Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ರಾಜರುಗಳು 11

ಸೊಲೊಮೋನನು ಮತ್ತು ಅವನ ಅನೇಕ ಪತ್ನಿಯರು

11 ರಾಜನಾದ ಸೊಲೊಮೋನನು ಸ್ತ್ರೀಯರನ್ನು ಪ್ರೀತಿಸಿದನು! ಅವನು ಇಸ್ರೇಲರಲ್ಲದ ಅನೇಕ ಸ್ತ್ರೀಯರನ್ನು ಪ್ರೀತಿಸಿದನು. ಇವರಲ್ಲಿ ಫರೋಹನ ಮಗಳು, ಮೋವಾಬ್ಯ, ಅಮ್ಮೋನಿಯ, ಎದೋಮ್ಯ ಚೀದೋನ್ಯ ಮತ್ತು ಹಿತ್ತಿಯ ಸ್ತ್ರೀಯರು ಸೇರಿದ್ದರು. ಯೆಹೋವನು ಮೊದಲೇ ಇಸ್ರೇಲಿನ ಜನರಿಗೆ, “ಅನ್ಯದೇಶದ ಸ್ತ್ರೀಯರನ್ನು ನೀವು ಮದುವೆಯಾಗಲೇಬಾರದು. ನೀವು ಅವರನ್ನು ಮದುವೆಯಾದರೆ, ತಮ್ಮ ದೇವರುಗಳನ್ನು ಅನುಸರಿಸುವಂತೆ ಅವರು ನಿಮ್ಮನ್ನು ಪ್ರೇರೇಪಿಸುತ್ತಾರೆ” ಎಂದು ಹೇಳಿದ್ದನು. ಆದರೆ ಸೊಲೊಮೋನನು ಈ ಸ್ತ್ರೀಯರನ್ನು ಪ್ರೀತಿಸತೊಡಗಿದನು. ಸೊಲೊಮೋನನಿಗೆ ಏಳುನೂರು ಮಂದಿ ಪತ್ನಿಯರಿದ್ದರು. (ಈ ಸ್ತ್ರೀಯರು ಅನ್ಯದೇಶಗಳ ನಾಯಕರ ಹೆಣ್ಣುಮಕ್ಕಳು) ಅವನಿಗೆ ಪತ್ನಿಯರಂತಿರುವ ಮುನ್ನೂರು ಮಂದಿ ಉಪಪತ್ನಿಯರೂ ಇದ್ದರು. ಅವನ ಪತ್ನಿಯರು ಅವನನ್ನು ದೇವರಿಗೆ ವಿಮುಖನನ್ನಾಗಿ ಮಾಡಿದರು. ಸೊಲೊಮೋನನು ವೃದ್ಧನಾದಾಗ, ತನ್ನ ಪತ್ನಿಯರ ದೆಸೆಯಿಂದಾಗಿ ಅನ್ಯದೇವತೆಗಳನ್ನು ಅನುಸರಿಸಿದನು. ತನ್ನ ತಂದೆಯಾದ ದಾವೀದನು ಯೆಹೋವನನ್ನು ಅನುಸರಿಸಿದಂತೆ ಸೊಲೊಮೋನನು ಪೂರ್ಣಮನಸ್ಸಿನಿಂದ ಯೆಹೋವನನ್ನು ಅನುಸರಿಸಲಿಲ್ಲ. ಸೊಲೊಮೋನನು ಅಷ್ಟೋರೆತ್ ದೇವತೆಯನ್ನು ಪೂಜಿಸಿದನು. ಇದು ಚೀದೋನ್ಯರ ದೇವತೆ. ಸೊಲೊಮೋನನು ಮಿಲ್ಕೋಮನನ್ನು ಆರಾಧಿಸಿದನು. ಇದು ಅಮ್ಮೋನಿಯರ ಭಯಂಕರ ವಿಗ್ರಹ. ಹೀಗೆ ಸೊಲೊಮೋನನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದಾಗಿದ್ದ ಕಾರ್ಯಗಳನ್ನು ಮಾಡಿದನು; ತನ್ನ ತಂದೆಯಾದ ದಾವೀದನು ಪೂರ್ಣಮನಸ್ಸಿನಿಂದ ಯೆಹೋವನನ್ನು ಅನುಸರಿಸಿದಂತೆ ಅನುಸರಿಸಲಿಲ್ಲ.

ಸೊಲೊಮೋನನು ಕೆಮೋಷನನ್ನು ಆರಾಧಿಸಲು ಒಂದು ಸ್ಥಳವನ್ನು ನಿರ್ಮಿಸಿದನು. ಮೋವಾಬ್ಯರ ಭಯಂಕರ ವಿಗ್ರಹವೇ ಕೆಮೋಷ್. ಜೆರುಸಲೇಮಿನ ಪಕ್ಕದಲ್ಲಿದ್ದ ಬೆಟ್ಟದ ಮೇಲೆ ಸೊಲೊಮೋನನು ಆರಾಧನೆಯ ಸ್ಥಳವನ್ನು ನಿರ್ಮಿಸಿದನು. ಆ ಬೆಟ್ಟದ ಮೇಲೆಯೇ ಸೊಲೊಮೋನನು ಮೋಲೆಕ್ ದೇವತೆಯ ಪೂಜಾಸ್ಥಳವನ್ನು ನಿರ್ಮಿಸಿದನು. ಅಮ್ಮೋನಿಯರ ಭಯಂಕರ ವಿಗ್ರಹವೇ ಮೋಲೆಕ್. ಸೊಲೊಮೋನನು ಅನ್ಯದೇಶಗಳ ತನ್ನ ಪತ್ನಿಯರಿಗೆಲ್ಲ ಇದೇ ರೀತಿ ಮಾಡಿದನು. ಅವನ ಪತ್ನಿಯರು ತಮ್ಮ ದೇವರುಗಳಿಗೆ ಧೂಪಹಾಕಿದರು ಮತ್ತು ಯಜ್ಞಗಳನ್ನು ಅರ್ಪಿಸಿದರು.

ಸೊಲೊಮೋನನು ಇಸ್ರೇಲಿನ ದೇವರಾದ ಯೆಹೋವನನ್ನು ಅನುಸರಿಸದೆ ಬೇರೆ ಕಡೆಗೆ ತಿರುಗಿಕೊಂಡನು. ಆದ್ದರಿಂದ ಯೆಹೋವನು ಸೊಲೊಮೋನನ ಮೇಲೆ ಕೋಪಗೊಂಡನು. ಯೆಹೋವನು ಎರಡು ಸಲ ಸೊಲೊಮೋನನಿಗೆ ದರ್ಶನವನ್ನು ನೀಡಿದ್ದನು. 10 ಅನ್ಯದೇವತೆಗಳನ್ನು ಅನುಸರಿಸಬಾರದೆಂದು ಯೆಹೋವನು ಸೊಲೊಮೋನನಿಗೆ ಹೇಳಿದನು. ಆದರೆ ಸೊಲೊಮೋನನು ಯೆಹೋವನ ಆಜ್ಞೆಯನ್ನು ಅನುಸರಿಸಲಿಲ್ಲ. 11 ಆದ್ದರಿಂದ ಯೆಹೋವನು ಸೊಲೊಮೋನನಿಗೆ, “ನಮ್ಮಿಬ್ಬರ ನಡುವೆಯಿದ್ದ ಒಡಂಬಡಿಕೆಯನ್ನು ಮೀರಿಬಿಟ್ಟೆ. ನೀನು ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ. ಆದ್ದರಿಂದ ನಿನ್ನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ಸೇವಕರಲ್ಲಿ ಒಬ್ಬನಿಗೆ ಅದನ್ನು ಕೊಡುವುದಾಗಿ ನಾನು ಪ್ರಮಾಣ ಮಾಡುತ್ತೇನೆ. 12 ಆದರೆ ನಿನ್ನ ತಂದೆಯಾದ ದಾವೀದನನ್ನು ನಾನು ಪ್ರೀತಿಸಿದ್ದರಿಂದ ನೀನು ಜೀವಂತವಾಗಿರುವಾಗಲೇ ನಿನ್ನ ರಾಜ್ಯವನ್ನು ನಿನ್ನಿಂದ ನಾನು ತೆಗೆದುಕೊಳ್ಳುವುದಿಲ್ಲ. ನಿನ್ನ ಮಗನು ರಾಜನಾಗುವವರೆಗೆ ನಾನು ಕಾಯುತ್ತೇನೆ. ನಂತರ ನಾನು ಅದನ್ನು ಅವನಿಂದ ತೆಗೆದುಕೊಳ್ಳುತ್ತೇನೆ. 13 ಆದರೂ ನಿನ್ನ ಮಗನಿಂದ ರಾಜ್ಯವನ್ನೆಲ್ಲ ನಾನು ಕಿತ್ತುಕೊಳ್ಳುವುದಿಲ್ಲ. ನಾನು ಅವನಿಗೆ ಒಂದು ಕುಲವನ್ನು ಆಳಲು ಬಿಡುತ್ತೇನೆ. ನಾನು ದಾವೀದನಿಗಾಗಿ ಹೀಗೆ ಮಾಡುತ್ತೇನೆ. ಅವನು ನನಗೆ ಒಬ್ಬ ಒಳ್ಳೆಯ ಸೇವಕನಾಗಿದ್ದನು. ನಾನು ಇದನ್ನು ಜೆರುಸಲೇಮಿನ ಏಳಿಗೆಗಾಗಿ ಮಾಡುತ್ತೇನೆ. ನಾನೇ ಆ ನಗರವನ್ನು ಆರಿಸಿಕೊಂಡೆನು” ಎಂದು ಹೇಳಿದನು.

ಸೊಲೊಮೋನನ ಶತ್ರುಗಳು

14 ಆ ಸಮಯದಲ್ಲಿ ಸೊಲೊಮೋನನಿಗೆ ಶತ್ರುವಾಗುವಂತೆ ಎದೋಮ್ಯನಾದ ಹದದನನ್ನು ಯೆಹೋವನು ಪ್ರೇರೇಪಿಸಿದನು. ಹದದನು ರಾಜನಾದ ಎದೋಮ್ಯನ ವಂಶದವನು. 15 ಅದು ಹೀಗೆ ಸಂಭವಿಸಿತು: ದಾವೀದನು ಮೊದಲು ಎದೋಮ್ಯರನ್ನು ಸೋಲಿಸಿದ್ದನು, ದಾವೀದನ ಸೈನ್ಯಕ್ಕೆ ಯೋವಾಬನು ಸೇನಾಪತಿಯಾಗಿದ್ದನು. ಸತ್ತ ಜನರನ್ನು ಸಮಾಧಿ ಮಾಡಲು ಯೋವಾಬನು ಎದೋಮಿಗೆ ಹೋದನು. ಅಲ್ಲಿ ಇನ್ನೂ ವಾಸವಾಗಿದ್ದ ಗಂಡಸರನ್ನೆಲ್ಲ ಯೋವಾಬನು ಕೊಂದುಹಾಕಿದನು. 16 ಯೋವಾಬನು ಮತ್ತು ಇಸ್ರೇಲರು ಎದೋಮಿನಲ್ಲಿ ಆರು ತಿಂಗಳ ಕಾಲ ನೆಲೆಸಿದ್ದರು. ಆ ಸಂದರ್ಭದಲ್ಲಿ ಅವರು ಎದೋಮಿನ ಗಂಡಸರನ್ನೆಲ್ಲ ಕೊಂದುಹಾಕಿದರು. 17 ಆದರೆ ಆ ಕಾಲಕ್ಕೆ ಹದದನಿನ್ನೂ ಚಿಕ್ಕ ಬಾಲಕನಾಗಿದ್ದನು. ಆದ್ದರಿಂದ ಹದದನು ಈಜಿಪ್ಟಿಗೆ ಓಡಿಹೋದನು. ಅವನ ತಂದೆಯ ಕೆಲವು ಜನ ಸೇವಕರೂ ಅವನೊಡನೆ ಹೋದರು. 18 ಅವರು ಮಿದ್ಯಾನನ್ನು ಬಿಟ್ಟು ಪಾರಾನಿಗೆ ಹೋದರು. ಇತರ ಕೆಲವು ಜನರು ಪಾರಾನಿನಲ್ಲಿ ಅವರೊಂದಿಗೆ ಸೇರಿಕೊಂಡರು. ನಂತರ ಇವರೆಲ್ಲಾ ಒಟ್ಟಿಗೆ ಈಜಿಪ್ಟಿಗೆ ಹೋದರು. ಅವರು ಈಜಿಪ್ಟಿನ ರಾಜನಾದ ಫರೋಹನ ಬಳಿಗೆ ಹೋಗಿ, ಅವನ ಸಹಾಯವನ್ನು ಕೇಳಿದರು. ಫರೋಹನು ಹದದನಿಗೆ ಒಂದು ಮನೆಯನ್ನು ಮತ್ತು ಸ್ವಲ್ಪ ಭೂಮಿಯನ್ನು ಕೊಟ್ಟನು. ಫರೋಹನು ಅವನ ಊಟಕ್ಕಾಗಿ ಪ್ರತಿ ತಿಂಗಳು ಆಹಾರವನ್ನು ಕೊಟ್ಟನು.

19 ಫರೋಹನು ಹದದನನ್ನು ಬಹಳವಾಗಿ ಮೆಚ್ಚಿಕೊಂಡನು. ಫರೋಹನು ತನ್ನ ನಾದಿನಿಯನ್ನೇ ಹದದನಿಗೆ ಪತ್ನಿಯನ್ನಾಗಿ ಕೊಟ್ಟನು. (ರಾಣಿಯಾದ ತಖ್ಪೆನೇಸಳು ಫರೋಹನ ಪತ್ನಿ.) 20 ತಖ್ಪೆನೇಸಳ ಸೋದರಿಯನ್ನು ಹದದನು ಮದುವೆಯಾದನು. ಅವರಿಗೆ ಗೆನುಬತ್ ಎಂಬ ಹೆಸರಿನ ಮಗನಿದ್ದನು. ಫರೋಹನ ಮನೆಯಲ್ಲಿಯೇ ಅವನ ಮಕ್ಕಳೊಂದಿಗೆ ಗೆನುಬತನೂ ಬೆಳೆಯಲು ರಾಣಿಯಾದ ತಖ್ಪೆನೇಸಳು ಅವಕಾಶಮಾಡಿದಳು.

21 ದಾವೀದನು ಸತ್ತುಹೋದನೆಂಬುದು ಹದದನಿಗೆ ಈಜಿಪ್ಟಿನಲ್ಲಿ ತಿಳಿಯಿತು. ಸೈನ್ಯದ ಸೇನಾಪತಿಯಾದ ಯೋವಾಬನು ಸತ್ತನೆಂಬುದೂ ಅವನಿಗೆ ತಿಳಿಯಿತು. ಆದ್ದರಿಂದ ಹದದನು ಫರೋಹನಿಗೆ, “ಸ್ವದೇಶದ ನನ್ನ ಮನೆಗೆ ನನಗೆ ಹೋಗಲು ಬಿಡು” ಎಂದು ಹೇಳಿದನು.

22 ಆದರೆ ಫರೋಹನು “ನಿನಗೆ ಬೇಕಾದುದ್ದೆಲ್ಲವನ್ನು ನಾನು ಇಲ್ಲಿ ನಿನಗೆ ಕೊಟ್ಟಿದ್ದೇನೆ! ನೀನು ಸ್ವದೇಶಕ್ಕೆ ಹಿಂದಿರುಗಿ ಹೋಗಲು ಅಪೇಕ್ಷಿಸುತ್ತಿರುವುದಾದರೂ ಏಕೆ?” ಎಂದು ಕೇಳಿದನು.

ಹದದನು, “ದಯವಿಟ್ಟು ನನ್ನ ಮನೆಗೆ ನಾನು ಹೋಗಲು ಬಿಡು” ಎಂದನು.

23 ಸೊಲೊಮೋನನಿಗೆ ವಿರುದ್ಧವಾಗಿ ಶತ್ರುವಾಗುವಂತೆ ಇನ್ನೊಬ್ಬ ಮನುಷ್ಯನನ್ನೂ ದೇವರು ಪ್ರೇರೇಪಿಸಿದನು. ಈ ಮನುಷ್ಯನು ಎಲ್ಯಾದಾವನ ಮಗನಾದ ರೆಜೋನ್ ಎಂಬವನು. ರೆಜೋನನು ತನ್ನ ಒಡೆಯನ ಹತ್ತಿರದಿಂದ ಓಡಿಹೋಗಿದ್ದನು. ಚೋಬದ ರಾಜನಾದ ಹದದೆಜೆರನು ಅವನ ಒಡೆಯ. 24 ದಾವೀದನು ಚೋಬದ ಸೈನ್ಯವನ್ನು ಸೋಲಿಸಿದ ಬಳಿಕ, ರೆಜೋನನು ಕೆಲವು ಜನರನ್ನು ಒಟ್ಟುಗೂಡಿಸಿಕೊಂಡು, ಆ ಕಿರುಸೇನೆಗೆ ತಾನೇ ನಾಯಕನಾದನು. ರೆಜೋನನು ದಮಸ್ಕಕ್ಕೆ ಹೋಗಿ ಅಲ್ಲಿಯೇ ನೆಲೆಸಿದನು. ರೆಜೋನನು ದಮಸ್ಕದ ರಾಜನಾದನು. 25 ರೆಜೋನನು ಅರಾಮನ್ನು ಆಳಿದನು. ರೆಜೋನನು ಇಸ್ರೇಲಿನ ದ್ವೇಷಿಯಾದ್ದರಿಂದ, ಸೊಲೊಮೋನನ ಜೀವಮಾನದಲ್ಲೆಲ್ಲಾ ಅವನು ಇಸ್ರೇಲಿನ ಶತ್ರುವಾಗಿಯೇ ಮುಂದುವರಿದನು. ರೆಜೋನ್ ಮತ್ತು ಹದದನು ಇಸ್ರೇಲಿಗೆ ಹೆಚ್ಚು ತೊಂದರೆಯನ್ನು ಉಂಟುಮಾಡಿದರು.

26 ಸೊಲೊಮೋನನ ಸೇವಕರಲ್ಲಿ ನೆಬಾಟನ ಮಗನಾದ ಯಾರೊಬ್ಬಾಮನೂ ಒಬ್ಬನಾಗಿದ್ದನು. ಯಾರೊಬ್ಬಾಮನು ಎಫ್ರಾಯೀಮ್ ಕುಲದವನು, ಅವನು ಚರೇದ ಪಟ್ಟಣದವನು. ಯಾರೊಬ್ಬಾಮನ ತಾಯಿಯ ಹೆಸರು ಜೆರೂಗ, ಆಕೆ ವಿಧವೆಯಾಗಿದ್ದಳು. ಯಾರೊಬ್ಬಾಮನು ರಾಜನ ವಿರುದ್ಧ ತಿರುಗಿಬಿದ್ದನು.

27 ಯಾರೊಬ್ಬಾಮನು ರಾಜನ ವಿರುದ್ಧ ಏಕೆ ತಿರುಗಿ ಬಿದ್ದನೆಂಬ ಕಥೆಯು ಹೀಗಿದೆ: ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟುತ್ತಿದ್ದನು ಮತ್ತು ತನ್ನ ತಂದೆಯಾದ ದಾವೀದನ ನಗರದ ಗೋಡೆಯನ್ನು ಭದ್ರಪಡಿಸುತ್ತಿದ್ದನು. 28 ಯಾರೊಬ್ಬಾಮನು ಸಮರ್ಥನಾದ ಮನುಷ್ಯನಾಗಿದ್ದನು. ಈ ಯುವಕನು ಒಳ್ಳೆಯ ಕೆಲಸಗಾರನೆಂಬುದು ಸೊಲೊಮೋನನಿಗೆ ತಿಳಿಯಿತು. ಆದ್ದರಿಂದ ಸೊಲೊಮೋನನು ಯೋಸೇಫ್ ಕುಲದ ಕೆಲಸಗಾರರೆಲ್ಲರಿಗೂ ಮೇಲ್ವಿಚಾರಕನನ್ನಾಗಿ ಅವನನ್ನು ನೇಮಿಸಿದನು. 29 ಒಂದು ದಿನ ಯಾರೊಬ್ಬಾಮನು ಜೆರುಸಲೇಮಿನ ಹೊರಗೆ ಹೋಗುತ್ತಿದ್ದನು. ಶೀಲೋವಿನ ಪ್ರವಾದಿಯಾದ ಅಹೀಯನು ಅವನನ್ನು ರಸ್ತೆಯಲ್ಲಿ ಸಂಧಿಸಿದನು. ಅಹೀಯನು ಹೊಸ ಅಂಗಿಯನ್ನು ಧರಿಸಿದ್ದನು. ನಿರ್ಜನವಾಗಿದ್ದ ಆ ದೇಶದಲ್ಲಿ ಇವರಿಬ್ಬರೇ ಇದ್ದರು.

30 ಅಹೀಯನು ತನ್ನ ಹೊಸ ಅಂಗಿಯನ್ನು ತೆಗೆದು, ಅದನ್ನು ಹನ್ನೆರಡು ತುಂಡುಗಳನ್ನಾಗಿ ಹರಿದನು. 31 ಬಳಿಕ ಅಹೀಯನು ಯಾರೊಬ್ಬಾಮನಿಗೆ, “ಈ ಅಂಗಿಯ ಹತ್ತು ತುಂಡುಗಳನ್ನು ನಿನಗೋಸ್ಕರವಾಗಿ ತೆಗೆದುಕೋ. ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ಸೊಲೊಮೋನನ ರಾಜ್ಯವನ್ನು ನಾನು ಹರಿದು ತುಂಡುಗಳನ್ನಾಗಿ ಮಾಡುತ್ತೇನೆ. ನಾನು ಹತ್ತು ಕುಲಗಳನ್ನು ನಿನಗೆ ಒಪ್ಪಿಸುತ್ತೇನೆ. 32 ಒಂದು ಕುಲವನ್ನು ಮಾತ್ರ ದಾವೀದನ ವಂಶದ ಅಧೀನದಲ್ಲಿ ಬಿಡುತ್ತೇನೆ. ಅವರು ಈ ಕುಲವನ್ನು ಉಳಿಸಿಕೊಳ್ಳಲು ನಾನು ಅವಕಾಶ ಮಾಡಿಕೊಡುತ್ತೇನೆ. ನನ್ನ ಸೇವಕನಾದ ದಾವೀದನಿಗಾಗಿ ಮತ್ತು ಜೆರುಸಲೇಮಿಗಾಗಿ ನಾನು ಇದನ್ನು ಮಾಡುತ್ತೇನೆ. ಇಸ್ರೇಲಿನ ಎಲ್ಲಾ ಕುಲಗಳಿಂದಲೂ ನಾನು ಜೆರುಸಲೇಮ್ ನಗರವನ್ನು ಆರಿಸಿಕೊಂಡಿದ್ದೇನೆ. 33 ಸೊಲೊಮೋನನು ನನ್ನನ್ನು ಅನುಸರಿಸುವುದನ್ನು ನಿಲ್ಲಿಸಿದ ಕಾರಣ ನಾನು ಅವನ ರಾಜ್ಯವನ್ನು ಅವನಿಂದ ತೆಗೆದುಕೊಳ್ಳುವೆನು. ಅವನು ಚೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ ಮೋವಾಬ್ಯರ ದೇವರಾದ ಕೆಮೋಷನನ್ನೂ ಅಮ್ಮೋನಿಯರ ದೇವರಾದ ಮಿಲ್ಕೋಮನನ್ನೂ ಪೂಜಿಸಿದನು. ಸೊಲೊಮೋನನು ತಾನು ಮಾಡುತ್ತಿದ್ದ ಸರಿಯಾದ ಮತ್ತು ಉತ್ತಮವಾದ ಕಾರ್ಯಗಳನ್ನು ನಿಲ್ಲಿಸಿದನು. ಅವನು ನನ್ನ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸಲಿಲ್ಲ. ತನ್ನ ತಂದೆಯಾದ ದಾವೀದನು ಜೀವಿಸಿದಂತೆ ಅವನು ಜೀವಿಸುತ್ತಿಲ್ಲ. 34 ಆದ್ದರಿಂದ ನಾನು ಸೊಲೊಮೋನನ ಕುಟುಂಬದಿಂದ ರಾಜ್ಯವನ್ನು ತೆಗೆದುಕೊಳ್ಳುತ್ತೇನೆ. ಆದರೆ ಸೊಲೊಮೋನನು ತನ್ನ ಜೀವಮಾನವೆಲ್ಲಾ ಆಳುವಂತೆ ನಾನು ಅವನಿಗೆ ಅವಕಾಶ ಕೊಡುತ್ತೇನೆ. ನಾನು ನನ್ನ ಸೇವಕನಾದ ದಾವೀದನಿಗಾಗಿ ಇದನ್ನು ಮಾಡುತ್ತೇನೆ. ನಾನು ದಾವೀದನನ್ನು ಆರಿಸಿಕೊಂಡೆನು; ಏಕೆಂದರೆ ಅವನು ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಅನುಸರಿಸಿದನು. 35 ಆದರೆ ನಾನು ರಾಜ್ಯವನ್ನು ಅವನ ಮಗನಿಂದ ಕಿತ್ತುಕೊಂಡು ನಿನಗೆ ಹತ್ತು ಕುಲಗಳನ್ನು ಕೊಡುತ್ತೇನೆ. 36 ಸೊಲೊಮೋನನ ಮಗನಿಗೆ ಒಂದು ಕುಲವನ್ನು ಮಾತ್ರ ಕೊಡುತ್ತೇನೆ. ಜೆರುಸಲೇಮಿನ ನನ್ನ ಸನ್ನಿಧಿಯಲ್ಲಿ ಆಳಲು ನನ್ನ ಸೇವಕನಾದ ದಾವೀದನು ಯಾವಾಗಲೂ ತನ್ನ ಸಂತತಿಯವರಲ್ಲಿ ಒಬ್ಬನನ್ನು ಹೊಂದಿರಲೆಂದು ನಾನು ಇದನ್ನು ಮಾಡುತ್ತೇನೆ. ಜೆರುಸಲೇಮ್ ನಗರವನ್ನು ನಾನು ನನ್ನ ಸ್ವಂತದ್ದೆಂದು ಆರಿಸಿಕೊಂಡೆನು. 37 ನಾನು ನಿನ್ನನ್ನು ಇಡೀ ಇಸ್ರೇಲಿಗೆ ರಾಜನನ್ನಾಗಿ ಮಾಡುತ್ತೇನೆ. ನೀನು ನಿನ್ನ ಇಷ್ಟಾನುಸಾರವಾಗಿ ಪ್ರತಿಯೊಂದರ ಮೇಲೆ ದೊರೆತನ ಮಾಡುವಂತೆ ಮಾಡುತ್ತೇನೆ. 38 ನೀನು ಸರಿಯಾದ ಮಾರ್ಗದಲ್ಲಿ ಜೀವಿಸುತ್ತಾ, ನನ್ನ ಆಜ್ಞೆಗಳನ್ನು ಅನುಸರಿಸಿದರೆ, ನಾನು ಈ ಕಾರ್ಯಗಳೆನ್ನೆಲ್ಲ ನಿನಗೆ ಮಾಡುವೆನು. ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ನೀನು ದಾವೀದನಂತೆ ಅನುಸರಿಸಿದರೆ ನಾನು ನಿನ್ನೊಂದಿಗೆ ಇರುತ್ತೇನೆ. ನಾನು ನಿನ್ನ ಕುಟುಂಬವನ್ನು ದಾವೀದನ ಕುಟುಂಬದಂತೆ ರಾಜರುಗಳ ಕುಟುಂಬವನ್ನಾಗಿ ಮಾಡುತ್ತೇನೆ. ನಾನು ನಿನಗೆ ಇಸ್ರೇಲನ್ನು ಕೊಡುತ್ತೇನೆ. 39 ಸೊಲೊಮೋನನು ಮಾಡಿದ ಕಾರ್ಯಗಳ ನಿಮಿತ್ತ ನಾನು ದಾವೀದನ ಮಕ್ಕಳನ್ನು ದಂಡಿಸುತ್ತೇನೆ. ಆದರೆ ನನ್ನ ದಂಡನೆಯು ಅವರ ಮೇಲೆ ಶಾಶ್ವತವಾಗಿರುವುದಿಲ್ಲ” ಎಂದು ಹೇಳಿದನು.

ಸೊಲೊಮೋನನ ಮರಣ

40 ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲಲು ಪ್ರಯತ್ನಿಸಿದನು. ಆದರೆ ಯಾರೊಬ್ಬಾಮನು ಈಜಿಪ್ಟಿಗೆ ಓಡಿಹೋದನು. ಅವನು ಈಜಿಪ್ಟಿನ ರಾಜನಾದ ಶೀಶಕನ ಬಳಿಗೆ ಹೋದನು. ಸೊಲೊಮೋನನು ಸಾಯುವವರೆಗೆ ಯಾರೊಬ್ಬಾಮನು ಅಲ್ಲಿಯೇ ನೆಲೆಸಿದನು.

41 ಸೊಲೊಮೋನನು ತಾನು ಆಳುತ್ತಿದ್ದಾಗ ಅನೇಕ ಮಹಾಕಾರ್ಯಗಳನ್ನೂ ಜ್ಞಾನದ ಕಾರ್ಯಗಳನ್ನೂ ಮಾಡಿದನು. ಈ ಕಾರ್ಯಗಳನ್ನೆಲ್ಲ ಸೊಲೊಮೋನನ ಚರಿತ್ರೆ ಎಂಬ ಪುಸ್ತಕದಲ್ಲಿ ಬರೆಯಲಾಗಿದೆ. 42 ಸಮಸ್ತ ಇಸ್ರೇಲನ್ನು ಸೊಲೊಮೋನನು ಜೆರುಸಲೇಮಿನಲ್ಲಿ ನಲವತ್ತು ವರ್ಷಗಳ ಕಾಲ ಆಳಿದನು. 43 ಬಳಿಕ ಸೊಲೊಮೋನನು ಸತ್ತನು. ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಅವನನ್ನು ಅವನ ತಂದೆಯಾದ ದಾವೀದ ನಗರದಲ್ಲಿ ಸಮಾಧಿಮಾಡಿದರು. ಸೊಲೊಮೋನನ ಮಗನಾದ ರೆಹಬ್ಬಾಮನು ಸೊಲೊಮೋನನ ಬಳಿಕ ರಾಜನಾದನು.

ಫಿಲಿಪ್ಪಿಯವರಿಗೆ 2

ಐಕ್ಯಮತದಿಂದಿದ್ದು ಒಬ್ಬರನ್ನೊಬ್ಬರು ಪರಾಂಬರಿಸಿರಿ

ನಿಮ್ಮಲ್ಲಿ ಕ್ರಿಸ್ತನಿಂದಾದ ಉತ್ತೇಜನ, ಪ್ರೀತಿಯ ಪ್ರೇರಣೆ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯ ದಯಾರಸಗಳು ಇವೆಯೋ? ನಿಮ್ಮಲ್ಲಿ ಇವುಗಳು ಇರುವುದಾದರೆ, ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ. ಆಗ ನನ್ನ ಸಂತೋಷವು ಪರಿಪೂರ್ಣವಾಗುವುದು. ಒಬ್ಬರಿಗೊಬ್ಬರು ಒಂದೇ ಪ್ರೀತಿ ಉಳ್ಳವರಾಗಿರಿ. ಅನ್ಯೋನ್ಯಭಾವವುಳ್ಳವರಾಗಿದ್ದು ಒಂದೇ ಗುರಿಯಿಂದ ಜೀವಿಸಿರಿ. ನೀವು ಯಾವುದನ್ನೇ ಮಾಡುವಾಗ, ಸ್ವಾರ್ಥವಾಗಲಿ ಅಹಂಕಾರವಾಗಲಿ ನಿಮಗೆ ಮಾರ್ಗದರ್ಶಕವಾಗದಂತೆ ನೋಡಿಕೊಳ್ಳಿರಿ. ದೀನಭಾವವುಳ್ಳವರಾಗಿದ್ದು ನಿಮಗಿಂತಲೂ ಹೆಚ್ಚಾಗಿ ಬೇರೆಯವರಿಗೆ ಗೌರವವನ್ನು ಕೊಡಿರಿ. ನಿಮ್ಮ ಅಭಿಲಾಷೆಗಳ ಬಗ್ಗೆ ಮಾತ್ರ ಚಿಂತಿಸದೆ ಇತರರ ಜೀವಿತದ ಬಗ್ಗೆಯೂ ಚಿಂತಿಸಿರಿ.

ನಿಸ್ವಾರ್ಥರಾಗಿರುವುದನ್ನು ಕ್ರಿಸ್ತನಿಂದ ಕಲಿತುಕೊಳ್ಳಿರಿ

ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.

ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮನಾಗಿದ್ದರೂ
    ಆ ಪದವಿಯನ್ನು ಬಿಡಲಾರೆ ಎನ್ನಲಿಲ್ಲ.
ಆ ಪದವಿಯನ್ನು ಆತನು ಬಿಟ್ಟುಕೊಟ್ಟು
    ಸೇವಕನ ಸ್ವಭಾವವನ್ನು ಧರಿಸಿಕೊಂಡು ಮಾನವ ರೂಪದಲ್ಲಿ ಬಂದನು.
ಆತನು ಮನುಷ್ಯನಾಗಿ ಜೀವಿಸುತ್ತಿದ್ದಾಗ
    ತನ್ನನ್ನು ತಗ್ಗಿಸಿಕೊಂಡು ಮರಣವನ್ನೂ ಕಡೆಗಣಿಸಿ ದೇವರಿಗೆ ಸಂಪೂರ್ಣ ವಿಧೇಯನಾಗಿ,
    ಶಿಲುಬೆಯ ಮೇಲೆ ಪ್ರಾಣವನ್ನೇ ಕೊಟ್ಟನು.
ಆದ್ದರಿಂದ ದೇವರು ಆತನನ್ನು ಅತ್ಯುನ್ನತವಾದ ಸ್ಥಾನಕ್ಕೇರಿಸಿ
    ಉಳಿದೆಲ್ಲ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.
10 ಆದ್ದರಿಂದ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಪಾತಾಳದಲ್ಲಿಯೂ ಇರುವ ಪ್ರತಿಯೊಬ್ಬರು
    ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು,
11 “ಯೇಸು ಕ್ರಿಸ್ತನೇ ಪ್ರಭು”ವೆಂದು ಹೇಳುವರು.
    ಇದರಿಂದ ತಂದೆಯಾದ ದೇವರಿಗೆ ಮಹಿಮೆ ಉಂಟಾಗುವುದು.

ದೇವರ ಇಷ್ಟಕ್ಕನುಸಾರವಾದ ಜನರಾಗಿರಿ

12 ನನ್ನ ಪ್ರಿಯ ಸ್ನೇಹಿತರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ ನಾನು ದೂರವಿರುವಾಗಲೂ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿರಿ. ನೀವು ದೇವರಿಗೆ ಭಯಭಕ್ತಿಯಿಂದಿದ್ದು ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. 13 ಹೌದು, ಆತನಿಗೆ ಮೆಚ್ಚಿಕೆಕರವಾದ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೆಯನ್ನು ಆತನೇ ನಿಮ್ಮಲ್ಲಿ ಹುಟ್ಟಿಸುತ್ತಾನೆ ಅಲ್ಲದೆ ಅವುಗಳನ್ನು ಮಾಡಲು ಆತನೇ ನಿಮಗೆ ಶಕ್ತಿಯನ್ನು ಕೊಡುತ್ತಾನೆ.

14 ನೀವು ಮಾಡುವ ಪ್ರತಿಯೊಂದನ್ನು ಗುಣಗುಟ್ಟದೆಯೂ ವಿವಾದವಿಲ್ಲದೆಯೂ ಮಾಡಿರಿ. 15 ಆಗ ಮುಗ್ಧರೂ ಪರಿಶುದ್ಧರೂ ಆಗಿದ್ದು ಕಳಂಕರಹಿತವಾದ ದೇವಮಕ್ಕಳಾಗಿರುತ್ತೀರಿ. ದುಷ್ಟಜನರ ಮಧ್ಯದಲ್ಲಿ ವಾಸವಾಗಿರುವ ನೀವು ಕಾರ್ಗತ್ತಲೆಯಲ್ಲಿ ಪ್ರಕಾಶಿಸುವ ನಕ್ಷತ್ರಮಂಡಲದಂತಿದ್ದೀರಿ. 16 ಜೀವದಾಯಕವಾದ ವಾಕ್ಯವನ್ನು ನೀವು ಆ ಜನರಿಗೆ ಕೊಟ್ಟರೆ, ಕ್ರಿಸ್ತನು ಬಂದಾಗ ನಾನು ಹೆಮ್ಮೆಯಿಂದಿರಲು ಸಾಧ್ಯವಾಗುತ್ತದೆ, ಏಕೆಂದರೆ ನನ್ನ ಕೆಲಸವು ವ್ಯರ್ಥವಾಗಲಿಲ್ಲ. ನಾನು ಪಂದ್ಯದಲ್ಲಿ ಓಡಿ ಗೆದ್ದೆನು.

17 ನೀವು ನಿಮ್ಮ ಜೀವಿತಗಳನ್ನು ದೇವರ ಸೇವೆಗಾಗಿ ಯಜ್ಞದೋಪಾದಿಯಲ್ಲಿ ಅರ್ಪಿಸಿಕೊಳ್ಳಲು ನಿಮ್ಮ ನಂಬಿಕೆಯು ನಿಮ್ಮನ್ನು ಪ್ರೇರೇಪಿಸುತ್ತದೆ. ಒಂದುವೇಳೆ, ನಿಮ್ಮ ಯಜ್ಞದೊಡನೆ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ಸಂತೋಷಿಸುತ್ತೇನೆ, ನಿಮ್ಮೆಲ್ಲರೊಂದಿಗೆ ಸಂತೋಷಿಸುತ್ತೇನೆ. 18 ಹಾಗೆಯೇ ನೀವು ಸಹ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಿಸಿರಿ.

ತಿಮೊಥೆ ಮತ್ತು ಎಪಫ್ರೊದೀತರ ಸುದ್ದಿ

19 ನಿಮ್ಮ ಬಳಿಗೆ ತಿಮೊಥೆಯನನ್ನು ಆದಷ್ಟು ಬೇಗನೆ ಕಳುಹಿಸಿಕೊಡಲು ಪ್ರಭುವಾದ ಯೇಸುವಿನಲ್ಲಿ ನಿರೀಕ್ಷಿಸುತ್ತಿದ್ದೇನೆ. ಅವನ ಮೂಲಕ ನಿಮ್ಮ ಯೋಗಕ್ಷೇವುವನ್ನು ತಿಳಿದುಕೊಳ್ಳುವುದರಿಂದ ನನಗೆ ಪ್ರೋತ್ಸಾಹವಾಗಬಹುದು. 20 ಅವನಂತೆ ನಿಮ್ಮ ವಿಷಯದಲ್ಲಿ ನಿಜವಾಗಿಯೂ ಚಿಂತಿಸುವವರು ನನ್ನ ಬಳಿ ಯಾರೂ ಇಲ್ಲ. 21 ಉಳಿದವರು ಕೇವಲ ತಮ್ಮ ಬಗ್ಗೆ ಚಿಂತಿಸುತ್ತಾರೆಯೇ ಹೊರತು ಕ್ರಿಸ್ತ ಯೇಸುವಿನ ಸೇವೆಯ ಬಗ್ಗೆ ಚಿಂತಿಸುವುದಿಲ್ಲ. 22 ತಿಮೊಥೆಯನು ಎಂಥವನೆಂಬುದು ನಿಮಗೆ ಗೊತ್ತಿದೆ. ಮಗನು ತನ್ನ ತಂದೆಯೊಡನೆ ಸೇವೆ ಮಾಡುವಂತೆ ಅವನು ಸುವಾರ್ತೆಯನ್ನು ತಿಳಿಸುವುದರಲ್ಲಿ ನನ್ನೊಂದಿಗೆ ಸೇವೆ ಮಾಡಿದನು. 23 ನನ್ನ ಬಗ್ಗೆ ನಡೆಯುತ್ತಿರುವ ವಿಚಾರಣೆಯ ಫಲಿತಾಂಶವು ತಿಳಿದಕೂಡಲೇ ಅವನನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ. 24 ಅಲ್ಲದೆ ಪ್ರಭುವಿನ ಸಹಾಯದಿಂದ ನಿಮ್ಮ ಬಳಿಗೆ ಅದಷ್ಟು ಬೇಗನೆ ಬರುತ್ತೇನೆ ಎಂಬ ಭರವಸೆ ನನಗಿದೆ.

25 ಎಪಫ್ರೊದೀತನು ಕ್ರಿಸ್ತನಲ್ಲಿ ನನ್ನ ಸಹೋದರನಾಗಿದ್ದಾನೆ. ಕ್ರಿಸ್ತನ ಸೈನ್ಯದಲ್ಲಿ ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ ಮತ್ತು ಸೇವೆ ಮಾಡುತ್ತಿದ್ದಾನೆ. ನನಗೆ ಸಹಾಯಬೇಕಿದ್ದಾಗ, ನೀವು ಅವನನ್ನು ನನ್ನ ಬಳಿಗೆ ಕಳುಹಿಸಿಕೊಟ್ಟಿರಿ. ಈಗ ನಾನು ಅವನನ್ನು ನಿಮ್ಮ ಬಳಿಗೆ ಮತ್ತೆ ಕಳುಹಿಸಬೇಕೆಂದಿದ್ದೇನೆ. 26 ಏಕೆಂದರೆ ಅವನು ನಿಮ್ಮೆಲ್ಲರನ್ನು ನೋಡಲು ಬಹು ತವಕಪಡುತ್ತಿದ್ದಾನೆ. ತಾನು ಅಸ್ವಸ್ಥನಾಗಿದ್ದದ್ದು ನಿಮಗೆ ತಿಳಿದದ್ದರಿಂದ ಅವನಿಗೆ ಚಿಂತೆಯಾಗಿದೆ. 27 ಅವನು ಅನಾರೋಗ್ಯದಿಂದ ಸಾಯುವ ಸ್ಥಿತಿಯಲ್ಲಿದ್ದನು. ಆದರೆ ದೇವರು ಅವನನ್ನು ಕರುಣಿಸಿದನು; ಅವನನ್ನು ಮಾತ್ರವಲ್ಲದೆ ನನ್ನನ್ನು ಸಹ ಕರುಣಿಸಿದನು. 28 ಆದ್ದರಿಂದ ಅವನನ್ನು ನಿಮ್ಮ ಬಳಿಗೆ ಕಳುಹಿಸಿಕೊಡಲು ನಾನು ಬಹಳ ತವಕಪಡುತ್ತಿದ್ದೇನೆ. ನೀವು ಅವನನ್ನು ನೋಡಿದಾಗ ಸಂತೋಷಪಡುತ್ತೀರಿ ಮತ್ತು ನಿಮ್ಮ ವಿಷಯದಲ್ಲಿ ನನಗಿರುವ ಚಿಂತೆಯು ಕೊನೆಗೊಳ್ಳುತ್ತದೆ. 29 ಮಹಾ ಆನಂದದಿಂದ ಪ್ರಭುವಿನಲ್ಲಿ ಅವನನ್ನು ಸ್ವಾಗತಿಸಿರಿ. ಎಪಫ್ರೊದೀತನಂಥ ಜನರನ್ನು ಗೌರವಿಸಿರಿ. 30 ಅವನು ಕ್ರಿಸ್ತನ ಕೆಲಸಕ್ಕಾಗಿ ಬಹುಮಟ್ಟಿಗೆ ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ಅವನಿಗೆ ಮಾನ್ಯತೆ ದೊರೆಯಬೇಕು. ನನಗೆ ಸಹಾಯಮಾಡಲು ಅವನು ತನ್ನ ಪ್ರಾಣವನ್ನೇ ಅಪಾಯಕ್ಕೆ ಈಡುಮಾಡಿಕೊಂಡನು. ಈ ರೀತಿಯ ಸಹಾಯ ಮಾಡಲು ನಿಮಗೆ ಸಾಧ್ಯವಾಗಲಿಲ್ಲ.

ಯೆಹೆಜ್ಕೇಲ 41

ಆಲಯದ ಪವಿತ್ರಸ್ಥಳ

41 ಆಮೇಲೆ ಅವನು ನನ್ನನ್ನು ಪವಿತ್ರಸ್ಥಳಕ್ಕೆ ಕರೆದುಕೊಂಡು ಹೋದನು. ಅದರ ಇಕ್ಕೆಡೆಗಳಲ್ಲಿರುವ ಗೋಡೆಯನ್ನು ಅವನು ಅಳತೆ ಮಾಡಿದನು. ಆ ಗೋಡೆಗಳು ಆರು ಮೊಳ ದಪ್ಪವಾಗಿದ್ದವು. ಅದರ ಬಾಗಿಲು ಹತ್ತು ಮೊಳ ಅಗಲವಾಗಿದ್ದು ಅದರ ಎರಡು ಬದಿಯೂ ಐದೈದು ಮೊಳವಿದ್ದವು. ಅವನು ಆ ಕೋಣೆಯ ಅಳತೆ ತೆಗೆದನು. ಅದು ನಲವತ್ತು ಮೊಳ ಉದ್ದ, ಇಪ್ಪತ್ತು ಮೊಳ ಅಗಲವಿತ್ತು.

ಆಲಯದ ಮಹಾ ಪವಿತ್ರಸ್ಥಳ

ಆಮೇಲೆ ಅವನು ಕೊನೆಯ ಕೋಣೆಗೆ ಪ್ರವೇಶಿಸಿದನು. ಅದರ ಬಾಗಿಲಿನ ಇಕ್ಕೆಡೆಗಳಲ್ಲಿರುವ ಗೋಡೆಗಳನ್ನು ಅವನು ಅಳತೆ ಮಾಡಿದನು. ಆ ಗೋಡೆಗಳು ಎರಡು ಮೊಳ ದಪ್ಪವಾಗಿದ್ದು ಏಳು ಮೊಳ ಅಗಲವಾಗಿದ್ದವು. ದ್ವಾರವು ಆರು ಮೊಳ ಅಗಲವಾಗಿತ್ತು. ಆಮೇಲೆ ಆ ಪುರುಷನು ಕೋಣೆಯ ಉದ್ದವನ್ನು ಅಳತೆ ಮಾಡಿದನು. ಅದು ಇಪ್ಪತ್ತು ಮೊಳ ಉದ್ದ, ಇಪ್ಪತ್ತು ಮೊಳ ಅಗಲವಾಗಿತ್ತು. “ಇದು ಮಹಾ ಪವಿತ್ರಸ್ಥಳ” ಎಂದು ಅವನು ನನಗೆ ತಿಳಿಸಿದನು.

ಆಲಯದ ಸುತ್ತಲಿದ್ದ ಇತರ ಕೋಣೆಗಳು

ಆಮೇಲೆ ಆ ಮನುಷ್ಯನು ಆಲಯದ ಗೋಡೆಯನ್ನು ಅಳತೆ ಮಾಡಿದನು. ಅದು ಆರು ಮೊಳ ದಪ್ಪವಾಗಿತ್ತು. ಆಲಯದ ಸುತ್ತಲೂ ಕೋಣೆಗಳಿದ್ದವು. ಅವು ನಾಲ್ಕು ಮೊಳ ಅಗಲವಾಗಿದ್ದವು. ಆ ಕೋಣೆಗಳು ಒಂದರ ಮೇಲೊಂದು ಮೂರು ಅಂತಸ್ತಿನಲ್ಲಿದ್ದವು. ಪ್ರತಿ ಅಂತಸ್ತಿನಲ್ಲಿ ಮೂವತ್ತು ಕೊಠಡಿಗಳಿದ್ದವು. ಆಲಯದ ಗೋಡೆಯು ಮೆಟ್ಟಿಲು ಮೆಟ್ಟಿಲುಗಳಾಗಿ ಕಟ್ಟಲ್ಪಟ್ಟಿತ್ತು. ಪಕ್ಕದ ಕೋಣೆಗಳು ಈ ಮೆಟ್ಟಿಲುಗಳ ಮೇಲೆ ಆಧಾರಗೊಂಡಿದ್ದವು. ಅವು ಆಲಯದ ಗೋಡೆಯನ್ನು ಆಧಾರ ಮಾಡಿಕೊಂಡಿರಲಿಲ್ಲ. ಪ್ರತಿ ಅಂತಸ್ತು ಅದರ ಕೆಳಗಿನ ಅಂತಸ್ತಿಗಿಂತ ಅಗಲವಾಗಿದ್ದವು. ಆಲಯದ ಸುತ್ತ ಇದ್ದ ಕೋಣೆಗಳ ಗೋಡೆಗಳು ಮೇಲಕ್ಕೆ ಹೋದಂತೆ ಕಿರಿದಾಗಿದ್ದವು. ಹೀಗೆ ಕೊನೆ ಅಂತಸ್ತಿನ ಕೋಣೆಗಳು ಕೆಳಗಣ ಕೋಣೆಗಳಿಗಿಂತ ಹೆಚ್ಚು ಅಗಲವಾಗಿದ್ದವು. ಮಧ್ಯ ಅಂತಸ್ತಿನ ಮೂಲಕ ಒಂದು ನಿಚ್ಚಣಿಕೆಯು ಕೆಳಗಿನ ಅಂತಸ್ತಿನಿಂದ ಕೊನೆಯ ಅಂತಸ್ತಿನವರೆಗೆ ಹೋಗಿತ್ತು.

ಆಲಯದ ಸುತ್ತಲೂ ಒಂದು ಜಗಲಿ ಇರುವದನ್ನು ನಾನು ಕಂಡೆನು. ಇದು ಪಕ್ಕದ ಕೋಣೆಗಳಿಗೆ ಅಸ್ತಿವಾರವಾಗಿತ್ತು. ಇದು ಒಂದು ಅಳತೆ ಕೋಲಿನಷ್ಟು ಎತ್ತರವಾಗಿತ್ತು. ಆ ಕೋಣೆಗಳ ಹೊರಗಿನ ಗೋಡೆಯು ಐದು ಮೊಳ ದಪ್ಪವಾಗಿತ್ತು. ಆಲಯದ ಉದ್ದಕ್ಕೂ ಇದ್ದ ಆ ಕೋಣೆಗಳಿಗೂ 10 ಯಾಜಕರ ಕೋಣೆಗಳಿಗೂ ನಡುವೆ ಆಲಯದ ಸುತ್ತಲೂ ಇಪ್ಪತ್ತು ಮೊಳ ಅಂತರವಿತ್ತು. 11 ಆ ಕೋಣೆಗಳ ಬಾಗಿಲುಗಳು ಜಗಲಿಯ ಕಡೆಗೆ ಮುಖಮಾಡಿದ್ದವು. ಅವಕ್ಕೆ ಒಂದು ಬಾಗಿಲು ಉತ್ತರದ ಕಡೆಯಿಂದಲೂ ಇನ್ನೊಂದು ಬಾಗಿಲು ದಕ್ಷಿಣದ ಕಡೆಯಿಂದಲೂ ಇದ್ದವು. ಆ ಎತ್ತರದ ಜಗಲಿಯು ಸುತ್ತಲೂ ಐದು ಮೊಳ ಅಗಲವಿತ್ತು.

12 ಆಲಯದ ಪಶ್ಚಿಮ ಭಾಗದ ಕಿರಿದಾದ ಸ್ಥಳದಲ್ಲಿ ಒಂದು ಕಟ್ಟಡವಿತ್ತು. ಇದು ಎಪ್ಪತ್ತು ಮೊಳ ಅಗಲವಾಗಿದ್ದು ತೊಂಭತ್ತು ಮೊಳ ಉದ್ದವಾಗಿತ್ತು. ಅದರ ಸುತ್ತಲಿನ ಗೋಡೆಯು ಐದು ಮೊಳ ದಪ್ಪವಾಗಿತ್ತು. 13 ನಂತರ ಅವನು ಆಲಯದ ಅಳತೆ ತೆಗೆದನು. ಆಲಯವು ನೂರು ಮೊಳ ಉದ್ದವಾಗಿತ್ತು. ನಿಯಮಿತದ ಸ್ಥಳ, ಅದರ ಕಟ್ಟಡ ಮತ್ತು ಗೋಡೆಯ ಸಹಿತ ನೂರು ಮೊಳ ಉದ್ದವಾಗಿತ್ತು. 14 ಪೂರ್ವದಿಕ್ಕಿನಲ್ಲಿದ್ದ ನಿಯಮಿತದ ಸ್ಥಳವೂ ನೂರು ಮೊಳ ಉದ್ದವಿತ್ತು.

15 ಆಲಯದ ಹಿಂಭಾಗದಲ್ಲಿದ್ದ ನಿಯಮಿತದ ಸ್ಥಳದಲ್ಲಿ ಕಟ್ಟಿದ್ದ ಕಟ್ಟಡದ ಉದ್ದವನ್ನು ಅವನು ಲೆಕ್ಕ ಮಾಡಿದನು. ಅದು ಗೋಡೆಯಿಂದ ಗೋಡೆಗೆ ನೂರು ಮೊಳವಿತ್ತು.

ಪವಿತ್ರಸ್ಥಳ, ಮಹಾ ಪವಿತ್ರಸ್ಥಳ ಮತ್ತು ಒಳಗಿನ ಪ್ರಾಕಾರಕ್ಕೆ ಮುಖಮಾಡಿದ್ದ ಕೈಸಾಲೆಯ 16 ಗೋಡೆಗಳಿಗೆ ಮರದ ಹಲಗೆಗಳು ಹೊದಿಸಲ್ಪಟ್ಟಿದ್ದವು. ಎಲ್ಲಾ ಕಿಟಕಿ ಬಾಗಿಲುಗಳಿಗೆ ಮರದ ಹೊದಿಕೆಯಿತ್ತು. ದ್ವಾರದ ಪಕ್ಕದಲ್ಲಿ ಆಲಯದ ಗೋಡೆಗೆ ನೆಲದಿಂದ ಹಿಡಿದು ಕಿಟಕಿಯ ತನಕ ಮರದ ಹಲಗೆಯ ಹೊದಿಕೆ ಇತ್ತು.

17 ಬಾಗಿಲಿನ ಮೇಲೆಯೂ ಒಳಗಿನ ಮತ್ತು ಹೊರಗಿನ ಕೋಣೆಗಳ ಗೋಡೆಗಳಲ್ಲಿ 18 ಕೆರೂಬಿದೂತರ ಮತ್ತು ಖರ್ಜೂರ ವೃಕ್ಷಗಳ ಚಿತ್ರ ಬಿಡಿಸಲ್ಪಟ್ಟಿತ್ತು. ಎರಡು ಕೆರೂಬಿದೂತರ ನಡುವೆ ಒಂದು ಖರ್ಜೂರ ವೃಕ್ಷವಿತ್ತು. ಪ್ರತಿ ಕೆರೂಬಿದೂತರಿಗೆ ಎರಡು ಮುಖಗಳಿದ್ದವು. 19 ಒಂದು ಮುಖ ಮನುಷ್ಯನ ಮುಖದಂತಿದ್ದು ಖರ್ಜೂರ ವೃಕ್ಷವನ್ನು ದಿಟ್ಟಿಸುತ್ತಿತ್ತು. ಇನ್ನೊಂದು ಮುಖವು ಸಿಂಹದ ಮುಖದಂತಿದ್ದು ಆಚೆ ಪಕ್ಕದ ಖರ್ಜೂರ ವೃಕ್ಷವನ್ನು ನೋಡುವಂತಿತ್ತು. ಆಲಯದ ಸುತ್ತಲೂ ಈ ರೀತಿಯ ಕೆತ್ತನೆ ಕೆಲಸವಿತ್ತು. 20 ಪವಿತ್ರಸ್ಥಳದ ಗೋಡೆಗಳಲ್ಲಿ ನೆಲದಿಂದ ಬಾಗಿಲವರೆಗೆ ಕೆರೂಬಿದೂತರ ಮತ್ತು ಖರ್ಜೂರ ವೃಕ್ಷದ ಕೆತ್ತನೆ ಕೆಲಸವನ್ನು ಮಾಡಿದ್ದರು.

21 ಪವಿತ್ರಸ್ಥಳದ ಇಕ್ಕೆಡೆಗಳಲ್ಲಿದ್ದ ಗೋಡೆಗಳು ಚೌಕವಾಗಿದ್ದವು. ಮಹಾ ಪವಿತ್ರಸ್ಥಳದೆದುರು ಮರದಿಂದ ತಯಾರಿಸಿದ ವೇದಿಕೆಯಂತೆ ಕಾಣುತ್ತಿದ್ದ 22 ಒಂದು ವಸ್ತು ಇತ್ತು. ಅದು ಮೂರು ಮೊಳ ಎತ್ತರ, ಎರಡು ಮೊಳ ಉದ್ದವಿತ್ತು. ಅದರ ಮೂಲೆಗಳು, ಅದರ ಚೌಕಟ್ಟು ಮತ್ತು ಬದಿಗಳೆಲ್ಲಾ ಮರದಿಂದ ಮಾಡಿದ್ದವುಗಳಾಗಿದ್ದವು. “ಈ ಮೇಜು ಯೆಹೋವನ ಸನ್ನಿಧಾನದಲ್ಲಿದೆ” ಎಂದು ಆ ಮನುಷ್ಯನು ನನಗೆ ಹೇಳಿದನು.

23 ಪವಿತ್ರಸ್ಥಳ ಮತ್ತು ಮಹಾ ಪವಿತ್ರಸ್ಥಳಗಳಿಗೆ ಎರಡೆರಡು ಬಾಗಿಲುಗಳಿದ್ದವು. 24 ಒಂದೊಂದು ಬಾಗಿಲಿಗೆ ಎರಡೆರಡು ಚಿಕ್ಕ ಬಾಗಿಲುಗಳು ಅಂದರೆ ಎರಡೆರಡು ಮಡಚುವ ಬಾಗಿಲುಗಳಿದ್ದವು. 25 ಅವುಗಳ ಮೇಲೆ ಕೆರೂಬಿದೂತರ ಮತ್ತು ಖರ್ಜೂರ ವೃಕ್ಷದ ಚಿತ್ರಗಳನ್ನು ಕೆತ್ತಲಾಗಿತ್ತು. ಗೋಡೆಗಳಲ್ಲಿ ಹೇಗೆ ಕೆತ್ತಲ್ಪಟ್ಟಿತ್ತೋ ಅದೇ ರೀತಿಯಲ್ಲಿ, ಕೈಸಾಲೆಯ ಮುಂದೆ ಒಂದು ಮರದಿಂದ ಮಾಡಿದ ಸೂರು ಇತ್ತು. 26 ಇದಕ್ಕೆ ತೆರೆಯಲಾಗದ ಕಿಟಕಿಗಳಿದ್ದವು. ಇದರ ಗೋಡೆಗಳಲ್ಲಿಯೂ ಗೋಡೆಯ ಮೇಲಿದ್ದ ಸೂರು ಮತ್ತು ಆಲಯದ ಸುತ್ತಲಿದ್ದ ಕೋಣೆಯ ಗೋಡೆಗಳಲ್ಲಿಯೂ ಖರ್ಜೂರ ವೃಕ್ಷದ ಕೆತ್ತನೆ ಕೆಲಸವಿತ್ತು.

ಕೀರ್ತನೆಗಳು 92-93

ಸಬ್ಬತ್ ದಿನದ ಸ್ತುತಿಗೀತೆ.

92 ಯೆಹೋವನೇ, ನಿನ್ನನ್ನು ಸ್ತುತಿಸುವುದೂ
    ಮಹೋನ್ನತನಾದ ದೇವರೇ, ನಿನ್ನ ಹೆಸರನ್ನು ಕೊಂಡಾಡುವುದೂ ಯುಕ್ತವಾಗಿದೆ.
2-3 ಹತ್ತು ತಂತಿವಾದ್ಯಗಳನ್ನೂ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ನುಡಿಸುತ್ತಾ
    ನಿನ್ನ ಪ್ರೀತಿಯ ಕುರಿತು ಮುಂಜಾನೆಯಲ್ಲಿಯೂ
    ನಿನ್ನ ನಂಬಿಗಸ್ತಿಕೆಯ ಕುರಿತು ರಾತ್ರಿಯಲ್ಲಿಯೂ ಹಾಡುವುದು ಯುಕ್ತವಾಗಿದೆ.
ಯೆಹೋವನೇ, ನಿನ್ನ ಕಾರ್ಯಗಳಿಂದ ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಿರುವೆ.
    ಅವುಗಳ ಕುರಿತು ನಾವು ಹರ್ಷದಿಂದ ಹಾಡುವೆವು.
ಯೆಹೋವನೇ, ನೀನು ಅಂತಹ ಮಹಾಕಾರ್ಯಗಳನ್ನು ಮಾಡಿರುವೆ.
    ನಿನ್ನ ಆಲೋಚನೆಗಳನ್ನು ಗ್ರಹಿಸಿಕೊಳ್ಳಲು ನಮ್ಮಿಂದಾಗದು.
ನಿನಗೆ ಹೋಲಿಸಿದರೆ, ಜನರು ದಡ್ಡ ಪ್ರಾಣಿಗಳಂತಿದ್ದಾರೆ.
    ನಾವು ಯಾವುದನ್ನೂ ಅರ್ಥಮಾಡಿಕೊಳ್ಳಲಾಗದ ಮೂಢರಂತಿದ್ದೇವೆ.
ದುಷ್ಟರು ಹುಲ್ಲಿನಂತೆಯೂ
    ಕೆಡುಕರು ಹೂವಿನಂತೆಯೂ ಬದುಕಿ ಸಾಯುವರು.
    ಅವರ ನಿರರ್ಥಕ ಕಾರ್ಯಗಳು ನಿತ್ಯ ನಾಶವಾಗುತ್ತವೆ.
ಯೆಹೋವನೇ, ನೀನಾದರೋ ಸದಾಕಾಲ ಸನ್ಮಾನ ಹೊಂದುವೆ.
ಯೆಹೋವನೇ, ನಿನ್ನ ಶತ್ರುಗಳೆಲ್ಲ ನಾಶವಾಗುವರು;
    ಕೆಟ್ಟಕಾರ್ಯಗಳನ್ನು ಮಾಡುವ ಅವರೆಲ್ಲರೂ ನಾಶವಾಗುವರು.
10 ನನ್ನನ್ನಾದರೋ ನೀನು ಕಾಡುಕೋಣ ಬಲಿಷ್ಠನನ್ನಾಗಿ ಮಾಡಿರುವೆ.
    ನಿನ್ನ ಚೈತನ್ಯ ತೈಲವನ್ನು ನನ್ನ ಮೇಲೆ ಸುರಿದಾತನು ನೀನೇ.
11 ವೈರಿಗಳು ನನ್ನ ಸುತ್ತಲೂ ಸೇರಿಬಂದಿದ್ದಾರೆ.
    ಅವರು ಆಕ್ರಮಣಕ್ಕೆ ಸಿದ್ಧವಾಗಿರುವ ಬಲಿಷ್ಠವಾದ ಹೋರಿಗಳಂತಿದ್ದಾರೆ.
    ಅವರು ನನ್ನ ಬಗ್ಗೆ ಹೇಳುತ್ತಿರುವುದೂ ನನಗೆ ಕೇಳುತ್ತಿದೆ.

12-13 ನೀತಿವಂತರಾದರೋ ಯೆಹೋವನ ಆಲಯದಲ್ಲಿ
    ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು.
ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ
    ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.
14 ಅವರು ಮುಪ್ಪಿನಲ್ಲಿಯೂ ಪುಷ್ಟಿಯಾಗಿ ಬೆಳೆದಿರುವ
    ಎಲೆಮರಗಳಂತೆ ಫಲಿಸುವರು.
15 ಯೆಹೋವನು ಒಳ್ಳೆಯವನೆಂಬುವುದಕ್ಕೆ
    ಅವರು ದೃಷ್ಟಾಂತವಾಗಿರುವರು.
ಆತನೇ ನನ್ನ ಬಂಡೆ.
    ಆತನು ಎಂದಿಗೂ ತಪ್ಪು ಮಾಡನು.

93 ಯೆಹೋವನೇ ರಾಜನು.
    ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
    ಅದು ಕದಲುವುದೇ ಇಲ್ಲ.
ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
    ಆದಿಯಿಂದಲೂ ಇರುವಾತನು ನೀನೊಬ್ಬನೇ!
ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
    ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
    ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
    ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International