M’Cheyne Bible Reading Plan
ಸಮಾರ್ಯದ ನಾಯಕರಿಗೆ ಯೇಹು ಬರೆಯುವನು
10 ಸಮಾರ್ಯದಲ್ಲಿ ಅಹಾಬನಿಗೆ ಎಪ್ಪತ್ತು ಮಂದಿ ಮಕ್ಕಳಿದ್ದರು. ಯೇಹುವು ಇಜ್ರೇಲಿನ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಪತ್ರಗಳನ್ನು ಬರೆದು ಸಮಾರ್ಯಕ್ಕೆ ಕಳುಹಿಸಿದನು. ಅಹಾಬನ ಮಕ್ಕಳನ್ನು ಬೆಳೆಸಿದ ಪಾಲಕರಿಗೂ ಅವನು ಪತ್ರಗಳನ್ನು ಕಳುಹಿಸಿದನು. ಯೇಹುವು ಪತ್ರಗಳಲ್ಲಿ, 2-3 “ನಿಮ್ಮ ಕೈಗೆ ಈ ಪತ್ರವು ತಲುಪಿದ ತಕ್ಷಣ, ನಿಮ್ಮ ಒಡೆಯನ ಕುಟುಂಬದಲ್ಲಿ ಬಹಳ ಉತ್ತಮನಾದ ಮತ್ತು ಸಮರ್ಥನಾದ ಒಬ್ಬ ವ್ಯಕ್ತಿಯನ್ನು ಆರಿಸಿರಿ. ನಿಮ್ಮ ಬಳಿ ರಥಗಳೂ ಕುದುರೆಗಳೂ ಇವೆ. ನೀವು ಬಲಾಢ್ಯವಾದ ನಗರದಲ್ಲಿ ವಾಸಿಸುತ್ತಿರುವಿರಿ. ನಿಮ್ಮ ಬಳಿ ಆಯುಧಗಳಿವೆ. ನೀವು ಆರಿಸಿದವನನ್ನು ಅವನ ತಂದೆಯ ಸಿಂಹಾಸನದ ಮೇಲೆ ಕುಳ್ಳಿರಿಸಿರಿ. ನಂತರ ನಿಮ್ಮ ಯಜಮಾನನ ಕುಟುಂಬಕ್ಕಾಗಿ ಹೋರಾಡಿ” ಎಂದು ಬರೆದಿದ್ದನು.
4 ಆದರೆ ಇಜ್ರೇಲಿನ ಅಧಿಕಾರಿಗಳು ಮತ್ತು ನಾಯಕರು ಬಹಳ ಭಯಗೊಂಡಿದ್ದರು. ಅವರು, “ಇಬ್ಬರು ರಾಜರು (ಯೋರಾವ್ ಮತ್ತು ಅಹಜ್ಯ) ಯೇಹುವನ್ನು ತಡೆಯಲಾಗಲಿಲ್ಲ. ನಾವು ಅವನನ್ನು ತಡೆಯಲಾಗುವುದಿಲ್ಲ” ಎಂದು ಹೇಳಿದರು.
5 ಅಹಾಬನ ಮನೆಯನ್ನು ನೋಡಿಕೊಳ್ಳುವ ಗೃಹಾಧಿಕಾರಿ, ನಗರವನ್ನು ನಿಯಂತ್ರಿಸುವ ನಗರಾಧಿಕಾರಿ, ಹಿರಿಯರು ಮತ್ತು ಅಹಾಬನ ಮಕ್ಕಳ ಪಾಲಕರಾದ ಜನರೆಲ್ಲರೂ ಯೇಹುವಿಗೆ ಈ ಸಂದೇಶವನ್ನು ಕಳುಹಿಸಿದರು: “ನಾವು ನಿನ್ನ ಸೇವಕರು. ನೀನು ನಮಗೆ ಹೇಳುವುದನ್ನೆಲ್ಲಾ ನಾವು ಮಾಡುತ್ತೇವೆ. ನಾವು ಯಾರನ್ನೂ ರಾಜನನ್ನಾಗಿ ಮಾಡುವುದಿಲ್ಲ. ನಿನಗೆ ಒಳ್ಳೆಯದೆಂದು ತೋಚಿದ್ದನ್ನು ಮಾಡು.”
ಸಮಾರ್ಯದ ನಾಯಕರು ಅಹಾಬನ ಮಕ್ಕಳನ್ನು ಕೊಂದುಹಾಕುವರು
6 ನಂತರ ಯೇಹು ಈ ನಾಯಕರಿಗೆ ಎರಡನೆಯ ಪತ್ರವನ್ನು ಬರೆದನು. ಯೇಹುವು, “ನೀವು ನನಗೆ ಬೆಂಬಲ ಕೊಡುವುದಾದರೆ ಮತ್ತು ವಿಧೇಯರಾಗಿರುವುದಾದರೆ ಅಹಾಬನ ಮಕ್ಕಳ ತಲೆಗಳನ್ನು ಕತ್ತರಿಸಿ ಹಾಕಿ. ನಾಳೆ ಇದೇ ಸಮಯಕ್ಕೆ ಇಜ್ರೇಲಿಗೆ ನನ್ನ ಬಳಿಗೆ ಅವುಗಳನ್ನು ತನ್ನಿ.”
ಅಹಾಬನಿಗೆ ಎಪ್ಪತ್ತು ಮಂದಿ ಮಕ್ಕಳಿದ್ದರು. ಅವರು ತಮ್ಮ ಪಾಲಕರಾದ ನಗರದ ನಾಯಕರ ಬಳಿಯಲ್ಲಿದ್ದರು. 7 ನಗರದ ನಾಯಕರಿಗೆ ಈ ಪತ್ರವು ಬಂದು ತಲುಪಿದಾಗ, ಅವರು ರಾಜನ ಎಪ್ಪತ್ತುಮಂದಿ ಮಕ್ಕಳನ್ನು ಕರೆದುಕೊಂಡು ಹೋಗಿ ಕೊಂದುಹಾಕಿದರು. ನಂತರ ಆ ನಾಯಕರು ರಾಜನ ಮಕ್ಕಳ ತಲೆಗಳನ್ನು ಬುಟ್ಟಿಗಳಲ್ಲಿ ಹಾಕಿ ಇಜ್ರೇಲಿನಲ್ಲಿದ್ದ ಯೇಹುವಿನ ಬಳಿಗೆ ಕಳುಹಿಸಿದರು. 8 ಸಂದೇಶಕನೊಬ್ಬನು ಯೇಹುವಿನ ಬಳಿಗೆ ಬಂದು ಅವನಿಗೆ, “ಅವರು ರಾಜನ ಮಕ್ಕಳ ತಲೆಗಳನ್ನು ತಂದಿದ್ದಾರೆ!” ಎಂದು ಹೇಳಿದನು.
ಆಗ ಯೇಹು, “ನಗರದ ಬಾಗಿಲಿನ ಬಳಿ ನಾಳೆ ಮುಂಜಾನೆಯ ತನಕ ಆ ತಲೆಗಳನ್ನು ಎರಡು ರಾಶಿಗಳನ್ನಾಗಿ ಹಾಕಿ” ಎಂದು ಹೇಳಿದನು.
9 ಮುಂಜಾನೆ, ಯೇಹು ಹೊರಗೆ ಬಂದು ಜನರ ಮುಂದೆ ನಿಂತು ಅವರಿಗೆ, “ನೀವು ನಿರಪರಾಧಿಗಳು. ನಾನಾದರೋ ನನ್ನ ಒಡೆಯನ ಮೇಲೆ ಒಳಸಂಚು ಮಾಡಿದವನು. ನಾನು ಅವನನ್ನು ಕೊಂದೆನು. ಆದರೆ ಅಹಾಬನ ಮಕ್ಕಳನ್ನೆಲ್ಲ ಕೊಂದವರು ಯಾರು? ನೀವು ಅವರನ್ನು ಕೊಂದಿದ್ದೀರಿ! 10 ಯೆಹೋವನು ಹೇಳಿದ್ದೆಲ್ಲವೂ ಸಂಭವಿಸುತ್ತದೆ ಎಂಬುದನ್ನು ನೀವು ತಿಳಿದಿರಬೇಕು. ಅಹಾಬನ ಕುಟುಂಬಕ್ಕೆ ಇವುಗಳು ಸಂಭವಿಸುತ್ತವೆಯೆಂದು ಯೆಹೋವನು ಎಲೀಯನ ಮೂಲಕ ತಿಳಿಸಿದ್ದನು. ಅಂತೆಯೇ ಆತನು ಮಾಡಿದ್ದಾನೆ” ಅಂದನು.
11 ಇಜ್ರೇಲಿನಲ್ಲಿ ವಾಸಿಸುತ್ತಿದ್ದ ಅಹಾಬನ ಕುಟುಂಬದ ಉಳಿದವರನ್ನೆಲ್ಲ ಯೇಹು ಕೊಂದುಹಾಕಿದನು. ಅಹಾಬನ ಆಪ್ತಮಿತ್ರರು, ಯಾಜಕರು ಮತ್ತು ಪ್ರಮುಖರನ್ನೆಲ್ಲ ಯೇಹುವು ಕೊಂದುಹಾಕಿದನು. ಅಹಾಬನ ಜನರಲ್ಲಿ ಯಾರನ್ನೂ ಉಳಿಸಲಿಲ್ಲ.
ಅಹಜ್ಯನ ಬಂಧುಗಳನ್ನು ಯೇಹು ಕೊಂದುಹಾಕುವನು
12 ಯೇಹು ಇಜ್ರೇಲನ್ನು ಬಿಟ್ಟು ಸಮಾರ್ಯಕ್ಕೆ ಹೋದನು. ಯೇಹುವು ದಾರಿಯಲ್ಲಿ ಕುರುಬರ ಪಾಳ್ಯವೆಂದು ಕರೆಯುವ ಸ್ಥಳದಲ್ಲಿ ತಂಗಿದನು. ಅವನು ಬೆತ್‌ಎಕೇಡ್‌ನ ರಸ್ತೆಯಲ್ಲಿ, ಕುರುಬರು ಕುರಿಗಳಿಂದ ತುಪ್ಪಟವನ್ನು ಕತ್ತರಿಸುವ ಒಂದು ಮನೆಗೆ ಹೋದನು. 13 ಯೇಹು ಯೆಹೂದದ ರಾಜನಾದ ಅಹಜ್ಯನ ಬಂಧುಗಳನ್ನು ಭೇಟಿಮಾಡಿ ಅವರಿಗೆ, “ನೀವು ಯಾರು?” ಎಂದು ಕೇಳಿದನು.
ಅವರು, “ನಾವು ಯೆಹೂದದ ರಾಜನಾದ ಅಹಜ್ಯನ ಬಂಧುಗಳು. ನಾವು ರಾಜನ ಮಕ್ಕಳನ್ನು ಮತ್ತು ರಾಜಮಾತೆಯ ಮಕ್ಕಳನ್ನು ನೋಡಲು ಬಂದಿದ್ದೇವೆ” ಎಂದರು.
14 ಆಗ ಯೇಹುವು ತನ್ನ ಜನರಿಗೆ, “ಅವರನ್ನು ಜೀವಸಹಿತ ಹಿಡಿದು ತನ್ನಿ!” ಎಂದು ಹೇಳಿದನು.
ಯೇಹುವಿನ ಜನರು ಅಹಜ್ಯನ ಬಂಧುಗಳನ್ನು ಜೀವಸಹಿತ ಹಿಡಿದು ತಂದರು. ಅಲ್ಲಿ ನಲವತ್ತೆರಡು ಮಂದಿ ಜನರಿದ್ದರು. ಯೇಹು ಬೆತ್‌ಎಕೇಡ್‌ನ ಬಾವಿಯ ಹತ್ತಿರ ಅವರನ್ನು ಕೊಂದುಹಾಕಿದನು. ಯೇಹುವು ಯಾರನ್ನೂ ಜೀವಸಹಿತ ಉಳಿಸಲಿಲ್ಲ.
ಯೇಹು ಯೆಹೋನಾದಾಬನನ್ನು ಸಂಧಿಸಿದನು
15 ಯೇಹುವು ಅಲ್ಲಿಂದ ಹೋದ ಮೇಲೆ, ರೇಕಾಬನ ಮಗನಾದ ಯೆಹೋನಾದಾಬನನ್ನು ಸಂಧಿಸಿದನು. ಯೆಹೋನಾದಾಬನು ಯೇಹುವನ್ನು ಸಂಧಿಸಲು ಬರುತ್ತಿದ್ದನು. ಯೇಹು ಯೆಹೋನಾದಾಬನನ್ನು ಅಭಿನಂದಿಸಿ ಅವನಿಗೆ, “ನಾನು ನಿನಗೆ ನಂಬಿಗಸ್ತನಾಗಿರುವಂತೆ ನೀನು ನನಗೆ ನಂಬಿಗಸ್ಥನಾದ ಸ್ನೇಹಿತನಾಗಿರುವಿಯಾ?” ಎಂದು ಕೇಳಿದನು.
ಯೆಹೋನಾದಾಬನು, “ಹೌದು, ನಾನು ನಿನಗೆ ನಂಬಿಗಸ್ಥನಾದ ಸ್ನೇಹಿತನು” ಎಂದು ಉತ್ತರಿಸಿದನು.
ಯೇಹು, “ನೀನು ನಂಬಿಗಸ್ಥನಾದರೆ, ನಿನ್ನ ಕೈಯನ್ನು ಕೊಡು” ಎಂದನು.
ನಂತರ ಯೇಹು ಹೊರಬಂದು, ಯೆಹೋನಾದಾಬನನ್ನು ರಥದೊಳಕ್ಕೆ ಎಳೆದುಕೊಂಡನು.
16 ಯೇಹು, “ನನ್ನ ಸಂಗಡ ಬಾ. ಯೆಹೋವನಲ್ಲಿ ನನಗಿರುವ ಆಸಕ್ತಿಯನ್ನು ನೀನು ನೋಡುವಿಯಂತೆ” ಎಂದು ಹೇಳಿದನು.
ಯೇಹುವಿನ ರಥದಲ್ಲಿ ಯೆಹೋನಾದಾಬನೂ ಹೋದನು. 17 ಯೇಹು ಸಮಾರ್ಯಕ್ಕೆ ಬಂದು, ಅಹಾಬನ ಕುಟುಂಬದಲ್ಲಿ ಜೀವಸಹಿತರಾಗಿ ಸಮಾರ್ಯದಲ್ಲಿ ಉಳಿದಿದ್ದವರನ್ನೆಲ್ಲಾ ಕೊಂದುಹಾಕಿದನು. ಯೆಹೋವನು ಎಲೀಯನಿಗೆ ಹೇಳಿದ್ದಂತೆಯೇ ಯೇಹು ಮಾಡಿದನು.
ಯೇಹು ಬಾಳನ ಭಕ್ತರನ್ನು ಕರೆದನು
18 ಯೇಹು ಜನರನ್ನೆಲ್ಲ ಒಟ್ಟಾಗಿ ಸೇರಿಸಿ, “ಅಹಾಬನು ಬಾಳನನ್ನು ಸ್ವಲ್ಪ ಮಾತ್ರ ಸೇವಿಸಿದನು. ಆದರೆ ಯೇಹು ಬಾಳನನ್ನು ಅಧಿಕವಾಗಿ ಸೇವಿಸುತ್ತಾನೆ! 19 ಬಾಳನ ಎಲ್ಲಾ ಯಾಜಕರನ್ನೂ ಪ್ರವಾದಿಗಳನ್ನೂ ಕರೆಯಿರಿ. ಬಾಳನನ್ನು ಆರಾಧಿಸುವ ಜನರೆಲ್ಲರನ್ನೂ ಒಟ್ಟಾಗಿ ಕರೆಯಿರಿ. ಯಾರೂ ಈ ಸಭೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ. ನಾನು ಬಾಳನಿಗೆ ಮಹಾಯಜ್ಞವನ್ನು ಅರ್ಪಿಸಬೇಕೆಂದಿದ್ದೇನೆ. ಈ ಸಭೆಗೆ ಯಾರಾದರೂ ಬಾರದೆ ಇದ್ದರೆ ಅವರನ್ನು ನಾನು ಕೊಂದುಹಾಕುತ್ತೇನೆ!” ಎಂದು ಹೇಳಿದನು.
ಆದರೆ ಅದು ಯೇಹುವಿನ ತಂತ್ರವಾಗಿತ್ತು. ಬಾಳನ ಭಕ್ತರನ್ನು ನಾಶಪಡಿಸಬೇಕೆಂಬುದೇ ಅವನ ಅಪೇಕ್ಷೆಯಾಗಿತ್ತು. 20 ಯೇಹುವು, “ಬಾಳನಿಗೆ ಒಂದು ಪವಿತ್ರ ಸಭೆಯನ್ನು ಸೇರಿಸಿರಿ” ಎಂದು ಹೇಳಿದನು. 21 ಬಳಿಕ ಅವನು ಇಸ್ರೇಲಿನ ಪ್ರದೇಶದಲ್ಲೆಲ್ಲಾ ಒಂದು ಸಂದೇಶವನ್ನು ಕಳುಹಿಸಿದನು. ಬಾಳನ ಆರಾಧಕರೆಲ್ಲರೂ ಬಂದರು. ಮನೆಯಲ್ಲಿ ಯಾರೂ ಉಳಿಯಲಿಲ್ಲ. ಬಾಳನ ಆರಾಧಕರೆಲ್ಲ ಬಾಳನ ಆಲಯಕ್ಕೆ ಬಂದರು. ಜನರಿಂದ ಆಲಯವು ತುಂಬಿಹೋಯಿತು.
22 ಯೇಹು ನಿಲುವಂಗಿಗಳ ಮೇಲ್ವಿಚಾರಕನಿಗೆ, “ಬಾಳನ ಭಕ್ತರಿಗೆಲ್ಲ ನಿಲುವಂಗಿಗಳನ್ನು ತಂದುಕೊಡು” ಎಂದು ಹೇಳಿದನು. ಅವನು ಬಾಳನ ಭಕ್ತರಿಗೆ ನಿಲುವಂಗಿಗಳನ್ನು ತಂದುಕೊಟ್ಟನು.
23 ಆಗ ಯೇಹು ಮತ್ತು ರೇಕಾಬನ ಮಗನಾದ ಯೆಹೋನಾದಾಬನು ಬಾಳನ ಆಲಯದೊಳಕ್ಕೆ ಹೋದರು. ಯೇಹು ಬಾಳನ ಭಕ್ತರಿಗೆ, “ಯೆಹೋವನ ಸೇವಕರು ಯಾರೂ ನಿಮ್ಮೊಡನೆ ಇಲ್ಲವೆಂಬುದನ್ನು ಸುತ್ತಲೂ ನೋಡಿ ಖಚಿತಪಡಿಸಿಕೊಳ್ಳಿ. ಬಾಳನ ಭಕ್ತರಾದ ಜನರು ಮಾತ್ರ ಇಲ್ಲಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಿ” ಎಂದು ಹೇಳಿದನು. 24 ಬಾಳನ ಆರಾಧಕರು ಯಜ್ಞಗಳನ್ನು ಮತ್ತು ಸರ್ವಾಂಗಹೋಮಗಳನ್ನು ಅರ್ಪಿಸಲು ಬಾಳನ ಆಲಯದೊಳಕ್ಕೆ ಹೋದರು.
ಆದರೆ ಹೊರಗಡೆ ಯೇಹುವಿನ ಎಂಭತ್ತು ಜನರು ಕಾಯುತ್ತಿದ್ದರು. ಯೇಹು ಅವರಿಗೆ, “ಯಾರೂ ತಪ್ಪಿಸಿಕೊಂಡು ಹೋಗಲು ಬಿಡಬೇಡಿ. ಯಾರಾದರೂ ಒಬ್ಬ ಮನುಷ್ಯನನ್ನು ತಪ್ಪಿಸಿಕೊಂಡು ಹೋಗಲು ಬಿಟ್ಟರೆ, ಅವನು ತನ್ನ ಜೀವವನ್ನು ಬೆಲೆಯಾಗಿ ಕೊಡಬೇಕಾಗುತ್ತದೆ” ಎಂದು ಹೇಳಿದನು.
25 ಯೇಹುವು ಸರ್ವಾಂಗಹೋಮಗಳನ್ನು ಅರ್ಪಿಸಿದ ತಕ್ಷಣ, ಕಾವಲುಗಾರರಿಗೂ ಸೇನಾಧಿಪತಿಗಳಿಗೂ, “ಒಳಕೋಣೆಗೆ[a] ಹೋಗಿ ಬಾಳನ ಆರಾಧಕರನ್ನೆಲ್ಲ ಕೊಂದುಹಾಕಿ! ಜೀವಸಹಿತ ಯಾರೂ ಆಲಯದಿಂದ ಹೊರಕ್ಕೆ ಬರಲು ಬಿಡಬೇಡಿ!” ಎಂದು ಹೇಳಿದನು.
ಸೇನಾಧಿಪತಿಗಳು ಚೂಪಾದ ಖಡ್ಗದಿಂದ ಬಾಳನ ಭಕ್ತರನ್ನೆಲ್ಲ ಕೊಂದುಹಾಕಿದರು. ಬಾಳನ ಭಕ್ತರ ದೇಹಗಳನ್ನು ಕಾವಲುಗಾರರು ಮತ್ತು ಸೇನಾಧಿಪತಿಗಳು ಹೊರಕ್ಕೆ ಎಸೆದರು. ನಂತರ ಆ ಕಾವಲುಗಾರರು ಮತ್ತು ಸೇನಾಧಿಪತಿಗಳು ಬಾಳನ ಆಲಯದ ಒಳಕೋಣೆಯನ್ನು ಪ್ರವೇಶಿಸಿದರು. 26 ಅವರು ಬಾಳನ ಆಲಯದಲ್ಲಿದ್ದ ಸ್ಮಾರಕಸ್ತಂಭಗಳನ್ನು ಹೊರತಂದು, ಆಲಯವನ್ನು ಸುಟ್ಟುಹಾಕಿದರು. ನಂತರ ಅವರು ಬಾಳನ ಸ್ಮಾರಕಸ್ತಂಭಗಳನ್ನು ಚೂರುಚೂರು ಮಾಡಿದರು. 27 ಬಾಳನ ಆಲಯವನ್ನೂ ಅವರು ಹಾಳುಗೆಡವಿದರು. ಅವರು ಬಾಳನ ಆಲಯವನ್ನು ಶೌಚಗೃಹವನ್ನಾಗಿ ಮಾಡಿದರು. ಇಂದೂ ಸಹ ಅದನ್ನು ಶೌಚಗೃಹವಾಗಿ ಬಳಸುತ್ತಾರೆ.
28 ಯೇಹುವು ಇಸ್ರೇಲಿನಲ್ಲಿ ಬಾಳನ ಪೂಜೆಯನ್ನು ನಿಲ್ಲಿಸಿದನು. 29 ಆದರೂ ಇಸ್ರೇಲಿನ ಪಾಪಗಳಿಗೆ ಪ್ರೇರಕನಾದ, ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಿಂದ ಯೇಹುವು ಸಂಪೂರ್ಣವಾಗಿ ವಿಮುಖನಾಗಲಿಲ್ಲ. ಬೇತೇಲ್ ಮತ್ತು ದಾನ್‌ಗಳಲ್ಲಿದ್ದ ಬಂಗಾರದ ಕರುಗಳನ್ನು ಯೇಹುವು ನಾಶಗೊಳಿಸಲಿಲ್ಲ.
ಇಸ್ರೇಲನ್ನು ಯೇಹು ಆಳುವನು
30 ಯೆಹೋವನು ಯೇಹುವಿಗೆ, “ನೀನು ಒಳ್ಳೆಯದನ್ನು ಮಾಡಿದೆ. ನಾನು ಒಳ್ಳೆಯದೆಂದು ಹೇಳಿದ್ದನ್ನೇ ನೀನು ಮಾಡಿದೆ. ನನ್ನ ಅಪೇಕ್ಷೆಯಂತೆ ನೀನು ಅಹಾಬನ ಕುಟುಂಬವನ್ನು ನಾಶಗೊಳಿಸಿದೆ. ಆದ್ದರಿಂದ ನಿನ್ನ ಸಂತತಿಯವರು ಇಸ್ರೇಲನ್ನು ನಾಲ್ಕು ತಲೆಮಾರುಗಳವರೆಗೆ ಆಳುತ್ತಾರೆ” ಎಂದು ಹೇಳಿದನು.
31 ಆದರೆ ಯೇಹು ಇಸ್ರೇಲಿನ ದೇವರಾದ ಯೆಹೋವನ ನಿಯಮಗಳನ್ನು ಪೂರ್ಣಮನಸ್ಸಿನಿಂದಲೂ ಎಚ್ಚರಿಕೆಯಿಂದಲೂ ಪಾಲಿಸಲಿಲ್ಲ. ಇಸ್ರೇಲಿನ ಪಾಪಗಳಿಗೆ ಪ್ರೇರಕನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ಮಾಡುವುದನ್ನು ನಿಲ್ಲಿಸಲೇ ಇಲ್ಲ.
ಹಜಾಯೇಲನು ಇಸ್ರೇಲನ್ನು ಸೋಲಿಸಿದನು
32 ಆ ಸಮಯದಲ್ಲಿ, ಯೆಹೋವನು ಇಸ್ರೇಲಿನ ಭಾಗಗಳನ್ನು ಕುಗ್ಗಿಸತೊಡಗಿದನು. ಅರಾಮ್ಯರ ರಾಜನಾದ ಹಜಾಯೇಲನು ಇಸ್ರೇಲಿನ ಪ್ರತಿಯೊಂದು ಗಡಿಯಲ್ಲಿಯೂ ಇಸ್ರೇಲರನ್ನು ಸೋಲಿಸುತ್ತಿದ್ದನು. 33 ಹಜಾಯೇಲನು ಜೋರ್ಡನ್ ನದಿಯ ಪೂರ್ವಕ್ಕಿರುವ ಪ್ರದೇಶವನ್ನೆಲ್ಲ ಗೆದ್ದುಕೊಂಡನು. ಅವನು ಗಾದ್, ರೂಬೇನ್ ಮತ್ತು ಮನಸ್ಸೆ ಕುಲಗಳಿಗೆ ಸೇರಿದ ಎಲ್ಲಾ ಪ್ರದೇಶವನ್ನು, ಗಿಲ್ಯಾದ್‌ನ ಎಲ್ಲಾ ಪ್ರದೇಶವನ್ನು ಗೆದ್ದನು. ಹಜಾಯೇಲನು ಆರ್ನೋನ್ ಕಣಿವೆಯಿಂದ ಗಿಲ್ಯಾದ್, ಬಾಷಾನ್‌ವರೆಗಿನ ಅರೋಯೇರ್ ಪ್ರದೇಶವನ್ನೆಲ್ಲ ಗೆದ್ದುಕೊಂಡನು.
ಯೇಹುವಿನ ಸಾವು
34 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೇಹು ಮಾಡಿದ ಇತರ ಉತ್ತಮಕಾರ್ಯಗಳನ್ನೆಲ್ಲ ಬರೆಯಲಾಗಿದೆ. 35 ಯೇಹು ಸತ್ತುಹೋದನು. ಅವನನ್ನು ಅವನ ಪೂರ್ವಿಕರ ಬಳಿ ಸಮಾರ್ಯದಲ್ಲಿ ಸಮಾಧಿಮಾಡಿದರು. ಯೇಹುವಿನ ನಂತರ ಅವನ ಮಗನಾದ ಯೇಹೋವಾಹಾಜನು ಇಸ್ರೇಲಿನ ನೂತನ ರಾಜನಾದನು. 36 ಯೇಹುವು ಸಮಾರ್ಯದಲ್ಲಿ ಇಸ್ರೇಲನ್ನು ಇಪ್ಪತ್ತೆಂಟು ವರ್ಷ ಆಳಿದನು.
1 ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ತಿಮೊಥೆಯನಿಗೆ ಬರೆಯುವ ಪತ್ರ. ದೇವರ ಚಿತ್ತಾನುಸಾರವಾಗಿ ನಾನು ಅಪೊಸ್ತಲನಾದೆನು. ಕ್ರಿಸ್ತ ಯೇಸುವಿನಲ್ಲಿರುವ ಜೀವ ವಾಗ್ದಾನವನ್ನು ಜನರಿಗೆ ತಿಳಿಯಪಡಿಸಲು ದೇವರು ನಮ್ಮನ್ನು ಕಳುಹಿಸಿದನು.
2 ತಿಮೊಥೆಯನೇ, ನೀನು ನನಗೆ ಪ್ರಿಯ ಮಗನಂತಿರುವೆ.
ತಂದೆಯಾದ ದೇವರಿಂದ ಮತ್ತು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಿಂದ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಲಭಿಸಲಿ.
ಕೃತಜ್ಞತಾಸ್ತುತಿ ಮತ್ತು ಪ್ರೋತ್ಸಾಹ
3 ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ತಪ್ಪದೆ ನಿನ್ನನ್ನು ಜ್ಞಾಪಿಸಿಕೊಂಡು ನಿನ್ನ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇನೆ. ನನ್ನ ಪೂರ್ವಿಕರು ಸೇವೆ ಸಲ್ಲಿಸಿದ್ದು ಆತನಿಗೇ. ಯೋಗ್ಯವಾದದ್ದೆಂದು ನನಗೆ ತಿಳಿದಿರುವುದನ್ನೇ ಮಾಡುತ್ತಾ ಆತನ ಸೇವೆ ಮಾಡುತ್ತಿದ್ದೇನೆ. 4 ನೀನು ನನಗಾಗಿ ಕಣ್ಣೀರು ಸುರಿಸಿದ್ದು ನನ್ನ ನೆನಪಿನಲ್ಲಿದೆ. ನಿನ್ನನ್ನು ನೋಡಬೇಕೆಂದು ಬಹಳ ಆಸೆಯಾಗಿದೆ. ನಿನ್ನನ್ನು ನೋಡಿದಾಗ ನನ್ನಲ್ಲಿ ಆನಂದವು ತುಂಬಿಹೋಗುವುದು. 5 ನಿನ್ನ ನಿಜವಾದ ನಂಬಿಕೆಯು ನನ್ನ ನೆನಪಿನಲ್ಲಿದೆ. ಆ ವಿಧವಾದ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಲ್ಲೂ ನಿನ್ನ ತಾಯಿಯಾದ ಯೂನಿಕೆಯಲ್ಲೂ ಇತ್ತು. ಈಗ ಅದೇ ನಂಬಿಕೆಯು ನಿನ್ನಲ್ಲಿಯೂ ಇದೆಯೆಂದು ನನಗೆ ತಿಳಿದಿದೆ. 6 ದೇವರು ನಿನಗೆ ದಯಪಾಲಿಸಿರುವ ವರವನ್ನು ನೀನು ನೆನಪು ಮಾಡಿಕೊಳ್ಳಬೇಕೆಂದು ನಾನು ಅಪೇಕ್ಷಿಸುವುದು ಈ ಕಾರಣದಿಂದಲೇ. ನಾನು ನನ್ನ ಕೈಗಳನ್ನು ನಿನ್ನ ಮೇಲಿಟ್ಟಾಗ ಆತನು ನಿನಗೆ ಆ ವರವನ್ನು ದಯಪಾಲಿಸಿದನು. ಬೆಂಕಿಯ ಕಿಡಿಯು ಪ್ರಜ್ವಲವಾಗಿ ದಟ್ಟವಾದ ಬೆಂಕಿಯಾಗುವಂತೆ ನಿನ್ನ ವರವನ್ನು ಉಪಯೋಗಿಸುತ್ತಾ ಅದನ್ನು ಅಧಿಕಗೊಳಿಸಬೇಕೆಂಬುದು ನನ್ನ ಅಪೇಕ್ಷೆ. 7 ದೇವರು ನಮಗೆ ಕೊಟ್ಟದ್ದು ನಮ್ಮನ್ನು ಹೇಡಿಗಳನ್ನಾಗಿ ಮಾಡುವ ಆತ್ಮವನ್ನಲ್ಲ. ನಮ್ಮನ್ನು ಬಲದಿಂದ, ಪ್ರೀತಿಯಿಂದ ಮತ್ತು ಸ್ವಶಿಕ್ಷಣದಿಂದ ತುಂಬಿಸುವ ಆತ್ಮವನ್ನು ಆತನು ಕೊಟ್ಟನು.
8 ನಮ್ಮ ಪ್ರಭುವಾದ ಯೇಸುವನ್ನು ಕುರಿತು ಜನರಿಗೆ ತಿಳಿಸುವುದಕ್ಕಾಗಲಿ ಪ್ರಭುವಿಗಾಗಿ ಸೆರೆಯಲ್ಲಿರುವ ನನ್ನ ವಿಷಯದಲ್ಲಾಗಲಿ ನಾಚಿಕೆಪಟ್ಟುಕೊಳ್ಳಬೇಡ. ಅದಕ್ಕೆ ಬದಲಾಗಿ ಸುವಾರ್ತೆಗೋಸ್ಕರ ನನ್ನೊಡನೆ ಸಂಕಟವನ್ನು ಅನುಭವಿಸು. ಅದಕ್ಕೆ ಬೇಕಾದ ಶಕ್ತಿಯನ್ನು ದೇವರೇ ನಮಗೆ ದಯಪಾಲಿಸುತ್ತಾನೆ.
9 ಆತನು ನಮ್ಮನ್ನು ರಕ್ಷಿಸಿ, ತನ್ನ ಪವಿತ್ರ ಜನರಾಗಿರುವುದಕ್ಕಾಗಿ ನಮ್ಮನ್ನು ಕರೆದನು. ನಾವು ಮಾಡಿದ ಒಳ್ಳೆಯ ಕಾರ್ಯಗಳಿಂದ ಹೀಗಾಯಿತು ಎಂದಲ್ಲ. ಆತನು ತನ್ನ ಸಂಕಲ್ಪಕ್ಕನುಸಾರವಾಗಿ ಮತ್ತು ಕೃಪೆಗನುಸಾರವಾಗಿ ನಮ್ಮನ್ನು ರಕ್ಷಿಸಿ ತನ್ನವರನ್ನಾಗಿ ಮಾಡಿದನು. ಅನಾದಿಕಾಲದಲ್ಲಿಯೇ ಈ ಕೃಪೆಯು ಕ್ರಿಸ್ತ ಯೇಸುವಿನ ಮೂಲಕ ನಮಗೆ ದೊರೆಯಿತು. 10 ಆ ಕೃಪೆಯನ್ನು ಈವರೆಗೆ ನಮಗೆ ತೋರ್ಪಡಿಸಿರಲಿಲ್ಲ. ನಮ್ಮ ರಕ್ಷಕನಾದ ಕ್ರಿಸ್ತ ಯೇಸು ಪ್ರತ್ಯಕ್ಷನಾದಾಗ ಅದನ್ನು ನಮಗೆ ತೋರಿಸಲಾಯಿತು. ಯೇಸು ಮರಣವನ್ನು ನಾಶಪಡಿಸಿ, ನಮಗೆ ಜೀವಮಾರ್ಗವನ್ನು ಸುವಾರ್ತೆಯ ಮೂಲಕ ತೋರಿದನು.
11 ಆ ಸುವಾರ್ತೆಗೋಸ್ಕರ ನನ್ನನ್ನು ಪ್ರಚಾರಕನನ್ನಾಗಿಯೂ ಅಪೊಸ್ತಲನನ್ನಾಗಿಯೂ ಉಪದೇಶಕನನ್ನಾಗಿಯೂ ಆರಿಸಿಕೊಳ್ಳಲಾಯಿತು. 12 ಸುವಾರ್ತೆಯನ್ನು ತಿಳಿಸಿದ್ದರಿಂದಲೇ ನಾನೀಗ ಸಂಕಟವನ್ನು ಅನುಭವಿಸುತ್ತಿದ್ದೇನೆ. ಆದರೆ ನಾನು ನಾಚಿಕೆಪಡುವುದಿಲ್ಲ. ನಾನು ನಂಬಿರುವಾತನನ್ನು ಬಲ್ಲೆನು. ಆತನು ನನ್ನ ವಶಕ್ಕೆ ಒಪ್ಪಿಸಿರುವುದನ್ನು ಆ ದಿನವು ಬರುವತನಕ ಸಂರಕ್ಷಿಸಲು ಆತನು ಸಮರ್ಥನೆಂಬುದನ್ನು ಖಚಿತವಾಗಿ ಬಲ್ಲೆನು.
13 ನನ್ನಿಂದ ಕೇಳಿರುವ ಸತ್ಯಬೋಧನೆಗಳನ್ನು ಅನುಸರಿಸು. ನೀನು ಏನನ್ನು ಉಪದೇಶ ಮಾಡಬೇಕೆಂಬುದಕ್ಕೆ ಆ ಬೋಧನೆಗಳೇ ನಿನಗೆ ದೃಷ್ಟಾಂತಗಳಾಗಿವೆ. 14 ನಿನ್ನ ವಶಕ್ಕೆ ಕೊಟ್ಟಿರುವ ಸತ್ಯವನ್ನು ಪವಿತ್ರಾತ್ಮನ ಸಹಾಯದಿಂದ ಸಂರಕ್ಷಿಸು. ಆತನು ನಮ್ಮೊಳಗೆ ವಾಸ ಮಾಡುತ್ತಿದ್ದಾನೆ.
15 ಏಷ್ಯಾ ದೇಶದಲ್ಲಿರುವವರೆಲ್ಲರೂ ನನ್ನನ್ನು ತೊರೆದಿರುವರೆಂಬುದು ನಿನಗೆ ತಿಳಿದಿದೆ. ಪುಗೇಲನೂ, ಹೆರ್ಮೊಗೇನನೂ ನನ್ನನ್ನು ತೊರೆದಿದ್ದಾರೆ. 16 ಪ್ರಭುವು ಒನೇಸಿಫ್ರೋರನ ಕುಟುಂಬಕ್ಕೆ ಕರುಣೆಯನ್ನು ತೋರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವನು ಅನೇಕ ಸಂದರ್ಭಗಳಲ್ಲಿ ನನಗೆ ಸಹಾಯ ಮಾಡಿದ್ದಾನೆ. ನಾನು ಸೆರೆಮನೆಯಲ್ಲಿದ್ದರೂ ಅವನು ನಾಚಿಕೆಪಟ್ಟುಕೊಳ್ಳಲಿಲ್ಲ. 17 ಅವನು ರೋಮಿಗೆ ಬಂದಾಗ, ಬಹಳ ಹುಡುಕಾಡಿ ನನ್ನನ್ನು ಸಂಧಿಸಿದನು. 18 ಆ ದಿನದಂದು ಒನೇಸಿಫೋರನು ಪ್ರಭುವಿನಿಂದ ಕರುಣೆಯನ್ನು ಪಡೆಯಲಿ ಎಂದು ನಾನು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇನೆ. ಎಫೆಸದಲ್ಲಿ ಅವನು ನನಗೆ ಎಷ್ಟು ವಿಧದಲ್ಲಿ ಸಹಾಯ ಮಾಡಿದನೆಂಬುದು ನಿನಗೆ ತಿಳಿದಿದೆ.
2 “ಆಗ ನೀವು ನಿಮ್ಮ ಸಹೋದರರಿಗೆ, ‘ನೀವು ನನ್ನ ಜನರು’ ಎಂದು ಹೇಳುವಿರಿ. ಮತ್ತು ನಿಮ್ಮ ಸಹೋದರಿಯರಿಗೆ, ‘ಆತನು ನಿಮ್ಮ ಮೇಲೆ ಕರುಣೆ ಇಟ್ಟಿರುತ್ತಾನೆ’ ಎಂದು ಹೇಳುವಿರಿ.
2 “ನಿಮ್ಮ ತಾಯಿಯೊಂದಿಗೆ ವಾದಿಸಿರಿ. ಯಾಕೆಂದರೆ ಆಕೆ ನನ್ನ ಹೆಂಡತಿಯಲ್ಲ. ನಾನು ಆಕೆಯ ಗಂಡನಲ್ಲ. ವೇಶ್ಯೆಯ ಹಾಗೆ ಆಕೆ ವರ್ತಿಸುವದನ್ನು ನಿಲ್ಲಿಸು ಎಂದು ಹೇಳಿರಿ. ಆಕೆಯ ಸ್ತನಗಳ ಮಧ್ಯದಿಂದ ಆಕೆಯ ಪ್ರಿಯತಮರನ್ನು ತೆಗೆದುಹಾಕಲು ಹೇಳಿರಿ. 3 ಆಕೆ ವ್ಯಭಿಚಾರ ಮಾಡುವದನ್ನು ನಿಲ್ಲಿಸದೆ ಹೋದರೆ ನಾನು ಆಕೆಯನ್ನು ಬೆತ್ತಲೆ ಮಾಡಿ, ಆಕೆ ಜನ್ಮ ತಾಳಿದಾಗ ಹೇಗೆ ಇದ್ದಳೋ ಹಾಗೆ ಮಾಡುವೆನು. ಆಕೆಯ ಜನರನ್ನು ಆಕೆಯಿಂದ ತೊಲಗಿಸಿ ಆಕೆಯನ್ನು ಒಣ ಮರುಭೂಮಿಯಂತೆ ಬೆಂಗಾಡಾಗಿ ಮಾಡುವೆನು. ಆಕೆ ಬಾಯಾರಿ ಸಾಯುವಂತೆ ಮಾಡುವೆನು. 4 ಆಕೆಯ ಮಕ್ಕಳನ್ನು ನಾನು ಕನಿಕರಿಸೆನು. ಯಾಕೆಂದರೆ ಅವರು ವ್ಯಭಿಚಾರದಿಂದ ಹುಟ್ಟಿದ ಮಕ್ಕಳು. 5 ಅವರ ತಾಯಿಯು ವೇಶ್ಯೆಯಂತೆ ವರ್ತಿಸಿದಳು. ತಾನು ನಡಿಸಿದ ಕೃತ್ಯಗಳಿಗಾಗಿ ಆಕೆ ನಾಚಿಕೆಪಡಬೇಕು. ಆಕೆಯು ಹೀಗೆಂದುಕೊಳ್ಳುತ್ತಿದ್ದಾಳೆ, ‘ನಾನು ನನ್ನ ಪ್ರಿಯತಮರ ಬಳಿಗೆ ಹೋಗುವೆನು. ಅವರು ನನಗೆ ಅನ್ನ ನೀರನ್ನು ಕೊಡುವರು. ನನಗೆ ಉಣ್ಣೆಯನ್ನೂ, ನಾರುಮಡಿಯನ್ನೂ ಕೊಡುವರು. ದ್ರಾಕ್ಷಾರಸ ಮತ್ತು ಆಲೀವ್ ಎಣ್ಣೆಯನ್ನೂ ಕೊಡುವರು.’
6 “ಅದಕ್ಕಾಗಿ ಯೆಹೋವನಾದ ನಾನು ಇಸ್ರೇಲರ ಮಾರ್ಗವನ್ನು ಮುಳ್ಳುಗಳಿಂದ ಮುಚ್ಚಿಬಿಡುವೆನು. ನಾನು ಗೋಡೆ ಕಟ್ಟುವೆನು. ಆಗ ಅವಳು ತನ್ನ ದಾರಿಯನ್ನು ಕಂಡುಕೊಳ್ಳಲಾರಳು. 7 ಆಕೆಯು ತನ್ನ ಪ್ರಿಯತಮರ ಹಿಂದೆ ಓಡಿಹೋದರೂ ಅವರನ್ನು ಹಿಡಿಯಲಾರಳು. ಆಕೆಯು ತನ್ನ ಪ್ರಿಯತಮರನ್ನು ಹುಡುಕುವಳು. ಆದರೆ ಅವರು ಆಕೆಗೆ ಸಿಗುವುದಿಲ್ಲ. ಆಗ ಆಕೆ ಹೀಗೆ ಹೇಳುವಳು, ‘ನಾನು ನನ್ನ ಮೊದಲನೇ ಪತಿಯ ಬಳಿಗೆ (ಯೆಹೋವನು) ಹೋಗುವೆನು. ನಾನು ಆತನೊಂದಿಗೆ ಇದ್ದಾಗ ನನ್ನ ಜೀವಿತವು ಎಷ್ಟೋ ಚೆನ್ನಾಗಿತ್ತು. ಈಗಿನ ನನ್ನ ಜೀವಿತಕ್ಕಿಂತ ಆಗಿನ ಜೀವಿತವು ಎಷ್ಟೋ ಮೇಲಾಗಿತ್ತು.’
8 “ಆಕೆಗೆ (ಇಸ್ರೇಲಿಗೆ) ನಾನು (ಯೆಹೋವನು) ಧಾನ್ಯ, ಎಣ್ಣೆ, ದ್ರಾಕ್ಷಾರಸವನ್ನು ಕೊಟ್ಟವನೆಂದು ತಿಳಿದಿಲ್ಲ. ಆಕೆಗೆ ಹೆಚ್ಚೆಚ್ಚಾಗಿ ಬೆಳ್ಳಿಬಂಗಾರಗಳನ್ನು ಕೊಡುತ್ತಾ ಬಂದೆನು. ಆದರೆ ಆ ಬೆಳ್ಳಿಬಂಗಾರವನ್ನು ಇಸ್ರೇಲ್ ಬಾಳನ ವಿಗ್ರಹಗಳನ್ನು ತಯಾರಿಸಲು ಉಪಯೋಗಿಸಿದಳು. 9 ಆದ್ದರಿಂದ ನಾನು ಹಿಂತಿರುಗಿ ಬರುವೆನು. ನಾನು ಕೊಟ್ಟಿರುವ ಧಾನ್ಯವು ಕೊಯ್ಲಿಗೆ ತಯಾರಾದ ಅವಳಿಂದ ಅದನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ದ್ರಾಕ್ಷಿಹಣ್ಣು ಪಕ್ವವಾಗಿದ್ದಾಗ ನಾನು ಬಂದು ನನ್ನ ದ್ರಾಕ್ಷಾರಸವನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ನಾನು ಕೊಟ್ಟಿರುವ ಉಣ್ಣೆ ಮತ್ತು ನಾರಿನ ಬಟ್ಟೆಯನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ನಾನು ಅದನ್ನು ಅವಳಿಗೆ ತನ್ನ ಬೆತ್ತಲೆ ಶರೀರವನ್ನು ಮುಚ್ಚಿಕೊಳ್ಳುವದಕ್ಕೋಸ್ಕರ ಕೊಟ್ಟಿದ್ದೆನು. 10 ಈಗ ನಾನು ಆಕೆಯನ್ನು ಬಟ್ಟೆಯನ್ನು ಬಿಚ್ಚಿಹಾಕುವೆನು. ಆಕೆಯ ಬೆತ್ತಲೆತನವನ್ನು ಆಕೆಯ ಪ್ರಿಯತಮರೆಲ್ಲರೂ ನೋಡುವರು. ನನ್ನ ಕೈಯೊಳಗಿಂದ ಯಾರೂ ಆಕೆಯನ್ನು ರಕ್ಷಿಸಲಾರರು. 11 ನಾನು (ದೇವರು) ಆಕೆಯ ಉಲ್ಲಾಸಗಳನ್ನು ಅವಳಿಂದ ತೆಗೆಯುವೆನು. ಆಕೆಯ ಹಬ್ಬದ ದಿನಗಳು, ಅಮಾವಾಸ್ಯೆಯ ಹಬ್ಬ, ಸಬ್ಬತ್ ದಿನಗಳನ್ನು ಆಕೆಯಿಂದ ತೆಗೆದುಬಿಡುವೆನು. 12 ಆಕೆಯ ದ್ರಾಕ್ಷಾಲತೆಗಳನ್ನೂ ಅಂಜೂರದ ಮರಗಳನ್ನೂ ನಾಶಮಾಡುವೆನು. ‘ಇವುಗಳನ್ನು ನನ್ನ ಪ್ರಿಯತಮರು ನನಗೆ ಕೊಟ್ಟರು’ ಎಂದು ಆಕೆ ಹೇಳುತ್ತಾಳೆ. ಆದರೆ ನಾನು ಆಕೆಯ ತೋಟವನ್ನೇ ಬದಲಾಯಿಸುವೆನು. ಅದು ದಟ್ಟ ಅಡವಿಯಂತೆ ಆಗುವದು. ಅದರಲ್ಲಿದ್ದ ಮರಗಳ ಹಣ್ಣನ್ನು ಕಾಡುಪ್ರಾಣಿಗಳು ಬಂದು ತಿನ್ನುವವು.
13 “ಆಕೆಯು ಬಾಳನ ಸೇವೆಮಾಡಿದ್ದುದರಿಂದ ನಾನು ಆಕೆಯನ್ನು ಶಿಕ್ಷಿಸುವೆನು. ಬಾಳನಿಗೆ ಆಕೆ ಧೂಪ ಹಾಕಿದಳು. ಆಕೆ ವಸ್ತ್ರಾಭರಣಗಳಿಂದ ಭೂಷಿತಳಾಗಿ ಮೂಗುತಿಯನ್ನು ಧರಿಸಿಕೊಂಡು ತನ್ನ ಪ್ರೇಮಿಗಳ ಬಳಿಗೆ ಹೋದಳು. ನನ್ನನ್ನು ಮರೆತುಬಿಟ್ಟಳು.” ಇದು ಯೆಹೋವನು ಹೇಳಿದ ಮಾತು.
14 “ಆದ್ದರಿಂದ ನಾನು (ಯೆಹೋವನು) ಆಕೆಯೊಂದಿಗೆ ಸರಸ ಸಲ್ಲಾಪವಾಡುವೆನು. ಆಕೆಯನ್ನು ಮರುಭೂಮಿಗೆ ನಡೆಸಿ ಆಕೆಯೊಂದಿಗೆ ನಯನುಡಿಗಳಿಂದ ಮಾತಾಡುವೆನು. 15 ಅಲ್ಲಿ ಆಕೆಗೆ ನಾನು ದ್ರಾಕ್ಷಿತೋಟಗಳನ್ನು ಕೊಡುವೆನು. ಆಕೆಗೆ ಆಕೋರ್ ತಗ್ಗುಪ್ರದೇಶವನ್ನು ನಿರೀಕ್ಷೆಯ ಬಾಗಿಲಾಗಿ ಕೊಡುವೆನು. ಆಗ ಅವಳು ತಾನು ಈಜಿಪ್ಟಿನಿಂದ ಹೊರಬಂದ ತನ್ನ ಯೌವನದ ದಿನಗಳಲ್ಲಿ ಹೇಗೆ ನನ್ನ ಸಂಗಡ ಮಾತನಾಡಿದಳೋ ಹಾಗೆಯೇ ನನ್ನೊಂದಿಗೆ ಮಾತನಾಡುವಳು.” 16 ಇವು ಯೆಹೋವನ ಮಾತುಗಳು.
“ಆಗ ನನ್ನನ್ನು ನೀನು ‘ನನ್ನ ಗಂಡ’ ಎಂದು ಕರೆಯುವೆ. ‘ನನ್ನ ಬಾಳನು’ ಎಂದು ಕರೆಯುವದಿಲ್ಲ. 17 ನಾನು ಆಕೆಯ ಬಾಯಿಯಿಂದ ಬಾಳ್ ದೇವರುಗಳ ಹೆಸರನ್ನು ತೆಗೆದುಬಿಡುವೆನು. ಆಮೇಲೆ ಜನರು ಎಂದಿಗೂ ಬಾಳನ ಹೆಸರೆನ್ನೆತ್ತುವದಿಲ್ಲ.
18 “ಆ ಸಮಯದಲ್ಲಿ ನಾನು ಇಸ್ರೇಲರಿಗೋಸ್ಕರವಾಗಿ ಅಡವಿಯ ಮೃಗಗಳೊಂದಿಗೂ ಆಕಾಶದ ಪಕ್ಷಿಗಳೊಂದಿಗೂ ನೆಲದ ಮೇಲೆ ಹರಿದಾಡುವ ಜಂತುಗಳೊಂದಿಗೂ ಒಡಂಬಡಿಕೆ ಮಾಡುವೆನು. ನಾನು ಯುದ್ಧದ ಆಯುಧ, ಬಿಲ್ಲು, ಖಡ್ಗಗಳನ್ನು ತುಂಡು ಮಾಡುವೆನು. ಆ ದೇಶದೊಳಗೆ ಯಾವ ಆಯುಧವೂ ಇರದು. ಆಗ ಇಸ್ರೇಲಿನ ಜನರು ನಿಶ್ಟಿಂತೆಯಿಂದ ಮಲಗುವರು. 19 ಆಗ ನಾನು (ಯೆಹೋವನು) ನಿನ್ನನ್ನು ಒಳ್ಳೆಯತನದಿಂದಲೂ ನ್ಯಾಯದಿಂದಲೂ ಪ್ರೀತಿಯಿಂದಲೂ ಕರುಣೆಯಿಂದಲೂ ಕೂಡಿರುವ ನಿರಂತರವಾದ ವಧುವನ್ನಾಗಿ ಮಾಡುವೆನು. 20 ನಿನ್ನನ್ನು ನಾನು ನನ್ನ ನಂಬಿಗಸ್ತಳಾದ ವಧುವನ್ನಾಗಿ ಮಾಡುವೆನು. ಆಗ ನೀನು ನನ್ನನ್ನು ನಿಜವಾಗಿಯೂ ಅರಿತುಕೊಳ್ಳುವೆ. 21 ಆಗ ನಾನು ನಿನಗೆ ಪ್ರತಿಕ್ರಿಯೆ ತೋರ್ಪಡಿಸುವೆನು.” ಇದು ಯೆಹೋವನು ಹೇಳಿದ ಮಾತು:
“ನಾನು ಆಕಾಶದೊಂದಿಗೆ ಮಾತಾಡಲು
ಅದು ಭೂಮಿಯ ಮೇಲೆ ಮಳೆಗರೆಯುವದು.
22 ಭೂಮಿಯು ಧಾನ್ಯ, ದ್ರಾಕ್ಷಾರಸ, ಎಣ್ಣೆಯನ್ನು ಕೊಡುವದು.
ಇಜ್ರೇಲಿನ ಅವಶ್ಯಕತೆಗಳನ್ನು ಅವು ದೊರಕಿಸುವದು.
23 ಆಕೆಯ ದೇಶದಲ್ಲಿ ನಾನು ಬೀಜ ಬಿತ್ತುವೆನು.
ನಾನು ಲೋರುಹಾಮಳಿಗೆ ಕರುಣೆ ತೋರುವೆನು.
ಲೋ ಅಮ್ಮಿಗೆ ನಾನು, ‘ನೀವು ನನ್ನ ಜನರು’ ಎಂದು ಹೇಳುವೆನು.
ಆಗ ಅವರು, ‘ನೀನು ನಮ್ಮ ದೇವರು’ ಎಂದು ಹೇಳುವರು.”
97 ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ;
ದಿನವೆಲ್ಲಾ ಅವುಗಳನ್ನೇ ಧ್ಯಾನಿಸುವೆನು.
98 ನಿನ್ನ ಆಜ್ಞೆಗಳು ನನ್ನನ್ನು ನನ್ನ ಶತ್ರುಗಳಿಗಿಂತಲೂ ಹೆಚ್ಚು ಜ್ಞಾನಿಯನ್ನಾಗಿ ಮಾಡುತ್ತವೆ.
ಅವು ಯಾವಾಗಲೂ ನನ್ನೊಂದಿಗಿವೆ.
99 ನಿನ್ನ ಒಡಂಬಡಿಕೆಯನ್ನು ನಾನು ಧ್ಯಾನಿಸುತ್ತಿರುವುದರಿಂದ
ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ.
100 ನಾನು ನಿನ್ನ ಆಜ್ಞೆಗಳನ್ನು ಅನುಸರಿಸುವುದರಿಂದ
ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.
101 ನನ್ನ ಪಾದಗಳು ಕೆಟ್ಟದಾರಿಗೆ ಹೋಗದಂತೆ ನನ್ನನ್ನು ಕಾಪಾಡು,
ಆಗ, ನಾನು ನಿನ್ನ ವಾಕ್ಯವನ್ನೇ ಅನುಸರಿಸುವೆನು.
102 ನೀನೇ ನನ್ನ ಉಪಾಧ್ಯಾಯ.
ಆದ್ದರಿಂದ ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿಯೇ ಇರುವೆನು.
103 ನಿನ್ನ ನುಡಿಗಳು ನನ್ನ ಬಾಯಲ್ಲಿ
ಜೇನಿಗಿಂತಲೂ ಸಿಹಿಯಾಗಿವೆ.
104 ನಿನ್ನ ಉಪದೇಶಗಳು ನನ್ನನ್ನು ಜ್ಞಾನಿಯನ್ನಾಗಿ ಮಾಡುತ್ತವೆ,
ಆದ್ದರಿಂದ ನಾನು ದುರುಪದೇಶಗಳನ್ನು ದ್ವೇಷಿಸುವೆನು.
105 ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ
ದಾರಿಗೆ ಬೆಳಕೂ ಆಗಿದೆ.
106 ನಿನ್ನ ವಿಧಿನಿಯಮಗಳು ಒಳ್ಳೆಯವೇ.
ಅವುಗಳಿಗೆ ವಿಧೇಯನಾಗಿರುವುದಾಗಿ ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
107 ಯೆಹೋವನೇ, ನಾನು ಬಹುಕಾಲ ಸಂಕಟಪಟ್ಟಿದ್ದೇನೆ;
ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
108 ಯೆಹೋವನೇ, ನನ್ನ ಸ್ತೋತ್ರವನ್ನು ಸ್ವೀಕರಿಸು.
ನಿನ್ನ ವಿಧಿನಿಯಮಗಳನ್ನು ನನಗೆ ಉಪದೇಶಿಸು.
109 ನನ್ನ ಪ್ರಾಣವು ಯಾವಾಗಲೂ ಅಪಾಯದಲ್ಲಿದೆ.
ಆದರೂ ನಾನು ನಿನ್ನ ಉಪದೇಶಗಳನ್ನು ಮರೆತುಬಿಟ್ಟಿಲ್ಲ.
110 ದುಷ್ಟರು ನನಗೆ ಬಲೆಯೊಡ್ಡಿದ್ದಾರೆ.
ನಾನಾದರೋ ನಿನ್ನ ವಿಧಿನಿಯಮಗಳಿಗೆ ಅವಿಧೇಯನಾಗಲಿಲ್ಲ.
111 ನಿನ್ನ ಕಟ್ಟಳೆಗಳನ್ನು ಎಂದೆಂದಿಗೂ ನಿತ್ಯಸ್ವಾಸ್ತ್ಯವನ್ನಾಗಿ ಆರಿಸಿಕೊಂಡಿದ್ದೇನೆ.
ಅವು ನನ್ನ ಹೃದಯಕ್ಕೆ ಆನಂದಕರವಾಗಿವೆ.
112 ನಿನ್ನ ಕಟ್ಟಳೆಗಳಿಗೆಲ್ಲಾ ಯಾವಾಗಲೂ
ವಿಧೇಯನಾಗಿರಲು ಮನಸ್ಸುಮಾಡಿದ್ದೇನೆ.
113 ನಿನಗೆ ಪೂರ್ಣವಾಗಿ ನಂಬಿಗಸ್ತರಾಗಿಲ್ಲದವರನ್ನು ದ್ವೇಷಿಸುವೆನು.
ನಾನಾದರೋ ನಿನ್ನ ಉಪದೇಶಗಳನ್ನು ಪ್ರೀತಿಸುವೆನು.
114 ನನ್ನ ಆಶ್ರಯವೂ ಗುರಾಣಿಯೂ ನೀನೇ.
ಯೆಹೋವನೇ, ನಿನ್ನ ವಾಕ್ಯದಲ್ಲಿ ಭರವಸವಿಟ್ಟಿರುವೆ.
115 ಕೆಡುಕರನ್ನು ನನ್ನ ಬಳಿಗೆ ಬರಗೊಡಿಸಬೇಡ.
ಆಗ ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
116 ನಿನ್ನ ವಾಗ್ದಾನಕ್ಕನುಸಾರವಾಗಿ ನನಗೆ ಸಹಾಯಮಾಡು, ಆಗ ನಾನು ಬದುಕಿಕೊಳ್ಳುವೆ.
ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ನನ್ನನ್ನು ನಿರಾಶೆಗೊಳಿಸಬೇಡ.
117 ನನಗೆ ಸಹಾಯಮಾಡು, ಆಗ ನಾನು ರಕ್ಷಿಸಲ್ಪಡುವೆನು.
ನಾನು ನಿನ್ನ ಕಟ್ಟಳೆಗಳನ್ನು ಯಾವಾಗಲೂ ಕಲಿಯುತ್ತಿರುವೆನು.
118 ನಿನ್ನ ಕಟ್ಟಳೆಗಳನ್ನು ಅನುಸರಿಸದವರನ್ನು ನೀನು ತಳ್ಳಿಬಿಡುವೆ.
ಯಾಕೆಂದರೆ, ಅವರು ನಿನಗೆ ದ್ರೋಹ ಮಾಡಿದರು.
119 ಭೂಮಿಯ ಮೇಲಿರುವ ದುಷ್ಟರನ್ನು ನೀನು ಕಸದಂತೆ ಕಾಣುವೆ.
ಆದ್ದರಿಂದ ನಾನು ನಿನ್ನ ಒಡಂಬಡಿಕೆಯನ್ನು ಸದಾಕಾಲ ಪ್ರೀತಿಸುವೆನು.
120 ನಾನು ನಿನ್ನಲ್ಲಿ ಭಯವುಳ್ಳವನಾಗಿದ್ದೇನೆ.
ನಾನು ನಿನ್ನ ತೀರ್ಪುಗಳಿಗೆ ಅಂಜಿಕೊಂಡಿದ್ದೇನೆ.
Kannada Holy Bible: Easy-to-Read Version. All rights reserved. © 1997 Bible League International