Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 3

ಯೋರಾಮನು ಇಸ್ರೇಲಿನ ರಾಜನಾದನು

ಅಹಾಬನ ಮಗನಾದ ಯೋರಾಮನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಯೆಹೋಷಾಫಾಟನ ಹದಿನೆಂಟನೆಯ ವರ್ಷದ ಆಳ್ವಿಕೆಯಲ್ಲಿ ಯೋರಾಮನು ಯೆಹೂದದ ರಾಜನಾಗಿ ಆಳಲಾರಂಭಿಸಿದನು. ಯೋರಾಮನು ಹನ್ನೆರಡು ವರ್ಷ ಆಳಿದನು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯೋರಾಮನು ಮಾಡಿದನು. ಆದರೆ ಯೋರಾಮನು ಅವನ ತಂದೆತಾಯಿಗಳಂತೆ ಇರಲಿಲ್ಲ. ಸುಳ್ಳುದೇವರಾದ ಬಾಳನನ್ನು ಪೂಜಿಸಲು ತನ್ನ ತಂದೆಯು ನಿರ್ಮಿಸಿದ್ದ ಸ್ತಂಭವನ್ನು ಅವನು ಕಿತ್ತುಹಾಕಿಸಿದನು. ಆದರೆ ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನು ಮುಂದುವರಿಸಿದನು. ಇಸ್ರೇಲರು ಪಾಪಗಳನ್ನು ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಯೋರಾಮನು ಯಾರೊಬ್ಬಾಮನ ಪಾಪಗಳನ್ನು ನಿಲ್ಲಿಸಲಿಲ್ಲ.

ಮೋವಾಬ್ ದೇಶವು ಇಸ್ರೇಲಿನಿಂದ ಬೇರ್ಪಟ್ಟಿತು

ಮೇಷನು ಮೋವಾಬಿನ ರಾಜನಾಗಿದ್ದನು. ಮೇಷನು ಅನೇಕ ಕುರಿಗಳ ಒಡೆಯನಾಗಿದ್ದನು. ಮೇಷನು ಒಂದು ಲಕ್ಷ ಕುರಿಗಳ ಮತ್ತು ಒಂದು ಲಕ್ಷ ಟಗರುಗಳ ಉಣ್ಣೆಯನ್ನು ಇಸ್ರೇಲಿನ ರಾಜನಿಗೆ ಕೊಡುತ್ತಿದ್ದನು. ಆದರೆ ಅಹಾಬನು ಸತ್ತಾಗ ಮೋವಾಬಿನ ರಾಜನು ಇಸ್ರೇಲಿನ ರಾಜನ ವಿರುದ್ಧವಾಗಿ ದಂಗೆಯೆದ್ದು ಅವನ ಆಳ್ವಿಕೆಯಿಂದ ಬೇರೆಯಾದನು.

ಆಗ ರಾಜನಾದ ಯೋರಾಮನು ಸಮಾರ್ಯದಿಂದ ಹೊರಗೆ ಹೋಗಿ, ಇಸ್ರೇಲಿನ ಜನರನ್ನೆಲ್ಲ ಒಟ್ಟುಗೂಡಿಸಿದನು. ಯೋರಾಮನು ಯೆಹೂದದ ರಾಜನಾದ ಯೆಹೋಷಾಫಾಟನ ಬಳಿಗೆ ಸಂದೇಶಕರನ್ನು ಕಳುಹಿಸಿ, “ನನ್ನ ಆಳ್ವಿಕೆಯಿಂದ ಮೋವಾಬಿನ ರಾಜನು ಬೇರ್ಪಟ್ಟಿದ್ದಾನೆ. ಮೋವಾಬಿನ ವಿರುದ್ಧ ಹೋರಾಡಲು ನನ್ನ ಜೊತೆ ಬರುವೆಯಾ?” ಎಂದು ಕೇಳಿದನು.

ಯೆಹೋಷಾಫಾಟನು, “ಆಗಲಿ, ನಿನ್ನ ಜೊತೆ ನಾನೂ ಬರುತ್ತೇನೆ. ನಾನೂ ನೀನೂ ಒಂದೇ. ನನ್ನ ಜನರೂ ನಿನ್ನ ಜನರೂ ಒಂದೇ. ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ” ಎಂದು ಹೇಳಿದನು.

ಮೂವರು ರಾಜರು ಎಲೀಷನ ಸಲಹೆ ಕೇಳುವರು

ಯೆಹೋಷಾಫಾಟನು ಯೋರಾಮನನ್ನು, “ನಾವು ಯಾವ ಮಾರ್ಗದಲ್ಲಿ ಹೋಗೋಣ?” ಎಂದು ಕೇಳಿದನು.

“ನಾವು ಎದೋಮಿನ ಮರಳುಗಾಡಿನ ಮೂಲಕ ಹೋಗೋಣ” ಎಂದು ಯೋರಾಮನು ಉತ್ತರಿಸಿದನು.

ಆದ್ದರಿಂದ ಇಸ್ರೇಲಿನ ರಾಜನು ಯೆಹೂದದ ಮತ್ತು ಎದೋಮಿನ ರಾಜರೊಂದಿಗೆ ಹೋದನು. ಅವರು ಏಳು ದಿನಗಳ ಕಾಲ ಪ್ರಯಾಣ ಮಾಡಿದರು. ಅವರ ಸೇನೆಗೆ ಮತ್ತು ಪ್ರಾಣಿಗಳಿಗೆ ಸಾಕಾಗುವಷ್ಟು ನೀರು ಅಲ್ಲಿ ಇರಲಿಲ್ಲ. 10 ಆಗ ಇಸ್ರೇಲಿನ ರಾಜನಾದ ಯೋರಾಮನು, “ಅಯ್ಯೋ, ಮೂವರು ರಾಜರಾದ ನಮ್ಮನ್ನು ನಿಜವಾಗಿಯೂ ಒಟ್ಟಿಗೆ ಬರಮಾಡಿದ ಯೆಹೋವನು ನಮ್ಮನ್ನು ಮೋವಾಬ್ಯರು ಸೋಲಿಸುವಂತೆ ಮಾಡಿದನಲ್ಲಾ!” ಎಂದು ಹೇಳಿದನು.

11 ಆದರೆ ಯೆಹೋಷಾಫಾಟನು, “ಯೆಹೋವನ ಪ್ರವಾದಿಗಳಲ್ಲಿ ನಿಜವಾಗಿಯೂ ಯಾರಾದರೊಬ್ಬರು ಇಲ್ಲಿರಬೇಕು. ನಾವೇನು ಮಾಡಬೇಕೆಂದು ಯೆಹೋವನು ಹೇಳುತ್ತಾನೆ. ಅದಕ್ಕಾಗಿ ನಾವು ಆ ಪ್ರವಾದಿಯನ್ನು ಕೇಳೋಣ” ಎಂದು ಹೇಳಿದನು.

ಇಸ್ರೇಲಿನ ರಾಜನ ಸೇವಕರಲ್ಲಿ ಒಬ್ಬನು, “ಶಾಫಾಟನ ಮಗನಾದ ಎಲೀಷನು ಇಲ್ಲಿಯೇ ಇದ್ದಾನೆ. ಎಲೀಷನು ಎಲೀಯನ ಸೇವಕನಾಗಿದ್ದನು”[a] ಎಂದು ಹೇಳಿದನು.

12 ಯೆಹೋಷಾಫಾಟನು, “ಯೆಹೋವನ ನುಡಿಗಳು ಎಲೀಷನಲ್ಲಿವೆ!” ಎಂದು ಹೇಳಿದನು.

ಇಸ್ರೇಲಿನ ರಾಜನಾದ ಯೋರಾಮನು, ಯೆಹೋಷಾಫಾಟನು ಮತ್ತು ಎದೋಮಿನ ರಾಜನು ಎಲೀಷನನ್ನು ನೋಡಲು ಹೋದರು.

13 ಎಲೀಷನು ಇಸ್ರೇಲಿನ ರಾಜನಿಗೆ, “ನನ್ನಿಂದ ನಿನಗೆ ಏನು ಬೇಕಾಗಿದೆ? ನಿನ್ನ ತಂದೆತಾಯಿಯರ ಪ್ರವಾದಿಗಳ ಬಳಿಗೆ ಹೋಗು!” ಎಂದು ಹೇಳಿದನು.

ಇಸ್ರೇಲಿನ ರಾಜನು ಎಲೀಷನಿಗೆ, “ಇಲ್ಲ, ನಾವು ನಿನ್ನನ್ನು ನೋಡಲೆಂದು ಇಲ್ಲಿಗೆ ಬಂದಿದ್ದೇವೆ, ಏಕೆಂದರೆ ಯೆಹೋವನು ಮೂವರು ರಾಜರನ್ನು ಒಟ್ಟಿಗೆ ಬರಮಾಡಿ, ನಮ್ಮನ್ನು ಮೋವಾಬ್ಯರು ಸೋಲಿಸುವಂತೆ ಮಾಡಿದ್ದಾನೆ. ನಾವು ನಿನ್ನ ಸಹಾಯವನ್ನು ಬಯಸಿದ್ದೇವೆ” ಎಂದನು.

14 ಎಲೀಷನು, “ಸರ್ವಶಕ್ತನಾದ ಯೆಹೋವನ ಸೇವೆಯನ್ನು ಮಾಡುವವನು ನಾನು. ಯೆಹೋವನಾಣೆ, ನಾನು ನಿಜವನ್ನು ಹೇಳುತ್ತೇನೆ. ಯೆಹೂದದ ರಾಜನಾದ ಯೆಹೋಷಾಫಾಟನು ಇಲ್ಲಿ ಇಲ್ಲದಿದ್ದರೆ, ನಾನು ನಿನ್ನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ; ನಿನ್ನನ್ನು ಗಮನಿಸುತ್ತಲೂ ಇರಲಿಲ್ಲ. 15 ಆದರೆ ಈಗ ಕಿನ್ನರಿ ಬಾರಿಸುವ ಒಬ್ಬನನ್ನು ನನ್ನ ಬಳಿಗೆ ಕರೆತನ್ನಿ” ಎಂದು ಹೇಳಿದನು.

ಅವನು ಕಿನ್ನರಿಯನ್ನು ಬಾರಿಸಿದಾಗ ಯೆಹೋವನ ಶಕ್ತಿಯು ಎಲೀಷನ ಮೇಲೆ ಬಂದಿತು. 16 ಆಗ ಎಲೀಷನು, “ಯೆಹೋವನು ಹೀಗೆನ್ನುತ್ತಾನೆ: ಕಣಿವೆಯಲ್ಲಿ ಗುಂಡಿಗಳನ್ನು ತೋಡಿರಿ. 17 ನೀವು ಗಾಳಿಯನ್ನು ನೋಡುವುದಿಲ್ಲ, ಮಳೆಯನ್ನೂ ನೋಡುವುದಿಲ್ಲ; ಆದರೆ ಆ ಕಣಿವೆಯು ನೀರಿನಿಂದ ತುಂಬಿಕೊಳ್ಳುತ್ತದೆ. ಆಗ ನಿಮಗೆ, ನಿಮ್ಮ ಹಸುಗಳಿಗೆ ಮತ್ತು ಇತರ ಪಶುಗಳಿಗೆ ಕುಡಿಯಲು ನೀರು ಸಿಗುತ್ತದೆ. 18 ಯೆಹೋವನಿಗೆ ಇದು ಸುಲಭ ಸಾಧ್ಯ. ಮೋವಾಬ್ಯರನ್ನು ನೀವು ಸೋಲಿಸುವಂತೆ ಆತನೇ ಅವಕಾಶ ಮಾಡುತ್ತಾನೆ. 19 ಪ್ರತಿಯೊಂದು ಬಲಾಢ್ಯವಾದ ನಗರವನ್ನು ಮತ್ತು ಉತ್ತಮ ನಗರವನ್ನು ನೀವು ಮುತ್ತಿಗೆ ಹಾಕುವಿರಿ. ಪ್ರತಿಯೊಂದು ಒಳ್ಳೆಯ ಮರವನ್ನೂ ನೀವು ಕಡಿದು ಉರುಳಿಸುತ್ತೀರಿ. ಎಲ್ಲಾ ನೀರಿನ ಬುಗ್ಗೆಗಳನ್ನೂ ನೀವು ನಿಲ್ಲಿಸುವಿರಿ. ನೀವು ಕಲ್ಲುಗಳನ್ನೆಸೆದು ಪ್ರತಿಯೊಂದು ಒಳ್ಳೆಯ ತೋಟವನ್ನು ನಾಶಗೊಳಿಸುತ್ತೀರಿ.”

20 ಮುಂಜಾನೆ, ಯಜ್ಞಗಳನ್ನು ಅರ್ಪಿಸುವ ಕಾಲದಲ್ಲಿ ಎದೋಮಿನ ಕಡೆಯಿಂದ ನೀರು ಹರಿಯಲಾರಂಭಿಸಿತು ಮತ್ತು ಕಣಿವೆಯು ತುಂಬಿಕೊಂಡಿತು.

21 ರಾಜರುಗಳು ತಮ್ಮ ವಿರುದ್ಧ ಹೋರಾಡಲು ಬಂದಿದ್ದಾರೆಂಬುದು ಮೋವಾಬ್ಯರ ಜನರಿಗೆ ತಿಳಿಯಿತು. ಮೋವಾಬಿನ ಗಂಡಸರು ಅಂದರೆ ಯುದ್ಧಕವಚಗಳನ್ನು ಧರಿಸಿಕೊಳ್ಳಲು ಶಕ್ತರಾಗಿದ್ದ ಎಲ್ಲರು ಒಟ್ಟಾಗಿ ಸೇರಿಬಂದು (ಯುದ್ಧಕ್ಕೆ ಸಿದ್ಧರಾಗಿ) ಗಡಿಯಲ್ಲಿ ಕಾಯತೊಡಗಿದರು. 22 ಮೋವಾಬಿನ ಜನರು ಅಂದು ಮುಂಜಾನೆ ನಸುಕಿನಲ್ಲೇ ಮೇಲೆದ್ದರು. ಸೂರ್ಯನ ಕಿರಣಗಳು ಕಣಿವೆಯ ನೀರಿನ ಮೇಲೆ ಹೊಳೆಯುತ್ತಿದ್ದವು. ಮೋವಾಬಿನ ಜನರಿಗೆ ಅವು ರಕ್ತದಂತೆ ಕಂಡವು. 23 ಮೋವಾಬಿನ ಜನರು, “ರಕ್ತದತ್ತ ನೋಡಿ! ರಾಜರುಗಳು ಪರಸ್ಪರ ಹೋರಾಡಿರಲೇಬೇಕು. ಅವರು ಒಬ್ಬರನ್ನೊಬ್ಬರು ನಾಶಗೊಳಿಸಿರಲೇಬೇಕು. ಸತ್ತಿರುವ ದೇಹಗಳಿಂದ ಬೆಲೆಬಾಳುವ ವಸ್ತುಗಳನ್ನು ದೋಚಿಕೊಳ್ಳೋಣ!” ಎಂದು ಹೇಳಿದರು.

24 ಮೋವಾಬಿನ ಜನರು ಇಸ್ರೇಲರ ಪಾಳೆಯಕ್ಕೆ ಬಂದರು. ಆದರೆ ಇಸ್ರೇಲರು ಹೊರಗೆ ಬಂದು ಮೋವಾಬಿನ ಸೈನ್ಯದ ಮೇಲೆ ಆಕ್ರಮಣ ಮಾಡಿದರು. ಮೋವಾಬಿನ ಜನರು ಇಸ್ರೇಲಿಯರಿಂದ ತಪ್ಪಿಸಿಕೊಂಡು ಓಡಿಹೋದರು. ಇಸ್ರೇಲರು ಮುನ್ನುಗ್ಗಿ ಮೋವಾಬಿನವರನ್ನು ಕೊಂದುಹಾಕಿದರು. 25 ಇಸ್ರೇಲರು ನಗರಗಳನ್ನು ಕೆಡವಿಹಾಕಿದರು. ಅವರು ಮೋವಾಬಿನ ಪ್ರತಿಯೊಂದು ಉತ್ತಮ ತೋಟದ ಕಡೆಗೆ ಕಲ್ಲುಗಳನ್ನೆಸೆದರು. ಅವರು ನೀರಿನ ಬುಗ್ಗೆಗಳನ್ನೆಲ್ಲ ನಿಲ್ಲಿಸಿದರು. ಅವರು ಉತ್ತಮವಾದ ಮರಗಳನ್ನು ಕಡಿದು ಉರುಳಿಸಿದರು. ಇಸ್ರೇಲರು ಕೀರ್ಹರೆಷೆತ್‌ನ ಮಾರ್ಗದುದ್ದಕ್ಕೂ ಹೋರಾಟ ಮಾಡಿದರು. ಸೈನಿಕರು ಕೀರ್ಹರೆಷೆತನ್ನು ಸುತ್ತುವರಿದು ಅದಕ್ಕೂ ಮುತ್ತಿಗೆ ಹಾಕಿದರು.

26 ಆ ಯುದ್ಧವು ತನ್ನ ಶಕ್ತಿಯನ್ನು ಮೀರಿ ಹೋಯಿತೆಂದು ಮೋವಾಬಿನ ರಾಜನು ಗ್ರಹಿಸಿಕೊಂಡನು. ಆದ್ದರಿಂದ ಅವನು ಎದೋಮಿನ ರಾಜನನ್ನು ಕೊಂದುಹಾಕಲು ಖಡ್ಗಗಳನ್ನು ಹಿಡಿದ ತನ್ನ ಏಳುನೂರು ಜನರೊಂದಿಗೆ ನುಗ್ಗಿಹೋಗಲು ಪ್ರಯತ್ನಿಸಿದನು. ಆದರೆ ಅವರು ಎದೋಮಿನ ರಾಜನ ಬಳಿಗೆ ನುಗ್ಗಿ ಹೋಗಲಾಗಲಿಲ್ಲ. 27 ಆಗ ಮೋವಾಬಿನ ರಾಜನು, ತನ್ನ ನಂತರ ರಾಜನಾಗುವ ಹಿರಿಯ ಮಗನನ್ನು ಕರೆದೊಯ್ದನು. ಮೋವಾಬಿನ ರಾಜನು ನಗರವನ್ನು ಸುತ್ತುವರಿದಿರುವ ಗೋಡೆಯ ಮೇಲೆ ತನ್ನ ಮಗನನ್ನು ವಧಿಸಿ ಸರ್ವಾಂಗಹೋಮವನ್ನಾಗಿ ಅರ್ಪಿಸಿದನು. ಈ ಕಾರ್ಯವು ಇಸ್ರೇಲಿನ ಜನರನ್ನು ತಳಮಳಗೊಳಿಸಿತು. ಇಸ್ರೇಲಿನ ಜನರು ಮೋವಾಬಿನ ರಾಜನನ್ನು ಬಿಟ್ಟು ತಮ್ಮ ಸ್ವಂತ ದೇಶಕ್ಕೆ ಹಿಂದಿರುಗಿ ಹೋದರು.

2 ಥೆಸಲೋನಿಕದವರಿಗೆ 3

ನಮಗೋಸ್ಕರ ಪ್ರಾರ್ಥಿಸಿ

ಸಹೋದರ ಸಹೋದರಿಯರೇ, ನಮಗೋಸ್ಕರ ಪ್ರಾರ್ಥಿಸಿರಿ. ಪ್ರಭುವಿನ ಉಪದೇಶವು ತ್ವರಿತಗತಿಯಲ್ಲಿ ಹಬ್ಬಲೆಂದು ಪ್ರಾರ್ಥಿಸಿ. ನಿಮ್ಮಂತೆಯೇ ಇತರ ಜನರು ಈ ಉಪದೇಶವನ್ನು ಗೌರವಿಸುವಂತೆ ಪ್ರಾರ್ಥಿಸಿ. ಕೆಟ್ಟವರಾದ ಮತ್ತು ದುಷ್ಟರಾದ ಜನರ ಕೈಯಿಂದ ನಮ್ಮನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿ. (ಪ್ರಭುವಿನಲ್ಲಿ ಜನರೆಲ್ಲರೂ ನಂಬಿಕೆಯಿಟ್ಟಿಲ್ಲ.)

ಆದರೆ ಪ್ರಭುವು ನಂಬಿಗಸ್ತನು. ಆತನು ನಿಮ್ಮನ್ನು ಬಲಗೊಳಿಸುವನು ಮತ್ತು ಕೆಡುಕನಿಂದ (ಸೈತಾನನಿಂದ) ನಿಮ್ಮನ್ನು ರಕ್ಷಿಸುವನು. ನಾವು ನಿಮಗೆ ತಿಳಿಸಿದ ಸಂಗತಿಗಳನ್ನು ನೀವು ಮಾಡುತ್ತಿದ್ದೀರೆಂಬ ಭರವಸೆಯನ್ನು ಪ್ರಭುವೇ ನಮಗೆ ಕೊಟ್ಟಿದ್ದಾನೆ. ನೀವು ಇನ್ನು ಮುಂದೆಯೂ ಇವುಗಳನ್ನು ಮಾಡುವಿರೆಂದು ನಮಗೆ ತಿಳಿದದೆ. ದೇವರ ಪ್ರೀತಿಯ ಕಡೆಗೂ ಮತ್ತು ಕ್ರಿಸ್ತನ ತಾಳ್ಮೆಯ ಕಡೆಗೂ ನಿಮ್ಮ ಹೃದಯಗಳನ್ನು ಪ್ರಭುವೇ ಮುನ್ನಡೆಸಲಿ ಎಂದು ನಾವು ಪ್ರಾರ್ಥಿಸುತ್ತೇವೆ.

ಪ್ರತಿಯೊಬ್ಬರು ದುಡಿಯಲಿ

ಸಹೋದರ ಸಹೋದರಿಯರೇ, ಕೆಲಸ ಮಾಡದ ವಿಶ್ವಾಸಿಯಿಂದ ನೀವು ದೂರವಿರಬೇಕೆಂದು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಅಧಿಕಾರದಿಂದ ನಿಮಗೆ ಆಜ್ಞಾಪಿಸುತ್ತಿದ್ದೇವೆ. ನಾವು ನೀಡಿದ ಉಪದೇಶವನ್ನು ಅವರು ಅನುಸರಿಸುವುದಿಲ್ಲ. ನಾವು ಜೀವಿಸುವಂತೆಯೇ ನೀವೂ ಜೀವಿಸಬೇಕೆಂದು ನಿಮಗೆ ಗೊತ್ತಿದೆ. ನಾವು ನಿಮ್ಮ ಜೊತೆಯಲ್ಲಿದ್ದಾಗ ಸೋಮಾರಿಗಳಾಗಿರಲಿಲ್ಲ; ಹಣ ಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ. ನಿಮ್ಮಲ್ಲಿ ಯಾರಿಗೂ ತೊಂದರೆಯಾಗಬಾರದೆಂದು ಹಗಲಿರುಳು ಎಡೆಬಿಡದೆ ಕೆಲಸ ಮಾಡಿದೆವು. “ನಮಗೆ ಸಹಾಯ ಮಾಡಿ” ಎಂದು ನಿಮ್ಮನ್ನು ಕೇಳಲು ನಮಗೆ ಹಕ್ಕಿತ್ತು. ಆದರೆ ನಮ್ಮ ಪೋಷಣೆಗೆ ಬೇಕಾದದ್ದನ್ನು ನಾವೇ ದುಡಿದು ಸಂಪಾದಿಸಿದೆವು, ಏಕೆಂದರೆ ನಿಮಗೆ ನಾವು ಮಾದರಿಯಾಗಬೇಕೆಂದಿದ್ದೆವು. 10 ನಾವು ನಿಮ್ಮ ಸಂಗಡವಿದ್ದಾಗ, “ಕೆಲಸ ಮಾಡದವನು ಊಟವನ್ನೂ ಮಾಡಕೂಡದು” ಎಂಬ ನಿಯಮವನ್ನು ವಿಧಿಸಿದೆವು.

11 ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಜೀವನದಲ್ಲಿ ಆಸಕ್ತರಾಗಿದ್ದಾರೆ ಎಂಬುದನ್ನು ಕೇಳಿದ್ದೇವೆ. 12 ತಮ್ಮ ಕೆಲಸವನ್ನು ತಾವು ನೋಡಿಕೊಳ್ಳುವಂತೆ ಅವರಿಗೆ ಆಜ್ಞಾಪಿಸುತ್ತಿದ್ದೇವೆ. ಅವರೇ ದುಡಿದು ತಮ್ಮ ಆಹಾರವನ್ನು ಸಂಪಾದಿಸಿಕೊಳ್ಳಬೇಕೆಂದು ಆಜ್ಞಾಪಿಸಿ ಪ್ರಭುವಾದ ಯೇಸು ಕ್ರಿಸ್ತನಲ್ಲಿ ಬೇಡಿಕೊಳ್ಳುತ್ತೇವೆ. 13 ಸಹೋದರ ಸಹೋದರಿಯರೇ, ಒಳ್ಳೆಯದನ್ನು ಮಾಡುವುದರಲ್ಲಿ ಎಂದಿಗೂ ಬೇಸರಗೊಳ್ಳಬೇಡಿ.

14 ಈ ಪತ್ರದ ಮೂಲಕ ನಿಮಗೆ ತಿಳಿಸಿರುವ ಮಾತುಗಳಿಗೆ ಯಾವನಾದರೂ ವಿಧೇಯನಾಗದಿದ್ದರೆ, ಅವನು ಯಾರೆಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ. ಅವನ ಸಹವಾಸಮಾಡಬೇಡಿ. ಆಗ ಅವನಿಗೆ ನಾಚಿಕೆ ಆಗಬಹುದು. 15 ಆದರೆ ಅವನನ್ನು ವೈರಿಯೆಂದು ಎಣಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿ ಹೇಳಿರಿ.

ಕೊನೆಯ ಮಾತುಗಳು

16 ಶಾಂತಿದಾಯಕನಾದ ಪ್ರಭುವು ಎಲ್ಲಾ ಕಾಲಗಳಲ್ಲಿಯೂ ಮತ್ತು ಎಲ್ಲಾ ವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಪ್ರಭುವು ನಿಮ್ಮೆಲ್ಲರೊಂದಿಗಿರಲಿ.

17 ಪೌಲನಾದ ನಾನು ಈಗ ನನ್ನ ಕೈಬರಹದಿಂದ ಈ ಪತ್ರವನ್ನು ಮುಕ್ತಾಯಗೊಳಿಸುತ್ತೇನೆ. ನನ್ನ ಪತ್ರಗಳಿಗೆಲ್ಲಾ ಇದೇ ನನ್ನ ಗುರುತು. ಇದೇ ನನ್ನ ಕೈ ಬರಹ.

18 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ.

ದಾನಿಯೇಲ 7

ನಾಲ್ಕು ಮೃಗಗಳ ವಿಷಯವಾಗಿ ದಾನಿಯೇಲನ ಕನಸು

ಬಾಬಿಲೋನಿನ ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ದಾನಿಯೇಲನಿಗೆ ಒಂದು ದರ್ಶನವಾಯಿತು. ತನ್ನ ಹಾಸಿಗೆಯ ಮೇಲೆ ಮಲಗಿರುವಾಗ ದಾನಿಯೇಲನು ಈ ದರ್ಶನಗಳನ್ನು ಕಂಡನು. ದಾನಿಯೇಲನು ತನ್ನ ಕನಸಿನಲ್ಲಿ ಕಂಡದ್ದನ್ನು ಬರೆದಿಟ್ಟನು. ದಾನಿಯೇಲನು ಹೀಗೆಂದನು: “ನನಗಾದ ರಾತ್ರಿಯ ದರ್ಶನದಲ್ಲಿ, ನಾಲ್ಕು ದಿಕ್ಕಿನಿಂದ ಗಾಳಿಯು ಬೀಸುತ್ತಿತ್ತು. ಆ ಬಿರುಗಾಳಿಯು ಸಮುದ್ರವನ್ನು ಕೆರಳಿಸಿತು. ನಾನು ನಾಲ್ಕು ದೊಡ್ಡ ಮೃಗಗಳನ್ನು ಕಂಡೆ. ಅದರಲ್ಲಿ ಪ್ರತಿಯೊಂದು ಮೃಗವು ಉಳಿದ ಮೃಗಗಳಿಂದ ಭಿನ್ನವಾಗಿತ್ತು. ಆ ನಾಲ್ಕು ಮೃಗಗಳು ಸಮುದ್ರದಿಂದ ಹೊರಬಂದವು.

“ಮೊದಲು ಕಾಣಿಸಿದ ಮೃಗವು ಸಿಂಹದ ಹಾಗಿತ್ತು. ಅದಕ್ಕೆ ಹದ್ದಿನಂತೆ ರೆಕ್ಕೆಗಳಿದ್ದವು. ನಾನು ಈ ಮೃಗವನ್ನು ನೋಡುತ್ತಲೇ ಇರಲು ಅದರ ರೆಕ್ಕೆಗಳು ಕೀಳಲ್ಪಟ್ಟವು. ಅದು ನೆಲದಿಂದ ಎತ್ತಲ್ಪಟ್ಟು ಮನುಷ್ಯನ ಹಾಗೆ ಎರಡು ಕಾಲುಗಳ ಮೇಲೆ ನಿಲ್ಲಿಸಲ್ಪಟ್ಟಿತ್ತು. ಅದಕ್ಕೆ ಮನುಷ್ಯನ ಹೃದಯವನ್ನು ಕೊಡಲಾಯಿತು.

“ಆಮೇಲೆ ನಾನು ಎರಡನೆ ಮೃಗವನ್ನು ಕಂಡೆ. ಆ ಮೃಗವು ಕರಡಿಯ ಹಾಗೆ ಕಾಣಿಸಿತು. ಅದು ಒಂದು ಭಾಗವನ್ನು ಮೇಲೆತ್ತಿಕೊಂಡಿತ್ತು. ತನ್ನ ಬಾಯಲ್ಲಿ ಹಲ್ಲುಗಳ ನಡುವೆ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿತ್ತು. ‘ಎದ್ದು ನಿನಗೆ ಬೇಕಾದಷ್ಟು ಮಾಂಸವನ್ನು ತಿನ್ನು’ ಎಂದು ಅದಕ್ಕೆ ಹೇಳಲಾಯಿತು.

“ಆಮೇಲೆ ನಾನು ಮತ್ತೊಂದು ಮೃಗವನ್ನು ಕಂಡೆ. ಈ ಮೃಗವು ಚಿರತೆಯ ಹಾಗೆ ಕಾಣಿಸಿತು. ಆ ಚಿರತೆಗೆ ಅದರ ಬೆನ್ನಿನ ಮೇಲೆ ನಾಲ್ಕು ರೆಕ್ಕೆಗಳಿದ್ದವು. ಈ ರೆಕ್ಕೆಗಳು ಪಕ್ಷಿಗಳ ರೆಕ್ಕೆಗಳಂತಿದ್ದವು. ಈ ಮೃಗಕ್ಕೆ ನಾಲ್ಕು ತಲೆಗಳಿದ್ದವು. ಅದಕ್ಕೆ ದೊರೆತನವನ್ನು ಕೊಡಲಾಯಿತು.

“ನನಗಾದ ರಾತ್ರಿಯ ದರ್ಶನದಲ್ಲಿ ನಾಲ್ಕನೆ ಮೃಗವನ್ನು ಕಂಡೆ. ಅದು ಅತ್ಯಂತ ಬಲಿಷ್ಠವಾಗಿತ್ತು ಮತ್ತು ಭಯಂಕರವಾಗಿತ್ತು. ಅದು ಅತಿ ಶಕ್ತಿಶಾಲಿಯಾಗಿತ್ತು. ಅದಕ್ಕೆ ದೊಡ್ಡದೊಡ್ಡ ಕಬ್ಬಿಣದ ಹಲ್ಲುಗಳಿದ್ದವು. ಈ ಪ್ರಾಣಿಯು ತಾನು ಬೇಟೆಯಾಡಿದ ಪಶುವನ್ನು ತಂಡುತುಂಡು ಮಾಡುತ್ತಾ ತಿನ್ನುತ್ತಿತ್ತು; ಮಿಕ್ಕಿದ್ದನ್ನು ಅದು ತುಳಿಯುತ್ತಿತ್ತು. ಈ ನಾಲ್ಕನೆಯ ಪ್ರಾಣಿಯು ನಾನು ಅದಕ್ಕೂ ಮುಂಚೆ ನೋಡಿದ ಮೃಗಗಳಿಗಿಂತ ಭಿನ್ನವಾಗಿತ್ತು. ಈ ಮೃಗಕ್ಕೆ ಹತ್ತು ಕೊಂಬುಗಳಿದ್ದವು.

“ನಾನು ಆ ಕೊಂಬುಗಳನ್ನು ನೋಡುತ್ತಿರಲು, ಅವುಗಳ ನಡುವೆ ಇನ್ನೊಂದು ಚಿಕ್ಕ ಕೊಂಬು ಮೊಳೆಯಿತು. ಅದರ ದೆಸೆಯಿಂದ ಮುಂಚಿನ ಕೊಂಬುಗಳಲ್ಲಿ ಮೂರು, ಬೇರುಸಹಿತ ಕೀಳಲ್ಪಟ್ಟವು. ಈ ಚಿಕ್ಕ ಕೊಂಬಿನ ಮೇಲೆ ಕಣ್ಣುಗಳಿದ್ದವು. ಈ ಕಣ್ಣುಗಳು ಮನುಷ್ಯನ ಕಣ್ಣಿನಂತಿದ್ದವು. ಈ ಚಿಕ್ಕ ಕೊಂಬಿನ ಮೇಲೆ ಒಂದು ಬಾಯಿ ಇತ್ತು; ಆ ಬಾಯಿ ಜಂಬಕೊಚ್ಚಿಕೊಳ್ಳುತ್ತಿತ್ತು.

“ನಾನು ನೋಡುತ್ತಿದ್ದಂತೆಯೇ, ಆಸನಗಳನ್ನು ಅವುಗಳ ಸ್ಥಳದಲ್ಲಿ ಹಾಕಲಾಯಿತು.
    ಪುರಾತನ ರಾಜನು ತನ್ನ ಆಸನದ ಮೇಲೆ ಕುಳಿತುಕೊಂಡನು.
ಆತನ ಉಡುಪು ಬಹಳ ಶುಭ್ರವಾಗಿತ್ತು.
ಅದು ಹಿಮದಂತೆ ಶುಭ್ರವಾಗಿತ್ತು.
    ಆತನ ತಲೆಕೂದಲು ಶುಭ್ರವಾಗಿತ್ತು.
    ಅದು ಬಿಳಿಯ ಉಣ್ಣೆಯಂತೆ ಶುಭ್ರವಾಗಿತ್ತು.
ಆತನ ಆಸನವು ಬೆಂಕಿಯಿಂದ ಮಾಡಲಾಗಿತ್ತು.
    ಅದರ ಚಕ್ರಗಳು ಬೆಂಕಿಯ ಜ್ವಾಲೆಗಳಿಂದ ಮಾಡಲಾಗಿದ್ದವು.
10 ಆ ಪುರಾತನ ರಾಜನ ಮುಂದೆ
    ಬೆಂಕಿಯ ನದಿಯೊಂದು ಹರಿಯುತ್ತಿತ್ತು.
ಲಕ್ಷೋಪಲಕ್ಷ ದೂತರು ಆತನನ್ನು ಸೇವಿಸುತ್ತಿದ್ದರು.
    ಕೋಟ್ಯಾನುಕೋಟಿ ಪರಲೋಕ ಸಮೂಹದವರು ಆತನ ಮುಂದೆ ನಿಂತಿದ್ದರು.
ನ್ಯಾಯಾಲಯವು ಪ್ರಾರಂಭವಾಗುವುದಕ್ಕೆ ಎಲ್ಲ ಸಿದ್ಧತೆಗಳು ಆಗಿದ್ದವು
    ಮತ್ತು ಪುಸ್ತಕಗಳು ತೆರೆಯಲ್ಪಟ್ಟವು.

11 “ನಾನು ನೋಡುತ್ತಲೇ ಇದ್ದುಬಿಟ್ಟೆ. ಏಕೆಂದರೆ ಆ ಚಿಕ್ಕ ಕೊಂಬು ಜಂಬ ಕೊಚ್ಚಿಕೊಳ್ಳುತ್ತಿತ್ತು. ಕೊನೆಗೆ ನಾಲ್ಕನೆ ಮೃಗವು ಕೊಲ್ಲಲ್ಪಟ್ಟಿತು. ಅದರ ಹೆಣವನ್ನು ಉರಿಯುವ ಬೆಂಕಿಗೆ ಹಾಕಿ ನಾಶಮಾಡಲಾಯಿತು. 12 ಮಿಕ್ಕ ಮೃಗಗಳ ಅಧಿಕಾರವನ್ನು ಮತ್ತು ಆಡಳಿತವನ್ನು ಅವುಗಳಿಂದ ತೆಗೆದುಕೊಳ್ಳಲಾಯಿತು. ಆದರೆ ತಕ್ಕ ಸಮಯ ಬರುವ ತನಕ ಅವುಗಳಿಗೆ ಜೀವದಿಂದ ಇರಲು ಅವಕಾಶಕೊಡಲಾಯಿತು.

13 “ನನಗಾದ ರಾತ್ರಿಯ ದರ್ಶನದಲ್ಲಿ, ನನ್ನ ಎದುರಿಗೆ ಮನುಷ್ಯಕುಮಾರನಂತಿರುವವನನ್ನು ಕಂಡೆ. ಆತನು ಆಕಾಶದಲ್ಲಿ ಮೇಘಗಳ ಮೇಲೆ ಬರುತ್ತಿದ್ದನು. ಅವನು ಆ ಪುರಾತನ ರಾಜನ ಸಮೀಪಕ್ಕೆ ಬಂದನು; ಅವನನ್ನು ಆ ಮಹಾವೃದ್ಧನ ಸನ್ನಿಧಿಗೆ ತರಲಾಯಿತು.

14 “ಮನುಷ್ಯಕುಮಾರನಂತಿರುವ ಆ ವ್ಯಕ್ತಿಗೆ ದೊರೆತನ, ಮಹಿಮೆ ಮತ್ತು ಆಳುವ ಸಂಪೂರ್ಣ ಅಧಿಕಾರವನ್ನು ಕೊಡಲಾಯಿತು. ಸಕಲ ಜನರು, ಜನಾಂಗಗಳು ಮತ್ತು ಎಲ್ಲ ಭಾಷೆಯ ಜನರು ಆತನನ್ನು ಸೇವಿಸುವರು. ಆತನ ಅಧಿಕಾರವು ಶಾಶ್ವತ, ಆತನ ರಾಜ್ಯವು ಎಂದಿಗೂ ಅಳಿಯದು.

ನಾಲ್ಕನೆಯ ಮೃಗದ ಬಗ್ಗೆ ಬಿದ್ದ ಕನಸಿನ ಅರ್ಥ

15 “ದಾನಿಯೇಲನಾದ ನಾನು ಗಲಿಬಿಲಿಗೊಳಗಾದೆ ಮತ್ತು ತೊಂದರೆಪಟ್ಟೆ, ನಾನು ಕಂಡ ದರ್ಶನಗಳು ನನ್ನನ್ನು ಮನೋವ್ಯಥೆಗೆ ಒಳಪಡಿಸಿದವು. 16 ನಾನು ಅಲ್ಲಿ ನಿಂತಿದ್ದವರಲ್ಲಿ ಒಬ್ಬನ ಬಳಿಗೆ ಹೋದೆ. ಇದೆಲ್ಲದರ ಅರ್ಥವೇನೆಂದು ಅವನನ್ನು ಕೇಳಿದೆ. ಅವನು ಇವುಗಳ ಅರ್ಥವನ್ನು ವಿವರಿಸಿದನು. 17 ಅವನು, ‘ಆ ನಾಲ್ಕು ದೊಡ್ಡ ಮೃಗಗಳು ಅಂದರೆ ನಾಲ್ಕು ರಾಜ್ಯಗಳು. ಆ ರಾಜ್ಯಗಳು ಭೂಮಿಯಿಂದ ಹುಟ್ಟುವವು. 18 ಆದರೆ ದೇವರ ವಿಶೇಷ ಜನರಿಗೆ ಆ ಸಾಮ್ರಾಜ್ಯಗಳು ದೊರೆಯುವವು. ಅವರು ಆ ಸಾಮ್ರಾಜ್ಯವನ್ನು ಶಾಶ್ವತವಾಗಿ ಅನುಭವಿಸುವರು’ ಎಂದು ಹೇಳಿದನು.

19 “ಆಮೇಲೆ ನಾನು, ‘ನಾಲ್ಕನೆಯ ಮೃಗ ಯಾವುದು? ಅದು ಏನನ್ನು ಸೂಚಿಸುತ್ತದೆ?’ ಎಂಬುದನ್ನು ತಿಳಿದುಕೊಳ್ಳಬಯಸಿದೆ. ನಾಲ್ಕನೆಯ ಮೃಗವು ಉಳಿದೆಲ್ಲ ಮೃಗಗಳಿಂದ ಭಿನ್ನವಾಗಿತ್ತು. ಅದು ಬಹಳ ಭಯಾನಕವಾಗಿತ್ತು. ಅದಕ್ಕೆ ಕಬ್ಬಿಣದ ಹಲ್ಲುಗಳು ಮತ್ತು ಕಂಚಿನ ಉಗುರುಗಳಿದ್ದವು. ಅದು ತಾನು ಬೇಟೆಯಾಡಿದ ಪಶುವನ್ನು ತುಂಡುತುಂಡು ಮಾಡಿ ಸಂಪೂರ್ಣವಾಗಿ ತಿಂದು ಮಿಕ್ಕಿದ್ದನ್ನು ಕಾಲಿನಿಂದ ತುಳಿದುಹಾಕುತ್ತಿತ್ತು. 20 ನಾಲ್ಕನೆಯ ಪ್ರಾಣಿಯ ತಲೆಯ ಮೇಲಿದ್ದ ಹತ್ತು ಕೊಂಬುಗಳ ಬಗ್ಗೆ ನಾನು ತಿಳಿದುಕೊಳ್ಳಬಯಸಿದೆ. ನಾನು ಅಲ್ಲಿ ಮೊಳೆತ ಚಿಕ್ಕ ಕೊಂಬಿನ ಬಗ್ಗೆ ತಿಳಿದುಕೊಳ್ಳಬಯಸಿದೆ. ಆ ಚಿಕ್ಕ ಕೊಂಬು ಅಲ್ಲಿದ್ದ ಹತ್ತು ಕೊಂಬುಗಳಲ್ಲಿ ಮೂರನ್ನು ಬೀಳಿಸಿಬಿಟ್ಟಿತು. ಈ ಚಿಕ್ಕ ಕೊಂಬು ಉಳಿದ ಕೊಂಬುಗಳಿಗಿಂತ ಕೀಳಾಗಿ ಕಂಡುಬಂತು. ಅದಕ್ಕೆ ಮನುಷ್ಯರ ಕಣ್ಣುಗಳಂತೆ ಕಣ್ಣುಗಳಿದ್ದವು. ಆ ಚಿಕ್ಕ ಕೊಂಬು ಜಂಬ ಕೊಚ್ಚಿಕೊಳ್ಳುತ್ತಿತ್ತು. 21 ನಾನು ನೋಡುತ್ತಿದ್ದಂತೆಯೇ ಈ ಚಿಕ್ಕ ಕೊಂಬು ದೇವಭಕ್ತರ ಮೇಲೆ ಬಿದ್ದು ಅವರೊಂದಿಗೆ ಯುದ್ಧಮಾಡುತ್ತಿತ್ತು. ಆ ಕೊಂಬು ಅವರ ಕೊಲೆ ಮಾಡುತ್ತಿತ್ತು. 22 ಪುರಾತನ ರಾಜನು ಬಂದು ನ್ಯಾಯತೀರಿಸುವವರೆಗೂ ಆ ಚಿಕ್ಕಕೊಂಬು ದೇವಭಕ್ತರ ಕೊಲೆ ಮಾಡುತ್ತಿತ್ತು. ಪುರಾತನ ರಾಜನು ಈ ಚಿಕ್ಕ ಕೊಂಬಿನ ಬಗ್ಗೆ ತೀರ್ಪನ್ನು ಕೊಟ್ಟನು. ಈ ತೀರ್ಪು ದೇವಭಕ್ತರ ಪರವಾಗಿತ್ತು. ಆದ್ದರಿಂದ ಅವರು ಸಾಮ್ರಾಜ್ಯವನ್ನು ಪಡೆದರು.

23 “ಅವನು ನನಗೆ ಈ ರೀತಿ ವಿವರಿಸಿದನು: ‘ನಾಲ್ಕನೆಯ ಮೃಗವು ಈ ಲೋಕದಲ್ಲಿ ಉಂಟಾಗುವ ನಾಲ್ಕನೆಯ ರಾಜ್ಯ. ಇದು ಬೇರೆಲ್ಲ ರಾಜ್ಯಗಳಿಂದ ಭಿನ್ನವಾಗಿರುತ್ತದೆ. ಆ ನಾಲ್ಕನೆಯ ರಾಜ್ಯವು ಜಗತ್ತಿನ ಜನರನ್ನೆಲ್ಲ ನಾಶಗೊಳಿಸುವುದು. ಇದು ಜಗತ್ತಿನ ಎಲ್ಲ ರಾಷ್ಟ್ರಗಳನ್ನು ತುಳಿದು ಪುಡಿಪುಡಿ ಮಾಡುವುದು. 24 ಹತ್ತು ಕೊಂಬುಗಳು ಈ ನಾಲ್ಕನೆಯ ರಾಜ್ಯದ ಹತ್ತು ಜನ ಅರಸರನ್ನು ಸೂಚಿಸುತ್ತವೆ. ಆ ಹತ್ತು ಜನ ಅರಸರ ತರುವಾಯ ಮತ್ತೊಬ್ಬ ಅರಸನು ಬರುವನು. ಅವನು ತನಗಿಂತಲೂ ಮುಂಚೆ ರಾಜ್ಯಭಾರ ಮಾಡಿದ ಅರಸರಿಗಿಂತ ಭಿನ್ನನಾಗಿರುವನು. ಅವನು ಬೇರೆ ಅರಸರುಗಳಲ್ಲಿ ಮೂವರನ್ನು ಸೋಲಿಸುವನು. 25 ಈ ಪುರಾತನ ರಾಜನು ಮಹೋನ್ನತನಾದ ದೇವರ ವಿರುದ್ಧ ಮಾತನಾಡುವನು. ಆ ರಾಜನು ದೇವರ ಪರಮ ಭಕ್ತರಿಗೆ ತೊಂದರೆ ಕೊಡುವನು ಮತ್ತು ಕೊಲೆ ಮಾಡುವನು. ಆ ರಾಜನು ರೂಢಿಯಲ್ಲಿದ್ದ ಧರ್ಮವಿಧಿಗಳನ್ನು ಮಾರ್ಪಡಿಸುವ ಪ್ರಯತ್ನ ಮಾಡುವನು. ಆ ಭಕ್ತರು ಒಂದು ಕಾಲ, ಎರಡು ಕಾಲ, ಅರ್ಧಕಾಲ[a] ಅವನ ಕೈವಶವಾಗಿರುವರು.

26 “‘ಆಮೇಲೆ ಏನಾಗಬೇಕೆಂಬುದನ್ನು ನ್ಯಾಯಸಭೆಯು ನಿರ್ಣಯಿಸುವುದು. ಆ ರಾಜನ ಅಧಿಕಾರವನ್ನು ಕಸಿದುಕೊಳ್ಳಲಾಗುವುದು. ಅವನ ಸಾಮ್ರಾಜ್ಯವು ಸಂಪೂರ್ಣವಾಗಿ ಕೊನೆಗೊಳ್ಳುವುದು. 27 ಆಗ ದೇವಭಕ್ತರು ರಾಜ್ಯವನ್ನು ಆಳುವರು. ಅವರು ಸಮಸ್ತ ಭೂಮಂಡಲದ ರಾಜ್ಯಗಳ ಮೇಲೆ ಆಳ್ವಿಕೆ ಮಾಡುವರು. ಈ ಸಾಮ್ರಾಜ್ಯವು ಕೊನೆಯವರೆಗೂ ಉಳಿಯುವುದು. ಮಿಕ್ಕ ಎಲ್ಲ ರಾಜ್ಯಗಳ ಜನರು ಅವರನ್ನು ಗೌರವಿಸುವರು ಮತ್ತು ಸೇವಿಸುವರು.’

28 “ಇಲ್ಲಿಗೆ ಕನಸು ಮುಕ್ತಾಯವಾಯಿತು. ದಾನಿಯೇಲನೆಂಬ ಹೆಸರಿನ ನಾನು ಬಹಳ ಹೆದರಿದ್ದೆ. ಭಯದಿಂದ ನನ್ನ ಮುಖ ಬಿಳುಚಿ ಹೋಗಿತ್ತು. ಆದರೆ ನಾನು ನೋಡಿದ ಮತ್ತು ಕೇಳಿದ ವಿಷಯಗಳ ಬಗ್ಗೆ ಬೇರೆಯವರಿಗೆ ಹೇಳಲಿಲ್ಲ.”

ಕೀರ್ತನೆಗಳು 114-115

114 ಇಸ್ರೇಲರು ಈಜಿಪ್ಟಿನಿಂದ ಹೊರಟರು.
    ಯಾಕೋಬ್ಯರು ಪರದೇಶದಿಂದ ಹೊರಟರು.
ಆಗ ಯೆಹೂದದ ಜನರು ದೇವರ ವಿಶೇಷ ಪ್ರಜೆಯಾದರು;
    ಇಸ್ರೇಲ್ ಆತನ ರಾಜ್ಯವಾಯಿತು.
ಕೆಂಪು ಸಮುದ್ರವು ಇದನ್ನು ಕಂಡು ಓಡಿಹೋಯಿತು.
    ಜೋರ್ಡನ್ ನದಿಯು ಹಿಂತಿರುಗಿ ಓಡಿಹೋಯಿತು.
ಬೆಟ್ಟಗಳು ಟಗರುಗಳಂತೆಯೂ
    ಗುಡ್ಡಗಳು ಕುರಿಮರಿಗಳಂತೆಯೂ ನೃತ್ಯಮಾಡಿದವು.

ಕೆಂಪು ಸಮುದ್ರವೇ, ನೀನೇಕೆ ಓಡಿಹೋದೆ?
    ಜೋರ್ಡನ್ ನದಿಯೇ ನೀನೇಕೆ ಹಿಂತಿರುಗಿ ಓಡಿಹೋದೆ?
ಬೆಟ್ಟಗಳೇ, ನೀವೇಕೆ ಟಗರುಗಳಂತೆಯೂ
    ಗುಡ್ಡಗಳೇ, ನೀವೇಕೆ ಕುರಿಮರಿಗಳಂತೆಯೂ ನೃತ್ಯಮಾಡಿದಿರಿ?

ಯಾಕೋಬನ ದೇವರೂ ಒಡೆಯನೂ ಆಗಿರುವ
    ಯೆಹೋವನ ಎದುರಿನಲ್ಲಿ ಭೂಮಿಯು ನಡುಗಿತು.
ಬಂಡೆಯೊಳಗಿಂದ ನೀರು ಹರಿದುಬರುವಂತೆ ಮಾಡಿದವನು ಆತನೇ.
    ಗಟ್ಟಿಯಾದ ಬಂಡೆಯೊಳಗಿಂದ ನೀರಿನ ಒರತೆಯನ್ನು ಬರಮಾಡಿದವನು ಆತನೇ.

115 ಯೆಹೋವನೇ, ಘನಮಾನಗಳು ನಮ್ಮವಲ್ಲ!
    ಅವು ನಿನ್ನವೇ.
ನಿನ್ನ ಪ್ರೀತಿಯ ನಿಮಿತ್ತವಾಗಿಯೂ ನಂಬಿಗಸ್ತಿಕೆಯ ನಿಮಿತ್ತವಾಗಿಯೂ ಘನಮಾನಗಳು ನಿನಗೇ ಸಲ್ಲತಕ್ಕದ್ದು.
ಅವರ ದೇವರು ಎಲ್ಲಿದ್ದಾನೆಂದು ಜನಾಂಗಗಳು ಯಾಕೆ ಹೇಳಬೇಕು?
ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಬಯಸಿದ್ದನ್ನೆಲ್ಲಾ ಮಾಡುತ್ತಾನೆ.
ಅನ್ಯಜನಾಂಗಗಳ “ದೇವರುಗಳು” ಬೆಳ್ಳಿಬಂಗಾರಗಳಿಂದ ಮಾಡಿದ ವಿಗ್ರಹಗಳಷ್ಟೇ.
    ಅವುಗಳನ್ನು ಮಾಡಿದವರು ಮನುಷ್ಯರೇ.
ಆ ವಿಗ್ರಹಗಳಿಗೆ ಬಾಯಿಗಳಿವೆ, ಆದರೆ ಮಾತಾಡಲಾರವು.
    ಕಣ್ಣುಗಳಿವೆ, ಆದರೆ ನೋಡಲಾರವು.
ಕಿವಿಗಳಿವೆ, ಆದರೆ ಕೇಳಲಾರವು.
    ಮೂಗುಗಳಿವೆ, ಆದರೆ ಮೂಸಲಾರವು.
ಕೈಗಳಿವೆ, ಆದರೆ ಯಾವುದನ್ನೂ ಮುಟ್ಟಲಾರವು.
    ಕಾಲುಗಳಿವೆ, ಆದರೆ ನಡೆಯಲಾರವು.
    ಅವುಗಳ ಗಂಟಲುಗಳಿಂದ ಶಬ್ದವೇ ಹೊರಡದು.
ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಟ್ಟಿರುವವರೂ ಅವುಗಳಂತೆಯೇ.

ಇಸ್ರೇಲರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
10 ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
11 ಯೆಹೋವನ ಭಕ್ತರು ಆತನಲ್ಲಿ ಭರವಸವಿಡುವರು.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.

12 ಯೆಹೋವನು ನಮ್ಮನ್ನು ಜ್ಞಾಪಕಮಾಡಿಕೊಂಡು ಆಶೀರ್ವದಿಸುವನು.
    ಆತನು ಇಸ್ರೇಲನ್ನೂ ಆರೋನನ ಮನೆತನವನ್ನೂ ಆಶೀರ್ವದಿಸುವನು.
13 ಆತನು ದೊಡ್ಡವರೂ ಚಿಕ್ಕವರೂ ಎಂದೆನ್ನದೆ ತನ್ನ ಭಕ್ತರನ್ನೆಲ್ಲಾ ಆಶೀರ್ವದಿಸುವನು.

14 ಯೆಹೋವನು ನಿಮ್ಮ ಕುಟುಂಬಗಳನ್ನೂ ನಿಮ್ಮ ಮಕ್ಕಳ ಕುಟುಂಬಗಳನ್ನೂ ಅಭಿವೃದ್ಧಿಪಡಿಸಲಿ.
15     ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ.
    ಪರಲೋಕವನ್ನೂ ಭೂಲೋಕವನ್ನೂ ಸೃಷ್ಟಿಮಾಡಿದಾತನು ಆತನೇ.
16 ಪರಲೋಕವು ಯೆಹೋವನದು.
    ಆತನು ಭೂಲೋಕವನ್ನು ಮನುಷ್ಯರಿಗೆ ಕೊಟ್ಟನು.
17 ಸತ್ತುಹೋದವರು ಯೆಹೋವನನ್ನು ಕೊಂಡಾಡುವುದಿಲ್ಲ.
    ಸಮಾಧಿಯೊಳಗಿರುವವರು ಆತನನ್ನು ಸ್ತುತಿಸುವುದಿಲ್ಲ.
18 ನಾವಾದರೋ ಯೆಹೋವನನ್ನು ಈಗಲೂ ಯಾವಾಗಲೂ ಸ್ತುತಿಸುವೆವು!

ಯೆಹೋವನಿಗೆ ಸ್ತೋತ್ರ!

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International