M’Cheyne Bible Reading Plan
12 1-2 ಸೊಲೊಮೋನನಿಂದ ಓಡಿಹೋಗಿದ್ದ ನೆಬಾಟನ ಮಗನಾದ ಯಾರೊಬ್ಬಾಮನು ಇನ್ನೂ ಈಜಿಪ್ಟಿನಲ್ಲಿಯೇ ಇದ್ದನು. ಸೊಲೊಮೋನನು ಸತ್ತುಹೋದ ಸುದ್ದಿಯನ್ನು ಕೇಳಿ ಅವನು ಎಫ್ರಾಯೀಮ್ ಬೆಟ್ಟದಲ್ಲಿರುವ ಜೆರೆಧ ಎಂಬ ಪಟ್ಟಣಕ್ಕೆ ಹಿಂದಿರುಗಿದನು. ರಾಜನಾದ ಸೊಲೊಮೋನನು ಸತ್ತುಹೋದನು ಮತ್ತು ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು.
ಅನಂತರ ಅವನ ಮಗನಾದ ರೆಹಬ್ಬಾಮನು ಹೊಸ ರಾಜನಾದನು. 3 ಇಸ್ರೇಲಿನ ಜನರೆಲ್ಲರೂ ರೆಹಬ್ಬಾಮನನ್ನು ರಾಜನನ್ನಾಗಿ ಮಾಡಲು ಶೆಕೆಮಿಗೆ ಹೋದರು. ರೆಹಬ್ಬಾಮನೂ ರಾಜನಾಗಲು ಶೆಕೆಮಿಗೆ ಹೋದನು. ಜನರು ರೆಹಬ್ಬಾಮನಿಗೆ, 4 “ನಿನ್ನ ತಂದೆಯು ನಮ್ಮನ್ನು ಹೆಚ್ಚು ಕಷ್ಟದ ಕೆಲಸ ಮಾಡಲು ಬಲಾತ್ಕರಿಸಿದನು. ಈಗ ನೀನು ನಮಗೆ ಅದನ್ನು ಕಡಿಮೆಗೊಳಿಸು, ನಿನ್ನ ತಂದೆಯು ನಮ್ಮನ್ನು ಬಲಾತ್ಕರಿಸಿ ಮಾಡಿಸುತ್ತಿದ್ದ ಹೆಚ್ಚು ಕೆಲಸಗಳನ್ನು ನಿಲ್ಲಿಸು. ಆಗ ನಾವು ನಿನ್ನ ಸೇವೆಯನ್ನು ಮಾಡುವೆವು” ಎಂದು ಹೇಳಿದರು.
5 ರೆಹಬ್ಬಾಮನು, “ಮೂರು ದಿನಗಳಾದ ಮೇಲೆ ನನ್ನ ಬಳಿಗೆ ಹಿಂದಿರುಗಿ ಬನ್ನಿ. ನಾನು ನಿಮಗೆ ಉತ್ತರವನ್ನು ಹೇಳುತ್ತೇನೆ” ಎಂದನು. ಆದ್ದರಿಂದ ಜನರು ಹೊರಟುಹೋದರು.
6 ಸೊಲೊಮೋನನ ಕಾಲದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಿದ್ದ ಕೆಲವು ಹಿರಿಯರು ಅಲ್ಲಿದ್ದರು. ರಾಜನಾದ ರೆಹಬ್ಬಾಮನು ಅವರಿಗೆ, “ನಾನು ಈ ಜನರಿಗೆ ಉತ್ತರ ಹೇಳಲೇಬೇಕು. ನಾನು ಏನು ಹೇಳಲಿ? ನಿಮ್ಮ ಆಲೋಚನೆಯೇನು?” ಎಂದು ಕೇಳಿದನು.
7 ಆ ಹಿರಿಯರು, “ಇಂದು ನೀನು ಅವರಿಗೆ ಸೇವಕನಂತೆ ಇರುವುದಾದರೆ, ಅವರು ನಿನ್ನ ಸೇವೆಯನ್ನು ನಿಜವಾಗಿಯೂ ಮಾಡುತ್ತಾರೆ. ನೀನು ಅವರೊಂದಿಗೆ ಕರುಣೆಯಿಂದ ಮಾತಾಡಿದರೆ, ಅವರು ಎಂದೆಂದಿಗೂ ನಿನಗಾಗಿ ದುಡಿಯುತ್ತಾರೆ” ಎಂದರು.
8 ಆದರೆ ರೆಹಬ್ಬಾಮನು ಈ ಸಲಹೆಗೆ ಕಿವಿಗೊಡಲಿಲ್ಲ. ಅವನು ತನ್ನ ಸ್ನೇಹಿತರಾದ ಯುವಜನರಿಗೆ, 9 “ಈ ಜನರು, ‘ನಿನ್ನ ತಂದೆ ಕೊಟ್ಟ ಕೆಲಸಕ್ಕಿಂತಲೂ ಸುಲಭವಾದ ಕೆಲಸವನ್ನು ನಮಗೆ ಕೊಡು’ ಎಂದು ಕೇಳುತ್ತಿದ್ದಾರೆ. ಈ ಜನರಿಗೆ ನಾನು ಉತ್ತರವನ್ನು ಹೇಳಲೇಬೇಕು. ಈ ವಿಷಯದಲ್ಲಿ ನಿಮ್ಮ ಆಲೋಚನೆಯೇನು? ನಾನು ಅವರಿಗೆ ಏನು ಹೇಳಬೇಕು?” ಎಂದು ಕೇಳಿದನು.
10 ರಾಜನ ಸ್ನೇಹಿತರಾದ ಯುವಕರು, “ಆ ಜನರು ನಿನ್ನ ಬಳಿಗೆ ಬಂದು, ‘ನಿನ್ನ ತಂದೆಯು ಬಲಾತ್ಕರಿಸಿ ಹೆಚ್ಚು ಕಷ್ಟದ ಕೆಲಸಗಳನ್ನು ಮಾಡಿಸಿದನು. ಈಗ ನಮ್ಮ ಕೆಲಸವನ್ನು ಸುಲಭಗೊಳಿಸು’ ಎಂದು ಹೇಳಿದರು. ಆದ್ದರಿಂದ ನೀನು ಜಂಬದಿಂದ ಅವರಿಗೆ, ‘ನನ್ನ ಕಿರುಬೆರಳು ನನ್ನ ತಂದೆಯ ಪೂರ್ಣದೇಹಕ್ಕಿಂತ ಶಕ್ತಿಯುಳ್ಳದ್ದಾಗಿದೆ. 11 ನನ್ನ ತಂದೆಯು ಹೆಚ್ಚು ಕಷ್ಟದ ಕೆಲಸಗಳನ್ನು ಮಾಡಲು ನಿಮ್ಮನ್ನು ಬಲಾತ್ಕರಿಸಿದನು. ಆದರೆ ನಾನು ಮತ್ತಷ್ಟು ಕಷ್ಟದ ಕೆಲಸಗಳನ್ನು ನಿಮ್ಮಿಂದ ಮಾಡಿಸುತ್ತೇನೆ. ನಿಮ್ಮಿಂದ ಕೆಲಸ ಮಾಡಿಸಲು ನಮ್ಮ ತಂದೆಯು ಚಾವಟಿಗಳಿಂದ ನಿಮ್ಮನ್ನು ಹೊಡೆಸಿದನು. ನಾನಾದರೋ ನಿಮ್ಮನ್ನು ಮುಳ್ಳುಕೋಲುಗಳಿಂದ ಮತ್ತಷ್ಟು ಕಠಿಣವಾಗಿ ಹೊಡೆಸುತ್ತೇನೆ’ ಎಂದು ತಿಳಿಸು” ಎಂಬುದಾಗಿ ಹೇಳಿಕೊಟ್ಟರು.
12 ರೆಹಬ್ಬಾಮನು ಜನರಿಗೆ, “ಮೂರು ದಿನಗಳ ನಂತರ ನನ್ನ ಬಳಿಗೆ ಮತ್ತೆ ಬನ್ನಿ” ಎಂದು ಹೇಳಿದ್ದನು. ಮೂರು ದಿನಗಳ ನಂತರ ಇಸ್ರೇಲಿನ ಜನರೆಲ್ಲರೂ ರೆಹಬ್ಬಾಮನ ಬಳಿಗೆ ಬಂದರು. 13 ಆ ಸಮಯದಲ್ಲಿ, ರೆಹಬ್ಬಾಮನು ಅವರೊಂದಿಗೆ ಕಠಿಣವಾಗಿ ಮಾತನಾಡಿದನು. ಹಿರಿಯರು ನೀಡಿದ ಸಲಹೆಗೆ ಅವನು ಕಿವಿಗೊಡಲಿಲ್ಲ. 14 ತನ್ನ ಸ್ನೇಹಿತರು ತಿಳಿಸಿದಂತೆಯೇ ಅವನು ಮಾಡಿದನು. ರೆಹಬ್ಬಾಮನು, “ನನ್ನ ತಂದೆಯು ಕಷ್ಟದ ಕೆಲಸಗಳನ್ನು ಮಾಡಲು ನಿಮ್ಮನ್ನು ಬಲಾತ್ಕರಿಸಿದನು. ನಾನು ನಿಮಗೆ ಮತ್ತಷ್ಟು ಹೆಚ್ಚು ಕೆಲಸವನ್ನು ಕೊಡುತ್ತೇನೆ. ನನ್ನ ತಂದೆಯು ಬಾರುಕೋಲಿನಿಂದ ನಿಮ್ಮನ್ನು ಹೊಡೆಸಿದನು. ಆದರೆ ನಾನು ನಿಮ್ಮನ್ನು ಮತ್ತಷ್ಟು ಕಠಿಣವಾಗಿ ಮುಳ್ಳುಕೋಲುಗಳಿಂದ ಹೊಡೆಸುತ್ತೇನೆ” ಎಂದು ಹೇಳಿದನು. 15 ರಾಜನು ಜನರ ಅಪೇಕ್ಷೆಯನ್ನು ನೆರವೇರಿಸಲಿಲ್ಲ. ನೆಬಾಟನ ಮಗನಾದ ಯಾರೊಬ್ಬಾಮನಿಗೆ ತಾನು ಮಾಡಿದ್ದ ವಾಗ್ದಾನವನ್ನು ಈಡೇರಿಸಲು ಯೆಹೋವನೇ ಹೀಗೆ ಮಾಡಿದನು. ಯೆಹೋವನು ಪ್ರವಾದಿಯಾದ ಅಹೀಯನ ಮೂಲಕ ಈ ವಾಗ್ದಾನವನ್ನು ಮಾಡಿದ್ದನು. ಅಹೀಯನು ಶೀಲೋವಿನವನು.
16 ಇಸ್ರೇಲಿನ ಜನರೆಲ್ಲರೂ ಹೊಸರಾಜನು ತಮ್ಮ ಮಾತಿಗೆ ಕಿವಿಗೊಡಲಿಲ್ಲವೆಂಬುದನ್ನು ನೋಡಿದರು. ಆದ್ದರಿಂದ ಜನರೆಲ್ಲರೂ ರಾಜನಿಗೆ,
“ದಾವೀದನ ಕುಟುಂಬದಲ್ಲಿ ನಾವೆಲ್ಲರೂ ಭಾಗಿಗಳೇ?
ಇಲ್ಲ! ಇಷಯನ ಭೂಮಿಯಲ್ಲಿ ನಮಗೇನಾದರೂ ಪಾಲು ಸಿಕ್ಕುತ್ತದೆಯೇ?
ಇಲ್ಲ! ಇಸ್ರೇಲರೇ, ನಮ್ಮ ಮನೆಗಳಿಗೆ ನಾವು ಹೋಗೋಣ ನಡೆಯಿರಿ.
ದಾವೀದನ ಮಗನು ತನ್ನ ಜನರನ್ನು ತಾನೇ ಆಳಲಿ!”
ಎಂದು ಹೇಳಿದರು. ಇಸ್ರೇಲಿನ ಜನರೆಲ್ಲರೂ ಮನೆಗಳಿಗೆ ಹೋದರು. 17 ಆದರೆ ರೆಹಬ್ಬಾಮನು ಯೆಹೂದನಗರಗಳಲ್ಲಿ ವಾಸವಾಗಿದ್ದ ಇಸ್ರೇಲರನ್ನು ಆಳಿದನು.
18 ಅದೋರಾಮನೆಂಬ ಹೆಸರಿನ ಮನುಷ್ಯನು ಕೆಲಸಗಾರರ ಮೇಲ್ವಿಚಾರಕನಾಗಿದ್ದನು. ರಾಜನಾದ ರೆಹಬ್ಬಾಮನು ಜನರೊಂದಿಗೆ ಮಾತನಾಡಲು ಅದೋರಾಮನನ್ನು ಕಳುಹಿಸಿದನು. ಆದರೆ ಇಸ್ರೇಲಿನ ಜನರು ಅವನು ಸಾಯುವವರೆಗೆ ಅವನ ಕಡೆಗೆ ಕಲ್ಲುಗಳನ್ನು ಎಸೆದರು. ಆಗ ರೆಹಬ್ಬಾಮನು ತನ್ನ ರಥವನ್ನು ಹತ್ತಿ ತಪ್ಪಿಸಿಕೊಂಡು, ಜೆರುಸಲೇಮಿಗೆ ಓಡಿಹೋದನು. 19 ಹೀಗೆ ದಾವೀದನ ಕುಟುಂಬಕ್ಕೆ ವಿರೋಧವಾಗಿ ಇಸ್ರೇಲರು ದಂಗೆ ಎದ್ದರು. ಅವರು ಇಂದಿಗೂ ದಾವೀದನ ಕುಟುಂಬದ ವಿರೋಧಿಗಳಾಗಿದ್ದಾರೆ.
20 ಯಾರೊಬ್ಬಾಮನು ಹಿಂದಿರುಗಿ ಬಂದಿದ್ದಾನೆ ಎಂಬುದು ಇಸ್ರೇಲಿನ ಜನರೆಲ್ಲರಿಗೂ ತಿಳಿಯಿತು. ಅವರು ಅವನನ್ನು ಒಂದು ಸಭೆಗೆ ಕರೆಸಿ, ಅವನನ್ನು ಇಸ್ರೇಲಿನ ರಾಜನನ್ನಾಗಿ ನೇಮಿಸಿದರು. ಯೆಹೂದಕುಲವೊಂದು ಮಾತ್ರ ದಾವೀದನ ಕುಟುಂಬವನ್ನು ಅನುಸರಿಸಿತು.
21 ರೆಹಬ್ಬಾಮನು ಜೆರುಸಲೇಮಿಗೆ ಹಿಂದಿರುಗಿ ಹೋದನು. ಅವನು ಯೆಹೂದದ ಕುಟುಂಬಗಳನ್ನು ಮತ್ತು ಬೆನ್ಯಾಮೀನ್ ಕುಟುಂಬಗಳನ್ನು ಒಟ್ಟಾಗಿ ಸೇರಿಸಿದನು. ಅವರಲ್ಲಿ ಒಂದು ಲಕ್ಷದ ಎಂಭತ್ತು ಸಾವಿರ ಸೈನಿಕರಿದ್ದರು. ರೆಹಬ್ಬಾಮನು ಇಸ್ರೇಲಿನ ಜನರ ವಿರುದ್ಧ ಯುದ್ಧಮಾಡಲು ಅಪೇಕ್ಷಿಸಿದನು. ಅವನು ತನ್ನ ರಾಜ್ಯವನ್ನು ಪುನರ್‌ಸ್ಥಾಪಿಸಬೇಕೆಂದಿದ್ದನು. 22 ಆದರೆ ಯೆಹೋವನು ದೇವರ ಮನುಷ್ಯನೊಬ್ಬನೊಡನೆ ಮಾತನಾಡಿದನು. ಅವನ ಹೆಸರು ಶೆಮಾಯ. ಯೆಹೋವನು, 23 “ಯೆಹೂದದ ರಾಜನೂ ಸೊಲೊಮೋನನ ಮಗನೂ ಆದ ರೆಹಬ್ಬಾಮನೊಂದಿಗೆ, ಯೆಹೂದ ಮತ್ತು ಬೆನ್ಯಾಮೀನ್ ಜನರೆಲ್ಲರೊಂದಿಗೆ ಮಾತನಾಡು. 24 ನೀನು ಅವರಿಗೆ, ‘ನಿಮ್ಮ ಸೋದರರಾದ ಇಸ್ರೇಲರ ವಿರುದ್ಧ ನೀವು ಯುದ್ಧಕ್ಕೆ ಹೋಗಲೇಬಾರದೆಂದು ಯೆಹೋವನು ಹೇಳುತ್ತಾನೆ. ನಿಮ್ಮಲ್ಲಿ ಪ್ರತಿಯೊಬ್ಬನು ಮನೆಗೆ ಹೋಗಬೇಕು. ಈ ಸಂಗತಿಗಳೆಲ್ಲ ಸಂಭವಿಸುವಂತೆ ನಾನೇ ಮಾಡಿದೆನು’ ಎಂದು ಹೇಳು” ಎಂಬುದಾಗಿ ತಿಳಿಸಿದನು. ಆದ್ದರಿಂದ ರೆಹಬ್ಬಾಮನ ಸೈನ್ಯದಲ್ಲಿನ ಜನರೆಲ್ಲರೂ ಯೆಹೋವನ ಆಜ್ಞೆಯನ್ನು ಅನುಸರಿಸಿದರು. ಅವರು ತಮ್ಮ ಮನೆಗಳಿಗೆ ಹೋದರು.
25 ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಶೆಕೆಮ್ ನಗರವಿತ್ತು. ಯಾರೊಬ್ಬಾಮನು ಶೆಕೆಮನ್ನು ಒಂದು ಬಲಾಢ್ಯ ನಗರವನ್ನಾಗಿಸಿಕೊಂಡು ಅಲ್ಲಿ ನೆಲೆಸಿದನು. ತರುವಾಯ ಅವನು ಪೆನೂವೇಲ್ ನಗರಕ್ಕೆ ಹೋಗಿ ಅದನ್ನು ಬಲಪಡಿಸಿದನು.
26-27 ಯಾರೊಬ್ಬಾಮನು ತನ್ನಲ್ಲೇ, “ಜನರು ಜೆರುಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಹೋಗುವುದನ್ನೇ ಮುಂದುವರಿಸಿದರೆ, ಆಗ ಅವರು ದಾವೀದನ ಕುಟುಂಬವೇ ನಮ್ಮನ್ನು ಆಳಲಿ ಎಂದು ಅಪೇಕ್ಷೆಪಡಬಹುದು. ಜನರು ಯೆಹೂದದ ರಾಜನಾದ ರೆಹಬ್ಬಾಮನನ್ನೇ ಮತ್ತೆ ಅನುಸರಿಸಬಹುದು. ನಂತರ ಅವರು ನನ್ನನ್ನು ಕೊಂದುಬಿಡಬಹುದು.” ಅಂದುಕೊಂಡನು. 28 ಬಳಿಕ ರಾಜನು ಈಗ ತಾನೇನು ಮಾಡಬೇಕೆಂದು ತನ್ನ ಸಲಹೆಗಾರರನ್ನು ಕೇಳಿದನು. ಅವರು ತಮ್ಮ ಸಲಹೆಯನ್ನು ಅವನಿಗೆ ನೀಡಿದರು. ಯಾರೊಬ್ಬಾಮನು ಎರಡು ಬಂಗಾರದ ಕರುಗಳನ್ನು ಮಾಡಿಸಿ ಜನರಿಗೆ, “ನೀವು ಆರಾಧಿಸಲು ಜೆರುಸಲೇಮಿಗೆ ಹೋಗಲೇಬಾರದು. ಇಸ್ರೇಲರೇ, ನಿಮ್ಮನ್ನು ಈಜಿಪ್ಟಿನಿಂದ ಹೊರತಂದ ದೇವರುಗಳು ಇಲ್ಲಿವೆ” ಎಂದು ಹೇಳಿದನು. 29 ರಾಜನಾದ ಯಾರೊಬ್ಬಾಮನು ಒಂದು ಬಂಗಾರದ ಕರುವನ್ನು ಬೇತೇಲಿನಲ್ಲಿರಿಸಿದನು; ಮತ್ತೊಂದು ಬಂಗಾರದ ಕರುವನ್ನು ದಾನ್ ನಗರದಲ್ಲಿರಿಸಿದನು. 30 ಆದರೆ ಇದು ಮಹಾ ಪಾಪವಾಗಿತ್ತು. ಇಸ್ರೇಲಿನ ಜನರು ಕರುಗಳನ್ನು ಆರಾಧಿಸಲು ಬೇತೇಲ್ ಮತ್ತು ದಾನ್ ನಗರಗಳಿಗೆ ಪ್ರಯಾಣ ಮಾಡಿದರು.
31 ಯಾರೊಬ್ಬಾಮನು ಎತ್ತರದ ಸ್ಥಳಗಳಲ್ಲಿ ಆಲಯಗಳನ್ನು ನಿರ್ಮಿಸಿದನು. ಅವನು ಇಸ್ರೇಲಿನ ಬೇರೆಬೇರೆ ಕುಲಗಳಿಂದ ಯಾಜಕರನ್ನು ಆರಿಸಿಕೊಂಡನು. (ಅವನು ಲೇವಿಯರ ಕುಲವೊಂದರಿಂದಲೇ ಯಾಜಕರನ್ನು ಆರಿಸಿಕೊಳ್ಳಲಿಲ್ಲ.) 32 ರಾಜನಾದ ಯಾರೊಬ್ಬಾಮನು ಹೊಸಹಬ್ಬದ ದಿನವನ್ನು ಆರಂಭಿಸಿದನು. ಈ ಹಬ್ಬವು ಯೆಹೂದ್ಯರ ಪಸ್ಕಹಬ್ಬದಂತಿತ್ತು. ಆದರೆ ಈ ಹಬ್ಬವು ಎಂಟನೆಯ ತಿಂಗಳ ಹದಿನೈದನೆಯ ದಿವಸವಾಗಿತ್ತು. ಆ ಸಂದರ್ಭದಲ್ಲಿ ರಾಜನು ಬೇತೇಲ್ ನಗರದಲ್ಲಿ ಯಜ್ಞವೇದಿಕೆಯ ಮೇಲೆ ಯಜ್ಞಗಳನ್ನು ಅರ್ಪಿಸಿದನು. ಅವನು ತಾನೇ ನಿರ್ಮಿಸಿದ ಕರುಗಳಿಗೆ ಯಜ್ಞಗಳನ್ನು ಅರ್ಪಿಸಿದನು. ರಾಜನಾದ ಯಾರೊಬ್ಬಾಮನು ತಾನು ನಿರ್ಮಿಸಿದ ಎತ್ತರದ ಸ್ಥಳಗಳಲ್ಲಿ ಸೇವೆಮಾಡಲು ಯಾಜಕರನ್ನು ಬೇತೇಲ್‌ನಲ್ಲಿಯೇ ಆರಿಸಿಕೊಂಡನು. 33 ರಾಜನಾದ ಯಾರೊಬ್ಬಾಮನು ಇಸ್ರೇಲರಿಗೆ ತನ್ನದೇ ಆದ ಹಬ್ಬದ ದಿನವನ್ನು ಆರಿಸಿಕೊಂಡನು. ಅದು ಎಂಟನೆಯ ತಿಂಗಳ ಹದಿನೈದನೆಯ ದಿವಸವಾಗಿತ್ತು. ಆ ಸಮಯದಲ್ಲಿ ಅವನು ತಾನು ನಿರ್ಮಿಸಿದ ಯಜ್ಞವೇದಿಕೆಯ ಮೇಲೆ ಯಜ್ಞಗಳನ್ನು ಮತ್ತು ಧೂಪವನ್ನು ಅರ್ಪಿಸಿದನು. ಇದು ಬೇತೇಲ್ ನಗರದಲ್ಲಿ ನಡೆಯಿತು.
ಕ್ರಿಸ್ತನೇ ಎಲ್ಲಕ್ಕಿಂತಲೂ ಮುಖ್ಯ
3 ನನ್ನ ಸಹೋದರ ಸಹೋದರಿಯರೇ, ಪ್ರಭುವಿನಲ್ಲಿ ಸಂತೋಷವಾಗಿರಿ. ನಾನು ಮೊದಲು ಬರೆದದ್ದನ್ನೇ ಮತ್ತೆ ಬರೆಯಲು ನನಗೆ ಬೇಸರವೇನೂ ಇಲ್ಲ; ಏಕೆಂದರೆ ಅದು ನಿಮ್ಮನ್ನು ಮತ್ತಷ್ಟು ಸಂರಕ್ಷಿಸುತ್ತದೆ.
2 ಕೇಡುಮಾಡುವಂಥ ಜನರ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಅವರು ನಾಯಿಗಳಂತಿದ್ದಾರೆ. ಸುನ್ನತಿ ಎಂದು ಹೇಳಿಕೊಂಡು ಅಂಗಚ್ಛೇದನೆ ಮಾಡುವವರ ವಿಷಯದಲ್ಲಿ ಎಚ್ಚರಿಕೆಯಾಗಿರಿ. 3 ನಾವಾದರೋ ನಿಜವಾದ ಸುನ್ನತಿಯನ್ನು ಹೊಂದಿದವರಾಗಿದ್ದೇವೆ; ದೇವರನ್ನು ಆತ್ಮನ ಮೂಲಕ ಆರಾಧಿಸುವವರಾಗಿದ್ದೇವೆ.[a] ನಾವು ಕ್ರಿಸ್ತ ಯೇಸುವಿನಲ್ಲಿರಲು ಹೆಮ್ಮೆಪಡುತ್ತೇವೆ. ನಾವು ನಮ್ಮ ಮೇಲಾಗಲಿ ನಾವು ಮಾಡಬಲ್ಲವುಗಳ ಮೇಲಾಗಲಿ ಭರವಸೆ ಇಡುವುದಿಲ್ಲ. 4 ನಾನು ನನ್ನ ಮೇಲೆ ಭರವಸೆ ಇಡಬಲ್ಲವನಾಗಿದ್ದರೂ ಇಡುವುದಿಲ್ಲ. ತನ್ನ ಮೇಲೆ ಭರವಸೆ ಇಡಲು ತನಗೆ ಆಧಾರವಿರುವುದಾಗಿ ಯಾವನಾದರೂ ಯೋಚಿಸಿದರೆ, ನನ್ನ ಮೇಲೆ ಭರವಸೆ ಇಡಲು ನನಗೆ ಅದಕ್ಕಿಂತಲೂ ಹೆಚ್ಚಿನ ಆಧಾರವಿದೆ. 5 ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು. ನಾನು ಇಸ್ರೇಲ್ ವಂಶದವನು ಮತ್ತು ಬೆನ್ಯಾಮೀನನ ಕುಲದವನು. ನಾನು ಇಬ್ರಿಯನು ಮತ್ತು ನನ್ನ ತಂದೆತಾಯಿಗಳು ಸಹ ಇಬ್ರಿಯರು. ನಾನು ಮೋಶೆಯ ಧರ್ಮಶಾಸ್ತ್ರವನ್ನು ಮುಖ್ಯವಾದದ್ದೆಂದು ಪರಿಗಣಿಸಿ ಫರಿಸಾಯನಾದೆನು; 6 ಯೆಹೂದ್ಯ ಧರ್ಮದಲ್ಲಿ ಬಹಳ ಆಸಕ್ತಿಯುಳ್ಳವನಾಗಿದ್ದು ಕ್ರೈಸ್ತಸಭೆಯನ್ನು (ವಿಶ್ವಾಸಿಗಳನ್ನು) ಹಿಂಸಿಸಿದೆನು. ಮೋಶೆಯ ಧರ್ಮಶಾಸ್ತ್ರಕ್ಕೆ ಯಾವಾಗಲೂ ವಿಧೇಯನಾಗಿದ್ದುದರಿಂದ ಯಾರೂ ನನ್ನ ವಿಷಯದಲ್ಲಿ ತಪ್ಪನ್ನು ಕಂಡುಹಿಡಿಯಲಾಗಲಿಲ್ಲ.
7 ಒಂದು ಕಾಲದಲ್ಲಿ ಇವುಗಳೆಲ್ಲ ನನಗೆ ಮುಖ್ಯವಾಗಿದ್ದವು. ಆದರೆ ಈಗ ಅವುಗಳೆಲ್ಲ ಕ್ರಿಸ್ತನ ದೆಸೆಯಿಂದ ನಿಷ್ಪ್ರಯೋಜಕವಾಗಿವೆ. 8 ಅಷ್ಟೇ ಅಲ್ಲ, ನನ್ನ ಪ್ರಭುವಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದೇ ಎಲ್ಲಾ ಸಂಗತಿಗಳಿಗಿಂತಲೂ ಅತಿಶ್ರೇಷ್ಠವಾದದ್ದೆಂದು ನನಗೆ ಮನದಟ್ಟಾಗಿದೆ. ನಾನು ಯಾವುದನ್ನು ಮುಖ್ಯವಾದವುಗಳೆಂದು ಪರಿಗಣಿಸಿದ್ದೆನೋ ಅವುಗಳನ್ನೆಲ್ಲ ಕ್ರಿಸ್ತನ ನಿಮಿತ್ತ ಕಳೆದುಕೊಂಡೆನು. ಅವುಗಳೆಲ್ಲ ನಿಷ್ಪ್ರಯೋಜಕವಾದವುಗಳೆಂದು ನನಗೆ ತಿಳಿದಿದೆ. 9 ನಾನು ಕ್ರಿಸ್ತನನ್ನು ಹೊಂದಿಕೊಳ್ಳಲು ಮತ್ತು ಕ್ರಿಸ್ತನಲ್ಲಿರಲು ಇದು ನನಗೆ ಅವಕಾಶ ಮಾಡಿಕೊಡುತ್ತದೆ. ನಾನು ಕ್ರಿಸ್ತನ ಮೂಲಕ ನೀತಿವಂತನಾಗಿದ್ದೇನೆ. ಈ ನೀತಿಯು, ಧರ್ಮಶಾಸ್ತ್ರವನ್ನು ಅನುಸರಿಸಿದ ಮಾತ್ರಕ್ಕೆ ದೊರೆಯುವುದಿಲ್ಲ. ಇದು ನಂಬಿಕೆಯ ಮೂಲಕ ದೇವರಿಂದ ಬರುತ್ತದೆ. ಕ್ರಿಸ್ತನಲ್ಲಿ ನನಗಿರುವ ನಂಬಿಕೆಯ ಮೂಲಕ ದೇವರು ನನ್ನನ್ನು ನೀತಿವಂತನನ್ನಾಗಿ ಮಾಡಿದನು. 10 ಕ್ರಿಸ್ತನನ್ನೂ ಪುನರುತ್ಥಾನದ ಶಕ್ತಿಯನ್ನೂ ತಿಳಿದುಕೊಂಡು ಆತನ ಸಂಕಟದಲ್ಲಿ ಪಾಲುಗಾರನಾಗಿ ಆತನ ಮರಣದಲ್ಲಿ ಆತನಂತಾಗಬೇಕೆಂಬುದೇ ನನ್ನ ಅಪೇಕ್ಷೆ. 11 ಹೀಗಾದರೆ, ನಾನು ಸತ್ತವರೊಳಗಿಂದ ಎಬ್ಬಿಸಲ್ಪಡುತ್ತೇನೆ ಎಂಬ ನಿರೀಕ್ಷೆ ನನಗಿದೆ.
ಗುರಿಮುಟ್ಟಲು ಪ್ರಯತ್ನ
12 ಈಗಾಗಲೇ ನಾನು ಇದೆಲ್ಲವನ್ನು ಸಾಧಿಸಿ ಪರಿಪೂರ್ಣತೆಯನ್ನು ಗಳಿಸಿದ್ದೇನೆ ಎಂದು ಹೇಳುತ್ತಿಲ್ಲ. ನಾನು ಆ ಗುರಿಯನ್ನು ಇನ್ನೂ ಮುಟ್ಟಿಲ್ಲ. ಆದರೆ ಆ ಗುರಿಯನ್ನು ಮುಟ್ಟಿ ಅದನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದು ಕ್ರಿಸ್ತನ ಅಪೇಕ್ಷೆ. ಆದಕಾರಣವೇ, ಕ್ರಿಸ್ತನು ನನ್ನನ್ನು ತನ್ನವನನ್ನಾಗಿ ಮಾಡಿಕೊಂಡನು. 13 ಸಹೋದರ ಸಹೋದರಿಯರೇ, ನಾನಿನ್ನೂ ಆ ಗುರಿಯನ್ನು ಮುಟ್ಟಿಲ್ಲವೆಂಬುದು ನನಗೆ ಗೊತ್ತಿದೆ. ಆದರೆ ನಾನು ಯಾವಾಗಲೂ ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ನನ್ನ ಮುಂದಿರುವ ಗುರಿಯನ್ನು ಮುಟ್ಟಲು ನನ್ನಿಂದಾದಷ್ಟರ ಮಟ್ಟಿಗೆ ಓಡುತ್ತಿದ್ದೇನೆ. 14 ದೇವರು ನಮ್ಮನ್ನು ಕ್ರಿಸ್ತನ ಮೂಲಕ ಮೇಲೋಕದ ಜೀವಿತಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.
15 ಆತ್ಮಿಕತೆಯಲ್ಲಿ ಪರಿಪೂರ್ಣವಾದ ಮಟ್ಟಕ್ಕೆ ಬಂದಿರುವ ನಾವೆಲ್ಲರೂ ಇದೇ ರೀತಿ ಯೋಚಿಸಬೇಕು. ನೀವು ಈ ಸಂಗತಿಗಳಲ್ಲಿ ಯಾವುದನ್ನಾದರೂ ಒಪ್ಪಿಕೊಳ್ಳದಿದ್ದರೆ ದೇವರೇ ನಿಮಗೆ ಅದನ್ನು ಸ್ಪಷ್ಟಪಡಿಸುವನು. 16 ಆದರೆ ನಾವು ಈಗಾಗಲೇ ಹೊಂದಿರುವ ಸತ್ಯವನ್ನು ಅನುಸರಿಸುತ್ತಾ ನಡೆಯೋಣ.
17 ಸಹೋದರ ಸಹೋದರಿಯರೇ, ನೀವೆಲ್ಲರೂ ನನ್ನಂತೆ ಜೀವಿಸಲು ಪ್ರಯತ್ನಿಸಿ. ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ಜೀವಿಸುವವರನ್ನು ಅನುಸರಿಸಿರಿ. 18 ಅನೇಕರು ಕ್ರಿಸ್ತನ ಶಿಲುಬೆಗೆ ವೈರಿಗಳೊ ಎಂಬಂತೆ ಜೀವಿಸುತ್ತಾರೆ. ಅವರ ಬಗ್ಗೆ ನಾನು ನಿಮಗೆ ಅನೇಕ ಸಲ ತಿಳಿಸಿದ್ದೇನೆ. ಈಗಲೂ ಕಣ್ಣೀರಿನಿಂದ ಹೇಳುತ್ತೇನೆ. 19 ಅವರ ನಡತೆಯು ಅವರನ್ನು ನಾಶದೆಡೆಗೆ ನಡೆಸುತ್ತಿದೆ. ಅವರು ದೇವರ ಸೇವೆ ಮಾಡುತ್ತಿಲ್ಲ. ಆ ಜನರು ಕೇವಲ ತಮ್ಮ ಸಂತೋಷಕ್ಕಾಗಿ ಜೀವಿಸುತ್ತಿದ್ದಾರೆ. ಅವರು ನಾಚಿಕೆಕರವಾದ ಕೆಲಸಗಳನ್ನು ಮಾಡಿ, ಅವುಗಳ ಬಗ್ಗೆ ಹೆಮ್ಮೆಪಡುತ್ತಾರೆ. ಅವರು ಕೇವಲ ಈ ಲೋಕದ ವಿಷಯಗಳ ಬಗ್ಗೆ ಆಲೋಚಿಸುತ್ತಾರೆ. 20 ನಾವಾದರೋ ಪರಲೋಕ ಸಂಸ್ಥಾನದವರು. ನಮ್ಮ ರಕ್ಷಕನು ಅಲ್ಲಿಂದಲೇ ಬರುವುದನ್ನು ನಾವು ಎದುರುನೋಡುತ್ತಿದ್ದೇವೆ. ಪ್ರಭುವಾದ ಯೇಸು ಕ್ರಿಸ್ತನೇ ನಮ್ಮ ರಕ್ಷಕನು. 21 ಆತನು ತನ್ನ ಶಕ್ತಿಯಿಂದ ಸಮಸ್ತವನ್ನು ಆಳುತ್ತಾನೆ ಮತ್ತು ನಮ್ಮ ದೀನಾವಸ್ಥೆಯ ಈ ಶರೀರವನ್ನು ರೂಪಾಂತರಪಡಿಸಿ ತನ್ನ ಸ್ವಂತ ಮಹಿಮಾಶರೀರದಂತೆ ಮಾಡುತ್ತಾನೆ.
ಯಾಜಕರ ಕೋಣೆಗಳು
42 ಆಮೇಲೆ ಆ ಮನುಷ್ಯನು ನನ್ನನ್ನು ಉತ್ತರದ್ವಾರದ ಮೂಲಕ ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಅವನು ನನ್ನನ್ನು ಪಶ್ಚಿಮದಲ್ಲಿರುವ ಅನೇಕ ಕೋಣೆಗಳಿದ್ದ ಕಟ್ಟಡಕ್ಕೆ ಕರೆದುಕೊಂಡು ಹೋದನು. ಅದು ಇಕ್ಕಟ್ಟಾದ ಸ್ಥಳದ ಪಶ್ಚಿಮದಲ್ಲಿತ್ತು ಮತ್ತು ಕಟ್ಟಡವು ಉತ್ತರ ಭಾಗದಲ್ಲಿತ್ತು. 2 ಈ ಕಟ್ಟಡವು ನೂರು ಮೊಳ ಉದ್ದವಾಗಿದ್ದು ಐವತ್ತು ಮೊಳ ಅಗಲವಿತ್ತು. ಉತ್ತರ ಭಾಗದ ಪ್ರಾಕಾರದೊಳಗಿಂದ ಜನರು ಒಳಪ್ರವೇಶಿಸುತ್ತಿದ್ದರು. 3 ಆ ಕಟ್ಟಡವು ಮೂರು ಅಂತಸ್ತಿನಷ್ಟು ಎತ್ತರವಿದ್ದು ಅದಕ್ಕೆ ಅನೇಕ ಮೇಲಂತಸ್ತುಗಳಿದ್ದವು. ಇಪ್ಪತ್ತು ಮೊಳದ ಒಳಗಿನ ಪ್ರಾಕಾರವು ಆಲಯಕ್ಕೂ ಕಟ್ಟಡಕ್ಕೂ ನಡುವೆ ಇತ್ತು. ಎದುರಿನ ಕೋಣೆಗಳು ಹೊರಗಿನ ಪ್ರಾಕಾರದ ನೆಲಗಟ್ಟಿಗೆ ಮುಖಮಾಡಿದ್ದವು. 4 ಇದರ ಪ್ರವೇಶ ದ್ವಾರವು ಉತ್ತರ ದಿಕ್ಕಿನಲ್ಲಿದ್ದಾಗ್ಯೂ, ಹತ್ತು ಮೊಳ ಅಗಲ, ನೂರು ಮೊಳ ಉದ್ದದ ದಾರಿಯು ಆ ಕಟ್ಟಡದ ದಕ್ಷಿಣ ಭಾಗದಲ್ಲಿತ್ತು. 5-6 ಈ ಕಟ್ಟಡವು ಮೂರು ಅಂತಸ್ತು ಎತ್ತರವಿದ್ದಾಗ್ಯೂ ಇದಕ್ಕೆ ಹೊರಗಿನ ಪ್ರಾಕಾರಕ್ಕೆ ಇದ್ದಂತೆ ಸ್ತಂಭಗಳಿರಲಿಲ್ಲ. ಮೇಲಿನ ಅಂತಸ್ತಿನ ಕೋಣೆಗಳು, ಮಧ್ಯ ಮತ್ತು ಕೆಳಗಿನ ಅಂತಸ್ತುಗಳ ಕೋಣೆಗಳಿಂದ ಹಿಂದಕ್ಕೆ ಇದ್ದವು. ಮೇಲಿನಂತಸ್ತು, ಮಧ್ಯ ಅಂತಸ್ತಿಗಿಂತ ಕಿರಿದಾಗಿತ್ತು. ಮತ್ತು ಮಧ್ಯ ಅಂತಸ್ತು ಕೆಳಗಿನ ಅಂತಸ್ತಿಗಿಂತ ಅಗಲದಲ್ಲಿ ಕಿರಿದಾಗಿತ್ತು. ಯಾಕೆಂದರೆ ಮೇಲಂತಸ್ತುಗಳು ಆ ಜಾಗವನ್ನು ಆಕ್ರಮಿಸಿದ್ದವು. 7 ಕೋಣೆಗಳ ಉದ್ದಕ್ಕೆ ಅನುಸಾರವಾಗಿ ಒಂದು ಗೋಡೆಯು ಹೊರಗಿನ ಪ್ರಾಕಾರಕ್ಕೆ ಸಮವಾಗಿ ಇತ್ತು. ಇದು ಕೋಣೆಗಳೆದುರು ಐವತ್ತು ಮೊಳ ಉದ್ದವಾಗಿತ್ತು. 8 ಹೊರಗಿನ ಪ್ರಾಕಾರಕ್ಕೆ ಸರಿಯಾಗಿ ಹೋಗಿದ್ದ ಕೋಣೆಗಳ ಸಾಲು ಐವತ್ತು ಮೊಳ ಉದ್ದವಾಗಿತ್ತು. ಆದರೆ ಆಲಯದ ಬಳಿಯಲ್ಲಿದ್ದ ಕಟ್ಟಡವು ನೂರು ಮೊಳ ಉದ್ದವಾಗಿತ್ತು. 9 ಕಟ್ಟಡದ ಪೂರ್ವ ಭಾಗದಲ್ಲಿ ಪ್ರವೇಶ ದ್ವಾರವು ಇತ್ತು. ಇದರ ಮೂಲಕ ಹೊರಗಿನ ಪ್ರಾಕಾರದಿಂದ ಜನರು ಒಳ ಪ್ರವೇಶ ಮಾಡಬಹುದು. 10 ಈ ಪ್ರವೇಶ ದ್ವಾರವು ಪ್ರಾಕಾರದ ಬದಿಯಲ್ಲಿ ಗೋಡೆಯು ಪ್ರಾರಂಭವಾಗುವಲ್ಲಿಯೇ ಇತ್ತು.
ಬೇರೆ ಕಟ್ಟಡ ಮತ್ತು ಕಿರಿದಾದ ಜಾಗಕ್ಕೆ ತಾಗಿ ದಕ್ಷಿಣದಿಕ್ಕಿನಲ್ಲಿ ಕೋಣೆಗಳು ಇದ್ದವು. 11 ಈ ಕೋಣೆಗಳ ಎದುರಿನಲ್ಲಿ ದಾರಿಯು ಇತ್ತು. ಇದು ಉತ್ತರ ದಿಕ್ಕಿನಲ್ಲಿದ್ದ ಕೋಣೆಗಳಂತೆ ಇತ್ತು. ಅವುಗಳ ಅಳತೆಯೂ ಬಾಗಿಲು ಕದಗಳ ವಿನ್ಯಾಸವೂ ಒಂದೇ ಆಗಿತ್ತು. 12 ಕೆಳಗಿನ ಕೋಣೆಗಳ ಪ್ರವೇಶ ದ್ವಾರವು ಕಟ್ಟಡದ ಪೂರ್ವ ಭಾಗದಲ್ಲಿದ್ದು ಗೋಡೆಯ ಬದಿಯಲ್ಲಿದ್ದ ದಾರಿಯಿಂದ ಜನರು ಒಳಪ್ರವೇಶ ಮಾಡಬಹುದಾಗಿತ್ತು.
13 ಅವನು ನನಗೆ ಹೀಗೆ ಹೇಳಿದನು, “ನಿಯಮಿತ ಇಕ್ಕಟ್ಟಾದ ಸ್ಥಳದ ಬಳಿಯಲ್ಲಿ ಇರುವ ಉತ್ತರದ ಮತ್ತು ದಕ್ಷಿಣದ ಕೋಣೆಗಳು ಪವಿತ್ರವಾದವುಗಳು. ಅವು ಯೆಹೋವನಿಗೆ ಯಜ್ಞ ಸಮರ್ಪಿಸುವ ಯಾಜಕರಿಗಾಗಿ ಇವೆ. ಅಲ್ಲಿ ಯಾಜಕರು ಅತಿ ಪವಿತ್ರ ಕಾಣಿಕೆಪದಾರ್ಥಗಳನ್ನು ತಿನ್ನುವರು. ಮತ್ತು ಅಲ್ಲಿ ಅತಿ ಪವಿತ್ರ ಕಾಣಿಕೆಗಳನ್ನಿಡುವರು. ಯಾಕೆಂದರೆ ಆ ಸ್ಥಳವು ಪವಿತ್ರವಾದದ್ದು. ಅತಿ ಪವಿತ್ರ ಕಾಣಿಕೆ ಯಾವುವೆಂದರೆ, ಧಾನ್ಯಸಮರ್ಪಣೆ, ಪಾಪಪರಿಹಾರಕಯಜ್ಞ, ದೋಷಪರಿಹಾರಕಯಜ್ಞ, ಸಮಾಧಾನಯಜ್ಞದ ಕಾಣಿಕೆ. 14 ಈ ಪವಿತ್ರಸ್ಥಳಕ್ಕೆ ಪ್ರವೇಶಿಸುವ ಯಾಜಕರು ತಮ್ಮ ದೀಕ್ಷಾವಸ್ತ್ರಗಳನ್ನು ಅಲ್ಲಿಯೇ ತೆಗೆದಿಟ್ಟು ಹೊರಗಿನ ಪ್ರಾಕಾರಕ್ಕೆ ಹೋಗಬೇಕು. ಯಾಕೆಂದರೆ ಆ ವಸ್ತುಗಳು ಪವಿತ್ರವಾದದ್ದು. ಒಬ್ಬ ಯಾಜಕನು ಇತರ ಜನರು ಇರುವ ಸ್ಥಳಕ್ಕೆ ಹೋಗಬೇಕಿದ್ದಲ್ಲಿ ಅವನು ಕೋಣೆಗೆ ಬಂದು ದೀಕ್ಷಾವಸ್ತ್ರಗಳನ್ನು ತೆಗೆದಿಟ್ಟು ಬೇರೆ ವಸ್ತ್ರಗಳನ್ನು ಹಾಕಿಕೊಂಡು ಹೋಗಬೇಕು.”
ಹೊರಗಿನ ಪ್ರಾಕಾರ
15 ಆಲಯದ ಒಳಭಾಗದ ಅಳತೆಯನ್ನು ಅವನು ತೆಗೆದುಕೊಂಡ ಬಳಿಕ ನನ್ನನ್ನು ಪೂರ್ವದ ದ್ವಾರದಿಂದ ಹೊರತಂದು ಆ ಜಾಗವನ್ನೆಲ್ಲಾ ಅಳೆದನು. 16 ಪೂರ್ವ ಭಾಗವನ್ನು ಅವನು ತನ್ನ ಅಳತೆ ಕೋಲಿನಿಂದ ಅಳೆದನು. ಅದು ಐನೂರು ಮೊಳ ಉದ್ದವಿತ್ತು. 17 ಅವನು ಉತ್ತರ ಭಾಗವನ್ನು ಅಳೆದನು, ಅದು ಐನೂರು ಮೊಳ ಉದ್ದವಿತ್ತು. 18 ಅವನು ದಕ್ಷಿಣದ ಭಾಗವನ್ನು ಅಳೆದನು, ಅದು ಐನೂರು ಮೊಳ ಉದ್ದವಿತ್ತು. 19 ಅನಂತರ ಪಶ್ಚಿಮದ ಭಾಗಕ್ಕೆ ಹೋಗಿ ಅಲ್ಲಿ ಅಳೆದನು. ಅದು ಐನೂರು ಮೊಳ ಉದ್ದವಿತ್ತು. 20 ಆಲಯದ ಸುತ್ತಲೂ ಇದ್ದ ನಾಲ್ಕು ಗೋಡೆಗಳನ್ನು ಅಳೆದನು. ಆ ಗೋಡೆ ಐನೂರು ಮೊಳ ಉದ್ದವಿದ್ದು ಐನೂರು ಮೊಳ ಅಗಲವಿತ್ತು. ಅದು ಪವಿತ್ರಸ್ಥಳವನ್ನೂ ಬೇರೆ ಸ್ಥಳವನ್ನೂ ಬೇರ್ಪಡಿಸಿತ್ತು.
94 ಯೆಹೋವನೇ, ನೀನು ಸೇಡು ತೀರಿಸಿಕೊಳ್ಳುವ ದೇವರು!
ಸೇಡು ತೀರಿಸಿಕೊಳ್ಳುವ ದೇವರೇ ಪ್ರತ್ಯಕ್ಷನಾಗು!
2 ಇಡೀಲೋಕದ ನ್ಯಾಯಾಧಿಪತಿ ನೀನೇ.
ಅಹಂಕಾರಿಗಳಿಗೆ ತಕ್ಕ ದಂಡನೆಯನ್ನು ಕೊಡು.
3 ಯೆಹೋವನೇ, ದುಷ್ಟಜನರು ಎಷ್ಟರವರೆಗೆ ಪರಿಹಾಸ್ಯ ಮಾಡುವರು?
ಇನ್ನೆಷ್ಟರವರೆಗೆ ಪರಿಹಾಸ್ಯ ಮಾಡುವರು?
4 ಆ ಅಪರಾಧಿಗಳು ತಮ್ಮ ದುಷ್ಕೃತ್ಯಗಳ ಬಗ್ಗೆ
ಇನ್ನೆಷ್ಟರವರೆಗೆ ಜಂಬ ಕೊಚ್ಚಿಕೊಳ್ಳುವರು?
5 ಯೆಹೋವನೇ, ಅವರು ನಿನ್ನ ಜನರಿಗೆ ಕೇಡುಮಾಡಿದ್ದಾರೆ.
ಅವರು ನಿನ್ನ ಜನರನ್ನು ಹಿಂಸೆಪಡಿಸಿದ್ದಾರೆ.
6 ನಮ್ಮ ದೇಶದಲ್ಲಿ ವಾಸವಾಗಿರುವ ವಿಧವೆಯರನ್ನೂ ವಿದೇಶಿಯರನ್ನೂ ಆ ದುಷ್ಟರು ಕೊಲ್ಲುತ್ತಾರೆ.
ಅವರು ಅನಾಥ ಮಕ್ಕಳನ್ನೂ ಕೊಲೆ ಮಾಡುವರು.
7 ಆ ದುಷ್ಕೃತ್ಯಗಳು ಯೆಹೋವನಿಗೆ ಕಾಣದೆಂದು ಅವರು ಹೇಳಿಕೊಳ್ಳುತ್ತಾರೆ.
ಅವುಗಳು ಇಸ್ರೇಲಿನ ದೇವರಿಗೆ ತಿಳಿಯದೆಂದು ಅವರು ಹೇಳುತ್ತಾರೆ.
8 ದುಷ್ಟರೇ, ನೀವು ಮೂಢರಾಗಿದ್ದೀರಿ!
ನೀವು ಪಾಠವನ್ನು ಕಲಿತುಕೊಳ್ಳುವುದು ಯಾವಾಗ?
ದುಷ್ಟರೇ, ನೀವು ಬಹು ದಡ್ಡರಾಗಿದ್ದೀರಿ!
ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕು.
9 ಕಿವಿಗಳನ್ನು ಸೃಷ್ಟಿಸಿದಾತನಿಗೆ, ಕೇಳುವುದಿಲ್ಲವೇ?
ಕಣ್ಣುಗಳನ್ನು ಸೃಷ್ಟಿಸಿದಾತನಿಗೆ ಕಾಣುವುದಿಲ್ಲವೇ?
10 ಜನಾಂಗಗಳನ್ನು ಶಿಕ್ಷಿಸುವಾತನು ದೇವರೇ.
ಜನರಿಗೆ ಉಪದೇಶಿಸುವವನೂ ಆತನೇ.
11 ಮನುಷ್ಯರ ಆಲೋಚನೆಗಳೆಲ್ಲಾ ಆತನಿಗೆ ತಿಳಿದಿದೆ.
ಮನುಷ್ಯರು ಕೇವಲ ಉಸಿರೆಂಬುದು ಆತನಿಗೆ ತಿಳಿದಿದೆ.
12 ಯೆಹೋವನಿಂದ ಶಿಕ್ಷಿಸಲ್ಪಡುವವನು ಭಾಗ್ಯವಂತನೇ ಸರಿ.
ದೇವರು ಅವನಿಗೆ ನೀತಿಮಾರ್ಗವನ್ನು ಉಪದೇಶಿಸುವನು.
13 ಆಪತ್ತಿನಲ್ಲಿಯೂ ಸಮಾಧಾನದಿಂದಿರಲು ನೀನು ಅವನಿಗೆ ಸಹಾಯಮಾಡುವೆ.
ದುಷ್ಟರು ಸಮಾಧಿಗಳಿಗೆ ಸೇರುವವರೆಗೆ ಸಮಾಧಾನದಿಂದಿರಲು ನೀನು ಅವನಿಗೆ ನೆರವು ನೀಡುವೆ.
14 ಯೆಹೋವನು ತನ್ನ ಜನರನ್ನು ತೊರೆದುಬಿಡುವುದಿಲ್ಲ.
ಆತನು ತನ್ನ ಜನರನ್ನು ನಿಸ್ಸಹಾಯಕರನ್ನಾಗಿ ಮಾಡುವುದಿಲ್ಲ.
15 ನ್ಯಾಯವು ನೀತಿಯೊಂದಿಗೆ ಮರಳಿ ಬರುವುದು.
ಆಗ ಜನರು ಒಳ್ಳೆಯವರೂ ಯಥಾರ್ಥವಂತರೂ ಆಗುವರು.
16 ದುಷ್ಟರಿಗೆ ವಿರೋಧವಾಗಿ ಯಾರೂ ನನಗೆ ಸಹಾಯಮಾಡಲಿಲ್ಲ.
ದುಷ್ಕೃತ್ಯಗಳನ್ನು ಮಾಡುವವರ ವಿರುದ್ಧವಾಗಿ ಯಾರೂ ನನ್ನೊಂದಿಗೆ ನಿಂತುಕೊಳ್ಳಲಿಲ್ಲ.
17 ಯೆಹೋವನು ನನಗೆ ಸಹಾಯಮಾಡಿಲ್ಲದಿದ್ದರೆ,
ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು.
18 ಯೆಹೋವನೇ, ಜಾರಿಹೋಗುತ್ತಿರುವೆ ಎಂದು ಮೊರೆಯಿಟ್ಟಾಗ
ಆತನು ನನಗೆ ಆಧಾರ ನೀಡಿದನು.
19 ನಾನು ಚಿಂತೆಗಳಿಂದ ಗಲಿಬಿಲಿಗೊಂಡಿದ್ದಾಗ
ನೀನು ನನ್ನನ್ನು ಸಂತೈಸಿ ಸಂತೋಷಪಡಿಸಿದೆ.
20 ದೇವರೇ, ಮೋಸಗಾರರಾದ ನ್ಯಾಯಾಧೀಶರಿಗೆ ಸಹಾಯಮಾಡಬೇಡ.
ಅವರು ಕಾನೂನನ್ನು ಡೊಂಕು ಮಾಡಿ ಜನರನ್ನು ಹಿಂಸಿಸುವರು.
21 ಅವರು ನೀತಿವಂತರಿಗೆ ಎದುರಾಗಿ
ನಿರಪರಾಧಿಗಳಿಗೆ ಮರಣದಂಡನೆ ವಿಧಿಸುವರು.
22 ನನಗಾದರೋ ಯೆಹೋವನು ಪರ್ವತದ ಮೇಲಿರುವ ಆಶ್ರಯಸ್ಥಾನವಾಗಿದ್ದಾನೆ.
ನನ್ನ ಬಂಡೆಯಾಗಿರುವ ದೇವರು ನನಗೆ ಆಶ್ರಯಗಿರಿಯಾಗಿದ್ದಾನೆ!
23 ಆತನು ಆ ದುಷ್ಟ ನ್ಯಾಯಾಧೀಶರನ್ನು ಅವರ ದುಷ್ಕೃತ್ಯಗಳ ನಿಮಿತ್ತ ದಂಡಿಸುವನು.
ಅವರ ಪಾಪಗಳ ನಿಮಿತ್ತ ದೇವರು ಅವರನ್ನು ನಾಶಮಾಡುವನು.
ನಮ್ಮ ದೇವರಾದ ಯೆಹೋವನು ಆ ದುಷ್ಟ ನ್ಯಾಯಾಧೀಶರನ್ನು ನಾಶಮಾಡುವನು.
Kannada Holy Bible: Easy-to-Read Version. All rights reserved. © 1997 Bible League International