗೌರವಕರವಾದ ರೀತಿಯಲ್ಲಿ ಅವರಿಗೆ ಉತ್ತರವನ್ನು ಹೇಳಿ. ನೀವು ಮಾಡುತ್ತಿರುವುದು ಯೋಗ್ಯವಾದದ್ದೆಂಬುದು ನಿಮಗೆ ಯಾವಾಗಲೂ ಖಚಿತವಾಗಿ ತಿಳಿದಿರಬೇಕು. ಆಗ, ನೀವು ಕ್ರಿಸ್ತನಲ್ಲಿ ಒಳ್ಳೆಯವರಾಗಿ ಜೀವಿಸುವುದನ್ನು ನೋಡಿ ನಿಮ್ಮ ಬಗ್ಗೆ ಕೆಟ್ಟಮಾತುಗಳನ್ನು ಹೇಳುವವರು ತಾವು ಹೇಳಿದ ಕೆಟ್ಟ ಸಂಗತಿಗಳಿಗಾಗಿ ನಾಚಿಕೆಪಡುವರು.
17 ಕೆಟ್ಟದ್ದನ್ನು ಮಾಡಿ ಸಂಕಟ ಪಡುವುದಕ್ಕಿಂತ ಒಳ್ಳೆಯದನ್ನು ಮಾಡಿ ಸಂಕಟಪಡುವುದು ಉತ್ತಮ. ಹೌದು, ಅದು ದೇವರ ಅಪೇಕ್ಷೆಯಾಗಿದ್ದರೆ ಅದೇ ಒಳ್ಳೆಯದು.
18 ನಿಮ್ಮ ಪಾಪಗಳಿಗಾಗಿ ಕ್ರಿಸ್ತನು ಒಂದೇಸಾರಿ
ಬಾಧೆ ಅನುಭವಿಸಿ ಸತ್ತನು.
ನೀತಿವಂತನಾಗಿದ್ದ ಆತನು
ಅಪರಾಧಿಗಳಿಗಾಗಿ ಪ್ರಾಣಕೊಟ್ಟನು.
ನಿಮ್ಮೆಲ್ಲರನ್ನು ದೇವರ ಬಳಿಗೆ ನಡೆಸುವುದಕ್ಕಾಗಿ ಆತನು ಹೀಗೆ ಮಾಡಿದನು.
ಆತನ ದೇಹವು ಕೊಲ್ಲಲ್ಪಟ್ಟಿತು,
ಆದರೆ ಆತನು ಆತ್ಮಸಂಬಂಧದಲ್ಲಿ ಮತ್ತೆ ಜೀವಂತನಾದನು.
19 ಬಳಿಕ ಆತನು ಆತ್ಮರೂಪದಲ್ಲಿ ಹೋಗಿ ಸೆರೆಮನೆಯಲ್ಲಿದ್ದ ಆತ್ಮಗಳಿಗೆ ಸುವಾರ್ತೆ ಸಾರಿದನು. 20 ಬಹಳ ಹಿಂದೆ ನೋಹನ ಕಾಲದಲ್ಲಿ ದೇವರಿಗೆ ಅವಿಧೇಯರಾಗಿದ್ದವರೇ ಅವರು. ನೋಹನು ನಾವೆಯನ್ನು ಕಟ್ಟುತ್ತಿದ್ದಾಗ ದೇವರು ತಾಳ್ಮೆಯಿಂದ ಕಾಯುತ್ತಿದ್ದನು. ಕೆಲವರು ಅಂದರೆ ಎಂಟು ಮಂದಿ ಮಾತ್ರ, ಆ ನಾವೆಯಲ್ಲಿ ನೀರಿನ ಮೂಲಕ ರಕ್ಷಿಸಲ್ಪಟ್ಟರು. 21 ಆ ನೀರು ಈಗ ನಿಮ್ಮನ್ನು ರಕ್ಷಿಸುತ್ತಿರುವ ದೀಕ್ಷಾಸ್ನಾನದಂತಿದೆ. ದೀಕ್ಷಾಸ್ನಾನವು ಮೈಕೊಳೆಯನ್ನು ತೊಳೆಯುವಂಥದ್ದಲ್ಲ. ಅದು ಪರಿಶುದ್ಧ ಹೃದಯ ಬೇಕೆಂದು ವಿಜ್ಞಾಪಿಸಿಕೊಳ್ಳುವಂಥದಾಗಿದೆ. ಯೇಸು ಕ್ರಿಸ್ತನು ಸಾವಿನಿಂದ ಎದ್ದುಬಂದದ್ದರಿಂದ ಅದು ನಿಮ್ಮನ್ನು ರಕ್ಷಿಸುತ್ತದೆ. 22 ಈಗ ಯೇಸು ಪರಲೋಕಕ್ಕೆ ಹೋಗಿರುವನು. ಆತನು ದೇವರ ಬಲಗಡೆಯಲ್ಲಿದ್ದಾನೆ. ಆತನು ದೇವದೂತರನ್ನೂ ಅಧಿಕಾರಿಗಳನ್ನೂ ಶಕ್ತಿಗಳನ್ನೂ ಆಳುತ್ತಿದ್ದಾನೆ.
ಇಸ್ರೇಲ್ ಮತ್ತು ಸಮಾರ್ಯವು ಶಿಕ್ಷಿಸಲ್ಪಡಬೇಕು
1 ಯೆಹೋವನ ಮಾತುಗಳು ಮೀಕನಿಗೆ ಬಂದವು. ಅರಸರಾದ ಯೋಥಾಮ, ಅಹಾಜ ಮತ್ತು ಹಿಜ್ಕೀಯರ ಆಳ್ವಿಕೆಯ ಸಮಯದಲ್ಲಿ ಇದು ನಡೆಯಿತು. ಇವರು ಯೆಹೂದ ರಾಜ್ಯದ ಅರಸರು. ಮೀಕನು ಮೋರೆಷೆತ್‌ನವನು. ಇವನು ಸಮಾರ್ಯ ಮತ್ತು ಜೆರುಸಲೇಮಿನ ವಿಷಯವಾಗಿ ದೇವದರ್ಶನವನ್ನು ಹೊಂದಿದನು.
2 ಎಲ್ಲಾ ಜನರೇ, ಕೇಳಿರಿ!
ಭೂಮಿಯೂ ಅದರಲ್ಲಿರುವವರೆಲ್ಲರೂ ಕೇಳಿರಿ!
ನನ್ನ ಒಡೆಯನಾದ ಯೆಹೋವನು ತನ್ನ ಪವಿತ್ರ ಆಲಯದಿಂದ ಬರುವನು.
ನಿಮ್ಮ ವಿರುದ್ಧ ಸಾಕ್ಷಿಯಾಗಿ ಆತನು ಬರುವನು.
3 ಯೆಹೋವನು ತನ್ನ ಸ್ಥಳದಿಂದ ಹೊರಟು ಬರುವುದನ್ನು ನೋಡಿರಿ.
ಆತನು ಲೋಕದ ಬೆಟ್ಟಗಳ ಮೇಲೆ ನಡೆಯಲು ಬರುತ್ತಿದ್ದಾನೆ.
4 ಬೆಂಕಿಯಲ್ಲಿ ಮೇಣವು ಕರಗುವಂತೆ
ಬೆಟ್ಟಗಳು ಆತನ ಪಾದದಡಿಯಿಂದ ಕರಗಿಹೋಗುತ್ತವೆ.
ತಗ್ಗುಗಳು ಇಬ್ಭಾಗವಾಗಿ ನೀರಿನಂತೆ
ಕಡಿದಾದ ಸ್ಥಳದಿಂದ ಹರಿದುಹೋಗುತ್ತವೆ.
5 ಇದಕ್ಕೆಲ್ಲಾ ಕಾರಣ ಯಾಕೋಬನ ಪಾಪಗಳೇ,
ಇಸ್ರೇಲರ ದ್ರೋಹಗಳೇ!
ಪಾಪಕ್ಕೆ ಕಾರಣ ಸಮಾರ್ಯವೇ
ಯಾಕೋಬು ಪಾಪಮಾಡಿದ್ದಕ್ಕೆ ಕಾರಣವೇನು?
ಸಮಾರ್ಯವೇ ಕಾರಣ.
ಯೆಹೂದದ ಎತ್ತರವಾದ ಸ್ಥಳ ಯಾವುದು?[a]
ಅದೇ ಜೆರುಸಲೇಮ್.
6 ಆದ್ದರಿಂದ ನಾನು ಸಮಾರ್ಯವನ್ನು ಕಲ್ಲಿನ ರಾಶಿಯನ್ನಾಗಿ ಮಾಡುವೆನು.
ಅದು ದ್ರಾಕ್ಷಿಬಳ್ಳಿ ನೆಡಲು ಸಿದ್ಧವಾಗುವುದು.
ಸಮಾರ್ಯದ ಕಲ್ಲುಗಳನ್ನೆಲ್ಲಾ ತಗ್ಗಿಗೆ ನೂಕಿಬಿಡುವೆನು;
ಆಗ ಅಲ್ಲಿ ಕೇವಲ ಅಸ್ತಿವಾರಗಳು ಕಾಣುವವು.
7 ಆಕೆಯ ವಿಗ್ರಹಗಳೆಲ್ಲಾ ಒಡೆದು ಪುಡಿಮಾಡಲ್ಪಡುವವು.
ಆಕೆಯ ಸೂಳೆತನದ ಹಣವು ಬೆಂಕಿಯಲ್ಲಿ ಸುಡಲ್ಪಡುವುದು.
ಆಕೆಯ ಸುಳ್ಳುದೇವರ ವಿಗ್ರಹಗಳನ್ನೆಲ್ಲಾ ನಾಶಮಾಡುವೆನು.
ಯಾಕೆಂದರೆ ಸಮಾರ್ಯ ನನಗೆ ಅಪನಂಬಿಗಸ್ತಳಾಗಿ ಧನಿಕಳಾದಳು.
ನನಗೆ ನಂಬಿಗಸ್ತರಲ್ಲದವರು
ಆಕೆಯಿಂದ ಅದನ್ನು ಕಸಿದುಕೊಳ್ಳುವರು.
ಮೀಕನ ಮಹಾ ದುಃಖ
8 ಮುಂದೆ ಸಂಭವಿಸುವ ಘಟನೆಗಳ ಬಗ್ಗೆ ನಾನು ಬಹಳ ದುಃಖಿತನಾಗಿದ್ದೇನೆ.
ನಾನು ಬಟ್ಟೆಯನ್ನಾಗಲಿ ಚಪ್ಪಲಿಯನ್ನಾಗಲಿ ಹಾಕಿಕೊಳ್ಳದೇ ಹೋಗುವೆನು.
ನಾಯಿಯಂತೆ ಅಳುವೆನು,
ಪಕ್ಷಿಯಂತೆ ಗೋಳಾಡುವೆನು.
9 ಸಮಾರ್ಯದ ಗಾಯವು ವಾಸಿಯಾಗದು.
ಆಕೆಯ ರೋಗವು (ಪಾಪ) ಯೆಹೂದಕ್ಕೆ ಹಬ್ಬಿಯದೆ.
ಅದು ನನ್ನ ಜನರ ಪಟ್ಟಣದ ಹೆಬ್ಬಾಗಿಲಿನವರೆಗೆ ಹೋಗಿದೆ.
ಜೆರುಸಲೇಮಿನ ತನಕ ಪಸರಿಸಿಯದೆ.
10 ಇದನ್ನು ಗತ್‌ನಲ್ಲಿ ತಿಳಿಸಬೇಡಿ.
ಅಕ್ಕೊದಲ್ಲಿ ಅಳಬೇಡಿರಿ.
ಬೆತ್ ಒಫ್ರದ ಧೂಳಿನಲ್ಲಿ ಹೊರಳಾಡಿರಿ.
11 ಶಾಫೀರ್‌ನಲ್ಲಿ ವಾಸಿಸುವವರೇ,
ಬೆತ್ತಲೆಯಾಗಿ ನಾಚಿಕೆಯಿಂದ ನಡೆಯಿರಿ.
ಚಾನಾನ್‌ನಲ್ಲಿ ವಾಸಿಸುವವರು
ಹೊರಗೆ ಬರುವದಿಲ್ಲ.
ಬೇತೇಚೆಲಿನ ಜನರು ಅಳುವರು,
ನಿಮಗೆ ಅವರು ನೀಡುತ್ತಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವರು.
12 ಮಾರೊತ್‌ನಲ್ಲಿ ವಾಸಿಸುವ ಜನರು ಬಲಹೀನರಾಗಿದ್ದಾರೆ.
ಅವರು ಶುಭವಾರ್ತೆಗಾಗಿ ಕಾಯುತ್ತಿದ್ದಾರೆ.
ಯಾಕೆಂದರೆ ಜೆರುಸಲೇಮಿನ ನಗರ ದ್ವಾರದ ಬಳಿಗೆ
ಯೆಹೋವನಿಂದ ಆಪತ್ತು ಬಂದಿದೆ.
13 ಲಾಕೀಷಿನ ಸ್ತ್ರೀಯೇ,
ವೇಗವಾಗಿ ಓಡುವ ಕುದುರೆಯನ್ನು ನಿನ್ನ ಬಂಡಿಗೆ ಬಿಗಿ.
ಚೀಯೋನಿನ ಪಾಪವು ಲಾಕೀಷಿನಲ್ಲಿ ಪ್ರಾರಂಭವಾಯಿತು.
ಯಾಕೆಂದರೆ ನೀನು ಇಸ್ರೇಲಿನ ಪಾಪವನ್ನು ಅನುಸರಿಸಿದಿ.
14 ಆದ್ದರಿಂದ ಗತ್‌ನಲ್ಲಿರುವ ಮೋರೆಷತ್‌ಗೆ
ಬೀಳ್ಕೊಡುವ ಕಾಣಿಕೆಗಳನ್ನು ಕೊಡು.
ಅಕ್ಜೀಬಿನ ಕುಟುಂಬಗಳು
ಇಸ್ರೇಲ್ ಅರಸರನ್ನು ಮೋಸಪಡಿಸುವವು.
15 ಮಾರೇಷದಲ್ಲಿ ವಾಸಿಸುವ ಜನರೇ,
ನಿಮಗೆ ವಿರುದ್ಧವಾಗಿ ನಾನು ಒಬ್ಬ ವ್ಯಕ್ತಿಯನ್ನು ಕರೆತರುವೆನು.
ಅವನು ನಿಮ್ಮ ಬಳಿಯಲ್ಲಿರುವ ವಸ್ತುಗಳನ್ನು ಕಿತ್ತುಕೊಳ್ಳುವನು.
ಇಸ್ರೇಲಿನ ಮಹಿಮೆಯು (ದೇವರ)
ಅದುಲ್ಲಾಮಿಗೆ ಬರುವದು.
16 ನಿನ್ನ ಕೂದಲನ್ನು ಬೋಳಿಸು;
ಯಾಕೆಂದರೆ ನೀನು ಪ್ರೀತಿಸುವ ಮಕ್ಕಳಿಗಾಗಿ ನೀನು ಅಳುವೆ.
ಗಿಡುಗನಂತೆ ನಿನ್ನ ತಲೆ ಬೋಳಾಗಲಿ. ನಿನ್ನ ದುಃಖವನ್ನು ಪ್ರದರ್ಶಿಸು.
ಯಾಕೆಂದರೆ ನಿನ್ನ ಮಕ್ಕಳು ನಿನ್ನಿಂದ ತೆಗೆಯಲ್ಪಡುವರು.
ಸುವಾರ್ತಾಸೇವೆಗೆ ಹೊರಟ ಎಪ್ಪತ್ತೆರಡು ಮಂದಿ
10 ಇದಾದನಂತರ, ಯೇಸು ಇನೂ ಎಪ್ಪತ್ತೆರಡು[a] ಮಂದಿಯನ್ನು ಆರಿಸಿಕೊಂಡು ತಾನು ಹೋಗಬೇಕೆಂದು ಯೋಚಿಸಿದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಅವರನ್ನು ಇಬ್ಬಿಬ್ಬರನ್ನಾಗಿ ಮುಂಚಿತವಾಗಿ ಕಳುಹಿಸಿದನು. 2 ಯೇಸು ಅವರಿಗೆ, “ಬೆಳೆಯು ಬಹಳ, ಆದರೆ ಕೆಲಸಗಾರರು ಕೆಲವರೇ. ದೇವರೇ ಬೆಳೆಗೆ (ಜನರ) ಯಜಮಾನನು. ಬೆಳೆಯನ್ನು ಒಟ್ಟುಗೂಡಿಸುವುದಕ್ಕಾಗಿ ಹೆಚ್ಚು ಕೆಲಸಗಾರರನ್ನು ಕಳುಹಿಸಿಕೊಡುವಂತೆ ಯಜಮಾನನನ್ನು ಬೇಡಿಕೊಳ್ಳಿರಿ.
3 “ಈಗ ನೀವು ಹೋಗಬಹುದು. ಆದರೆ ನನ್ನ ಈ ಮಾತನ್ನು ಕೇಳಿರಿ! ತೋಳಗಳ ಮಧ್ಯೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನು ಕಳುಹಿಸುತ್ತಿದ್ದೇನೆ. 4 ಕೈಚೀಲವನ್ನಾಗಲಿ ಹಣವನ್ನಾಗಲಿ ಅಥವಾ ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ದಾರಿಯಲ್ಲಿ ನಿಂತುಕೊಂಡು ಜನರೊಡನೆ ಮಾತನಾಡಬೇಡಿ. 5 ನೀವು ಮನೆಯೊಳಗೆ ಹೋಗುವ ಮೊದಲು, ‘ನಿಮಗೆ ಶುಭವಾಗಲಿ’ ಎಂದು ಹೇಳಿರಿ. 6 ಆ ಮನೆಯಲ್ಲಿ ಶಾಂತಸ್ವಭಾವದ ಮನುಷ್ಯನಿದ್ದರೆ, ನಿಮ್ಮ ಆಶೀರ್ವಾದ ಅವನಿಗೆ ದೊರೆಯುವುದು. ಅವನು ಶಾಂತಸ್ವಭಾವದವನಾಗಿಲ್ಲದಿದ್ದರೆ ನಿಮ್ಮ ಆಶೀರ್ವಾದ ನಿಮಗೇ ಹಿಂತಿರುಗಿ ಬರುವುದು. 7 ಆ ಮನೆಯಲ್ಲಿ ಇಳಿದುಕೊಂಡು ಅವರು ಕೊಡುವುದನ್ನು ತಿನ್ನಿರಿ, ಕುಡಿಯಿರಿ. ಕೆಲಸಗಾರನು ಸಂಬಳಕ್ಕೆ ಯೋಗ್ಯನಾಗಿದ್ದಾನೆ. ಆದ್ದರಿಂದ ಇಳಿದುಕೊಳ್ಳುವುದಕ್ಕಾಗಿ ಆ ಮನೆಯನ್ನು ಬಿಟ್ಟು ಇನ್ನೊಂದು ಮನೆಗೆ ಹೋಗಬೇಡಿರಿ.
8 “ನೀವು ಒಂದು ಊರಿಗೆ ಹೋದಾಗ ಆ ಊರಿನ ಜನರು ನಿಮ್ಮನ್ನು ಸ್ವಾಗತಿಸಿದರೆ, ಅವರು ಕೊಡುವ ಆಹಾರವನ್ನು ಊಟಮಾಡಿರಿ. 9 ಅಲ್ಲಿಯ ರೋಗಿಗಳನ್ನು ವಾಸಿಮಾಡಿರಿ. ಅಲ್ಲಿಯ ಜನರಿಗೆ, ‘ದೇವರ ರಾಜ್ಯವು ಸಮೀಪಿಸುತ್ತಿದೆ!’ ಎಂದು ತಿಳಿಸಿರಿ.
10 “ಆದರೆ ನೀವು ಒಂದು ಊರಿಗೆ ಹೋದಾಗ, ಅಲ್ಲಿಯ ಜನರು ನಿಮ್ಮನ್ನು ಸ್ವಾಗತಿಸದಿದ್ದರೆ, ನೀವು ಆ ಊರಿನ ಬೀದಿಗಳಿಗೆ ಹೋಗಿ, 11 ‘ನಮ್ಮ ಕಾಲುಗಳಿಗೆ ಹತ್ತಿದ ನಿಮ್ಮ ಊರಿನ ಧೂಳನ್ನು ನಿಮಗೆ ವಿರುದ್ಧವಾಗಿ ಝಾಡಿಸಿಬಿಡುತ್ತೇವೆ. ದೇವರ ರಾಜ್ಯ ಸಮೀಪಿಸುತ್ತಿದೆ ಎಂಬುದು ನಿಮಗೆ ತಿಳಿದಿರಲಿ’ ಎಂದು ಹೇಳಿರಿ. 12 ನ್ಯಾಯತೀರ್ಪಿನ ದಿನದಲ್ಲಿ ಆ ಜನರ ಗತಿಯು ಸೊದೋಮಿನ[b] ಜನರ ಗತಿಗಿಂತಲೂ ಕಠಿಣವಾಗಿರುವುದು” ಎಂದು ಹೇಳಿದನು.
ನಂಬಲೊಲ್ಲದ ಜನರಿಗೆ ಯೇಸುವಿನ ಎಚ್ಚರಿಕೆ
(ಮತ್ತಾಯ 11:20-24)
13 “ಕೊರಾಜಿನೇ, ಬೆತ್ಸಾಯಿದವೇ,[c] ನಿಮ್ಮ ಗತಿಯನ್ನು ಏನು ಹೇಳಲಿ! ನಿಮ್ಮಲ್ಲಿ ನಾನು ಅನೇಕ ಸೂಚಕಕಾರ್ಯಗಳನ್ನು ಮಾಡಿದೆನು. ಅದೇ ಸೂಚಕ ಕಾರ್ಯಗಳು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅವುಗಳ ಜನರು ಬಹಳ ಹಿಂದೆಯೇ, ತಮ್ಮ ಜೀವಿತಗಳನ್ನು ಮಾರ್ಪಡಿಸಿಕೊಂಡು, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ಗೋಣಿತಟ್ಟನ್ನು ಧರಿಸಿಕೊಂಡು, ಬೂದಿಯನ್ನು ಬಳಿದುಕೊಳ್ಳುತ್ತಿದ್ದರು. 14 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಸ್ಥಿತಿಯು ಟೈರ್ ಮತ್ತು ಸಿದೋನ್‌ಗಳ ಸ್ಥಿತಿಗಿಂತಲೂ ಕಠಿಣವಾಗಿರುವುದು. 15 ಕಪೆರ್ನೌಮೇ,[d] ನೀನು ಪರಲೋಕಕ್ಕೆ ಏರಿಸಲ್ಪಡುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ!
16 “ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನೇ ಕೇಳುವವನಾಗಿದ್ದಾನೆ. ನಿಮ್ಮನ್ನು ಅಂಗೀಕರಿಸದವನು ನನ್ನನ್ನೇ ಅಂಗಿಕರಿಸದವನಾಗಿದ್ದಾನೆ. ನನ್ನನ್ನು ನಿರಾಕರಿಸುವವನು ನನ್ನನ್ನು ಕಳುಹಿಸಿದಾತನನ್ನೇ (ದೇವರು) ನಿರಾಕರಿಸುವವನಾಗಿದ್ದಾನೆ” ಎಂದು ಹೇಳಿದನು.
ಸೈತಾನನ ಬೀಳುವಿಕೆ
17 ಎಪ್ಪತ್ತೆರಡು ಮಂದಿ ಶಿಷ್ಯರು ತಮ್ಮ ಪ್ರವಾಸದಿಂದ ಹಿಂತಿರುಗಿ ಬಂದಾಗ ಬಹಳ ಸಂತೋಷವಾಗಿದ್ದರು. ಅವರು ಯೇಸುವಿಗೆ, “ಪ್ರಭುವೇ, ನಾವು ನಿನ್ನ ಹೆಸರನ್ನು ಹೇಳಿದಾಗ ದೆವ್ವಗಳು ಸಹ ನಮಗೆ ವಿಧೇಯವಾದವು!” ಎಂದು ಹೇಳಿದರು.
18 ಯೇಸು ಅವರಿಗೆ, “ಸೈತಾನನು ಮಿಂಚಿನೋಪಾದಿಯಲ್ಲಿ ಆಕಾಶದಿಂದ ಕೆಳಗೆ ಬೀಳುವುದನ್ನು ನಾನು ನೋಡಿದೆನು. 19 ಕೇಳಿರಿ! ಹಾವುಗಳ ಮತ್ತು ಚೇಳುಗಳ ಮೇಲೆ ನಡೆಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ವೈರಿಗಿರುವ ಅಧಿಕಾರಕ್ಕಿಂತಲೂ (ಸೈತಾನ) ಹೆಚ್ಚಿನ ಅಧಿಕಾರವನ್ನು ನಿಮಗೆ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದಿಲ್ಲ. 20 ಹೌದು, ದೆವ್ವಗಳೂ ನಿಮಗೆ ವಿಧೇಯವಾಗುತ್ತವೆ. ಈ ಅಧಿಕಾರ ನಿಮಗಿದೆ ಎಂಬುದರ ನಿಮಿತ್ತ ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿವೆ ಎಂಬುದಕ್ಕಾಗಿ ಸಂತೋಷಪಡಿರಿ” ಅಂದನು.
ಯೇಸು ತಂದೆಗೆ ಮಾಡಿದ ಪ್ರಾರ್ಥನೆ
(ಮತ್ತಾಯ 11:25-27; 13:16-17)
21 ಬಳಿಕ ಯೇಸು ಪವಿತ್ರಾತ್ಮನ ಮೂಲಕ ಬಹಳ ಸಂತೋಷಗೊಂಡು ಹೀಗೆ ಪ್ರಾರ್ಥಿಸಿದನು: “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಾನು ನಿನ್ನನ್ನು ಸ್ತುತಿಸುತ್ತೇನೆ. ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಸಂಗತಿಗಳನ್ನು ಮರೆಮಾಡಿದ್ದಕ್ಕಾಗಿ ನಾನು ನಿನ್ನನ್ನು ಸ್ತುತಿಸುತ್ತೇನೆ. ಆದರೆ ನೀನು ಚಿಕ್ಕಮಕ್ಕಳಂತಿರುವ ಜನರಿಗೆ ಈ ಸಂಗತಿಗಳನ್ನು ಪ್ರಕಟಮಾಡಿದೆ. ಹೌದು, ತಂದೆಯೇ, ಅದೇ ನಿನ್ನ ಅಪೇಕ್ಷೆಯಾಗಿತ್ತು.
22 “ನನ್ನ ತಂದೆಯು ಎಲ್ಲವನ್ನೂ ನನಗೆ ಕೊಟ್ಟಿದ್ದಾನೆ. ಮಗನು ಯಾರೆಂಬುದು ಯಾರಿಗೂ ಗೊತ್ತಿಲ್ಲ. ತಂದೆಯೊಬ್ಬನಿಗೇ ಗೊತ್ತಿದೆ. ತಂದೆಯು ಯಾರೆಂಬುದು ಮಗನಿಗೆ ಮಾತ್ರ ಗೊತ್ತಿದೆ. ಮಗನು ತಂದೆಯ ಬಗ್ಗೆ ಯಾರಿಗೆ ತಿಳಿಸುತ್ತಾನೋ ಅವರು ಮಾತ್ರ ತಂದೆಯ ಬಗ್ಗೆ ತಿಳಿದುಕೊಳ್ಳುವರು.”
23 ಬಳಿಕ ಯೇಸು ತನ್ನ ಶಿಷ್ಯರ ಕಡೆಗೆ ತಿರುಗಿ ನೋಡಿದನು. ಅಲ್ಲಿ ಆತನ ಶಿಷ್ಯರು ಮಾತ್ರವಿದ್ದರು. ಯೇಸು ಅವರಿಗೆ, “ಈಗ ನಡೆಯುವ ಸಂಗತಿಗಳನ್ನು ನೋಡುತ್ತಿರುವ ನೀವು ಧನ್ಯರು! 24 ಅನೇಕ ಪ್ರವಾದಿಗಳೂ ಅರಸರೂ ಈಗ ನೀವು ನೋಡುತ್ತಿರುವ ಈ ಸಂಗತಿಗಳನ್ನು ನೋಡಬೇಕೆಂದು ಮತ್ತು ಈಗ ನೀವು ಕೇಳುತ್ತಿರುವ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದನು.
ಒಳ್ಳೆಯ ಸಮಾರ್ಯದವನ ಸಾಮ್ಯ
25 ಆಗ ಧರ್ಮೋಪದೇಶಕನೊಬ್ಬನು ಯೇಸುವನ್ನು ಪರೀಕ್ಷಿಸಲು ಎದ್ದುನಿಂತು, “ಬೋಧಕನೇ, ನಾನು ನಿತ್ಯಜೀವ ಹೊಂದಲು ಏನು ಮಾಡಬೇಕು?” ಎಂದು ಕೇಳಿದನು.
26 ಯೇಸು ಅವನಿಗೆ, “ಧರ್ಮಶಾಸ್ತ್ರದಲ್ಲಿ ಇದರ ಕುರಿತು ಏನು ಬರೆದಿದೆ?” ಎಂದು ಕೇಳಿದನು.
27 ಅದಕ್ಕೆ ಅವನು, “‘ನೀನು ನಿನ್ನ ಪ್ರಭುವಾದ ದೇವರನ್ನು ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ಮತ್ತು ಪೂರ್ಣಮನಸ್ಸಿನಿಂದ ಪ್ರೀತಿಸಬೇಕು’(A) ಮತ್ತು ‘ನೀನು ನಿನ್ನನ್ನು ಪ್ರೀತಿಸುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು’(B) ಎಂದು ಬರೆದಿದೆ” ಎಂಬುದಾಗಿ ಹೇಳಿದನು.
28 ಯೇಸು, “ನಿನ್ನ ಉತ್ತರ ಸರಿಯಾಗಿದೆ. ನೀನು ಹಾಗೆಯೇ ಮಾಡು, ಆಗ ನಿನಗೆ ನಿತ್ಯಜೀವ ದೊರೆಯುವುದು” ಅಂದನು.
29 ಆದರೆ ಆ ಮನುಷ್ಯನು ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳಲು ಬಯಸಿ, ಯೇಸುವಿಗೆ, “ನಾನು ಪ್ರೀತಿಸಬೇಕಾದ ನೆರೆಯವರು ಯಾರು?” ಎಂದು ಕೇಳಿದನು.
30 ಆಗ ಯೇಸು ಅವನಿಗೆ ಹೇಳಿದ್ದೇನೆಂದರೆ: “ಒಬ್ಬ ಮನುಷ್ಯನು ಜೆರುಸಲೇಮಿನಿಂದ ಇಳಿದು ಜೆರಿಕೊವಿನ ಮಾರ್ಗವಾಗಿ ಹೋಗುತ್ತಿದ್ದನು. ಕೆಲವು ದರೋಡೆಗಾರರು ಅವನನ್ನು ಸುತ್ತುಗಟ್ಟಿದರು. ಅವರು ಅವನ ಬಟ್ಟೆಯನ್ನು ಹರಿದುಹಾಕಿ ಅವನನ್ನು ಹೊಡೆದರು. ಅವನು ಮೇಲೇಳಲಾರದೆ ನೆಲದಮೇಲೆ ಬಿದ್ದುಕೊಂಡನು. ದರೋಡೆಗಾರರು ಅವನನ್ನು ನೆಲದ ಮೇಲೆಯೇ ಬಿಟ್ಟುಹೋದರು. ಅವನು ಸಾಯುವ ಸ್ಥಿತಿಯಲ್ಲಿದ್ದನು.
31 “ಅದೇ ಸಮಯದಲ್ಲಿ ಯೆಹೂದ್ಯ ಯಾಜಕನು ಆ ದಾರಿಯಲ್ಲಿ ಹೋಗುತ್ತಿದ್ದನು. ಯಾಜಕನು ಆ ಮನುಷ್ಯನನ್ನು ನೋಡಿದರೂ ಅವನಿಗೆ ಸಹಾಯಮಾಡದೆ, ತನ್ನ ಪ್ರಯಾಣವನ್ನು ಮುಂದುವರಿಸಿದನು. 32 ನಂತರ, ಒಬ್ಬ ಲೇವಿಯು ಅದೇ ದಾರಿಯಲ್ಲಿ ಹೋಗುತ್ತಾ ಅವನ ಹತ್ತಿರ ಬಂದನು. ಲೇವಿಯು ಗಾಯಗೊಂಡಿದ್ದ ಮನುಷ್ಯನನ್ನು ನೋಡಿದರೂ ಅವನಿಗೆ ಸಹಾಯ ಮಾಡದೆ ತನ್ನ ಪ್ರಯಾಣವನ್ನು ಮುಂದುವರಿಸಿದನು.
33 “ಬಳಿಕ ಒಬ್ಬ ಸಮಾರ್ಯದವನು ಆ ದಾರಿಯಲ್ಲಿ ಪ್ರಯಾಣ ಮಾಡುತ್ತಾ ಆ ಸ್ಥಳಕ್ಕೆ ಬಂದನು. ಅವನು ಗಾಯಗೊಂಡಿದ್ದ ಮತ್ತು ದಾರಿಯಲ್ಲಿ ಬಿದ್ದುಕೊಂಡಿದ್ದ ಮನುಷ್ಯನನ್ನು ನೋಡಿ ಬಹಳ ಮರುಕಗೊಂಡನು. 34 ಸಮಾರ್ಯದವನು ಅವನ ಬಳಿಗೆ ಹೋಗಿ ಅವನ ಗಾಯಗಳಿಗೆ ಆಲಿವ್ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಬಟ್ಟೆಯಿಂದ ಕಟ್ಟಿದನು. ಸಮಾರ್ಯದವನು ಒಂದು ಕತ್ತೆಯ ಮೇಲೆ ಪ್ರಯಾಣ ಮಾಡುತ್ತಾ ಅಲ್ಲಿಗೆ ಬಂದಿದ್ದನು. ಗಾಯಗೊಂಡಿದ್ದ ಆ ಮನುಷ್ಯನನ್ನು ಅವನು ತನ್ನ ಕತ್ತೆಯ ಮೇಲೆ ಕುಳ್ಳಿರಿಸಿ, ಛತ್ರಕ್ಕೆ ಕರೆದುಕೊಂಡು ಹೋಗಿ, ಅವನನ್ನು ಆರೈಕೆ ಮಾಡಿದನು. 35 ಮರುದಿನ, ಸಮಾರ್ಯದವನು ಎರಡು ಬೆಳ್ಳಿ ನಾಣ್ಯಗಳನ್ನು ಆ ಛತ್ರದವನಿಗೆ ಕೊಟ್ಟು, ‘ಗಾಯಗೊಂಡ ಇವನನ್ನು ಆರೈಕೆ ಮಾಡು. ಇದಕ್ಕಿಂತ ಹೆಚ್ಚಾಗಿ ಖರ್ಚಾದರೆ ನಾನು ಮತ್ತೆ ಬಂದಾಗ ನಿನಗೆ ಕೊಡುತ್ತೇನೆ’ ಎಂದು ಹೇಳಿದನು.”
36 ಯೇಸು ಅವನಿಗೆ, “ಈ ಮೂವರಲ್ಲಿ (ಯಾಜಕ, ಲೇವಿ ಮತ್ತು ಸಮಾರ್ಯದವನು) ಯಾವನು ದರೋಡೆಗಾರರಿಂದ ಗಾಯಗೊಂಡಿದ್ದ ಮನುಷ್ಯನಿಗೆ ಪ್ರೀತಿ ತೋರಿಸಿದನು?” ಎಂದು ಕೇಳಿದನು.
37 ಧರ್ಮೋಪದೇಶಕನು, “ಅವನಿಗೆ ಸಹಾಯ ಮಾಡಿದವನೇ” ಎಂದು ಉತ್ತರಿಸಿದನು.
ಆಗ ಯೇಸು ಅವನಿಗೆ, “ಹಾಗಾದರೆ, ನೀನು ಹೋಗಿ ನೆರೆಯವರಿಗೆ[e] ಹಾಗೆಯೇ ಮಾಡು!” ಎಂದನು.
ಮರಿಯಳು ಮತ್ತು ಮಾರ್ಥಳು
38 ಯೇಸು ಮತ್ತು ಆತನ ಶಿಷ್ಯರು ಪ್ರಯಾಣ ಮಾಡುತ್ತಾ ಒಂದು ಊರಿಗೆ ಬಂದರು. ಮಾರ್ಥಳೆಂಬ ಸ್ತ್ರೀ ಯೇಸುವನ್ನು ತನ್ನ ಮನೆಗೆ ಆಮಂತ್ರಿಸಿದಳು. 39 ಆಕೆಗೆ ಮರಿಯಳೆಂಬ ತಂಗಿ ಇದ್ದಳು. ಮರಿಯಳು ಯೇಸುವಿನ ಪಾದಗಳ ಬಳಿ ಕುಳಿತುಕೊಂಡು ಆತನ ಉಪದೇಶವನ್ನು ಕೇಳುತ್ತಿದ್ದಳು. ಆದರೆ ಆಕೆಯ ಸಹೋದರಿಯಾದ ಮಾರ್ಥಳು ಅತಿಥಿಸತ್ಕಾರ ಮಾಡುತ್ತಿದ್ದಳು. 40 ಮನೆಯಲ್ಲಿ ಬಹಳ ಕೆಲಸವಿದ್ದುದರಿಂದ ಮಾರ್ಥಳು ಕೋಪಗೊಂಡು ಯೇಸುವಿನ ಬಳಿಗೆ ಬಂದು, “ಪ್ರಭುವೇ, ನನ್ನ ತಂಗಿಯು ಮನೆಯ ಕೆಲಸವನ್ನೆಲ್ಲಾ ನನಗೇ ಬಿಟ್ಟುಬಂದಿದ್ದಾಳೆ. ಇದರ ಬಗ್ಗೆ ನಿನಗೆ ಚಿಂತೆಯಿಲ್ಲವೋ? ನನಗೆ ಸಹಾಯ ಮಾಡಲು ಆಕೆಗೆ ಹೇಳು?” ಎಂದಳು.
41 ಆದರೆ ಪ್ರಭುವು ಅವಳಿಗೆ, “ಮಾರ್ಥಾ, ಮಾರ್ಥಾ, ನೀನು ಅನೇಕ ಕೆಲಸಗಳ ಬಗ್ಗೆ ಚಿಂತಿಸುತ್ತಾ ಗಲಿಬಿಲಿಯಾಗಿರುವೆ. 42 ಒಂದೇ ಒಂದು ಮುಖ್ಯವಾದದ್ದು. ಮರಿಯಳು ಮಾಡಿದ ಆಯ್ಕೆ ಸರಿಯಾದದ್ದು. ಆಕೆಯಿಂದ ಅದು ಎಂದಿಗೂ ತೆಗೆಯಲ್ಪಡುವುದಿಲ್ಲ” ಎಂದನು.
Kannada Holy Bible: Easy-to-Read Version. All rights reserved. © 1997 Bible League International