Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
1 ರಾಜರುಗಳು 7

ಸೊಲೊಮೋನನ ಅರಮನೆ

ಸೊಲೊಮೋನನು ತನಗಾಗಿ ಒಂದು ಅರಮನೆಯನ್ನು ನಿರ್ಮಿಸಿದನು. ಸೊಲೊಮೋನನ ಅರಮನೆಯನ್ನು ನಿರ್ಮಿಸಲು ಹದಿಮೂರು ವರ್ಷ ಹಿಡಿಯಿತು. ಅವನು “ಲೆಬನೋನಿನ ಅರಣ್ಯದ ಮನೆ” ಎಂಬ ಕಟ್ಟಡವನ್ನೂ ಕಟ್ಟಿಸಿದನು. ಅದರ ಉದ್ದ ನೂರೈವತ್ತು ಅಡಿಗಳು; ಅಗಲ ಎಪ್ಪತ್ತೈದು ಅಡಿಗಳು; ಎತ್ತರ ನಲವತ್ತೈದು ಅಡಿಗಳು. ಅದರಲ್ಲಿ ನಾಲ್ಕು ಸಾಲಿನ ದೇವದಾರು ಮರದ ಕಂಬಗಳಿದ್ದವು ಆ ಕಂಬಗಳ ಮೇಲೆ ದೇವದಾರು ಮರದ ಬೋದಿಗೆಗಳಿದ್ದವು. ಈ ಸಾಲು ಕಂಬಗಳ ಮೇಲೆ ದೇವದಾರು ಮರದ ತೊಲೆಗಳನ್ನು ಜೋಡಿಸಿದ್ದರು. ಈ ತೊಲೆಗಳ ಮೇಲ್ಭಾಗದ ಮಾಳಿಗೆಗೆ ದೇವದಾರು ಮರದ ಹಲಗೆಗಳನ್ನು ಹಾಸಿದ್ದರು. ಈ ಕಂಬಗಳ ಪ್ರತಿಯೊಂದು ಸಾಲಿನಲ್ಲೂ ಹದಿನೈದು ತೊಲೆಗಳಿದ್ದವು. ಅಲ್ಲಿ ಒಟ್ಟು ನಲವತ್ತೈದು ತೊಲೆಗಳಿದ್ದವು. ಗೋಡೆಯ ಪ್ರತಿಯೊಂದು ಕಡೆಯಲ್ಲಿ ಮೂರು ಸಾಲು ಕಿಟಕಿಗಳಿದ್ದವು. ಈ ಕಿಟಕಿಗಳು ಎದುರು ಬದುರಾಗಿದ್ದವು.

ಗೋಡೆಯ ಪ್ರತಿಯೊಂದು ಕೊನೆಯಲ್ಲೂ ಮೂರು ಬಾಗಿಲುಗಳಿದ್ದವು. ಎಲ್ಲ ಬಾಗಿಲುಗಳ ಚೌಕಟ್ಟುಗಳೂ ಚತುಷ್ಕೋಣಾಕಾರವಾಗಿದ್ದವು.

ಸೊಲೊಮೋನನು, “ಕಂಬಮಂಟಪ”ವನ್ನು ಸಹ ಕಟ್ಟಿಸಿದನು. ಅದರ ಉದ್ದ ಎಪ್ಪತ್ತೈದು ಅಡಿ ಮತ್ತು ಅಗಲ ನಲವತ್ತೈದು ಅಡಿ. ಅದರ ಮುಂಭಾಗದಲ್ಲೂ ಕಂಬಗಳಿಂದ ಕೂಡಿದ ಪಡಸಾಲೆಯಿತ್ತು.

ಸೊಲೊಮೋನನು ಜನರಿಗೆ ತೀರ್ಪುನೀಡಲು ಸಿಂಹಾಸನ ಮಂದಿರವನ್ನು ಕಟ್ಟಿಸಿದನು. ಅವನು ಇದನ್ನು, “ನ್ಯಾಯಮಂದಿರ” ಎಂದೂ ಕರೆದನು. ಈ ಕೋಣೆಗೆ ನೆಲದಿಂದ ಮಾಳಿಗೆಯವರೆಗೆ ದೇವದಾರು ಮರದ ಹಲಗೆಗಳನ್ನು ಹೊದಿಸಲಾಗಿತ್ತು.

ಸೊಲೊಮೋನನು ವಾಸಿಸುತ್ತಿದ್ದ ಮನೆಯು “ನ್ಯಾಯಮಂದಿರ”ದ ಒಳಗಿನ ಪ್ರಾಕಾರದಲ್ಲಿತ್ತು. ಈ ಮನೆಯನ್ನು “ನ್ಯಾಯಮಂದಿರ”ದಂತೆಯೇ ಕಟ್ಟಿಸಿದನು. ಇದಲ್ಲದೆ ಅವನು ಈಜಿಪ್ಟಿನ ಫರೋಹನ ಮಗಳಾದ ತನ್ನ ಹೆಂಡತಿಗೂ ಇದೇ ರೀತಿಯ ಮನೆಯನ್ನು ಕಟ್ಟಿಸಿದನು.

ಈ ಎಲ್ಲಾ ಕಟ್ಟಡಗಳನ್ನು ಶ್ರೇಷ್ಠವಾದ ಕಲ್ಲುಗಳಿಂದ ಕಟ್ಟಿಸಿದನು. ಈ ಕಲ್ಲುಗಳನ್ನು ಸರಿಯಾದ ಅಳತೆಗೆ ಗರಗಸದಿಂದ ಕತ್ತರಿಸಿದನು. ಅವುಗಳನ್ನು ಮುಂದುಗಡೆ ಮತ್ತು ಹಿಂದುಗಡೆ ಸಮನಾಗಿ ಕತ್ತರಿಸಿದ್ದನು. ಶ್ರೇಷ್ಠವಾದ ಈ ಕಲ್ಲುಗಳು ಅಡಿಪಾಯದಿಂದ ಗೋಡೆಯ ತುದಿಯವರೆಗೆ ಇದ್ದವು. ಅಂಗಳದ ಸುತ್ತಲೂ ಇದ್ದ ಗೋಡೆಯನ್ನು ಸಹ ಶ್ರೇಷ್ಠವಾದ ಕತ್ತರಿಸಿದ ಕಲ್ಲುಗಳಿಂದ ಕಟ್ಟಲಾಗಿತ್ತು. 10 ಅಡಿಪಾಯವನ್ನು ಅಗಲವಾದ ಮತ್ತು ಬೆಲೆಬಾಳುವ ಕಲ್ಲುಗಳಿಂದ ಹಾಕಿದರು. ಕೆಲವು ಕಲ್ಲುಗಳು ಹದಿನೈದು ಅಡಿ ಉದ್ದವಾಗಿದ್ದರೆ, ಉಳಿದವು ಹನ್ನೆರಡು ಅಡಿ ಉದ್ದವಾಗಿದ್ದವು. 11 ಈ ಕಲ್ಲುಗಳ ಮೇಲಿನ ತುದಿಯಲ್ಲಿ ಇತರ ಶ್ರೇಷ್ಠವಾದ ಕಲ್ಲುಗಳು ಮತ್ತು ದೇವದಾರು ಮರದ ತೊಲೆಗಳಿದ್ದವು. 12 ಅರಮನೆಯ ಅಂಗಳದ, ದೇವಾಲಯದ ಅಂಗಳದ ಮತ್ತು ದೇವಾಲಯದ ಮಂಟಪದ ಸುತ್ತಲೂ ಗೋಡೆಗಳಿದ್ದವು. ಈ ಗೋಡೆಗಳನ್ನು ಮೂರು ಸಾಲು ಕಲ್ಲುಗಳಿಂದ ಮತ್ತು ಒಂದು ಸಾಲು ದೇವದಾರು ಮರಗಳಿಂದ ಕಟ್ಟಿಸಿದ್ದನು.

13 ರಾಜನಾದ ಸೊಲೊಮೋನನು ತೂರಿನಲ್ಲಿದ್ದ ಹೀರಾಮ್ ಎಂಬವನಿಗೆ ಸಂದೇಶವನ್ನು ಕಳುಹಿಸಿ ಅವನನ್ನು ಜೆರುಸಲೇಮಿಗೆ ಕರೆಸಿದನು. 14 ಹೀರಾಮನ ತಾಯಿಯು ನಫ್ತಾಲಿ ಕುಲದವಳಾಗಿದ್ದಳು ಮತ್ತು ಇಸ್ರೇಲಿನವಳಾಗಿದ್ದಳು. ಅವನ ದಿವಂಗತ ತಂದೆಯು ತೂರಿನವನಾಗಿದ್ದನು. ಹೀರಾಮನು ಹಿತ್ತಾಳೆಯಿಂದ ವಸ್ತುಗಳನ್ನು ತಯಾರಿಸುತ್ತಿದ್ದನು. ಅವನು ಕುಶಲಕರ್ಮಿಯೂ ಅನುಭವಿಯೂ ಆದ ಕೆಲಸಗಾರನಾಗಿದ್ದನು. ರಾಜನಾದ ಸೊಲೊಮೋನನು ಹೀರಾಮನಿಗೆ ಬರಲು ಹೇಳಿದಾಗ, ಅವನು ಒಪ್ಪಿಕೊಂಡನು. ರಾಜನಾದ ಸೊಲೊಮೋನನು ಎಲ್ಲಾ ಹಿತ್ತಾಳೆಯ ಕಾರ್ಯಗಳಿಗೆ ಹೀರಾಮನನ್ನು ಮೇಲ್ವಿಚಾರಕನನ್ನಾಗಿ ನೇಮಿಸಿದನು. ಹೀರಾಮನು ಹಿತ್ತಾಳೆಯ ವಸ್ತುಗಳನ್ನು ನಿರ್ಮಿಸಿದನು.

15 ಹೀರಾಮನು ಎರಡು ಹಿತ್ತಾಳೆಯ ಕಂಬಗಳನ್ನು ನಿರ್ಮಿಸಿದನು, ಪ್ರತಿಯೊಂದು ಕಂಬದ ಎತ್ತರ ಇಪ್ಪತ್ತೇಳು ಅಡಿ; ಸುತ್ತಳತೆ ಹದಿನೆಂಟು ಅಡಿ. ಈ ಕಂಬಗಳು ಟೊಳ್ಳಾಗಿದ್ದವು; ಲೋಹವು ಮೂರು ಇಂಚು ದಪ್ಪವಾಗಿತ್ತು. 16 ಹೀರಾಮನು ಏಳೂವರೆ ಅಡಿ ಉದ್ದದ ಎರಡು ಹಿತ್ತಾಳೆಯ ಬೋದಿಗೆಗಳನ್ನು ಮಾಡಿದನು. ಹೀರಾಮನು ಈ ಬೋದಿಗೆಗಳನ್ನು ಕಂಬಗಳ ಮೇಲಿಟ್ಟನು. 17 ನಂತರ ಅವನು ಕಂಬಗಳ ಮೇಲಿನ ಈ ಬೋದಿಗೆಗಳಿಗೆ ಸರಪಣಿಯ ಎರಡು ಜಾಲರಿಗಳನ್ನು ಮಾಡಿದನು. 18 ಇದಲ್ಲದೆ ಅವನು ತಾಮ್ರದ ದಾಳಿಂಬೆ ಹಣ್ಣುಗಳನ್ನು ಮಾಡಿ ಅವುಗಳನ್ನು ಮಾಡಿದನು. ಈ ದಾಳಿಂಬೆಯ ಅಲಂಕರಣಗಳನ್ನು ಕಂಬಗಳ ಮೇಲಿನ ಬೋದಿಗೆ ಜಾಲರಿಯ ಸುತ್ತಲೂ ಎರಡೆರಡು ಸಾಲಾಗಿ ಸಿಕ್ಕಿಸಿದನು. 19 ಕಂಬಗಳ ಮೇಲಿದ್ದ ಏಳುವರೆ ಅಡಿ ಎತ್ತರದ ಈ ಬೋದಿಗೆಗಳು ಹೂಗಳಂತೆ ಕಾಣುತ್ತಿದ್ದವು. 20 ಈ ಬೋದಿಗೆಗಳು ಕಂಬಗಳ ಮೇಲಿನ ತುದಿಯಲ್ಲಿದ್ದವು. ಅವು ವೃತ್ತಾಕಾರದ ಜಾಲರಿಯ ಮೇಲಿದ್ದವು. ಆ ಸ್ಥಳದಲ್ಲಿ ಬೋದಿಗೆಯ ಸುತ್ತಲೂ ಇನ್ನೂರು ದಾಳಿಂಬೆ ಹಣ್ಣುಗಳ ಸಾಲುಗಳಿದ್ದವು. 21 ಹೀರಾಮನು ಈ ಹಿತ್ತಾಳೆಯ ಕಂಬಗಳನ್ನು ದೇವಾಲಯದ ಮಂಟಪದಲ್ಲಿ ಇಟ್ಟನು. ಒಂದು ಸ್ತಂಭವನ್ನು ಪ್ರವೇಶದ್ವಾರದ ದಕ್ಷಿಣದಿಕ್ಕಿನ ಕಡೆಯಲ್ಲೂ ಮತ್ತೊಂದನ್ನು ಉತ್ತರದಿಕ್ಕಿನ ಕಡೆಯಲ್ಲೂ ಇಟ್ಟನು. ದಕ್ಷಿಣದ ಸ್ತಂಭಕ್ಕೆ ಯಾಕೀನ್ ಎಂದು ಹೆಸರಿಟ್ಟನು. ಉತ್ತರದ ಸ್ತಂಭಕ್ಕೆ ಬೋವಜ್ ಎಂದು ಹೆಸರಿಟ್ಟನು. 22 ಅವರು ಹೂ ಆಕಾರದ ಬೋದಿಗೆಗಳನ್ನು ಸ್ತಂಭಗಳ ಮೇಲಿನ ತುದಿಯಲ್ಲಿಟ್ಟರು. ಆ ಎರಡು ಸ್ತಂಭಗಳ ಕೆಲಸವು ಮುಗಿಯಿತು.

23 ನಂತರ ಹೀರಾಮನು ವೃತ್ತಾಕಾರದ ಹಿತ್ತಾಳೆಯ ತೊಟ್ಟಿಯನ್ನು ಮಾಡಿದನು. ಅವರು ಈ ತೊಟ್ಟಿಯನ್ನು “ಸಮುದ್ರ”ವೆಂದು ಕರೆದರು. ಆ ತೊಟ್ಟಿಯ ಸುತ್ತಳತೆಯು ನಲವತ್ತೈದು ಅಡಿಗಳು. ಅದರ ಒಂದು ಅಂಚಿನಿಂದ ಮತ್ತೊಂದು ಅಂಚಿಗೆ ಹದಿನೈದು ಅಡಿಗಳು ಮತ್ತು ಆಳ ಏಳುವರೆ ಅಡಿಗಳು. 24 ಆ ತೊಟ್ಟಿಯ ಹೊರಅಂಚಿನ ಸುತ್ತಲೂ ಒಂದು ಕಂಠವಿತ್ತು. ಈ ಕಂಠದ ಕೆಳಗಡೆಯಲ್ಲಿ ತೊಟ್ಟಿಯನ್ನು ಸುತ್ತುವರಿದಂತೆ ಎರಡು ಸಾಲು ಹಿತ್ತಾಳೆಯ ಬಳ್ಳಿಗಳಿದ್ದವು. ಈ ಹಿತ್ತಾಳೆಯ ಬಳ್ಳಿಗಳನ್ನು ತೊಟ್ಟಿಯ ಮೇಲ್ಭಾಗದಲ್ಲಿ ಎರಕಹೊಯ್ದಿದ್ದನು. 25 ಈ ತೊಟ್ಟಿಯು ಹನ್ನೆರಡು ಹಿತ್ತಾಳೆಯ ಹೋರಿಗಳ ಬೆನ್ನಿನ ಮೇಲಿತ್ತು. ಈ ಹನ್ನೆರಡು ಹೋರಿಗಳೂ ತೊಟ್ಟಿಗೆ ದೂರವಾಗಿದ್ದ ಹೊರಭಾಗವನ್ನು ನೋಡುತ್ತಿರುವಂತೆ ಕಾಣುತ್ತಿದ್ದವು. ಮೂರು ಉತ್ತರದ ಕಡೆಗೂ ಮೂರು ಪೂರ್ವದ ಕಡೆಗೂ ಮೂರು ದಕ್ಷಿಣದ ಕಡೆಗೂ ಮೂರು ಪಶ್ಚಿಮದ ಕಡೆಗೂ ನೋಡುತ್ತಿದ್ದವು. 26 ಈ ತೊಟ್ಟಿಯ ಪಾರ್ಶ್ವಗಳು ಮೂರು ಇಂಚು ದಪ್ಪವಾಗಿತ್ತು. ಈ ತೊಟ್ಟಿಯ ಕಂಠವು ಲೋಟದ ಕಂಠದಂತೆ ಅಥವಾ ಹೂಗಳ ದಳದಂತೆ ಇತ್ತು. ಈ ತೊಟ್ಟಿಯಲ್ಲಿ ಹನ್ನೊಂದು ಸಾವಿರ ಗ್ಯಾಲನ್ ನೀರನ್ನು ತುಂಬಬಹುದಾಗಿತ್ತು.

27 ಹೀರಾಮನು ಹತ್ತು ಬಂಡಿಗಳನ್ನು ಮಾಡಿದನು. ಪ್ರತಿಯೊಂದರ ಉದ್ದ ಆರು ಅಡಿಗಳು; ಅಗಲ ಆರು ಅಡಿಗಳು; ಮತ್ತು ಎತ್ತರ ನಾಲ್ಕುವರೆ ಅಡಿಗಳು. 28 ಈ ಬಂಡಿಗಳನ್ನು ಚೌಕಾಕಾರದ ಚೌಕಟ್ಟಿನ ಅಂಕಣದಿಂದ ಮಾಡಿದ್ದನು. 29 ಅಂಕಣದ ಮತ್ತು ಚೌಕಟ್ಟಿನ ಮೇಲೆ ಹಿತ್ತಾಳೆಯ ಸಿಂಹಗಳು, ಹೋರಿಗಳು ಮತ್ತು ಕೆರೂಬಿಗಳಿದ್ದವು. ಸಿಂಹಗಳ, ಹೋರಿಗಳ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಹೂವಿನಾಕಾರದಲ್ಲಿ ಹಿತ್ತಾಳೆಯ ಮೇಲೆ ಕೆತ್ತಿದ್ದನು. 30 ಪ್ರತಿಯೊಂದು ಬಂಡಿಗೂ ನಾಲ್ಕು ಹಿತ್ತಾಳೆಯ ಗಾಲಿಗಳು ಮತ್ತು ಅಚ್ಚುಗಳು ಇದ್ದವು. ಆ ದೊಡ್ಡ ಪಾತ್ರೆಯ ಮೂಲೆಗಳಲ್ಲಿ ಹಿತ್ತಾಳೆಯ ಆಧಾರ ಕಂಬಗಳಿದ್ದವು. ಈ ಕಂಬಗಳ ಹಿತ್ತಾಳೆಯ ಮೇಲ್ಭಾಗವು ಹೂವಿನಾಕಾರದಲ್ಲಿ ಕೆತ್ತಲಾಗಿತ್ತು. 31 ಈ ಪಾತ್ರೆಯ ಮೇಲೆ ಒಂದು ಚೌಕಟ್ಟಿತ್ತು. ಅದು ಪಾತ್ರೆಯ ಮೇಲೆ ಹದಿನೆಂಟು ಇಂಚು ಎತ್ತರವಾಗಿತ್ತು. ಆ ಪಾತ್ರೆಯ ಬಾಯಿಯು ಇಪ್ಪತ್ತೇಳು ಇಂಚು ವ್ಯಾಸದೊಂದಿಗೆ ವೃತ್ತಾಕಾರವಾಗಿತ್ತು. ಆ ಚೌಕಟ್ಟಿನ ಹಿತ್ತಾಳೆಯ ಮೇಲೆ ಚಿತ್ರ ವಿನ್ಯಾಸಗಳನ್ನು ಬಿಡಿಸಲಾಗಿತ್ತು. ಈ ಚೌಕಟ್ಟು ವೃತ್ತಾಕಾರವಾಗಿರದೆ ಚೌಕಾಕಾರವಾಗಿತ್ತು. 32 ಈ ಚೌಕಟ್ಟಿನ ಕೆಳಗಡೆ ನಾಲ್ಕು ಚಕ್ರಗಳಿದ್ದವು. ಈ ಚಕ್ರಗಳ ವ್ಯಾಸವು ಇಪ್ಪತ್ತೇಳು ಇಂಚುಗಳು. ಈ ಚಕ್ರಗಳ ಅಚ್ಚುಗಳನ್ನು ಬಂಡಿಯೊಂದಿಗೇ ಸೇರಿಸಿ ಅಖಂಡವಾಗಿ ನಿರ್ಮಿಸಿದ್ದರು. 33 ಈ ಚಕ್ರಗಳು ರಥದ ಮೇಲಿನ ಚಕ್ರಗಳಂತಿದ್ದುವು. ಈ ಚಕ್ರಗಳ ಮೇಲಿನ ಅಚ್ಚುಗಳನ್ನು, ಕಂಠಗಳನ್ನು, ಅರೆಯಕಾಲುಗಳನ್ನು ಮತ್ತು ಕಂಬಗಳನ್ನು ಹಿತ್ತಾಳೆಯಿಂದ ಮಾಡಿದ್ದರು.

34 ಪ್ರತಿ ಬಂಡಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಆಧಾರ ಕಂಬಗಳಿದ್ದವು. ಅವುಗಳನ್ನು ಬಂಡಿಯೊಂದಿಗೆ ಅಖಂಡವಾಗಿ ನಿರ್ಮಿಸಿದ್ದರು. 35 ಪ್ರತಿಯೊಂದು ಬಂಡಿಯ ಮೇಲ್ಗಡೆ ಸುತ್ತಲೂ ಒಂದು ಹಿತ್ತಾಳೆಯ ಪಟ್ಟಿಯಿತ್ತು. ಅದನ್ನು ಬಂಡಿಯೊಂದಿಗೆ ಅಖಂಡವಾಗಿ ಮಾಡಿದ್ದರು. 36 ಬಂಡಿಯ ಪಾರ್ಶ್ವಗಳ ಮೇಲೆ ಮತ್ತು ಚೌಕಟ್ಟುಗಳ ಮೇಲೆ ಕೆರೂಬಿಗಳ, ಸಿಂಹಗಳ, ಖರ್ಜೂರ ಗಿಡಗಳ ಚಿತ್ರಗಳನ್ನು ಹಿತ್ತಾಳೆಯಲ್ಲಿ ಕೆತ್ತಿದ್ದರು. ಈ ಚಿತ್ರಗಳನ್ನು ಬಂಡಿಯಲ್ಲಿ ಅವಕಾಶವಿದ್ದ ಭಾಗಗಳಲ್ಲೆಲ್ಲಾ ಕೆತ್ತಿದ್ದರು. ಬಂಡಿಯ ಸುತ್ತಲಿನ ಚೌಕಟ್ಟಿನ ಮೇಲೆ ಹೂಗಳನ್ನು ಕೆತ್ತಿದ್ದರು. 37 ಹೀರಾಮನು ಹತ್ತು ಬಂಡಿಗಳನ್ನು ಮಾಡಿದನು. ಅವುಗಳೆಲ್ಲ ಒಂದೇ ತೆರನಾಗಿದ್ದವು. ಪ್ರತಿಯೊಂದನ್ನು ಹಿತ್ತಾಳೆಯಿಂದ ಮಾಡಿದ್ದನು. ಹಿತ್ತಾಳೆಯನ್ನು ಕರಗಿಸಿ, ಅಚ್ಚಿನಲ್ಲಿ ಎರಕ ಹೊಯ್ದಿದ್ದನು. ಆದ್ದರಿಂದ ಬಂಡಿಗಳ ಗಾತ್ರ ಮತ್ತು ಆಕಾರವು ಒಂದೇ ಆಗಿತ್ತು.

38 ಹೀರಾಮನು ಹತ್ತು ಗಂಗಾಳಗಳನ್ನು ಮಾಡಿದನು. ಹತ್ತು ಬಂಡಿಗಳಲ್ಲಿ ಒಂದೊಂದು ಬಂಡಿಗೆ ಒಂದೊಂದು ಗಂಗಾಳವಿತ್ತು. ಪ್ರತಿಯೊಂದು ಗಂಗಾಳದ ಅಗಲವು ಆರು ಅಡಿಗಳು. ಪ್ರತಿ ಗಂಗಾಳವು ಇನ್ನೂರ ಮೂವತ್ತು ಗ್ಯಾಲನ್ ನೀರನ್ನು ಹಿಡಿಯುತ್ತಿತ್ತು. 39 ಹೀರಾಮನು ದೇವಾಲಯದ ದಕ್ಷಿಣದ ಕಡೆಗೆ ಐದು ಬಂಡಿಗಳನ್ನು ಮತ್ತು ಇತರ ಐದು ಬಂಡಿಗಳನ್ನು ಉತ್ತರದ ಕಡೆಗೆ ಇಟ್ಟನು. ಅವನು ಆ ದೊಡ್ಡ ಜಲಾಶಯವನ್ನು ದೇವಾಲಯದ ಆಗ್ನೇಯ ದಿಕ್ಕಿನಲ್ಲಿ ಇಟ್ಟನು. 40 ಹೀರಾಮನು ಗುಂಬಗಳನ್ನು, ಚಿಕ್ಕ ಸಲಿಕೆಗಳನ್ನು ಮತ್ತು ಚಿಕ್ಕ ಗಂಗಾಳಗಳನ್ನು ಮಾಡಿದನು. ರಾಜನಾದ ಸೊಲೊಮೋನನು ಅಪೇಕ್ಷಿಸಿದ್ದ ವಸ್ತುಗಳನ್ನೆಲ್ಲ ಹೀರಾಮನು ಮಾಡಿ ಮುಗಿಸಿದನು. ಯೆಹೋವನ ದೇವಾಲಯಕ್ಕಾಗಿ ಹೀರಾಮನು ಮಾಡಿದ ವಸ್ತುಗಳ ಪಟ್ಟಿ ಹೀಗಿದೆ:

41 ಎರಡು ಸ್ತಂಭಗಳು;

ಈ ಸ್ತಂಭಗಳ ಮೇಲೆ ಮಡಕೆಯ ಆಕಾರದ ಎರಡು ಬೋದಿಗೆಗಳು;

ಬೋದಿಗೆಯ ಸುತ್ತಲೂ ಹಬ್ಬಿದಂತಿರುವ ಎರಡು ಜಾಲರಿಗಳು;

42 ಎರಡು ಜಾಲರಿಗಳನ್ನೂ

ನಾನೂರು ದಾಳಿಂಬೆ ಹಣ್ಣುಗಳೂ ಅಂದರೆ ಕಂಬಗಳ ಮೇಲಿರುವ ಎರಡು ಪಾತ್ರೆಗಳನ್ನು ಮುಚ್ಚುವಂತೆ ಪ್ರತಿಯೊಂದು ಜಾಲರಿಗೂ ಎರಡೆರಡು ಸಾಲು ದಾಳಿಂಬೆ ಹಣ್ಣುಗಳು;

43 ಒಂದೊಂದು ಗಂಗಾಳವನ್ನು ಒಳಗೊಂಡ ಹತ್ತು ಬಂಡಿಗಳು;

44 ಹನ್ನೆರಡು ಹೋರಿಗಳು ಹೊತ್ತುಕೊಂಡಿರುವ ಒಂದು ಜಲಾಶಯ.

45 ಗುಂಬಗಳು, ಚಿಕ್ಕಸಲಿಕೆಗಳು, ಚಿಕ್ಕಗಂಗಾಳಗಳು ಮತ್ತು ಯೆಹೋವನ ಆಲಯಕ್ಕೆ ಅಗತ್ಯವಾದ ಎಲ್ಲಾ ಪಾತ್ರೆಗಳು.

ರಾಜನಾದ ಸೊಲೊಮೋನನು ಅಪೇಕ್ಷಿಸಿದ ವಸ್ತುಗಳನ್ನೆಲ್ಲಾ ಹೀರಾಮನು ಮಾಡಿದನು. ಈ ವಸ್ತುಗಳನ್ನೆಲ್ಲಾ ನಯಗೊಳಿಸಿದ ಹಿತ್ತಾಳೆಯಿಂದ ಮಾಡಿದನು. 46-47 ಈ ವಸ್ತುಗಳನ್ನು ಮಾಡಲು ಉಪಯೋಗಿಸಿದ ಹಿತ್ತಾಳೆಯನ್ನು ಸೊಲೊಮೋನನು ತೂಕಹಾಕಲೇ ಇಲ್ಲ. ಯಾಕೆಂದರೆ ತೂಕ ಮಾಡಲಾಗದಷ್ಟು ವಸ್ತುಗಳು ಅಲ್ಲಿದ್ದವು. ಆದ್ದರಿಂದ ಹಿತ್ತಾಳೆಯ ಒಟ್ಟು ತೂಕವು ತಿಳಿಯಲೇ ಇಲ್ಲ. ಈ ವಸ್ತುಗಳನ್ನು ಸುಕ್ಕೋತ್ ಮತ್ತು ಚಾರೆತಾನ್‌ಗಳ ನಡುವೆ ಜೋರ್ಡನ್ ನದಿಯ ಹತ್ತಿರ ತಯಾರಿಸಲು ರಾಜನು ಆಜ್ಞಾಪಿಸಿದನು. ಅವರು ಹಿತ್ತಾಳೆಯನ್ನು ಕರಗಿಸಿ, ಅದನ್ನು ಮಣ್ಣಿನ ನೆಲದ ಅಚ್ಚುಗಳಲ್ಲಿ ಸುರಿದು ಈ ವಸ್ತುಗಳನ್ನು ಮಾಡಿದರು.

48-50 ದೇವಾಲಯಕ್ಕಾಗಿ ಅನೇಕ ವಸ್ತುಗಳನ್ನು ಬಂಗಾರದಿಂದ ಮಾಡಲು ಸೊಲೊಮೋನನು ಆಜ್ಞಾಪಿಸಿದನು. ದೇವಾಲಯಕ್ಕಾಗಿ ಸೊಲೊಮೋನನು ಬಂಗಾರದಿಂದ ಮಾಡಿಸಿದ ವಸ್ತುಗಳು ಹೀಗಿವೆ:

ಬಂಗಾರದ ಯಜ್ಞವೇದಿಕೆ;

ಬಂಗಾರದ ಮೇಜು (ದೇವರಿಗೆ ವಿಶೇಷ ರೊಟ್ಟಿಯನ್ನು ಈ ಮೇಜಿನ ಮೇಲೆ ಅರ್ಪಿಸುತ್ತಾರೆ);

ಅಪ್ಪಟ ಬಂಗಾರದ ದೀಪಸ್ತಂಭಗಳು (ಮಹಾ ಪವಿತ್ರಸ್ಥಳದ ಎದುರಿನಲ್ಲಿ ದಕ್ಷಿಣದ ಕಡೆಗೆ ಐದು ಮತ್ತು ಉತ್ತರದ ಕಡೆಗೆ ಐದು.)

ಬಂಗಾರದ ಹೂಗಳು, ಹಣತೆಗಳು ಮತ್ತು ಇಕ್ಕುಳಗಳು;

ಅಪ್ಪಟ ಬಂಗಾರದ ಬಟ್ಟಲುಗಳು; ದೀಪಗಳನ್ನು ಪ್ರಕಾಶಮಾನವಾಗಿ ಮಾಡಲು ಉಪಯೋಗಿಸುವ ಉಪಕರಣಗಳು; ಚಿಕ್ಕ ಗಂಗಾಳಗಳು; ಚಪ್ಪಟೆಯಾದ ಲೋಹದಿಂದ ಮಾಡಿದ ಪಾತ್ರೆಗಳು;

ಬೂದಿಯನ್ನು ತೆಗೆದುಕೊಂಡು ಹೋಗಲು ಶುದ್ಧಬಂಗಾರದ ಪಾತ್ರೆಗಳು; ದೇವಾಲಯದ ಪ್ರವೇಶದ್ವಾರದ ಬಾಗಿಲುಗಳು.

51 ಯೆಹೋವನ ದೇವಾಲಯಕ್ಕಾಗಿ ರಾಜನಾದ ಸೊಲೊಮೋನನು ಮಾಡಬೇಕೆಂದಿದ್ದ ಕಾರ್ಯವನ್ನು ಮುಗಿಸಿದನು. ಈ ವಿಶೇಷ ಕಾರ್ಯಕ್ಕಾಗಿ ತನ್ನ ತಂದೆಯಾದ ದಾವೀದನು ಮೀಸಲಾಗಿಟ್ಟಿದ್ದ ವಸ್ತುಗಳನ್ನೆಲ್ಲ ರಾಜನಾದ ಸೊಲೊಮೋನನು ಪಡೆದುಕೊಂಡು ದೇವಾಲಯದೊಳಕ್ಕೆ ತಂದನು. ಅವನು ಬೆಳ್ಳಿಬಂಗಾರಗಳನ್ನು ಯೆಹೋವನ ದೇವಾಲಯದ ಭಂಡಾರಕ್ಕೆ ಸೇರಿಸಿದನು.

ಎಫೆಸದವರಿಗೆ 4

ದೇಹದ ಐಕ್ಯತೆ

ನಾನು ಪ್ರಭುವಿಗೆ ಸೇರಿದವನಾದ್ದರಿಂದ ಸೆರೆಯಲ್ಲಿದ್ದೇನೆ. ನೀವು ದೇವರಿಂದ ಕರಯಲ್ಪಟ್ಟಿದ್ದೀರಿ. ಆದ್ದರಿಂದ ನಿಮ್ಮ ಕರೆಯುವಿಕೆಗೆ ತಕ್ಕಂತೆ ಯೋಗ್ಯವಾಗಿ ಜೀವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಯಾವಾಗಲೂ ದೀನತೆಯಿಂದ, ಸಾತ್ವಿಕತೆಯಿಂದ ಮತ್ತು ತಾಳ್ಮೆಯಿಂದ ಕೂಡಿದವರಾಗಿದ್ದು ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ. ನೀವು ಆತ್ಮನ ಮೂಲಕವಾಗಿ ಸಮಾಧಾನವೆಂಬ ಬಂಧನದಿಂದ ಒಂದಾಗಿದ್ದೀರಿ. ಈ ರೀತಿ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿ. ಸಮಾಧಾನವು ನಿಮ್ಮೆಲ್ಲರನ್ನು ಒಂದಾಗಿಸಲಿ. ದೇಹವು ಒಂದೇ ಮತ್ತು ಆತ್ಮನು ಒಬ್ಬನೇ. ನೀವೆಲ್ಲರೂ ಒಂದೇ ನಿರೀಕ್ಷೆಯನ್ನು ಹೊಂದಿರಬೇಕೆಂದು ದೇವರು ನಿಮ್ಮನ್ನು ಕರೆದನು. ಒಬ್ಬನೇ ಪ್ರಭು, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ. ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ಆತನು ಸಮಸ್ತವನ್ನೂ ಆಳುತ್ತಾನೆ. ಆತನು ಸರ್ವವ್ಯಾಪಿಯಾಗಿದ್ದಾನೆ ಮತ್ತು ಎಲ್ಲರಲ್ಲಿ ವಾಸಿಸುವವನಾಗಿದ್ದಾನೆ.

ಕ್ರಿಸ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾದ ವರವನ್ನು ಕೊಟ್ಟಿದ್ದಾನೆ. ಪ್ರತಿಯೊಬ್ಬನು ಕ್ರಿಸ್ತನ ಇಷ್ಟಾನುಸಾರವಾಗಿ ವರವನ್ನು ಪಡೆದುಕೊಂಡಿದ್ದಾನೆ. ಆದಕಾರಣವೇ ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆದಿದೆ:

“ಆತನು ಆಕಾಶದ ಉನ್ನತಸ್ಥಾನಕ್ಕೆ ಏರಿಹೋದಾಗ,
    ಶತ್ರುಗಳನ್ನು ಸೆರೆಯಾಳುಗಳಾಗಿ ಕೊಂಡೊಯ್ದು ಜನರಿಗೆ ದಾನಗಳನ್ನು ಮಾಡಿದನು.”(A)

“ಆತನು ಉನ್ನತಸ್ಥಾನಕ್ಕೆ ಏರಿಹೋದನು” ಎಂದರೆ ಆತನು ಭೂಲೋಕಕ್ಕೆ ಇಳಿದುಬಂದು, 10 ಭೂಮಿಯ ಅಧೋಭಾಗಕ್ಕೆ ಇಳಿದುಹೋಗಿ, ಅಲ್ಲಿಂದ ಆಕಾಶದ ಅತ್ಯುನ್ನತಸ್ಥಾನಕ್ಕೆ ಏರಿಹೋದನು ಎಂದರ್ಥ. ಸಮಸ್ತದಲ್ಲಿ ತಾನೇ ತುಂಬಿರಬೇಕೆಂದು ಕ್ರಿಸ್ತನು ಹಾಗೆ ಮಾಡಿದನು. 11 ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಉಪದೇಶಕರನ್ನಾಗಿಯೂ ನೇಮಿಸಿದನು. 12 ಸಭೆಯ ಸೇವೆಗೋಸ್ಕರ ದೇವರ ಪರಿಶುದ್ಧ ಜನರನ್ನು ಸಿದ್ಧಪಡಿಸುವುದಕ್ಕಾಗಿ ಆತನು ಅವರನ್ನು ನೇಮಿಸಿದನು. 13 ನಾವೆಲ್ಲರೂ ಒಂದೇ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಐಕ್ಯರಾಗುವತನಕ ಈ ಸೇವೆಯು ಮುಂದುವರಿಯಬೇಕು. ನಾವು ಪರಿಪೂರ್ಣರಾಗುವ ತನಕ ಅಂದರೆ ಕ್ರಿಸ್ತನ ಸರ್ವಸಂಪೂರ್ಣತೆಯನ್ನು ಮುಟ್ಟುವತನಕ ಬೆಳೆಯಬೇಕು.

14 ನಾವು ಇನ್ನು ಮೇಲೆ ಕೂಸುಗಳಾಗಿರಬಾರದು. ಸಮುದ್ರದ ಅಲೆಗಳಿಂದ ಅತ್ತಿಂದಿತ್ತ ಚಲಿಸುವ ಹಡಗಿನಂತೆ ಚಂಚಲರಾಗಿರಬಾರದು. ನಮ್ಮನ್ನು ವಂಚಿಸುವುದಕ್ಕಾಗಿ ಜನರು ಹೇಳುವ ಯಾವುದೇ ಹೊಸ ಉಪದೇಶದಿಂದಾಗಲಿ ನಾವು ಚಂಚಲರಾಗಬಾರದು. ಜನರನ್ನು ಮೋಸಗೊಳಿಸಿ ಕೆಟ್ಟದಾರಿಗೆ ನಡೆಸಬೇಕೆಂಬ ಉದ್ದೇಶದಿಂದ ಆ ದುರ್ಬೋಧಕರು ನಾನಾ ಬಗೆಯ ಕುತಂತ್ರವನ್ನು ಮಾಡುತ್ತಾರೆ. 15 ನಾವಾದರೊ ಸತ್ಯವನ್ನು ಪ್ರೀತಿಯಿಂದ ಹೇಳಬೇಕು; ಎಲ್ಲಾ ವಿಷಯಗಳಲ್ಲಿಯೂ ಬೆಳೆದು ಕ್ರಿಸ್ತನಂತಾಗಲು ಪ್ರಯತ್ನಿಸಬೇಕು. ಕ್ರಿಸ್ತನು ಶಿರಸ್ಸಾಗಿದ್ದಾನೆ ಮತ್ತು ನಾವು ದೇಹವಾಗಿದ್ದೇವೆ. 16 ಇಡೀ ದೇಹವು ಕ್ರಿಸ್ತನನ್ನು ಅವಲಂಬಿಸಿಕೊಂಡಿದೆ. ದೇಹದ ಒಂದೊಂದು ಅಂಗಗಳೂ ಒಂದಕ್ಕೊಂದು ಬಿಗಿದುಕೊಂಡಿವೆ. ಪ್ರತಿಯೊಂದು ಅಂಗವು ತನ್ನದೇ ಆದ ಕೆಲಸವನ್ನು ಮಾಡುವುದರಿಂದ ಇಡೀ ದೇಹವು ಬೆಳೆದು ಪ್ರೀತಿಯಲ್ಲಿ ಬಲವಾಗಿರಲು ಸಾಧ್ಯವಾಗುತ್ತದೆ.

ನೀವು ಜೀವಿಸಬೇಕಾದ ರೀತಿ

17 ಪ್ರಭುವಿಗೋಸ್ಕರ ನಾನು ನಿಮಗೆ ಇದನ್ನು ಹೇಳುತ್ತೇನೆ ಮತ್ತು ಎಚ್ಚರಿಸುತ್ತೇನೆ. ಅವಿಶ್ವಾಸಿಗಳಂತೆ ಇನ್ನು ಮೇಲೆ ಜೀವಿಸದಿರಿ. ಅವರ ಆಲೋಚನೆಗಳು ನಿಷ್ಪ್ರಯೋಜಕವಾಗಿವೆ. 18 ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಕಿವಿಗೊಡದ ಕಾರಣ ಅವರಿಗೆ ಏನೂ ಗೊತ್ತಿಲ್ಲ. ಆದ್ದರಿಂದ ದೇವರು ಕೊಡುವ ಜೀವಿತವನ್ನು ಹೊಂದಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. 19 ಅವರಿಗೆ ನಾಚಿಕೆಯೇ ಇಲ್ಲ. ಅವರು ತಮ್ಮ ಜೀವಿತಗಳನ್ನು ದುಷ್ಕೃತ್ಯಗಳಿಗೆ ಉಪಯೋಗಿಸುತ್ತಾರೆ; ಎಲ್ಲಾ ಬಗೆಯ ಕೆಟ್ಟಕಾರ್ಯಗಳನ್ನು ಇನ್ನೂ ಹೆಚ್ಚೆಚ್ಚಾಗಿ ಮಾಡಲು ತವಕಪಡುತ್ತಾರೆ. 20 ಆದರೆ ಕ್ರಿಸ್ತನಿಂದ ನೀವು ಕಲಿತುಕೊಂಡದ್ದು ಅವುಗಳನ್ನಲ್ಲ. 21 ನೀವು ಆತನ ವಿಷಯವಾಗಿ ಕೇಳಿದ್ದೀರೆಂಬುದು ನನಗೆ ಗೊತ್ತಿದೆ. ನೀವು ಆತನಲ್ಲಿರುವುದರಿಂದ ಸತ್ಯವನ್ನು ಕಲಿತುಕೊಂಡಿರಿ. ಹೌದು, ಸತ್ಯವು ಯೇಸುವಿನಲ್ಲಿದೆ. 22 ನೀವು ನಿಮ್ಮ ಹಿಂದಿನ ಕೆಟ್ಟ ನಡತೆಯನ್ನು ಬಿಟ್ಟುಬಿಡಬೇಕೆಂಬುದನ್ನು ಅಂದರೆ ನಿಮ್ಮ ಹಳೆಯ ಸ್ವಭಾವವನ್ನು ತೊರೆದುಬಿಡಬೇಕೆಂಬುದನ್ನು ಕಲಿತುಕೊಂಡಿರಿ. ಜನರು ತಾವು ಮಾಡ ಬಯಸುವ ದುಷ್ಕೃತ್ಯಗಳಿಂದ ವಂಚಿತರಾಗಿರುವುದರಿಂದ ಆ ಹಳೆಯ ಸ್ವಭಾವವು ದಿನದಿಂದ ದಿನಕ್ಕೆ ಮತ್ತಷ್ಟು ಕೆಟ್ಟು ಹೋಗುತ್ತದೆ. 23 ಆದರೆ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಹೊಂದಿಕೊಳ್ಳತಕ್ಕ ರೀತಿಯನ್ನು ನೀವು ಕಲಿತುಕೊಂಡಿರಿ. 24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯವಾದ ನೀತಿಯುಳ್ಳದಾಗಿಯೂ ಪರಿಶುದ್ಧವಾಗಿಯೂ ನಿರ್ಮಿಸಲ್ಪಟ್ಟಿದೆ.

25 ಆದ್ದರಿಂದ ನೀವು ಸುಳ್ಳು ಹೇಳದೆ ಒಬ್ಬರಿಗೊಬ್ಬರು ಯಾವಾಗಲೂ ಸತ್ಯವನ್ನೇ ಹೇಳಿರಿ. ಏಕೆಂದರೆ ನಾವೆಲ್ಲರೂ ಒಂದೇ ದೇಹಕ್ಕೆ ಸೇರಿದ ಅಂಗಗಳಾಗಿದ್ದೇವೆ. 26 ಕೋಪಗೊಂಡರೂ ಪಾಪ ಮಾಡಬೇಡಿ ಮತ್ತು ದಿನವೆಲ್ಲಾ ಕೋಪದಿಂದಿರಬೇಡಿ.(B) 27 ನಿಮ್ಮನ್ನು ಸೋಲಿಸಲು ಸೈತಾನನಿಗೆ ಅವಕಾಶಕೊಡಬೇಡಿ. 28 ಕಳ್ಳನು ಕದಿಯುವುದನ್ನು ನಿಲ್ಲಿಸಿ ತಾನೇ ದುಡಿದು ಸಂಪಾದಿಸಲಿ; ಅವನು ತನ್ನ ಕೈಗಳನ್ನು ಒಳ್ಳೆಯದನ್ನು ಮಾಡುವುದಕ್ಕಾಗಿ ಉಪಯೋಗಿಸಲಿ. ಆಗ ಬಡವರಿಗೂ ಸಹಾಯ ಮಾಡಲು ಅವನಿಗೆ ಸಾಧ್ಯವಾಗುವುದು.

29 ನಿಮ್ಮ ಬಾಯಿಂದ ಕೆಟ್ಟ ಮಾತುಗಳು ಬಾರದಿರಲಿ. ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ. 30 ಪವಿತ್ರಾತ್ಮನನ್ನು ದುಃಖಪಡಿಸಬೇಡಿ. ನೀವು ದೇವರಿಗೆ ಸೇರಿದವರೆಂಬುದಕ್ಕೆ ಆತನೇ ದೇವರ ಪ್ರಮಾಣವಾಗಿದ್ದಾನೆ. ಸೂಕ್ತ ಸಮಯದಲ್ಲಿ ನಿಮ್ಮನ್ನು ಬಿಡುಗಡೆ ಮಾಡುತ್ತೇನೆ ಎಂಬುದನ್ನು ತೋರಿಸುವುದಕ್ಕಾಗಿಯೇ ದೇವರು ನಿಮಗೆ ಆತನನ್ನು ಕೊಟ್ಟನು. 31 ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. 32 ಒಬ್ಬರಿಗೊಬ್ಬರು ಕರುಣೆ ತೋರಿರಿ. ಒಬ್ಬರನ್ನೊಬ್ಬರು ಪ್ರೀತಿಸಿರಿ. ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆ ನೀವೂ ಒಬ್ಬರನ್ನೊಬ್ಬರು ಕ್ಷಮಿಸಿರಿ.

ಯೆಹೆಜ್ಕೇಲ 37

ಒಣಗಿದ ಎಲುಬುಗಳ ದರ್ಶನ

37 ಯೆಹೋವನ ಶಕ್ತಿಯು ನನ್ನ ಮೇಲೆ ಬಂದಿತು. ಯೆಹೋವನ ಆತ್ಮವು ನನ್ನನ್ನು ನಗರದೊಳಗಿಂದ ಎತ್ತಿಕೊಂಡು ತಗ್ಗಿನ ಮಧ್ಯಕ್ಕೆ ಕೊಂಡೊಯ್ದನು. ಆ ಬಯಲಿನ ತುಂಬಾ ಒಣಗಿದ ಎಲುಬುಗಳು ತುಂಬಿದ್ದವು. ಆ ಬಯಲಿನ ನೆಲದ ಮೇಲೆ ಅನೇಕಾನೇಕ ಒಣ ಎಲುಬುಗಳು ಬಿದ್ದುಕೊಂಡಿದ್ದವು. ಯೆಹೋವನು ನನ್ನನ್ನು ಆ ಎಲುಬುಗಳ ನಡುವೆ ನಡೆಯುವಂತೆ ಮಾಡಿದನು. ಆ ಎಲುಬುಗಳು ತೀರಾ ಒಣಗಿಹೋಗಿರುವುದನ್ನು ನಾನು ನೋಡಿದೆನು.

ಆಗ ನನ್ನ ಒಡೆಯನಾದ ಯೆಹೋವನು ನನ್ನೊಡನೆ ಹೀಗೆ ಹೇಳಿದನು, “ನರಪುತ್ರನೇ, ಈ ಎಲುಬುಗಳಿಗೆ ತಿರುಗಿ ಜೀವ ಬಂದೀತೋ?”

ಅದಕ್ಕೆ ನಾನು, “ನನ್ನ ಒಡೆಯನಾದ ಯೆಹೋವನೇ, ನೀನೇ ಬಲ್ಲೆ. ಈ ಪ್ರಶ್ನೆಗೆ ಉತ್ತರ ನಿನಗೇ ಗೊತ್ತಿದೆ” ಎಂದು ಉತ್ತರಿಸಿದೆನು.

ಆಗ ಯೆಹೋವನು, “ನನ್ನ ಪರವಾಗಿ ಆ ಎಲುಬುಗಳೊಂದಿಗೆ ಮಾತನಾಡು. ಅವುಗಳಿಗೆ ಹೀಗೆ ಹೇಳು: ‘ಒಣಗಿದ ಎಲುಬುಗಳೇ, ಯೆಹೋವನ ಮಾತನ್ನು ಕೇಳಿರಿ. ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ, ನಾನು ನಿಮಗೆ ಉಸಿರನ್ನು[a] ಬರುವಂತೆ ಮಾಡುವೆನು. ಆಗ ನೀವು ಜೀವಂತರಾಗುವಿರಿ. ನಾನು ನಿಮ್ಮಲ್ಲಿ ಸ್ನಾಯುಗಳನ್ನೂ ನರಗಳನ್ನೂ ಬರಮಾಡುವೆನು. ಆಮೇಲೆ ನಿಮ್ಮನ್ನು ಚರ್ಮದಿಂದ ಹೊದಿಸುವೆನು. ಆಮೇಲೆ ನಿಮ್ಮಲ್ಲಿ ಶ್ವಾಸವನ್ನಿಟ್ಟು ನಿಮಗೆ ಜೀವ ಬರುವಂತೆ ಮಾಡುವೆನು. ಆಗ ನಾನು ಒಡೆಯನಾದ ಯೆಹೋವನು ಎಂದು ನೀವು ತಿಳಿದುಕೊಳ್ಳುವಿರಿ.’”

ನಾನು ಎಲುಬುಗಳೊಂದಿಗೆ ಯೆಹೋವನ ಪರವಾಗಿ ಮಾತನಾಡಿದೆನು. ನಾನು ಮಾತನಾಡುತ್ತಾ ಇರುವಾಗಲೇ ಒಂದು ದೊಡ್ಡ ಶಬ್ದವನ್ನು ಕೇಳಿದೆನು. ಎಲುಬುಗಳು ಅಲ್ಲಾಡತೊಡಗಿದವು ಮತ್ತು ಒಂದಕ್ಕೊಂದು ಜೋಡಿಸಲ್ಪಟ್ಟವು. ನನ್ನ ಕಣ್ಣೆದುರಿನಲ್ಲೇ ಅವುಗಳಿಗೆ ಸ್ನಾಯುಗಳು, ನರಗಳು ಬಂದವು; ಮತ್ತು ಚರ್ವವು ಅವುಗಳನ್ನು ಮುಚ್ಚಿತು. ಆದರೆ ಆ ಶರೀರ ಚಲಿಸಲಿಲ್ಲ. ಯಾಕೆಂದರೆ ಅದರಲ್ಲಿ ಶ್ವಾಸವಿರಲಿಲ್ಲ.

ಆಗ ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನನ್ನ ಪರವಾಗಿ ಗಾಳಿಯೊಂದಿಗೆ ಮಾತನಾಡು. ನರಪುತ್ರನೇ, ಗಾಳಿಯೊಂದಿಗೆ ಮಾತನಾಡು. ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, ‘ಗಾಳಿಯೇ, ಎಲ್ಲಾ ದಿಕ್ಕುಗಳಿಂದ ಬಂದು ಈ ಸತ್ತ ಶರೀರಗಳ ಮೇಲೆ ಊದು. ಅವರ ಮೇಲೆ ಗಾಳಿ ಊದು. ಆಗ ಅವುಗಳಿಗೆ ಜೀವ ಬರುವದು.’”

10 ನಾನು ಯೆಹೋವನ ಪರವಾಗಿ ಗಾಳಿಗೆ ಆತನು ಹೇಳಿದಂತೆಯೇ ಹೇಳಿದೆನು. ಆಗ ನಿರ್ಜೀವ ದೇಹಗಳೊಳಗೆ ಶ್ವಾಸವು ಹೊಕ್ಕಿತು. ಅವುಗಳಿಗೆ ಜೀವಬಂದು ನಿಂತುಕೊಂಡವು. ಅಲ್ಲಿ ಅನೇಕ ಜನರಿದ್ದರು. ಒಂದು ದೊಡ್ಡ ಸೈನ್ಯದ ತರಹ ಜನಸಮೂಹವು ಅಲ್ಲಿತ್ತು.

11 ಆಗ ಒಡೆಯನಾದ ಯೆಹೋವನು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಈ ಎಲುಬುಗಳು ಇಸ್ರೇಲ್ ಜನಾಂಗ. ‘ನಮ್ಮ ಎಲುಬುಗಳು ಒಣಗಿಹೋಗಿವೆ. ನಮ್ಮ ನಿರೀಕ್ಷೆಯು ಮುಗಿದುಹೋಯಿತು. ನಾವು ಸಂಪೂರ್ಣವಾಗಿ ನಾಶವಾಗಿ ಹೋಗಿದ್ದೇವೆ’ ಎಂದು ಇಸ್ರೇಲರು ಹೇಳುತ್ತಾರೆ. 12 ಆದ್ದರಿಂದ ನನ್ನ ಪರವಾಗಿ ಅವರೊಂದಿಗೆ ಮಾತನಾಡು. ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆಂದು ಹೇಳು: ‘ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆದು ನಿಮ್ಮನ್ನು ಹೊರತಂದು ನಿಮ್ಮ ಸ್ವದೇಶವಾದ ಇಸ್ರೇಲಿಗೆ ನಿಮ್ಮನ್ನು ಬರಮಾಡುವೆನು. 13 ನನ್ನ ಜನರೇ, ನಿಮ್ಮನ್ನು ಸಮಾಧಿಯೊಳಗಿಂದ ಎಬ್ಬಿಸಿ ತರುವೆನು. ಆಗ ನಾನೇ ಯೆಹೋವನೆಂದು ನೀವು ತಿಳಿಯುವಿರಿ. 14 ನಾನು ನನ್ನ ಆತ್ಮವನ್ನು ನಿಮ್ಮಲ್ಲಿ ಇಡುವೆನು, ಆಗ ನೀವು ತಿರುಗಿ ಜೀವ ಹೊಂದುವಿರಿ. ಅನಂತರ ನಿಮ್ಮನ್ನು ನಿಮ್ಮ ಸ್ವದೇಶಕ್ಕೆ ಬರಮಾಡುವೆನು. ಆಗ ನಾನೇ ಯೆಹೋವನೆಂದು ನೀವು ತಿಳಿಯುವಿರಿ. ನಾನು ಹೇಳಿದ್ದೆಲ್ಲ ಸಂಭವಿಸುತ್ತದೆ ಎಂದು ಆಗ ನಿಮಗೆ ತಿಳಿದು ಬರುವದು.’” ಇದು ಯೆಹೋವನ ನುಡಿ.

ಯೆಹೂದ ಮತ್ತು ಇಸ್ರೇಲ್ ಒಂದಾಗುವದು

15 ಯೆಹೋವನ ಸಂದೇಶವು ನನಗೆ ತಿರುಗಿ ಬಂತು. ಆತನು ಹೇಳಿದ್ದೇನೆಂದರೆ: 16 “ನರಪುತ್ರನೇ, ಒಂದು ದಂಡವನ್ನು ತೆಗೆದುಕೊಂಡು ಅದರ ಮೇಲೆ, ‘ಈ ದಂಡವು ಯೆಹೂದನಿಗೂ ಅವನ ಸ್ನೇಹಿತರಾದ ಇಸ್ರೇಲರಿಗೂ ಸೇರಿದ್ದು’ ಎಂದು ಬರೆ. ಆಮೇಲೆ ಇನ್ನೊಂದು ದಂಡವನ್ನು ತೆಗೆದುಕೊಂಡು ಅದರ ಮೇಲೆ, ‘ಎಫ್ರಾಯಿಮನ ಈ ದಂಡವು ಯೋಸೇಫನಿಗೂ ಅವನ ಸ್ನೇಹಿತರಾದ ಇಸ್ರೇಲರಿಗೂ ಸೇರಿದ್ದು’ ಎಂದು ಬರೆ. 17 ಆಮೇಲೆ ಆ ಎರಡೂ ದಂಡಗಳನ್ನು ನಿನ್ನ ಕೈಯಲ್ಲಿ ಕೂಡಿಸು. ಆಗ ಅದು ಒಂದೇ ದಂಡವಾಗುವದು.

18 “ನಿನ್ನ ಜನರು ಅದು ಏನು ಎಂದು ವಿವರಿಸಲು ಹೇಳುವರು. 19 ಅವರಿಗೆ ಹೀಗೆ ಹೇಳು: ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ನಾನು ಯೋಸೇಫನ ದಂಡವನ್ನು ಎಫ್ರಾಯೀಮ್ ಮತ್ತು ಅವನ ಸ್ನೇಹಿತರಾದ ಇಸ್ರೇಲರ ಕೈಯಿಂದ ತೆಗೆದುಕೊಂಡು ಅದನ್ನು ಯೆಹೂದದ ದಂಡದೊಂದಿಗೆ ಇಟ್ಟು ಒಂದೇ ದಂಡವಾಗುವಂತೆ ಮಾಡುವೆನು. ಅವು ನನ್ನ ಕೈಯಲ್ಲಿ ಒಂದೇ ದಂಡವಾಗುತ್ತವೆ.’

20 “ಆ ದಂಡಗಳನ್ನು ಕೈಯಲ್ಲಿ ಹಿಡಿದುಕೊಂಡು ನಿನ್ನೆದುರಿಗೆ ಚಾಚು. ನೀನು ಅವುಗಳ ಮೇಲೆ ಹೆಸರು ಬರೆದಿರುವೆ. 21 ಯೆಹೋವನು ಹೀಗೆ ಹೇಳುತ್ತಾನೆ ಎಂದು ಆ ಜನರಿಗೆ ಹೇಳು: ‘ನಾನು ಇಸ್ರೇಲ್ ಜನರನ್ನು ಅವರು ಚದರಿದ ದೇಶಗಳಿಂದಲೂ ಸುತ್ತಲಿರುವ ದೇಶಗಳಿಂದಲೂ ಅವರನ್ನು ಒಟ್ಟುಗೂಡಿಸಿ ಅವರ ಸ್ವದೇಶಕ್ಕೆ ತರುವೆನು. 22 ಇಸ್ರೇಲಿನ ಪರ್ವತ ರಾಜ್ಯದಲ್ಲಿ ಅವರನ್ನು ಒಂದು ಜನಾಂಗವನ್ನಾಗಿ ಮಾಡುವೆನು. ಅವರೆಲ್ಲರಿಗೂ ಒಬ್ಬನೇ ರಾಜನಿರುವನು. ಅವರು ಇನ್ನು ಮುಂದೆ ಎರಡು ರಾಜ್ಯಗಳಾಗುವದಿಲ್ಲ. 23 ಅವರು ಇನ್ನು ಮೇಲೆ ವಿಗ್ರಹಗಳಿಂದ ತಮ್ಮನ್ನು ಹೊಲೆ ಮಾಡಿಕೊಳ್ಳುವದಿಲ್ಲ. ಅವರು ಪಾಪಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸುವೆನು. ನಾನು ಅವರನ್ನು ತೊಳೆದು ಶುದ್ಧಮಾಡುವೆನು. ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.

24 “‘ನನ್ನ ಸೇವಕನಾದ ದಾವೀದನು ಅವರ ರಾಜನಾಗುವನು. ಅವರೆಲ್ಲರಿಗೆ ಒಬ್ಬನೇ ಕುರುಬನಿರುವನು. ನಾನು ಹೇಳಿದ ಮಾತುಗಳಿಗೆ ಅವರು ವಿಧೇಯರಾಗುವರು; ನನ್ನ ಕಟ್ಟಳೆ ನಿಯಮಗಳಲ್ಲಿ ಅವರು ಬಾಳುವರು. 25 ನಾನು ನನ್ನ ಸೇವಕನಾದ ಯಾಕೋಬನಿಗೆ ಕೊಟ್ಟಿರುವ ದೇಶದಲ್ಲಿ ಅವರು ವಾಸಿಸುವರು. ನಿಮ್ಮ ಪೂರ್ವಿಕರು ಆ ಪ್ರಾಂತ್ಯದಲ್ಲಿ ವಾಸವಾಗಿದ್ದರು. ನನ್ನ ಜನರು ಅಲ್ಲಿಯೇ ವಾಸಮಾಡುವರು. ಅವರೂ ಅವರ ಮಕ್ಕಳೂ ಮೊಮ್ಮಕ್ಕಳೂ ಅಲ್ಲಿ ನಿತ್ಯಕಾಲಕ್ಕೂ ಜೀವಿಸುವರು. ನನ್ನ ಸೇವಕನಾದ ದಾವೀದನು ಅವರ ನಿತ್ಯಕಾಲದ ರಾಜನು. 26 ನಾನು ಸಮಾಧಾನದ ಒಡಂಬಡಿಕೆಯನ್ನು ಅವರ ಜೊತೆ ಮಾಡುವೆನು. ಇದು ನಿರಂತರದ ಒಡಂಬಡಿಕೆಯಾಗಿರುವದು. ನಾನು ಅವರ ಸ್ವದೇಶವನ್ನು ಹಿಂತಿರುಗಿಸಿ ಕೊಡುವೆನು. ಅವರನ್ನು ಅಭಿವೃದ್ಧಿಪಡಿಸಿ ಹೆಚ್ಚಿಸುವೆನು ಮತ್ತು ಅವರ ಮಧ್ಯೆ ನನ್ನ ಪವಿತ್ರ ಸ್ಥಳವನ್ನು ಇರಿಸುವೆನು. ಇದು ನಿರಂತರವಾದ ಒಡಂಬಡಿಕೆ. 27 ನನ್ನ ಪವಿತ್ರಗುಡಾರ ಅವರೊಂದಿಗಿರುವದು. ಹೌದು, ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು. 28 ಇತರ ದೇಶಗಳವರು ನಾನು ಯೆಹೋವನೆಂದು ತಿಳಿಯುವರು. ಇಸ್ರೇಲರನ್ನು ನನ್ನ ವಿಶೇಷ ಜನರೆಂದು ಅವರಿಗೆ ತಿಳಿದುಬರುವದು. ಯಾಕೆಂದರೆ ಅವರ ಮಧ್ಯೆ ನನ್ನ ಪರಿಶುದ್ಧ ಸ್ಥಾನವನ್ನು ನಿರಂತರಕ್ಕೂ ಇರಿಸುವೆನು.’”

ಕೀರ್ತನೆಗಳು 87-88

ತುತಿಗೀತೆ. ರಚನೆಗಾರರು: ಕೋರಹೀಯರು.

87 ದೇವರು ತನ್ನ ಆಲಯವನ್ನು ಜೆರುಸಲೇಮಿನ ಪವಿತ್ರ ಪರ್ವತಗಳ ಮೇಲೆ ಕಟ್ಟಿದ್ದಾನೆ.
    ಯೆಹೋವನು ಚೀಯೋನಿನ ಬಾಗಿಲುಗಳನ್ನು ಇಸ್ರೇಲಿನ ಇತರ ಸ್ಥಳಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವನು.
ದೇವರ ಪಟ್ಟಣವೇ, ಜನರು ನಿನ್ನ ಬಗ್ಗೆ ಆಶ್ಚರ್ಯಕರವಾದ ಸಂಗತಿಗಳನ್ನು ಹೇಳುವರು.

ದೇವಜನರು ಪ್ರಪಂಚದ ಅನೇಕ ಕಡೆಗಳಲ್ಲಿ ಈಗ ವಾಸವಾಗಿದ್ದಾರೆ.
    ಅವರಲ್ಲಿ ಕೆಲವರು ಈಜಿಪ್ಟಿನಲ್ಲಿಯೂ ಬಾಬಿಲೋನಿನಲ್ಲಿಯೂ ನೆಲೆಸಿದ್ದಾರೆ.
    ಇನ್ನು ಕೆಲವರು ಫಿಲಿಷ್ಟಿಯದಲ್ಲಿಯೂ ತೂರಿನಲ್ಲಿಯೂ ಇಥಿಯೋಪಿಯದಲ್ಲಿಯೂ ನೆಲೆಸಿದ್ದಾರೆ.
ಚೀಯೋನಿನಲ್ಲಿ ಜನಿಸಿದ ಪ್ರತಿಯೊಬ್ಬರೂ ದೇವರಿಗೆ ಗೊತ್ತು.
    ಮಹೋನ್ನತನಾದ ದೇವರೇ ಆ ಪಟ್ಟಣವನ್ನು ಕಟ್ಟಿದನು.
ದೇವರು ತನ್ನ ಜನರೆಲ್ಲರ ಬಗ್ಗೆ ಪಟ್ಟಿಮಾಡಿದ್ದಾನೆ.
    ಪ್ರತಿಯೊಬ್ಬನ ಹುಟ್ಟಿದ ಸ್ಥಳವು ದೇವರಿಗೆ ತಿಳಿದಿದೆ.

ದೇವರ ಮಕ್ಕಳು ಹಬ್ಬಗಳನ್ನು ಆಚರಿಸಲು ಜೆರುಸಲೇಮಿಗೆ ಹೋಗುವರು.
    ಅವರು ಸಂತೋಷದಿಂದ ಹಾಡುತ್ತಾ ಕುಣಿದಾಡುವರು.
    “ಒಳ್ಳೆಯವುಗಳೆಲ್ಲ ಬರುವುದು ಜೆರುಸಲೇಮಿನಿಂದಲೇ” ಎಂದು ಅವರು ಹೇಳುವರು.

ಸ್ತುತಿಗೀತೆ. ರಚನೆಗಾರರು: ಕೋರಹೀಯರಿಗೆ ಸೇರಿದ ಜೇರಹ ಕುಟುಂಬದ ಹೇಮಾನ.

88 ಯೆಹೋವ ದೇವರೇ, ನೀನೇ ನನ್ನ ರಕ್ಷಕನು.
    ಹಗಲಿರುಳು ನಿನಗೆ ಪ್ರಾರ್ಥಿಸುತ್ತಿದ್ದೇನೆ.
ನನ್ನ ಪ್ರಾರ್ಥನೆಗಳಿಗೆ ದಯವಿಟ್ಟು ಗಮನಕೊಡು.
    ಕರುಣೆಗೋಸ್ಕರ ನಾನಿಡುವ ಮೊರೆಗಳನ್ನು ಆಲಿಸು.
ನನ್ನ ಜೀವವು ನೋವಿನಿಂದ ತುಂಬಿಹೋಯಿತು.
    ಮರಣವು ನನಗೆ ಸಮೀಪವಾಗಿದೆ.
ಜನರು ನನ್ನನ್ನು ಸತ್ತವನಂತೆಯೂ
    ಬದುಕಲಾರದ ಬಲಹೀನನಂತೆಯೂ ಪರಿಗಣಿಸಿದ್ದಾರೆ.
ಸತ್ತವರ ಮಧ್ಯದಲ್ಲಿ ನನಗಾಗಿ ಹುಡುಕು.
    ಸಮಾಧಿಯಲ್ಲಿ ಬಿದ್ದಿರುವ ಶವದಂತಾಗಿದ್ದೇನೆ,
ನೀನು ಮರೆತುಬಿಟ್ಟ ಸತ್ತ ಜನರಂತೆ ಆಗಿದ್ದೇನೆ.
    ನಿನ್ನಿಂದಲೂ ನಿನ್ನ ಪರಿಪಾಲನೆಯಿಂದಲೂ ದೂರವಾದವನಾಗಿದ್ದೇನೆ.
ನೀನು ನನ್ನನ್ನು ಪಾತಾಳಕ್ಕೆ ದಬ್ಬಿರುವೆ;
    ನನ್ನನ್ನು ಕತ್ತಲೆಯ ಸ್ಥಳಕ್ಕೆ ನೂಕಿರುವೆ.
ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದಲೇ
    ನನ್ನನ್ನು ಶಿಕ್ಷಿಸಿದೆ.

ಸ್ನೇಹಿತರು ನನ್ನನ್ನು ತೊರೆದುಬಿಟ್ಟರು.
    ಹೊಲೆಯಾದ ಮನುಷ್ಯನಂತೆ ಅವರೆಲ್ಲರೂ ನನ್ನನ್ನು ದೂರ ಮಾಡಿದ್ದಾರೆ.
ನನ್ನನ್ನು ಮನೆಯೊಳಗೆ ದೊಬ್ಬಿ ಬೀಗ ಹಾಕಿದ್ದಾರೆ; ನಾನು ಹೊರಗೆ ಹೋಗಲಾರೆನು.
    ನನ್ನ ಎಲ್ಲಾ ಸಂಕಟಗಳಿಂದ ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ.
ಯೆಹೋವನೇ, ನಾನು ನಿನಗೆ ಎಡಬಿಡದೆ ಪ್ರಾರ್ಥಿಸುವೆನು!
    ನನ್ನ ಕೈಗಳನ್ನು ಎತ್ತಿ ನಿನಗೆ ಪ್ರಾರ್ಥಿಸುವೆನು!
10 ಯೆಹೋವನೇ, ಸತ್ತ ಜನರಿಗಾಗಿ ನೀನು ಮಹತ್ಕಾರ್ಯಗಳನ್ನು ಮಾಡುವೆಯಾ?
    ಇಲ್ಲ! ದೆವ್ವಗಳು ಎದ್ದುನಿಂತು ನಿನ್ನನ್ನು ಕೊಂಡಾಡುತ್ತವೆಯೋ? ಇಲ್ಲ!

11 ಸತ್ತ ಜನರು ತಮ್ಮ ಸಮಾಧಿಗಳಲ್ಲಿ ನಿನ್ನ ಪ್ರೀತಿಯ ಬಗ್ಗೆ ಮಾತಾಡಲಾರರು.
    ಸತ್ತವರು, ಸತ್ತವರ ಲೋಕದಲ್ಲಿ ನಿನ್ನ ನಂಬಿಗಸ್ತಿಕೆಯ ಬಗ್ಗೆ ಮಾತಾಡಲಾರರು.
12 ಸತ್ತು ಕತ್ತಲೆಯಲ್ಲಿ ಬಿದ್ದಿರುವ ಜನರು ನಿನ್ನ ಅದ್ಭುತಕಾರ್ಯಗಳನ್ನು ನೋಡಲಾರರು.
    ಸತ್ತವರು, ಮರೆಯಲ್ಪಟ್ಟವರ ಲೋಕದಲ್ಲಿ ನಿನ್ನ ನೀತಿಯ ಬಗ್ಗೆ ಮಾತಾಡಲಾರರು.
13 ಯೆಹೋವನೇ, ನಿನ್ನ ಸಹಾಯಕ್ಕಾಗಿ ಮೊರೆಯಿಡುತ್ತಿದ್ದೇನೆ.
    ಪ್ರತಿ ಮುಂಜಾನೆಯೂ ನಿನಗೆ ಪ್ರಾರ್ಥಿಸುತ್ತಿದ್ದೇನೆ.
14 ಯೆಹೋವನೇ, ನೀನು ನನ್ನನ್ನು ತೊರೆದುಬಿಟ್ಟಿದ್ದೇಕೆ?
    ನೀನು ನನಗೆ ಕಿವಿಗೊಡದಿರುವುದೇಕೆ?
15 ನಾನು ಚಿಕ್ಕಂದಿನಿಂದಲೂ ಬಲಹೀನನಾಗಿದ್ದೇನೆ ಮತ್ತು ಕಾಯಿಲೆಯವನಾಗಿದ್ದೇನೆ.
    ನಿನ್ನ ಕೋಪದಿಂದ ನಾನು ಸಂಕಟಪಡುತ್ತಿರುವೆ.
    ನಾನು ನಿಸ್ಸಹಾಯನಾಗಿರುವೆ.
16 ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದ
    ನಿನ್ನ ದಂಡನೆಯು ನನ್ನನ್ನು ಕೊಲ್ಲುತ್ತಿದೆ.
17 ಬಾಧೆಗಳೂ ನೋವುಗಳೂ ಯಾವಾಗಲೂ ನನ್ನೊಂದಿಗಿವೆ.
    ಬಾಧೆಗಳಿಂದಲೂ ನೋವುಗಳಿಂದಲೂ ಮುಳುಗಿ ಹೋಗುತ್ತಿದ್ದೇನೆ.
18 ಯೆಹೋವನೇ, ಸ್ನೇಹಿತರೆಲ್ಲರನ್ನೂ ಪ್ರಿಯರನ್ನೂ ನೀನು ನನ್ನಿಂದ ದೂರಮಾಡಿದೆ.
    ಕೇವಲ ಕತ್ತಲೆಯೊಂದೇ ನನ್ನೊಂದಿಗೆ ಉಳಿದುಕೊಂಡಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International