Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 23

ಜನರು ಧರ್ಮಶಾಸ್ತ್ರವನ್ನು ಕೇಳುವರು

23 ಯೆಹೂದದ ಮತ್ತು ಜೆರುಸಲೇಮಿನ ನಾಯಕರೆಲ್ಲರೂ ಬಂದು ತನ್ನನ್ನು ಭೇಟಿಯಾಗಬೇಕೆಂದು ರಾಜನಾದ ಯೋಷೀಯನು ಹೇಳಿದನು. ನಂತರ ರಾಜನು ದೇವಾಲಯಕ್ಕೆ ಹೋದನು. ಯೆಹೂದದ ಜನರೆಲ್ಲರು ಮತ್ತು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ಜನರೆಲ್ಲರು ಅವನ ಜೊತೆಯಲ್ಲಿ ಹೋದರು. ಯಾಜಕರು, ಪ್ರವಾದಿಗಳು, ಚಿಕ್ಕವರು ಮತ್ತು ದೊಡ್ಡವರು ಅವನೊಡನೆ ಹೋದರು. ಆಗ ಅವನು ನಿಬಂಧನ ಗ್ರಂಥವನ್ನು ಓದಿದನು. ಇದು ದೇವಾಲಯದಲ್ಲಿ ಸಿಕ್ಕಿದ ಗ್ರಂಥವಾಗಿತ್ತು. ಜನರೆಲ್ಲರಿಗೂ ಕೇಳಿಸುವಂತೆ ಯೋಷೀಯನು ಗ್ರಂಥವನ್ನು ಓದಿದನು.

ರಾಜನು ಸ್ತಂಭದ ಬಳಿ ನಿಂತು ತಾನು ಯೆಹೋವನ ಮಾರ್ಗದಲ್ಲಿ ನಡೆಯುವುದಾಗಿಯೂ ಆತನ ಆಜ್ಞೆಗಳಿಗೆ, ಒಡಂಬಡಿಕೆಗೆ ಮತ್ತು ಆತನ ನಿಯಮಗಳಿಗೆ ಪೂರ್ಣಹೃದಯದಿಂದಲೂ ಪೂರ್ಣಆತ್ಮದಿಂದಲೂ ವಿಧೇಯನಾಗಿರುವುದಾಗಿಯೂ ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಯೆಹೋವನಿಗೆ ಪ್ರಮಾಣಮಾಡಿದನು. ರಾಜನ ಪ್ರಮಾಣಕ್ಕೆ ಬೆಂಬಲ ನೀಡಲು ಜನರೆಲ್ಲರೂ ಎದ್ದುನಿಂತರು.

ನಂತರ ರಾಜನು ಪ್ರಧಾನಯಾಜಕನಾದ ಹಿಲ್ಕೀಯನಿಗೆ, ಇತರ ಯಾಜಕರಿಗೆ, ದ್ವಾರಪಾಲಕರಿಗೆ, ಬಾಳ್‌ದೇವರಿಗೂ ಅಶೇರ ದೇವತೆಗೂ ಮತ್ತು ಆಕಾಶದ ನಕ್ಷತ್ರಗಳಿಗೂ ಉಪಯೋಗಿಸುತ್ತಿದ್ದ ಎಲ್ಲಾ ಸಲಕರಣೆಗಳನ್ನು ದೇವಾಲಯದಿಂದ ಹೊರತರುವಂತೆ ಆಜ್ಞಾಪಿಸಿದನು. ಯೋಷೀಯನು ಜೆರುಸಲೇಮಿನ ಹೊರಗೆ ಕಿದ್ರೋನ್ ಹೊಲಗಳಲ್ಲಿ ಅವುಗಳನ್ನು ಸುಟ್ಟುಹಾಕಿದನು. ಅವರು ಬೂದಿಯನ್ನು ಬೇತೇಲಿಗೆ ತೆಗೆದುಕೊಂಡು ಹೋದರು.

ಯೆಹೂದದ ರಾಜರುಗಳು ಯಾಜಕರಾಗಿ ಸೇವೆಮಾಡಲು ಕೆಲವು ಸಾಮಾನ್ಯ ಜನರನ್ನು ಆರಿಸಿಕೊಂಡರು. ಈ ಜನರು ಆರೋನನ ಕುಲದಿಂದ ಬಂದವರಲ್ಲ! ಈ ಸುಳ್ಳುಯಾಜಕರು ಯೆಹೂದದ ನಗರಗಳಲ್ಲಿನ ಮತ್ತು ಜೆರುಸಲೇಮಿನ ಊರುಗಳಲ್ಲಿನ ಉನ್ನತಸ್ಥಳಗಳಲ್ಲಿ ಧೂಪವನ್ನು ಸುಡುತ್ತಿದ್ದರು. ಅವರು ಬಾಳನನ್ನು, ಸೂರ್ಯನನ್ನು, ಚಂದ್ರನನ್ನು, ಆಕಾಶ ಸೈನ್ಯವಾದ ನಕ್ಷತ್ರಗಳನ್ನು ಗೌರವಿಸಲು ಧೂಪವನ್ನು ಸುಡುತ್ತಿದ್ದರು. ಆದರೆ ಯೋಷೀಯನು ಆ ಸುಳ್ಳು ಯಾಜಕರನ್ನು ನಿಲ್ಲಿಸಿದನು.

ಯೋಷೀಯನು ಅಶೇರಸ್ತಂಭವನ್ನು ದೇವಾಲಯದಿಂದ ತೆಗೆದುಹಾಕಿದನು. ಅವನು ಅಶೇರಸ್ತಂಭವನ್ನು ನಗರದ ಹೊರವಲಯದ ಕಿದ್ರೋನ್ ಕಣಿವೆಗೆ ತೆಗೆದುಕೊಂಡು ಹೋಗಿ ಅದನ್ನು ಅಲ್ಲಿ ಸುಟ್ಟುಹಾಕಿದನು. ನಂತರ ಅವನು ಅದನ್ನು ಪುಡಿಪುಡಿ ಮಾಡಿಸಿ ಧೂಳಿನಲ್ಲಿ ಬೆರಸಿ ಸಾಮಾನ್ಯ ಜನರ ಸ್ಮಶಾನದಲ್ಲಿ ಆ ಧೂಳನ್ನು ಚೆಲ್ಲಿದನು.

ನಂತರ ರಾಜನಾದ ಯೋಷೀಯನು ದೇವಾಲಯದಲ್ಲಿದ್ದ ದೇವದಾಸ ದೇವದಾಸಿಯರ ಮನೆಗಳನ್ನು ಕೆಡವಿಹಾಕಿಸಿದನು. ಆ ಮನೆಗಳಲ್ಲಿ ಸುಳ್ಳುದೇವತೆಯಾದ ಅಶೇರಳಿಗೋಸ್ಕರ ಚಿಕ್ಕ ಗುಡಾರಗಳನ್ನು ನೇಯುತ್ತಿದ್ದರು.

8-9 ಆ ಸಮಯದಲ್ಲಿ ಯಾಜಕರು ಯಜ್ಞಗಳನ್ನು ಜೆರುಸಲೇಮಿಗೆ ತರಲಿಲ್ಲ ಮತ್ತು ದೇವಾಲಯದಲ್ಲಿನ ಯಜ್ಞವೇದಿಕೆಯ ಮೇಲೆ ಅವುಗಳನ್ನು ಅರ್ಪಿಸಲಿಲ್ಲ. ಯಾಜಕರು ಯೆಹೂದದ ಎಲ್ಲಾ ನಗರಗಳಲ್ಲಿಯೂ ವಾಸಿಸುತ್ತಿದ್ದರು. ಅವರು ಆ ನಗರಗಳಲ್ಲಿನ ಉನ್ನತಸ್ಥಳಗಳಲ್ಲಿ ಧೂಪವನ್ನು ಸುಡುತ್ತಿದ್ದರು ಮತ್ತು ಯಜ್ಞಗಳನ್ನು ಅರ್ಪಿಸುತ್ತಿದ್ದರು. ಆ ಉನ್ನತಸ್ಥಳಗಳು ಗೆಬದಿಂದ ಬೇರ್ಷೆಬದವರೆಗೆ ಎಲ್ಲಾ ಕಡೆಗಳಲ್ಲಿದ್ದವು. ಯಾಜಕರು ತಮ್ಮ ಹುಳಿಯಿಲ್ಲದ ರೊಟ್ಟಿಗಳನ್ನು ಜೆರುಸಲೇಮಿನ ದೇವಾಲಯದಲ್ಲಿ ಯಾಜಕರಾಗಿದ್ದ ವಿಶೇಷ ಸ್ಥಳಗಳಲ್ಲಿ ತಿನ್ನದೆ ಆ ಊರುಗಳಲ್ಲಿ ಸಾಮಾನ್ಯ ಜನರೊಂದಿಗೆ ತಿನ್ನುತ್ತಿದ್ದರು. ಆದರೆ ರಾಜನಾದ ಯೋಷೀಯನು ಆ ಉನ್ನತಸ್ಥಳಗಳನ್ನು ನಾಶಗೊಳಿಸಿ ಆ ಯಾಜಕರನ್ನು ಜೆರುಸಲೇಮಿಗೆ ಕರೆತಂದನು. ನಗರಾಧಿಕಾರಿಯಾದ ಯೆಹೋಶುವನ ದ್ವಾರದ ಎಡಗಡೆಯಲ್ಲಿದ್ದ ಉನ್ನತಸ್ಥಳಗಳನ್ನು ಯೋಷೀಯನು ನಾಶಗೊಳಿಸಿದನು.

10 ತೋಫೆತ್ ಎನ್ನುವುದು ಬೆನ್‌ಹಿನ್ನೋಮ್‌ನ ಮಗನಿಗೆ ಸೇರಿದ ಒಂದು ಕಣಿವೆ. ಅಲ್ಲಿ ಸುಳ್ಳುದೇವರಾದ ಮೋಲೆಕನ ಗೌರವಾರ್ಥವಾಗಿ ಜನರು ತಮ್ಮ ಮಕ್ಕಳನ್ನು ಆಹುತಿ ಕೊಡುತ್ತಿದ್ದರು ಮತ್ತು ಯಜ್ಞವೇದಿಕೆಯ ಮೇಲೆ ಸುಡುತ್ತಿದ್ದರು. ಯೋಷೀಯನು, ಜನರು ಮತ್ತೆ ಆ ಸ್ಥಳವನ್ನು ಉಪಯೋಗಿಸದಂತೆ ನಾಶಗೊಳಿಸಿದನು. 11 ಪೂರ್ವಕಾಲದಲ್ಲಿ ಯೆಹೂದದ ರಾಜರುಗಳು ದೇವಾಲಯದ ಬಾಗಿಲಿನ ಹತ್ತಿರ ಕೆಲವು ಕುದುರೆಗಳನ್ನು ಮತ್ತು ರಥಗಳನ್ನು ನಿಲ್ಲಿಸುತ್ತಿದ್ದರು. ಇದು ನಾತಾನ್ ಮೆಲೆಕನೆಂಬ ಮುಖ್ಯ ಅಧಿಕಾರಿಯ ಕೋಣೆಯ ಹತ್ತಿರದಲ್ಲಿತ್ತು. ಆ ಕುದುರೆಗಳು ಮತ್ತು ರಥಗಳು ಸೂರ್ಯದೇವತೆಯ ಗೌರವಾರ್ಥವಾಗಿದ್ದವು. ಯೋಷೀಯನು ಕುದುರೆಗಳನ್ನು ತೆಗೆಸಿ ರಥಗಳನ್ನು ಸುಡಿಸಿಬಿಟ್ಟನು.

12 ಪೂರ್ವಕಾಲದಲ್ಲಿ, ಯೆಹೂದದ ರಾಜರುಗಳು ಅಹಾಬನ ಕಟ್ಟಡದ ಮಾಳಿಗೆಯ ಮೇಲೆ ಯಜ್ಞವೇದಿಕೆಗಳನ್ನು ನಿರ್ಮಿಸಿದ್ದರು. ರಾಜನಾದ ಮನಸ್ಸೆಯು ದೇವಾಲಯದ ಎರಡು ಪ್ರಾಕಾರಗಳಲ್ಲಿ ಯಜ್ಞವೇದಿಕೆಗಳನ್ನು ನಿರ್ಮಿಸಿದ್ದನು. ಯೋಷೀಯನು ಆ ಯಜ್ಞವೇದಿಕೆಗಳನ್ನೆಲ್ಲ ನಾಶಗೊಳಿಸಿ, ಅವುಗಳ ಚೂರುಗಳನ್ನು ಕಿದ್ರೋನ್ ಕಣಿವೆಗೆ ಎಸೆದನು.

13 ಪೂರ್ವಕಾಲದಲ್ಲಿ, ರಾಜನಾದ ಸೊಲೊಮೋನನು ಜೆರುಸಲೇಮಿನ ಬಳಿಯಲ್ಲಿದ್ದ ವಿಘ್ನಪರ್ವತದ ಮೇಲೆ ಕೆಲವು ಉನ್ನತಸ್ಥಳಗಳನ್ನು ನಿರ್ಮಿಸಿದ್ದನು. ಆ ಉನ್ನತಸ್ಥಳಗಳು ಪರ್ವತದ ದಕ್ಷಿಣದಿಕ್ಕಿನ ಮೇಲಿದ್ದವು. ರಾಜನಾದ ಸೊಲೊಮೋನನು ಚೀದೋನ್ಯರ ಅಷ್ಟೋರೆತ್, ಮೋವಾಬ್ಯರ ಕೆಮೋಷ್, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹಗಳಿಗಾಗಿ ಆ ಉನ್ನತಸ್ಥಳಗಳನ್ನು ನಿರ್ಮಿಸಿದ್ದನು. ಆದರೆ ರಾಜನಾದ ಯೋಷೀಯನು ಆ ಪೂಜಾಸ್ಥಳಗಳನ್ನೆಲ್ಲಾ ನಾಶಪಡಿಸಿದನು. 14 ರಾಜನಾದ ಯೋಷೀಯನು ಎಲ್ಲಾ ಸ್ಮಾರಕಕಲ್ಲುಗಳನ್ನು ಮತ್ತು ಅಶೇರಸ್ತಂಭಗಳನ್ನು ಒಡೆದು ಹಾಕಿಸಿದನು. ಆಮೇಲೆ ಅವನು ಆ ಸ್ಥಳದ ಮೇಲೆ ಸತ್ತವರ ಎಲುಬುಗಳನ್ನು ಹರಡಿದನು.

15 ಯೋಷೀಯನು ಬೇತೇಲಿನ ಉನ್ನತಸ್ಥಳವನ್ನು ಮತ್ತು ಯಜ್ಞವೇದಿಕೆಯನ್ನು ಕೆಡವಿಬಿಟ್ಟನು. ನೆಬಾಟನ ಮಗನಾದ ಯಾರೊಬ್ಬಾಮನು ಈ ಯಜ್ಞವೇದಿಕೆಯನ್ನು ನಿರ್ಮಿಸಿದ್ದನು. ಇಸ್ರೇಲರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಯೋಷೀಯನು ಯಜ್ಞವೇದಿಕೆಯನ್ನು ಮತ್ತು ಉನ್ನತಸ್ಥಳವನ್ನು ಕೆಡವಿಬಿಟ್ಟನು. ಯೋಷೀಯನು ಯಜ್ಞವೇದಿಕೆಯ ಕಲ್ಲುಗಳನ್ನು ಪುಡಿಪುಡಿಮಾಡಿ ಧೂಳಿನಲ್ಲಿ ಬೆರಸಿದನು. ಅವನು ಅಶೇರಸ್ತಂಭವನ್ನು ಸುಟ್ಟುಹಾಕಿದನು. 16 ಯೋಷೀಯನು ಸುತ್ತಲೂ ನೋಡಿದಾಗ ಬೆಟ್ಟದ ಮೇಲಿದ್ದ ಸ್ಮಶಾನಗಳನ್ನು ಕಂಡನು. ಅವನು ಜನರನ್ನು ಕಳುಹಿಸಿ ಆ ಸ್ಮಶಾನಗಳಿಂದ ಎಲುಬುಗಳನ್ನು ತರಿಸಿ ಆ ಎಲುಬುಗಳನ್ನು ಯಜ್ಞವೇದಿಕೆಯ ಮೇಲೆ ಸುಟ್ಟನು. ಈ ರೀತಿಯಲ್ಲಿ, ಯೋಷೀಯನು ಯಜ್ಞವೇದಿಕೆಯನ್ನು ಹೊಲಸು ಮಾಡಿದನು. ಇದು ಪ್ರವಾದಿಯು ಘೋಷಿಸಿದ್ದ[a] ಯೆಹೋವನ ಸಂದೇಶದಂತೆ ಸಂಭವಿಸಿತು. ಯಾರೊಬ್ಬಾಮನು ಯಜ್ಞವೇದಿಕೆಯ ಪಕ್ಕದಲ್ಲಿ ನಿಂತಿದ್ದಾಗ ಪ್ರವಾದಿಯು ಈ ಸಂಗತಿಗಳನ್ನು ಪ್ರಕಟಿಸಿದ್ದನು.

ನಂತರ ಯೋಷೀಯನು ಸುತ್ತಲೂ ನೋಡಿದಾಗ, ದೇವಮನುಷ್ಯನ ಸಮಾಧಿಯನ್ನು ಕಂಡನು.

17 ಯೋಷೀಯನು, “ನಾನು ನೋಡುತ್ತಿರುವ ಆ ಸ್ಮಾರಕ ಯಾವುದು?” ಎಂದು ಕೇಳಿದನು.

ಆ ನಗರದ ಜನರು ಅವನಿಗೆ, “ಅದು ಯೆಹೂದದಿಂದ ಬಂದ ದೇವಮನುಷ್ಯನ ಸಮಾಧಿ. ನೀನು ಬೇತೇಲಿನ ಯಜ್ಞವೇದಿಕೆಗೆ ಮಾಡಿದ ಕಾರ್ಯಗಳನ್ನು ಕುರಿತು ಈ ಪ್ರವಾದಿಯು ಬಹಳ ಕಾಲದ ಹಿಂದೆಯೇ ಹೇಳಿದ್ದನು” ಎಂದರು.

18 ಯೋಷೀಯನು, “ಆ ಸಮಾಧಿಗೆ ಏನೂ ಮಾಡಬೇಡಿ. ಅವನ ಎಲುಬುಗಳನ್ನು ತೆಗೆಯಬೇಡಿ” ಎಂದು ಹೇಳಿದನು.

19 ಯೋಷೀಯನು ಸಮಾರ್ಯದ ನಗರಗಳಲ್ಲಿದ್ದ ಉನ್ನತಸ್ಥಳಗಳ ಆಲಯಗಳನ್ನೆಲ್ಲ ನಾಶಗೊಳಿಸಿದನು. ಇಸ್ರೇಲಿನ ರಾಜರುಗಳು ಈ ಆಲಯಗಳನ್ನು ನಿರ್ಮಿಸಿದ್ದರು. ಇದರಿಂದ ಯೆಹೋವನು ಬಹಳ ಕೋಪಗೊಂಡಿದ್ದನು. ಯೋಷೀಯನು ಬೇತೇಲಿನಲ್ಲಿ ಆರಾಧನೆಯ ಸ್ಥಳಗಳನ್ನು ನಾಶಪಡಿಸಿದಂತೆ ಆ ಆಲಯಗಳನ್ನೂ ನಾಶಗೊಳಿಸಿದನು.

20 ಯೋಷೀಯನು ಸಮಾರ್ಯದ ಉನ್ನತಸ್ಥಳಗಳಲ್ಲಿದ್ದ ಯಾಜಕರನ್ನೆಲ್ಲ ಕೊಂದುಹಾಕಿದನು. ಅವನು ಯಾಜಕರನ್ನು ಯಜ್ಞವೇದಿಕೆಗಳ ಮೇಲೆಯೇ ಕೊಂದುಹಾಕಿದನು. ಅವನು ಜನರ ಎಲುಬುಗಳನ್ನು ಯಜ್ಞವೇದಿಕೆಯ ಮೇಲೆ ಸುಟ್ಟನು. ಈ ರೀತಿ ಅವನು ಪೂಜೆಯ ಸ್ಥಳಗಳನ್ನು ನಾಶಗೊಳಿಸಿದನು. ನಂತರ ಅವನು ಜೆರುಸಲೇಮಿಗೆ ಹಿಂದಿರುಗಿದನು.

ಯೆಹೂದದ ಜನರು ಪಸ್ಕಹಬ್ಬವನ್ನು ಆಚರಿಸಿದರು

21 ರಾಜನಾದ ಯೋಷೀಯನು ಜನರಿಗೆಲ್ಲ, “ನಿಮ್ಮ ದೇವರಾದ ಯೆಹೋವನಿಗಾಗಿ ಪಸ್ಕಹಬ್ಬವನ್ನು ಆಚರಿಸಿರಿ. ಈ ನಿಬಂಧನ ಗ್ರಂಥದಲ್ಲಿ ಬರೆದಿರುವಂತೆಯೇ ಅದನ್ನು ಮಾಡಿ” ಎಂದು ಆಜ್ಞಾಪಿಸಿದನು.

22 ನ್ಯಾಯಾಧೀಶರು ಇಸ್ರೇಲನ್ನು ಆಳಿದ ದಿನಗಳಿಂದ ಜನರು ಪಸ್ಕಹಬ್ಬವನ್ನು ಈ ರೀತಿಯಲ್ಲಿ ಆಚರಿಸಿರಲಿಲ್ಲ. ಇಸ್ರೇಲಿನ ರಾಜರುಗಳಾಗಲಿ ಇಲ್ಲವೆ ಯೆಹೂದದ ರಾಜರುಗಳಾಗಲಿ ಈ ರೀತಿ ಪಸ್ಕಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿರಲಿಲ್ಲ. 23 ಯೋಷೀಯನು ರಾಜನಾಗಿದ್ದ ಹದಿನೆಂಟನೆ ವರ್ಷದಲ್ಲಿ ಅವರು ಯೆಹೋವನಿಗಾಗಿ ಈ ಪಸ್ಕಹಬ್ಬವನ್ನು ಜೆರುಸಲೇಮಿನಲ್ಲಿ ಆಚರಿಸಿದರು.

24 ಯೋಷೀಯನು ಮಾಂತ್ರಿಕರನ್ನು, ತಾಂತ್ರಿಕರನ್ನು, ಮನೆಯ ದೇವರುಗಳನ್ನು, ವಿಗ್ರಹಗಳನ್ನು, ಯೆಹೂದದಲ್ಲಿ ಮತ್ತು ಜೆರುಸಲೇಮಿನಲ್ಲಿ ಜನರು ಪೂಜಿಸುತ್ತಿದ್ದ ತೆರಾಫೀಮ್ ಎಂಬ ಗೊಂಬೆಗಳನ್ನು ನಾಶಪಡಿಸಿದನು. ಯಾಜಕನಾದ ಹಿಲ್ಕೀಯನಿಗೆ ದೇವಾಲಯದಲ್ಲಿ ಸಿಕ್ಕಿದ ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಯಮಗಳಿಗೆ ವಿಧೇಯನಾಗಿರಲು ಯೋಷೀಯನು ಹೀಗೆ ಮಾಡಿದನು.

25 ಇದಕ್ಕೆ ಮೊದಲು ಯೋಷೀಯನಂತಹ ರಾಜನು ಇರಲೇ ಇಲ್ಲ. ಯೋಷೀಯನು ತನ್ನ ಪೂರ್ಣ ಹೃದಯದಿಂದಲೂ ತನ್ನ ಪೂರ್ಣ ಆತ್ಮದಿಂದಲೂ ತನ್ನ ಪೂರ್ಣ ಶಕ್ತಿಯಿಂದಲೂ ಯೆಹೋವನ ಕಡೆಗೆ ತಿರುಗಿದನು. ಮೋಶೆಯ ಧರ್ಮಶಾಸ್ತ್ರವನ್ನು ಯೋಷೀಯನಂತೆ ಬೇರೆ ಯಾವ ರಾಜನೂ ಅನುಸರಿಸಿರಲಿಲ್ಲ. ಆ ಕಾಲದವರೆಗೆ ಯೋಷೀಯನಂತಹ ಮತ್ತೊಬ್ಬ ರಾಜನು ಇರಲೇ ಇಲ್ಲ.

26 ಆದರೆ ಯೆಹೋವನು ಯೆಹೂದದ ಜನರ ಮೇಲೆ ಕೋಪಗೊಳ್ಳುವುದನ್ನು ನಿಲ್ಲಿಸಲೇ ಇಲ್ಲ. ಮನಸ್ಸೆಯು ಮಾಡಿದ ಕಾರ್ಯಗಳೆಲ್ಲವುಗಳಿಂದ ಯೆಹೋವನು ಅವರ ಮೇಲೆ ಇನ್ನೂ ಕೋಪಗೊಂಡಿದ್ದನು. 27 ಯೆಹೋವನು, “ನಾನು ಇಸ್ರೇಲರನ್ನು ತೆಗೆದುಹಾಕಿದಂತೆ ಯೆಹೂದ್ಯರನ್ನೂ ನನ್ನ ಸನ್ನಿಧಿಯಿಂದ ತೆಗೆದುಹಾಕುವೆನು. ನಾನು ಆರಿಸಿಕೊಂಡ ಜೆರುಸಲೇಮ್ ಪಟ್ಟಣವನ್ನೂ ನನ್ನ ನಾಮ ಮಹತ್ತಿಗಾಗಿ ಸ್ವೀಕರಿಸಿಕೊಂಡ ದೇವಾಲಯವನ್ನೂ ತಿರಸ್ಕರಿಸುವೆನು” ಎಂದು ಹೇಳಿದನು.

28 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೋಷೀಯನು ಮಾಡಿದ ಇತರ ಕಾರ್ಯಗಳೆಲ್ಲವನ್ನು ಕುರಿತು ಬರೆಯಲಾಗಿದೆ.

ಯೋಷೀಯನ ಮರಣ

29 ಯೋಷೀಯನ ಕಾಲದಲ್ಲಿ ಈಜಿಪ್ಟಿನ ರಾಜನಾದ ಫರೋಹ-ನೆಕೋ ಎಂಬವನು ಅಶ್ಶೂರದ ರಾಜನ ವಿರುದ್ಧವಾಗಿ ಹೋರಾಡಲು ಯೂಫ್ರೇಟೀಸ್ ನದಿಯ ಬಳಿಗೆ ಹೋದನು. ರಾಜನಾದ ಯೋಷೀಯನು ಫರೋಹ ನೆಕೋವನ ವಿರುದ್ಧ ಹೋರಾಡಲು ಯೂಫ್ರೇಟೀಸ್ ನದಿಯ ಬಳಿಗೆ ಹೋದನು. ಆದರೆ ಮೆಗಿದ್ದೋವಿನಲ್ಲಿ ಫರೋಹ ನೆಕೋವನು ಯೋಷೀಯನನ್ನು ನೋಡಿ, ಅವನನ್ನು ಕೊಂದು ಹಾಕಿದನು. 30 ಯೋಷೀಯನ ಸೇವಕರು ಮೆಗಿದ್ದೋವಿನಿಂದ ರಥದಲ್ಲಿ ಯೋಷೀಯನ ದೇಹವನ್ನು ಜೆರುಸಲೇಮಿಗೆ ತೆಗೆದುಕೊಂಡು ಬಂದರು. ಅವರು ಯೋಷೀಯನನ್ನು ಅವನ ಸ್ವಂತ ಸ್ಮಶಾನದಲ್ಲಿ ಸಮಾಧಿಮಾಡಿದರು.

ನಂತರ ಸಾಮಾನ್ಯ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು ಕರೆದು, ಅವನನ್ನು ಅಭಿಷೇಕಿಸಿ ಹೊಸ ರಾಜನನ್ನಾಗಿ ಮಾಡಿದರು.

ಯೆಹೋವಾಹಾಜನು ಯೆಹೂದದ ರಾಜನಾಗುವನು

31 ಯೆಹೋವಾಹಾಜನು ರಾಜನಾದಾಗ ಅವನಿಗೆ ಇಪ್ಪತ್ತಮೂರು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿಯು ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್ ಎಂಬ ಹೆಸರಿನವಳು. 32 ಯೆಹೋವಾಹಾಜನು ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಮಾಡಿದನು. ಯೆಹೋವಾಹಾಜನು ತನ್ನ ಪೂರ್ವಿಕರೆಲ್ಲರೂ ಮಾಡಿದಂತಹ ಕಾರ್ಯಗಳನ್ನು ಮಾಡಿದನು.

33 ಫರೋಹ ನೆಕೋವನು ಹಮಾತ್ ದೇಶದ ರಿಬ್ಲಾ ಎಂಬಲ್ಲಿ ಯೆಹೋವಾಹಾಜನನ್ನು ಸೆರೆಹಿಡಿದನು. ಆದ್ದರಿಂದ ಯೆಹೋವಾಹಾಜನು ಜೆರುಸಲೇಮಿನಲ್ಲಿ ಆಳಲಿಲ್ಲ. ಫರೋಹ ನೆಕೋವನು ಮೂರುಸಾವಿರದ ನಾನೂರು ಕಿಲೋಗ್ರಾಂ ಬೆಳ್ಳಿಯನ್ನು ಮತ್ತು ಮೂವತ್ನಾಲ್ಕು ಕಿಲೋಗ್ರಾಂ ಚಿನ್ನವನ್ನು ಕೊಡುವಂತೆ ಯೆಹೂದದವರನ್ನು ಬಲವಂತಪಡಿಸಿದನು.

34 ಫರೋಹ ನೆಕೋವನು ಯೋಷೀಯನ ಮಗನಾದ ಎಲ್ಯಾಕೀಮನನ್ನು ಹೊಸರಾಜನನ್ನಾಗಿ ಮಾಡಿ ಎಲ್ಯಾಕೀಮನ ಹೆಸರನ್ನು ಯೆಹೋಯಾಕೀಮನೆಂದು ಬದಲಾಯಿಸಿದನು. ಯೆಹೋವಾಹಾಜನನ್ನು ಫರೋಹ ನೆಕೋವನು ಈಜಿಪ್ಟಿಗೆ ಕರೆದೊಯ್ದುನು. ಯೆಹೋವಾಹಾಜನು ಈಜಿಪ್ಟಿನಲ್ಲಿ ಸತ್ತುಹೋದನು. 35 ಯೆಹೋಯಾಕೀಮನು ಫರೋಹ ನೆಕೋವನಿಗೆ ಬೆಳ್ಳಿಬಂಗಾರವನ್ನು ಕೊಟ್ಟನು; ಸಾಮಾನ್ಯ ಜನರಿಗೂ ತೆರಿಗೆಗಳನ್ನು ಹಾಕಿ ಬಂದ ಹಣವನ್ನು ಫರೋಹ ನೆಕೋವನಿಗೆ ಕೊಟ್ಟನು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಪಾಲಿನ ಬೆಳ್ಳಿಬಂಗಾರಗಳನ್ನು ಕೊಟ್ಟರು. ರಾಜನಾದ ಯೆಹೋಯಾಕೀಮನು ಫರೋಹ-ನೆಕೋವನಿಗೆ ಅವುಗಳನ್ನು ಕೊಟ್ಟನು.

36 ಯೆಹೋಯಾಕೀಮನು ರಾಜನಾದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿಯ ಹೆಸರು ಜೆಬೂದಾ. ಆಕೆಯು ರೂಮದ ಪೆದಾಯನ ಮಗಳು. 37 ಯೆಹೋಯಾಕೀಮನು ಯೆಹೋವನು ಕೆಟ್ಟದ್ದೆಂದು ಹೇಳಿದವುಗಳನ್ನು ಮಾಡಿದನು. ಯೆಹೋಯಾಕೀಮನು ತನ್ನ ಪೂರ್ವಿಕರು ಮಾಡಿದ ಕಾರ್ಯಗಳನ್ನು ಮಾಡಿದನು.

ಇಬ್ರಿಯರಿಗೆ 5

ಪ್ರತಿಯೊಬ್ಬ ಯೆಹೂದ್ಯ ಪ್ರಧಾನಯಾಜಕನೂ ಮನುಷ್ಯರೊಳಗಿಂದ ಆರಿಸಲ್ಪಟ್ಟು ದೇವರಿಗೆ ಸಂಬಂಧಿಸಿದ ಕಾರ್ಯಗಳನ್ನು ಮನುಷ್ಯರಿಗೋಸ್ಕರ ಮಾಡಲು ನೇಮಿಸಲ್ಪಡುತ್ತಾನೆ. ಆ ಯಾಜಕನು ಪಾಪಗಳಿಗಾಗಿ ದೇವರಿಗೆ ಕಾಣಿಕೆಗಳನ್ನೂ ಯಜ್ಞಗಳನ್ನೂ ಅರ್ಪಿಸಬೇಕು. ಅವನು ಜನರೆಲ್ಲರಂತೆ ದುರ್ಬಲನಾಗಿರುವುದರಿಂದ ಅರ್ಥಮಾಡಿಕೊಳ್ಳದ ಮತ್ತು ದಾರಿತಪ್ಪಿದ ಜನರ ವಿಷಯದಲ್ಲಿ ತಾಳ್ಮೆಯಿಂದ ಸಹಿಸಿಕೊಳ್ಳಲು ಶಕ್ತನಾಗಿದ್ದಾನೆ. ತಾನೂ ಬಲಹೀನನಾಗಿರುವುದರಿಂದ ಅವನು ಮನುಷ್ಯರ ಪಾಪಗಳಿಗಾಗಿಯೂ ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಗಳನ್ನು ಅರ್ಪಿಸುತ್ತಾನೆ.

ಪ್ರಧಾನಯಾಜಕನಾಗಿ ನೇಮಿಸಲ್ಪಡುವುದು ಒಂದು ಗೌರವ. ಆದರೆ ಯಾರೂ ತಮ್ಮನ್ನು ತಾವೇ ಈ ಕಾರ್ಯಕ್ಕೆ ಆರಿಸಿಕೊಳ್ಳುವುದಿಲ್ಲ. ದೇವರು ಆರೋನನನ್ನು ಕರೆದಂತೆ, ಆ ವ್ಯಕ್ತಿಯನ್ನು ಕರೆಯಬೇಕು. ಕ್ರಿಸ್ತನೂ ಇದೇ ರೀತಿ ನೇಮಿಸಲ್ಪಟ್ಟನು. ಆತನು ಪ್ರಭಾವದ ಪ್ರಧಾನಯಾಜಕನಾಗಿ ತನ್ನನ್ನು ತಾನೇ ಆರಿಸಿಕೊಳ್ಳಲಿಲ್ಲ. ಆದರೆ ದೇವರು ಆತನನ್ನು ಆರಿಸಿದನು. ದೇವರು ಕ್ರಿಸ್ತನಿಗೆ ಹೀಗೆ ಹೇಳಿದನು:

“ನೀನು ನನ್ನ ಮಗನು.
    ಈ ದಿನ ನಾನು ನಿನ್ನ ತಂದೆಯಾದೆನು.”(A)

ಪವಿತ್ರ ಗ್ರಂಥದ ಮತ್ತೊಂದು ಕಡೆಯಲ್ಲಿ ದೇವರು ಹೀಗೆನ್ನುತ್ತಾನೆ:

“ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ
    ಪ್ರಧಾನಯಾಜಕನಾಗಿರುವೆ.”(B)

ಕ್ರಿಸ್ತನು ಭೂಲೋಕದಲ್ಲಿ ಜೀವಿಸಿದ್ದಾಗ, ದೇವರಲ್ಲಿ ಪ್ರಾರ್ಥಿಸಿ, ಸಹಾಯವನ್ನು ಬೇಡಿದನು. ಆತನನ್ನು ಸಾವಿನಿಂದ ರಕ್ಷಿಸುವ ಶಕ್ತಿ ದೇವರೊಬ್ಬನಿಗೇ ಇತ್ತು. ಆದ್ದರಿಂದ ಆತನು ಗಟ್ಟಿಯಾಗಿ ರೋದಿಸುತ್ತಾ ಕಣ್ಣೀರು ಸುರಿಸುತ್ತಾ ದೇವರಲ್ಲಿ ಪ್ರಾರ್ಥಿಸಿದನು. ದೇವರ ಇಷ್ಟದಂತೆ ಆತನು ಎಲ್ಲವನ್ನೂ ಮಾಡಿದವನಾಗಿದ್ದನು ಮತ್ತು ದೀನಭಾವವನ್ನು ಹೊಂದಿದ್ದನು. ಆದ್ದರಿಂದ ದೇವರು ಆತನ ಪ್ರಾರ್ಥನೆಗಳಿಗೆ ಉತ್ತರಿಸಿದನು. ಆತನು ದೇವರ ಮಗನಾಗಿದ್ದಾನೆ. ಆದರೂ ಹಿಂಸೆಗೊಳಗಾಗಿ, ತಾನು ಅನುಭವಿಸಿದ ಹಿಂಸೆಗಳಿಂದಲೇ ವಿಧೇಯನಾಗಿರುವುದನ್ನು ಕಲಿತುಕೊಂಡನು. ಹೀಗಿರಲಾಗಿ ಆತನು ಪರಿಶುದ್ಧನಾಗಿದ್ದನು. ದೇವರಿಗೆ ವಿಧೇಯರಾಗುವ ಜನರೆಲ್ಲರೂ ಶಾಶ್ವತವಾದ ರಕ್ಷಣೆಯನ್ನು ಹೊಂದಿಕೊಳ್ಳಲು ಆತನೇ ಕಾರಣ. 10 ದೇವರು ಆತನನ್ನು ಮೆಲ್ಕಿಜೆದೇಕನಂತೆ ಪ್ರಧಾನ ಯಾಜಕನನ್ನಾಗಿ ಮಾಡಿದನು.

ಶೋಧನೆಗೆ ಸೋತುಹೋಗದಿರಲು ಎಚ್ಚರಿಕೆ

11 ಈ ವಿಷಯದಲ್ಲಿ ನಾವು ನಿಮಗೆ ಹೇಳಬೇಕಾದ ಅನೇಕ ಸಂಗತಿಗಳಿವೆ. ಆದರೆ ನೀವು ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸದಿರುವುದರಿಂದ ವಿವರಿಸುವುದು ಕಷ್ಟಕರವಾಗಿದೆ. 12 ನಿಮಗೆ ಕಾಲವು ಬೇಕಾದಷ್ಟಿದ್ದುದರಿಂದ ಈಗಾಗಲೇ ನೀವು ಉಪದೇಶಕರಾಗಿರಬೇಕಿತ್ತು. (ಆದರೆ ನೀವಿನ್ನೂ ಆಗಿಲ್ಲ.) ಹೀಗಿರಲು ದೇವರ ಉಪದೇಶಗಳನ್ನು ಮೊದಲ ಪಾಠದಿಂದ ಮತ್ತೆ ಉಪದೇಶಿಸಲು ನಿಮಗೆ ಮತ್ತೊಬ್ಬ ವ್ಯಕ್ತಿಯ ಅಗತ್ಯವಿದೆ. ಹಾಲಿನಂತಿರುವ ಉಪದೇಶವನ್ನು ನಾವು ನಿಮಗೆ ಮಾಡಬೇಕಾಗಿದೆ. ನೀವು ಗಟ್ಟಿ ಆಹಾರವನ್ನು ತಿನ್ನುವವರಾಗಿಲ್ಲ. 13 ನೀವು ಹಾಲು ಕುಡಿಯುವ ಮಕ್ಕಳಂತಿರುವಿರಿ. ನಿಮಗೆ ಯೋಗ್ಯ ಬೋಧನೆಗಳ ಬಗ್ಗೆ ಏನೂ ತಿಳಿದಿಲ್ಲ. 14 ಆದರೆ ಗಟ್ಟಿಯಾದ ಆಹಾರವು ಜ್ಞಾನದಲ್ಲಿ ಬೆಳವಣಿಗೆ ಹೊಂದಿರುವವರಿಗೇ ಹೊರತು ಮಕ್ಕಳಿಗಲ್ಲ. ಇವರು ಅನುಭವದಿಂದ ತಮ್ಮ ಮನಸ್ಸುಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿರುವುದರಿಂದ ಒಳಿತು ಕೆಡುಕುಗಳಿಗಿರುವ ಭೇದವನ್ನು ತಿಳಿದುಕೊಳ್ಳಬಲ್ಲವರಾಗಿದ್ದಾರೆ.

ಯೋವೇಲ 2

ಬರಲಿಕ್ಕಿರುವ ಯೆಹೋವನ ದಿನ

ಚೀಯೋನಿನಲ್ಲಿ ತುತ್ತೂರಿಯನ್ನೂದಿರಿ.
    ನನ್ನ ಪವಿತ್ರ ಪರ್ವತದಲ್ಲಿ ಧ್ವನಿಯೆತ್ತಿ ಎಚ್ಚರಿಕೆ ನೀಡಿರಿ.
ದೇಶದಲ್ಲಿ ವಾಸಿಸುವ ಎಲ್ಲಾ ಜನರು ಭಯದಿಂದ ನಡುಗಲಿ.
    ಯೆಹೋವನ ಮಹಾದಿನವು ಬರಲಿದೆ;
    ಯೆಹೋವನ ಮಹಾದಿನವು ಹತ್ತಿರವೇ ಇದೆ.
ಆ ದಿನವು ಕರಾಳ ದಿನ.
    ಮೋಡದಿಂದ ತುಂಬಿದ ದಿನವಾಗಿದೆ.
ಅಂದು ಸೂರ್ಯೋದಯದ ಸಮಯದಲ್ಲಿ ಪರ್ವತದಲ್ಲಿ ಹರಡಿದ ಸೈನ್ಯವನ್ನು ನೀವು ನೋಡುವಿರಿ.
    ಅದು ಬಲಿಷ್ಠವಾದ ಮಹಾಸೈನ್ಯ.
ಅಂಥ ಸೈನ್ಯವು ಹಿಂದೆಂದೂ ಇರಲಿಲ್ಲ.
    ಇನ್ನು ಮುಂದೆಯೂ ಇರುವುದಿಲ್ಲ.
ಆ ಸೈನ್ಯವು ಸುಡುವ ಬೆಂಕಿಯಂತೆ ದೇಶವನ್ನು ನಾಶಮಾಡುವದು.
    ಏದೆನ್ ತೋಟದಂತೆ ಕಂಗೊಳಿಸುತ್ತಿದ್ದ ದೇಶವು
ಸೈನ್ಯವು ಬಂದ ಮೇಲೆ ಬೆಂಗಾಡಿನಂತಿರುವದು.
    ಅವರಿಂದ ಯಾರೂ ತಪ್ಪಿಸಿಕೊಳ್ಳಲಾರರು.
ಅವರು ಕುದುರೆಯಂತೆ ಕಾಣುವರು,
    ಯುದ್ಧದ ಕುದುರೆಯಂತೆ ಓಡುವರು.
ಕಿವಿಗೊಟ್ಟು ಕೇಳಿರಿ.
ಪರ್ವತಗಳ ಮೇಲೆ ಓಡುವ ರಥಗಳ
    ಶಬ್ದದಂತೆ ಅವರ ಶಬ್ದವು ಕೇಳುತ್ತದೆ.
ಬೆಂಕಿಯ ಜ್ವಾಲೆಗಳು ಹೊಟ್ಟನ್ನು ಸುಡುವಂತೆ
    ಅವರ ಶಬ್ದವು ಕೇಳುತ್ತದೆ.
ಬಲಿಷ್ಠರಾದ ಅವರು ಯುದ್ಧಕ್ಕೆ ಸಿದ್ಧರಾಗಿದ್ದಾರೆ.
ಈ ಸೈನ್ಯವನ್ನು ನೋಡುವ ಜನರು ಹೆದರಿ ನಡುಗುವರು;
    ಅವರ ಮುಖಗಳು ಕಂಗೆಡುವದು.

ಆ ಸೈನಿಕರು ವೇಗವಾಗಿ ಓಡುವರು;
    ಗೋಡೆ ಹತ್ತುವರು,
ನೇರವಾಗಿ ಮುಂದೆ ಹೋಗುವರು.
    ದಾರಿಯಿಂದ ಅತ್ತಿತ್ತ ಹೋಗರು;
ಒಬ್ಬರಮೇಲೊಬ್ಬರು ಬೀಳದೆ ಪ್ರತಿಯೊಬ್ಬ ಸೈನಿಕನು
    ತನ್ನ ದಾರಿಯಲ್ಲಿಯೇ ಮುಂದುವರಿಯುವನು.
ಒಬ್ಬ ಸೈನಿಕನಿಗೆ ಗಾಯವಾಗಿ ಬಿದ್ದರೂ
    ಉಳಿದವರು ನಿಲ್ಲದೆ ಮುಂದಕ್ಕೆ ನುಗ್ಗುತ್ತಾ ಇರುವರು.
ಅವರು ಪಟ್ಟಣದ ಕಡೆಗೆ
    ಓಡಿ ತ್ವರೆಯಾಗಿ ಗೋಡೆ ಹತ್ತುವರು.
ಮನೆಯೊಳಗೆ ನುಗ್ಗುವರು;
    ಕಳ್ಳರಂತೆ ಕಿಟಕಿಯಿಂದ ನುಸುಳುವರು.
10 ಅವರ ಮುಂದೆ ಭೂಮಿಯೂ ಆಕಾಶವೂ ನಡುಗುವುದು;
    ಸೂರ್ಯಚಂದ್ರರು ಕಪ್ಪಾಗಿಹೋಗುವರು; ನಕ್ಷತ್ರಗಳು ಹೊಳಪನ್ನು ಕಳೆದುಕೊಳ್ಳುವುದು.
11 ಯೆಹೋವನು ತನ್ನ ಸೈನ್ಯವನ್ನು ಮಹಾಧ್ವನಿಯಿಂದ ಕರೆಯುತ್ತಾನೆ.
    ಆತನ ಶಿಬಿರವು ದೊಡ್ಡದಾಗಿದೆ.
ಆ ಸೈನ್ಯವು ಆತನ ಆಜ್ಞೆಯನ್ನು ಪಾಲಿಸುತ್ತದೆ;
    ಆ ಸೈನ್ಯವು ಮಹಾ ಬಲಿಷ್ಠವಾಗಿದೆ.
ಯೆಹೋವನ ಮಹಾದಿನವು ಮಹಾ ಭಯಂಕರವಾದ ದಿನವಾಗಿದೆ.
    ಅದನ್ನು ಸಹಿಸಲು ಯಾರಿಗೂ ಸಾಧ್ಯವಿಲ್ಲ.

ಜನರು ಬದಲಾಗಬೇಕೆಂದು ಯೆಹೋವನು ಹೇಳುತ್ತಾನೆ

12 ಇದು ಯೆಹೋವನ ಸಂದೇಶ:
    “ನಿಮ್ಮ ಪೂರ್ಣಹೃದಯದಿಂದ ನನ್ನ ಬಳಿಗೆ ಬನ್ನಿರಿ,
ನೀವು ದುಷ್ಟತ್ವವನ್ನು ನಡಿಸಿರುವದರಿಂದ ದುಃಖಿಸಿರಿ,
    ಅಳಿರಿ, ಉಪವಾಸ ಮಾಡಿರಿ.
13 ನಿಮ್ಮ ಬಟ್ಟೆಗಳನ್ನಲ್ಲ,
    ಹೃದಯವನ್ನು ಹರಿಯಿರಿ.”
ನಿಮ್ಮ ದೇವರಾದ ಯೆಹೋವನ ಬಳಿಗೆ ಬನ್ನಿರಿ.
    ಆತನು ದಯಾಪರನೂ ಕನಿಕರವುಳ್ಳವನೂ ಆಗಿದ್ದಾನೆ.
ಆತನು ಬೇಗನೆ ಕೋಪಿಸುವುದಿಲ್ಲ.
    ಆತನಲ್ಲಿ ಆಳವಾದ ಪ್ರೀತಿ ಇದೆ.
ಆತನು ಯೋಚಿಸಿದ ಶಿಕ್ಷೆಯನ್ನು ಒಂದುವೇಳೆ ನಿಮಗೆ ಕೊಡದೆ
    ತನ್ನ ಮನಸ್ಸನ್ನು ಬದಲಾಯಿಸಬಹುದು.
14 ಒಂದುವೇಳೆ ಯೆಹೋವನು ತನ್ನ ಮನಸ್ಸನ್ನು ಬದಲಾಯಿಸಿದರೂ ಬದಲಾಯಿಸಬಹುದು.
    ಒಂದುವೇಳೆ ಆತನು ನಿಮಗಾಗಿ ಆಶೀರ್ವಾದವನ್ನು ಬಿಟ್ಟುಹೋಗಬಹುದು.
ಆಗ ನೀವು ದೇವರಾದ ಯೆಹೋವನಿಗೆ ಧಾನ್ಯ
    ಮತ್ತು ಪಾನಸಮರ್ಪಣೆ ಮಾಡುವಿರಿ.

ಯೆಹೋವನಿಗೆ ಪ್ರಾರ್ಥಿಸಿರಿ

15 ಚೀಯೋನಿನಲ್ಲಿ ತುತ್ತೂರಿ ಊದಿರಿ.
    ವಿಶೇಷ ಕೂಟಕ್ಕಾಗಿ ಜನರನ್ನು ಕೂಡಿಸಿರಿ.
    ಉಪವಾಸದ ದಿನ ಗೊತ್ತುಮಾಡಿರಿ.
16 ವಿಶೇಷ ಕೂಟಕ್ಕಾಗಿ
    ಜನರನ್ನು ಒಟ್ಟಾಗಿ ಕೂಡಿಸಿರಿ.
ಪ್ರಾಯಸ್ಥರನ್ನು ಕೂಡಿಸಿರಿ.
    ಮಕ್ಕಳನ್ನೂ ಕೂಡಿಸಿರಿ.
    ಮೊಲೆಹಾಲು ಕುಡಿಯುವ ಶಿಶುಗಳನ್ನೂ ಒಟ್ಟಾಗಿ ಸೇರಿಸಿರಿ.
ವಧುವರರು ತಮ್ಮ
    ಶೋಭನದ ಕೋಣೆಯಿಂದ ಹೊರಬರಲಿ.
17 ಯೆಹೋವನ ಸೇವಕರಾದ ಯಾಜಕರು
    ಮಂಟಪಕ್ಕೂ ವೇದಿಕೆಗೂ ಮಧ್ಯದಲ್ಲಿ ಗೋಳಾಡಲಿ.
ಆ ಜನರೆಲ್ಲಾ ಹೀಗೆ ಹೇಳಬೇಕು, “ಯೆಹೋವನೇ, ನಿನ್ನ ಜನರ ಮೇಲೆ ಕರುಣೆ ಇಡು,
    ನಿನ್ನ ಜನರನ್ನು ನಾಚಿಕೆಗೆ ತುತ್ತಾಗುವಂತೆ ಮಾಡಬೇಡ.
    ನಿನ್ನ ಜನರ ವಿಷಯವಾಗಿ ಅನ್ಯಜನರು ಗೇಲಿ ಮಾಡದಿರಲಿ.
ಇತರ ದೇಶದ ಜನರು ನಮಗೆ ಹಾಸ್ಯ ಮಾಡುತ್ತಾ,
    ‘ಅವರ ದೇವರು ಎಲ್ಲಿ?’ ಎಂದು ಹೇಳದ ಹಾಗೆ ಮಾಡು.”

ಯೆಹೋವನು ದೇಶವನ್ನು ಸುಸ್ಥಿತಿಗೆ ತರುವನು

18 ಆಗ ಯೆಹೋವನು ತನ್ನ ದೇಶದ ಬಗ್ಗೆ ಆಸಕ್ತಿ ತೋರಿಸಿದನು.
    ತನ್ನ ಜನರ ಬಗ್ಗೆ ದುಃಖಿಸಿದನು.
19 ಯೆಹೋವನು ತನ್ನ ಜನರೊಂದಿಗೆ ಮಾತನಾಡಿ ಹೀಗೆ ಹೇಳಿದನು:
“ನಾನು ನಿಮಗೆ ಧಾನ್ಯ, ದ್ರಾಕ್ಷಾರಸ, ಎಣ್ಣೆಯನ್ನು ಕಳುಹಿಸುವೆನು.
    ನಿಮಗೆ ಬೇಕಾದಷ್ಟು ಇರುವದು.
    ಅನ್ಯ ಜನಾಂಗದವರೆದುರು ನಿಮ್ಮನ್ನು ಇನ್ನು ಮುಂದೆ ನಾಚಿಕೆಗೆ ಗುರಿಪಡಿಸುವುದಿಲ್ಲ.
20 ಉತ್ತರದಿಂದ ಬಂದ ದಂಡನ್ನು ನಿಮ್ಮ ದೇಶದಿಂದ ಹೊರಡಿಸುವೆನು.
    ಅವರನ್ನು ಒಣ ಬೆಂಗಾಡಿಗೆ ಕಳುಹಿಸುವೆನು.
ಅವರಲ್ಲಿ ಕೆಲವರು ಪೂರ್ವದ ಸಮುದ್ರಕ್ಕೆ ಹೋಗುವರು,
    ಕೆಲವರು ಪಶ್ಚಿಮದ ಸಮುದ್ರಕ್ಕೆ ಹೋಗುವರು.
ಅವರು ಭಯಂಕರ ಕೃತ್ಯಗಳನ್ನು ಮಾಡಿದುದರಿಂದ
    ಸತ್ತು ಕೊಳೆಯುವ ಸ್ಥಿತಿಗೆ ಬರಮಾಡುವೆನು.
ಆಗ ಭಯಂಕರ ಹೊಲಸು ವಾಸನೆ ಇರುವದು.”

ದೇಶವು ಹೊಸತಾಗಿ ಮಾಡಲ್ಪಡುವದು

21 ದೇಶವೇ, ಭಯಪಡದಿರು.
    ಯೆಹೋವನು ಮಹತ್ಕಾರ್ಯವನ್ನು ಮಾಡಲಿರುವದರಿಂದ
    ಸಂತೋಷದಿಂದ ಆನಂದಿಸು.
22 ಅಡವಿಯಲ್ಲಿರುವ ಪ್ರಾಣಿಗಳೇ, ಭಯಪಡಬೇಡಿ.
    ಮರುಭೂಮಿಯು ಹುಲ್ಲುಗಾವಲಾಗುವದು.
ಮರಗಳು ಹಣ್ಣುಗಳನ್ನು ಬಿಡುವವು.
    ಅಂಜೂರದ ಮರಗಳೂ ದ್ರಾಕ್ಷಿಬಳ್ಳಿಗಳೂ ಬಹಳ ಹಣ್ಣುಗಳನ್ನು ಬಿಡುವವು.

23 ಆದ್ದರಿಂದ ಚೀಯೋನಿನ ಜನರೇ, ಸಂತೋಷಪಡಿರಿ.
    ನಿಮ್ಮ ದೇವರಾದ ಯೆಹೋವನಲ್ಲಿ ಸಂತೋಷಿಸಿರಿ.
ಆತನು ನಿಮಗೆ ಮಳೆ ಸುರಿಸುವನು.
    ಹಿಂದಿನಂತೆ ನಿಮಗೆ ಮುಂಗಾರು, ಹಿಂಗಾರು ಮಳೆಗಳನ್ನು ಸುರಿಸುವನು.
24 ಕಣಜಗಳು ಗೋದಿಯಿಂದ ತುಂಬಿರುವವು.
    ಪಿಪಾಯಿಗಳು ಎಣ್ಣೆಯಿಂದಲೂ ದ್ರಾಕ್ಷಾರಸದಿಂದಲೂ ತುಂಬಿತುಳುಕುವವು.
25 “ಯೆಹೋವನಾದ ನಾನು ನಿಮಗೆ ವಿರುದ್ಧವಾಗಿ ನನ್ನ ಸೈನ್ಯವನ್ನು ಕಳುಹಿಸಿದೆನು.
    ಮಿಡತೆಗಳ ಗುಂಪು, ದೊಡ್ಡ ಮಿಡತೆ,
    ನಾಶಮಾಡುವ ಮಿಡತೆ, ಹಾರುವ ಮಿಡತೆ, ಚೂರಿ ಮಿಡತೆಗಳು ಬಂದು ನಿಮಗಿದ್ದದ್ದನ್ನೆಲ್ಲಾ ತಿಂದುಬಿಟ್ಟವು.
ಆದರೆ ಯೆಹೋವನಾದ ನಾನು ನಿಮ್ಮ ಸಂಕಟಕಾಲಕ್ಕೆ ಬದಲಾಗಿ
    ಸುಭಿಕ್ಷ ಕಾಲವನ್ನು ದಯಪಾಲಿಸುವೆನು.
26 ಆಗ ನಿಮಗೆ ತಿನ್ನಲು ಏನೂ ಕಡಿಮೆ ಇರುವುದಿಲ್ಲ.
    ನೀವು ಸಂತೃಪ್ತರಾಗುವಿರಿ.
ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ.
    ಆತನು ನಿಮಗೆ ಆಶ್ಚರ್ಯವಾದ ಕಾರ್ಯವನ್ನು ಮಾಡಿದ್ದಾನೆ.
ನನ್ನ ಜನರು ಇನ್ನು ಮುಂದೆ ಎಂದೂ ನಾಚಿಕೆಗೆ ಗುರಿಯಾಗರು.
27 ಇಸ್ರೇಲರೊಂದಿಗೆ ನಾನು ಇದ್ದೇನೆ ಎಂದು ನೀವು ತಿಳಿಯುವಿರಿ.
    ನಿಮ್ಮ ದೇವರಾದ ಯೆಹೋವನು ನಾನೇ ಎಂದು ನೀವು ತಿಳಿಯುವಿರಿ.
    ನನ್ನ ಹೊರತು ಬೇರೆ ದೇವರುಗಳಿಲ್ಲ.
ನನ್ನ ಜನರು ಇನ್ನು ಮುಂದೆ ನಾಚಿಕೆಗೆ ಗುರಿಯಾಗುವುದಿಲ್ಲ.”

ದೇವರು ಎಲ್ಲಾ ಜನರ ಮೇಲೆ ತನ್ನ ಆತ್ಮವನ್ನು ಸುರಿಸುವನು

28 “ಆ ಬಳಿಕ ನಾನು
    ನನ್ನ ಆತ್ಮವನ್ನು ಎಲ್ಲಾ ತರದ ಜನರ ಮೇಲೆ ಸುರಿಸುವೆನು.
ನಿಮ್ಮ ಗಂಡುಹೆಣ್ಣು ಮಕ್ಕಳು ಪ್ರವಾದಿಸುವರು.
    ನಿಮ್ಮ ವೃದ್ಧರು ಕನಸು ಕಾಣುವರು.
    ನಿಮ್ಮ ಯುವಕರಿಗೆ ದರ್ಶನಗಳಾಗುವವು.
29 ಆ ಸಮಯದಲ್ಲಿ ಸೇವಕಸೇವಕಿಯರ ಮೇಲೆಯೂ
    ನನ್ನ ಆತ್ಮವನ್ನು ಸುರಿಸುವೆನು.
30 ಭೂಮ್ಯಾಕಾಶಗಳಲ್ಲಿ ವಿಚಿತ್ರ ಸಂಗತಿಗಳನ್ನು ನಾನು ತೋರಿಸುವೆನು.
    ಅಲ್ಲಿ ರಕ್ತ, ಬೆಂಕಿ ಮತ್ತು ದಟ್ಟವಾದ ಹೊಗೆಯು ಇರುವುದು.
31 ಸೂರ್ಯನು ಕತ್ತಲಾಗುವನು,
    ಚಂದ್ರನು ರಕ್ತದಂತಾಗುವನು.
    ಆಗ ಯೆಹೋವನ ಭಯಂಕರ ದಿನವು ಬರುವುದು.
32 ಆಗ ಯೆಹೋವನ ಹೆಸರನ್ನು ಹೇಳಿಕೊಳ್ಳುವವರೆಲ್ಲರೂ ರಕ್ಷಿಸಲ್ಪಡುವರು.
    ಚೀಯೋನ್ ಪರ್ವತದಲ್ಲಿಯೂ ಜೆರುಸಲೇಮಿನಲ್ಲಿಯೂ ರಕ್ಷಿಸಲ್ಪಟ್ಟ ಜನರಿರುವರು.
    ಯೆಹೋವನು ಹೇಳಿದ ಪ್ರಕಾರವೇ ಇದು ಆಗುವುದು.
ಉಳಿದ ಜನರಲ್ಲಿ ಯೆಹೋವನು ಕರೆದಿರುವ
    ಜನರು ಸೇರಿಕೊಂಡಿರುವರು.

ಕೀರ್ತನೆಗಳು 142

ದಾವೀದನು ಗುಹೆಯಲ್ಲಿದ್ದಾಗ ಮಾಡಿದ ಪ್ರಾರ್ಥನೆ. ರಚನೆಗಾರ: ದಾವೀದ.

142 ನಾನು ಯೆಹೋವನಿಗೆ ಮೊರೆಯಿಡುವೆನು;
    ಯೆಹೋವನನ್ನು ಕೂಗಿಕೊಳ್ಳುವೆನು.
ನನ್ನ ಕಷ್ಟಗಳನ್ನೂ ಚಿಂತೆಗಳನ್ನೂ
    ಆತನಿಗೆ ಅರಿಕೆಮಾಡಿಕೊಳ್ಳುವೆನು.
ನನ್ನ ವೈರಿಗಳು ನನಗೆ ಉರುಲನ್ನು ಒಡ್ಡಿದ್ದಾರೆ.
    ನನ್ನ ಆತ್ಮವು ಕುಂದಿಹೋಗಿದೆ.
    ನನ್ನ ಮಾರ್ಗವನ್ನು ತಿಳಿದಿರುವಾತನು ನೀನೇ.

ನಾನು ಸುತ್ತಮುತ್ತ ನೋಡಿದರೂ
    ನನ್ನ ಸ್ನೇಹಿತರಲ್ಲಿ ಯಾರೂ ಕಾಣುತ್ತಿಲ್ಲ.
ಓಡಿಹೋಗಲು ನನಗೆ ಯಾವ ಸ್ಥಳವೂ ಇಲ್ಲ.
    ನನ್ನನ್ನು ರಕ್ಷಿಸಲು ಯಾರೂ ಪ್ರಯತ್ನಿಸುತ್ತಿಲ್ಲ.
ಆದ್ದರಿಂದ ಯೆಹೋವನನ್ನು ಕೂಗಿಕೊಳ್ಳುವೆನು.
    ನನ್ನ ಆಶ್ರಯಸ್ಥಾನವೂ ನೀನೇ,
    ನನ್ನನ್ನು ಬದುಕಿಸಬಲ್ಲಾತನೂ ನೀನೇ ಎಂದು ಆತನಿಗೆ ಮೊರೆಯಿಡುವೆನು.
ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
    ನೀನು ನನಗೆ ಬೇಕೇಬೇಕು.
ನನ್ನನ್ನು ಬೆನ್ನಟ್ಟುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
    ಅವರು ನನಗಿಂತ ಬಹು ಬಲಿಷ್ಠರಾಗಿದ್ದಾರೆ.
ಈ ಉರುಲಿನಿಂದ ಪಾರಾಗಲು ನನಗೆ ಸಹಾಯಮಾಡು.
    ಯೆಹೋವನೇ, ಆಗ ನಾನು ನಿನ್ನ ಹೆಸರನ್ನು ಕೊಂಡಾಡುವೆನು.
ನೀನು ನನ್ನನ್ನು ಕಾಪಾಡಿದ್ದರಿಂದ
    ನೀತಿವಂತರು ನನ್ನೊಂದಿಗೆ ಕೊಂಡಾಡುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International