M’Cheyne Bible Reading Plan
ಸಿನಾಯ್ ಬೆಟ್ಟದಲ್ಲಿ ಎಲೀಯನು
19 ರಾಜನಾದ ಅಹಾಬನು ಈಜೆಬೆಲಳಿಗೆ ಎಲೀಯನು ಮಾಡಿದ ಎಲ್ಲಾ ಕಾರ್ಯಗಳನ್ನು ಹೇಳಿದನು. ಎಲೀಯನು (ಬಾಳನ) ಪ್ರವಾದಿಗಳನ್ನೆಲ್ಲ ಖಡ್ಗದಿಂದ ಹೇಗೆ ಕೊಂದನೆಂಬುದನ್ನೂ ಅಹಾಬನು ಅವಳಿಗೆ ಹೇಳಿದನು. 2 ಆದ್ದರಿಂದ ಈಜೆಬೆಲಳು ಎಲೀಯನ ಬಳಿಗೆ ಒಬ್ಬ ಸಂದೇಶಕನನ್ನು ಕಳುಹಿಸಿದಳು. ಈಜೆಬೆಲಳು, “ನೀನು ಆ ಪ್ರವಾದಿಗಳನ್ನು ಕೊಂದುಹಾಕಿದಂತೆ ನಾಳೆಯ ದಿನ ನಾನು ಇದೇ ಸಮಯಕ್ಕೆ ಮುಂಚೆ, ನಿನ್ನನ್ನು ಕೊಂದುಹಾಕುವೆನೆಂದು ಪ್ರಮಾಣ ಮಾಡುತ್ತೇನೆ. ನಾನು ಈ ಕಾರ್ಯದಲ್ಲಿ ವಿಜಯಿಯಾಗದಿದ್ದಲ್ಲಿ, ದೇವರುಗಳು ನನ್ನನ್ನು ಕೊಲ್ಲಲಿ” ಎಂದು ಹೇಳಿದಳು.
3 ಎಲೀಯನು ಇದನ್ನು ಕೇಳಿ ಭಯಗೊಂಡನು. ಅವನು ತನ್ನ ಜೀವರಕ್ಷಣೆಗಾಗಿ ಓಡಿಹೋದನು. ಅವನು ತನ್ನ ಸೇವಕನನ್ನೂ ತನ್ನ ಸಂಗಡ ಕರೆದೊಯ್ದನು. ಅವರು ಯೆಹೂದದ ಬೇರ್ಷೆಬಕ್ಕೆ ಹೋದರು. ಎಲೀಯನು ಬೇರ್ಷೆಬದಲ್ಲಿ ತನ್ನ ಸೇವಕನನ್ನು ಬಿಟ್ಟನು. 4 ನಂತರ ಎಲೀಯನು ಮರಳುಗಾಡಿನಲ್ಲಿ ದಿನವೆಲ್ಲ ನಡೆದನು. ಎಲೀಯನು ಒಂದು ಪೊದೆಯ ಕೆಳಗೆ ಕುಳಿತುಕೊಂಡನು. ಅವನು ಸಾಯಲು ಇಚ್ಛಿಸಿ, “ಯೆಹೋವನೇ, ನನಗೆ ಜೀವನ ಸಾಕಾಗಿದೆ! ಸಾಯಲು ನನಗೆ ಅವಕಾಶ ಮಾಡು. ನಾನು ನನ್ನ ಪೂರ್ವಿಕರಿಗಿಂತಲೂ ಉತ್ತಮನೇನಲ್ಲ” ಎಂದು ಹೇಳಿದನು.
5 ನಂತರ ಎಲೀಯನು ಪೊದೆಯ ಕೆಳಗೆ ಮಲಗಿ ನಿದ್ದೆಹೋದನು. ದೂತನೊಬ್ಬನು ಎಲೀಯನ ಹತ್ತಿರಕ್ಕೆ ಬಂದು ಅವನನ್ನು ಸ್ಪರ್ಶಿಸಿ, “ಎದ್ದೇಳು! ಊಟಮಾಡು!” ಎಂದನು. 6 ಇದ್ದಲಿನ ಮೇಲೆ ಸುಟ್ಟ ಒಂದು ರೊಟ್ಟಿಯೂ ಒಂದು ತಂಬಿಗೆ ನೀರೂ ಅವನ ತಲೆಯ ಹತ್ತಿರದಲ್ಲಿ ಇದ್ದುದನ್ನು ಎಲೀಯನು ನೋಡಿದನು. ಎಲೀಯನು ರೊಟ್ಟಿಯನ್ನು ತಿಂದು ನೀರನ್ನು ಕುಡಿದನು. ನಂತರ ಅವನು ನಿದ್ದೆ ಮಾಡಿದನು.
7 ತರುವಾಯ ಯೆಹೋವನ ದೂತನು ಅವನ ಬಳಿಗೆ ಮತ್ತೆ ಬಂದು ಅವನನ್ನು ತಟ್ಟಿ ಅವನಿಗೆ, “ಎದ್ದೇಳು! ಊಟಮಾಡು! ನೀನು ಊಟ ಮಾಡದಿದ್ದರೆ, ಬಹುದೂರ ನೀನು ಪ್ರಯಾಣ ಮಾಡಬೇಕಾಗಿರುವುದರಿಂದ ನಿನ್ನಲ್ಲಿ ಸಾಕಷ್ಟು ಶಕ್ತಿಯಿರುವುದಿಲ್ಲ” ಎಂದು ಹೇಳಿದನು. 8 ಎಲೀಯನು ಎದ್ದು ಊಟಮಾಡಿ ನೀರನ್ನು ಕುಡಿದನು. ಎಲೀಯನು ನಲವತ್ತು ಹಗಲು ಮತ್ತು ರಾತ್ರಿ ಪ್ರಯಾಣ ಮಾಡಲು ಸಾಕಾಗುವಷ್ಟು ಶಕ್ತಿಯನ್ನು ಆ ಆಹಾರವು ನೀಡಿತು. ಅವನು ದೇವರ ಬೆಟ್ಟವಾದ ಹೋರೇಬ್‌ಗೆ ಹೋದನು. 9 ಎಲೀಯನು ಅಲ್ಲಿನ ಒಂದು ಗುಹೆಗೆ ಹೋಗಿ ರಾತ್ರಿಯೆಲ್ಲಾ ಅಲ್ಲಿ ಕಳೆದನು.
ಆಗ ಯೆಹೋವನು ಎಲೀಯನೊಂದಿಗೆ ಮಾತನಾಡಿ, “ಎಲೀಯನೇ, ನೀನು ಇಲ್ಲಿರುವುದೇಕೆ?” ಎಂದು ಕೇಳಿದನು.
10 ಎಲೀಯನು, “ಸರ್ವಶಕ್ತನಾದ ಯೆಹೋವ ದೇವರೇ, ನಾನು ಯಾವಾಗಲೂ ನಿನ್ನ ಸೇವೆಯನ್ನು ಮಾಡಿದೆನು. ನಾನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ನಿನ್ನ ಸೇವೆಯನ್ನು ಮಾಡಿದೆನು. ಆದರೆ ಇಸ್ರೇಲಿನ ಜನರು ನಿನ್ನೊಂದಿಗೆ ತಾವು ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿದರು. ಅವರು ನಿನ್ನ ಯಜ್ಞವೇದಿಕೆಗಳನ್ನು ನಾಶಪಡಿಸಿದರು. ಅವರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು. ಇನ್ನೂ ಜೀವಂತವಾಗಿರುವ ಪ್ರವಾದಿಯು ನಾನೊಬ್ಬನು ಮಾತ್ರ. ಅವರು ಈಗ ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ!” ಎಂದು ಹೇಳಿದನು.
11 ಆಗ ಯೆಹೋವನು ಎಲೀಯನಿಗೆ, “ಹೋಗು, ನನ್ನ ಎದುರಿಗೆ ಬೆಟ್ಟದ ಮೇಲೆ ನಿಲ್ಲು. ನಾನು ನಿನ್ನ ಬಳಿಯಲ್ಲಿ ಹಾದು ಹೋಗುತ್ತೇನೆ” ಎಂದು ಹೇಳಿದನು. ಆಗ ಬಿರುಗಾಳಿಯು ಬೀಸಿತು. ಆ ಬಿರುಗಾಳಿಯು ಬೆಟ್ಟಗಳನ್ನು ಸೀಳಿಹಾಕಿತು; ಅದು ದೊಡ್ಡ ಬಂಡೆಗಳನ್ನು ಯೆಹೋವನ ಎದುರಿನಲ್ಲಿ ಒಡೆದುಹಾಕಿತು. ಆದರೆ ಆ ಗಾಳಿಯೇ ಯೆಹೋವನಲ್ಲ! ಆ ಬಿರುಗಾಳಿಯ ನಂತರ ಅಲ್ಲಿ ಒಂದು ಭೂಕಂಪವುಂಟಾಯಿತು. ಆದರೆ ಆ ಭೂಕಂಪವು ಯೆಹೋವನಲ್ಲ. 12 ಭೂಕಂಪದ ನಂತರ ಅಲ್ಲಿ ಬೆಂಕಿ ಉಂಟಾಯಿತು. ಆದರೆ ಆ ಬೆಂಕಿಯೂ ಯೆಹೋವನಲ್ಲ. ಆ ಬೆಂಕಿಯ ನಂತರ ಸದ್ದಿಲ್ಲದ ಮೃದುವಾದ ಧ್ವನಿ ಉಂಟಾಯಿತು.
13 ಎಲೀಯನಿಗೆ ಆ ಧ್ವನಿಯು ಕೇಳಿಸಿದಾಗ, ಅವನು ತನ್ನ ಮೇಲಂಗಿಯಿಂದ ಮುಖವನ್ನು ಮುಚ್ಚಿಕೊಂಡನು. ನಂತರ ಅವನು ಗುಹೆಯ ಹತ್ತಿರಕ್ಕೆ ಹೋಗಿ, ಅದರ ದ್ವಾರದಲ್ಲಿ ನಿಂತುಕೊಂಡನು. ಆಗ ಆ ಧ್ವನಿಯು, “ಎಲೀಯನೇ, ನೀನು ಏಕೆ ಇಲ್ಲಿರುವೆ?” ಎಂದು ಅವನನ್ನು ಕೇಳಿತು.
14 ಎಲೀಯನು, “ಸರ್ವಶಕ್ತನಾದ ಯೆಹೋವ ದೇವರೇ, ನಾನು ಯಾವಾಗಲೂ ನಿನ್ನ ಸೇವೆಯನ್ನು ಮಾಡಿದೆನು. ನಾನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿ ನಿನ್ನ ಸೇವೆಯನ್ನು ಮಾಡಿದೆನು. ಆದರೆ ಇಸ್ರೇಲಿನ ಜನರು ನಿನ್ನೊಂದಿಗೆ ತಾವು ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿದರು. ಅವರು ನಿನ್ನ ಯಜ್ಞವೇದಿಕೆಗಳನ್ನು ನಾಶಪಡಿಸಿದರು. ಅವರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು. ಇನ್ನೂ ಜೀವಂತವಾಗಿರುವ ಪ್ರವಾದಿಯು ನಾನೊಬ್ಬನು ಮಾತ್ರ. ಅವರು ಈಗ ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ!” ಎಂದು ಹೇಳಿದನು.
15 ಯೆಹೋವನು, “ನೀನು ಬಂದ ದಾರಿಯಿಂದ ಹಿಂತಿರುಗಿ ದಮಸ್ಕದ ಅರಣ್ಯಕ್ಕೆ ಹೋಗು. ಅಲ್ಲಿಂದ ದಮಸ್ಕಕ್ಕೆ ಹೋಗಿ, ಹಜಾಯೇಲನನ್ನು ಅರಾಮ್ಯರ ರಾಜನನ್ನಾಗಿ ಅಭಿಷೇಕಿಸು. 16 ನಂತರ ನಿಂಷಿಯ ಮಗನಾದ ಯೇಹುವನ್ನು ಇಸ್ರೇಲಿನ ರಾಜನನ್ನಾಗಿ ಅಭಿಷೇಕಿಸು. ಅಬೇಲ್ ಮೆಹೋಲದ ಶಾಫಾಟನ ಮಗನಾದ ಎಲೀಷನನ್ನು ನಿನ್ನ ಜಾಗದಲ್ಲಿ ಪ್ರವಾದಿಯನ್ನಾಗಿ ಅಭಿಷೇಕಿಸು. 17 ಹಜಾಯೇಲನು ಕೆಟ್ಟವರಾದ ಅನೇಕ ಜನರನ್ನು ಕೊಲ್ಲುತ್ತಾನೆ. ಹಜಾಯೇಲನ ಖಡ್ಗದಿಂದ ತಪ್ಪಿಸಿಕೊಂಡವರನ್ನು ಯೇಹುವು ಕೊಲ್ಲುತ್ತಾನೆ. ಯೇಹುವಿನಿಂದ ತಪ್ಪಿಸಿಕೊಂಡ ಆ ಕೆಟ್ಟ ಜನರನ್ನೆಲ್ಲ ಎಲೀಷನು ಕೊಲ್ಲುತ್ತಾನೆ. 18 ಎಲೀಯನೇ, ಇಸ್ರೇಲಿನಲ್ಲಿ ನಂಬಿಗಸ್ಥನಾದ ವ್ಯಕ್ತಿಯು ನೀನೊಬ್ಬನು ಮಾತ್ರ ಅಲ್ಲ. ಆ ದುಷ್ಟಜನರು ಅನೇಕ ಜನರನ್ನು ಕೊಲ್ಲುತ್ತಾರೆ. ಆದರೂ, ಅದಾದ ನಂತರ, ಬಾಳನಿಗೆ ಎಂದೆಂದೂ ಬಾಗಿ ನಮಸ್ಕರಿಸದಿರುವ ಏಳು ಸಾವಿರ ಜನರು ಇನ್ನೂ ಇಸ್ರೇಲಿನಲ್ಲಿ ವಾಸಮಾಡುತ್ತಿದ್ದಾರೆ! ಬಾಳನ ವಿಗ್ರಹಕ್ಕೆ ಎಂದೂ ಮುದ್ದಿಡದ ಆ ಏಳು ಸಾವಿರ ಜನರನ್ನು ನಾನು ಅಲ್ಲಿ ಉಳಿಸುವೆನು.”
ಎಲೀಷನು ಪ್ರವಾದಿಯಾದನು
19 ಎಲೀಯನು ಆ ಸ್ಥಳದಿಂದ ಹೊರಟು ಶಾಫಾಟನ ಮಗನಾದ ಎಲೀಷನನ್ನು ಕಂಡುಹಿಡಿಯಲು ಹೋದನು. ಎಲೀಷನು ಹನ್ನೆರಡು ಜೋಡಿ ಎತ್ತುಗಳನ್ನು ತಂದು ಭೂಮಿಯನ್ನು ಉಳುತ್ತಿದ್ದನು. ಎಲೀಯನು ಬಂದಾಗ ಎಲೀಷನು ಹನ್ನೆರಡನೆಯ ಜೋಡಿಯಿಂದ ತಾನಾಗಿ ಭೂಮಿಯನ್ನು ಉಳುತ್ತಿದ್ದನು. ಎಲೀಯನು ಎಲೀಷನ ಹತ್ತಿರಕ್ಕೆ ಹೋಗಿ ತನ್ನ ಮೇಲಂಗಿಯನ್ನು ಎಲೀಷನಿಗೆ ತೊಡಿಸಿದನು. 20 ಎಲೀಷನು ತಕ್ಷಣ ತನ್ನ ಎತ್ತುಗಳನ್ನು ಬಿಟ್ಟು ಎಲೀಯನ ಹಿಂದೆ ಹೋದನು. ಎಲೀಷನು, “ನನ್ನ ತಾಯಿಗೆ ಮುದ್ದಿಟ್ಟು, ತಂದೆಗೆ ನಮಸ್ಕರಿಸಿ, ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಿದನು.
ಎಲೀಯನು, “ಸರಿ, ನಾನು ನಿನ್ನನ್ನು ತಡೆಯುವುದಿಲ್ಲ” ಎಂದು ಉತ್ತರಿಸಿದನು.
21 ನಂತರ ಎಲೀಷನು ಹೋಗಿ ತಾನು ಉಳುತ್ತಿದ್ದ ಎತ್ತುಗಳನ್ನು ವಧಿಸಿ, ಮಾಂಸವನ್ನು ನೊಗದಿಂದಲೇ ಬೇಯಿಸಿ ಜನರೆಲ್ಲರಿಗೆ ಔತಣವನ್ನು ಏರ್ಪಡಿಸಿದನು. ನಂತರ ಅವನು ಎಲೀಯನನ್ನು ಹಿಂಬಾಲಿಸಿ ಅವನ ಸಹಾಯಕನಾದನು.
ಥೆಸಲೋನಿಕದಲ್ಲಿ ಪೌಲನ ಕಾರ್ಯ
2 ಸಹೋದರ ಸಹೋದರಿಯರೇ, ನಾವು ನಿಮ್ಮಲ್ಲಿಗೆ ಬಂದದ್ದು ವ್ಯರ್ಥವಾಗಲಿಲ್ಲ ಎಂಬುದು ನಿಮಗೆ ತಿಳಿದಿದೆ. 2 ನಿಮ್ಮಲ್ಲಿಗೆ ಬರುವುದಕ್ಕೆ ಮೊದಲೇ ಫಿಲಿಪ್ಪಿಯಲ್ಲಿ ಹಿಂಸೆಯನ್ನು ಅನುಭವಿಸಿದೆವು. ಅಲ್ಲಿಯ ಜನರು ನಮ್ಮ ವಿರುದ್ಧವಾಗಿ ಕೆಟ್ಟದ್ದನ್ನು ಹೇಳಿದರು. ಅದೆಲ್ಲವೂ ನಿಮಗೆ ತಿಳಿದಿದೆ. ನಿಮ್ಮ ಬಳಿಗೆ ಬಂದಾಗ, ಅನೇಕ ಜನರು ನಮಗೆ ವಿರುದ್ಧವಾಗಿದ್ದರು. ಆದರೆ ಧೈರ್ಯದಿಂದ ಇರಲು ಮತ್ತು ನಿಮಗೆ ಸುವಾರ್ತೆಯನ್ನು ತಿಳಿಸಲು ದೇವರು ನಮಗೆ ಸಹಾಯ ಮಾಡಿದನು. 3 ನಮ್ಮ ಬೋಧನೆಯು ತಪ್ಪೂ ಅಲ್ಲ ಮತ್ತು ಅಶುದ್ಧವಾದ ಉದ್ದೇಶವನ್ನು ಹೊಂದಿಯೂ ಇಲ್ಲ ಮತ್ತು ನಿಮ್ಮನ್ನು ಮೋಸಗೊಳಿಸುವ ಪ್ರಯತ್ನವೂ ಅಲ್ಲ. 4 ನಾವು ಸುವಾರ್ತೆಯನ್ನು ತಿಳಿಸುತ್ತೇವೆ. ಏಕೆಂದರೆ ದೇವರು ನಮ್ಮನ್ನು ಪರಿಶೋಧಿಸಿದ್ದಾನೆ ಮತ್ತು ಸುವಾರ್ತೆಯನ್ನು ತಿಳಿಸಲು ನಮ್ಮನ್ನು ನೇಮಿಸಿದ್ದಾನೆ. ಆದುದರಿಂದ ಜನರನ್ನು ಮೆಚ್ಚಿಸಲು ಪ್ರಯತ್ನಿಸದೆ ನಮ್ಮ ಹೃದಯಗಳನ್ನು ಪರೀಕ್ಷಿಸುವಾತನಾದ ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತೇವೆ.
5 ನಿಮ್ಮ ಬಗ್ಗೆ ಒಳ್ಳೆಯದನ್ನು ಹೇಳಿ ನಿಮ್ಮನ್ನು ಮರುಳು ಮಾಡಬೇಕೆಂದು ನಾವೆಂದೂ ಪ್ರಯತ್ನಿಸಿಲ್ಲವೆಂಬುದು ನಿಮಗೆ ತಿಳಿದಿದೆ. ನಾವು ನಿಮ್ಮ ಹಣವನ್ನು ಕಸಿದುಕೊಳ್ಳಲು ಪ್ರಯತ್ನಿಸಿಲ್ಲ; ನಮ್ಮ ಸ್ವಾರ್ಥವನ್ನು ಮರೆಮಾಡಿಕೊಂಡು ವೇಶಧಾರಿಗಳಾಗಿರಲಿಲ್ಲ. ಇದು ನಿಜವೆಂಬುದು ದೇವರಿಗೆ ತಿಳಿದಿದೆ. 6 ಜನರಿಂದ ಬರುವ ಮಾನಮರ್ಯಾದೆಗಳನ್ನು ನಿಮ್ಮಿಂದಾಗಲಿ ಇತರ ಜನರಿಂದಾಗಲಿ ನಾವೆಂದೂ ಬಯಸಲಿಲ್ಲ.
7 ನಾವು ಕ್ರಿಸ್ತನ ಅಪೊಸ್ತಲರಾಗಿ ನಿಮ್ಮೊಡಗಿದ್ದಾಗ, ನಿಮ್ಮಿಂದ ದುಡಿಸಿಕೊಳ್ಳಲು ನಮ್ಮ ಅಧಿಕಾರವನ್ನು ಬಳಸಬಹುದಾಗಿತ್ತು. ಆದರೆ ನಿಮ್ಮೊಡನೆ ಬಹಳ ಸಾತ್ವಿಕರಾಗಿದ್ದೆವು. ತಾಯಿಯು ತನ್ನ ಸ್ವಂತ ಚಿಕ್ಕ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ನಾವು ನಡೆದುಕೊಂಡೆವು. 8 ನಿಮ್ಮನ್ನು ಬಹಳವಾಗಿ ಪ್ರೀತಿಸಿದೆವು. ಆದುದರಿಂದ ದೇವರ ಸುವಾರ್ತೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು, ಮಾತ್ರವೇ ಅಲ್ಲ, ನಿಮಗೋಸ್ಕರ ಸ್ವಂತ ಪ್ರಾಣವನ್ನೇ ಕೊಡಲು ಸಿದ್ಧರಾಗಿದ್ದೆವು. 9 ಸಹೋದರ ಸಹೋದರಿಯರೇ, ನಾವು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ನಿಮ್ಮ ನೆನಪಿನಲ್ಲೇ ಇವೆ. ನಿಮಗೆ ದೇವರ ಸುವಾರ್ತೆಯನ್ನು ಉಪದೇಶಿಸಿದಾಗ ನೀವು ನಮಗೆ ವೇತನ ನೀಡುವ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಹಗಲಿರುಳು ದುಡಿದು ಜೀವನ ಸಾಗಿಸಿದೆವು.
10 ವಿಶ್ವಾಸಿಗಳಾದ ನಿಮ್ಮೊಡನೆ ನಾವಿದ್ದಾಗ ತಪ್ಪಿಲ್ಲದವರಾಗಿಯೂ ಪರಿಶುದ್ಧರಾಗಿಯೂ ಮತ್ತು ನಿರ್ದೋಷಿಗಳಾಗಿಯೂ ಜೀವಿಸಿದ್ದೆವು. ಇದು ನಿಜವೆಂಬುದು ನಿಮಗೂ ತಿಳಿದಿದೆ ಮತ್ತು ದೇವರಿಗೂ ತಿಳಿದಿದೆ. 11 ತಂದೆಯು ತನ್ನ ಸ್ವಂತ ಮಕ್ಕಳೊಡನೆ ನಡೆದುಕೊಳ್ಳುವಂತೆ ನಿಮ್ಮಲ್ಲಿ ಪ್ರತಿಯೊಬ್ಬರೊಡನೆಯೂ ನಡೆದುಕೊಂಡೆವೆಂಬುದು ನಿಮಗೆ ತಿಳಿದಿದೆ. 12 ನಿಮ್ಮನ್ನು ಬಲಗೊಳಿಸಿದೆವು ಮತ್ತು ಸಂತೈಸಿದೆವು. ನಿಮ್ಮನ್ನು ತನ್ನ ರಾಜ್ಯಕ್ಕೂ ಮಹಿಮೆಗೂ ಕರೆದ ದೇವರಿಗಾಗಿ ಯೋಗ್ಯವಾದ ರೀತಿಯಲ್ಲಿ ಜೀವಿಸಿರಿ ಎಂದು ನಾವು ನಿಮಗೆ ತಿಳಿಸಿದೆವು.
13 ನೀವು ದೇವರ ಸಂದೇಶವನ್ನು ಸ್ವೀಕರಿಸಿಕೊಂಡದ್ದಕ್ಕಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನೀವು ಆ ಸಂದೇಶವನ್ನು ನಮ್ಮಿಂದ ಕೇಳಿ, ಅದನ್ನು ದೇವರ ವಾಕ್ಯದಂತೆ ಒಪ್ಪಿಕೊಂಡಿರೇ ಹೊರತು ಮಾನವನ ವಾಕ್ಯಗಳೆಂದಲ್ಲ. ಅದು ನಿಜವಾಗಿಯೂ ದೇವರ ಸಂದೇಶ. ಆ ಸಂದೇಶವು ನಂಬುವವರಾದ ನಿಮ್ಮಲ್ಲಿ ಕಾರ್ಯಮಾಡುತ್ತದೆ. 14 ಸಹೋದರ ಸಹೋದರಿಯರೇ, ನೀವು ಜುದೇಯದಲ್ಲಿರುವ ದೇವರ ಸಭೆಗಳಂತಿದ್ದೀರಿ. ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಅವರು ಇತರ ಯೆಹೂದ್ಯರಿಂದ ಹಿಂಸಿಸಲ್ಪಟ್ಟರು. ಅದೇ ರೀತಿಯಲ್ಲಿ ನೀವೂ ನಿಮ್ಮ ದೇಶದ ಇತರ ಜನರಿಂದ ಹಿಂಸಿಸಲ್ಪಟ್ಟವರಾಗಿದ್ದೀರಿ. 15 ಆ ಯೆಹೂದ್ಯರು ಪ್ರಭುವಾದ ಯೇಸುವನ್ನೂ ಪ್ರವಾದಿಗಳನ್ನೂ ಕೊಂದುಹಾಕಿದರು. ತಮ್ಮ ದೇಶದಿಂದ (ಜುದೇಯ) ನಮ್ಮನ್ನು ಬಲವಂತವಾಗಿ ಹೊರಗಟ್ಟಿದರು. ಅವರು ದೇವರಿಗೆ ಮೆಚ್ಚಿಕೆಯಾದವರಾಗಿಲ್ಲ ಮತ್ತು ಜನರೆಲ್ಲರ ವಿರುದ್ಧವಾಗಿದ್ದಾರೆ. 16 ಹೌದು, ಯೆಹೂದ್ಯರಲ್ಲದವರಿಗೆ ರಕ್ಷಣೆ ನೀಡುವ ಸುವಾರ್ತೆಯನ್ನು ನಾವು ಉಪದೇಶಿಸದಂತೆ ನಮ್ಮನ್ನು ತಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಹೀಗೆ ಅವರು ತಮ್ಮ ಪಾಪಗಳಿಗೆ ಮತ್ತಷ್ಟು ಪಾಪಗಳನ್ನು ಕೂಡಿಸುತ್ತಿದ್ದಾರೆ. ಕೊನೆಗೆ, ದೇವರ ಕೋಪವು ಅವರ ಮೇಲೆ ಬರುತ್ತದೆ.
ಥೆಸಲೋನಿಕದವರನ್ನು ಮತ್ತೆ ನೋಡಲು ಪೌಲನ ಆಸೆ
17 ಸಹೋದರ ಸಹೋದರಿಯರೇ, ನಿಮ್ಮಿಂದ ಸ್ವಲ್ಪಕಾಲ ಅಗಲಿ ಹೋಗಿದ್ದೆವು. (ನಾವು ನಿಮ್ಮೊಡನೆ ಇರಲಿಲ್ಲ. ಆದರೆ ನಮ್ಮ ಆಲೋಚನೆಗಳು ನಿಮ್ಮೊಡನೆ ಇನ್ನೂ ಇವೆ.) ನಿಮ್ಮನ್ನು ನೋಡಲು ಅತ್ಯಾಸೆಯಿಂದ ಬಹಳ ಪ್ರಯತ್ನಪಟ್ಟೆವು. 18 ಹೌದು, ನಾವು ನಿಮ್ಮಲ್ಲಿಗೆ ಬರಬೇಕೆಂದಿದ್ದೆವು. ಪೌಲನಾದ ನಾನು, ನಿಜವಾಗಿಯೂ ಅನೇಕ ಸಲ ಬರಲು ಪ್ರಯತ್ನಿಸಿದೆನು, ಆದರೆ ನಮ್ಮನ್ನು ಸೈತಾನನು ನಿಲ್ಲಿಸಿದನು. 19 ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಾವು ಹೊಗಳಿಕೊಳ್ಳುವ ನಮ್ಮ ನಿರೀಕ್ಷೆ, ನಮ್ಮ ಸಂತೋಷ, ನಮ್ಮ ಕಿರೀಟ ನೀವೇ ಆಗಿದ್ದೀರಿ. 20 ನಿಜವಾಗಿಯೂ ನೀವೇ ನಮ್ಮ ಸಂತೋಷ ಮತ್ತು ಗೌರವವಾಗಿದ್ದೀರಿ.
ದಾನಿಯೇಲನು ಬಾಬಿಲೋನಿಗೆ ಸೆರೆ ಒಯ್ಯಲ್ಪಟ್ಟದ್ದು
1 ನೆಬೂಕದ್ನೆಚ್ಚರನು ಬಾಬಿಲೋನಿನ ಅರಸನಾಗಿದ್ದನು. ನೆಬೂಕದ್ನೆಚ್ಚರನು ಜೆರುಸಲೇಮಿಗೆ ಬಂದನು. ನೆಬೂಕದ್ನೆಚ್ಚರನು ತನ್ನ ಸೈನ್ಯ ಸಮೇತ ಜೆರುಸಲೇಮಿಗೆ ಮುತ್ತಿಗೆ ಹಾಕಿದನು. ಯೆಹೂದದ ಅರಸನಾದ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ[a] ಈ ಘಟನೆ ನಡೆಯಿತು. 2 ನೆಬೂಕದ್ನೆಚ್ಚರನು ಯೆಹೂದದ ಅರಸನಾದ ಯೆಹೋಯಾಕೀಮನನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಅವನು ಆಲಯದ ಸಾಮಾಗ್ರಿಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಆ ಸಾಮಾಗ್ರಿಗಳನ್ನು ಅವನು ತನ್ನ ವಿಗ್ರಹಾಲಯದಲ್ಲಿಟ್ಟನು.
3 ಆಗ ಅರಸನಾದ ನೆಬೂಕದ್ನೆಚ್ಚರನು ಅಶ್ಪೆನಜನಿಗೆ ಆದೇಶಕೊಟ್ಟನು. ಅಶ್ಪೆನಜನು ಅರಸನ ಸೇವೆಯಲ್ಲಿದ್ದ ಎಲ್ಲಾ ಕಂಚುಕಿಯರಿಗೆ ಮುಖಂಡನಾಗಿದ್ದನು. ಅರಸನು ಕೆಲವು ಜನ ಇಸ್ರೇಲರನ್ನು ತನ್ನ ಅರಮನೆಗೆ ಸೇರಿಸಬೇಕೆಂದು ಅಶ್ಪೆನಜನಿಗೆ ಹೇಳಿದನು. ನೆಬೂಕದ್ನೆಚ್ಚರನು ಇಸ್ರೇಲರ ರಾಜವಂಶೀಯರನ್ನು ಮತ್ತು ಪ್ರಮುಖ ಮನೆತನದವರನ್ನು ತನ್ನ ಅರಮನೆಗೆ ಸೇರಿಸಬಯಸಿದನು. 4 ಅರಸನಾದ ನೆಬೂಕದ್ನೆಚ್ಚರನು ಆರೋಗ್ಯವಂತರೂ ಅಂಗದೋಷವಿಲ್ಲದವರೂ ಸುಂದರರೂ ಬುದ್ಧಿವಂತರೂ ವಿದ್ಯಾನಿಪುಣರೂ ಆಗಿದ್ದ ಯುವಕರನ್ನು ತನ್ನ ಸನ್ನಿಧಿಸೇವೆಗಾಗಿ ಆರಿಸಿಕೊಂಡು ಅವರಿಗೆ ಕಸ್ದೀಯ ಭಾಷೆಯನ್ನೂ ಬರವಣಿಗೆಯನ್ನೂ ಕಲಿಸಬೇಕೆಂದು ಆಜ್ಞೆ ವಿಧಿಸಿದನು.
5 ಅರಸನಾದ ನೆಬೂಕದ್ನೆಚ್ಚರನು ದಿನಾಲು ಆ ತರುಣರಿಗೆ ತಾನು ಸೇವಿಸುವ ಆಹಾರವನ್ನು ಮತ್ತು ದ್ರಾಕ್ಷಾರಸವನ್ನು ಕೊಡುತ್ತಿದ್ದನು. ಅವರನ್ನು ತನ್ನ ಸೇವಕರನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ ಮೂರು ವರ್ಷಗಳ ತರಬೇತಿ ಕೊಡಬೇಕೆಂದು ಆಜ್ಞಾಪಿಸಿದನು. 6 ಆ ತರುಣರಲ್ಲಿ ಯೆಹೂದ ಕುಲಕ್ಕೆ ಸೇರಿದವರಾದ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಎಂಬವರಿದ್ದರು. 7 ಅಶ್ಪೆನಜನು ಆ ಯೆಹೂದ್ಯ ತರುಣರಿಗೆ ಬಾಬಿಲೋನಿನ ಹೆಸರುಗಳನ್ನಿಟ್ಟನು. ದಾನಿಯೇಲನ ಹೊಸ ಹೆಸರು ಬೇಲ್ತೆಶಚ್ಚರ್, ಹನನ್ಯನ ಹೊಸ ಹೆಸರು ಶದ್ರಕ್, ಮೀಶಾಯೇಲನ ಹೊಸ ಹೆಸರು ಮೇಶಕ್ ಮತ್ತು ಅಜರ್ಯನ ಹೊಸ ಹೆಸರು ಅಬೇದ್‌ನೆಗೋ.
8 ದಾನಿಯೇಲನು ಅರಸನ ಪುಷ್ಟಿದಾಯಕ ಆಹಾರವನ್ನು ಮತ್ತು ಪಾನೀಯವನ್ನು ಇಷ್ಟಪಡಲಿಲ್ಲ. ಆ ಆಹಾರ ಮತ್ತು ಪಾನೀಯಗಳಿಂದ ತನ್ನನ್ನು ಅಶುದ್ಧಗೊಳಿಸಿಕೊಳ್ಳಲು ದಾನಿಯೇಲನಿಗೆ ಇಷ್ಟವಿರಲಿಲ್ಲ. ಆದ್ದರಿಂದ ಈ ರೀತಿ ತನ್ನನ್ನು ಅಶುದ್ಧಗೊಳಿಸಿಕೊಳ್ಳದೆ ಇರುವದಕ್ಕಾಗಿ ಅಶ್ಪೆನಜನ ಅಪ್ಪಣೆಯನ್ನು ಕೇಳಿದನು.
9 ದೇವರು ಅಶ್ಪೆನಜನ ಮನಸ್ಸಿನಲ್ಲಿ ದಾನಿಯೇಲನ ಮೇಲೆ ಕನಿಕರವನ್ನೂ ದಯೆಯನ್ನೂ ಹುಟ್ಟಿಸಿದನು. 10 ಆದರೆ ಅಶ್ಪೆನಜನು ದಾನಿಯೇಲನಿಗೆ, “ನಾನು ನನ್ನ ಒಡೆಯನಾದ ಅರಸನಿಗೆ ಹೆದರುತ್ತೇನೆ. ಈ ಆಹಾರ ಮತ್ತು ಪಾನೀಯಗಳನ್ನು ನಿನಗೆ ಕೊಡಬೇಕೆಂದು ಅರಸನು ಅಪ್ಪಣೆ ಮಾಡಿದ್ದಾನೆ. ನೀನು ಈ ಆಹಾರವನ್ನು ತೆಗೆದುಕೊಳ್ಳದಿದ್ದರೆ ಅಶಕ್ತನಾಗಿಯೂ ಅಸ್ವಸ್ಥನಾಗಿಯೂ ಕಾಣಿಸುವೆ. ನೀನು ನಿನ್ನ ವಯಸ್ಸಿನ ಬೇರೆ ತರುಣರಿಗಿಂತ ಸೊರಗಿದವನಾಗಿ ಕಾಣುವೆ. ಅರಸನು ಇದನ್ನು ಗಮನಿಸಿ ನನ್ನ ಮೇಲೆ ಕೋಪಗೊಂಡು ನನ್ನ ತಲೆಯನ್ನೇ ಕತ್ತರಿಸಬಹುದು. ಅದಕ್ಕೆ ನೀನೇ ಹೊಣೆಯಾಗುವೆ” ಎಂದನು.
11 ಆಗ ದಾನಿಯೇಲನು ತಮ್ಮ ಕಾವಲುಗಾರನೊಂದಿಗೆ ಮಾತನಾಡಿದನು. ಅಶ್ಪೆನಜನು ಕಾವಲುಗಾರನಿಗೆ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳ ಮೇಲೆ ದೃಷ್ಟಿಯಿಟ್ಟಿರಬೇಕೆಂದು ಆಜ್ಞಾಪಿಸಿದನು. 12 ದಾನಿಯೇಲನು ಕಾವಲುಗಾರನಿಗೆ, “ದಯವಿಟ್ಟು ಹತ್ತು ದಿನಗಳವರೆಗೆ ನಮ್ಮನ್ನು ಪರೀಕ್ಷಿಸಿರಿ. ತಿನ್ನುವದಕ್ಕೆ ಕಾಯಿಪಲ್ಯ, ಕುಡಿಯುವದಕ್ಕೆ ನೀರು, ಇವುಗಳ ಹೊರತು ನಮಗೆ ಇನ್ನೇನೂ ಕೊಡಬೇಡಿ. 13 ಹತ್ತು ದಿನಗಳಾದ ಮೇಲೆ ನಮ್ಮನ್ನು ಅರಸನ ಆಹಾರ ಪಾನೀಯಗಳನ್ನು ಸ್ವೀಕರಿಸುವ ತರುಣರ ಜೊತೆಗೆ ಹೋಲಿಸಿ ನೋಡಿರಿ. ಯಾರು ಹೆಚ್ಚು ಆರೋಗ್ಯವಂತರಾಗಿ ಕಾಣುತ್ತಾರೆಂಬುದನ್ನು ನೀವೇ ಪರೀಕ್ಷಿಸಿ ನೋಡಿರಿ. ಆಮೇಲೆ ನಮ್ಮ ವಿಷಯದಲ್ಲಿ ನೀವೇ ತೀರ್ಮಾನಿಸಿರಿ. ನಾವು ನಿಮ್ಮ ಸೇವಕರಾಗಿದ್ದೇವೆ” ಎಂದು ಬೇಡಿಕೊಂಡನು.
14 ಕಾವಲುಗಾರನು ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳನ್ನು ಹತ್ತು ದಿನಗಳವರೆಗೆ ಪರೀಕ್ಷಿಸಲು ಒಪ್ಪಿಕೊಂಡನು. 15 ಹತ್ತು ದಿನಗಳ ತರುವಾಯ ದಾನಿಯೇಲ ಮತ್ತು ಅವನ ಸ್ನೇಹಿತರು ಅರಸನ ಆಹಾರವನ್ನು ಊಟಮಾಡಿದ ಇತರ ಎಲ್ಲ ತರುಣರಿಗಿಂತ ಆರೋಗ್ಯವಂತರಾಗಿ ಕಾಣಿಸಿದರು. 16 ಆದ್ದರಿಂದ ಕಾವಲುಗಾರನು ಅರಸನ ವಿಶೇಷ ಆಹಾರವನ್ನು ಮತ್ತು ದ್ರಾಕ್ಷಾರಸವನ್ನು ತೆಗೆದುಕೊಂಡು ಅದಕ್ಕೆ ಬದಲಾಗಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳಿಗೆ ಕಾಯಿಪಲ್ಯಗಳನ್ನು ಕೊಡಲು ಪ್ರಾರಂಭಿಸಿದನು.
17 ದೇವರು ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳಿಗೆ ಅನೇಕ ಶಾಸ್ತ್ರಗಳನ್ನೂ ವಿಜ್ಞಾನವನ್ನೂ ಕಲಿಯುವ ಬುದ್ಧಿಸಾಮರ್ಥ್ಯಗಳನ್ನು ದಯಪಾಲಿಸಿದನು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ ದಿವ್ಯದರ್ಶನಗಳನ್ನೂ ಗ್ರಹಿಸಬಲ್ಲವನಾಗಿದ್ದನು.
18 ಎಲ್ಲ ತರುಣರು ಮೂರು ವರ್ಷ ತರಬೇತಿ ಪಡೆಯಬೇಕೆಂದು ಅರಸನು ಹೇಳಿದ್ದನು. ಆ ಅವಧಿ ಮುಗಿದ ಮೇಲೆ ಅಶ್ಪೆನಜನು ಆ ಎಲ್ಲ ತರುಣರನ್ನು ಅರಸನಾದ ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆತಂದನು. 19 ರಾಜನು ಅವರ ಸಂಗಡ ಮಾತಾಡಿದನು. ಅರಸನಿಗೆ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರಷ್ಟು ಯೊಗ್ಯರಾದವರು ಆ ಸಮಸ್ತ ಯುವಕರಲ್ಲಿ ಮತ್ತಾರೂ ಕಂಡು ಬರಲಿಲ್ಲ. ಆದ್ದರಿಂದ ಆ ನಾಲ್ಕು ಜನ ಯುವಕರು ರಾಜನ ಸೇವಕರಾದರು. 20 ಅರಸನು ಮಹತ್ವಪೂರ್ಣವಾದ ವಿಷಯಗಳ ಬಗ್ಗೆ ಅವರನ್ನು ಕೇಳಿದಾಗಲೆಲ್ಲ ಅವರು ಹೆಚ್ಚಿನ ಪ್ರಜ್ಞೆಯನ್ನು, ಬುದ್ಧಿಯನ್ನು ತೋರಿದರು. ಅವರು ಇಡೀ ದೇಶದ ಎಲ್ಲ ಜೋಯಿಸರಿಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿದ್ದಾರೆಂಬುದನ್ನು ಅರಸನು ಕಂಡುಕೊಂಡನು. 21 ದಾನಿಯೇಲನು ರಾಜನಾದ ಕೋರೆಷನ ಆಳ್ವಿಕೆಯ ಮೊದಲನೆ ವರ್ಷದ[b] ತನಕ ಅರಸನ ಸೇವಕನಾಗಿ ಮುಂದುವರಿದನು.
105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
2 ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
3 ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
ಯೆಹೋವನ ಆರಾಧಕರೇ, ಸಂತೋಷಪಡಿರಿ.
4 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
5 ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
6 ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
7 ಯೆಹೋವನೇ ನಮ್ಮ ದೇವರು.
ಆತನು ಇಡೀ ಪ್ರಪಂಚವನ್ನು ಆಳುವನು.[a]
8 ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
ಆತನು ತನ್ನ ಆಜ್ಞೆಗಳನ್ನು ಸಾವಿರ ತಲೆಮಾರುಗಳವರೆಗೂ ಜ್ಞಾಪಿಸಿಕೊಳ್ಳುವನು.
9 ಆತನು ಅಬ್ರಹಾಮನೊಡನೆ ಒಡಂಬಡಿಕೆ ಮಾಡಿಕೊಂಡನು.
ಆತನು ಇಸಾಕನಿಗೆ ವಾಗ್ದಾನ ಮಾಡಿದನು.
10 ಆತನು ಅದನ್ನು ಯಾಕೋಬನಿಗೆ ಕಟ್ಟಳೆಯನ್ನಾಗಿ ಮಾಡಿದನು.
ದೇವರು ಇಸ್ರೇಲನೊಂದಿಗೆ ತನ್ನ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
11 “ನಾನು ನಿನಗೆ ಕಾನಾನ್ ದೇಶವನ್ನು ಕೊಡುವೆನು.
ಆ ದೇಶವು ನಿನ್ನದಾಗಿರುತ್ತದೆ” ಎಂದು ಆತನು ಹೇಳಿದನು.
12 ಅಬ್ರಹಾಮನ ಕುಟುಂಬವು ಚಿಕ್ಕದಾಗಿದ್ದಾಗ
ಅವರು ಪ್ರಯಾಣಿಕರಂತೆ ಕಾನಾನಿನಲ್ಲಿ ವಾಸವಾಗಿದ್ದಾಗ,
ಆತನು ಅವರಿಗೆ ಈ ವಾಗ್ದಾನವನ್ನು ಮಾಡಿದನು.
13 ಅವರು ದೇಶದಿಂದ ದೇಶಕ್ಕೂ
ರಾಜ್ಯದಿಂದ ರಾಜ್ಯಕ್ಕೂ ಪ್ರಯಾಣ ಮಾಡಿದರು.
14 ಆದರೆ ಅವರಿಗೆ ಯಾರಿಂದಲೂ ಅನ್ಯಾಯವಾಗದಂತೆ ನೋಡಿಕೊಂಡನು.
ಅವರನ್ನು ನೋಯಿಸಕೂಡದೆಂದು ಆತನು ರಾಜರುಗಳಿಗೆ ಎಚ್ಚರಿಕೆ ನೀಡಿದನು.
15 “ನಾನು ಆರಿಸಿಕೊಂಡಿರುವ ಜನರಿಗೆ ಕೇಡುಮಾಡಬೇಡಿ.
ನನ್ನ ಪ್ರವಾದಿಗಳಿಗೆ ಯಾವ ಕೆಟ್ಟದ್ದನ್ನೂ ಮಾಡಬೇಡಿ” ಎಂದು ಆತನು ಹೇಳಿದನು.
16 ದೇವರು ಆ ದೇಶಕ್ಕೆ ಬರಗಾಲವನ್ನು ಬರಮಾಡಿದನು.
ಜನರಿಗೆ ತಿನ್ನುವುದಕ್ಕೂ ಸಾಕಷ್ಟು ಆಹಾರವಿರಲಿಲ್ಲ.
17 ಆದರೆ ದೇವರು ಒಬ್ಬನನ್ನು ಅವರಿಗಿಂತ ಮುಂಚಿತವಾಗಿ ಕಳುಹಿಸಿಕೊಟ್ಟನು.
ಗುಲಾಮತನಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು.
18 ಅವರು ಯೋಸೇಫನ ಕಾಲುಗಳನ್ನು ಹಗ್ಗಗಳಿಂದ ಕಟ್ಟಿದರು;
ಅವನ ಕೊರಳಿಗೆ ಕಬ್ಬಿಣದ ಬೇಡಿಯನ್ನು ಹಾಕಿದರು.
19 ಅವನ ಪ್ರವಾದನೆಯು ನೆರವೇರುವ ತನಕ ಅವನು ಗುಲಾಮನಾಗಿದ್ದನು.
ಯೋಸೇಫನು ಸತ್ಯವಂತನೆಂದು ಯೆಹೋವನ ಸಂದೇಶವು ನಿರೂಪಿಸಿತು.
20 ಆದ್ದರಿಂದ ಈಜಿಪ್ಟಿನ ರಾಜನು ಅವನನ್ನು ಬಿಡುಗಡೆ ಮಾಡಿದನು.
ಆ ದೇಶದ ರಾಜನು ಅವನನ್ನು ಸೆರೆಮನೆಯಿಂದ ಬಿಡಿಸಿದನು.
21 ಅರಮನೆಯ ಮೇಲ್ವಿಚಾರಕನನ್ನಾಗಿ ನೇಮಿಸಿದನು.
ರಾಜನ ಆಸ್ತಿಯನ್ನೆಲ್ಲಾ ಯೋಸೇಫನು ನೋಡಿಕೊಂಡನು.
22 ಯೋಸೇಫನು ಇತರ ನಾಯಕರುಗಳಿಗೆ ಸಲಹೆಗಳನ್ನು ಕೊಟ್ಟನು;
ಹಿರಿಯರಿಗೆ ಉಪದೇಶಿಸಿದನು.
23 ಬಳಿಕ ಇಸ್ರೇಲನು ಈಜಿಪ್ಟಿಗೆ ಬಂದನು.
ಯಾಕೋಬನು ಹಾಮನ ದೇಶದಲ್ಲಿ ವಾಸಿಸಿದನು.
24 ಯಾಕೋಬನ ಕುಟುಂಬ ಬಹು ದೊಡ್ಡದಾಯಿತು.
ಅವರು ಈಜಿಪ್ಟಿನವರಿಗಿಂತಲೂ ಬಲಿಷ್ಠರಾದರು.
25 ಆದ್ದರಿಂದ ಈಜಿಪ್ಟಿನವರು ಯಾಕೋಬನ ಕುಟುಂಬವನ್ನು ದ್ವೇಷಿಸತೊಡಗಿದರು.
ಅವರು ತಮ್ಮ ಗುಲಾಮರ ವಿರೋಧವಾಗಿ ಸಂಚುಗಳನ್ನು ಮಾಡತೊಡಗಿದರು.
26 ಆದ್ದರಿಂದ ದೇವರು ತನ್ನ ಸೇವಕನಾದ ಮೋಶೆಯನ್ನೂ
ತಾನು ಆರಿಸಿಕೊಂಡ ಯಾಜಕನಾದ ಆರೋನನನ್ನೂ ಕಳುಹಿಸಿದನು.
27 ಹಾಮನ ದೇಶದಲ್ಲಿ ದೇವರು ಅನೇಕ ಮಹತ್ಕಾರ್ಯಗಳನ್ನು
ಮೋಶೆ ಆರೋನರ ಮೂಲಕವಾಗಿ ಮಾಡಿದನು.
28 ದೇವರು ಕಾರ್ಗತ್ತಲೆಯನ್ನು ಕಳುಹಿಸಿದನು;
ಆದರೂ ಈಜಿಪ್ಟಿನವರು ಆತನಿಗೆ ಕಿವಿಗೊಡಲಿಲ್ಲ.
29 ಆದ್ದರಿಂದ ಆತನು ನೀರನ್ನು ರಕ್ತವನ್ನಾಗಿ ಮಾರ್ಪಡಿಸಿದನು,
ಆಗ ಅವರ ಮೀನುಗಳೆಲ್ಲಾ ಸತ್ತುಹೋದವು.
30 ಬಳಿಕ ಈಜಿಪ್ಟಿನವರ ದೇಶವು ಕಪ್ಪೆಗಳಿಂದ ತುಂಬಿಹೋಯಿತು.
ರಾಜನು ಮಲಗುವ ಕೋಣೆಯಲ್ಲಿಯೂ ಕಪ್ಪೆಗಳಿದ್ದವು.
31 ಆತನು ಆಜ್ಞಾಪಿಸಲು
ವಿಷದ ಹುಳಗಳೂ ಹೇನುಗಳೂ ಬಂದವು.
ಅವು ಎಲ್ಲೆಲ್ಲಿಯೂ ಹರಡಿಕೊಂಡವು.
32 ಆತನು ಮಳೆಯನ್ನು ಕಲ್ಮಳೆಯನ್ನಾಗಿ ಪರಿವರ್ತಿಸಿದನು.
ಅವರ ದೇಶದಲ್ಲಿ ಸಿಡಿಲುಗಳು ಹೊಡೆದವು.
33 ದೇವರು ಅವರ ದ್ರಾಕ್ಷಾಲತೆಗಳನ್ನೂ ಅಂಜೂರದ ಮರಗಳನ್ನೂ ನಾಶಮಾಡಿದನು.
ಅವರ ದೇಶದ ಪ್ರತಿಯೊಂದು ಮರವನ್ನೂ ಆತನು ನಾಶಮಾಡಿದನು.
34 ಆತನು ಆಜ್ಞಾಪಿಸಲು ಮಿಡತೆಗಳೂ
ಜಿಟ್ಟೆಹುಳಗಳೂ ಅಸಂಖ್ಯಾತವಾಗಿ ಬಂದವು.
35 ಮಿಡತೆಗಳೂ ಜಿಟ್ಟೆಹುಳಗಳೂ ದೇಶದಲ್ಲಿದ್ದ ಸಸಿಗಳನ್ನೆಲ್ಲಾ ತಿಂದುಬಿಟ್ಟವು.
ಭೂಮಿಯ ಮೇಲಿದ್ದ ಬೆಳೆಗಳನ್ನೆಲ್ಲಾ ಅವು ತಿಂದುಬಿಟ್ಟವು.
36 ಬಳಿಕ ದೇವರು ಈಜಿಪ್ಟ್ ದೇಶದ
ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ಕೊಂದುಹಾಕಿದನು.
37 ಆತನು ತನ್ನ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಹೋದನು.
ಅವರು ತಮ್ಮೊಂದಿಗೆ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಬಂದರು.
ದೇವಜನರಲ್ಲಿ ಯಾರೂ ಎಡವಿಬೀಳಲಿಲ್ಲ.
38 ದೇವಜನರು ಈಜಿಪ್ಟಿನಿಂದ ಹೊರಟಾಗ ಸಂತೋಷಪಟ್ಟರು;
ಯಾಕೆಂದರೆ ಅವರು ದೇವಜನರಿಗೆ ಹೆದರಿಕೊಂಡಿದ್ದರು.
39 ಆತನು ಹಗಲಿನಲ್ಲಿ ನೆರಳಿಗೋಸ್ಕರ ಮೋಡವನ್ನು ಕಂಬಳಿಯಂತೆ ಹರಡಿದನು;
ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭವನ್ನು ದಯಪಾಲಿಸಿದನು.
40 ಜನರು ಮಾಂಸಕ್ಕಾಗಿ ಕೇಳಿಕೊಂಡಾಗ ಆತನು ಅವರಿಗೆ ಲಾವಕ್ಕಿಗಳನ್ನು ಬರಮಾಡಿದನು;
ಪರಲೋಕದಿಂದ ಮನ್ನವನ್ನು ದಯಪಾಲಿಸಿದನು.
41 ಆತನು ಬಂಡೆಯನ್ನು ಸೀಳಿದಾಗ ನೀರು ಚಿಮ್ಮುತ್ತಾ ಹೊರಬಂದಿತು;
ಅರಣ್ಯದಲ್ಲಿ ನದಿಯು ಹರಿಯತೊಡಗಿತು!
42 ಆತನು ತನ್ನ ಸೇವಕನಾದ ಆಬ್ರಹಾಮನಿಗೆ
ತಾನು ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡನು.
43 ಆತನು ತನ್ನ ಜನರನ್ನು ಈಜಿಪ್ಟಿನಿಂದ ಹೊರತಂದನು.
ಜನರು ಉಲ್ಲಾಸಪಡುತ್ತಾ ಹರ್ಷಗೀತೆಗಳನ್ನು ಹಾಡುತ್ತಾ ಹೊರಬಂದರು!
44 ಅನ್ಯಜನರು ವಾಸವಾಗಿದ್ದ ದೇಶವನ್ನು ದೇವರು ತನ್ನ ಜನರಿಗೆ ಕೊಟ್ಟನು.
ಅನ್ಯಜನರು ದುಡಿದು ಸಂಪಾದಿಸಿದ್ದವುಗಳನ್ನು ದೇವಜನರು ಪಡೆದುಕೊಂಡರು.
45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.
ಯೆಹೋವನನ್ನು ಕೊಂಡಾಡಿರಿ.
Kannada Holy Bible: Easy-to-Read Version. All rights reserved. © 1997 Bible League International