Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 7

ಎಲೀಷನು ಅವನಿಗೆ, “ಯೆಹೋವನ ಸಂದೇಶವನ್ನು ಕೇಳು: ‘ನಾಳೆ ಇದೇ ಸಮಯಕ್ಕೆ, ಅಧಿಕವಾದ ಆಹಾರವು ಬಹಳ ಕಡಿಮೆ ಬೆಲೆಗೆ ಸಿಗುತ್ತದೆ. ಒಂದು ರೂಪಾಯಿಗೆ ಒಂದು ಬುಟ್ಟಿ ಹಿಟ್ಟನ್ನೂ ಎರಡು ಬುಟ್ಟಿ ಜವೆಗೋಧಿಯನ್ನೂ ಸಮಾರ್ಯನಗರದ ಊರ ಬಾಗಿಲಿನಲ್ಲಿರುವ ಮಾರುಕಟ್ಟೆಯಲ್ಲಿ ಮಾರಲಾಗುವುದು’” ಎಂದನು.

ಆಗ ರಾಜನಿಗೆ ಆಪ್ತನಾಗಿದ್ದ ಅಧಿಕಾರಿಯು ದೇವಮನುಷ್ಯನಿಗೆ, “ಯೆಹೋವನು ಪರಲೋಕಕ್ಕೆ ಕಿಟಕಿಗಳನ್ನು ಮಾಡಿಸಿದರೂ ಇದು ಸಂಭವಿಸುವುದಿಲ್ಲ!” ಎಂದು ಉತ್ತರಿಸಿದನು.

ಎಲೀಷನು, “ನೀನು ನಿನ್ನ ಸ್ವಂತ ಕಣ್ಣುಗಳಿಂದಲೇ ಇದನ್ನು ನೋಡುವೆ. ಆದರೆ ಆ ಆಹಾರದಲ್ಲಿ ಯಾವುದನ್ನೂ ನೀನು ತಿನ್ನುವುದಿಲ್ಲ” ಎಂದನು.

ಅರಾಮ್ಯರ ಪಾಳೆಯವು ಬರಿದಾಗಿರುವುದನ್ನು ಕುಷ್ಠರೋಗಿಗಳು ಕಂಡುಹಿಡಿದರು

ನಗರದ ಬಾಗಿಲಿನ ಹತ್ತಿರ ನಾಲ್ಕು ಮಂದಿ ಕುಷ್ಠರೋಗಿಗಳಿದ್ದರು. ಅವರು, “ನಾವು ಸಾಯುವುದನ್ನೇ ಕಾಯುತ್ತಾ ಕುಳಿತಿರುವುದೇಕೆ? ಸಮಾರ್ಯದಲ್ಲಿ ಆಹಾರವು ಇಲ್ಲವೇ ಇಲ್ಲ. ನಾವು ನಗರದ ಒಳಗೆ ಹೋದರೆ, ನಾವು ಅಲ್ಲೇ ಸಾಯುತ್ತೇವೆ. ನಾವು ಇಲ್ಲೇ ಕುಳಿತಿದ್ದರೂ, ಸಾಯುವುದು ನಿಶ್ಚಿತ. ಆದ್ದರಿಂದ ನಾವು ಅರಾಮ್ಯರ ಪಾಳೆಯಕ್ಕೆ ಹೋಗೋಣ. ಅವರು ನಮ್ಮನ್ನು ಬದುಕಿಸಿದರೆ ನಾವು ಬದುಕೋಣ. ಅವರು ನಮ್ಮನ್ನು ಕೊಂದರೆ ಸಾಯೋಣ” ಎಂದು ಮಾತನಾಡಿಕೊಂಡರು.

ಅಂದು ಸಂಜೆ ಆ ನಾಲ್ವರು ಕುಷ್ಠರೋಗಿಗಳು ಅರಾಮ್ಯರ ಪಾಳೆಯಕ್ಕೆ ಹೋದರು. ಅವರು ಪಾಳೆಯದ ಹೊರ ಅಂಚಿಗೆ ಬಂದರು. ಅಲ್ಲಿ ಜನರೇ ಇರಲಿಲ್ಲ! ಅರಾಮ್ಯರ ಸೇನೆಯು ರಥಗಳ, ಕುದುರೆಗಳ ಮತ್ತು ಮಹಾಸೇನೆಯ ರಣಘೋಷವನ್ನು ಕೇಳುವಂತೆ ಯೆಹೋವನು ಮಾಡಿದ್ದನು. ಅರಾಮ್ಯ ಸೈನಿಕರು, “ಇಸ್ರೇಲಿನ ರಾಜನು, ಹಿತ್ತೀಯರಿಗೆ ಮತ್ತು ಈಜಿಪ್ಟಿನವರಿಗೆ ಹಣಕೊಟ್ಟು ನಮ್ಮ ವಿರುದ್ಧ ಹೋರಾಟಕ್ಕೆ ಬರುವಂತೆ ಮಾಡಿದ್ದಾನೆ” ಎಂದು ಮಾತನಾಡಿಕೊಂಡು,

ಸಂಜೆಗೆ ಮುಂಚೆಯೇ ಓಡಿಹೋಗಿದ್ದರು. ಅವರು ಎಲ್ಲವನ್ನೂ ಅಲ್ಲಿಯೇ ಬಿಟ್ಟುಹೋಗಿದ್ದರು. ಅವರು ತಮ್ಮ ಗುಡಾರಗಳನ್ನು, ಕುದುರೆಗಳನ್ನು, ಹೇಸರಕತ್ತೆಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಜೀವರಕ್ಷಣೆಗಾಗಿ ಓಡಿಹೋಗಿದ್ದರು.

ಅರಾಮ್ಯರ ಪಾಳೆಯದಲ್ಲಿ ಕುಷ್ಠರೋಗಿಗಳು

ಈ ಕುಷ್ಠರೋಗಿಗಳು ಪಾಳೆಯವು ಆರಂಭವಾಗಿದ್ದಲ್ಲಿಗೆ ಬಂದು, ಒಂದು ಗುಡಾರದೊಳಕ್ಕೆ ಹೋದರು. ಅವರು ಅಲ್ಲಿ ತಿಂದರು ಮತ್ತು ಕುಡಿದರು. ನಂತರ ಈ ನಾಲ್ವರು ಬೆಳ್ಳಿಬಂಗಾರಗಳನ್ನು ಮತ್ತು ಬಟ್ಟೆಗಳನ್ನು ಪಾಳೆಯದಿಂದ ಹೊರಗೆ ತೆಗೆದುಕೊಂಡು ಹೋದರು. ಅವರು ಬೆಳ್ಳಿಬಂಗಾರಗಳನ್ನು ಮತ್ತು ಬಟ್ಟೆಗಳನ್ನು ಅಡಗಿಸಿಟ್ಟರು. ನಂತರ ಅವರು ಹಿಂದಿರುಗಿ ಬಂದು, ಮತ್ತೊಂದು ಗುಡಾರವನ್ನು ಪ್ರವೇಶಿಸಿದರು. ಆ ಗುಡಾರದಿಂದಲೂ ಅವರು ವಸ್ತುಗಳನ್ನು ಕೊಂಡೊಯ್ದರು. ಅವರು ಹೊರಗೆ ಹೋಗಿ ಅವುಗಳನ್ನು ಅಡಗಿಸಿಟ್ಟರು. ಆಗ ಆ ಕುಷ್ಠರೋಗಿಗಳು, “ನಾವು ತಪ್ಪು ಮಾಡುತ್ತಿದ್ದೇವೆ! ಈ ದಿನ ನಮಗೆ ಶುಭವಾರ್ತೆ ಸಿಕ್ಕಿದೆ. ಆದರೆ ನಾವು ನಿಶಬ್ಧದಿಂದ ಇದ್ದೇವೆ. ಸೂರ್ಯನು ಮೇಲಕ್ಕೇರಿ ಬರುವವರೆಗೆ ನಾವು ಸುಮ್ಮನಿದ್ದರೆ ನಮ್ಮನ್ನು ದಂಡಿಸಲಾಗುವುದು. ಈಗ ನಾವು ರಾಜನ ಮನೆಗೆ ಹೋಗಿ ಅಲ್ಲಿ ವಾಸಿಸುವ ಜನರಿಗೆ ಇದನ್ನು ತಿಳಿಸೋಣ” ಎಂದು ಮಾತನಾಡಿಕೊಂಡರು.

ಕುಷ್ಠರೋಗಿಗಳು ತಿಳಿಸಿದ ಶುಭವಾರ್ತೆ

10 ಈ ಕುಷ್ಠರೋಗಿಗಳು ನಗರದ ಬಾಗಿಲಿಗೆ ಬಂದು ದ್ವಾರಪಾಲಕರನ್ನು ಕರೆದು, “ನಾವು ಅರಾಮ್ಯರ ಪಾಳೆಯಕ್ಕೆ ಹೋಗಿದ್ದೆವು. ಆದರೆ ನಾವು ಜನರ ಧ್ವನಿಯನ್ನು ಕೇಳಲೇ ಇಲ್ಲ. ಅಲ್ಲಿ ಜನರ ಸುಳಿವಿಲ್ಲ. ಕುದುರೆಗಳು ಮತ್ತು ಹೇಸರಕತ್ತೆಗಳು ಕಟ್ಟಿಹಾಕಿದಂತೆಯೇ ಇವೆ. ಗುಡಾರಗಳಿನ್ನೂ ಯಥಾಸ್ಥಿತಿಯಲ್ಲಿವೆ. ಆದರೆ ಸೈನಿಕರೆಲ್ಲರೂ ಹೊರಟುಹೋಗಿದ್ದಾರೆ” ಎಂದು ಹೇಳಿದರು.

11 ಆಗ ನಗರದ ದ್ವಾರಪಾಲಕರು ಕೂಗುತ್ತಾ ರಾಜನ ಮನೆಯಲ್ಲಿದ್ದ ಜನರಿಗೆ ಈ ಸಂಗತಿಗಳನ್ನು ತಿಳಿಸಿದರು. 12 ಆಗ ರಾತ್ರಿಯಾಗಿದ್ದರೂ ರಾಜನು ತನ್ನ ಹಾಸಿಗೆಯಿಂದ ಮೇಲಕ್ಕೆದ್ದನು. ರಾಜನು ತನ್ನ ಅಧಿಕಾರಿಗಳಿಗೆ, “ಅರಾಮ್ಯರ ಸೈನಿಕರು ಮಾಡಬೇಕೆಂದಿರುವುದನ್ನು ನಾನು ನಿಮಗೆ ಹೇಳುತ್ತೇನೆ. ನಾವು ಬಹಳ ಹಸಿದಿದ್ದೇವೆಂಬುದು ಅವರಿಗೆ ತಿಳಿದಿದೆ. ಅವರು ಹೊಲಗಳಲ್ಲಿ ಅಡಗಿಕೊಳ್ಳಲು ಪಾಳೆಯನ್ನು ಬಿಟ್ಟುಹೋಗಿದ್ದಾರೆ. ‘ಇಸ್ರೇಲರು ನಗರದಿಂದ ಹೊರಗೆ ಬಂದಾಗ, ನಾವು ಅವರನ್ನು ಜೀವಂತವಾಗಿ ಸೆರೆಹಿಡಿದು ಅವರ ನಗರವನ್ನು ಪ್ರವೇಶಿಸಬಹುದು’ ಎಂದು ಅರಾಮ್ಯರು ಆಲೋಚಿಸಿದ್ದಾರೆ” ಎಂದು ಹೇಳಿದನು.

13 ರಾಜನ ಅಧಿಕಾರಿಗಳಲ್ಲಿ ಒಬ್ಬನು, “ನಮ್ಮಲ್ಲಿ ಕೆಲವರು ನಗರದಲ್ಲಿ ಉಳಿದಿರುವ ಐದು ಕುದುರೆಗಳನ್ನು ತೆಗೆದುಕೊಳ್ಳೋಣ. ನಗರದಲ್ಲಿ ಉಳಿದಿರುವ ಇಸ್ರೇಲಿನ ಜನರಂತೆ ಹೇಗಾದರೂ ಈ ಕುದುರೆಗಳೂ ಬಹುಬೇಗ ಸತ್ತುಹೋಗುತ್ತವೆ. ಈ ಜನರನ್ನು ಕಳುಹಿಸಿ ಅಲ್ಲಿ ಏನು ನಡೆದಿದೆಯೆಂಬುದನ್ನು ನಾವು ತಿಳಿದುಕೊಳ್ಳೋಣ” ಎಂದು ಹೇಳಿದನು.

14 ಕೂಡಲೇ ರಾಜನು ಎರಡು ರಥಗಳನ್ನು ತರಿಸಿ ಅರಾಮ್ಯರ ಸೇನೆಯು ಎಲ್ಲಿದೆ ಎಂಬುದನ್ನು ನೋಡಿಕೊಂಡು ಬರುವುದಕ್ಕಾಗಿ ಅವರನ್ನು ಕಳುಹಿಸಿದನು.

15 ಅವರು ಅರಾಮ್ಯರ ಸೇನೆಗಾಗಿ ಹುಡುಕಿಕೊಂಡು ಜೋರ್ಡನ್ ನದಿಯವರೆಗೂ ಹೋದರು. ರಸ್ತೆಯ ದಾರಿಯಲ್ಲೆಲ್ಲಾ ಬಟ್ಟೆಗಳು ಮತ್ತು ಆಯುಧಗಳು ಬಿದ್ದಿದ್ದವು. ಅರಾಮ್ಯರು ಆತುರಾತುರವಾಗಿ ಹೋಗುವಾಗ ಅವುಗಳನ್ನೆಲ್ಲಾ ಬಿಸಾಡಿ ಹೋಗಿದ್ದರು. ಸಂದೇಶಕರು ಸಮಾರ್ಯಕ್ಕೆ ಹಿಂದಿರುಗಿ ಬಂದು ರಾಜನಿಗೆ ವಿಷಯವನ್ನು ಹೇಳಿದರು.

16 ಆಗ ಜನರು ಅರಾಮ್ಯರ ಪಾಳೆಯಕ್ಕೆ ಓಡುತ್ತಾ ಹೋಗಿ, ಅಲ್ಲಿನ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡರು. ಪ್ರತಿಯೊಬ್ಬರಿಗೂ ಹೇರಳವಾಗಿ ದೊರೆಯಿತು. ಯೆಹೋವನು ಹೇಳಿದಂತೆಯೇ ಇದಾಯಿತು. ಒಬ್ಬನು ಉತ್ತಮವಾದ ಒಂದು ಬುಟ್ಟಿ ಹಿಟ್ಟನ್ನು ಮತ್ತು ಎರಡು ಬುಟ್ಟಿ ಜವೆಗೋಧಿಯನ್ನು ಕೇವಲ ಒಂದು ರೂಪಾಯಿಗೆ ಕೊಳ್ಳಬಹುದಾಗಿತ್ತು!

17 ರಾಜನು ತನಗೆ ಆಪ್ತನಾಗಿದ್ದ ಅಧಿಕಾರಿಯನ್ನು ಪಟ್ಟಣದ ಬಾಗಿಲನ್ನು ಕಾಯಲು ಆರಿಸಿಕೊಂಡನು. ಆದರೆ ಜನರು ಶತ್ರುಗಳ ಪಾಳೆಯದಲ್ಲಿದ್ದ ಆಹಾರವನ್ನು ಪಡೆಯಲು ಓಡಿಹೋಗುವಾಗ ಅವನು ಜನರ ತುಳಿತಕ್ಕೆ ಸಿಕ್ಕಿಕೊಂಡು ಸತ್ತುಹೋದನು. ರಾಜನು ಎಲೀಷನ ಮನೆಗೆ ಬಂದಿದ್ದಾಗ, ದೇವಮನುಷ್ಯನು ಹೇಳಿದಂತೆಯೇ ಈ ಸಂಗತಿಗಳೆಲ್ಲಾ ಸಂಭವಿಸಿದವು. 18 ಎಲೀಷನು, “ಒಂದು ರೂಪಾಯಿಗೆ ಒಂದು ಬುಟ್ಟಿ ಹಿಟ್ಟನ್ನೂ ಎರಡು ಬುಟ್ಟಿ ಜವೆಗೋಧಿಯನ್ನೂ ಸಮಾರ್ಯನಗರದ ಊರು ಬಾಗಿಲಿನಲ್ಲಿರುವ ಮಾರುಕಟ್ಟೆಯ ಸ್ಥಳದಲ್ಲಿ ಮಾರಲ್ಪಡುವುದು” ಎಂದು ಮೊದಲೇ ಹೇಳಿದ್ದನು. 19 ಆದರೆ ಆ ಅಧಿಕಾರಿಯು ದೇವಮನುಷ್ಯನಿಗೆ, “ಯೆಹೋವನು ಪರಲೋಕಕ್ಕೆ ಕಿಟಿಕಿಗಳನ್ನು ಮಾಡಿಸಿದರೂ ಇದು ಸಂಭವಿಸುವುದಿಲ್ಲ!” ಎಂದು ಉತ್ತರಿಸಿದನು. ಎಲೀಷನು ಆ ಅಧಿಕಾರಿಗೆ, “ನೀನು ನಿನ್ನ ಸ್ವಂತ ಕಣ್ಣುಗಳಿಂದಲೇ ಇದನ್ನು ನೋಡುವೆ. ಆದರೆ ಆ ಆಹಾರದಲ್ಲಿ ಯಾವುದನ್ನೂ ನೀನು ತಿನ್ನುವುದಿಲ್ಲ” ಎಂದು ಹೇಳಿದ್ದನು. 20 ಆ ಅಧಿಕಾರಿಗೆ ಅಂದು ಹೇಳಿದಂತೆಯೇ ಆಯಿತು. ಅವನು ಊರ ಬಾಗಿಲಿನಲ್ಲಿ ಜನರ ತುಳಿತಕ್ಕೆ ಸಿಕ್ಕಿಕೊಂಡು ಸತ್ತುಹೋದನು.

1 ತಿಮೊಥೆಯನಿಗೆ 4

ಸುಳ್ಳುಬೋಧಕರ ಬಗ್ಗೆ ಎಚ್ಚರಿಕೆ

ಮುಂದಿನ ದಿನಗಳಲ್ಲಿ ಕೆಲವು ಜನರು ಸತ್ಯ ಬೋಧನೆಯನ್ನು ನಂಬುವುದಿಲ್ಲವೆಂದು ಪವಿತ್ರಾತ್ಮನು ಸ್ಪಷ್ಟವಾಗಿ ಹೇಳುತ್ತಾನೆ. ಆ ಜನರು ಸುಳ್ಳಾಡುವ ದುರಾತ್ಮಗಳಿಗೆ ವಿಧೇಯರಾಗುವರು; ದೆವ್ವಗಳ ಬೋಧನೆಯನ್ನು ಅನುಸರಿಸುವರು. ಆ ಬೋಧನೆಗಳು ಸುಳ್ಳು ಹೇಳುವ ಮತ್ತು ವಂಚಿಸುವ ಜನರ ಮೂಲಕ ಬರುತ್ತವೆ. ಅವರು ಸರಿತಪ್ಪುಗಳ ಭೇದವನ್ನು ಗುರುತಿಸುವುದಿಲ್ಲ. ಕಾದ ಕಬ್ಬಿಣದಿಂದ ಸುಟ್ಟು ಬೂದಿಯಾಗುವಂತೆ ಅವರ ವಿವೇಕವು ನಾಶಗೊಂಡಿದೆ. ಜನರು ಮದುವೆಮಾಡಿಕೊಳ್ಳಬಾರದೆಂದೂ ಕೆಲವು ಆಹಾರಪದಾರ್ಥಗಳನ್ನು ತಿನ್ನಬಾರದೆಂದೂ ಅವರು ಹೇಳುತ್ತಾರೆ. ಆದರೆ ನಂಬಿಕೆಯುಳ್ಳವರು ಮತ್ತು ಸತ್ಯವನ್ನು ತಿಳಿದಿರುವವರು ಕೃತಜ್ಞತಾಸ್ತುತಿ ಮಾಡಿ ಆ ಆಹಾರಪದಾರ್ಥಗಳನ್ನು ತಿನ್ನಲಿ. ಏಕೆಂದರೆ ಅವುಗಳನ್ನು ನಿರ್ಮಿಸಿದಾತನು ದೇವರೇ. ಆತನು ನಿರ್ಮಿಸಿದ ಪ್ರತಿಯೊಂದೂ ಉತ್ತಮವಾಗಿರುತ್ತದೆ. ಆತನಿಗೆ ಕೃತಜ್ಞತಾಸ್ತುತಿ ಮಾಡಿ ತೆಗೆದುಕೊಳ್ಳುವ ಯಾವುದನ್ನೇ ಆಗಲಿ ನಿಷಿದ್ಧವೆಂದು ತಿರಸ್ಕರಿಸಬಾರದು. ಏಕೆಂದರೆ ದೇವರ ವಾಕ್ಯದಿಂದ ಮತ್ತು ಪ್ರಾರ್ಥನೆಯಿಂದ ಅದು ಪವಿತ್ರವಾಗಿದೆ.

ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರು

ಅಲ್ಲಿರುವ ಸಹೋದರ ಸಹೋದರಿಯರಿಗೆ ಈ ಸಂಗತಿಗಳನ್ನು ತಿಳಿಸಿದರೆ, ನೀನು ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವೆ ಎಂಬುದನ್ನೂ ನಂಬಿಕೆಯ ನುಡಿಗಳಿಂದ ಮತ್ತು ಉತ್ತಮ ಉಪದೇಶಗಳನ್ನು ಅನುಸರಿಸಿದ್ದರಿಂದ ಬಲಗೊಂಡಿರುವೆ ಎಂಬುದನ್ನೂ ತೋರಿಸಿದಂತಾಗುತ್ತದೆ. ದೇವರ ಸತ್ಯಕ್ಕೆ ಹೊಂದಿಕೆಯಾಗದ ಕ್ಷುಲ್ಲಕ ಕಥೆಗಳನ್ನು ಜನರು ಹೇಳುತ್ತಾರೆ. ಆ ಕಥೆಗಳ ಬೋಧನೆಯನ್ನು ಅನುಸರಿಸಬೇಡ. ದೇವರಿಗೆ ನಿಜವಾದ ಸೇವೆ ಮಾಡಲು ನಿನಗೆ ನೀನೇ ಬೋಧಿಸಿಕೊ. ನೀನು ದೇಹವನ್ನು ಪಳಗಿಸಿಕೊಂಡರೆ ನಿನಗೆ ಕೆಲವು ರೀತಿಯಲ್ಲಿ ಸಹಾಯಕವಾಗುವುದು. ಆದರೆ ದೇವರ ಸೇವೆಯು ನಿನಗೆ ಎಲ್ಲಾ ರೀತಿಯಲ್ಲಿಯೂ ಸಹಾಯಕವಾಗುವುದು. ದೇವರ ಸೇವೆಯು ಇಹಪರಗಳೆರಡರಲ್ಲೂ ನಿನಗೆ ಆಶೀರ್ವಾದವನ್ನು ಉಂಟು ಮಾಡುವುದು. ಈ ಸಂಗತಿಯು ನಂಬತಕ್ಕದ್ದೂ ಸರ್ವಾಂಗಿಕಾರಕ್ಕೆ ಯೋಗ್ಯವಾದದ್ದೂ ಆಗಿದೆ. 10 ಆದಕಾರಣವೇ, ನಾವು ಜೀವಸ್ವರೂಪನಾದ ದೇವರ ಮೇಲೆ ನಿರೀಕ್ಷೆಯಿಟ್ಟು ದುಡಿಯುತ್ತಿದ್ದೇವೆ ಮತ್ತು ಹೋರಾಡುತ್ತಿದ್ದೇವೆ. ಆತನು ಎಲ್ಲಾ ಜನರಿಗೆ ರಕ್ಷಕನಾಗಿದ್ದಾನೆ. ತನ್ನಲ್ಲಿ ನಂಬಿಕೆಯಿಡುವ ಜನರಿಗೆಲ್ಲಾ ಆತನು ವಿಶೇಷವಾದ ರೀತಿಯಲ್ಲಿ ರಕ್ಷಕನಾಗಿದ್ದಾನೆ.

11 ಇವುಗಳನ್ನು ಆಜ್ಞಾಪಿಸು ಮತ್ತು ಬೋಧಿಸು. 12 ನೀನು ಯೌವನಸ್ಥನಾಗಿರುವುದರಿಂದ ನಿನ್ನನ್ನು ಪ್ರಮುಖನಲ್ಲವೆಂದು ಪರಿಗಣಿಸಿ ಅಸಡ್ಡೆಮಾಡಲು ಯಾರಿಗೂ ಅವಕಾಶಕೊಡದಿರು. ವಿಶ್ವಾಸಿಗಳು ಹೇಗೆ ಜೀವಿಸಬೇಕೆಂಬುದಕ್ಕೆ ನೀನೇ ಅವರಿಗೆ ಮಾದರಿಯಾಗಿರು. ನಡೆನುಡಿಗಳಲ್ಲಿ, ಪ್ರೀತಿಯಲ್ಲಿ, ನಂಬಿಕೆಯಲ್ಲಿ ಮತ್ತು ಪರಿಶುದ್ಧ ಜೀವನದಲ್ಲಿ ನೀನೇ ಅವರಿಗೆ ಮಾದರಿಯಾಗಿರು.

13 ದೇವರ ವಾಕ್ಯವನ್ನು ಜನರಿಗೆ ಓದಿಹೇಳಿ ಅವರನ್ನು ಬಲಪಡಿಸು ಮತ್ತು ಅವರಿಗೆ ಬೋಧಿಸು. ನಾನು ಬರುವತನಕ ಈ ಕಾರ್ಯಗಳನ್ನು ಮಾಡುತ್ತಿರು. 14 ನಿನ್ನಲ್ಲಿರುವ ವರವನ್ನು ಜ್ಞಾಪಿಸಿಕೊಳ್ಳುತ್ತಿರು. ಸಭೆಯ ಹಿರಿಯರು ಪ್ರವಾದನೆಗಳೊಂದಿಗೆ ತಮ್ಮ ಕೈಗಳನ್ನು ನಿನ್ನ ಮೇಲಿಟ್ಟಾಗ ಆ ವರವು ನಿನಗೆ ಕೊಡಲ್ಪಟ್ಟಿತು. 15 ಈ ಕಾರ್ಯಗಳನ್ನು ಮಾಡುತ್ತಲೇ ಇರು. ಈ ಕಾರ್ಯಗಳನ್ನು ಮಾಡಲು ನಿನ್ನ ಜೀವನವನ್ನು ಮುಡಿಪಾಗಿಡು. ಆಗ ನಿನ್ನ ಕಾರ್ಯವು ಅಭಿವೃದ್ಧಿಗೊಳ್ಳುತ್ತಿರುವುದನ್ನು ಜನರೆಲ್ಲರೂ ನೋಡುವರು. 16 ನಿನ್ನ ಜೀವನದಲ್ಲಿಯೂ ನಿನ್ನ ಬೋಧನೆಯಲ್ಲಿಯೂ ಎಚ್ಚರಿಕೆಯಿಂದಿರು. ಯೋಗ್ಯವಾದ ರೀತಿಯಲ್ಲಿ ಜೀವಿಸುತ್ತಾ ಬೋಧಿಸು. ಆಗ ನೀನು, ನಿನ್ನನ್ನೂ ನಿನ್ನ ಬೋಧನೆ ಕೇಳುವವರನ್ನೂ ರಕ್ಷಿಸುವೆ.

ದಾನಿಯೇಲ 11

11 “ಮೇದ್ಯಯನಾದ ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಪಾರಸಿಯ ರಾಜ್ಯದ ದಿವ್ಯಪಾಲಕನ ವಿರುದ್ಧದ ಹೋರಾಟದಲ್ಲಿ ನಾನು ಮಿಕಾಯೇಲನಿಗೆ ಬೆಂಬಲ ಕೊಟ್ಟೆನು.

“ದಾನಿಯೇಲನೇ, ಈಗ ನಾನು ನಿನಗೆ ಸತ್ಯಾಂಶವನ್ನು ಹೇಳುತ್ತೇನೆ ಕೇಳು. ಪಾರಸಿಯ ದೇಶದಲ್ಲಿ ಇನ್ನೂ ಮೂರು ಜನ ರಾಜರು ಆಳುವರು. ಆಮೇಲೆ ನಾಲ್ಕನೆಯ ರಾಜನು ಬರುವನು. ನಾಲ್ಕನೆಯ ರಾಜನು ತನಗಿಂತ ಮುಂಚೆ ಆಗಿ ಹೋದ ಪಾರಸಿಯ ದೇಶದ ಎಲ್ಲ ರಾಜರಿಗಿಂತ ಅಧಿಕ ಧನವಂತನಾಗಿರುವನು. ಆ ನಾಲ್ಕನೆಯ ರಾಜನು ತನ್ನ ಪ್ರಾಬಲ್ಯವನ್ನು ಬೆಳೆಸಿಕೊಳ್ಳುವದಕ್ಕೆ ಧನವನ್ನು ಬಳಸಿಕೊಳ್ಳುವನು. ಎಲ್ಲರೂ ಗ್ರೀಸ್ ರಾಜ್ಯದ ವಿರುದ್ಧವಾಗುವಂತೆ ಮಾಡುವನು. ಆಮೇಲೆ ಒಬ್ಬ ಅತಿ ಪರಾಕ್ರಮಶಾಲಿಯಾದ ಮತ್ತು ಪ್ರಭಾವಶಾಲಿಯಾದ ಅರಸನು ಬರುವನು. ಅವನು ಹೆಚ್ಚಿನ ಸಾಮರ್ಥ್ಯದಿಂದ ಆಳುವನು. ಅವನು ತನ್ನ ಮನಸ್ಸಿಗೆ ಬಂದಂತೆ ಮಾಡುವನು. ಆ ರಾಜನು ಬಂದ ಮೇಲೆ ಅವನ ರಾಜ್ಯವು ಒಡೆಯುವದು. ಅವನ ರಾಜ್ಯವು ನಾಲ್ಕು ಹೋಳಾಗಿ ಜಗತ್ತಿನ ನಾಲ್ಕು ದಿಕ್ಕುಗಳಲ್ಲಿ ಹಂಚಿಹೋಗುವುದು. ಅವನ ರಾಜ್ಯವು ಅವನ ಮಕ್ಕಳಲ್ಲಿ ಅಥವಾ ಮೊಮ್ಮಕ್ಕಳಲ್ಲಿ ಹಂಚಲ್ಪಡುವದಿಲ್ಲ. ಅವನ ರಾಜ್ಯಕ್ಕೆ ಅವನು ಮೊದಲು ಹೊಂದಿದ್ದ ಅಧಿಕಾರವು ಇರುವದಿಲ್ಲ. ಏಕೆಂದರೆ ಅವನ ರಾಜ್ಯವನ್ನು ಅವನಿಂದ ಕಸಿದುಕೊಂಡು ಬೇರೆ ಜನರಿಗೆ ಕೊಡಲಾಗುವುದು.

“ದಕ್ಷಿಣ ದಿಕ್ಕಿನ ರಾಜನು ಪ್ರಬಲನಾಗುವನು. ಆದರೆ ಆಗ ಅವನ ಒಬ್ಬ ಸೇನಾಧಿಪತಿಯು ದಕ್ಷಿಣದಿಕ್ಕಿನ ಅರಸನನ್ನು ಸೋಲಿಸುವನು. ಆ ಸೇನಾಧಿಪತಿಯು ಆಳಲು ಪ್ರಾರಂಭಿಸುವನು; ಅವನು ಬಹಳ ಪ್ರಭಾವಶಾಲಿಯಾಗುವನು.

“ಕೆಲವು ವರ್ಷಗಳಾದ ಮೇಲೆ ದಕ್ಷಿಣ ದಿಕ್ಕಿನ ರಾಜನು ಮತ್ತು ಆ ಸೇನಾಧಿಪತಿಯು ಒಂದು ಒಪ್ಪಂದವನ್ನು ಮಾಡಿಕೊಳ್ಳುವರು. ದಕ್ಷಿಣದ ರಾಜನ ಮಗಳು ಉತ್ತರದ ರಾಜನನ್ನು ಮದುವೆಯಾಗುವಳು. ಶಾಂತಿಯನ್ನು ಸ್ಥಾಪಿಸುವದಕ್ಕಾಗಿ ಅವಳು ಹೀಗೆ ಮಾಡುವಳು. ಆದರೆ ಅವಳು ಮತ್ತು ದಕ್ಷಿಣದ ರಾಜನು ಸಾಕಷ್ಟು ಶಕ್ತಿಶಾಲಿಗಳಾಗಿರುವುದಿಲ್ಲ. ಜನರು ಅವಳನ್ನೂ ಮತ್ತು ಆ ದೇಶಕ್ಕೆ ಅವಳನ್ನು ಕರೆದುಕೊಂಡು ಹೋದ ವ್ಯಕ್ತಿಯನ್ನೂ ವಿರೋಧ ಮಾಡುವರು. ಆ ಜನರು ಅವಳ ಮಗು ಮತ್ತು ಅವಳ ಸಹಾಯಕನನ್ನು ವಿರೋಧಿಸುವರು.

“ಆದರೆ ಅವಳ ಕುಟುಂಬದ ಒಬ್ಬ ವ್ಯಕ್ತಿಯು ದಕ್ಷಿಣದ ರಾಜನ ಸ್ಥಳವನ್ನು ತೆಗೆದುಕೊಳ್ಳಲು ಬರುವನು. ಅವನು ಉತ್ತರದ ರಾಜನ ಸೈನ್ಯದ ಮೇಲೆ ಧಾಳಿ ಮಾಡುವನು. ಅವನು ಆ ಅರಸನ ಭದ್ರವಾದ ಕೋಟೆಗೆ ನುಗ್ಗುವನು. ಅವನು ಯುದ್ಧಮಾಡಿ ಗೆಲ್ಲುವನು. ಅವನು ಅವರ ವಿಗ್ರಹಗಳನ್ನು ತೆಗೆದುಕೊಳ್ಳುವನು. ಅವನು ಅವರ ಲೋಹದ ಪ್ರತಿಮೆಗಳನ್ನು ಮತ್ತು ಅವುಗಳ ಬೆಲೆಬಾಳುವ ಬೆಳ್ಳಿ ಮತ್ತು ಬಂಗಾರದ ವಸ್ತುಗಳನ್ನು ತೆಗೆದುಕೊಳ್ಳುವನು. ಆ ವಸ್ತುಗಳನ್ನೆಲ್ಲಾ ಈಜಿಪ್ಟಿಗೆ ತೆಗೆದುಕೊಂಡು ಹೋಗುವನು. ಆಮೇಲೆ ಕೆಲವು ವರ್ಷಗಳವರೆಗೆ ಅವನು ಉತ್ತರದ ರಾಜನಿಗೆ ಕಿರುಕುಳ ಕೊಡುವದಿಲ್ಲ. ಉತ್ತರದ ರಾಜನು ದಕ್ಷಿಣದ ರಾಜ್ಯದ ಮೇಲೆ ಧಾಳಿ ಮಾಡುವನು. ಆದರೆ ಅವನು ಸೋತು ತನ್ನ ದೇಶಕ್ಕೆ ಹಿಂತಿರುಗುವನು.

10 “ಉತ್ತರದ ರಾಜನ ಮಗನು ಯುದ್ಧದ ಸಿದ್ಧತೆಯನ್ನು ಮಾಡುವನು. ಅವರಿಬ್ಬರೂ ಸೇರಿ ಒಂದು ದೊಡ್ಡ ಸೈನ್ಯವನ್ನು ಕೂಡಿಸುವರು. ಆ ಸೈನ್ಯವು ರಭಸದಿಂದ ಬಂದ ಪ್ರವಾಹದಂತೆ ದೇಶದಲ್ಲೆಲ್ಲ ಸಂಚರಿಸಿ ಯುದ್ಧ ಮಾಡುತ್ತಾ ದಕ್ಷಿಣ ರಾಜನ ದುರ್ಗದವರೆಗೆ ನುಗ್ಗುವದು. 11 ಆಗ ದಕ್ಷಿಣದ ರಾಜನು ಕೋಪದಿಂದ ಕೆಂಡವಾಗುವನು. ಅವನು ಉತ್ತರದ ರಾಜನ ವಿರುದ್ಧ ಹೋರಾಡುವದಕ್ಕಾಗಿ ಹೊರಬರುವನು. ಉತ್ತರದ ರಾಜನ ಹತ್ತಿರ ಅಪಾರವಾದ ಸೈನ್ಯವಿದ್ದರೂ ಅವನು ಯುದ್ಧದಲ್ಲಿ ಸೋಲುವನು. 12 ಉತ್ತರದ ಸೈನ್ಯವು ಸೋತು ಸೆರೆಯಾಗುವುದು. ದಕ್ಷಿಣ ರಾಜನು ತುಂಬ ಜಂಬಪಡುವನು ಮತ್ತು ಉತ್ತರದ ರಾಜನ ಸಾವಿರಾರು ಜನ ಸೈನಿಕರ ವಧೆ ಮಾಡುವನು. ಆದರೆ ಅವನು ಜಯಶೀಲನಾಗಿ ಮುಂದುವರೆಯುವದಿಲ್ಲ. 13 ಉತ್ತರದ ರಾಜನು ಇನ್ನೊಂದು ಸೈನ್ಯವನ್ನು ತೆಗೆದುಕೊಂಡು ಬರುವನು. ಈ ಸೈನ್ಯವು ಮೊದಲಿನ ಸೈನ್ಯಕ್ಕಿಂತ ದೊಡ್ಡದಾಗಿರುವದು. ಬಹಳ ವರ್ಷಗಳ ತರುವಾಯ ಅವನು ಧಾಳಿಮಾಡುವನು. ಆ ಸೈನ್ಯವು ಬಹಳ ದೊಡ್ಡದಾಗಿದ್ದು ಹಲವಾರು ಆಯುಧಗಳಿಂದ ಸುಸಜ್ಜಿತವಾಗಿರುವದು. ಆ ಸೈನ್ಯವು ಯುದ್ಧಕ್ಕೆ ಸಿದ್ಧವಾಗಿರುವದು.

14 “ಆ ಕಾಲದಲ್ಲಿ ಹಲವಾರು ಜನರು ದಕ್ಷಿಣ ರಾಜನ ವಿರುದ್ಧವಾಗಿರುವರು. ಹೋರಾಡಲು ಇಚ್ಛಿಸುವ ನಿಮ್ಮ ಸ್ವಂತ ಜನರಲ್ಲಿ ಕೆಲವರು ದಕ್ಷಿಣ ರಾಜನ ವಿರುದ್ಧ ದಂಗೆ ಏಳುವರು. ಅವರು ಗೆಲ್ಲುವದಿಲ್ಲ. ಅವರು ಹೀಗೆ ಮಾಡಿ ದರ್ಶನ ನಿಜವಾಗುವಂತೆ ಮಾಡುವರು. 15 ಆಮೇಲೆ ಉತ್ತರದ ರಾಜನು ಬಂದು ಗೋಡೆಗಳಿಗೆ ದಿಬ್ಬಹಾಕಿ ಒಂದು ಭದ್ರವಾದ ನಗರವನ್ನು ವಶಪಡಿಸಿಕೊಳ್ಳುವನು. ದಕ್ಷಿಣದವರಲ್ಲಿ ಹೋರಾಡುವ ಶಕ್ತಿ ಇರುವದಿಲ್ಲ. ದಕ್ಷಿಣ ಸೈನ್ಯದ ಉತ್ತಮ ಸೈನಿಕರೂ ಕೂಡ ಉತ್ತರದ ಸೈನ್ಯವನ್ನು ತಡೆದು ನಿಲ್ಲಿಸಲು ಸಮರ್ಥರಾಗುವದಿಲ್ಲ.

16 “ಉತ್ತರದ ರಾಜನು ತನ್ನ ಇಷ್ಟಬಂದಂತೆ ಮಾಡುವನು. ಯಾರಿಂದಲೂ ಅವನನ್ನು ತಡೆಯಲು ಸಾಧ್ಯವಾಗುವದಿಲ್ಲ. ಅವನು ಸುಂದರವಾದ ನಾಡಿನ ಮೇಲೆ ಅಧಿಕಾರವನ್ನೂ ನಿಯಂತ್ರಣವನ್ನೂ ಸಂಪಾದಿಸುವನು. ಅದನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿರುವನು. 17 ಉತ್ತರದ ರಾಜನು ತನ್ನ ಸರ್ವಶಕ್ತಿಯಿಂದ ದಕ್ಷಿಣದ ರಾಜನೊಂದಿಗೆ ಹೋರಾಡಲು ನಿರ್ಧರಿಸುವನು. ಅವನು ದಕ್ಷಿಣದ ರಾಜನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳುವನು. ಉತ್ತರದ ರಾಜನು ತನ್ನ ಮಗಳನ್ನು ದಕ್ಷಿಣದ ರಾಜನಿಗೆ ಮದುವೆ ಮಾಡಿಕೊಡುವನು. ದಕ್ಷಿಣದ ರಾಜನನ್ನು ಸೋಲಿಸುವ ಉದ್ದೇಶದಿಂದ ಉತ್ತರದ ರಾಜನು ಹೀಗೆ ಮಾಡುವನು. ಆದರೆ ಅವನ ತಂತ್ರಗಳು ಯಶಸ್ವಿಯಾಗುವದಿಲ್ಲ. ಅವುಗಳಿಂದ ಅವನಿಗೆ ಸಹಾಯ ಸಿಕ್ಕುವದಿಲ್ಲ.

18 “ಆಮೇಲೆ ಉತ್ತರದ ರಾಜನು ಭೂಮಧ್ಯ ಸಾಗರದ ಕರಾವಳಿಯ ದೇಶಗಳ ಕಡೆಗೆ ಗಮನಹರಿಸುವನು. ಅವನು ಅನೇಕ ನಗರಗಳನ್ನು ಗೆಲ್ಲುವನು. ಆದರೆ ಆಗ ಒಬ್ಬ ಸೇನಾಧಿಪತಿಯು ಉತ್ತರದ ರಾಜನ ಅಹಂಕಾರವನ್ನೂ ಸೊಕ್ಕನ್ನೂ ಮುರಿದುಬಿಡುವನು; ಅವನಿಗೆ ಅವಮಾನ ಮಾಡುವನು.

19 “ಅದಾದ ಮೇಲೆ ಉತ್ತರದ ರಾಜನು ತನ್ನ ದೇಶದ ಭದ್ರವಾದ ಕೋಟೆಗಳಿಗೆ ಹಿಂದಿರುಗುವನು. ಆದರೆ ಅವನು ದುರ್ಬಲನಾಗಿ ಬಿದ್ದುಹೋಗುವನು; ಕೊನೆಗೊಳ್ಳುವನು.

20 “ಉತ್ತರದ ರಾಜನ ತರುವಾಯ ಒಬ್ಬ ಹೊಸ ರಾಜನು ಬರುವನು. ಅವನು ಬಹು ವೈಭವಯುಕ್ತವಾದ ಜೀವನವನ್ನು ನಡೆಸಲಿಚ್ಛಿಸಿ ಅದಕ್ಕೆ ಬೇಕಾಗುವ ಹಣವನ್ನು ಸಂಗ್ರಹಿಸಲು ಒಬ್ಬ ತೆರಿಗೆ ಅಧಿಕಾರಿಯನ್ನು ಕಳುಹಿಸುವನು. ಆದರೆ ಕೆಲವು ವರ್ಷಗಳಲ್ಲಿ ಆ ರಾಜನು ನಾಶವಾಗುವನು. ಆದರೆ ಅವನು ಯುದ್ಧದಲ್ಲಿ ಮಡಿಯುವದಿಲ್ಲ.

21 “ಆ ರಾಜನ ತರುವಾಯ ಅತಿ ಕ್ರೂರನೂ ದ್ವೇಷಮಯಿಯೂ ಆದ ಒಬ್ಬನು ರಾಜನಾಗುವನು. ಅವನು ರಾಜ ಮನೆತನದವನಾಗಿರುವದಿಲ್ಲ. ಅವನು ವಂಚನೆಯಿಂದ ರಾಜನಾಗಿರುತ್ತಾನೆ. ಜನರು ನೆಮ್ಮದಿಯಿಂದ ನಿರ್ಭಯರಾಗಿರುವಾಗ ಅವನು ರಾಜ್ಯದ ಮೇಲೆ ಧಾಳಿ ಮಾಡುತ್ತಾನೆ. 22 ಅವನು ದೊಡ್ಡದಾದ ಮತ್ತು ಶಕ್ತಿಶಾಲಿಯಾದ ಸೈನ್ಯಗಳನ್ನು ಸೋಲಿಸುತ್ತಾನೆ. ಅವನು ಒಪ್ಪಂದ ಮಾಡಿಕೊಂಡ ನಾಯಕನಿಗೂ ಮೋಸಮಾಡುತ್ತಾನೆ. 23 ಅನೇಕ ರಾಷ್ಟ್ರಗಳು ಕ್ರೂರಿಯಾದ ಮತ್ತು ವಂಚಕನಾದ ಆ ಅರಸನೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವವು. ಆದರೆ ಅವನು ಸುಳ್ಳು ಹೇಳಿ ಅವರನ್ನು ವಂಚಿಸುವನು. ಅವನು ಹೆಚ್ಚಿನ ಅಧಿಕಾರವನ್ನು ಸಂಪಾದಿಸಿದರೂ ಕೆಲವೇ ಜನರು ಅವನಿಗೆ ಬೆಂಬಲ ನೀಡುವರು.

24 “ಶ್ರೀಮಂತ ದೇಶಗಳು ನೆಮ್ಮದಿಯಿಂದಿರುವಾಗ ಈ ಕ್ರೂರಿಯು ಪೂರ್ವ ಸೂಚನೆಯಿಲ್ಲದೆ ಅವುಗಳ ಮೇಲೆ ದಾಳಿ ಮಾಡುವನು. ಅವನು ಸರಿಯಾದ ಸಮಯಕ್ಕೆ ದಾಳಿಮಾಡುವನು; ಅವನ ಪೂರ್ವಿಕರು ವಿಫಲರಾದ ದೇಶಗಳಲ್ಲಿ ಜಯ ಸಂಪಾದಿಸುವನು. ಅವನು ಸೋಲಿಸಿದ ದೇಶಗಳನ್ನು ಕೊಳ್ಳೆಹೊಡೆದು ದೊರೆತ ಸಂಪತ್ತನ್ನು ತನ್ನ ಅನುಯಾಯಿಗಳಲ್ಲಿ ಹಂಚುವನು. ಅವನು ಭದ್ರವಾದ ನಗರಗಳನ್ನು ಹಿಡಿದುಕೊಳ್ಳಲು ಮತ್ತು ನಾಶಮಾಡಲು ಯೋಜನೆಗಳನ್ನು ಮಾಡುವನು. ಅವನಿಗೆ ಜಯಸಿಕ್ಕಿದರೂ ಅದು ಸ್ವಲ್ಪ ಕಾಲದವರೆಗೆ ಮಾತ್ರ ಇರುತ್ತದೆ.

25 “ಕ್ರೂರನಾದ ಮತ್ತು ವಂಚಕನಾದ ಆ ರಾಜನ ಹತ್ತಿರ ಅತಿ ದೊಡ್ಡ ಸೈನ್ಯವಿರುವದು. ಅವನು ಆ ಸೈನ್ಯದಿಂದ ತನ್ನ ಶಕ್ತಿಯನ್ನು ಪ್ರದರ್ಶಿಸಲು ಧೈರ್ಯ ತಂದುಕೊಂಡು ದಕ್ಷಿಣದ ರಾಜನ ಮೇಲೆ ದಾಳಿ ಮಾಡುವನು. ದಕ್ಷಿಣದ ರಾಜನು ಅತಿದೊಡ್ಡದಾದ ಮತ್ತು ಶಕ್ತಿಶಾಲಿಯಾದ ಸೈನ್ಯವನ್ನು ಕೂಡಿಸಿಕೊಂಡು ಯುದ್ಧಕ್ಕೆ ಹೋಗುವನು. ಆದರೆ ಅವನ ವೈರಿಗಳು ರಹಸ್ಯವಾಗಿ ಒಂದು ಕುಯುಕ್ತಿಯನ್ನು ಮಾಡುವರು. ದಕ್ಷಿಣದ ರಾಜನು ಸೋಲುವನು. 26 ದಕ್ಷಿಣದ ರಾಜನ ಒಳ್ಳೆಯ ಸ್ನೇಹಿತರೆಂದು ಭಾವಿಸಲಾದ ಜನರು ಅವನನ್ನು ನಾಶಮಾಡಲು ಪ್ರಯತ್ನ ಮಾಡುವರು. ಅವನ ಸೈನ್ಯಕ್ಕೆ ಸೋಲುಂಟಾಗುವದು. ಅವನ ಅನೇಕ ಸೈನಿಕರು ಯುದ್ಧದಲ್ಲಿ ಮಡಿಯುವರು. 27 ಆ ಇಬ್ಬರು ಅರಸರು ಒಬ್ಬರಿಗೊಬ್ಬರು ಕೇಡುಮಾಡಬೇಕೆಂದು ನಿಶ್ಚಯಿಸುವರು. ಅವರಿಬ್ಬರೂ ಒಂದೇ ಮೇಜಿನಲ್ಲಿ ಕುಳಿತುಕೊಳ್ಳುವರು ಮತ್ತು ಒಬ್ಬರಿಗೊಬ್ಬರು ಸುಳ್ಳು ಹೇಳುವರು. ಆದರೆ ಇದರಿಂದ ಅವರಿಬ್ಬರಲ್ಲಿ ಯಾರಿಗೂ ಒಳ್ಳೆಯದಾಗುವದಿಲ್ಲ. ಏಕೆಂದರೆ ದೇವರು ಅವರ ಅಂತ್ಯಕಾಲವನ್ನು ನಿರ್ಧರಿಸಿದ್ದಾನೆ.

28 “ಉತ್ತರದ ರಾಜನು ಅಪಾರ ಸಂಪತ್ತಿನೊಂದಿಗೆ ಸ್ವದೇಶಕ್ಕೆ ಮರಳುವನು. ಆಗ ಅವನು ಪರಿಶುದ್ಧ ನಿಬಂಧನೆಗೆ[a] ವಿರುದ್ಧವಾಗಿ ಆಚರಿಸುವ ತೀರ್ಮಾನ ಮಾಡುವನು. ಅವನು ಯೋಚಿಸಿದಂತೆ ಮಾಡಿ ತನ್ನ ದೇಶಕ್ಕೆ ಹಿಂತಿರುಗಿ ಹೋಗುವನು.

29 “ಸರಿಯಾದ ಸಮಯ ನೋಡಿ ಉತ್ತರದ ರಾಜನು ದಕ್ಷಿಣದ ರಾಜನ ಮೇಲೆ ದಾಳಿ ಮಾಡುವನು. ಆದರೆ ಈ ಸಲ ಅವನು ಹಿಂದಿನಂತೆ ಜಯಶೀಲನಾಗುವದಿಲ್ಲ. 30 ಕಿತ್ತೀಮಿನ ಹಡಗುಗಳು ಬಂದು ಉತ್ತರದ ರಾಜನೊಂದಿಗೆ ಯುದ್ಧ ಮಾಡುವವು. ಆ ಹಡಗುಗಳು ಬರುವದನ್ನು ಅವನು ನೋಡಿ ಹೆದರಿಕೊಳ್ಳುವನು. ಅವನು ಪರಿಶುದ್ಧ ನಿಬಂಧನೆಯ ಮೇಲೆ ಕೋಪಿಸಿಕೊಂಡು ಹಿಂತಿರುಗುವನು. ಅವನು ಹಿಂತಿರುಗಿದ ಮೇಲೆ ಪರಿಶುದ್ಧ ನಿಬಂಧನೆಯನ್ನು ತೊರೆದವರಿಗೆ ಸಹಾಯ ಮಾಡುವನು. 31 ಉತ್ತರದ ರಾಜನು ಜೆರುಸಲೇಮಿನ ಪವಿತ್ರಾಲಯವನ್ನು ಹೊಲಸು ಮಾಡಲು ತನ್ನ ಸೈನಿಕರನ್ನು ಕಳುಹಿಸುವನು. ದೈನಂದಿನ ಯಜ್ಞಗಳನ್ನು ಅರ್ಪಿಸದಂತೆ ಅವರು ತಡೆಯುವರು. ಆಮೇಲೆ ಅವರು ವಿನಾಶಕಾರಿಯಾದ ಅಸಹ್ಯ ವಸ್ತುವನ್ನು ಪ್ರತಿಷ್ಠಾಪಿಸುವರು.

32 “ಉತ್ತರದ ರಾಜನು ಪರಿಶುದ್ಧ ನಿಬಂಧನೆಯನ್ನು ತೊರೆದ ಯೊಹೂದ್ಯರನ್ನು ಸುಳ್ಳುಮಾತುಗಳಿಂದ ಮತ್ತು ನಯವಾದ ನುಡಿಗಳಿಂದ ವಂಚಿಸುವನು. ಆ ಯೆಹೂದ್ಯರು ಅದಕ್ಕಿಂತಲೂ ಹೆಚ್ಚಿನ ಪಾಪಕೃತ್ಯಗಳನ್ನು ಮಾಡುವರು. ಆದರೆ ದೇವರನ್ನು ಅರಿತು ಆತನ ಆಜ್ಞೆ ಪಾಲಿಸುತ್ತಿರುವ ಯೆಹೂದ್ಯರು ದೃಢಚಿತ್ತರಾಗಿರುವರು; ಅವರು ಅವನನ್ನು ವಿರೋಧಿಸುವರು.

33 “ಜ್ಞಾನಿಗಳಾದ ಯೆಹೂದ್ಯರು ಏನು ನಡೆದಿದೆ ಎಂಬುದನ್ನು ತಿಳಿದುಕೊಳ್ಳಲು ಜನರಿಗೆ ಸಹಾಯ ಮಾಡುವರು. ಜ್ಞಾನಿಗಳಾದವರು ಸಹ ಅನೇಕ ಹಿಂಸೆಗಳಿಗೆ ತುತ್ತಾಗುವರು. ಕೆಲವು ಜನ ಜ್ಞಾನಿಗಳು ಕತ್ತಿಯಿಂದ ಕೊಲ್ಲಲ್ಪಡುವರು, ಕೆಲವರನ್ನು ಬೆಂಕಿಯಲ್ಲಿ ಹಾಕಲಾಗುವದು ಅಥವಾ ಬಂಧಿಸಲಾಗುವುದು. ಕೆಲವು ಯೆಹೂದ್ಯರ ಮನೆಯನ್ನು, ಆಸ್ತಿಪಾಸ್ತಿಯನ್ನು ಕಿತ್ತುಕೊಳ್ಳಲಾಗುವದು. 34 ಆ ಜ್ಞಾನಿಗಳಾದ ಯೆಹೂದ್ಯರು ಶಿಕ್ಷೆಗೊಳಗಾದಾಗ ಅವರಿಗೆ ಸ್ವಲ್ಪ ಸಹಾಯ ಸಿಕ್ಕುವದು. ಆದರೆ ಜ್ಞಾನಿಗಳಾದ ಆ ಯೆಹೂದ್ಯರನ್ನು ಸೇರಿಕೊಳ್ಳುವ ಅನೇಕ ಯೆಹೂದ್ಯರು ಕಪಟಿಗಳಾಗಿರುತ್ತಾರೆ. 35 ಜ್ಞಾನಿಗಳಾದ ಕೆಲವು ಯೆಹೂದ್ಯರು ತಪ್ಪುಗಳನ್ನು ಮಾಡಿ ಬಿದ್ದುಹೋಗುವರು. ಆದರೆ ಹಿಂಸೆ ನಡೆಯಬೇಕು. ಏಕೆಂದರೆ ಅಂತ್ಯಕಾಲ ಬರುವವರೆಗೆ ಅವರು ದೃಢಚಿತ್ತರೂ ಶುದ್ಧರೂ ನಿಷ್ಕಳಂಕರೂ ಆಗಬೇಕು. ಸರಿಯಾದ ಸಮಯಕ್ಕೆ ಅಂತ್ಯಕಾಲ ಬರುವದು.

ಆತ್ಮ ಪ್ರಶಂಸೆ ಮಾಡಿಕೊಳ್ಳುವ ಅರಸನು

36 “ಉತ್ತರದ ರಾಜನು ತನ್ನ ಮನಸ್ಸಿಗೆ ಬಂದದ್ದನ್ನು ಮಾಡುವನು; ಬಡಾಯಿ ಕೊಚ್ಚಿಕೊಳ್ಳುವನು. ಅವನು ತನ್ನನ್ನು ತಾನು ಹೊಗಳಿಕೊಳ್ಳುವನು ಮತ್ತು ದೇವರಿಗಿಂತ ತಾನು ಹೆಚ್ಚಿನವನೆಂದು ಭಾವಿಸುವನು. ಅವನು ಯಾರೂ ಎಂದೂ ಕೇಳದ ಸಂಗತಿಗಳನ್ನು ಹೇಳುವನು. ಅವನು ಮಹೋನ್ನತನಾದ ದೇವರ ವಿರುದ್ಧವಾಗಿ ಅಂತಹ ಸಂಗತಿಗಳನ್ನು ಹೇಳುವನು. ಎಲ್ಲ ಕೆಟ್ಟ ಸಂಗತಿಗಳು ಜರಗುವವರೆಗೂ ಅವನು ಜಯ ಪಡೆಯುವನು. ಏನು ನಡೆಯಬೇಕೆಂದು ದೇವರು ನಿಶ್ಚಯ ಮಾಡಿರುವನೋ ಅದು ನಡೆಯುವದು.

37 “ಆ ಉತ್ತರದ ರಾಜನು ಅವನ ಪೂರ್ವಿಕರು ಪೂಜಿಸಿದ ದೇವರುಗಳನ್ನೂ ಸ್ತ್ರೀಯರು ಪೂಜಿಸುವ ವಿಗ್ರಹಗಳನ್ನೂ ಲಕ್ಷಿಸನು. ಅವನು ಯಾವ ದೇವರನ್ನೂ ಲಕ್ಷಿಸನು. ಅದಕ್ಕೆ ಬದಲಾಗಿ ಅವನು ತನ್ನನ್ನು ತಾನು ಹೊಗಳಿಕೊಳ್ಳುವನು; ತನ್ನನ್ನು ಎಲ್ಲ ದೇವರುಗಳಿಗಿಂತಲೂ ಶ್ರೇಷ್ಠನೆಂದು ತೋರಿಸಿಕೊಳ್ಳುವನು. 38 ಉತ್ತರದ ರಾಜನು ಯಾವ ದೇವರನ್ನೂ ಪೂಜಿಸನು, ಅವನು ಅಧಿಕಾರವನ್ನು ಪೂಜಿಸುವನು. ಅಧಿಕಾರ ಮತ್ತು ಶಕ್ತಿ ಇವುಗಳು ಅವನ ದೇವರು, ಅವನ ಪೂರ್ವಿಕರು ಅವನಷ್ಟು ಅಧಿಕಾರ ಪ್ರಿಯರಾಗಿರಲಿಲ್ಲ. ಅಧಿಕಾರ ದೇವತೆಯನ್ನು ಅವನು ಬೆಳ್ಳಿಬಂಗಾರಗಳಿಂದ, ಅಮೂಲ್ಯವಾದ ರತ್ನಾಭರಣಗಳಿಂದ ಮತ್ತು ಬೇರೆ ಕಾಣಿಕೆಗಳಿಂದ ಸೇವಿಸುವನು.

39 “ಉತ್ತರದ ರಾಜನು ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು. ಅವನೊಂದಿಗೆ ಸೇರುವ ಅನ್ಯರಾಜರುಗಳನ್ನು ಬಹಳಷ್ಟು ಗೌರವಿಸುವನು. ಅಂಥ ರಾಜರು ಬಹುಜನರನ್ನು ಆಳುವಂತೆ ಮಾಡುವನು. ಆ ರಾಜನು ಅವರು ಆಳುವ ಭೂಮಿಯು ತೆರಿಗೆಯನ್ನು ಕೊಡುವಂತೆ ಮಾಡುವನು.

40 “ಅಂತ್ಯಕಾಲದ ಸಮಯಕ್ಕೆ ದಕ್ಷಿಣದ ರಾಜನು ಉತ್ತರದ ರಾಜನೊಂದಿಗೆ ಯುದ್ಧ ಮಾಡುವನು. ಉತ್ತರದ ರಾಜನು ಅವನ ಮೇಲೆ ಧಾಳಿ ಮಾಡುವನು. ಅವನ ರಥ, ಕುದುರೆ ಸವಾರರು, ಹಡಗುಪಡೆಯೊಂದಿಗೆ ಧಾಳಿ ಮಾಡುವನು. ಆ ಉತ್ತರದ ರಾಜನು ಪ್ರವಾಹದಂತೆ ರಭಸದಿಂದ ದೇಶದಲ್ಲೆಲ್ಲ ಮುನ್ನುಗ್ಗುವನು. 41 ಉತ್ತರದ ರಾಜನು ಸುಂದರವಾದ ನಾಡಿನ[b] ಮೇಲೆ ಧಾಳಿ ಮಾಡುವನು. ಉತ್ತರದ ರಾಜನು ಹಲವಾರು ದೇಶಗಳನ್ನು ಗೆದ್ದುಕೊಳ್ಳುವನು. ಆದರೆ ಎದೋಮ್ಯರು, ಮೋವಾಬ್ಯರು ಮತ್ತು ಅಮ್ಮೋನಿನ ನಾಯಕರು ಅವನ ಕೈಯಿಂದ ತಪ್ಪಿಸಿಕೊಳ್ಳುವರು. 42 ಉತ್ತರದ ರಾಜನು ಹಲವಾರು ದೇಶಗಳಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಸುವನು. ಅವನು ಎಂಥ ಶಕ್ತಿಶಾಲಿ ಎಂಬುದು ಈಜಿಪ್ಟಿಗೂ ಗೊತ್ತಾಗುವುದು. 43 ಅವನು ಬೆಳ್ಳಿಬಂಗಾರಗಳ ನಿಧಿನಿಕ್ಷೇಪಗಳನ್ನು ಮತ್ತು ಈಜಿಪ್ಟಿನ ಒಳ್ಳೊಳ್ಳೆಯ ಸಮಸ್ತ ವಸ್ತುಗಳನ್ನು ವಶಪಡಿಸಿಕೊಳ್ಳುವನು. ಲೂಬ್ಯರು ಮತ್ತು ಕೂಷ್ಯರು ಅವನ ಸ್ವಾಮ್ಯವನ್ನು ಒಪ್ಪಿಕೊಳ್ಳುವರು. 44 ಹೀಗಿರಲು ಉತ್ತರದ ರಾಜನು ಪೂರ್ವದಿಕ್ಕಿನಿಂದ ಮತ್ತು ಉತ್ತರದಿಕ್ಕಿನಿಂದ ಬರುವ ಸಮಾಚಾರಗಳನ್ನು ಕೇಳಿ ಭಯಪಡುವನು ಮತ್ತು ರೊಚ್ಚಿಗೇಳುವನು. ಹಲವಾರು ದೇಶಗಳನ್ನು ಸಂಪೂರ್ಣವಾಗಿ ನಾಶಮಾಡಲು ಅವನು ಹೋಗುವನು. 45 ಸಮುದ್ರಕ್ಕೂ ಸುಂದರವಾದ ಪರಿಶುದ್ಧ ಪರ್ವತಕ್ಕೂ[c] ನಡುವೆ, ಅರಮನೆಯಂತಹ ತನ್ನ ಗುಡಾರಗಳನ್ನು ಹಾಕಿಸುವನು. ಕೊನೆಗೆ ಆ ಕೆಟ್ಟ ಅರಸನು ಸತ್ತುಹೋಗುವನು. ಅವನ ಅಂತ್ಯಕಾಲದ ಹೊತ್ತಿಗೆ ಅವನಿಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ.

ಕೀರ್ತನೆಗಳು 119:25-48

25 ನನಗೆ ಸಾವು ಸಮೀಪಿಸಿದೆ.
    ಯೆಹೋವನೇ, ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
26 ನನ್ನ ಜೀವಿತದ ಬಗ್ಗೆ ನಿನ್ನೊಂದಿಗೆ ಹೇಳಿಕೊಂಡೆ.
    ಆಗ ನೀನು ನನಗೆ ಉತ್ತರಿಸಿದೆ.
    ಈಗ ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
27 ನಿನ್ನ ಕಟ್ಟಳೆಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು.
    ನೀನು ಮಾಡಿದ ಅದ್ಭುತಕಾರ್ಯಗಳನ್ನು ನನಗೆ ತಿಳಿಯಪಡಿಸು.
28 ನಾನು ದುಃಖಗೊಂಡಿರುವೆ ಮತ್ತು ಆಯಾಸಗೊಂಡಿರುವೆ.
    ನೀನು ನನ್ನನ್ನು ಜ್ಞಾಪಿಸಿಕೊಂಡು ಮತ್ತೆ ಬಲಗೊಳಿಸು.
29 ಮೋಸಮಾರ್ಗದಲ್ಲಿ ಜೀವಿಸಲು ನನ್ನನ್ನು ಬಿಡಬೇಡ.
    ನಿನ್ನ ಉಪದೇಶಗಳಿಂದ ಮಾರ್ಗದರ್ಶನ ಮಾಡು.
30 ನಾನು ಸತ್ಯಮಾರ್ಗವನ್ನು ಆರಿಸಿಕೊಂಡಿದ್ದೇನೆ.
    ನಿನ್ನ ಜ್ಞಾನದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತಿಳಿದುಕೊಳ್ಳುವೆನು.
31 ನಿನ್ನ ಒಡಂಬಡಿಕೆಗೆ ಅಂಟಿಕೊಂಡಿದ್ದೇನೆ.
    ನನ್ನನ್ನು ನಿರಾಶೆಗೊಳಿಸಬೇಡ.
32 ನಿನ್ನ ಆಜ್ಞೆಗಳಿಗೆ ಹರ್ಷದಿಂದ ವಿಧೇಯನಾಗುವೆನು.
    ನಿನ್ನ ಆಜ್ಞೆಗಳು ನನ್ನನ್ನು ಉಲ್ಲಾಸಗೊಳಿಸುತ್ತವೆ.

33 ಯೆಹೋವನೇ, ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು,
    ಆಗ ಅವುಗಳನ್ನು ಅನುಸರಿಸುವೆನು.
34 ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು.
    ಆಗ ನಿನ್ನ ಉಪದೇಶಗಳಿಗೆ ಸಂಪೂರ್ಣವಾಗಿ ವಿಧೇಯನಾಗುವೆನು.
35 ನಿನ್ನ ಆಜ್ಞೆಗಳ ಮಾರ್ಗದಲ್ಲಿ ನನ್ನನ್ನು ನಡೆಸು.
    ಆ ಮಾರ್ಗವೇ ನನಗೆ ಬಹು ಇಷ್ಟ.
36 ಐಶ್ವರ್ಯದ ಮೇಲೆ ಮನಸ್ಸಿಡದೆ
    ನಿನ್ನ ಒಡಂಬಡಿಕೆಯ ಬಗ್ಗೆ ಧ್ಯಾನಿಸಲು ನನಗೆ ಸಹಾಯಮಾಡು.
37 ನಿಷ್ಪ್ರಯೋಜಕವಾದವುಗಳ ಮೇಲೆ ದೃಷ್ಟಿಸದಂತೆ ನನ್ನನ್ನು ಕಾಪಾಡು.
    ನಿನ್ನ ಮಾರ್ಗದಲ್ಲಿ ಜೀವಿಸಲು ನನಗೆ ಸಹಾಯಮಾಡು.
38 ನಿನ್ನ ಸೇವಕನಾದ ನನಗೆ ನೀನು ಮಾಡಿದ ವಾಗ್ದಾನಗಳನ್ನು ನೆರವೇರಿಸು.
    ಆಗ ಜನರು ನಿನ್ನನ್ನು ಗೌರವಿಸುವರು.
39 ಅವಮಾನವನ್ನು ನನ್ನಿಂದ ತೊಲಗಿಸು. ನಾನು ಅದಕ್ಕೆ ಹೆದರಿಕೊಂಡಿದ್ದೇನೆ.
    ನಿನ್ನ ಜ್ಞಾನದ ನಿರ್ಧಾರಗಳು ಒಳ್ಳೆಯವುಗಳಾಗಿವೆ.
40 ಇಗೋ, ನಿನ್ನ ಆಜ್ಞೆಗಳನ್ನು ಪ್ರೀತಿಸುವೆನು.
    ನನಗೆ ಒಳ್ಳೆಯವನಾಗಿದ್ದು ನನ್ನನ್ನು ಉಜ್ಜೀವನಗೊಳಿಸು.

41 ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು.
    ನಿನ್ನ ವಾಗ್ದಾನದಂತೆ ನನ್ನನ್ನು ರಕ್ಷಿಸು.
42 ನನ್ನನ್ನು ಗೇಲಿಮಾಡುವ ಜನರಿಗೆ ಆಗ ನಾನು ಉತ್ತರ ಕೊಡುವೆನು.
    ಯೆಹೋವನೇ, ನಿನ್ನ ಮಾತುಗಳಲ್ಲೇ ನಾನು ಭರವಸವಿಟ್ಟಿದ್ದೇನೆ.
43 ನಿನ್ನ ಸತ್ಯೋಪದೇಶಗಳನ್ನು ನಾನು ಯಾವಾಗಲೂ ಮಾತಾಡುವಂತಾಗಲಿ.
    ನಿನ್ನ ಜ್ಞಾನದ ನಿರ್ಧಾರಗಳನ್ನೇ ನಾನು ಆಶ್ರಯಿಸಿಕೊಂಡಿದ್ದೇನೆ.
44 ನಿನ್ನ ಉಪದೇಶಗಳನ್ನು ಎಂದೆಂದಿಗೂ ಅನುಸರಿಸುವೆನು.
45 ಯಾಕೆಂದರೆ, ನಿನ್ನ ನಿಯಮಗಳಿಗೆ ವಿಧೇಯನಾಗಲು
    ನಾನು ಬಹಳವಾಗಿ ಪ್ರಯತ್ನಿಸುತ್ತಿರುವುದರಿಂದ ಯಾರ ಹಂಗಿಲ್ಲದೆ ನಡೆಯುವೆನು.
46 ರಾಜರುಗಳ ಮುಂದೆಯೂ
    ಯೆಹೋವನ ಒಡಂಬಡಿಕೆಯ ಕುರಿತು ಚರ್ಚಿಸುವೆನು, ನಾಚಿಕೆಪಡುವುದಿಲ್ಲ.
47 ನಿನ್ನ ಆಜ್ಞೆಗಳಲ್ಲಿ ಆನಂದಿಸುವೆನು;
    ಅವು ನನಗೆ ಇಷ್ಟವಾಗಿವೆ.
48 ನಿನ್ನ ಆಜ್ಞೆಗಳನ್ನು ಕೊಂಡಾಡುವೆನು, ಅವುಗಳನ್ನು ಧ್ಯಾನಿಸುವೆನು.
    ಅವು ನನಗೆ ಇಷ್ಟವಾಗಿವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International