M’Cheyne Bible Reading Plan
ಜೆರುಸಲೇಮಿನಲ್ಲಿ ಒಡಂಬಡಿಕೆಯ ಮಂಜೂಷ
15 ದಾವೀದನಗರದಲ್ಲಿ ದಾವೀದನು ತನಗಾಗಿ ಮನೆಗಳನ್ನು ಕಟ್ಟಿಸಿದನು. ಆಮೇಲೆ ಅವನು ಒಡಂಬಡಿಕೆಯ ಪೆಟ್ಟಿಗೆಯನ್ನು ಇಡಲು ಒಂದು ಸ್ಥಳವನ್ನು ಏರ್ಪಡಿಸಿ ಗುಡಾರವನ್ನು ನಿರ್ಮಿಸಿದನು. 2 “ಲೇವಿಯರು ಮಾತ್ರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಬರಬೇಕು. ಯೆಹೋವನು ಅವರನ್ನೇ ತನ್ನ ನಿರಂತರವಾದ ಸೇವೆಗಾಗಿ ನೇಮಿಸಿದ್ದಾನೆ” ಎಂದು ದಾವೀದನು ಹೇಳಿದನು.
3 ಎಲ್ಲಾ ಇಸ್ರೇಲರು ಜೆರುಸಲೇಮಿಗೆ ಬರಬೇಕೆಂದು ದಾವೀದನು ಪ್ರಕಟಿಸಿದನು. ಲೇವಿಯರು ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ದಾವೀದನು ಸಿದ್ಧಪಡಿಸಿದ್ದ ಸ್ಥಳಕ್ಕೆ ತಂದರು. 4 ದಾವೀದನು ಆರೋನನ ಸಂತತಿಯವರನ್ನೂ ಲೇವಿಯರನ್ನೂ ಕರೆದನು.
5 ಕೆಹಾತ್ಯನ ಕುಲದವರಲ್ಲಿ ನೂರಿಪ್ಪತ್ತು ಮಂದಿ; ಊರಿಯೇಲ್ ಇವರ ಮುಖ್ಯಸ್ಥನು.
6 ಮೆರಾರೀಯ ಕುಲದವರಲ್ಲಿ ಇನ್ನೂರಿಪ್ಪತ್ತು ಮಂದಿ; ಇವರ ಮುಖ್ಯಸ್ಥನು ಅಸಾಯನು.
7 ಗೇರ್ಷೋಮನ ಕುಲದವರಲ್ಲಿ ನೂರಮೂವತ್ತು ಮಂದಿ; ಅವರ ನಾಯಕನು ಯೋವೇಲ್.
8 ಎಲೀಚಾಫಾನನ ಕುಲದವರಲ್ಲಿ ಇನ್ನೂರು ಮಂದಿ; ಅವರ ನಾಯಕನು ಶೆಮಾಯ.
9 ಹೆಬ್ರೋನಿನ ಕುಲದವರಲ್ಲಿ ಎಂಭತ್ತು ಮಂದಿ; ಎಲೀಯೇಲನು ಅವರ ನಾಯಕನು.
10 ಉಜ್ಜೀಯೇಲನ ಕುಲದವರಲ್ಲಿ ನೂರಹನ್ನೆರಡು ಮಂದಿ; ಅಮ್ಮೀನಾದಾಬನು ಅವರ ನಾಯಕ.
ದಾವೀದನು ಯಾಜಕರೊಂದಿಗೆ ಮತ್ತು ಲೇವಿಯರೊಂದಿಗೆ ಮಾತಾಡಿದ್ದು
11 ನಂತರ ದಾವೀದನು ಯಾಜಕರಾದ ಚಾದೋಕನನ್ನು ಮತ್ತು ಎಬ್ಯಾತಾರನನ್ನು ಮತ್ತು ಕೆಳಕಂಡ ಲೇವಿಯರನ್ನು ಸಹ ಕರೆಸಿದನು: ಊರೀಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೇಲ್ ಮತ್ತು ಅಮ್ಮೀನಾದಾಬ್. 12 ದಾವೀದನು ಅವರಿಗೆ, “ನೀವು ಲೇವಿಕುಲದ ನಾಯಕರು. ನೀವೂ ಉಳಿದ ಲೇವಿಯರೂ ನಿಮ್ಮನ್ನು ಶುದ್ಧಪಡಿಸಿಕೊಳ್ಳಬೇಕು. ಅನಂತರ ಇಸ್ರೇಲಿನ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ನಾನು ಅದಕ್ಕಾಗಿ ಸಿದ್ಧಮಾಡಿರುವ ಸ್ಥಳಕ್ಕೆ ತರಬೇಕು. 13 ಕಳೆದ ಸಲ, ನಾವು ಒಡಂಬಡಿಕೆಯ ಪೆಟ್ಟಿಗೆಯನ್ನು ಹೇಗೆ ತೆಗೆದುಕೊಂಡು ಹೋಗಬೇಕೆಂದು ಯೆಹೋವನಲ್ಲಿ ವಿಚಾರಿಸಲಿಲ್ಲ. ಲೇವಿಯರಾದ ನೀವು ಅದನ್ನು ಹೊರಲಿಲ್ಲ. ಆದ್ದರಿಂದಲೇ ನಮ್ಮ ದೇವರಾದ ಯೆಹೋವನು ನಮ್ಮನ್ನು ಶಿಕ್ಷಿಸಿದನು” ಎಂದು ಹೇಳಿದನು.
14 ಆಗ ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಿಮಾಡಿಕೊಂಡರು. ಇಸ್ರೇಲರ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ತರಲು ತಮ್ಮನ್ನು ಸಿದ್ಧಪಡಿಸಿಕೊಂಡರು. 15 ಮೋಶೆಯು ಆಜ್ಞಾಪಿಸಿದ್ದ ಪ್ರಕಾರವೇ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಬೇಕಾದ ಕೋಲುಗಳನ್ನು ಲೇವಿಯರು ಸಿದ್ಧಪಡಿಸಿದರು. ಯೆಹೋವನು ಹೇಳಿದಂತೆಯೇ ಅವರು ಪೆಟ್ಟಿಗೆಯನ್ನು ಹೊತ್ತುಕೊಂಡು ಹೋದರು.
ಗಾಯಕರು
16 ದಾವೀದನು ಲೇವಿಯರಿಗೆ ತಮ್ಮ ಸಹೋದರರಾದ ಗಾಯಕರನ್ನು ಕರೆದುಕೊಂಡು ಬರಲು ಹೇಳಿದನು. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ತಂದು ಆನಂದಗೀತೆಗಳನ್ನು ಹಾಡುವಂತೆ ಅವರಿಗೆ ತಿಳಿಸಿದನು.
17 ಲೇವಿಯರು ಹೋಗಿ ಹೇಮಾನನನ್ನೂ ಅವನ ಸಹೋದರರನ್ನೂ ಆಸಾಫನನ್ನೂ ಏತಾನನನ್ನೂ ಕರೆತಂದರು. ಹೇಮಾನನು ಯೋವೇಲನ ಮಗ. ಆಸಾಫನು ಬೆರೆಕ್ಯನ ಮಗ. ಏತಾನನು ಕೂಷಾಯನ ಮಗ. ಇವರೆಲ್ಲಾ ಮೆರಾರೀಯ ಸಂತತಿಯವರು. 18 ಲೇವಿಯರ ಇನ್ನೊಂದು ಗುಂಪು ಇತ್ತು. ಅವರು ಯಾರೆಂದರೆ: ಜೆಕರ್ಯ, ಬೇನ್, ಯಾಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ, ಮಾಸೇಯ, ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದೆದೋಮ್ ಮತ್ತು ಯೆಗೀಯೇಲ್. ಇವರೆಲ್ಲಾ ಲೇವಿಯರ ಕಾವಲುಗಾರರಾಗಿದ್ದರು.
19 ಗಾಯಕರಾದ ಹೇಮಾನ್, ಆಸಾಫ್ ಮತ್ತು ಏತಾನ್ ಕಂಚಿನ ತಾಳವನ್ನು ಬಾರಿಸಿದರು. 20 ಜೆಕರ್ಯ, ಅಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಮಾಸೇಯ ಮತ್ತು ಬೆನಾಯ ಇವರುಗಳು ಅಲಾಮೋತ್ ಹಾರ್ಪ್ ವಾದ್ಯಗಳನ್ನು ಬಾರಿಸಿದರು. 21 ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದೆದೋಮ್, ಯೆಗೀಯೇಲ್ ಮತ್ತು ಅಜಜ್ಯ ಇವರುಗಳು ಶೆಮೀನೀತ್ ಹಾರ್ಪ್ ವಾದ್ಯಗಳನ್ನು ಬಾರಿಸಿದರು. ಇದು ಇವರ ಖಾಯಂ ಕೆಲಸವಾಗಿತ್ತು. 22 ಲೇವಿಯರ ನಾಯಕನಾದ ಕೆನನ್ಯನು ಗಾಯಕರ ಮುಖಂಡನಾಗಿದ್ದನು. ಇವನು ತುಂಬಾ ಅನುಭವಶಾಲಿಯಾಗಿದ್ದನು.
23 ಬೆರಕ್ಯನು ಮತ್ತು ಎಲ್ಕಾನನು ಒಡಂಬಡಿಕೆ ಪೆಟ್ಟಿಗೆಯ ಕಾವಲುಗಾರರಾಗಿದ್ದರು. 24 ಯಾಜಕರಾದ ಶೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸೈ, ಜೆಕರ್ಯ, ಬೆನಾಯ ಮತ್ತು ಎಲೀಯೆಜೆರ್ ಇವರಿಗೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವಾಗ ತುತ್ತೂರಿ ಊದುವ ಕೆಲಸವನ್ನು ಕೊಟ್ಟನು. ಓಬೇದೆದೋಮ್ ಮತ್ತು ಯೆಹೀಯ ಒಡಂಬಡಿಕೆಯ ಪೆಟ್ಟಿಗೆಗೆ ಕಾವಲುಗಾರರಾದರು.
25 ದಾವೀದನೂ ಇಸ್ರೇಲಿನ ಹಿರಿಯರೂ ಮುಖಂಡರೂ ಒಡಂಬಡಿಕೆಯ ಪೆಟ್ಟಿಗೆಯನ್ನು ತರಲು ಹೋದರು. ಅವರು ಅದನ್ನು ಓಬೇದೆದೋಮನ ಮನೆಯಿಂದ ಹೊರತಂದರು. ಎಲ್ಲರಿಗೂ ಸಂತೋಷವಾಯಿತು. 26 ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತಿದ್ದ ಲೇವಿಯರಿಗೆ ದೇವರು ಸಹಾಯ ಮಾಡಿದನು. ಅಲ್ಲಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಯಜ್ಞ ಮಾಡಿದರು. 27 ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತ ಯಾಜಕರು ಉತ್ತಮವಾದ ನಾರಿನ ನಿಲುವಂಗಿಗಳನ್ನು ಧರಿಸಿದ್ದರು. ಕೆನನ್ಯನೂ ಅವನ ಜೊತೆಯಲ್ಲಿದ್ದ ಗಾಯಕರೆಲ್ಲರೂ ಉತ್ತಮವಾದ ನಾರಿನ ಬಟ್ಟೆಗಳನ್ನು ಧರಿಸಿದ್ದರು. ದಾವೀದನೂ ಉತ್ತಮವಾದ ನಾರಿನ ಬಟ್ಟೆ ಧರಿಸಿ, ಉತ್ತಮವಾದ ನಾರಿನಿಂದ ಮಾಡಿದ ಏಫೋದನ್ನು ಅದರ ಮೇಲೆ ಧರಿಸಿಕೊಂಡಿದ್ದನು.
28 ಹೀಗೆ ಎಲ್ಲಾ ಇಸ್ರೇಲರು ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಬಂದರು. ಅವರು ಕೊಂಬುಗಳನ್ನೂ ತುತ್ತೂರಿಗಳನ್ನೂ ಊದಿದರು; ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸಿದರು; ಆನಂದದಿಂದ ಆರ್ಭಟಿಸಿದರು.
29 ದಾವೀದನ ನಗರದಲ್ಲಿ ಮೆರವಣಿಗೆಯು ಬಂದಾಗ ದಾವೀದನ ಹೆಂಡತಿಯಾದ ಮೀಕಲಳು ಕಿಟಿಕಿಯಿಂದ ನೋಡಿದಳು. (ಇವಳು ಸೌಲನ ಮಗಳು.) ದಾವೀದನು ಕುಣಿಯುತ್ತಾ ಹಾಡುವದನ್ನು ಆಕೆ ಕಂಡಳು. ತನ್ನ ಗಂಡನ ಮೇಲೆ ಆಕೆಗಿದ್ದ ಗೌರವವು ಕಡಿಮೆಯಾಯಿತು. ಯಾಕೆಂದರೆ ದಾವೀದನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಬುದ್ಧಿ ಇಲ್ಲದ ಕೆಲಸ ಮಾಡುತ್ತಿರುವನೆಂದು ಆಕೆಯು ಅಂದುಕೊಂಡಳು.
ಜನರೆಲ್ಲರನ್ನೂ ಪ್ರೀತಿಸಿ
2 ನನ್ನ ಪ್ರಿಯ ಸಹೋದರ ಸಹೋದರಿಯರೇ, ಮಹಿಮಾಪೂರ್ಣನಾದ ಪ್ರಭು ಯೇಸು ಕ್ರಿಸ್ತನಲ್ಲಿ ನೀವು ನಂಬಿಕೆಯಿಟ್ಟಿದ್ದೀರಿ. ಆದ್ದರಿಂದ ಕೆಲವರು ಇತರ ಜನರಿಗಿಂತ ಬಹಳ ಮುಖ್ಯರೆಂದು ಯೋಚಿಸಬೇಡಿ. 2 ನಿಮ್ಮ ಸಭೆಗೆ ಒಬ್ಬನು ಬರುತ್ತಾನೆಂದು ನೆನೆಸಿರಿ. ಅವನು ಒಳ್ಳೆಯ ವಸ್ತ್ರಗಳನ್ನೂ ಬಂಗಾರದ ಉಂಗುರವನ್ನೂ ಧರಿಸಿರುತ್ತಾನೆ. ಅದೇ ಸಮಯಕ್ಕೆ ಕೊಳೆಯಾದ ಮತ್ತು ಹಳೆಯದಾದ ವಸ್ತ್ರಗಳನ್ನು ಧರಿಸಿರುವ ಒಬ್ಬ ಬಡವನೂ ಬರುತ್ತಾನೆ. 3 ಒಳ್ಳೆಯ ವಸ್ತ್ರಗಳನ್ನು ಧರಿಸಿರುವವನಿಗೆ ವಿಶೇಷ ಗಮನವನ್ನು ನೀಡುವಿರಿ. “ಉತ್ತಮವಾದ ಈ ಸ್ಥಳದಲ್ಲಿ ನೀವು ಕುಳಿತುಕೊಳ್ಳಿ” ಎಂದು ಅವನಿಗೆ ಹೇಳುವಿರಿ. ಆದರೆ ಆ ಬಡ ಮನುಷ್ಯನಿಗೆ “ಅಲ್ಲೇ ನಿಂತುಕೊ!” ಎಂದಾಗಲಿ, “ನಮ್ಮ ಪಾದಗಳ ಬಳಿ ನೆಲದ ಮೇಲೆ ಕುಳಿತುಕೊ!” ಎಂದಾಗಲಿ ಹೇಳುವಿರಿ. 4 ನೀವು ಮಾಡುತ್ತಿರುವುದೇನು? ಕೆಲವರನ್ನು ಇತರ ಜನರಿಗಿಂತ ಬಹಳ ಮುಖ್ಯರೆಂದು ಪರಿಗಣಿಸುತ್ತಿರುವಿರಿ. ನಿಮ್ಮ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ.
5 ನನ್ನ ಪ್ರಿಯ ಸಹೋದರ ಸಹೋದರಿಯರೇ, ಕೇಳಿರಿ! ಈ ಲೋಕದಲ್ಲಿ ಬಡವರು ನಂಬಿಕೆಯಲ್ಲಿ ಶ್ರೀಮಂತರಾಗಿರಲೆಂದು ದೇವರು ಅವರನ್ನು ಆರಿಸಿಕೊಂಡಿದ್ದಾನೆ. ತನ್ನನ್ನು ಪ್ರೀತಿಸುವ ಜನರಿಗೆ ದೇವರು ವಾಗ್ದಾನಮಾಡಿದ ರಾಜ್ಯವನ್ನು ಹೊಂದಿಕೊಳ್ಳಲು ಆತನು ಅವರನ್ನು ಆರಿಸಿಕೊಂಡಿದ್ದಾನೆ. 6 ಆದರೆ ಬಡವನಿಗೆ ನೀವು ಗೌರವವನ್ನೇ ತೋರುವುದಿಲ್ಲ. ಶ್ರೀಮಂತ ಜನರು ಯಾವಾಗಲೂ ನಿಮ್ಮ ಬದುಕನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆಂಬುದು ನಿಮಗೆ ತಿಳಿದಿದೆ. ನಿಮ್ಮನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವವರು ಅವರೇ. 7 ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿರುವ ಯೇಸುವಿನ ಶ್ರೇಷ್ಠವಾದ ಹೆಸರಿಗೆ ವಿರುದ್ಧವಾಗಿ ಕೆಟ್ಟಮಾತುಗಳನ್ನು ಆಡುವವರು ಶ್ರೀಮಂತರೇ.
8 ಪವಿತ್ರ ಗ್ರಂಥದಲ್ಲಿ ಬರೆದಿರುವ, “ನಿನ್ನನ್ನು ಪ್ರೀತಿಸುವಂತೆ ಇತರರನ್ನೂ ಪ್ರೀತಿಸು”(A) ಎಂಬ ರಾಜಾಜ್ಞೆಗೆ ನೀವು ವಿಧೇಯರಾಗಿದ್ದರೆ ಸರಿಯಾದುದನ್ನೇ ಮಾಡುವವರಾಗಿದ್ದೀರಿ. 9 ಆದರೆ ನೀವು ಒಬ್ಬನನ್ನು ಇನ್ನೊಬ್ಬನಿಗಿಂತ ಮುಖ್ಯನೆಂದು ಪರಿಗಣಿಸಿ ಪಕ್ಷಪಾತ ಮಾಡಿದರೆ ಪಾಪವನ್ನು ಮಾಡುವವರಾಗಿದ್ದೀರಿ. ದೇವರ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೋಷಿಗಳಾಗಿದ್ದೀರೆಂದು ಆ ರಾಜಾಜ್ಞೆಯು ನಿರೂಪಿಸುತ್ತದೆ.
10 ಒಬ್ಬನು ದೇವರ ಎಲ್ಲಾ ಆಜ್ಞೆಗಳನ್ನು ಅನುಸರಿಸುತ್ತಿರಬಹುದು. ಆದರೆ ಅವನು ಒಂದು ಆಜ್ಞೆಗೆ ಅವಿಧೇಯನಾದರೆ ಅವನು ಧರ್ಮಶಾಸ್ತ್ರದ ಎಲ್ಲಾ ಆಜ್ಞೆಗಳನ್ನು ಮೀರಿದನೆಂಬ ಅಪರಾಧಕ್ಕೆ ಗುರಿಯಾಗುವನು. 11 “ವ್ಯಭಿಚಾರ ಮಾಡಬಾರದು”(B) ಎಂದು ದೇವರು ಹೇಳಿದನು. “ಕೊಲ್ಲಬಾರದು”(C) ಎಂದೂ ಅದೇ ದೇವರು ಹೇಳಿದನು. ಹೀಗಿರಲಾಗಿ, ನೀವು ವ್ಯಭಿಚಾರವನ್ನು ಮಾಡದಿದ್ದರೂ ಯಾರನ್ನೇ ಆಗಲಿ ಕೊಂದರೆ, ದೇವರ ಇಡೀ ಧರ್ಮಶಾಸ್ತ್ರವನ್ನೇ ಉಲ್ಲಂಘಿಸಿದವರಾಗಿದ್ದೀರಿ.
12 ಜನರನ್ನು ಬಿಡುಗಡೆ ಮಾಡುವ ಧರ್ಮಶಾಸ್ತ್ರದಿಂದಲೇ ನಿಮಗೆ ತೀರ್ಪಾಗುವುದು. ನೀವು ಕೇಳುವ ಮತ್ತು ಮಾಡುವ ಪ್ರತಿಯೊಂದರಲ್ಲಿಯೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. 13 ಹೌದು, ಇತರರಿಗೆ ನೀವು ಕರುಣೆ ತೋರಬೇಕು. ಇಲ್ಲವಾದರೆ ದೇವರು ತೀರ್ಪು ನೀಡುವಾಗ ನಿಮಗೂ ಕರುಣೆ ತೋರನು. ಕರುಣೆ ತೋರುವವನು ದೇವರ ನ್ಯಾಯತೀರ್ಪಿನಲ್ಲಿ ಭಯವಿಲ್ಲದೆ ಇರುವನು.
ನಂಬಿಕೆ ಮತ್ತು ಉತ್ತಮ ಕಾರ್ಯಗಳು
14 ನನ್ನ ಸಹೋದರ ಸಹೋದರಿಯರೇ, ಒಬ್ಬ ವ್ಯಕ್ತಿಯು ತನ್ನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವನ ನಂಬಿಕೆಯಿಂದ ಪ್ರಯೋಜನವೇನೂ ಇಲ್ಲ. ಆ ರೀತಿಯ ನಂಬಿಕೆಯು ಅವನನ್ನು ರಕ್ಷಿಸಬಲ್ಲದೇ? ಇಲ್ಲ! 15 ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ಅಥವಾ ಸಹೋದರಿಯಾಗಿರುವವಳಿಗೆ ಬಟ್ಟೆಗಳು ಬೇಕಾಗಿರಬಹುದು ಅಥವಾ ತಿನ್ನಲು ಆಹಾರ ಬೇಕಾಗಿರಬಹುದು. 16 ಆದರೆ ನೀವು ಆ ವ್ಯಕ್ತಿಗೆ, “ದೇವರು ನಿನ್ನೊಂದಿಗಿರಲಿ! ಚಳಿಕಾಯಿಸಿಕೊಂಡು ತೃಪ್ತಿಯಾಗುವಷ್ಟು ಊಟ ಮಾಡು” ಎಂಬುದಾಗಿ ಹೇಳಿ ಬೇಕಾದವುಗಳನ್ನು ಅವನಿಗೆ ಕೊಡದೆ ಹೋದರೆ ನಿಮ್ಮ ಮಾತುಗಳಿಗೆ ಯಾವ ಬೆಲೆಯೂ ಇಲ್ಲ. 17 ಇದೇ ನಿಯಮ ನಂಬಿಕೆಗೂ ಅನ್ವಯಿಸುತ್ತದೆ. ಕ್ರಿಯೆಯಿಲ್ಲದ ನಂಬಿಕೆಯು ತನ್ನಲ್ಲಿಯೇ ಸತ್ತುಹೋಗಿದೆ.
18 ಆದರೆ ಯಾವನಾದರೂ, “ನಿನ್ನಲ್ಲಿ ನಂಬಿಕೆಯಿದೆ; ನನ್ನಲಿ ಕ್ರಿಯೆಗಳಿವೆ” ಎಂದು ವಾದಿಸಬಹುದು. ಅದಕ್ಕೆ ನನ್ನ ಉತ್ತರವೇನೆಂದರೆ ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸಲಾರೆ. ನಾನಾದರೊ ನನ್ನ ಒಳ್ಳೆಯ ಕಾರ್ಯಗಳ ಮೂಲಕ ನನ್ನ ನಂಬಿಕೆಯನ್ನು ನಿನಗೆ ತೋರಿಸುವೆ ಎಂದು ಹೇಳಬಹುದು. 19 ಒಬ್ಬನೇ ದೇವರಿರುವನೆಂದು ನೀವು ನಂಬಿದ್ದೀರಿ. ಒಳ್ಳೆಯದು! ಆದರೆ ದೆವ್ವಗಳೂ ಅದನ್ನು ನಂಬುತ್ತವೆ ಮತ್ತು ಭಯದಿಂದ ನಡುಗುತ್ತವೆ.
20 ಬುದ್ಧಿಹೀನರೇ, ಕ್ರಿಯೆಯಿಲ್ಲದ ನಂಬಿಕೆಯು ನಿಷ್ಪ್ರಯೋಜಕವೆಂದು ನಿಮಗೆ ತೋರಿಸಬೇಕೋ? 21 ಅಬ್ರಹಾಮನು ನಮ್ಮ ಪಿತೃ. ಅವನು ತನ್ನ ಕ್ರಿಯೆಗಳಿಂದ ನೀತಿವಂತನಾದನು. ಅವನು ಯಜ್ಞವೇದಿಕೆಯ ಮೇಲೆ ತನ್ನ ಮಗನಾದ ಇಸಾಕನನ್ನು ದೇವರಿಗೆ ಅರ್ಪಿಸಿದನು. 22 ಆದ್ದರಿಂದ ಅವನ ನಂಬಿಕೆ ಮತ್ತು ಅವನ ಕ್ರಿಯೆ ಒಟ್ಟಿಗೆ ಕಾರ್ಯ ಮಾಡಿದವು. ಅವನ ನಂಬಿಕೆಯು ಅವನ ಕ್ರಿಯೆಗಳಿಂದಲೇ ಪರಿಪೂರ್ಣಗೊಂಡಿತು. 23 ಹೀಗೆ ಪವಿತ್ರಗ್ರಂಥದ ಈ ಮಾತುಗಳು ನೆರವೇರಿದವು: “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಒಪ್ಪಿಕೊಂಡು ಅವನನ್ನು ನೀತಿವಂತನೆಂದು ಪರಿಗಣಿಸಿದನು.”(D) ಅಬ್ರಹಾಮನನ್ನು “ದೇವರ ಸ್ನೇಹಿತ”(E) ನೆಂದು ಕರೆಯಲಾಯಿತು. 24 ಹೀಗಿರಲು ಒಬ್ಬನು ತನ್ನ ಕ್ರಿಯೆಗಳಿಂದ ನೀತಿವಂತನಾಗುತ್ತಾನೆ ಎಂಬುದು ಸ್ಪಷ್ಟವಾಗಿದೆ. ಒಬ್ಬನು ಕೇವಲ ನಂಬಿಕೆಯೊಂದರಿಂದಲೇ ನೀತಿವಂತನಾಗಲು ಸಾಧ್ಯವಿಲ್ಲ.
25 ರಹಾಬಳು ಮತ್ತೊಬ್ಬ ಉದಾಹರಣೆಯಾಗಿದ್ದಾಳೆ. ಆಕೆ ಒಬ್ಬ ವೇಶ್ಯೆ. ಆದರೆ ಅವಳು ತನ್ನ ಕ್ರಿಯೆಗಳಿಂದಲೇ ನೀತಿವಂತಳಾದಳು. ಅವಳು ದೇವರ ಜನರಿಗೋಸ್ಕರ ಗೂಢಚಾರರನ್ನು ತನ್ನ ಮನೆಗೆ ಬರಮಾಡಿಕೊಂಡು, ಬೇರೊಂದು ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗಲು ಅವರಿಗೆ ಸಹಾಯ ಮಾಡಿದಳು.[a]
26 ಒಬ್ಬ ವ್ಯಕ್ತಿಯ ದೇಹದಲ್ಲಿ ಆತ್ಮವಿಲ್ಲದಿದ್ದರೆ, ಅವನ ದೇಹವು ಸತ್ತದ್ದೇ. ಅದೇ ರೀತಿಯಲ್ಲಿ ಕ್ರಿಯೆಯಿಲ್ಲದ ನಂಬಿಕೆಯು ಸತ್ತದ್ದೇ.
ವೇದಿಕೆ ಬದಿಯಲ್ಲಿ ನಿಂತ ಯೆಹೋವನ ದರ್ಶನ
9 ಯಜ್ಞವೇದಿಕೆಯ ಬಳಿಯಲ್ಲಿ ನನ್ನ ಒಡೆಯನು ನಿಂತಿರುವುದನ್ನು ಕಂಡೆನು. ಆತನು ಹೇಳಿದ್ದೇನೆಂದರೆ,
“ಸ್ತಂಭಗಳ ಮೇಲೆ ಹೊಡೆಯಿರಿ,
ಆಗ ಕಟ್ಟಡವು ಹೊಸ್ತಿಲಿನ ತನಕ ಕಂಪಿಸುವದು.
ಸ್ತಂಭಗಳು ಜನರ ತಲೆಗಳ ಮೇಲೆ ಕುಸಿದುಬೀಳುವಂತೆ ಮಾಡಿರಿ.
ಅದರಿಂದ ಸಾಯದೆ ಉಳಿಯುವವರನ್ನು ನಾನು ಖಡ್ಗದಿಂದ ಸಾಯಿಸುವೆನು.
ಅದರಿಂದ ತಪ್ಪಿಸಿಕೊಂಡು ಓಡಿಹೋಗಲು ಒಬ್ಬನು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.
ಒಬ್ಬನಾದರೂ ತಪ್ಪಿಸಿಕೊಳ್ಳುವುದಿಲ್ಲ.
2 ಭೂಮಿಯನ್ನು ಅವರು ಅಗೆದು ಅದರೊಳಗೆ ಅವಿತುಕೊಂಡರೆ
ಅದರೊಳಗಿಂದ ಅವರನ್ನು ಎಳೆದುಹಾಕುವೆನು.
ಆಕಾಶದೊಳಗೆ ಹಾರಿ ತಪ್ಪಸಿಕೊಂಡರೆ
ಅಲ್ಲಿಂದಲೂ ನಾನು ಅವರನ್ನು ಎಳೆದುಹಾಕುವೆನು.
3 ಕರ್ಮೆಲ್ ಬೆಟ್ಟದ ತುದಿಯಲ್ಲಿ ಅವರು ಅಡಗಿಕೊಂಡರೆ
ಅವರನ್ನು ಕಂಡುಹಿಡಿದು ಅಲ್ಲಿಂದ ತೆಗೆದುಬಿಡುವೆನು.
ಸಮುದ್ರ ತಳದಲ್ಲಿ ಅವರು ಅಡಗಿಕೊಂಡರೆ
ಅವರನ್ನು ಕಚ್ಚುವಂತೆ ನಾನು ಸರ್ಪಕ್ಕೆ ಆಜ್ಞಾಪಿಸುವೆನು.
4 ಶತ್ರುಗಳು ಅವರನ್ನು ಸೆರೆಹಿಡಿದರೆ
ನಾನು ಅವರನ್ನು ಕೊಂದುಹಾಕಲು
ಕತ್ತಿಗೆ ಆಜ್ಞಾಪಿಸುವೆನು.
ಹೌದು ನಾನು ಅವರನ್ನು ಗಮನಿಸುತ್ತಾ ಕಾಯುವೆನು.
ಅವರಿಗೆ ಒಳ್ಳೆಯದು ಮಾಡುವುದಕ್ಕಾಗಿ ಅಲ್ಲ.
ಅವರಿಗೆ ಸಂಕಟ ಕೊಡುವುದಕ್ಕಾಗಿ ಅವರನ್ನು ಕಾಯುತ್ತೇನೆ.”
ಶಿಕ್ಷೆಯು ಜನರನ್ನು ನಾಶಮಾಡುವದು
5 ನನ್ನ ಒಡೆಯನಾದ ಸರ್ವಶಕ್ತನಾದ ಯೆಹೋವನು ಭೂಮಿಯನ್ನು ಸ್ಪರ್ಶಿಸುವನು.
ಆಗ ಅದು ಕರಗಿಹೋಗುವುದು.
ದೇಶದಲ್ಲಿ ವಾಸಿಸುವ ಜನರೆಲ್ಲಾ ಸತ್ತುಹೋದವರಿಗಾಗಿ ಗೋಳಾಡುವರು.
ಈಜಿಪ್ಟಿನ ನೈಲ್ ನದಿಯಂತೆ
ದೇಶದಲ್ಲಿ ಏರಿಳಿತ ಉಂಟಾಗುವುದು.
6 ಯೆಹೋವನು ಆಕಾಶದ ಮೇಲೆ ತನಗಾಗಿ ಮೇಲುಪ್ಪರಿಗೆಗಳನ್ನು ಕಟ್ಟಿದನು.
ಭೂಮಿಯ ಮೇಲೆ ಆಕಾಶವನ್ನು ಹರಡಿದನು.
ಸಮುದ್ರದ ನೀರನ್ನು ಕರೆದು ಭೂಮಿಯ ಮೇಲೆ
ಮಳೆಗೆರೆಯುವಂತೆ ಮಾಡುವನು.
ಆತನ ಹೆಸರು ಯೆಹೋವ.
ಇಸ್ರೇಲಿನ ನಾಶನದ ವಾಗ್ದಾನ
7 ಯೆಹೋವನು ಹೀಗೆನ್ನುತ್ತಾನೆ:
“ಇಸ್ರೇಲೇ, ನೀನು ನನಗೆ ಇಥಿಯೋಪ್ಯದವರಂತಿರುವೆ.
ಇಸ್ರೇಲನ್ನು ಈಜಿಪ್ಟ್ ದೇಶದಿಂದ ನಾನು ಹೊರತಂದೆನು.
ಕಪ್ತೋರಿನಿಂದ ಫಿಲಿಷ್ಟಿಯರನ್ನು ಹೊರತಂದೆನು
ಮತ್ತು ಕೀರ್‌ನಿಂದ ಅರಾಮ್ಯರನ್ನು ತಂದೆನು.”
8 ಪಾಪದಿಂದ ತುಂಬಿದ ಇಸ್ರೇಲ್ ದೇಶವನ್ನು ಯೆಹೋವನು ನೋಡುತ್ತಿದ್ದಾನೆ.
ಆತನು ಹೇಳಿದ್ದೇನೆಂದರೆ,
“ನಾನು ಇಸ್ರೇಲರನ್ನು ಈ ಭೂಮುಖದಿಂದ ಅಳಿಸಿಬಿಡುವೆನು.
ಆದರೆ ಯಾಕೋಬನ ಸಂತತಿಯವರನ್ನು ಸಂಪೂರ್ಣವಾಗಿ ನಾಶಮಾಡುವುದಿಲ್ಲ.
9 ಇಸ್ರೇಲನ್ನು ನಾಶನ ಮಾಡುವದಕ್ಕಾಗಿ ಆಜ್ಞಾಪಿಸುವೆನು.
ಇಸ್ರೇಲರನ್ನು ನಾನು ಪರದೇಶಗಳಲ್ಲಿ, ಚದರಿಸಿಬಿಡುವೆನು.
ಒಬ್ಬನು ಜಾಳಿಗೆಯಲ್ಲಿ ಹಿಟ್ಟನ್ನು ಜಾಳಿಸುವಂತೆ ಇರುವುದು.
ಒಳ್ಳೆಯ ಹಿಟ್ಟು ಜಾಳಿಗೆಯ ರಂಧ್ರದ ಮೂಲಕ ಕೆಳಗೆ ಬಿದ್ದರೆ,
ಹಿಟ್ಟಿನ ಗಂಟುಗಳು ಜಾಳಿಗೆಯ ಮೇಲೆ ಸಿಕ್ಕಿಕೊಳ್ಳುವವು.
ಯಾಕೋಬನ ಕುಟುಂಬಕ್ಕೆ ಇದೇ ರೀತಿಯಾಗುವುದು.
10 “ನನ್ನ ಜನರಲ್ಲಿ ಪಾಪಿಗಳು ಹೇಳುತ್ತಾರೆ:
‘ನಮಗೆ ಯಾವ ಕೇಡೂ ಸಂಭವಿಸುವುದಿಲ್ಲ.’
ಆದರೆ ಅವರೆಲ್ಲಾ ಕತ್ತಿಯಿಂದ ಸಾಯುವರು.”
ರಾಜ್ಯವು ತಿರುಗಿ ಸ್ಥಾಪಿಸಲ್ಪಡುವದೆಂದು ದೇವರ ವಾಗ್ದಾನ
11 “ದಾವೀದನ ಗುಡಾರವು ಕುಸಿದುಬಿದ್ದಿದೆ.
ಆದರೆ ಆ ದಿವಸಗಳಲ್ಲಿ ತಿರುಗಿ ಅದನ್ನು ಮೇಲಕ್ಕೆತ್ತುವೆನು.
ಗೋಡೆಯಲ್ಲಿರುವ ರಂಧ್ರಗಳನ್ನು ನಾನು ಸರಿಪಡಿಸುವೆನು.
ಬಿದ್ದುಹೋದ ಕಟ್ಟಡಗಳನ್ನು ತಿರುಗಿ ಕಟ್ಟುವೆನು.
ಮುಂಚೆ ಹೇಗಿತ್ತೋ ಹಾಗೆಯೇ ಇರುವದು.
12 ಆಗ ಎದೋಮಿನಲ್ಲಿ ಉಳಿದವರು
ಮತ್ತು ನನ್ನ ಹೆಸರಿನಿಂದ ಕರೆಯಲ್ಪಟ್ಟ ಜನರು ಸಹಾಯಕ್ಕಾಗಿ ಯೆಹೋವನನ್ನು ನೋಡುವರು.”
ಇದು ಯೆಹೋವನ ನುಡಿ.
ಆತನು ಅವುಗಳನ್ನು ನೆರವೇರಿಸುವನು.
13 ಯೆಹೋವನು ಹೇಳುವುದೇನೆಂದರೆ, “ಒಂದು ಸಮಯವು ಬರುವುದು,
ಆಗ ಉಳುವವನು ಕೊಯ್ಯುವವನನ್ನೇ
ಮೀರಿಸಿ ಮುಂದೆ ಹೋಗುವನು.
ದ್ರಾಕ್ಷಿನೆಡುವವನು ದ್ರಾಕ್ಷಿಯನ್ನು ಕೊಯ್ಯುವನನ್ನೇ
ಮೀರಿಸಿ ಮುಂದೆ ಹೋಗುವನು.
ಬೆಟ್ಟಗಳಿಂದಲೂ ಪರ್ವತಗಳಿಂದಲೂ
ಸಿಹಿ ದ್ರಾಕ್ಷಾರಸವು ಹರಿದುಬರುವುದು.
14 ಸೆರೆಯಿಂದ ಬಿಡಿಸಿ ನನ್ನ ಜನರಾದ ಇಸ್ರೇಲನ್ನು
ಹಿಂದಕ್ಕೆ ಕರೆತರುವೆನು.
ಪಾಳುಬಿದ್ದ ಪಟ್ಟಣಗಳನ್ನು ತಿರುಗಿ ಕಟ್ಟಿ
ಅದರಲ್ಲಿ ವಾಸಿಸುವರು.
ದ್ರಾಕ್ಷಿತೋಟವನ್ನು ಮಾಡಿ
ಅದರಿಂದ ಸಿಗುವ ದ್ರಾಕ್ಷಾರಸವನ್ನು ಕುಡಿಯುವರು.
ತೋಟಗಳನ್ನು ಮಾಡಿ
ಅದರ ಫಲಗಳನ್ನು ಭೋಗಿಸುವರು.
15 ನಾನು ನನ್ನ ಜನರನ್ನು ಅವರ ದೇಶದಲ್ಲಿ ಸ್ಥಾಪಿಸುವೆನು.
ನಾನು ಕೊಟ್ಟಿರುವ ದೇಶದಿಂದ ಅವರು ಕೀಳಲ್ಪಡುವುದಿಲ್ಲ.”
ನಿಮ್ಮ ದೇವರಾದ ಯೆಹೋವನು ಈ ಸಂಗತಿಗಳನ್ನು ಹೇಳಿದ್ದಾನೆ.
ಯೇಸುವಿಗೆ ಸೈತಾನನಿಂದಾದ ಶೋಧನೆ
(ಮತ್ತಾಯ 4:1-11; ಮಾರ್ಕ 1:12-13)
4 ಯೇಸುವು ಜೋರ್ಡನ್ ನದಿಯಿಂದ ಹಿಂತಿರುಗಿದನು. ಆತನು ಪವಿತ್ರಾತ್ಮಭರಿತನಾಗಿದ್ದನು. ಪವಿತ್ರಾತ್ಮನು ಯೇಸುವನ್ನು ಅಡವಿಗೆ ನಡಿಸಿದನು. 2 ಅಲ್ಲಿ ಸೈತಾನನು ಆತನನ್ನು ನಲವತ್ತು ದಿನಗಳವರೆಗೆ ಶೋಧಿಸಿದನು. ಆ ದಿನಗಳಲ್ಲಿ ಯೇಸು ಏನನ್ನೂ ತಿನ್ನಲಿಲ್ಲ. ತರುವಾಯ, ಯೇಸುವಿಗೆ ಬಹಳ ಹಸಿವೆಯಾಯಿತು.
3 ಆಗ ಸೈತಾನನು ಯೇಸುವಿಗೆ, “ನೀನು ದೇವರ ಮಗನಾಗಿದ್ದರೆ, ಈ ಕಲ್ಲಿಗೆ ರೊಟ್ಟಿಯಾಗು ಎಂದು ಆಜ್ಞಾಪಿಸು” ಎಂದನು.
4 ಅದಕ್ಕೆ ಯೇಸು,
“‘ಮನುಷ್ಯನು ರೊಟ್ಟಿ ತಿಂದ ಮಾತ್ರಕ್ಕೆ ಬದುಕುವುದಿಲ್ಲ.’(A)
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು.
5 ಆಗ ಸೈತಾನನು ಯೇಸುವನ್ನು ಕರೆದುಕೊಂಡು ಹೋಗಿ, ಒಂದೇ ಕ್ಷಣದಲ್ಲಿ ಭೂಲೋಕದ ಎಲ್ಲಾ ರಾಜ್ಯಗಳನ್ನು ತೋರಿಸಿ, 6 “ಈ ರಾಜ್ಯಗಳೆಲ್ಲವನ್ನೂ ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುತ್ತೇನೆ. ಇವುಗಳೆಲ್ಲಾ ನನ್ನ ಅಧೀನದಲ್ಲಿವೆ. ನಾನು ಯಾರಿಗೆ ಬೇಕಾದರೂ ಇವುಗಳನ್ನು ಕೊಡಬಲ್ಲೆ. 7 ನೀನು ನನ್ನನ್ನು ಆರಾಧಿಸುವುದಾದರೆ ಇವೆಲ್ಲವನ್ನು ನಾನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
8 ಅದಕ್ಕೆ ಯೇಸು,
“‘ನಿನ್ನ ಪ್ರಭುವಾದ ದೇವರೊಬ್ಬನನ್ನೇ ಆರಾಧಿಸಬೇಕು,
ಆತನೊಬ್ಬನಿಗೇ ಸೇವೆಮಾಡಬೇಕು’(B)
ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿದೆ!” ಎಂದನು.
9 ಬಳಿಕ ಸೈತಾನನು ಯೇಸುವನ್ನು ಜೆರುಸಲೇಮಿಗೆ ಕರೆದೊಯ್ದು, ದೇವಾಲಯದ ಬಹು ಎತ್ತರವಾದ ಸ್ಥಳದಲ್ಲಿ ನಿಲ್ಲಿಸಿ, “ನೀನು ದೇವರ ಮಗನಾಗಿದ್ದರೆ, ಕೆಳಕ್ಕೆ ಧುಮುಕು!
10 ‘ದೇವರು ನಿನ್ನನ್ನು ಕಾಪಾಡುವುದಕ್ಕೆ ತನ್ನ ದೂತರಿಗೆ ಅಪ್ಪಣೆಕೊಡುವನು.’(C)
11 ‘ನಿನ್ನ ಪಾದವು ಕಲ್ಲಿಗೆ ತಗಲೀತೆಂದು
ಅವರು ತಮ್ಮ ಕೈಗಳಿಂದ ನಿನ್ನನ್ನು ಎತ್ತಿಕೊಳ್ಳುವರು’(D)
ಎಂಬುದಾಗಿ ಶಾಸ್ತ್ರದಲ್ಲಿ ಬರೆದಿದೆ” ಎಂದನು.
12 ಅದಕ್ಕೆ ಯೇಸು,
“‘ನಿನ್ನ ಪ್ರಭುವಾದ ದೇವರನ್ನು ಪರೀಕ್ಷಿಸಬಾರದು’(E)
ಎಂಬುದಾಗಿಯೂ ಬರೆದಿದೆ” ಎಂದು ಉತ್ತರಿಸಿದನು.
13 ಸೈತಾನನು ಯೇಸುವನ್ನು ನಾನಾ ವಿಧದಲ್ಲಿ ಶೋಧಿಸಿದ ನಂತರ, ತಕ್ಕಕಾಲ ಬರುವ ತನಕ ಆತನನ್ನು ಬಿಟ್ಟುಹೋದನು.
ಜನರಿಗೆ ಯೇಸುವಿನ ಉಪದೇಶ
(ಮತ್ತಾಯ 4:12-17; ಮಾರ್ಕ 1:14-15)
14 ಯೇಸು ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ ಗಲಿಲಾಯಕ್ಕೆ ಹಿಂತಿರುಗಿ ಹೋದನು. ಯೇಸುವಿನ ಸುದ್ದಿಯು ಗಲಿಲಾಯದ ಸುತ್ತಮುತ್ತಲಿರುವ ಪ್ರದೇಶದಲ್ಲೆಲ್ಲಾ ಹಬ್ಬಿತು. 15 ಯೇಸು ಸಭಾಮಂದಿರಗಳಲ್ಲಿ ಉಪದೇಶಿಸಲು ಪ್ರಾರಂಭಿಸಿದನು. ಜನರೆಲ್ಲರೂ ಆತನನ್ನು ಹೊಗಳಿದರು.
ಯೇಸು ಸ್ವಂತ ನಾಡಿಗೆ ಬಂದದ್ದು
(ಮತ್ತಾಯ 13:53-58; ಮಾರ್ಕ 6:1-6)
16 ಯೇಸು ತಾನು ಬೆಳೆದ ನಜರೇತ್ ಎಂಬ ಊರಿಗೆ ಪ್ರಯಾಣ ಮಾಡಿದನು. ವಾಡಿಕೆಯ ಪ್ರಕಾರ, ಆತನು ಸಬ್ಬತ್‌ದಿನದಲ್ಲಿ ಸಭಾಮಂದಿರಕ್ಕೆ ಹೋದನು. ಯೇಸು ಓದುವುದಕ್ಕಾಗಿ ಎದ್ದುನಿಂತನು. 17 ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಆತನಿಗೆ ಓದಲು ಕೊಡಲಾಗಿತ್ತು. ಯೇಸು ಆ ಪುಸ್ತಕವನ್ನು ತೆರೆದು ಈ ಭಾಗವನ್ನು ಓದಿದನು:
18 “ಪ್ರಭುವಿನ (ದೇವರ) ಆತ್ಮವು ನನ್ನಲ್ಲಿ ಇದೆ.
ಬಡಜನರಿಗೆ ಶುಭಸಂದೇಶವನ್ನು ತಿಳಿಸಲು ದೇವರು ನನ್ನನ್ನು ಅಭಿಷೇಕಿಸಿದ್ದಾನೆ.
ಪಾಪಕ್ಕೆ ಸೆರೆಯಾಳುಗಳಾಗಿರುವ ಜನರಿಗೆ ‘ನೀವು ಬಿಡುಗಡೆಯಾಗಿದ್ದೀರಿ’ ಎಂತಲೂ
ಕುರುಡರಿಗೆ, ‘ನಿಮಗೆ ಮತ್ತೆ ಕಣ್ಣು ಕಾಣಿಸುವುದು’ ಎಂತಲೂ
ತಿಳಿಸುವುದಕ್ಕೆ ದೇವರು ನನ್ನನ್ನು ಕಳುಹಿಸಿದ್ದಾನೆ.
ದಬ್ಬಾಳಿಕೆಗೆ ಗುರಿಯಾದವರನ್ನು ಬಿಡಿಸುವುದಕ್ಕೂ
19 ಪ್ರಭುವಿನ ಶುಭವರ್ಷವನ್ನು ಪ್ರಕಟಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾನೆ.”(F)
20 ಈ ಭಾಗವನ್ನು ಓದಿದ ನಂತರ ಯೇಸು ಆ ಪುಸ್ತಕವನ್ನು ಮುಚ್ಚಿ ಸಭಾಮಂದಿರದ ಸೇವಕನ ಕೈಗೆ ಕೊಟ್ಟು ಕುಳಿತುಕೊಂಡನು. ಸಭಾಮಂದಿರದಲ್ಲಿದ್ದ ಪ್ರತಿಯೊಬ್ಬರು ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು. 21 ಆಗ ಯೇಸು, ಅವರಿಗೆ, “ನಾನು ಇದೀಗ ಓದಿದ ಮಾತುಗಳನ್ನು ನೀವು ಕೇಳುತ್ತಿದ್ದಾಗಲೇ ಅವು ನಿಜವಾಗಿ ನೆರವೇರಿದವು!” ಎಂದು ಹೇಳಿದನು.
22 ಜನರೆಲ್ಲರೂ ಯೇಸುವನ್ನು ಹೊಗಳತೊಡಗಿದರು. ಅವರು ಆತನ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಈ ರೀತಿ ಮಾತಾಡಲು ಹೇಗೆ ಸಾಧ್ಯ? ಇವನು ಯೋಸೇಫನ ಮಗನಲ್ಲವೇ?” ಎಂದು ಮಾತಾಡಿಕೊಂಡರು.
23 ಯೇಸು ಅವರಿಗೆ, “ನೀವಂತೂ ‘ವೈದ್ಯನೇ, ನಿನ್ನನ್ನೇ ವಾಸಿಮಾಡಿಕೊ’ ಎಂಬ ಗಾದೆಯನ್ನು ನನಗೆ ಹೇಳುತ್ತೀರಿ ಎಂಬುದು ನನಗೆ ಗೊತ್ತು. ‘ನೀನು ಕಪೆರ್ನೌಮಿನಲ್ಲಿ ಮಾಡಿದ ಕೆಲವು ಕಾರ್ಯಗಳ ಬಗ್ಗೆ ನಾವು ಕೇಳಿದ್ದೇವೆ. ಅದೇ ಕಾರ್ಯಗಳನ್ನು ನಿನ್ನ ಸ್ವಂತ ಊರಿನಲ್ಲಿ ಮಾಡು!’” ಎಂದು ಹೇಳಬೇಕೆಂದಿದ್ದೀರಿ. 24 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರವಾದಿ ತನ್ನ ಸ್ವಂತ ಊರಿನಲ್ಲಿ ಸ್ವೀಕೃತನಾಗುವುದಿಲ್ಲ.
25 “ನಾನು ಹೇಳುವುದು ಸತ್ಯ. ಎಲೀಯನ ಕಾಲದಲ್ಲಿ ಮೂರುವರೆ ವರ್ಷಗಳವರೆಗೆ ಇಸ್ರೇಲ್ ದೇಶದಲ್ಲಿ ಮಳೆ ಬೀಳಲಿಲ್ಲ. ದೇಶದ ಯಾವ ಕಡೆಯಲ್ಲಿಯೂ ಆಹಾರವಿರಲಿಲ್ಲ. ಆ ಸಮಯದಲ್ಲಿ ಇಸ್ರೇಲಿನಲ್ಲಿ ಅನೇಕ ವಿಧವೆಯರು ಇದ್ದರು. 26 ಆದರೆ ಎಲೀಯನನ್ನು ಬೇರೆ ಯಾವ ವಿಧವೆಯರ ಬಳಿಗೂ ಕಳುಹಿಸದೆ ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಲಾಯಿತು.
27 “ಪ್ರವಾದಿಯಾದ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರೇಲಿನಲ್ಲಿ ವಾಸಿಸುತ್ತಿದ್ದರು. ಆದರೆ ಅವರಲ್ಲಿ ಯಾರಿಗೂ ವಾಸಿಯಾಗದೆ ಸಿರಿಯ ದೇಶದ ನಾಮಾನನೊಬ್ಬನಿಗೇ ವಾಸಿಯಾಯಿತು” ಎಂದು ಹೇಳಿದನು.
28 ಸಭಾಮಂದಿರದಲ್ಲಿದ್ದ ಜನರೆಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಕೋಪಗೊಂಡು 29 ಯೇಸುವನ್ನು ಪಟ್ಟಣದಿಂದ ಹೊರಗಟ್ಟಿದರು. ಆ ಪಟ್ಟಣವು ಒಂದು ಗುಡ್ಡದ ಮೇಲಿತ್ತು. ಅವರು ಯೇಸುವನ್ನು ಗುಡ್ಡದ ಅಂಚಿಗೆ ಕರೆದುಕೊಂಡು ಬಂದು ಕೆಳಕ್ಕೆ ತಳ್ಳಿಬಿಡಬೇಕೆಂದಿದ್ದರು. 30 ಆದರೆ ಯೇಸು ಅವರ ಮಧ್ಯದಲ್ಲಿ ಹಾದು ಹೊರಟುಹೋದನು.
ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ
(ಮಾರ್ಕ 1:21-28)
31 ಯೇಸು ಗಲಿಲಾಯದ ಕಪೆರ್ನೌಮ್ ಎಂಬ ಊರಿಗೆ ಹೋದನು. ಸಬ್ಬತ್‌ದಿನದಂದು ಯೇಸು ಜನರಿಗೆ ಉಪದೇಶಿಸಿದನು. 32 ಯೇಸುವಿನ ಉಪದೇಶಕ್ಕೆ ಅವರು ಅತ್ಯಾಶ್ಚರ್ಯಪಟ್ಟರು. ಏಕೆಂದರೆ ಆತನು ಅಧಿಕಾರದಿಂದ ಮಾತಾಡಿದನು.
33 ಸಭಾಮಂದಿರದಲ್ಲಿ ದೆವ್ವದಿಂದ ಪೀಡಿತನಾದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾದ ಧ್ವನಿಯಿಂದ, 34 “ನಜರೇತಿನ ಯೇಸುವೇ! ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡಲು ಇಲ್ಲಿಗೆ ಬಂದಿರುವೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಕಳುಹಿಸಲ್ಪಟ್ಟ ಪರಿಶುದ್ಧನು!” ಎಂದು ಕೂಗಿದನು. 35 ಆದರೆ ಯೇಸು ಆ ದೆವ್ವಕ್ಕೆ, “ಸುಮ್ಮನಿರು! ಇವನನ್ನು ಬಿಟ್ಟು ಹೊರಗೆ ಬಾ!” ಎಂದು ಆಜ್ಞಾಪಿಸಿದನು. ದೆವ್ವವು ಅವನನ್ನು ಜನರೆಲ್ಲರ ಎದುರಿನಲ್ಲಿಯೇ ಕೆಡವಿ ಯಾವ ಕೇಡೂ ಮಾಡದೆ ಬಿಟ್ಟು ಹೋಯಿತು.
36 ಜನರೆಲ್ಲರೂ ಬೆರಗಾಗಿ, “ಎಂಥಾ ಮಾತುಗಳಿವು! ಆತನು ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಆಜ್ಞಾಪಿಸಲು, ಅವು ಬಿಟ್ಟುಹೋಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು. 37 ಹೀಗಾಗಿ ಯೇಸುವಿನ ಸುದ್ದಿಯು ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು.
ಯೇಸುವಿನಿಂದ ಗುಣಹೊಂದಿದ ಸ್ತ್ರೀ
(ಮತ್ತಾಯ 8:14-17; ಮಾರ್ಕ 1:29-34)
38 ಯೇಸು ಸಭಾಮಂದಿರದಿಂದ ಹೊರಟು ಸೀಮೋನನ[a] ಮನೆಗೆ ಹೋದನು. ಸೀಮೋನನ ಅತ್ತೆ ಬಹಳ ಜ್ವರದಿಂದ ನರಳುತ್ತಿದ್ದಳು. ಆಕೆಗೆ ಸಹಾಯ ಮಾಡಬೇಕೆಂದು ಅಲ್ಲಿದ್ದವರು ಆತನನ್ನು ಬೇಡಿಕೊಂಡರು. 39 ಯೇಸು ಆಕೆಯ ಬಳಿ ನಿಂತು, ಆಕೆಯನ್ನು ಬಿಟ್ಟುಹೋಗುವಂತೆ ಜ್ವರಕ್ಕೆ ಆಜ್ಞಾಪಿಸಿದನು. ಆ ಕೂಡಲೇ ಆಕೆಗೆ ಗುಣವಾಯಿತು. ಆಕೆ ಎದ್ದು ಅವರನ್ನು ಉಪಚರಿಸಿದಳು.
ಅನೇಕರಿಗೆ ಆರೋಗ್ಯದಾನ
40 ಸೂರ್ಯನು ಮುಳುಗಿದ ಮೇಲೆ, ಅಸ್ವಸ್ಥರಾದ ತಮ್ಮ ಸ್ನೇಹಿತರನ್ನು ಜನರು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಅವರಿಗೆ ಅನೇಕ ತರಹದ ಕಾಯಿಲೆಗಳಿದ್ದವು. ಪ್ರತಿಯೊಬ್ಬ ರೋಗಿಯ ಮೇಲೂ ಯೇಸು ತನ್ನ ಕೈಯನ್ನಿಟ್ಟು ಗುಣಪಡಿಸಿದನು. 41 ಅನೇಕ ಜನರೊಳಗಿಂದ ದೆವ್ವಗಳು, “ನೀನು ದೇವಕುಮಾರ” ಎಂದು ಆರ್ಭಟಿಸುತ್ತಾ ಬಿಟ್ಟುಹೋದವು. ಆದರೆ ಯೇಸು ಆ ದೆವ್ವಗಳಿಗೆ, “ಮಾತಾಡಕೂಡದೆಂದು” ಬಲವಾಗಿ ಆಜ್ಞಾಪಿಸಿದನು. ಯೇಸುವೇ “ಕ್ರಿಸ್ತ”ನೆಂದು ದೆವ್ವಗಳಿಗೆ ತಿಳಿದಿತ್ತು.
ಇತರ ಊರುಗಳಿಗೆ ಯೇಸುವಿನ ಸಂದರ್ಶನ
(ಮಾರ್ಕ 1:35-39)
42 ಮರುದಿನ ಯೇಸು ನಿರ್ಜನ ಸ್ಥಳಕ್ಕೆ ಹೋದನು. ಜನರು ಯೇಸುವಿಗಾಗಿ ಹುಡುಕುತ್ತಾ ಅಲ್ಲಿಗೆ ಬಂದು, ತಮ್ಮನ್ನು ಬಿಟ್ಟುಹೋಗದಂತೆ ಆತನನ್ನು ತಡೆಯಲು ಪ್ರಯತ್ನಿಸಿದರು. 43 ಆದರೆ ಯೇಸು ಅವರಿಗೆ, “ನಾನು ಬೇರೆ ಊರುಗಳವರಿಗೂ ಸಹ ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಬೇಕು. ಇದಕ್ಕಾಗಿಯೇ ನನ್ನನ್ನು ಕಳುಹಿಸಲಾಗಿದೆ” ಎಂದು ಹೇಳಿದನು.
44 ಬಳಿಕ ಯೇಸು ಜುದೇಯದ ಸಭಾಮಂದಿರಗಳಲ್ಲಿ ಬೋಧಿಸಿದನು.
Kannada Holy Bible: Easy-to-Read Version. All rights reserved. © 1997 Bible League International